ಅಲ್ಪತನ…

1ಮಿಂಚುವುದು ಅಕ್ಷಮ್ಯ
ಗತಿ ಇರದೆ ಒಳ ಬೆಳಕು
ಮೇಲೆ ಅಮಿತ ಪೊಗರು

ಉಗುರು ಮಾತ್ರದ ಪ್ರಸಿದ್ಧಿ
ಗೆಲುವಿಗೆ ಮೆರೆವುದು ಅಲ್ಪತನ
ಮೆರೆಯ ಬಾರದು ಮರೆತೂ
ಮಿಂಚು ಹುಳು ಕ್ಷಣಿಕ ಬದುಕ

ಎಂತ ಪರಮಳಿಸೋ ಹೂವೂ
ನಿರ್ಮಾಲ್ಯ ಮರು ದಿನಕೆ
ತನ್ನದೇ ಗಿಡದ ತೊಪ್ಪಲಿಗೆ
ಗೊಬ್ಬರವಾಗುವ ಸಾರ್ಥಕ್ಯ

ಪದ್ಮಜನ ಹಣೆ ಕೆತ್ತುವಾಟ
ಪುರುಡು ಸಂಭ್ರಮದ ಅಂತ್ಯ
ಜೀವಕ್ಕೆ ಸೂತಕ ಕಡೆಯಾಟ
ಉಳಿವವ ಸಮವರ್ತಿ ಸತ್ಯ

ಅಮರತ್ವ ಪಡೆವುದದೇ
ಜೀವಮಾನದ ಒಳಿತು
ಮೀರಿ ಸಾವಿನಾಚೆಗೂ…

Advertisements

ಅಜ್ಞಾತ ಕವಿ…

808681_Poet-Tree
ನನ್ನೊಳಗೆ ನಾನಿರದ
ಶೂನ್ಯ ವೇಳೆಯಲೊಮ್ಮೆ
ಗುಡಿಸಿ ಹಾಕಲಿ ಮನಸು
ಮಹಾ ಕವಿಯ ತೆವಲು

ಅದೇ ಪದಗಳ ಅರೆದು
ಮೇಲಿನಿತು ಬಣ್ಣ ಪೂಸಿ
ಬೆನ್ನು ತಟ್ಟಿಕೊಳದಿರಲಿ
ಈ ಅಜ್ಞಾತ ಕವಿಯು

ನಿಜಾಗ್ನಿ ಕರಗಿಸಲಿ ಕೊಬ್ಬು
ಎನ್ನದೇ ಕಾವ್ಯವೆನು ಮಂಕು
ದೈವ ಮಳೆ ತೊಳೆಯಲದು
ಹೂಳುಮಯ ಒಳ ಮೋರಿ

ಸಂಗ್ರಹಿತ ಕತ್ತಲಳಿಸಲಿ
ತಿಳುವಳಿಕೆ ಬಿರು ಬೆಳಕು
ನಾತ ಒಳಾಂಗಣವನು
ಪರಿಮಳಿಸಲಿ ನವ್ಯ ಗಾಳಿ

ಪೇರಿಸುವ ಗ್ರಂಥಗಳೆಲ್ಲ
ತುಂಬಲವು ಜ್ಞಾನ ಸಿದ್ದಿ
ಅರೆ ಪಾವು ತಿಳುವಳಿಕೆ
ಒಪ್ಪವಾಗಿಸಲೆನ್ನ ತಿದ್ದಿ

(ಚಿತ್ರ ಕೃಪೆ: ಅಂತರ್ಜಾಲ)

ಬಂಕರುಗಳಾಚೆಯೂ ಬದುಕಿದೆ…

500ಗೋಜಲಿಸದಿರು ಪ್ರಭುವೇ,
ತಂತಿಗಳಿವು ನಿನ್ನವೇ
ಗೊಂಬೆಯೇ ಮೀರಬಾರದು
ಸೂತ್ರಧಾರನನ್ನೇ!

ನಾಡಿಗಿದ್ದರೂ ಕಿತ್ತು ತಿನ್ನೋ ಬಡತನ
ನಿನಗೇನು ಸ್ವಾಮಿ,  ಬಿಚ್ಚಲೊಲ್ಲೆ
ನಿನ್ನ ದೇಗುಲದಡಿಯ ಭಂಡಾರ!
ನೂರು ದೇಶಗಳನೇನೋ ಚಿತ್ರಿಸಿದೆ
ವರ್ಣ ಭೇದವೋ ಭಾಷಾ ವಿಭೇದವೋ
ಧರ್ಮ ಅಸಹಿಷ್ಣತೆಯೋ, ಏನೋ ಕರ್ಮ!
ಅಗೋಚರ ಗಡಿ ರೇಖೆಗೆ ಆಚೀಚೆ ತಂದಿಟ್ಟೆ
ಹುಟ್ಟು ಹೋರಾಟಗಾರ ದಾಯಾದಿ ಸಂಸಾರ
ನಿನ್ನ ಆಟಕೆ ಹಾವೂ ಮೇಲೆ ಹದ್ದೂ…

ಸಿಕ್ಕ ಸೆರೆ ತಾಜಾ ಮಾಲು
ಕಿತ್ತು ಕಳಿಸುವರಲ್ಲ ಅಂಗಾಂಗ
ಮತ್ತೆ ಅದೇ ಶಾಂತಿ ಮಂತ್ರವೇ?
ನೊಂದು ಬಿಕ್ಕಿತು ಹುತಾತ್ಮ…

ಜಠರ ಮರೆತಿದೆ, ದೊರೆಯೇ!
ಅರೆಯೋ ಕಾಯಕವನ್ನೇ,
ಪಿಜ್ಜಾ ಬರ್ಗರ್ರು ಕಲ್ಮೀ ಕಬಾಬು
ಸಾಹುಕಾರರ ಟೈಂಪಾಸಿನಾಹಾರ
ನನಗೆ ಅಂಬಲಿಸು ಸಾಕು,
ನಂಜಿಕೊಳ್ಳಲು ಹಸಿ ಮೆಣಸಿನಕಾಯಿ…

ಏಕೆ ಜಾಣ ಕುರುಡೋ ನಮ್ಮ ಬಡಿದಾಟಕ್ಕೆ?
ಹಸಿವು ನೆರೆ ಬರ ರೋಗ ರುಜಿನ
ಸತ್ತು ಮಲಗಲಿ ಪೆದ್ದ ಮತದಾರ…
ಖಜಾನೆ ಖಾಲಿಯಾದರೂ ಬೇಸರವಿಲ್ಲ
ಸಿದ್ಧವಿರಲೇ ಬೇಕು ಜಲಾಂತರ್ಗಾಮಿ ಯುದ್ಧ ವಿಮಾನ
ಪಿರಂಗಿ ತುಂಬಾ ಸುಡು ಗುಂಡು ಅಣು ಬಾಂಬು
ಉದರ ಒಣಕಲು ಕೊಡವಾಗಲೇನು
ಬಂಗಾರದ ಕುಚ್ಚು ಚೌರಿ ಕೂದಲಿಗೆ….

ಕಿತ್ತೆಸೆ ನಿನ್ನ ತಂಪು ಕನ್ನಡಕ
ಉದ್ದುದ್ದ ಮಲಗಿದ್ದು ಸಾಕು ನೀನು,
ಪಕ್ಕೆಗೊದ್ದು ಇನ್ನಾದರೂ ಹೇಳು
ದಡ್ಡ ಮಗನೇ,
ಬಂಕರುಗಳಾಚೆಯೂ ಬದುಕಿದೆ…

(ಚಿತ್ರ ಕೃಪೆ : ಅಂತರ್ಜಾಲ)

ಅಮ್ಮ ಮತ್ತು ಮಗಳು…

tottiluಕಲ್ಪಿಸಿ ತೊಟ್ಟಿಲನು
ತೂಗುವಳು ತಾಯಿ
ನೆನಪಾದಾಗ ಮಗಳು

ಅಪ್ಪ ಅಮ್ಮರ ಬಯಕೆ
ಮೂರ್ತತೆಯ ಸಾಕರಿಸಿ,
ನೆನಸಿದ ಎತ್ತರಗಳ
ಮೀರಿ ಬೆಳೆದಿಹಳಾಕೆ
ತಪ್ಪದೆಯೇ ಚಾಚೂ

ಇಯತ್ತೆ ಪಟ್ಟಿಯಲು
ಮುಂಚೂಣಿ ತಮ್ಮವಳೇ,
ಪುಸ್ತಕದ ಹುಳುವಲ್ಲ
ಗೆದ್ದು ಪೇರಿಸಿದಳಂದು
ಆಟೋಟ ಫಲಕ ಪದಕ

ಹೆತ್ತವರ ಮುಪ್ಪರಿತು
ನೌಕರಿಯಲು ಭರ್ತಿ,
ದುಡಿದು ತಂದಳಂದು
ಅಹೋ ರಾತ್ರಿಯೆಲ್ಲ
ತಾ ಕೀಲಿ ಮಣಿ ಕುಟ್ಟಿ

ಗೊತ್ತು ಮಾಡಿದ ವರ
ಒಪ್ಪಿ ಹಸೆ ಏರಿದಳು,
ತವರ ತೊರೆದರು
ಕೈ ಬಿಚ್ಚಿ ಕೊಟ್ಟಳು
ತಪ್ಪದೆಯೇ ತಿಂಗಳು

ತಿಂಗಳು ತುಂಬಿದೆಯಲ್ಲಿ
ಇನ್ನಲ್ಲೂ ಕೈಗೂಸು,
ಆಗ ತೂಗಿದ ಅಮ್ಮ
ಮತ್ತೆ ತೂಗುವ ಕಾಲ
ಮಗಳ ಮನೆ ಜೋಲಿ

(ಚಿತ್ರ ಕೃಪೆ : ಅಂತರ್ಜಾಲ)

ಅಷ್ಟೇ…

1ಕೆನೆಯನೇ ಪುರಸ್ಕರಿಸಿ
ಒಲೆಯ ಮರೆತರೆ ಹೇಗೆ
ಕಾವ ಸಹಿಸಿಕೊಂಡದ್ದು
ಪಾಪ ಮಣಭಾರ ತಪಲೆ

ಸಿಡುಬು ಮೂತಿಗೇಕೆ
ಮಹಾರಾಜನಾಗಿಸಿದ
ಪ್ರಸಾದನ ಕಲಾವಿದ
ಬಣ್ಣ ಕಳಚಿದ ಮೇಲೆ

ದಂತ ಕತ್ತರಿಸಿದ ಗಳಿಗೆ
ಮುದಿ ಆನೆಗೆಲ್ಲಿ ಬೆಲೆ
ಕ್ರಿಯಾಕರ್ಮಕೂ ಮುನ್ನ
ಹಸಿದೇ ಸಾಯಲೀ ಅಪ್ಪ

ಈಜಿ ತೊಳಕೊಂಡರಾಯ್ತು
ನದಿಯ ನೆನಪದೇಕೆ?

(ಚಿತ್ರಕೃಪೆ : ಅಂತರ್ಜಾಲ)

ವಿಶ್ವ ಪುಸ್ತಕ ದಿನಾಚರಣೆ 24ನೇ ಏಪ್ರಿಲ್ 
 
best off kephaಕೇಫ ಕಾಯುತ್ತಿದ್ದಾರೆ
ಶೌರಿ ಪಾಂಡುಗಳ ಕೂಡಿ
ಗಡಿಯಾರದ ಕೆಳಗೆ
ಬುಲ್ ಬುಲ್ ತರಂಗ ಮೀಟಿ
ರೇಸು ತೋಸುತ್ತಾರಂತೆ
ಓದಿ ನೋಡಿ…

ಕೇಫ ಎನ್ನುವ ಲೇಖನಿ ನಾಮದಲ್ಲಿ ಹಾಸ್ಯ ಲೇಖನಗಳನ್ನು ಬರೆಯುತ್ತಿದ್ದವರು ಎ.ವಿ. ಕೇಶವಮೂರ್ತಿ. ಇವರು ಕನ್ನಡದ ಅಗ್ರಗಣ್ಯ ಹಾಸ್ಯ ಲೇಖಕರಲ್ಲೊಬ್ಬರು. ಶೌರಿ,ಪಾಂಡು ಮುಂತಾದ ಪಾತ್ರಗಳನ್ನು ತಮ್ಮ ಹಾಸ್ಯ ಲೇಖನಗಳಲ್ಲಿ ಸೃಷ್ಟಿಸಿದ್ದರು. ವೃತ್ತಿಯಲ್ಲಿ ವೈದ್ಯರಾಗಿದ್ದರು. ಶಿವಮೊಗ್ಗದಲ್ಲಿ ಬಹಳ ವರ್ಷಗಳು ನೆಲೆಸಿದ್ದು, ತಮ್ಮ ಬದುಕಿನ ಕೊನೆಯ ದಿನಗಳನ್ನು ಚನ್ನೈ ನಗರದಲ್ಲಿ ಕಳೆದರು.
ಕೊರವಂಜಿ ಹಾಗು ಇತರ ನಿಯತಕಾಲಿಕಗಳಿಗೆ ನಿಯಮಿತವಾಗಿ ಹಾಸ್ಯಲೇಖನಗಳನ್ನು ನೀಡಿದ್ದಾರೆ.
(ಮಾಹಿತಿ: ವಿಕಿ ಪೀಡಿಯ)

ರಾಮ ನವಮಿಯ ದಿವಸ…

ramರಾಮ ನವಮಿಯ ದಿವಸ
ಅಡಿಗಡಿಗೆ ನೆನಪು ಅಡಿಗರು,
ಅವನ ರಾಜ್ಯವ ಕನಸಿದರೂ
ಮಹಾತ್ಮರ ಚರಮೋದ್ಗಾರ

ಕಲ್ಲು ಗುಂಡಿಗೆ ದ್ರವಿಸಿ ಬಿಡು
ಬಾಲ ಮುರಳಿ ದನಿಯಲಿ
ಸೆರೆ ಮನೆಯ ರಾಮದಾಸ,
ಶ್ರೋತೃ ಬೃಂದಾವನ ಸೋಸು
ಕೋಟೆ ಮೈದಾನದ ಸಂಗೀತ
ಭರ್ತಿ ಪಾನಕ ಕೋಸಂಬರಿ

ಭಕ್ತ ಭಗವಂತ ಅನುಸಂಧಾನ
ಅನತಿ ದೂರಕು ಸಾರಿ ಹೇಳು
ತಬ್ಬಿ ನಿಂತ ರಾಮಾಂಜನೇಯ,
ಇತ್ತ ನಂಬಿಯೇ ಅವನ ದಯೆ
ಹರಕೊಂಡರು ಬಿಸಿಲಲು ಗಂಟಲ
ಹಗಲು ವೇಷಧಾರಿಗೆ ಹಸಿವು

ಮದ್ಯಾಹ್ನಕೆ ಮಾದಪ್ಪನ ಮೆಸ್ಸಿನ
ತಟ್ಟೆ ತುಂಬಲಿ ಮಜ್ಜಿಗೆ,
ಅರಿವುಗೇಡಿಗೆ ಎಟಕದ ಸಂಗತಿ
ಅಮ್ಮನೇ ಅನುದಿನಕು ಶಬರಿ!

(ಚಿತ್ರಕೃಪೆ: ಅಂತರ್ಜಾಲ)

ಕವಿತೆ…

Pen-Paper

ನೀ ಕೈ ಹಿಡಿದೆತ್ತದೆ
ಭುಜದ ಆಸರೆ ಕೊಡದೆ
ಕವಿತೆ,
ಹಗುರಾಗಲು
ಎನಗೆ ತಾವೆಲ್ಲೇ?

(ಚಿತ್ರಕೃಪೆ: ಅಂತರ್ಜಾಲ)

ಪ್ರಜಾ’ಸತ್ತೇ’…

indian_poor

ಒಳಗುದಿಯು ಕುದಿಕುದಿದು
ಬಿಲದ ಬಾಯಿಯ ಹುಡುಕುತ್ತೆ
ನೆಲದಾಳದಿ ಮಿಸುಕೋ ಲಾವಾ

ಮೇಲೆ ನಿರಮ್ಮಳ ಮೌನ
ಕಲ್ಲು ದೇವರು ಕೂಡ
ಪ್ರಳಯ ಮಾರುತ ಮುನ್ನ,
ಕಾದು ಅಪ್ಪಳಿಸುವ ತಾನು
ನೋಟೀಸು ಪೋಣಿಸದು
ಪೆದ್ದನ ಕಿವಿಯ ಮೇಲೆ

ತುಕ್ಕುಗಟ್ಟಿದ ತುಪಾಕಿಯ
ನಂಬಿ ಕಾಯುವ ಸಿಪಾಯಿ
ಖಾದಿಗೆ ಅಮಾಯಕ ಬಲಿ,
ಗಡಿಯಲಿ ಶಾಂತಿ ಪಠನೆ
ನುಸುಳು ಕ್ರಿಮಿ ನುಸುಳುತ್ತೆ
ಬಿದ್ದ ಮೇಲೆ ಲೆಕ್ಕ ಹೆಣ

ಕೋಟಿ ನುಂಗಲಿ ಮತದಾನ
ಕಡೆಗೆ ಬಸಿರಿಳಿದದ್ದು ಅದೇ
ಪಾಪ ಗರ್ಭದ ಕಾರಸ್ಥಾನ,
ಕೊಂಡ ಚಿಹ್ನೆಯ ಛತ್ರಿಯಡಿ
ಹೆಗ್ಗಣಗಳ ಪಾದಯಾತ್ರೇ
ಉಗುಳು ಎರಚು ಅಭಿಯಾನ

ಗುಂಡಿ ಒತ್ತಿದ ತಪ್ಪಿಗೆ
ಗುಂಡಿ ತೋಡಿಸಿಕೊಳ್ಳೋ
ಅರೆ ಹೊಟ್ಟೆ ಪ್ರಜಾ’ಸತ್ತೇ’

(ಚಿತ್ರಕೃಪೆ : ಅಂತರ್ಜಾಲ)

ಬಂತು ಉಗಾದಿ…

ugadiಮಾವಿನ ಎಲೆ ತೋರಣ
ತಂದು ಕಟ್ಟುವ ಪಜೀತಿ
ಪ್ಲಾಸ್ಟಿಕ್ಕಿನ ಸಿದ್ಧ ತೋರಣ
ಅಲಂಕರಿಸಲಿ ಬಾಗಿಲಿಗೆ

ಹರಳೆಣ್ಣೆ ಬಲು ಜಿಡ್ಡು
ತಿಕ್ಕಿ ತಿಕ್ಕಿದರು ತೊಳೆಯದು
ನೆತ್ತಿಗೊಂದು ಹನಿ ಎದೆಗೂ
ಮಜ್ಜನವಾಯಿತು ಬಿಡಿ

ರುಬ್ಬಿ ಬೇಳೆಯ ಕಟ್ಟು
ತಟ್ಟಿ ಸುಡುವುದು ತ್ರಾಸ
ಉಡುಪಿ ಸ್ಟೋರ್ ಮಾರುತ್ತಾರೆ
ಬಿಸಿ ಬಿಸಿ ಹೋಳಿಗೆ

ಹೊಸ ಬಟ್ಟೆಗಳು ತುಟ್ಟಿ
ಹಳತೇ ಆಗಲಿ ಇಸ್ತ್ರೀ ತಿಕ್ಕಿ
ಕೇಳಿ ಟೀವಿ ಜ್ಯೋತಿಷಿಗಳ
ವರ್ಷ ಭವಿಷ್ಯ ಪಾವನರಾಗಿ

ಬಟ್ಟಲಲ್ಲಿ ಬೆಲ್ಲ ಹೆಕ್ಕಿಕೊಳ್ಳಿ
ಬಾಯಿಗೆ ಕಹಿ ಬೇವಿನ ಚಿಗುರು!
ಹುಡುಕಿ ಹಂಚಿರಿ ಮುಖ ಪುಟದಲಿ
ಕನ್ನಡ ಗೀತೆ ನೀವೇ ಮೊದಲು

ಅಮಾಯಕನ ಜಾಡಿ…

jadiಊರು ಪಾದಗಳ ಕೆಳಗೆ
ಜವುಗು ಭೂಮಿ
ತಟ್ಟಾಡದೇ ನಿಲುಗಡೆ ಇಲ್ಲ
ಜಾರುತಿವೆ ಹೆಜ್ಜೆ

ದುಡಿದ ಕವಡೆಯ ಮತ್ತೆ
ಕಸಿದುಕೊಳ್ಳುತ್ತೆ ಸರ್ಕಾರ
ಗೆರೆ ಗೀಚಿ ಮತ ಸೆಳೆಯುತ್ತೆ
ಬಡವ ಮೇಲ್ಗಡೆ ಬಲ್ಲಿದ

ಶುಕ್ರ ದೆಸೆ ಮಾರಾಟಕ್ಕಿದೆ
ಬೆರಳಿಗೆ ಭಾರದ ಹರಳು
ಭಾಮಿನಿ ಕಟಾಕ್ಷ ವ್ರತದಲ್ಲಿ
ಭೂಕಳ್ಳ ಖಾವೀ ಸ್ವಾಮಿ

ಸಾಲ ಕೊಡುತ್ತವೆ ಪಾಶ್ಚಾತ್ಯ
ಪ್ರಸಾಧನ ಕೊಂಡುಕೊಳ್ಳಿ
ಕಿತ್ತ ಎಕ್ಕಡ ತಲಪು ರಸ್ತೆಗಳು
ಹಳ್ಳಿಗಾಡು ಮರೆತುಕೊಳ್ಳಿ

ಜಗಳಗಂಟನ ಮನೆ ಮುಂದೆ
ಪಾಲಿಕೆಯ ನಿರಂತರ ಪೊರಕೆ
ಮೆತ್ತಗಿದ್ದರೆ ನೂರು ಕೈ ಸ್ವಾಮೀ!
ಮುಚ್ಚಲು ಅಮಾಯಕನ ಜಾಡಿ

(ಚಿತ್ರ ಕೃಪೆ: ಅಂತರ್ಜಾಲ)

ನುಡಿ ನಮನ…

nudinamana copy

ಬಂದರುಗಳಿಗೆ…

shipಬಂದರೇ ಅನುಮತಿಸು
ಅಕ್ಷರಗಳ ನಾವೆ ಬಂದಿದೆ
ಲಂಗರಿಳಿಸಲು ನಿಮ್ಮಲ್ಲಿ

ನನ್ನ ಧಕ್ಕೆಯಿಂದ ನಿಮ್ಮ
ಡಕ್ಕೆಯ ಕಂಡು ಪುಳಕ
ಯಾನ ತಾಪತ್ರಯ ದಾಟಿ
ಒಪ್ಪಿಸುವ ತೀವ್ರ ತವಕ

ಗ್ರಹಿಕೆಗೆ ಸಿಕ್ಕೆಲ್ಲ ಸರಕು
ತುಂಬಿ ತಂದಿದೆ ಹಡಗು
ಕಲಾವಂತಿಕೆ ಹಸೆಯು
ಮಾಲು ಅಪ್ಪಟ ಕುಸುರಿ

ಮೊದಲಲ್ಲಿ ತಲುಪಲಿ
ಹುಡುಕಿಕೊಳ್ಳಲಿ ಗಿರಾಕಿ
ಅವರರವರ ಅಳತೆಗೆ
ನೂರು ದಿರಸಿದೆ ಇಲ್ಲಿ

ಇದ್ದೀಯ ನೀನೆಂಬ
ನಂಬುಗೆಯ ಹಂಬಲದೇ
ಕವಿತೆ ಕಟ್ಟಿದೆ ನಾನೂ
ಇಳಿಸಿಕೋ ತೆರೆದ ಮನದಿ

(ಚಿತ್ರ ಕೃಪೆ : ಅಂತರ್ಜಾಲ)

ಒಂದರಗಳಿಗೆ…

coupleಒಂದರಗಳಿಗೆ
ಜಗದ ಜಂಜಡ ಮರೆತು,
ನಿನ್ನೊಳಗಿನಾ ಅಳಲ
ಆಳ ಸಾಂದ್ರಗಳ ತಾಕಿ
ಸಂತೈಸುವ ತವಕ ಎನಗೆ

ದಿನ ದಿನವೂ ಮಗುವಂತೆ
ಎನ್ನ ಕಂಬನಿ ಒರಸಿ
ಲಾಲಿಸುವೆ ತಾಯಿಯಂತೆ,
ಒಮ್ಮೆಯಾದರೂ ನನಗೂ
ಅರ್ಥವಾಗಲಿ ನಿನ್ನತನ
ನಿನ್ನ ನೋವಿನ ಭಾವನಾ

ಒಟ್ಟಾಗಿದ್ದರೂ ಒಟ್ಟಾಗದು
ಎನಿತೋ ದಡ್ಡ ಮನಗಳು,
ರಾಗ ತಾಳ ಮಿಳಿತವಾದರೆ
ಸುಶ್ರಾವ್ಯ ಜೀವ ಸಂಗೀತವು,
ಬೆರೆತು ಹೋದರೆ ಇಮ್ಮನ
ಒಂದೇ ಹೆಜ್ಜೆಯ ನಡಿಗೆಯು

ನಿನ್ನ ಸಹನೆಯ ಕಟ್ಟೆಯು
ಮೀರಿ ಹರಿದರೆ ಒಮ್ಮೆಲೆ
ತೆರೆಯಲಿ ನನ್ನ ನಾಲೆಯು

ವಿಪರ್ಯಾಸ…

abcಬೆಳಿಗ್ಗೆ ಎದ್ದಾಗಲಿಂದಲೂ ಏಕೋ ಸಣ್ಣಗೆ ತಲೆಯ ನೋವು. ಸ್ವಲ್ಪ ಕಾಫಿ ಕಾಯಿಸಿಕೊಳ್ಳೋಣ ಎಂದು ಮೂರು ಗಂಟೆಯಿಂದ ಯೋಚಿಸಿದ್ದೇ ಬಂತು. ಯಾಕೋ ಅದಕ್ಕೂ ಬೇಸರ.

ಯಜಮಾನರು ತೀರಿಕೊಂಡ ಮೇಲೆ ನಾನು ತೀರಾ ಅಂತರ್ಮುಖಿಯಾಗುತ್ತಿದ್ದೇನೆ ಅನಿಸುತ್ತದೆ. ಮೂರು ಕೋಣೆಗಳ ಈ ವಿಶಾಲವಾದ ಫ್ಲಾಟಿನಲ್ಲಿ ಈಗ ನಾನು ಒಬ್ಬಂಟಿ. ತುಂಬಾ ಮನೆಗಳಿರುವ ವಿಶಾಲವಾದ ಸೊಸೈಟಿ ಇದು. ಪಕ್ಕದ ಮನೆಯವರು ಯಾರೆಂದು ನನಗೂ ಇಲ್ಲಿಯವರೆಗೂ ಗೊತ್ತಿಲ್ಲ.

ಕೆಲಸದವಳು ಬೆಳಿಗ್ಗೆ ಬಂದು ಮನೆ ಕೆಲಸಗಳನ್ನು ಮುಗಿಸಿ ಹೊರಟಳೆಂದರೆ ಇಡೀ ದಿನ ನಾನು ಮತ್ತು ಟೀವಿ ಎರಡೇ.

ಇರುವ ಇಬ್ಬರು ಮಕ್ಕಳು ಅಮೇರಿಕಾದಲ್ಲಿ ನೆಲೆ ನಿಂತ ಮೇಲೆ, ಈ ಬೆಂಗಳೂರಿನ ಮನೆಯಲ್ಲಿ ನಮ್ಮವರು ನಾನು ಮಾತ್ರ ಉಳಿದಿದ್ದೆವು. ನಮ್ಮವರು ಮೂರು ವರ್ಷಗಳ ಹಿಂದೆ ತೀರಿಕೊಂಡ ಮೇಲೆ, ನನ್ನ ಇಬ್ಬರು ಗಂಡು ಮಕ್ಕಳನ್ನು ನಾನು ಅವರ ಜೊತೆಯೇ ಇದ್ದು ಬಿಡುತ್ತೇನೆ, ಒಬ್ಬಳಿಗೆ ಬೇಸರ ಎಂದು ಹಲವು ಬಾರಿ ಅಲವತ್ತುಕೊಂಡಿದ್ದೇನೆ. ನನ್ನ ಅಮೇರಿಕಾ ಜನ್ಯ ಸೊಸೆಯರಿಗೆ ನಾನು ಹಳೆಯ ಕಾಲದವಳಂತೆ! ಅದಕ್ಕಾಗಿ ನಾನು ಇಲ್ಲೇ ಈ ಫ್ಲಾಟಿನಲ್ಲೇ ಕಾಲ ದೂಕುತ್ತಿದ್ದೇನೆ.

ಬೆಳಿಗ್ಗೆ ಬರುವ ಕೆಲಸದವಳೇ ಮೂರು ಹೊತ್ತಿಗೂ ಬೇಯಿಸಿ, ಒಪ್ಪ ಮಾಡಿಟ್ಟು ಹೋಗುತ್ತಾಳೆ. ತುಂಬಾ ಒಳ್ಳೆಯ ಹೆಣ್ಣು ಮಗಳವಳು. ಇಷ್ಟು ವರ್ಷಗಳಲ್ಲಿ ಒಮ್ಮೆಯೂ ಸಿಡುಕಿದ್ದು, ರಜೆ ಹಾಕಿದ್ದು ನನಗೆ ಗೊತ್ತೇ ಇಲ್ಲ. ಆಕೆ ತಣ್ಣಗಿರಲಿ.

ಸಂಜೆಯವರೆಗೂ ಹೇಗೋ ಕಾಲ ದೂಡಿದವಳು, ಪಕ್ಕದ ಗಣಪತಿ ಗುಡಿಗಾದರೂ ಹೋಗಿ ಬರೋಣವೆಂದು ಮನೆ ಇಂದ ಹೊರಗೆ ಬಂದೆ. ಲಿಫ್ಟ್ ಸಮೀಪಿಸುತ್ತಿದ್ದಾಗ ದಡೂತಿ ಉತ್ತರ ಭಾರತದ ಮಹಿಳೆಯೊಬ್ಬಳು ಅಲ್ಲಿ ನಿಂತಿರುವುದು ಕಂಡಿತು.

ಆಕೆಯನ್ನು ಆಗೊಮ್ಮೆ ಈಗೊಮ್ಮೆ ನೋಡುತ್ತೇನಾದರೂ, ಮುಖ ಪರಿಚಯ ಮುಗುಳ್ನಗೆಗಳ ಹೊರತಾಗಿ ಅಂತಹ ಆತ್ಮೀಯತೆ ಯಾಕೋ ಇನ್ನೂ ಮೂಡಿರಲಿಲ್ಲ. ನನ್ನ ಜೊತೆಯೇ ಆಕೆಯೂ ಲಿಫ್ಟ್ ಒಳಗೆ ಬಂದು ನಾನು ನೆಲ ಮಹಡಿ ಬಟನ್ ಒತ್ತುವುದನ್ನು ನೋಡಿ, ತಾನು ಅಲ್ಲಿಗೆ ಹೋಗ ಬೇಕಿತ್ತೇನೋ ಸುಮ್ಮನಾದಳು.

ಲಿಫ್ಟ್ ಹತ್ತನೇ ಮಹಡಿಯಿಂದ ಇಳಿಯಲು ಆರಂಭಿಸಿದ ಕೂಡಲೇ ಆಕೆ ಎದೆ ಹಿಡಿದುಕೊಂಡು, ಗೋಡೆಗೆ ಜಾರಲು ಆರಂಭಿಸಿದಳು. ನಾನು ಗಾಬರಿಯಾದೆ, ಆಕೆ ಸಳ ಸಳನೆ ಬೆವರುತ್ತಿದ್ದಳು. ಈಕೆಗೆ ಖಂಡಿತ ಹೃದಯಾಘಾತವೇ ಆಗಿದೆ ಎಂದು ನನಗನಿಸಿದ್ದೇ ತಡ, ಲಿಫ್ಟಿನ ಅಲಾರಮ್ ಒತ್ತಿದೆ. ಲಿಫ್ಟ್ ಅಲಾರಾಮ್ ಹೊಡೆದುಕೊಳ್ಳುತ್ತಲೇ ನೆಲ ಮಹಡಿ ತಲುಪಿತು.

ಕೆಳಗೆ ಆಗಲೇ ಸುಮಾರು ಜನ ಸೇರಿದ್ದರು. ಕೂಡಲೇ ಅಲ್ಲೇ ಇದ್ದ ಯಾರೋ ಆಂಬುಲೆನ್ಸಿಗೂ ಫೋನ್ ಮಾಡಿದರು. ನಾನು ನನ್ನ ಬಳಿ ಇದ್ದ ಇನ್ನೂರನ್ನು ಅವರಿಗೆ ಕೊಟ್ಟೆ. ಆಕೆಯನ್ನು ಆಸ್ಪತ್ರೆಗೂ ಸಾಗಿಸಲಾಯಿತು. ನಾನು ನಿಧಾನವಾಗಿ ಕಾಲೆಳೆಯುತ್ತಾ ದೇವಸ್ಥಾನಕ್ಕೆ ಹೊರಟೆ.

ಮರು ದಿನ ತಡೆಯಲಾರದೆ ಕೆಳಗೆ ಇಳಿದು ಬಂದು ಸೆಕ್ಯುರಿಟಿ ಬಳಿ ನಿನ್ನೆಯ ಆ ಹೆಂಗಸಿನ ಸ್ಥಿತಿ ವಿಚಾರಿಸಿದೆ. ಅವನು ಆಕೆ ಈಗ ಸಾಕಷ್ಟು ಸುಧಾರಿಸಿದ್ದಾಳೆಂದು, ಅವರ ಮಗ ನಿಮ್ಮನ್ನು ಭೇಟಿಯಾಗಬೇಕೆಂದು ಕೇಳುತ್ತಿದ್ದರು ಎಂದು ಹೇಳಿದ.

ಆಕೆಯ ಮಗ ಆಗಲೇ ಅಲ್ಲಿ ಬಂದವನು ನನಗೆ ವಂದನೆ ತಿಳಿಸಿದ. ಸಕಾಲಕ್ಕೆ ಅಲಾರಮ್ ಒತ್ತಿ ತಾಯಿಯನ್ನು ಕಾಪಾಡಿದ್ದಕ್ಕೆ ವಂದನೆ ಹೇಳಿದ. ನನಗೂ ನೆಮ್ಮದಿಯಾಯ್ತು. ಆದರೆ, ಅವನು ತಲೆ ಕೆರೆದುಕೊಳ್ಳುತ್ತಾ ನಿಂತ.

“ಅಮ್ಮ ಈಗ ಸುಧಾರಿಸುತ್ತಿದ್ದಾರೆ ಅಜ್ಜೀ, ಆಕೆಯ ಮಾಂಗಲ್ಯದ ಸರ ನೀವು ತೆಗೆದರಾ? ಎತ್ತಿಟ್ಟುಕೊಂಡರೆ ಕೊಡ್ತೀರಾ” ಅಂತ ಕೇಳಿದ.

ನನಗೆ ನಿಂತ ನೆಲವೇ ಕುಸಿಯುವಂತಾಯಿತು. ಎದೆ ಕಿವುಚಿಕೊಂಡು ಹಾಗೆಯೇ ನೆಲಕ್ಕೊರಗಿದೆ. ಯಾರೋ ಆಂಬುಲೆನ್ಸಿಗೆ ಕರೆ ಮಾಡುತ್ತಿದ್ದ ದನಿ ಕೇಳಿಸಿತು…

(ಇದು ನಾನು ಬರೆದ ಮೊದಲನೆಯ ಸಣ್ಣ ಕಥೆ. ಇದನ್ನು ಈ ವಾರದ ನಮ್ಮ ಪಂಜು ವಾರಪತ್ರಿಕೆಯಲ್ಲಿ ಪ್ರಕಟಿಸಿದ ನಟರಾಜು ಸೀಗೇಕೋಟೆ ಮರಿಯಪ್ಪ ಅವರಿಗೆ ಅನಂತ ಧನ್ಯವಾದಗಳು.)

ಪಂಜು ವಾರಪತ್ರಿಕೆ
ಕಥಾ ಲೋಕ
11.03.2013
http://www.panjumagazine.com/?p=1348

(ಚಿತ್ರ ಕೃಪೆ : ಅಂತರ್ಜಾಲ)

ಪರದೆ ಸರಿದರೆ…

aಪರದೆ ಸರಿದರೆ,

ಕಿಕ್ಕಿರಿವ ಅಭಿಮಾನಿಗಳು
ಕಿವಿಗಡಚಿಕ್ಕುವ ಚಪ್ಪಾಳೆ
ಶಿಳ್ಳೆಗಳ ಮೊರೆತ
ತೂರಿ ಬರುವ ಚಿಲ್ಲರೆ ಕಾಸು
ಕಟೌಟಿಗೆ ಕ್ಷೀರಾಭಿಷೇಕ

ಕೆಮ್ಮಿದರೂ ಸುದ್ದಿ
ಮೂಗು ಸುರಿದರೆ ವಿಲಾಯತಿ!
ಕ್ರಾಪು ಬದಲಿಸಿದರೆ
ಅಲವತ್ತುಕೊಳ್ಳುವ
ಬೋಳು ತಲೆ ಮಂದಿ

ತಾರಾ ಬಲವಿದ್ದ ಕಾಲಕೆ
ಕಾಲಿಗೊಂದು ಕೊಪ್ಪರಿಗೆ,
ಒಪ್ಪಿಗೆ ಹಸ್ತಾಕ್ಷರಕಂತೂ
ಮುಂಗಡವೋ ಇಡಿಗಂಟೋ
ಕಪ್ಪವೂ ಕಪ್ಪು ಬಿಳುಪೂ

ಹಡಗಿನಂಥ ರಥವು
ಬೀದಿಗಿಳಿದರೆ ಮೈಲುಗಟ್ಟಲೇ ಖಾಲಿ,
ಚುನಾವಣಾ ಕಾಲಕೆ
ಎಡತಾಕುವ ರಾಜಕೀಯ ಮಂದಿ,
ಸುಲಭ ವಿಸರ್ಜನಾ ಚೂರ್ಣಕೂ
ಬೇಡಿಕೆ ತನ್ನದೇ ಚಹರೆ

ಚಿರ ಯೌವ್ವನಿಗನ
ಹೊಸ ಚಿತ್ರಕೂ ಹದಿನಾರರ ಹುಡುಗಿ,
ಮೇಯ್ದ ಹುಲ್ಲುಗಾವಲುಗಳೂ
ಮರೆತ ಚಿತ್ರಾಂಗಧೆಯರೂ ಎನಿತೋ?

pyle_torn_curtainಪರದೆ ಸರಿದರೆ,

ನೆರೆದಿದ್ದವರೆಲ್ಲ ಕರಗಿ
ಉಳಿದದ್ದು ತಲೆಯ ನೆರೆತ,
ಲಗಾಮುಗಳ ಮೀರಿ
ಬಳಸ ಬಾರದ್ದಕ್ಕೆ ಬಳಸಿ
ಮುಷ್ಕರ ಕೂತ ಅಂಗಾಂಗ

ಸಂಜೆ ದೂರದರ್ಶನದಿ
ಪ್ರಸಾರವಂತೆ ತನ್ನದೇ ಚಿತ್ರ
ಮನವೂ ಗಾಡಾಂಧಕಾರ
ಕಟ್ಟದೆ ಉಳಿದ ಬಾಕಿ ಮೊತ್ತಕೆ
ಕಿತ್ತಿಟ್ಟ ಕರೆಂಟು ಫಿಸೂ

ನೂರನೆಯವಳ ಪ್ರವೇಶಕೆ
ಹಗ್ಗಕೆ ನೇತಾಡಿದಳು ಕಟ್ಟಿಕೊಂಡವಳು,
ರಸಿಕತೆಯ ದಾಖಲೆ ಬರೆದ
ಪಾಳು ಬಂಗಲೆಯಲೀಗ
ತಾನೇ ಜೀವಂತ ಭೂತ!

ತೊಟ್ಟ ಕೋಟಿನ ಹಿಂದೆ
ನಕ್ಕ ಹರಿದ ಬನಿಯನು,
ಕಿಮ್ಮತ್ತಿರದ ದಿವಾಳಿಯ ಸುತ್ತ
ಕಳಚಿಕೊಂಡ ಭಟ್ಟಂಗಿಗಳು,
ಬಂಗಲೆಯ ಗೋಡೆಗಳಲಿ
ಅವೇ ಶತಮಾನೋತ್ಸವ ಫಲಕ

ಬಣ್ಣ ಕಳಚಿದ ಮೇಲೆ
ಬಯಲು ಒಳ ಬೆತ್ತಲೆ,
ಸತ್ತರೆ ಬೇಕಂತಲ್ಲ
ತಯಾರಾಗಲಿ ಸಾಕ್ಷ್ಯಚಿತ್ರ!

(ಚಿತ್ರ ಕೃಪೆ : ಅಂತರ್ಜಾಲ)

ನಿವೇದನೆ…

pic2ಹದಿನೈದು ವರ್ಷಗಳ ಹಾದಿ
ಹೂವ ಹಾಸಲೇ ಇಲ್ಲ ನಾನು,
ಬರಿಯ ಏರು ಬರಿಯ ತೊಡರು
ಎಡವದೆಲೆ ನೀ ನಡೆಸಿಬಿಟ್ಟೆ

ಕತ್ತಲನು ಅಪ್ಪಿ ಹಗಲಲೇ
ಬೆದರಿ ಹಿಂದೆಲ್ಲೋ ಉಳಿದೆ
ಬರೀ ಕೊರಗುತಲೇ ಕಳೆದೇ,
ಎಬ್ಬಿಸುತ ಮುದ್ದಿಸುತ ಸಂತೈಸಿ
ಎಳೆ ತಂದು ನಿಲ್ಲಿಸಿದೆ
ನೆಟ್ಟಗೆನ್ನ ಮತ್ತೆ ಮತ್ತೆ…

ಸಂಸಾರ ನೊಗದ ಭಾರವ
ಹಂಚಿ ನೆಪ ಮಾತ್ರ
ನಾನು ಭ್ರಮೆಯಲೇ ನಡೆದೆ,
ಹಿಂದೆಲ್ಲ ಎಳೆದೆಳೆದು ಬಳಲಿ
ಮುಂದೆಯೂ ಹುಡುಕುತ್ತ ಹಾದಿ
ಎಂದೂ ನಿಟ್ಟುಸಿರಿಸಲಿಲ್ಲವಲ್ಲೇ!

ಅದುಮಿಟ್ಟ ನೋವ ಸೆಲೆ
ಮರೆಯಲೇ ಒರೆಸಿದ ಹನಿ
ಸಾವರಿಸುತಲೇ ನಕ್ಕ ನಗೆ,
ಶೂನ್ಯ ಗಳಿಕೆಯ ದಿನವೂ
ನಡುವೆ ನಗುತಲೇ ಕಳೆದೆ
ಹಂಚಿ ಸಂತಸದ ಸಿಹಿಯೇ

ನಿನ್ನೊಳಗು ಅರಿಯಲಿಲ್ಲ
ಜೊತೆಗಿನಿತು ಹೊಂಚಲಿಲ್ಲ
ಎಂದಿಗಾದರೂ ಕ್ಷಮಿಸು…

(ಚಿತ್ರ ಕೃಪೆ : ಅಂತರ್ಜಾಲ)

ನಮ್ಮೂರು – 3

164472_535156209862166_232ಆ818961_nಈ ಸಂಚಿಕೆಯಲ್ಲಿ ಬರುವ ಊರಿನ ಪರಿಚಯ ಸುಮಾರು 40 ವರ್ಷಗಳ ಹಿಂದಿನದು. ಈಗ ಅಲ್ಲಿನ ಪರಿಸರ ಮತ್ತು ಜೀವನ ವಿಧಾನವೂ ಬಹಳಷ್ಟು ಬದಲಾಗಿ ಹೋಗಿದೆ. ಈಗ ಅಲ್ಲಿನ ಮನೆ ಮನೆಗೂ ಭೂಷಣ: ದನ ಕರು ಮತ್ತು ಸೂರಿಗೆ ಡಿಷ್ ಆಂಟನಾ!

ನಾನು ಹೇಳಲು ಹೊರಟಿರುವುದು ನಾನು ಶಾಲೆ ಓದುತ್ತಿದ್ದ ದಿನಗಳ ಬಗ್ಗೆ. ಆಗ ಮುರುಕಲು ತರಗತಿಗಳಿದ್ದ ಸ್ಥಳದಲ್ಲಿ ಈಗ ಚಂದದ ಗೋಪಿ ಬಣ್ಣದ ಶಾಲಾ ಕಟ್ಟಡವಿದೆ. ನಾವೆಲ್ಲ ಮರಳು ಹಾಸಿದ ನೆಲದ ಮೇಲೆ ಕುಳಿತು ಬಳಪ ಮುರಿಯುತ್ತಿದ್ದ ಜಾಗದಲ್ಲೇ ಬೆಂಚುಗಳು ರಾರಾಜಿಸುತ್ತಿವೆ.

ನಮ್ಮ ಹಳ್ಳಿಯು ಮೊದಲೇ ನಿಮಗೆ ಹೇಳಿದಂತೆ ಆಂಧ್ರದ ಗಡಿಗೆ ಬಹಳ ಸಮೀಪವಿರುವುದರಿಂದ ಆಚಾರ ವಿಚಾರಗಳಲ್ಲೂ, ಬಳಕೆಯಲ್ಲೂ ದ್ವಿ ಭಾಷೆ ನುಸುಳಿಬಿಟ್ಟಿರುತ್ತದೆ. ಹಾಗಾಗಿಯೇ ನಮ್ಮ ಮನೆಯಲ್ಲಿ ಈಗಲೂ ನಮ್ಮ ಮಾತು ಕನ್ನಡದಲ್ಲೇ ಶುರುವಾಗಿ, ನಡುವೆಲ್ಲೂ ತೆಲುಗಿಗೆ ಹೊರಳಿ, ಕಡೆಗೆ ಕನ್ನಡದಲ್ಲೇ ಉಪಸಂಹಾರವಾಗುತ್ತದೆ!

ಹೀಗಿರಲು, ನಮ್ಮ ಶಾಲಾ ದಿನಗಳಲ್ಲಿ ಕನ್ನಡ ಮೇಸ್ಟರರ ತರಗತಿಗಳ ಝಲಕ್ ಹೀಗಿರುತ್ತಿತ್ತು. ಮೇಸ್ಟ್ರು ತರಗತಿ ಪ್ರವೇಶಿಸಿ, ಆದೇಶಿಸುತ್ತಿದ್ದರು :

“ಏಮಂಡ್ರ ಕನ್ನಡ ಬುಕ್ಕುಲು ತೀಯಂಡಾ… ಅಕ್ಕಡ ಯಾಬೈ ಮೂಡೋ ಪೇಜುಲೋ ಪದ್ಯಂ ತೀಸ್ಕೋಂಡಾ… ಆ ಪದ್ಯಂಲೋ ಕುವೆಂಪು ಏಮಿ ಚೆಪ್ತಾರಂಟೇ….”
(“ಏನ್ರೋ ಕನ್ನಡ ಬುಕ್ಕು ತೆಗೀರೀ… ಅಲ್ಲಿ ಐವತ್ತ ಮೂರನೇ ಪೇಜಲ್ಲಿ ಪದ್ಯ ತೆಗೀರಿ… ಆ ಪದ್ಯದಲ್ಲಿ ಕುವೆಂಪು ಏನ್ ಹೇಳ್ತಾರಂದ್ರೇ…)

ಇನ್ನೊಂದು ನಮಗೆ ಪರಮಾಶ್ಚರ್ಯದ ಸಂಗತಿ ಎಂದರೆ ನಮಗೆ ಮೊದಲನೆ ತರಗತಿ ಪಾಠ ಮಾಡುತ್ತಿದ್ದವರು, ಪಕ್ಕದ ನಕ್ಕಲಹಳ್ಳಿಯ ಮಲ್ಲಪ್ಪ ರೆಡ್ಡಿ ಮಾಸ್ತರರು. ನಾವು ಹತ್ತನೇ ಕ್ಲಾಸು ಮುಗಿಸಿದರೂ ಅವರಿನ್ನೂ ಒಂದನೇ ಕ್ಲಾಸೇ ತೆಗೆದುಕೊಳ್ಳುತ್ತಿದ್ದರು, ಆಗ ನನಗೆ ಹುಟ್ಟಿದ ಎರಡು ಸಾಲು…

ಹಂಗೋ ಹಿಂಗೋ
ದಾಟ್ಕೊಂಡ್ ಬಿಟ್ಟೆ
ಎಸ್ಸೆಸ್ ಎಲ್ ಸೀನಾ,
ಮಲ್ಲಪ್ಪ ರೆಡ್ಡಿ
ಮಾಸ್ತರ್ ಮಾತ್ರ
ಪಾಸಾಗಲೇ ಇಲ್ರೀ
ಒಂದನೇ ಇಯತ್ತೇನಾ!

(ಮುಂದುವರೆಯುವುದು…)

ಫೇಸ್ ಬುಕ್ – ನಮ್ ಕನ್ನಡ ಗುಂಪಿನಲ್ಲಿ ನಿಮ್ಮೊಳಗೊಬ್ಬ ಬಾಲು ಅವರು ಪ್ರಕಟಿಸಿದ ನಮ್ಮೂರ ಚಿತ್ರಣ.
http://www.facebook.com/photo.php?fbid=535156209862166&set=o.109902029135307&type=1&theater

ನಡುಗಡ್ಡೆಗಳಿಗೆಲ್ಲ…

islನೆನಪಿರುವುದೇ ಇಲ್ಲ,
ಬಿಸುಟು ಬಂದು ಬಿದ್ದ
ಹಲ ಇಸುಮುಗಳಲಿ
ಅರೆ ಸತ್ತ ಜೀವಂತ
ಇಂತೊಂದು ಚಹರೆ

ಬಯಸಿ ಬಂದದ್ದಲ್ಲ
ಕರೆಸಿಕೊಳ್ಳಲೂ ಇಲ್ಲ
ಪ್ರಕ್ಷುಬ್ಧವಾ ಕಾಲ ಘಟ್ಟ,
ದೇಗುಲವ ಕನವರಿಸಿ
ಪಡೆದ ಗೋರಿ ಫಲಕ

ಹೆಸರನಾದರೂ ಕೆತ್ತಿ
ಇರುವಿಕೆಯ ಅಜರಾಮರ
ಮಾಡಿಯೇ ತೀರಬೇಕು
ಎಂದೆನಿತು ತಡಕಿದರೂ
ಬರೀ ಮಳಲೇ ಸುತ್ತ

ಒಂದೊಮ್ಮೆ ಹಿಂದಿರುಗಿ
ಕೆದಕಿ ಕೇಳಲೇ ಬೇಕು
ಬೇಡದಿದ್ದರೂ ತೆಕ್ಕೆ
ಬಳಸಿಕೊಂಡಾ ಗಳಿಗೆ
ಉನ್ಮತ್ತತೆಯು ಸುಳ್ಳೇ?

ನೆನಪಿರುವುದೇ ಇಲ್ಲ
ನಡುಗಡ್ಡೆಗಳಿಗೆಲ್ಲ
ಅನಿವಾರ್ಯ ಅದಕಲ್ಲ,
ಕ್ಷಣ ಗಾಹಿಗಳದೆಲ್ಲ
ಉತ್ತರಕ್ರಿಯಾ ಕರ್ಮ

ನಮ್ಮೂರು – 1

playಫೇಸ್ ಬುಕ್ – ನಮ್ ಕನ್ನಡ ಗುಂಪಿನಲ್ಲಿ ನಿಮ್ಮೊಳಗೊಬ್ಬ ಬಾಲು ಅವರು ಪ್ರಕಟಿಸಿದ ನಮ್ಮೂರ ಚಿತ್ರಣ.

ಭಾಗ – 1

ನನಗೆ ಬಾಲ್ಯ ಎಂದ ಕೂಡಲೆ ನನಗೆ ನೆನಪಾಗುವುದು ನನ್ನ ಹಳ್ಳಿಯಾದ ವಾಟದಹೊಸಹಳ್ಳಿ.

ಐದನೇ ತರಗತಿಯವರೆಗೂ ಅಲ್ಲಿ ಓದಿ ನಂತರ ಮುದ್ದೇನಹಳ್ಳಿಗೆ ಸೇರಿದೆ.

ನನ್ನ ಬಾಲ್ಯದಲ್ಲಿ ನನ್ನ ನೆಚ್ಚಿನ ಆಟಗಳೆಂದರೆ, ಬಸ್ಸಾಟ, ಪೈಪಾಟ, ಲಗೋರಿ, ಕಳ್ಳ ಪೋಲಿಸ್ ಮತ್ತು ಕುಂಟೇ ಬಿಲ್ಲೆ.

ಬಸ್ಸಾಟ ದಾರ ಕಟ್ಟಿಕೊಂಡು ಮಕ್ಕಳೆಲ್ಲ ಒಳಗೆ ಸೇರಿ ಮುಂದಿನವನು ಚಾಲಕ, ಹಿಂದಿನವನು ನಿರ್ವಾಹಕನಂತೆ ಆಡುವ ಆಟ. ಊರಿನ ಗಲ್ಲಿಗಲ್ಲಿಗಳಲ್ಲೂ ನಮ್ಮ ಬಸ್ಸು ಓಡಿದ್ದೇ ಓಡಿದ್ದು.

ಪೈಪಾಟವೆಂದರೆ, ಹಳ್ಳಿಯಲ್ಲಿ ನಮ್ಮದು ಬಟ್ಟೆ ಅಂಗಡಿ, ಬಟ್ಟೆ ಸುತ್ತಲು ಪ್ಲಾಸ್ಟಿಕ್ ಪೈಪ್ ಇರುತ್ತದೆ. ನಮ್ಮ ಮನೆಯ ಹಿಂದೆ ನಮ್ಮ ತಾಯಿ ಪುಟ್ಟ ತೋಟ ಮಾಡಿದ್ದರಲ್ಲ ಅಲ್ಲಿ ಹತ್ತಾರು ಗಿಡಗಳು. ದಾಸವಾಳ, ದಾಳಿಂಬೆ, ರೋಜಾ ಹೀಗೆ. ಅವುಗಳನ್ನೆಲ್ಲ ಬೆಸೆಯುವಂತೆ ಪ್ಲಾಸ್ಟಿಕ್ ಪೈಪುಗಳನ್ನು ಭೂಮಿಯ ಒಳಗೆ ಮುಚ್ಚಿ, ಒಂದು ಕಡೆ ನೀರು ಹಾಕಿದರೆ ಎಲ್ಲ ಗಿಡಗಳಿಗೂ ಸಮನಾಗಿ ಹರಿಯುವಂತೆ ಜೋಡಿಸುವುದು.

ಇನ್ನು ಲಗೋರಿ, ಮರ ಕೋತಿ ಆಟ, ಐಸ್ ಪೈಸ್, ನೀರು ತುಂಬುವ ಆಟ ಮತ್ತು ಮರ ಏರುವುದು ಹೊರಾಂಗಣ ಸಾಹಸಗಳಾದರೆ, ಕಳ್ಳ ಪೊಲೀಸ್, ಚಕ್ಕಾಬಾರ ಮತ್ತು ಗುಳಿಮನೆ ಒಳಾಂಗಣ ಆಟಗಳು.

ಮತ್ತೆ ಬಾಲ್ಯ ಹಿಂದಿರುಗಬಾರದೇ ಅನಿಸುವುದು ಇದನ್ನೆಲ್ಲ ನೆನೆದಾಗಲೇ!

ನನ್ನ ಹಳ್ಳಿಯ ಚಿತ್ರಗಳಿಗೆ ಇದು ಮುನ್ನುಡಿ ಎಂದುಕೊಂಡರೆ, ಮುಂದೆ ಆಂಧ್ರದ ಗಡಿಯಲ್ಲಿರುವ ನನ್ನ ಹಳ್ಳಿಯ ನೆನಪುಗಳನ್ನು ಮುಂದೆ ಬಿಚ್ಚಿಡುತ್ತೇನೆ.

(ಸಶೇಷ)
(ಚಿತ್ರ ಕೃಪೆ : ಅಂತರ್ಜಾಲ)

http://www.facebook.com/photo.php?fbid=496637223714065&set=o.109902029135307&type=1&theater

ನೀರು…

Week : 17

Gulf Kannadiga
Gulf Kannadiga

water 1ಕಾಡು ಕಾಯದ ಹೊರತು
ಕಾರ್ಮೋಡ ಹನಿಗಟ್ಟದು,
ಮೋಡ ಬಿತ್ತನೆ ಯತ್ನಕು
ಮಳೆ ಮೋಡ ಸುಳಿಯದು

ಕನಿಕರಿಸಿದ ಮಳೆಯನು
ಇಂಗಿಸುವದ ಮರೆತೆವು,
ಎನಿತೀಗ ಕೊರೆದರೇನು
ಗಂಗಾಮಯಿ ಜಿನುಗದು

ಸುರಿದ ರಾಸಾಯನಿಕವು
ಹೊಲ ಗದ್ದೆ ನೆಲಕಿಳಿದು,
ಸೇದು ಪ್ರತಿ ಬಿಂದಿಗೆಯು
ಕುಡಿವ ವಿಷದ ನೀರು

ಉಳಿತಾಯ ಅರಿತವರು
ನಮ್ಮ ಜಾಣ ಹಳ್ಳಿಗರು,
ಹಾಕಿಸಲಲ್ಲಿ ಸರ್ಕಾರವು
ಹನಿ ಹನಿ ನೀರಾವರಿಯು

ಇನ್ನು ಬೇಕಿದೆ ನಗರಕು
ಪುನರ್ ಬಳಕೆಯ ನೀರು
water2

 

 

 

 

Gulf Kannadiga

 

 

ಗಲ್ಫ ಕನ್ನಡಿಗ ಈ ಪತ್ರಿಕೆಯಲ್ಲಿ ಪ್ರಕಟಿತ.
26.01.2013
http://gulfkannadiga.com/news/culture/39732.html

 

ಎರಡು ಚಿತ್ರಗಳು…

Gulf Kannadiga

Week : 14

ಚಿತ್ರ ಪಟ : ೧
ಯಾವುದೀ ಓಘ? ಹುಚ್ಚು ಆವೇಗ?
ಎತ್ತ ಸಾಗಿದೆ ಪ್ರಿಯೇ! ಬೆಂಗಳೂರು…

ರಾಯರಾಳ್ವಿಕೆಯಲಿ ರಾಶಿ ಲೆಕ್ಕದಲಿ
ವಜ್ರ ವೈಢೂರ್ಯ ರತ್ನಾದಿಗಳು,
ನನ್ನ ಕಾಲಕೆ; ಕಳ್ಳೇ ಕಾಯಿ ಪರಿಷೆಯಲಿ
ಪ್ರದ್ಯುಮ್ನ ಬಾಣಕ್ಕೆ ಸಿಕ್ಕ ಪದ್ಮ ಮೀನಾಕ್ಷಿಯರು!

ರಸಿಕ ಮಣಿಗಳಿಗೆ ಕೆಂಪೇಗೌಡ ಹಿಮಾಲಯ
ಸಭ್ಯರಿಗೆ! ರಾಜ್ಕುಮಾರ್ ವಿಷ್ಣು ಅಂಬಿ ರಮೇಶ
ಇಷ್ಟ ದೇವತಾ ಕ್ಯಾಲಂಡರಿನ ಹಿಂದೆ
ಸಿಲ್ಕು ಡಿಸ್ಕೋ ಮುಲುಕೋ ಜನ್ಮಸ್ಥ ಉಡುಗೆ!

ಊರಗಲವಿದ್ದ ಮಸಾಲೆ ದೋಸೆ ಕಾಸಗಲ
ನಲ್ಲಿ ನೀರಿಗೂ ಬ್ರಾಂಡಿನ ಬಿರುಡೆ
ಸುರಿದ ಮಳೆ, ಒಂಥರಾ ಹೆಂಡತಿ ಉಪದೇಶ
ರಾಜ ಕಾಲುವೆಗಳೆಲ್ಲ ಒತ್ತುವರಿ ಈಗ!

ದಮ್ಮು ರಮ್ಮು ಲಲನೆಯಕೂಡ, ಎಲ್ಲಿಂದಲೋ ಬಂದವರಿಗೆ
ಅಫೀಮು ಗಾಂಜ ಲೈವ್ ಬ್ಯಾಂಡುಗಳ ತೆವಲು
ನೂರ ತೊಂಬತ್ತೆಂಟು ಹುತ್ತಗಳಲೂ ಪರಕೀಯ ಹಾವುಗಳು
ನಮ್ಮ ಬಸ್ಸಲ್ಲೇ ನಾವು ನಿಂತ ಪಯಣಿಗರು…

ನಗರ ಭೂಪಟಕೀಗ ಆನೆ ಕಾಲು ರೋಗ
ನನ್ನ ಪ್ರಾರಬ್ಧ ಕರ್ಮಕೆ
ಈಕೆ ಗತ ತ್ರಿಪುರ ಸಿಲಿಕಾನ್ ಸುಂದರಿ…

 

***

 ಚಿತ್ರ ಪಟ: ೨

ಪ್ರೇಯಸಿಯೇ ಬದಲಾದ ಮೇಲೆ

ಕಾಲ ಚಕ್ರಕೆ ಸಿಕ್ಕ ನನ್ನ ಹಳ್ಳಿ?

ತಿರು ತಿರುವಿ ಚಕ್ರ; ಮಣ್ಣ ಮುದ್ದೆಗೆ

ಕುಂಬಾರ ಜೀವ ಕೊಡುತಿದ್ದ

ನೇಗಿಲು ಕುಡುಗೋಲು ಗುದ್ದಲಿಗೆ

ಕಮ್ಮಾರ ತಿದಿ ಒತ್ತಿ ರೂಪ ಕೊಡುತಿದ್ದ

ವಿಷ್ಣು ಪತ್ನಿ ಬಲು ಕರುಣಾಮಯಿ

ನಿತ್ಯ ಹರಿಧ್ವರ್ಣ ಕಾಡುಗಳು; ಕಾಲ ಕಾಲಕೆ ಮಳೆ

ಬಾಳೆ ತೆಂಗು ರಾಗಿ ಜೋಳ ಇನ್ನಿತರೆ…

ಸಮೃದ್ಧ ಫಸಲಿಗೆ ರೈತಾಪಿ ಬೆವರು

ಪಟ್ಟಣಕ್ಕೊರಟ ಬಸ್ಸುಗಳ ತುಂಬೆಲ್ಲ

ಹಳ್ಳೀ ಹೈಕಳದ್ದೇ ಗಂಟು ಮೂಟೆ

ಊರಿಗೆ ಊರೇ ಗುಳೆ ಎದ್ದ ಮೇಲೆ

ಸಾವಿತ್ರಮ್ಮನ ಗದ್ದೆಗೆ ಆಳುಗಳೇ ಬರ!

ಯಾವುದೋ ಹುಚ್ಚು ಸೆಳೆತಕೆ ಸಿಕ್ಕು

ನೆಲದ ಬೆಲೆ ಅಂಬರಕ್ಕೇರಿ

ತುಂಡು ರೈತರಿಗೆಲ್ಲಾ ಕಾರು ಬಾರು

ಉಂಡದ್ದೆಲ್ಲಾ ಬಿರಿಯಾನಿ, ಕಬಾಬು!

ಯಾರು ಬೆಳೆಯುತ್ತಾರೆ ನಾಟಿ-ಗೀಟಿ ಮಾಡಿ ಎಲ್ಲಾ?

ಉಂಡು ಮಜಾ ಮಾಡಿದ ಮೇಲೆ; ಇದ್ದದ್ದೇ ಬಿಡಿ

ಸರ್ಕಾರದ ಸಾಲ ಮನ್ನಾ, ಚುನಾವಣೆಗೂ ಮುನ್ನ!

ಗಲ್ಫ ಕನ್ನಡಿಗ ಈ ಪತ್ರಿಕೆಯಲ್ಲಿ ಪ್ರಕಟಿತ.
04.01.2013

http://gulfkannadiga.com/news/culture/32691.html
(ಚಿತ್ರಗಳ ಕೃಪೆ : ಅಂತರ್ಜಾಲ)

ನಾವು ಕುದುರೆಗಳು…

   Week : 13

 h2

ನಾವು ಕುದುರೆಗಳೇ ಇಷ್ಟು
ಕದ ತೆರೆವುದೇ ತಡ
ಪಿಲ್ಲರಿನಿಂದ ಪೋಸ್ಟಿಗೆ
ಫೇರಿಬಿಡುವುದೇ ಕಲಿಸಿದ ವಿದ್ಯೇ…

ಬೆನ್ನಿಗೇರಿದ ವಾಸನೆಯ
ಭಾರೀ ಪೃಷ್ಠಗಳನೊತ್ತು
ಬಾಗಿದೆ ನಮ್ಮದೇ ಪೃಷ್ಠ!
ಕಿಮಿಕ್ ಎನ್ನುವ ಮಾತೆಲ್ಲಿ
ಅಸಲು ಹುಟ್ಟಿದ್ದೇ
ಹೊತ್ತುಕೊಂಡೇ ಓಡಲಿಕ್ಕೇ!

ಕೆನೆಯಲೇ ಬಾರದು
ಕಚ್ಚುವುದು, ಇನೆಲ್ಲಿಯ ಮಾತು?
ಪಕ್ಕೆಗೊದ್ದರೂ
ತಪ್ಪಲೇಬಾರದು ಆಯ,
ಏನೆಲ್ಲ ತಾಕಿ ಎಲ್ಲೆಲ್ಲೋ ಹರಿದು
ರಕ್ತ ನಲ್ಲಿಯಂತೆ ಬಸಿದರೂ,
ತೊಡೆ ಮಾಂಸ ಗಟ್ಟಿಯಿದೆ
ಸವಾರ ನುಗ್ಗಿಸುವ
ಅರಿವಿರದ ಹಾದಿಗಳ ಗುಂಟ
ಓಡುವುದಷ್ಟೇ ನಮ್ಮ ಕಾಯ

ಹುಟ್ಟಿದ ಅನಿವಾರ್ಯಕ್ಕಾಗಿ
ರೇಸಿಗೋ, ದೊರೆಯ ಲಾಯಕ್ಕೋ
ಸರ್ಕಲ್ಲಿನಲ್ಲಿ ವಿಗ್ರಹದಂಡಿಗೋ
ಬರೆದಂತೆ ಹಣೆ ಬರಹ,
ಕಣ್ಕಾಪು, ಜೀನು, ಕಾಲ್ಗೊರಸು
ಮಿರಿ ಮಿರಿ ಮಿಂಚಲು ಮಾಲೀಸು ಎಣ್ಣೆ
ಚಲಾವಣೆ ಇರು ತನಕ ನಾಣ್ಯವೂ
ಒಳ್ಳೆ ತಳಿಗೆ ಮಾತ್ರ ಬೆಂದ ಹುರುಳಿಯೂ

ನಷ್ಟ ಜಾತಕ ಕುದುರೆಯು
ತೇಕುತಲೇ ಇರಬೇಕು
ಎಳೆದೆಳೆದು ಜಟಕ…

h1

ಸುಲೋಚನ... ಗಲ್ಫ ಕನ್ನಡಿಗ ಈ ಪತ್ರಿಕೆಯಲ್ಲಿ ಪ್ರಕಟಿತ.
28.12.2012

http://gulfkannadiga.com/news/culture/30933.html 
(ಚಿತ್ರ ಕೃಪೆ : ಅಂತರ್ಜಾಲ)

ಸುಲೋಚನ…

Gulf Kannadiga

Gulf Kannadiga

Week: 12

 

 

ಈ ಭೂತ ಕನ್ನಡಿ ಇದೆಯಲ್ಲ ಇದಕ್ಕೂ ನನಗೂ ನಂಟು ಈವತ್ತಿನದಲ್ಲ.

ಏಕೆಂದರೆ ಈವತ್ತು ನನ್ನ ಹೊಟ್ಟೆ ತುಂಬಿಸುತ್ತಿರುವ ಕ್ಯಾಮರಾ ಮತ್ತು ಅದರ ಮೂಲಕ ಜಗತ್ತನ್ನು ’ಸರಿಯಾಗಿ’ ನೋಡಲು ನಾನು ಧರಿಸುವ ಕನ್ನಡಕ ಎರಡಕ್ಕೂ ಮೂಲ ಆಧಾರ ’ಭೂತ ಕನ್ನಡಿ’ ಅಥವ ಇನ್ನೂ ಸುಲಭ ಅರ್ಥದಲ್ಲಿ ಮಸೂರ ಅಥವಾ ಲೆನ್ಸ್!

ನನ್ನ ಹಳ್ಳಿಯ ಹಣ್ಣು ಹಣ್ಣು ಮುದುಕರು ಮೋದಿ ಡಾಕ್ಟರ್ ಅವರ ಕಣ್ಣು ಚಿಕಿತ್ಸಾ ಶಿಬಿರಗಳಲ್ಲಿ ಮುಫತ್ತಾಗಿ ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡು ಬಂದು, ಮೊದಲು ಕೆಲವು ದಿನ ಕಪ್ಪು ಕನ್ನಡಕ ಹಾಕಿಕೊಂಡು ಜಗಲಿಯಲಿ ಕೂತು ಎಲೆ ಅಡಿಕೆ ಮೆಲ್ಲುತ್ತಿದ್ದರು. ಆ ನಂತರದ ದಿನಗಳಲ್ಲಿ ಆ ಕಪ್ಪು ಕನ್ನಡಕದ ಜಾಗದಲ್ಲಿ ದಪ್ಪಗಿನ ಕನ್ನಡಕವೊಂದು ಬಂದು ಕೂರುತಿತ್ತು. ಆ ದಪ್ಪಗಿನ ಮಸೂರದ ಹಿಂದಿನ ಅವರ ಕಣ್ಣುಗಳು ಇಷ್ಟಗಲ ಕಾಣುತ್ತಿದ್ದವು. ಆ ನಂತರ ಅವರ ಪತಿನಿಯರನ್ನು ನೋಡಿ ಬಹುಶಃ ನಿನಗೂ ವಯಸಾಯಿತಲ್ಲೇ ರಂಗಮ್ಮ ಎಂದು ಮನಸ್ಸಿನಲ್ಲೇ ಹೇಳಿಕೊಳ್ಳುತ್ತಿದ್ದರೇನೋ?

ನಮ್ಮ ಅಜ್ಜಿ ಕನ್ನಡವನ್ನು ’ಸುಲೋಚನ’ ಎಂದೇ ಕರೆಯುತ್ತಿದ್ದರು. ಅಜ್ಜಿ ತನ್ನ ಟ್ರಂಕಿಗೆ ಯಮ ಭಾರದ ಬೀಗ ಜಡೆಯುತ್ತಿದ್ದರು. ಅದರ ಬೀಗದ ಕೈಗಳನ್ನು ತಮ್ಮ ಕುತ್ತಿಗೆ ದಾರದಲ್ಲಿ ಜತನ ಮಾಡುತ್ತಿದ್ದರು. ಆ ಬೀಗಗಳನ್ನು ಆಕೆ ಜೋಪಾನ ಮಾಡುತ್ತಿದ್ದ ರೀತಿಗೂ ಅವಳ ಕನ್ನಡಕವನ್ನು ಕಾಪಾಡಿಕೊಳ್ಳುತ್ತಿದ್ದ ರೀತಿಗೂ ಅಂತಹ ವ್ಯತ್ಯಾಸವೇನೂ ಇರಲಿಲ್ಲ. ಪದೇ ಪದೇ ತಮ್ಮ ಹಾಸಿಗೆ ಪಕ್ಕ ಇಟ್ಟಿರುತ್ತಿದ್ದ ಕನ್ನಡಕದ ಡಬ್ಬವನ್ನು ಮುಟ್ಟಿ ನೋಡಿಕೊಳ್ಳುವುದು ಮತ್ತು ತನ್ನ ಕುತ್ತಿಗೆಯ ಬೀಗದ ಗೊಂಚಲನ್ನು ಸವರಿಕೊಳ್ಳುವುದು ಆಕೆಯ ಕ್ಷಣ ಕ್ಷಣದ ಕೆಲಸ.

ಕನ್ನಡಕ ಒಡೆದರೆ ಅದನ್ನು ರಿಪೇರಿಯನ್ನು ಯಾರೂ ಮಾಡಿಸಿಕೊಡರು, ಎಂಬ ಹಸಿ ಸತ್ಯ ಅಜ್ಜಿಗೆ ಗೊತ್ತಿತ್ತು. ಸ್ವತಃ ಕನ್ನಡಕವೂ ಇಲ್ಲದೆ ಮಾ|| ಹಿರಣ್ಣಯ್ಯನವರು ಹೇಳುವಂತೆ ಕನಸುಗಳೂ ಕ್ಲೀಯರ್ ಆಗಿ ಕಾಣಿಸವು ಎಂಬ ಥಿಯರಿ ಆಕೆಯದು. ಆಕೆ ತೀರಿಕೊಂಡಾಗ ಬಹುಶಃ ಆಕೆಯೊಡನೆ ಚಿತೆ ಏರಿದ ಕೆಲವೇ ಆಕೆಯ ಮೂಲ ಗುರುತುಗಳಲ್ಲಿ ಕನ್ನಡಕವೂ ಒಂದಿರಬಹುದು.

ನಿಮ್ಮ ಮನೆ ಗೋಡೆಗಳಿಗೆ ನಿಮ್ಮ ಪೂರ್ವಜರ ಹಳೇ ಚಿತ್ರಗಳಿದ್ದರೆ ಗಮನಿಸಿ. ಮೈಸೂರು ಪೇಟ, ಹುರಿ ಮಾಡಿದ ಮೀಸೆ, ಚಿನ್ನದ ಸರದ ಸಮೇತ ಆ ದುಂಡಗಿನ ಗಡಿಯಾರ ಮತ್ತು ವಿವಿಧಾಕಾರದ ಆ ಕನ್ನಡಕಗಳು. ಕನ್ನಡಕವು ಹೊರಗಿನ ಜಗವನ್ನು ಸ್ಪಷ್ಟವಾಗಿ ಕಾಣಿಸಲು ಎಷ್ಟು ಸಹಕಾರಿಯೋ ಹಾಗೆ ನಮ್ಮ ಹೊರ ರೂಪವನ್ನು ತುಸುವಾದರೂ ಸಹ್ಯವಾಗಿ ಕಾಣಿಸಬಲ್ಲ ತಾಕತ್ತು ಅವಕ್ಕೂ ಇದೆ.

ನಮ್ಮ ಮಹಾತ್ಮ ಗಾಂಧಿಯವರ ಅತ್ಯಂತ ಸುಲಭದ ರೇಖಾ ಚಿತ್ರ ಬಿಡಿಸುವಾಗ ನಾವು ಅವರ ಕನ್ನಡದಿಂದಲೇ ಶುರು ಮಾಡುತ್ತೇವೆ ಹೌದೋ ಅಲ್ಲವೋ?

ಹಳೇ ಸಿನಿಮಾಗಳಲ್ಲಿ ನಾಯಕ ನಟರು ಬಳಸುತ್ತಿದ್ದ ಊರಗಲದ ತಂಪು ಕನ್ನಡಕ ಗಮನ ಸೆಳೆಯುತ್ತಿದ್ದವು. ಕೆಲ ರಾಜಕೀಯ ನಾಯಕರನ್ನು ನಾವು ಅವರ ಕನ್ನಡಕವಿಲ್ಲದೆ ಗುರುತೂ ಹಿಡಿಯಲಾರವೇನೋ ಅಲ್ಲವೇ? ಅಂತಹ ಊರಗಲದಿಂದ ಈಗ ಸಾವಿರಗಟ್ಟಲೆ ಬೆಲೆ ಬಾಳುವ ತಂಪು ಕನ್ನಡಕಗಳ ಜಮಾನಾದವರೆಗೂ ಅವು ನಮ್ಮ ಬದುಕಿನ ಅವಿಭಾಜ್ಯ ಅಂಗವೇ. ನಾನು ’ಆ ಕಂಪನಿ’ ತಂಪು ಕನ್ನಡಕ ಧರಿಸಿದ್ದೇನೆ ಎನ್ನುವುದು ಪ್ರತಿಷ್ಠೆಯ ಸೂಚಕವೇ.

ಸಿನಿಮಾಗಳಲ್ಲಿ ಜಿಪುಣ ಪಾತ್ರಗಳನ್ನು ತೋರಿಸುವ ಪರಿಕಲ್ಪನೆ ಗಮನಿಸಿ, ಅವರ ಕನ್ನಡಕದ ಒಂದು ಆಧಾರ ಮುರಿದಿತ್ತೆನ್ನಿ ಅದಕ್ಕೆ ಅವರು ದಾರ ಕಟ್ಟಿಕೊಂಡು ಮೂಗಿನ ಮೇಲೆ ಏರಿಸಿರುತ್ತಾರೆ!

ಇನ್ನೂ ಅಚ್ಚರಿ ಎಂದರೆ ನಮ್ಮ ಅತ್ತೆ ಮತ್ತು ಮಾವನವರದು ಅಪರೂಪದ ಆದರ್ಶ ದಾಂಪತ್ಯ. ಅವರು ಹೇಗೆ  ಒಬ್ಬರನ್ನೊಬ್ಬರು ಬಿಟ್ಟಿರಲಾರೊ ಹಾಗೆಯೇ ಅವರ ಕನ್ನಡಕವೂ ಸಹ. ಒಂದೇ ಕನ್ನಡಕ ಅದು ಹೇಗೋ ಇಬ್ಬರು ಬಳಸಬಹುದಾಗಿದೆ.

ಈಗ ಬಿಡಿ ಚಾಳೀಸುಗಳ ನಿವಾರಣೆಗಾಗಿ ನೇತ್ರ ತಜ್ಞರು ಕೆಲವೇ ನಿಮಿಷಗಳ ಶಸ್ತ್ರ ಚಿಕಿತ್ಸೆ ಮಾಡುತ್ತಾರೆ. ಹುಡುಗ ಹುಡುಗಿಯರು ಕಣ್ಣಿನ ಒಳಗೇ ಲೆನ್ಸ್ ಹಾಕಿಕೊಂಡು ತಮ್ಮ ಐಬು ಜಗದ್ಜಾಹೀರಾಗದ ಹಾಗೇ ಎಚ್ಚರಿಕೆ ವಹಿಸುತ್ತಾರೆ. ವಿದ್ಯಾವಂತರಿಗೆ ತಮ್ಮ ಓದಿನ ಪುಟ್ಟ ಕನ್ನಡಕವನ್ನು ಜೇಬಿನ ಪುಟ್ಟ ಹೋಲ್ಡರಿನಿಂದ ತೆಗೆದು ಹಾಕಿಕೊಳ್ಳುವುದೇ ಒಂದು ಗರ್ವ ಸೂಚಕವೇ.

ಈ ಮಸೂರಗಳು ಕನ್ನಡಕಕ್ಕೆ ಹೇಗೋ ಹಾಗೆ ಬದುಕಿನ ಹಲವು ಉಪಕರಣಗಳಿಗೆ ಮೂಲ. ಕ್ಯಾಮರಾ, ಪ್ರೊಜೆಕ್ಟರ್, ಸೂಕ್ಷ್ಮ ದರ್ಶಕ, ಉದರ ದರ್ಶಕ ಶಸ್ತ್ರ ಚಿಕಿತ್ಸಾ ಸಾಧನ ಹೀಗೆ ಇವುಗಳ ಬಳಕೆ ವಿಶ್ವ ವ್ಯಾಪಿ. 

ಚಿಕ್ಕವನಾಗಿದ್ದಾಗ ಬರ್ನ್ ಆದ ಬಲ್ಪುಗಳ ತಲೆ ಬುರುಡೆ ಒಡೆದು, ಖಾಲೀ ಪೆಟ್ಟಿಗೆಯ ಒಳಗಡೆ ಅದನ್ನು ಜೋಡಿಸಿ ಬಲ್ಪಿನ ಒಳಗಡೆ ನೀರು ತುಂಬಿಟ್ಟು ಸಿನಿಮಾ ಪ್ರೊಜೆಕ್ಟರ್ ಅಂತ ತಯಾರು ಮಾಡುತ್ತಿದ್ದೆ. ಆ ನೀರು ತುಂಬಿದ ಬಲ್ಬೇ ಮಸೂರದ ಹಾಗೆ ಕೆಲಸ ಮಾಡುತ್ತಿತ್ತು. ಕಿಟಕಿಯ ತೂತಿನಿಂದ ಕನ್ನಡಿ ಮುಖೇನ ಹಾಯಿಸಿದ ಸೂರ್ಯನ ಬೆಳಕಲ್ಲಿ,  ಮೂಡುತ್ತಿದ್ದ  ಸಿನಿಮಾ ರೀಲಿನ ಒಂದೊಂದೇ ಫ್ರೇಮು ಅಮಿತಾನಂದವನ್ನು ಕೊಡುತ್ತಿತ್ತು. ಏನೋ ಕಂಡು ಹಿಡಿದ ಸಂಭ್ರಮ ನನಗೆ. ನೀರು ತುಂಬಿದ ಬಲ್ಬೂ ಮಸೂರದ ಕೆಲಸ ಮಾಡುತ್ತಿತ್ತು.

ಅಂದ ಹಾಗೆ ಈ ಲೇಖನವನ್ನು ಬೆರಳಚ್ಚಿಸುವಾಗಲೂ ನಾನು ಕನ್ನಡಕ ಹಾಕಿಕೊಂಡೇ ಕುಳಿತಿದ್ದೇನೆ ಎಂದರೆ, ಇದರ ಅನಿವಾರ್ಯತೆ ನಿಮಗೆ ಅರಿವಾಗಿರಬಹುದಲ್ಲವೇ?

ಗಲ್ಫ ಕನ್ನಡಿಗ ಈ ಪತ್ರಿಕೆಯಲ್ಲಿ ಪ್ರಕಟಿತ.
21.12.2012

http://gulfkannadiga.com/news/culture/29066.html

(ಚಿತ್ರ ಕೃಪೆ : ಅಂತರ್ಜಾಲ)

ಪ್ರಳಯವಾಗುವ ಮುನ್ನ…

pralayavaguva munna copy

ಶಸ್ತ್ರ ಚಿಕಿತ್ಸಾ ಕೊಠಡಿ ಎಂಬ ಕೌತುಕ…

Gulf Kannadiga

Gulf Kannadiga

Week : 11

OT1

“ಶರೀರೇ ಜರ್ಜರೀಭೂತೇ ವ್ಯಾಧಿಗ್ರಸ್ತೇ ಕಳೇವರೇ |
ಔಷಧಂ ಜಾಹ್ನವೀತೋಯಂ ವೈದ್ಯೋ ನಾರಾಯಣೋ ಹರಿಃ ||”  

ವಾಹಿನಿಗಳ ಛಾಯಾಗ್ರಾಹಕನಾಗಿ ನನ್ನ ವೃತ್ತಿ ಆರಂಭಿಸಿದ ಮೇಲೆ, ನಾನು ತುಂಬಾ ಪ್ರೀತಿಯಿಂದ ಇಂದಿಗೂ ಹೆಚ್ಚಿನ ಮುತವರ್ಜಿ ವಹಿಸಿ ಛಾಯಾಗ್ರಾಹಣ ಮಾಡುವ ವಿಭಾಗವೆಂದರೆಂದರೆ ವೈದ್ಯಕೀಯ ಛಾಯಾಗ್ರಹಣ. ಅದರಲ್ಲೂ ಮುಖ್ಯವಾಗಿ ಶಸ್ತ್ರ ಚಿಕಿತ್ಸೆಗಳು.

ದೇವರ ಕೃಪೆಯಿಂದ ಇಂದಿನವರೆಗೂ ನಾನು ತಲೆಯಿಂದ ಪಾದದವರೆಗೂ ಹಲವಾರು ಶಸ್ತ್ರ ಚಿಕಿತ್ಸೆಗಳನ್ನು, ಜಿಗಣೆ ಚಿಕಿತ್ಸೆ, ಕೇರಳದ ಕಾಯ ಕಲ್ಪ,  ಪ್ರಕೃತಿ ಚಿಕಿತ್ಸೆಯ ಎಲ್ಲಾ ಹಂತಗಳು (ಎನಿಮಾ ಒಂದನ್ನು ಹೊರತುಪಡಿಸಿ! ಹಹ್ಹಹ್ಹಾ…) ಮುಂತಾದ ಹಲವು ವೈದ್ಯ ಪದ್ಧತಿಗಳನ್ನು ಛಾಯಾಗ್ರಹಣ ಮಾಡಿದ್ದೇನೆ.

ಅದರಲ್ಲೂ ನನಗೆ ಶಸ್ತ್ರ ಚಿಕಿತ್ಸೆಯ ಛಾಯಾಗ್ರಹಣವೆಂದರೆ ಅತ್ಯಂತ ಮೆಚ್ಚಿನ ಜವಾಬ್ದಾರಿ. ಶಸ್ತ್ರ ಚಿಕಿತ್ಸಾ ಕೊಠಡಿ ಪ್ರವೇಶಿಸುವ ಮುನ್ನ ನನ್ನ ಎಲ್ಲ ಬಟ್ಟೆಗಳನ್ನು ಬಿಚ್ಚಿಟ್ಟು ಆಸ್ಪತ್ರೆಯ ಉಡುಗೆ ಧರಿಸಿ ಕೊಠಡಿ ಹೊಕ್ಕೆನೆಂದರೆ, ನನಗೆ ಜೀವ ಉಳಿಸುವ ಆ ವೈದ್ಯ ಲೋಕದ ವಿಸ್ಮಯಗಳು ತೆರೆದುಕೊಳ್ಳುತ್ತಾ ಹೋಗುತ್ತದೆ.

ಹಿಡಿ ಗಾತ್ರದ ಮೂತ್ರ ಪಿಂಡಗಳು ಕೈ ಕೊಟ್ಟಾಗ, ರೋಗಿಯ ಮೂತ್ರವನ್ನು ಶುದ್ಧೀಕರಿಸುವ ಆ ಬೃಹತ್ ಯಂತ್ರ.

ಹೃದಯದ ಶಸ್ತ್ರ ಚಿಕಿತ್ಸೆಗಳ ಸಮಯದಲ್ಲಿ ಬಳಸುವ ದೊಡ್ಡ ಗಾತ್ರದ ರಕ್ತ ಸಂಚಾಲನಾ ಯಂತ್ರ.  

ಮೂಳೆ ತಜ್ಞರು ಶಸ್ತ್ರ ಚಿಕಿತ್ಸೆಗಾಗಿ ಬಳಸುವ ಕತ್ತರಿಸುವ, ನೆಟ್ ಬೋಲ್ಟ್, ಸರಳು, ಕೃತಕ ಮಂಡಿ, ಮುಂತಾದ ಮರಗೆಲಸದಂತಹ ಸರಂಜಾಮುಗಳು.

ಅಲ್ಲೇಲ್ಲೋ ದೂರದ ದೇಶದಲ್ಲಿ ಕುಳಿತ ತಜ್ಞ ವೈದ್ಯ ಇಲ್ಲಿನ ರೋಗಿಗೆ ಯಂತ್ರ ಮಾನವ ಕೈಗಳ ಮೂಲಕ ಅಥವಾ ಸೂಚನೆಗಳನ್ನು ಕೊಡುವ ಮೂಲಕ ನಡೆಸುವ ಶಸ್ತ್ರ ಚಿಕಿತ್ಸೆ ಹೀಗೆ ಹತ್ತು ಹಲವು ಅಚ್ಚರಿಗಳು ತೆರೆದುಕೊಳ್ಳುವ ಪ್ರಪಂಚವದು.

ಇವೆಲ್ಲ ನೋಡಿದಾಗಲೆಲ್ಲ ಭಗವಂತ ಸೃಷ್ಟಿಯ ಕೌತುಕತೆ ಅಚ್ಚರಿ ತರಿಸುತ್ತದೆ. (ನಾಸ್ತಿಕ ಮಿತ್ರರಿಗಾಗಿ ಹೇಳುವುದಾದರೆ ಜೀವ ವಿಜ್ಞಾನದ ವಿಕಸನದ ಅದ್ಭುತ).

ನನಗೆ ಒದಗಿ ಬಂದ ಸದವಕಾಶಗಳಲ್ಲಿ ನನಗೆ ನೆನಪಿನಲ್ಲಿ ಉಳಿದ ಶಸ್ತ್ರ ಚಿಕಿತ್ಸೆ ಎಂದರೆ, ಆಂಧ್ರದ ಗಡಿ ಭಾಗದ ಜಲ್ಲೀ ಕ್ರಷರ್ ಕಾರ್ಮಿಕನೊಬ್ಬ ಅಚಾನಕ್ಕಾಗಿ ಅಪಘಾತಕ್ಕೆ ಒಳಗಾದ. ಆತನ ಒಂದು ಕೈಯು ಮೊಳ ಕೈ ಮೇಲ್ಭಾಗದವರೆಗೂ ಕತ್ತರಿಸಿ ಹೋಗಿತ್ತು. ಪ್ರಥಮ ಚಿಕಿತ್ಸೆಯ ನಂತರ ಆತನನ್ನು ಮತ್ತು ಆತನ ಕತ್ತರಿಸಿದ ಕೈಯನ್ನು ರಾಜಧಾನಿಯ ಆಸ್ಪತ್ರೆಗೆ ತಂದರು. ಅಪರೂಪದ ಶಸ್ತ್ರ ಚಿಕಿತ್ಸೆಯಾದ್ದರಿಂದ ಪರಿಚಿತ ವೈದ್ಯರು ನನ್ನನ್ನೂ ಕರೆಸಿಕೊಂಡಿದ್ದರು. ಇಡೀ ಎಂಟು ಗಂಟೆಗಳ ಪರಿಶ್ರಮದಿಂದ ರೋಗಿಗೆ ಕೈ ಮತ್ತೆ ಜೋಡಿಸಲಾಯಿತು.

ಇನ್ನೊಂದು ಪ್ರಕರಣದಲ್ಲಿ ೫ ತಿಂಗಳ ಮಗುವೊಂದು ಹುಟ್ಟಿನಲ್ಲೇ ಅದರ ಎರಡೂ ಕಣ್ಣು ರೆಪ್ಪೆಗಳ ಚರ್ಮ ಒಂದಕ್ಕೊಂದು ಬೆಸೆದು ಬಿಟ್ಟಿತ್ತು. ಕಣ್ಣು ತೆರೆಯಲೇ ಆಗುತ್ತಿರಲಿಲ್ಲ. ಅತ್ಯಂತ ನಾಜೂಕಿನ ಶಸ್ತ್ರ ಚಿಕಿತ್ಸೆಯಿಂದ ಎರಡೂ ರೆಪ್ಪೆಗಳನ್ನು ಬಿಡಿಸಿ ಮಗುವಿಗೆ ಕಣ್ಣು ಕಾಣಲು ಅವಕಾಶ ಮಾಡಿಕೊಡ ಬೇಕಾಯಿತು. ಆ ಮಗುವು ಈಗ ಯಾವುದೋ ಶಾಲೆಯ ಯಾವ ಪಠ್ಯ ಪುಸ್ತಕವನ್ನೋ ಶ್ರದ್ಧೆಯಿಂದ ಓದುತ್ತಿರಬಹುದು. ಪ್ರತಿ ನೋಟದಲ್ಲೂ ಆಕೆ ಬದುಕಿನ ಪೂರ ಅಂದು ಗಂಟೆಗಟ್ಟಲೆ ಸೂಕ್ಷ್ಮವಾಗಿ ಶಸ್ತ್ರ ಚಿಕಿತ್ಸೆ ಮಾಡಿದ ವೈದ್ಯರ ತಂಡವನ್ನು ನೆನೆಯುತ್ತಿರಬಹುದು.

ನಾನೇ ಗಮನಿಸುತ್ತಾ ಬಂದಂತೆ, ಶಸ್ತ್ರ ಚಿಕಿತ್ಸಾ ವಿಧಾನಗಳು, ಬಳಸುವ ಪರಿಕರಗಳು, ಶಸ್ತ್ರ ಚಿಕಿತ್ಸೆಗಾಗಿ ತೆಗೆದುಕೊಳ್ಳುವ ಸಮಯ ಮತ್ತು ರೋಗಿಯು ಚೇತರಿಸಿಕೊಳ್ಳಲು ತೆಗೆದುಕೊಳ್ಳುವ ಸಮಯದಲ್ಲೂ ಕ್ರಾಂತಿಕಾರಕ ಸುಧಾರಣೆಗಳಾಗಿವೆ. ಅಂತರ್ಜಾಲದ ಮೂಲಕ, ಪುಟ್ಟ ಯಂತ್ರ ಮಾನವ ಕೈಗಳ ಮೂಲಕ, ತೆರೆದ ಶಸ್ತ್ರ ಚಿಕಿತ್ಸೆಯನ್ನು ತಪ್ಪಿಸುವ ಲ್ಯಾಪ್ರೋಸ್ಕೋಪಿ ಎಂಬ ವೈದ್ಯಕೀಯ ವರದಾನದ ಮೂಲಕ ದಿನೇ ದಿನೇ ಶಸ್ತ್ರ ಚಿಕಿತ್ಸೆ ಪರಿಣಾಮಕಾರಿ ಆಗುತ್ತಿದೆ.

ಒಮ್ಮೆ ಹೀಗೆ ಬದಲೀ ಮೂತ್ರ ಪಿಂಡದ ಮರು ಜೋಡಣೆ ಶಸ್ತ್ರ ಚಿಕಿತ್ಸೆಗಾಗಿ ನಾನೂ ಮತ್ತು ನನ್ನ ಸಹಾಯಕ ಆಸ್ಪತ್ರೆಗೆ ಹೋಗಿದ್ದೆವು. ಇದು ನಡೆದದ್ದು ಸುಮಾರು ಹತ್ತು ವರ್ಷಗಳ ಹಿಂದಿನ ಮಾತು. ಆಗ ಕ್ಯಾಮರಾ ಬೇರೆ ಯಮ ಗಾತ್ರದ್ದು ಮತ್ತು ಅದಕ್ಕೆ ವಿದ್ಯುತ್ ಕೊಡುವ ಬ್ಯಾಟರಿಯೇ ಬೇರೆ ಇರುತಿತ್ತು. ನಾವಿಬ್ಬರೂ ಆಸ್ಪತ್ರೆಯ ಉಡುಪು ಬದಲಿಸಿಕೊಂಡು ಶಸ್ತ್ರ ಚಿಕಿತ್ಸೆ ಕೊಠಡಿ ಪ್ರವೇಶಿಸಿದೆವು. ನಾನು ಕ್ಯಾಮರಾ ಹೆಗಲಿಗೆ ಏರಿಸಿದ್ದರೆ, ನನ್ನ ಪಕ್ಕದಲ್ಲಿ ತೂಕದ ಬ್ಯಾಟರಿ ಪೆಟ್ಟಿಗೆ ನೇತು ಹಾಕಿಕೊಂಡು ನನ್ನ ಸಹಾಯಕ. ಮಂಚದ ಮೇಲೆ ರೋಗಿಯನ್ನು ಮಲಗಿಸಿ ಮೊದಲೇ ಗುರುತಿಸಿದ್ದ ಚುಕ್ಕೆಗಳ ಅನ್ವಯ ವೈದ್ಯರು ಮೂತ್ರ ಪಿಂಡದ ಸ್ಯಾಂಪಲ್ ಸಂಗ್ರಹಿಸಲು ದಬ್ಬಳದಂತಹ ಉದ್ದದ ಸೂಜಿಯನ್ನು ದೇಹದೊಳಗೆ ತೂರಿಸಿದರು. ನಾನು ಯಾವ ಹಂತವೂ ತಪ್ಪಿಹೋಗದಂತೆ ಚಿತ್ರೀಕರಿಸುತ್ತಲೇ ಇದ್ದೆ. ಯಾಕೋ ನನ್ನ ಕ್ಯಾಮರಾವು ಜಗ್ಗಿದಂತಾಯ್ತು. ಸಹಾಯಕನಿಗೆ ಹುಷಾರಪ್ಪ ಎಂದು ಹೇಳಲು ಅವನ ಕಡೆ ತಿರುಗಿದೆ. ಆಸಾಮಿ ನಾಪತ್ತೇ! ಅರೆ ಎಲ್ಲಿ ಹೋದ ಎಂದು ನೋಡಿದರೆ ರಕ್ತ, ಶಸ್ತ್ರ ಚಿಕಿತ್ಸೆ ಕೊಠಡಿಯ ವಾತಾವರಣ, ಅದರ ವಾಸನೆಗಳು ಮತ್ತು ಸೂಜಿ ಚುಚ್ಚಿದ್ದನ್ನು ನೋಡಿದ ಆ ಹುಡುಗು ಮೂರ್ಚೆ ಹೋಗಿದ್ದ!

ಅಂತಹ ಜೀವನ್ಮರಣದ ಪ್ರಶ್ನೆ ಇರುವ ಗಳಿಗೆಯಲ್ಲೂ ನಾನು ನೆನಸಿಕೊಂಡು ನಗುವ ಹಾಸ್ಯದ ಸಂಗತಿ ಎಂದರೆ, ಯಾರೋ ರಾಜಕಾರಣಿಗೆ ಚಿಕ್ಕದೇನೋ ಶಸ್ತ್ರ ಚಿಕಿತ್ಸೆ ಇದ್ದಾಗ ವೈದ್ಯರು ಸ್ಥಳೀಯ ಅರವಳಿಕೆ ಕೊಡಲು ಮುಂದಾದರು. ಇದನ್ನು ತಿಳಿದುಕೊಂಡ ಆತ ವೈದ್ಯರಿಗೆ ಇಂಪೋರ್ಟೆಡ್ ಆರವಳಿಕೆ ಮದ್ದೇಕೊಡಿ ಎಂದು ದುಂಬಾಲು ಬಿದ್ದನಂತೆ.

ತುಂಬಾ ಪರಿಚಿತ ಪರಿಚಿತ ವೈದ್ಯರೊಬ್ಬರು ನನಗೇ ಆಪರೇಷನ್ ಟೇಬಲ್ಲಿನಲ್ಲೂ ರೀ ಟೇಕ್ ಕೇಳಬೇಡಪ್ಪ ಎಂದು ಹಾಸ್ಯ ಮಾಡುತ್ತಿದ್ದರು!

ಇತ್ತೀಚೆಗಂತೂ ವೈದ್ಯಕೀಯ, ಆಸ್ಪತ್ರೆ ಮತ್ತು ಔಷಧಿ ದುಬಾರಿಯಾಗುತ್ತ, ಮಧ್ಯಮ ಹಾಗೂ ಬಡ ರೋಗಿಗಳ ಪಾಲಿಗೆ ಗಗನ ಕುಸುಮವಾಗುತ್ತಿದೆ. ಈ ನಡುವೆಯೂ ದಾನಿಗಳು ಮುಂದೆ ಬಂದು ವೆಚ್ಚವನ್ನು ಭರಸುತ್ತಿದ್ದಾರೆ. ಸರ್ಕಾರೀ ಪ್ರಾಥಮಿಕ ಚಿಕಿತ್ಸಾ ಕೇಂದ್ರಗಳು ಮತ್ತು ದೊಡ್ಡ ಆಸ್ಪತ್ರೆಗಳು ತಕ್ಕ ಮಟ್ಟಿಗೆ ಒಳ್ಳೆಯ ಕೆಲಸವನ್ನೇ ಮಾಡುತ್ತಿವೆ. ಅಂತೆಯೇ ನೌಕರರಿಗೆ ಲಭ್ಯವಿರುವ ಇ.ಎಸ್.ಐ ಮತ್ತು ಶ್ರೀಸಾಮಾನ್ಯರಿಗೂ ಒದಗುವ ವೈದ್ಯಕೀಯ ವಿಮಾ ಯೋಜನೆಗಳು ಸಹ.

ಇಂದು ಹಲವು ಪ್ರತಿಷ್ಠಿತ ಆಸ್ಪತ್ರೆಗಳು ದಾನಿಗಳ ಪಟ್ಟಿ ಮಾಡಿಟ್ಟು, ಬಡ ರೋಗಿಗಳ ಶಸ್ತ್ರ ಚಿಕಿತ್ಸೆಯನ್ನು ಉಚಿತವಾಗಿ ನೆರೆವೇರಿಸುತ್ತಿದ್ದಾರೆ.

ಮುಖ್ಯವಾಗಿ ಸರ್ಕಾರಗಳು ಮುತವರ್ಜಿ ವಹಿಸಿ, ವೈದ್ಯ ಶಾಸ್ತ್ರದ ಬಗೆಗೆ ಹೆಚ್ಚಿನ ಸಂಶೋಧನೆಗಳನ್ನು ಪ್ರೇರೇಪಿಸಬೇಕಿದೆ. ಮನುಜ ಮತ್ತು ಪಶುಗಳ ಅರೋಗ್ಯದ ದೃಷ್ಟಿಯಿಂದ ವಾರ್ಷಿಕ ಅಯವ್ಯಯದಲ್ಲೂ ಸಂಶೋಧನೆಗಳಿಗೆ ದೊಡ್ಡ ಪಾಲನ್ನು ಎತ್ತಿಡಬೇಕಿದೆ. ಸುಲಭ ಮತ್ತು ಮಿತವ್ಯಯಕಾರಿ ಚಿಕಿತ್ಸಾ ಪದ್ಧತಿಗಳು ಮುಂದಿನ ದಿನಗಳಲ್ಲಿ ನಗರಗಳಲ್ಲಿ ಮಾತ್ರವೇ ಅಲ್ಲದೇ ಗ್ರಾಮೀಣ ಪ್ರದೇಶಗಳಲ್ಲೂ ಗುಡ್ಡಗಾಡುಗಳಲ್ಲೂ ಬರಲೆಂದು ಆಶಿಸುತ್ತೇನೆ.

ಅಂತೆಯೇ ಇಲ್ಲಿಯವರೆಗೂ ನಾನು ಚಿತ್ರೀಕರಣ ಮಾಡದ ಎಲ್ಲ ಶಸ್ತ್ರ ಚಿಕಿತ್ಸೆಗಳ ಮತ್ತು ವೈದ್ಯಕೀಯ ಪದ್ಧತಿಗಳ ಛಾಯಾಗ್ರಹಣ ಮಾಡುವ ಅವಕಾಶವೂ ನನಗೆ ದೊರೆಯಲಿ.

ನಮ್ಮ ಬದುಕಿನ ಅವಭಾಜ್ಯ ಅಂಗವಾಗಿ ನಮ್ಮ ಸ್ವಾಸ್ಥ್ಯವನ್ನು ಸದಾ ಕಾಪಾಡುವ ಎಲ್ಲ ವೈದ್ಯರಿಗೆ ನಾನು ಈ ಮೂಲಕ ನಮಿಸುತ್ತೇನೆ.

OT2

Gulf Kannadiga

ಗಲ್ಫ ಕನ್ನಡಿಗ ಈ ಪತ್ರಿಕೆಯಲ್ಲಿ ಪ್ರಕಟಿತ.
14.12.2012

http://gulfkannadiga.com/news/culture/26881.html

(ಚಿತ್ರ ಕೃಪೆ : ಅಂತರ್ಜಾಲ)

ಕಿತ್ತಾಗಲೂ ಗೊತ್ತಿಲ್ಲ…

flowers

ಕ್ರಿಷ್ ಜೋಶಿಯವರ In Illusion…..

“ಪರಸ್ಪರ” 

ನನ್ನ ಓರಿಗೆಯ ಬರಹಗಾರರನ್ನು ಪರಿಚಯಿಸುವ ನನ್ನ ಪುಟ್ಟ ಯತ್ನ.

Joshi

In Illusion …..
How long do we live. . . .
. . . . . In illusion?

Of course, life itself is an illusion
is the ultimate philosophy

But death is beyond. . . .
Coz it’s real
let’s be ready to face it

Let’s be ready to take the death of loved ones
let’s be ready to face the death
let’s be ready

Let’s learn to live to the fullest
when we are, we are.
When we aren’t, we aren’t.

When death arrives,
let us welcome it. . .
. . . Without any fear

Let’s die contented.

– Krish Joshi

ಭ್ರಮಾದೀನ…

ಭ್ರಮೆಯಲೆಮ್ಮ ಬದುಕೆ…
…ಎನಿತು ದಿನ ಹೀಗೆ?

ಜೀವನವದು ನಿಜ ಭ್ರಮೆಯೇ
ಅದಕಿಂತ ತತ್ವಪದವಿಲ್ಲ

ಅದರದು ಸಾವೇ ಎಲ್ಲೆಯು…
ಅದುವೇ ಸಾಕ್ಷಾತ್ಕಾರ
ಸಿದ್ಧಗೊಳ್ಳುವ ಸಾವಿಗೆ

ನಲ್ಮೆ ಜೀವಗಳ ಮರಣಕು ಸಿದ್ಧ
ನಮ್ಮ ಸಾವಿಗು ಸಿದ್ಧವೇ
ಎದೆಗಟ್ಟಿ ಮಾಡಿಯೇ …

ಸವಿಯಬೇಕು ತುಂಬು ಜೀವನ
ಹೇಗಿರುವೆವೋ ಅಂತೆಯೇ
ಕಳೆದೆದ್ದು ಕಂತೆಯೇ

ಜವರಾಯ ಬಂದಾಗ
ನಕ್ಕು ಬರಮಾಡಿ
ಭಯವಿರದೆ ದಾಟಿಕೊಂಡು

ಸಂತೃಪ್ತ ಅಂತ್ಯ ಕಾಣೋಣ 

joshi

Krish Joshi

Writer and Filmmaker.
He is a Writer and Director. Has worked in the Advertising Industry for almost 15 years in different capacities such as Copywriter, Creative Director, Brand Consultant, Content Provider and Ad Filmmaker.

 He has been directing Documentary Films and have directed one much acclaimed Movie
“GANDHI SMILES”. 
The movie was awarded as the “BEST FILM” in the recently held
BANGALORE INTERNATIONAL FILM FESTIVAL.
Kindly visit his blog:

https://joshkrish2oo1.blogspot.com

ದೊಂಬರಾಟ…

palavalli ankana

Gulf Kannadiga

  Week : 10  

Dombarata copy

ಈ ತುದಿಗಿದೆ ಜನನ
ಆ ತುದಿಗಿದೆ ಮರಣ
ನಡುವೆ ಹಗ್ಗದ ಮೇಲೆ
ತೊಯ್ದಾಡುತಿದೆ ಜೀವ,
ಯಾರದೋ ತಿಕ್ಕಲಿಗಿಲ್ಲಿ
ಬದುಕು ದೊಂಬರಾಟ!

ಒಂಟಿ ಕಾಲಿನ ಮೇಲೋ
ಎರಡೂ ಬಳಸಬಹುದೋ
ನಿಲುವೂ ನಮದಲ್ಲದ ತಾಣ,
ಕ್ಷಣ ಕ್ಷಣಕು ತೊಯ್ದಾಟ
ಯಾರದೆಲ್ಲ ಗಾಳಿ ತಳ್ಳಾಟ
ನೆಟ್ಟಗಿದ್ದೀತೆಲ್ಲಿ ತೋಲನ?

ಅಗೋಚರ ಬಲೆ ಇದೆಯೋ
ಏನು ಕಾದಿದೆಯೋ ಬುಡಕೆ
ಬೀಳು ಭಯವೇ ನಿರಂತರ,
ತ್ರಿಕಾಲ ಜ್ಞಾನ ಸಂಪತ್ತೆಲ್ಲ
ಗಿಲೀಟು ನಗೆಯಲಿ ಪೂಸಿ
ಕಕ್ಕುತಿರಬೇಕು ಪೋಸನೂ

ಗೋಚರದ ಮಸುಕು ಹಾದಿ
ಎಡರು ತೊಡರಿನ ಹೆಜ್ಜೆ
ಊಹೆ ನಿಲುಕದ ಗ್ರಹಚಾರ,
ಉಟ್ಟುಡುಗೆಯೇ ಭಾರ
ಜಾರುತದೆ ನಾಚಿಕೆ ಬಿಲ್ಲೆ
ಸ್ವ ಕೆರೆತಕಿಲ್ಲ ಪುರುಸೊತ್ತು

ಪಲ್ಟಿ ಬಿದ್ದೆದ್ದು ಸಾವರಿಸಿ
ಮತ್ತೆದ್ದರೂ ಕಡೆಗಣಿಸಿ
ಅವನ ಪಾಡಿಗವನ ಆಟ,
ಪ್ರಾಯೋಜಕರ ಪಾಲಿಗೆ
ಹತ್ತರಲ್ಲೊಂದು ಹುಟ್ಟಿದು
ಅಪ್ರಯೋಜಕ ದುಡಿಮೆ

ಜೀವ ಇರು ಹೊತ್ತೂ ಅವಗೆ
ಡೊಳ್ಳು ಬಡಿವ ಉಮೇದಿ
ಎಲ್ಲಿಹನೋ ತಾನು ತಳವೂರಿ?
ನಡಿಗೆ ನಮ್ಮದೇ ಕರ್ಮ
ಚಪ್ಪಾಳೆಯೋ ಕಲ್ಲೇಟೋ
ಪಾಪ ಪುಣ್ಯದ ಕೋಲನೇ ನಂಬಿ!

ಗಲ್ಫ ಕನ್ನಡಿಗ ಈ ಪತ್ರಿಕೆಯಲ್ಲಿ ಪ್ರಕಟಿತ.
07.12.2012

http://gulfkannadiga.com/news/culture/24864.html 
ದಿನಕರ ಮೋಗೇರ ಕ್ಲಿಕ್ಕಿಸಿದ ಕ್ಯಾಮರಾ ಕಣ್ಣಿಗೆ 
ಪಲವಳ್ಳಿ ಬರೆದ “ದೊಂಬರಾಟದ ಕವಿತೆ!

ಕವಿತೆ ಎಂದರೆ ಗೆಳೆಯ!

Week : 9

 

 

 

ಕವಿತೆ ಎಂದರೆ ಗೆಳೆಯ
ಅದು ಉದಯ ರವಿ ಚುಂಬನಕೆ
ಫಳಫಳಿಸೋ ಇಬ್ಬನಿಯ ಬಿಂದು
ಎದೆಗೆ ನಸು ಕಂಪನವೀಯೋ
ನಲ್ಲೆ ಇರುವನು ಘೋಷಿಸುವ
ದುಂಡು ಮಲ್ಲಿಗೆಯ ಕಂಪು…

ಅದು,
ಹೂವು ತಾಕಿದ ಮೇಲೂ
ಹೊತ್ತು ಕಳೆದರೂ ಉಳಿವ ಪರಾಗ ರೇಣು,
ಎಳವೆಯಲಿ ಎಂದೋ ಕಟ್ಟಿಟ್ಟು
ಮರೆತರೀಗೂ ಗಾಳಿಗೆ ತೂಗೋ ಹಗ್ಗದುಯ್ಯಾಲೆ,
ಸತ್ತ ಪಿನಾಕಿನಿಯೊಡಲ
ಬಗೆದಾಗಲೊಮ್ಮೆ ಪುಟಿವ ಊಟೆ,
ಕರೆವೋಲೆ ಸಂದಂತೆ
ಸಪ್ತ ಸಾಗರ ದಾಟೋ ಪುಟ್ಟ ಹಕ್ಕಿ,
ಹಾಲುಗೆನ್ನೆಯ ಮಗುವು
ಯಾವ ಕನಸಿಗೋ ತೊಟ್ಟಿಲಲಿ ನಗುವ ನಗು,
ಯಾರ ಹಂಗಿಗೂ ಸಿಗದ
ನೀಲಾಗಾಸದ ತುಂಬೆಲ್ಲ ಮೋಡಗಳ ಚಿತ್ತಾರ…

ಅದು,
ಬರಿದೇ ಸಾಲುಗಾಚೆ, ಹೊಳೆವ
ಅಕ್ಕರದ ಅಚ್ಚರಿಯ ಮಾಯಾ ಹಾದಿ
ತನ್ನರಿವಿನೆತ್ತರಕೂ ಜ್ವಲಿಪ ದಾರಿ ದೀಪ…

ಕವಿತೆ ಎಂದರೆ ಗೆಳೆಯ!
ನನ್ನ ಕಲ್ಪನೆಗಳೇ ಹಾಗೆ,
ದ್ವೀಪದಿಂದೆತ್ತಿ ದಡ ಸೇರಿಸುವ
ನೆನೆದಾಗ ಬರುವ ಆಪ್ತ ಮಿತ್ರ…

ಗಲ್ಫ ಕನ್ನಡಿಗ ಈ ಪತ್ರಿಕೆಯಲ್ಲಿ ಪ್ರಕಟಿತ.

30.11.2012

http://gulfkannadiga.com/news/culture/22150.html

ತ್ಯಾಜ್ಯ ವ್ಯಾಜ್ಯ…

 

ನೆಲದಾಳ ಬಿಲ ಬಗೆದು
ನನ್ನತನ ಹೊತ್ತೊಯ್ದನವ
ಯಾರೋ ಪರಕೀಯ!
ಸದ್ದಿರದೆ ಬಿಕ್ಕಳಿಸಿದೆ,
ಅವನು ಹೊರಗಿನವ
ತಿಳಿದಾನೆಲ್ಲಿ ನನ್ನ ನೋವ?

ಇವರು ನಮ್ಮವರೇ
ನೆರೆ ಊರಿನವರು
ತಿಪ್ಪೆಯಾದೆನೇ ನಿಮಗೆ?
ಇವರು ಬೇರೆಯವರಲ್ಲ
ಅವರ ನುಡಿ ಅರ್ಧ ನೀವೇ
ಮರೆತರೇ ಹೇಗೆ?

ಈಗ ನನ್ನೆದೆ ತಿತ್ತಿಗಳು
ಖಾಲೀ ಸುರಂಗಗಳು
ತುಂಬಿಕೊಂಡಿದೆ ನೀರು
ಉಸಿರು ಕಟ್ಟುವ ಗಾಳಿ
ಮೇಲೆ ಸೈನೈಡು ಬೆಟ್ಟ

ಬಗೆದರೆ ಮಿಂಚು ಹಳದಿ
ಆಳಕಿಳಿದರೆ ಅದಿರು
ನಂಬಿದ ಮಂದಿ ಹೊಟ್ಟೆ
ತುಂಬಬಹುದಿತ್ತು ಇನ್ನೂ,
ಮತದಾನ ದೂರವಿದೆ
ಗೆದ್ದವನಿಗೆ ಭರ್ತಿ ನಿದ್ರೆ

ಬಿಟ್ಟಿ ಇಂಧನ ಮೂಲ
ಸೂರ್ಯನೇ ಇರುವಾಗ
ಕೌಪೀನ ಅಣು ಸ್ಥಾವರ!
ಗಾಳಿ ಯಂತ್ರವೂ ಹಳ್ಳಿ ಬೆಳಕು
ಹಸಿ ಕಸವೂ ಲಕುಮೀ

ಹಿಡಿ ಧಾತು ಗುದ್ದಿಸಲು
ಗುಡ್ಡ ಪುಡಿ ಮಾಡಿದರು
ಉಳಿವುದದೇ ಮರಳು ತ್ಯಾಜ್ಯ
ಘನ ಘೋರ ಖಾಯಿಲೆ
ತಲಮಾರು ಹೊರಬೇಕು

ಸ್ಥಾವರವು ನೆರೆ ನಾಡಲಿ
ಮಲ ಗುಂಡಿ ಇಲ್ಲಿ ಬೇಕೆ?
ಹುಗಿದ ಕಸವದು ಕೇಳಿ
ಜೀವಂತ ಬಾಂಬದು ಅಯ್ಯೋ
ಗೋಡೆ ತಡೆದೀತೆ ಸೋರಿಕೆ

ಮುಂದೆ ಹುಟ್ಟುಗಳೆಲ್ಲ
ಅಂಗವಿಕಲರೇ ನಿಮಗೆ
ಇಂಗಿದ ಕಣ್ಣಲಿ ನೀರು,
ಕೂಡಿ ಅಟ್ಟಿ ಒಮ್ಮೆಲೆ
ದನಿ ಎತ್ತಿ ಅಬ್ಬರಿಸಿ
ಮಲವಿಲ್ಲಿ ತರಬೇಡಿ!

3K – ಸಂಭ್ರಮದ ಸಲುವಾಗಿ3k ಆಚರಿಸಲ್ಪಟ್ಟ ನವೆಂಬರ್ ತಿಂಗಳಿನ ಅತ್ಯುತ್ತಮ ಕವನಗಳ ಸ್ಪರ್ದೆಯಲ್ಲಿ ನನ್ನ ಕವನ ಪ್ರಶಸ್ತಿಗೆ ಆಯ್ಕೆಯಾಗಿದೆ.

ನನ್ನ ಮೆಚ್ಚಿನ ಕವಿ ಗೆಳೆಯ ಪುಷ್ಪರಾಜ್ ಚೌಟ ರವರ “ಗಾಂಧಿ ನಗುತ್ತಿದ್ದಾನೆ ನೋಟಿಗಂಟಿ!” ಕವನದ ಜೊತೆ ಹಂಚಿಕೊಂಡದ್ದು ಇನ್ನಷ್ಟು ತೃಪ್ತಿ ತಂದಿದೆ.

ನದಿಯ ಸ್ವ’ಗತ’

  Week : 8

ಬೀಸಿದ ಬಲೆಗಳಿಗೆಲ್ಲ ಇಲ್ಲವೆನ್ನಲಿಲ್ಲ
ರಾಶಿಯಲಿ ಮತ್ಸ್ಯಜಾಲ
ಅಣೆಕಟ್ಟು ಎಬ್ಬಿಸಿ ತೂಬರೆತೆರೆದರೆ
ನಾಡೆಲ್ಲ ನಾಲಾಜಾಲ

ತೊರೆ, ಝರಿ, ಉಪನದಿ ಹೊಳೆಗೂ
ಸಂಗಮ ಯೋಗ
ಮಲೆ ಹಾಯ್ದು ಹಾರಿ ಜಿಗಿದರೆ
ವಿಹಂಗಮ ಜೋಗ

ನೀವು ಸಾಗರಗಳೂ ಕನಿಕರಿಸಬೇಕು
ನದಿ ಪ್ರೀತಿ ನಿಮ್ಮ ತಾಕಬೇಕು
ನಿಮ್ಮದೇ ನೀರು ಬಿಸಿಲಿಗಾವಿಯಾಗಿ
ಮಳೆಗೆರೆದರೆ ಪಾತ್ರಕ್ಕೆ ನೀರು

ಅರ್ಕಾವತಿ, ವೃಷಭಾವತಿ, ಪಿನಾಕಿನಿ
ಯಾರ ತಪ್ಪಿಗೆ ಇಂಥ ತಲೆದಂಡ?
ಬತ್ತಿದ ಗಂಗೆಯ ಒಡಲ ಮರಳ
ಬಗೆದಿರಿ ಇಂಗಲಾರದಿನ್ನು ನೀರು

ಮಳೆಗಾಲ ನೆರೆ ಬಿರಿದು
ಬೇಸಿಗೆಗೆ ತೊರೆ ಹರಿದು
ಜೀವ ಜಾಲಕೆ ಉಣಿಸಿ ಉಸಿರು
ಕಡೆಗೆ ಸಾಗರದಲೇ ಐಕ್ಯ…

ಗಲ್ಫ ಕನ್ನಡಿಗ ಈ ಪತ್ರಿಕೆಯಲ್ಲಿ ಪ್ರಕಟಿತ.
23.11.2012
http://gulfkannadiga.com/news/culture/19894.html

(ಚಿತ್ರ ಕೃಪೆ : ಅಂತರ್ಜಾಲ)

ಗೂಡಿನಿಂದ ಬುರುಜಿಗೆ…

Gulf Kannadiga

   Week : 7

ಮನೆಯಲಿ ಕೋಣೆಗಳಂತೆಯೇ
ಮನದಲಿ ಗೂಡುಗಳಿರಲಿ ನಮ್ಮೊಳು
ಅಂಗಳದೆಲ್ಲ ಗದ್ದಲಗಳ ಮೀರಿಯೇ
ಏಕಾಂತ ದೊರೆಯಲಿ ಅಂತಃಪುರದೊಳು

ನಿನ್ನೆ ಮಡಚಿಯೇ ನಾಳೆ ತೆರೆಯಲಿ
ಇಂದು ಕನಸಿರೆ ಹಿಮಗಿರಿ ಎತ್ತರ
ಸವೆದ ಹೆಜ್ಜೆಗಳೆಲ್ಲ ತೊಡರಲೇ
ಹುಡುಕು ಬದುಕು ಹಾದಿಗೂ ಉತ್ತರ

ತಿರುಗು ತಟ್ಟೆ ಸುಪ್ರಭಾತದ ಕೊರಳಲಿ
ಘಂಟಸಾಲ ಸುಬ್ಬಲಕ್ಷ್ಮಿಯು ಚಿರಂತನ
ಅದರ ಮೇಲೂ ಗಾನ ಅರಳಲಿ
ಹೊಸದು ಬೇಡವೇ ದಿನ ದಿನ?

ಸ್ಮರಣ ಸಂಚಿಕೆ ಗೋಡೆ ಕಟ್ಟಿರೆ
ಗಟ್ಟಿ ಛಾವಣಿ ಹೊದಿಕೆಯು
ಆಳ ಪಾಯದ ಗ್ರಂಥ ಸ್ಮೃತಿ ಇರೆ
ನವ್ಯ ಕಾವ್ಯಕೂ ಗಿರಿಮೆಯು

ಕಲಿಕೆ ನಿಲ್ಲದು, ಬಳಪ ಮುರಿದರೂ
ಹಲಗೆ ತುಂಬಿರಿ ದುಂಡು ಅಕ್ಕರ
ಏಕತಾನದ ತಿರುಗು ಪರಧಿಗು
ಆಚೆ ಕಾದಿದೆ ನೂರು ಹೊಸ ತರ

ತುಡಿತವಿದ್ದರೆ ದೂರ ತೀರವೇ
ಯೋಜನವದೂ ಇಂಚು ಈಜಿಗೆ
ಗೆಲ್ಲು ಹುರುಪಿರೆ ರಾಜ್ಯ ಕಾದಿದೆ
ಹೊಸ ಪತಾಕೆ ಹಾರಲಿ ಬುರುಜಿಗೆ

ನಾಳೆ ಮಳೆ ಹನಿ ನೆಚ್ಚಿಯೇ
ಇಲ್ಲಿ ಒಳ ಭೂ ಹದವಾಗಲೀ
ಒಂದೇ ಬೀಜವು ಮೊಳೆತರೂ ಅದೇ
ನೆರಳು ನೀಡೋ ಮರವಾಗಲೀ

ಗಲ್ಫ ಕನ್ನಡಿಗ ಈ ಪತ್ರಿಕೆಯಲ್ಲಿ ಪ್ರಕಟಿತ.
16.11.2012
http://gulfkannadiga.com/news/culture/18111.html

ಪೊಳ್ಳು ಪ್ರಭಾವಳಿ…

Gulf Kannadiga

Week : 6

ಇದು ಸುಗ್ಗಿ ಕಾಲ
ಆಗಲಿ ಬಿಡಿ ನಿಮ್ಮದೇ ತಳಿ ಅಭಿವೃದ್ಧಿ…

ಜನ್ಮೇಪಿ ಮಂಗರು ನಾವು,
ಆಳಿಕೊಳ್ಳಿ; ರೂಢಿಯಾಗಿದೆ ನಮಗೆ,
ಬಗ್ಗಿ ನಡೆಯುವುದು, ತಗ್ಗಿ ಮಾತನಾಡುವುದು
ಓಟು ಗುದ್ದೀ ಗುದ್ದೀ ಪೆದ್ದರಾಗುವುದು ಹೀಗೆ,
ಬೆನ್ನು ಖಾಲೀ ಇದೆ ಕೆತ್ತಿಕೊಳ್ಳಿ ಶಿಲಾ ಶಾಸನ
ನಡೆಯಲಿ ಜನಾರ್ದನ ಸೇವೆ…

ತಿಜೋರಿಗಳ ತುಂಬಿರಿ
ಬಂಗಲೆಗಳ ಎಬ್ಬಿಸಿರಿ
ಹೆಸರು ಉಳಿಯಲಿ ಆಚಂದ್ರಾರ್ಕ!

ಪುಟ್ಟ ನಾಗರ ಕಲ್ಲು ನೆಡುವಾಗ
ಫ್ಯಾನಿನ ಮೂರು ಅಲಗುಗಳ ತುಂಬ
ನೀರೇ ತುಂಬದ ತೊಟ್ಟಿಯ ಬದಿಗೆ
ಪಾಯಖಾನೆ ಸಂಡಾಸಿಗೆ
ಮಸಣದ ಕಲ್ಲುಗಳ ಮೇಲೂ
ಮಹಾದಾನಿಗಳು ನಿಮ್ಮದೇ ಹೆಸರು…

ಹಳ್ಳಿ ಶಾಲೆಯ ಗೋಪಿ ಬಣ್ಣದ ಗೋಡೆ
ಸಂತಾನ ನಿಯಂತ್ರಣ ಪಾಠಕ್ಕೆ ತಕ್ಕ ಜಾಗ
ಊರಗಲ ಕೆಂಪು ತ್ರಿಕೋಣ ಬರೆದು ಬಿಡಿ…

ಜಾತ್ರೆ ತಳುಕಿಗೆ ತೂತು ಟಾರ್ಪಾಲಿನ
ಟೂರಿಂಗ್ ಟಾಕೀನಿಂತಹ ಮಂದಿ;
ಹಸಿವಿನಿಂದಲೇ ಸತ್ತ ಮುದುಕಿಯ
ದೊಡ್ಡ ಕಾರ್ಯಕೆ ತಿಂದುಕೊಳ್ಳಲಿ ಊರ ಜನ
ಮುದ್ದೆ ಮಾಂಸದೂಟ!
ಝಗಮಗಿಸೋ ರೇಷಿಮೆ ಪತ್ತಲಕೂ
ಹಿಂದೆ ಅಡಗಿದ್ದೀತು ಅದೇ ರೋಗಿಷ್ಠ ಮೀನಖಂಡ…

ಒಡ್ಡೋಲಗದ ತುಂಬ ಪಾನಮತ್ತ
ಭಟ್ಟಂಗಿಗಳದೇ ಬಹು ಪರಾಕು,
ಗುಧ ಸ್ಫೋಟವೂ ಆಹಾ ದಿವ್ಯ ಪರಿಮಳ!

ಹೊದ್ದದ್ದೇ ಕನಸುಗಳ ಹಚ್ಚಡ
ಗಟ್ಟಿ ನೆಲವೋ, ಹಾಸೆ ಪಲ್ಲಂಗ ಮೆತ್ತೆ
ಮಲಗಿದರಗಳಿಗೆ ಬೆವೆತ ಜೀವ
ಭೋರಿಡುವ ಗೊರಕೆ ಚಂಡ ಮದ್ದಲೆ!
ಮೀಸಲಿಟ್ಟ ಬೆಳಕಿನಾಟಕು ಒಲ್ಲೆ
ಹೊಗೆ ಕವಿದ ಬುಡ್ಡೀ ದೀಪಕೇ ತೃಪ್ತ…

ಬಂಜೆ ಮಣ್ಣೊಳು ಹೊಕ್ಕು ಮುಕ್ಕಿ
ನೆಲ ಫಲವತಾಗಿಸೋ ಎರೆಹುಳು;
ಧಮನಿಯೊಳು ನುಗ್ಗೋ ರುಜಿನಗಳ
ಕಾದು ಹೋರಾಡಿ ಮಡಿವ ಬಿಳಿ ರಕ್ತ ಕಣ,
ಹೀಗೆ ಹೆಸರಿಗಂಬಲಿಸದೇ ದುಡಿವ ಹತ್ತು ಹಲವು
ಶಾಲು ಸಂಭಾವನೆ ಸ್ಮಾರಕ ಒಂದೂ ಒಲ್ಲವು…

ಕಾಡಿಗೂ ಬೇಕಲ್ಲ ಹಬ್ಬಲು ಸಹಸ್ರಮಾನ
ಪೊಳ್ಳು ಪ್ರಭಾವಳಿಗೆಷ್ಟು ಕಾಲ ಮಾನ?

ಗಲ್ಫ ಕನ್ನಡಿಗ ಈ ಪತ್ರಿಕೆಯಲ್ಲಿ ಪ್ರಕಟಿತ.
09.11.2012
http://gulfkannadiga.com/news/culture/16159.html 

ಜೋಡಿ ಗಾನ…

(ಚಿತ್ರ ಕೃಪೆ : ಅಂತರ್ಜಾಲ)

ಸಾಹಿತಿ ಮತ್ತು ಸಹೃದಯತೆ…

Gulf Kannadiga

Week : 5

 

 

 

ಚಿತ್ರ ಕೃಪೆ : ಗಲ್ಫ್ ಕನ್ನಡಿಗ

ಮರಣೋತ್ತರ ಪ್ರಶಸ್ತಿ
ಅಮೃತ ಶಿಲೆ ಗೋರಿ,
ಬದುಕಿದ್ದಾಗ ತುಂಬೀತೆ
ಖಾಲೀ ಹೊಟ್ಟೆ?

ನಮಸ್ಕಾರ, ನಿಮ್ಮೆಲ್ಲರಿಗೂ ಕನ್ನಡ ರಾಜ್ಯೋತ್ಸವದ ಸುಭಾಶಯಗಳು. ಏಕೀಕೃತ ಕರ್ನಾಟಕದಲ್ಲಿ ಈಗ ಸಾಹಿತಿ ಎದುರಿಸುತ್ತಿರುವ ಸಮಸ್ಯೆಗಳ ಕಿರು ಪರಿಚಯ ಈ ಬರಹ.

ಡಾ|| ಕರೀಂ ಖಾನ್

ಇದು ಅತಿಶೋಯುಕ್ತಿ ಅನಿಸಿದರೂ ಸಹ ನಾವು ಭಾರತೀಯರು ಸಾಹಿತ್ಯ ಪೋಷಕರಲ್ಲವೇನೋ ಎನ್ನುವ ಅನುಮಾನ ಕಾಡುತ್ತದೆ. ಹಿಂದೆಲ್ಲ ರಾಜಾಶ್ರಯ ಸಿಕ್ಕ ಕವಿ ಮಹೋದಯರು ನೆಲೆ ಕಂಡುಕೊಂಡರೆ, ಆಗಿನ ಕಾಲದಲ್ಲೂ ಬೆಳಕಿಗೆ ಬಾರದ ಅದೆಷ್ಟೋ ಮೇರು ಸಾಹಿತಿಗಳು ಇದ್ದಲ್ಲೇ ಸೊರಟಿ ಹೋಗಿರಬಹುದು.

ಅಂತೆಯೇ ಇಂದಿನ ಕಾಲಮಾನದಲ್ಲೂ ಬೆರಳೆಣಿಕೆಯಷ್ಟು ಸಾಹಿತಿಗಳು ಪ್ರಕಾಶಮಾನವಾಗಿ ಕಂಡರೂ, ಇತರರ ಬರಹಗಳು ಈಗಲೂ ಅಲಭ್ಯವೇ. ರಾಜಧಾನಿಯಲ್ಲಿ ನೆಲೆಸಿರುವ ಸಾಹಿತಿಗಳು ಹೆಚ್ಚು ಜನಜನಿತವಾದರೆ, ಗ್ರಾಮೀಣ ಸಾಹಿತಿಗಳು ಎಲೆ ಮರೆಯಲ್ಲೇ ಉಳಿದು ಬಿಡುತ್ತಾರೆ.

ಬರೆಯಲು ಆರಂಭಿಸಿರುವ ನನ್ನಂತಹ ಹಲವರಿಗೆ ಬರಹಗಳನ್ನು ಪತ್ರಿಕೆಗಳಿಗೆ ಕಳುಹಿಸಿ, ಅವು ಪ್ರಕಟವಾಗದೆ ನೊಂದುಕೊಳ್ಳುವುದು ಒಂದು ಮಾತಾದರೆ, ಮುಖ್ಯವಾಗಿ ಕಾಡುವುದು ಪ್ರಕಾಶಕರ ಕೊರತೆ.

ಪ್ರಕಾಶಕ ಬಂಧುಗಳು ಹೊಸಬರ ಸಾಹಿತ್ಯವನ್ನೂ ಗಂಭೀರವಾಗಿ ಪರಿಣಮಿಸಿ, ಕಾಳುಗಳನ್ನು ಆಯ್ದು ಜೊಳ್ಳುಗಳನ್ನು ಗಾಳಿಗೆ ತೂರಿ ಪುಸ್ತಕ ರೂಪದಲ್ಲಿ ಪ್ರಕಟಿಸಬೇಕು. ಪ್ರಕಟಿತ ಪುಸ್ತಕಗಳು ಗ್ರಂಥಾಲಯಗಳಲ್ಲೂ ಮತ್ತು ಚಿಕ್ಕ ಊರುಗಳ ಪುಸ್ತಕದ ಅಂಗಡಿಗಳಲ್ಲೂ ಸಿಗುವಂತೆ ನೋಡಿಕೊಳ್ಳಬೇಕು.  
ಈಗಾಗಲೇ ಸರ್ಕಾರ, ವಿಶ್ವವಿದ್ಯಾಲಯಗಳು ಮತ್ತು ಪುಸ್ತಕ ಪ್ರಾಧಿಕಾರ ವರ್ಷಕ್ಕೆ ಇಂತಿಷ್ಟು ಎನ್ನುವಂತೆ ಕನ್ನಡ ಪುಸ್ತಕಗಳನ್ನು ಅಗ್ಗದ ಬೆಲೆಗೆ ಪ್ರಕಟ ಮಾಡುತ್ತಿದೆ. ಹೊಸ ಬರಹಗಾರರಿಗೂ ಇಲ್ಲಿ ಅವಕಾಶವಿದ್ದರೆ ಅವರೂ ಜನಜನಿತರಾಗುತ್ತಾರೆ.

ಈಗಾಗಲೇ ಜನ ಮಾನಸದಲ್ಲಿರುವ ಕೃತಿಗಳನ್ನು ಅಗ್ಗದ ಧರದಲ್ಲಿ ಸರ್ಕಾರವೇ ಜನರ ಬಳಿ ತಂದರೆ, ನಿಜವಾದ ಸಾಹಿತ್ಯ ಸೇವೆಯಾಗುತ್ತದೆ. ಗ್ರಂಥಾಲಯಗಳು ಉತ್ತಮ ಸಾಹಿತ್ಯದ ಆಗರಗಳಾಗಬೇಕು.

ಸಾಹಿತಿಯು ಬದುಕಿದ್ದಾಗಲೇ ಆತನ ಕೃತಿಗಳು ಪ್ರಕಟವಾಗಿ, ಮಾರಾಟವಾಗಿ ಅದರಿಂದ ಬರುವ ಲಾಭವು ಅವನಿಗೆ ದೊರಕುವಂತಾಗಬೇಕು. ಬಡತನದಲ್ಲಿರುವ ಸಾಹಿತಿಗಳಿಗೆ ಸರ್ಕಾರವು ಮತ್ತು ಸಂಸ್ಥೆಗಳು ಅರ್ಥಿಕ ಸಹಾಯ ನೀಡಬೇಕು.

ಕನ್ನಡ ಸಾಹಿತ್ಯ ಪರಿಷತ್ತು ಅಂತರ್ಜಾಲವನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ಇಲ್ಲಿನ ಮತ್ತು ಹೊರನಾಡಿನ ಕನ್ನಡಿಗರು ಬ್ಲಾಗ್ ಮುಂತಾದ ಅಂತರ್ಜಾಲ ಮಾಧ್ಯಮವನ್ನು ಬಳಸಿಕೊಂಡು, ಅತ್ಯುತ್ತಮವಾಗಿ ಸಾಹಿತ್ಯ ಸೇವೆ ಮಾಡುತ್ತಿದ್ದಾರೆ. ಮುಂದಿನ ದಿನಗಳು ಅಂತರ್ಜಾಲದ ದಿನಗಳು ಎಂಬುದನ್ನು ಅವರು ಮನಗಾಣಬೇಕು.

ಕನ್ನಡದ ಏಕರೀತಿಯ ಫಾಂಟ್, ತಂತ್ರಾಂಶ ಮತ್ತು ಕೀಲಿ ಮಣೆ ಪ್ರಚಾರಕ್ಕೆ ಬರಬೇಕು. ಗಣಕ ಯಂತ್ರವಲ್ಲದೆ ಎಲ್ಲ ರೀತಿಯ ಮೊಬೈಲ್ ಪರಿಕರಗಳಲ್ಲೂ ಕನ್ನಡ ಓದಲು ಮತ್ತು ಬೆರಳಚ್ಚು ಮಾಡಲು ಅನುಕೂಲವಾಗುವಂತೆ ತಂತ್ರಾಂಶ ದೊರಕಬೇಕು.

ಮಾಸ್ತಿಯವರ ಗಾಂಧಿ ಬಜಾರಿನ ಮನೆ

ಕಡೆಯದಾಗಿ, ನಮ್ಮ ಮೇರು ಸಾಹಿತಿಗಳು ಇದ್ದ ಮನೆಗಳು ಪೂಜನೀಯ ಸ್ಥಳವಾಗಬೇಕಿತ್ತು, ಆದರೆ ಅವು ನಾಮಾವಶೇಷವೂ ಇಲ್ಲದೆ ಅವಸಾನ ಹೊಂದಿವೆ. ರಾಜಧಾನಿ ಬೆಂಗಳೂರಿನಲ್ಲಿಯ ಮಾಸ್ತಿ, ಕೈಲಾಸಂ ಅವರ ಮನೆಗಳು ಎಲ್ಲಿದ್ದವೆಂದರೆ ಮುಂದಿನ ತಲೆಮಾರಿಗೆ ತೋರಿಸುವುದಾದರೂ ಹೇಗೆ? ಅವುಗಳನ್ನು ಇನ್ನಾದರೂ ಕಾಪಾಡುವತ್ತ ಗಮನ ಹರಿಸಬೇಕು.
(ಚಿತ್ರ ಕೃಪೆ : ಅಂತರ್ಜಾಲ)
ಗಲ್ಫ ಕನ್ನಡಿಗ ಈ ಪತ್ರಿಕೆಯಲ್ಲಿ ಪ್ರಕಟಿತ.
02.11.2012
http://gulfkannadiga.com/news/culture/14166.html

ಇತಿಹಾಸ ತಜ್ಞ…

Gulf Kannadiga / Week :4

ಮಮ್ಮಲ ಮರುಗುವನು
ಬನವಾಸಿಯಲಿ ಅಲೆವಾಗ
ಪಂಪ ಮಯೂರನ
ಕುರುಹೂ ತಾಕದೇ ತಾನು,
ಹುಡುಕಿ ಕೊಡಬೇಕವನೇ
ಸುಂದರ ಮಧುಕೇಶ್ವರ

ಆ ರಂಗನಾಥನೇ ಬಲ್ಲ
ಶ್ರೀರಂಗಪಟ್ಟಣವದೇಕೆ
ಅವಜ್ಞ ತಾಣವೀಗ?
ಹೆಜ್ಜೆ ಹೆಜ್ಜೆಗು ಅಲ್ಲಿ
ಟಿಪ್ಪುವಿನ ಗತ ಚರಿತೆ
ಮೂಕ ಭಾವಗೀತೆ

ಅಂತೆಯೇ ಬೆಂಗಳೂರು
ಗಗನ ಚುಂಬಿಯ ಅಡಿಗೆ
ಯಾವುದೋ ವೀರಗಲ್ಲು,
ಕಬ್ಬನ್ ನೆನೆವರೇ ಇಲ್ಲ
ಮುಚ್ಚಿದೆವು ಕೆರೆ ಕಟ್ಟೆ
ಮಂಟಪವು ಪಾಲಿಕೆ ಗುರುತು

ಎಲ್ಲಿಯದೋ ದೊರೆ ಗಾಥೆ
ಬೋಧಿಸುವ ಪಠ್ಯ ಕ್ರಮ
ಕಲಿಸದು ನೆಲದ ಧರ್ಮ,
ಅಂತ ವಿಸ್ಮರಿತ ಐತಿಹ್ಯಗಳ
ಸಿಕ್ಕು ಬಿಡಿಸಲು ಕುಳಿತ
ಇಲ್ಲೊಬ್ಬ ಇತಿಹಾಸತಜ್ಞ

ಬುದ್ಧಿಗೇಡಿಯ ತಿಕ್ಕಲಿಗೆ
ಹಾಳು ಹಂಪೆ ಹಳೇ ಬೀಡು,
ಮಿಕ್ಕ ಸ್ಮಾರಕಗಳ ಮಾರಕರು
ನಾವೇ ಅಸಲು ಘಜ್ನಿಗಳು
ಹೊಸಕುವೆವು ಗುರುತುಗಳೂ…

(ಚಿತ್ರ ಕೃಪೆ : ಅಂತರ್ಜಾಲ)
ಗಲ್ಫ ಕನ್ನಡಿಗ ಈ ಪತ್ರಿಕೆಯಲ್ಲಿ ಪ್ರಕಟಿತ.
26.10.2012
http://gulfkannadiga.com/news/culture/12288.html

ಪರಸ್ಪರ…

 

 

 

 

 

 

 

 

ಉಳಲು ಅನುಮತಿ ಉಂಟೆ
ಬಂಜರು ಮನಸುಗಳೇ?
ಒಲುಮೆ ಬೀಜವ ನೆಟ್ಟು
ಗೆಳೆತನದ ಮಳೆ ಹುಯಿಸಿ
ನಗೆ ಭತ್ತ ಬೆಳೆಯುವೆ

ನನ್ನ ಗದ್ದೆಗೆ ಕಾಲಿಟ್ಟೀಯೇ
ಜೋಕೆ! ಯಾರು ನೀ ಎನ್ನದಿರಿ,
ನಾನೂ ಮೊದಲು ಬರಡು
ಯಾರೋ ಹಸನಾಗಿಸಿದರಲ್ಲ
ನನ್ನ ಖಾಲಿ ಒಡಲೂ

ಇಲ್ಲಿ ಹುಟ್ಟಿದ ಮೇಲೆ
ಆಗಲೇ ಬೇಕು ಆಗಾಗ
ಒಬ್ಬರಿಗೆ ಒಬ್ಬರು,
ಅಂತ ಚಂದ್ರನು ಕೂಡ
ಭಾನುವಿನ ದಾನದಲೇ
ಹುಣ್ಣಿಮೆ ಚೆಲ್ಲ ಬೇಕು…

(ಚಿತ್ರ ಕೃಪೆ : ಅಂತರ್ಜಾಲ)

ಮತ್ತೆ ಹಸಿರು ಹೊದ್ದೀತೇ?

19/10/2012

         week : 3

ತಾರಸಿ ಏರಿ ನಿಂತಾಗಲೆಲ್ಲ ಕಣ್ಣಿಗೆ ತಂಪು ಮಾಡುತ್ತಿದ್ದದ್ದು ಆ ದಟ್ಟ ಹಸಿರಿನ ಹೊದಿಕೆ. ಬೇಸಿಗೆಯಲ್ಲೂ ತಂಪು ನೀಡುತ್ತಿದ್ದ ಆ ಅನನ್ಯ ಸಸ್ಯ ಸಂಪತ್ತು. ರಸ್ತೆ ಇಕ್ಕೆಲಗಳಗಳಲ್ಲೂ ದಾರಿ ಹೋಕರಿಗೆ ನೆರಳು ನೀಡುತ್ತಿದ್ದ ಸಾಲು ಮರಗಳು. ಇವೆಲ್ಲ ಕನಸಿನ ಚಿತ್ರಗಳಂತೆ ಕರಗಿ ಹೋದಾಗ ವ್ಯಥೆಯಾಗುತ್ತದೆ.

ತಮ್ಮ ಪ್ರೇಮ ಮಣ್ಣಾದರೂ ಹೆಸರಾದರೂ ಅಮರವಾಗಲಿ ಎಂದು ಬೃಹದ್ ಕಾಂಡಗಳ ಮೇಲೆ ಕೆತ್ತಿಟ್ಟ ಆ ಪ್ರೇಮ ಚಿಹ್ನೆಗಳೆಲ್ಲ ಎಲ್ಲಿ ಉರುವಲಾದವೋ?

ನನಗೆ ಬೆಂಗಳೂರೆಂದರೆ ಮನಸ್ಸಿನಲ್ಲಿ ಮೂಡುವ ಚಿತ್ರವೇ ವನ ಸಿರಿಯ ಪ್ರಶಾಂತ ನಗರ. ಮುಂಚಿನ ನಗರದ ಗಲ್ಲಿ ಗಲ್ಲಿಯೂ ಕಬ್ಬನ್ ಪಾರ್ಕೋ ಅಥವಾ ಲಾಲ್ ಬಾಗೋ ಅನಿಸುತ್ತಿದ್ದ ಕಾಲ ಈಗ ಗತ ನೆನಪು. ಕಲ್ಪವೃಕ್ಷಗಳಿಂದ ತುಂಬಿ ಮೆರೆಯುತ್ತಿದ್ದ ಮಲ್ಲೇಶ್ವರಂನ ತೆಂಗಿನ ಮರದ ರಸ್ತೆ ಕೂಡ ಈಗ ಬರೀ ಹೆಸರಷ್ಟೇ.  

ಎಂ.ಜಿ. ರಸ್ತೆಯಲ್ಲಿ ಮೆಟ್ರೋ ಕಾಮಗಾರಿಗಾಗಿ ತೆರವು ಮಾಡಿದ ಒಂದೆರಡು ಮರಗಳನ್ನು ಕಂಠೀರವ ಸ್ಟುಡಿಯೋದಲ್ಲಿ ನೆಟ್ಟರು ಅಂತ ಕೇಳಿದ್ದೆ. ಅಪ್ಪಿಕೋ ಚಳುವಳಿ ಮಾಡಿದರೂ ಸಹ ಸ್ಯಾಂಕೀ ಕೆರೆ ಬಳಿಯ ಹಲವು ಮರಗಳನ್ನು ಉಳಿಸಲಾಗಲೇ ಇಲ್ಲ! ದೊಡ್ಡ ದೊಡ್ಡ ಮರಗಳನ್ನು ಹೊತ್ತೊಯ್ದು ಎಲ್ಲೋ ನೆಡಲು ಅಪಾರ ಖರ್ಚು ವೆಚ್ಚ ಮತ್ತು ಸಾಗಾಣಿಕೆಯ ಸಮಸ್ಯೆಯನ್ನು ಸರ್ಕಾರ ಮುಂದಿಡಬಹುದು. ಬೇಡದ ಬಾಬ್ತುಗಳಿಗೆಲ್ಲ ಕೋಟ್ಯಾಂತರ ತೆರಿಗೆ ಹಣ ವ್ಯಯಿಸುವ ಸರ್ಕಾರಗಳಿಗೆ ನಗರದ ಸ್ವಾಸ್ಥ್ಯ ಕಾಪಾಡುವ ಮರಗಳನ್ನು ನಗರದ ಸುತ್ತ ಹಸಿರು ಪಟ್ಟಿ ಮಾಡಿ, ಅಲ್ಲಿ ಹೋಗಿ ನೆಡಲು ಅದರ ಖಜಾನೆ ಬರಿದಾಗುವುದಿಲ್ಲ. ಲಕ್ಷಾಂತರ ಸುರಿದು ಬಸ್ ಶೆಲ್ಟರುಗಳನ್ನು ನಿರ್ಮಿಸುವಾಗ ಇಕ್ಕೆಲಗಳಲ್ಲಿ ಮರಗಳನ್ನು ನೆಡಬಹುದು. ನಗರದ ಹಲವು ಬಸ್ ಸ್ಟಾಪುಗಳು ಈವಾಗಲೂ ಆಲದ ಮರ, ಹುಣಿಸೇ ಮರ ಎಂದೇ ಗುರುತಿಸುತ್ತೇವೆ. ಅದು ಮನುಷ್ಯ ಮತ್ತು ಮರದ ನಡುವಿನ ಅವಿನಾಭಾವ ಸಂಬಂಧ.

ಇಂದಿನ ಹವಾ ಮಾಲಿನ್ಯವನ್ನು ಶುದ್ಧೀಕರಿಸುವ, ಮಳೆಯನ್ನು ಸೆಳೆಯುವ ಮತ್ತು ಆಮ್ಲಜನಕವನ್ನು ನೀಡುವ ಮರಗಳನ್ನು ಉಳಿಸುವ ಕೆಲಸ ಅದರ ಆದ್ಯತಾ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಇರಬೇಕಿತ್ತು. ನನ್ನ ಮುತ್ತಜ್ಜನ ಕಾಲದ ಮರಗಳೆಲ್ಲ ಅಭಿವೃದ್ಧಿ ಹೆಸರಲ್ಲಿ ಬುಡ ಮೇಲಾಗುವಾಗ ಕರುಳು ಕಿವುಚುತ್ತದೆ. ಹೊಸ ತಂತ್ರಙ್ಞಾನವೋ  ಮಣ್ಣು ಮಸಿಯೋ ಬಳಸಿ, ಬೇರು ಸಮೇತ ಮರಗಳನ್ನು ಜತನವಾಗಿ ಹೊತ್ತೊಯ್ದು ಹೊರ ವಲಯದ ಬಯಲುಗಳಲಿ ಮರು ನೆಡಬಾರದೆ? ಎನಿಸುತ್ತದೆ.

ಬಲು ಬೇಗ ಎತ್ತರಕ್ಕೆ ಬೆಳೆಯುವ ಆದರೆ ಮಳೆ ಗಾಳಿಗೆ ನೆಳಕ್ಕೆ ಉರುಳುವ ಟೊಳ್ಳು ಕಾಂಡದ, ಬೇರಿಳಿಸದ ಮರಗಳನ್ನು ಬೆಳೆಸುವ ಬದಲು. ವೈಜ್ಞಾನಿಕವಾಗಿ ನಮ್ಮ ನೆಲಕ್ಕೆ ಒಗ್ಗುವ ಹಲವು ಉಪಯೋಗಗಳಿಗೆ ಆಗುವ ಮರಗಳನ್ನು ಕನಿಷ್ಟ ಪಕ್ಷ ಹೊಸ ಬಡಾವಣೆಗಳಲ್ಲಾದರೂ ನೆಟ್ಟು ಕಾಪಾಡುವ ಕ್ರಿಯಾ ಯೋಜನೆಗಳನ್ನು ನಗರಾಡಳಿತ, ನಗರಾಭಿವೃದ್ಧಿ ಪ್ರಾಧಿಕಾರ, ಸಾಮಾಜಿಕ ಅರಣ್ಯ ಇಲಾಖೆ ಮತ್ತು ಸರ್ಕಾರ ಕೂಡಲೇ ಕೈಗೊಳ್ಳಬೇಕಿದೆ. ಈಗಾಗಲೇ ಪೋಷಣೆ ಇಲ್ಲದೆ ಸೊರಗಿದ ಹಳೇ ಮರಗಳಿಗೂ ಕಾಯಕಲ್ಪ ಮಾಡಬೇಕಿದೆ.

ಜೊತೆಗೆ ತೋಟಗಾರಿಕೆ ಇಲಾಖೆಯೂ ಹಳೆಯ ಬಡಾವಣೆಗಳಲ್ಲಿ ಖಾಲಿ ಜಾಗವನ್ನು ಗುರ್ತಿಸಿ ಉದ್ಯಾನವನ ನಿರ್ಮಿಸಬೇಕು. ರಸ್ತೆಗಳನ್ನು ಹೂ ಗಿಡಗಳಿಂದ ಸಿಂಗರಿಸಬೇಕು. ಮನೆಗೊಂದು ಮರ ನೆಡಿ ಮತ್ತದ್ದನ್ನು ನಿಮ್ಮ ಮನೆ ಮಕ್ಕಳಂತೆ ನೋಡಿಕೊಳ್ಳಿ ಎಂಬ ಅರಿವೂ ಜನರಲ್ಲೂ ಮೂಡಿಸಬೇಕಿದೆ.

ಪಕ್ಕದ ರಾಯಲ ಸೀಮೆಯ ತಿರುಪತಿಯಂತೂ ಕುರುಚಲು ಗಿಡಗಳಷ್ಟೇ ಬೆಳೆಯುವ ನೆಲ. ತಿರುಮಲೈ ಬೆಟ್ಟವನ್ನು ಹಲವು ವರ್ಷಗಳ ತಪಸ್ಸಿನಂತೆ ಇಂದು ಹಸಿರಿನಿಂದ ನಳನಳಿಸುವಂತೆ ಮಾಡಿದ್ದು ನಮಗೆ ಉದಾಹರಣೆಯಾಗಲಿ.

ದುಖದ ಸಂಗತಿ ಎಂದರೆ, ಮೇಕ್ರೀ ಸರ್ಕಲ್ಲಿನ ಮೇಲೆ ನಕಲಿ ಮರವನ್ನು ರೂಪಿಸಿ, ಜಾಗೃತಿ ಮೂಡಿಸಿದ್ದೇವೆ ಎಂದು ಬೀಗುವವರು ಅಲ್ಲಿ ನಿಜವಾದ ಮರವನ್ನೇ ನೆಟ್ಟು ಪೋಷಿಸಿದ್ದರೆ, ನಿಜವಾಗಿ ಖುಷಿ ಪಡುತ್ತಿದ್ದೆವು. ನನ್ನ ನಗರ ಮಾತ್ರವಲ್ಲ ಇಡೀ ಭೂಮಿ ಹಸಿರು ಮಯವಾಗಿರಲಿ, ಕಾಡುಗಳು ನೆಲಗಳ್ಳರ ಪಾಲಾಗದಿರಲಿ ಎಂದು ಆಶಿಸುತ್ತೇನೆ.

(ಚಿತ್ರ ಕೃಪೆ : ಅಂತರ್ಜಾಲ)

http://gulfkannadiga.com/news/culture/10520.html

ವಿಳಾಸಗಳು…

ಇರುಕು ವಠಾರದ ಬಾಲ್ಕಾನಿ
ಗುಲ್ಮೊಹರದಡಿಯ ಕಲ್ಲು ಬೆಂಚು
ವಿವಿ ಪುರಂನ ಆ ತಿರುವು
ನೆನಪಾಗಲೇ ಬಾರದೆಂದು
ಎದೆ ಕಪಾಟಿನಲಿ ಹೂತಿಟ್ಟೆ

ನನ್ನ ಲಕೋಟೆಯ ಮೇಲೆ
ಬರೆದ ಆ ವಿಳಾಸಗಳೆಲ್ಲ
ಅವಧಿ ಮೀರಿ ತೀರಿ
ಟಿಸಿಲೊಡೆದಿದ್ದೀತು ಎಲ್ಲೋ

ಅಂದೆಂದೋ ಡಬ್ಬಿಗೂ
ಹಾಕದೆಲೆ ಮುಚ್ಚಿಟ್ಟ
ಪ್ರೇಮ ಪತ್ರಗಳಿಗೆಲ್ಲ
ತಿವಿವ ತಿರಸ್ಕೃತ ಮುದ್ರೆ!

ಮರೆವಿನ ಆಸೆ ಎಂಜಲು
ಒಣಗಿ ಗಟ್ಟಿ ಚೀಟಿ,
ಹಬೆಗಿಟ್ಟರೂ ಬರದು
ಬಿಡಿಸಲಾರದ ಅತುಕು

ಆಗಾಗ ಹುಡುಕುವೆನು
ಮುಖಪುಟದ ಒಳಗೂ
ಅಂತರ್ಜಾಲದ ಹೊರಗೂ
ಸಿಕ್ಕೀತೇ ವಿಳಾಸ?

(ಚಿತ್ರ ಕೃಪೆ : ಅಂತರ್ಜಾಲ)

ಆಡು ಭಾಷೆ ಸರ್ವಕಾಲೀನ…

ಪಂಪನಿಂದ ಕಾವ್ಯವನ್ನು ಓದಿಕೊಂಡು ಬಂದಿದ್ದೇವೆ. 
ಚಂದಸ್ಸು ಸಮಾಸಗಳನ್ನು ಶಾಲಾ ಮಟ್ಟದಲ್ಲೇ ಅಭ್ಯಸಿಸಿದ್ದೇವೆ.  
ಹಳೆಗನ್ನಡ, ನಡುಗನ್ನಡ ಮತ್ತು ಹೊಸ ಕನ್ನಡದ ರಸ ಪಾಕವನ್ನು ಸವಿದಿದ್ದೇವೆ,ಸವಿಯುತ್ತಲೇ ಇದ್ದೇವೆ.

ಈ ನಡುವೆ ಅಚ್ಚರಿ ಮೂಡಿಸುವುದು ನಮ್ಮ ದಾಸ, ವಚನ, ಜನಪದ ಮತ್ತು ತತ್ವ ಪದ ಸಾಹಿತ್ಯಗಳು. ಹಲವು ಶತಮಾನಗಳ ಹಿಂದೆಯೇ ಪ್ರಚಾರಕ್ಕೆ ಬಂದ ಇವು ಇಂದಿನ ಬಳಕೆಯ ಕನ್ನಡಕ್ಕೆ ತುಂಬಾ ಹತ್ತಿರವಿವೆ.

ಹೆಜ್ಜೆಯ ಮೇಲೆ ಹೆಜ್ಜೆಯನಿಕ್ಕುತ
ಗೆಜ್ಜೆ ಕಾಲ್ಗಳ ಧ್ವನಿಯ ತೋರುತ
ಸಜ್ಜನ ಸಾಧು ಪೂಜೆಯ ವೇಳೆಗೆ
ಮಜ್ಜಿಗೆಯೊಳಗಿನ ಬೆಣ್ಣೆಯಂತೆ

ಎನ್ನುತ್ತ ಪುರಂದರ ದಾಸರ ಈ ಕೀರ್ತನೆಯನ್ನು ಕಲಿಯುವ ಪುಟ್ಟ 
ಮಗುವಿಗೆ ಸಂಗೀತ ಮೇಸ್ಟ್ರು ಕೃತಿಯ ಅರ್ಥ ಹೇಳಿಕೊಡುವ 
ಅವಶ್ಯಕತೆಯೇ ಬೀಳುವುದಿಲ್ಲ. ಪುರಂದರ ಕನಕರಾದಿಯಾಗಿ 
ದಾಸರು ಬಳಸಿದ ಭಾಷೆಯು ಅಷ್ಟು ಸರಳ ಮತ್ತು ನಮ್ಮ ಇಂದಿನ 
ಭಾಷೆಗೂ ಅಷ್ಟೇ ಹತ್ತಿರ.

’ಲೋಕದ ಡೊಂಕ ನೀವೇಕೆ ತಿದ್ದುವಿರಿ?’ ಎನ್ನುವ ಬಸವಣ್ಣ ಮತ್ತು 
ಹಲವಾರು ವಚನಕಾರರ ವಚನಗಳು, ’ಕಿಬ್ಬದಿಯ ಕೀಲು ಮುರಿದಂತೆ’ ಎನ್ನುವ ಸರ್ವಙ್ಞ. ’ಮುಂಜಾನೆದ್ದು ಕುಂಬಾರಣ್ಣ’ ಮುಂತಾದ ಸಹಸ್ರಾರು ಜನಪದ ಗೀತೆಗಳು ನಮ್ಮ ಇಂದಿನ ಕನ್ನಡಕ್ಕೆ ತುಂಬಾ ಹತ್ತಿರವಿವೆ.

ಬುಟ್ಟಿಯಲ್ಲಿ ಪತ್ತಲ ಇಟ್ಟಿ
ಅದನು ಉಟ್ಟ ಹೊತ್ತೊಳು ಜೋಕಿ;
ಕೆಟ್ಟಗಂಟಿ ಚೌಡೇರು ಬಂದು
ಉಟ್ಟುದನ್ನೆ ಕದ್ದಾರ ಜೋಕಿ!
ಬುದ್ಧಿಗೇಡಿ ಮುದುಕಿ ನೀನು ಬಿದ್ದೀಯಬೇ.

ಎನ್ನುವ ಸಂತ ಶಿಶುನಾಳ ಶರೀಫರು ತಮ್ಮ ನೆಲದ ಉತ್ತರ ಕರ್ನಾಟಕ 
ಭಾಷೆ ಬಳಸಿದರೂ ಅವರ ಕೃತಿಗಳೂ ಸಹ ಇಂದಿನ ಕನ್ನಡವೇ ಎನಿಸುತ್ತದೆ.

ಶತ ಶತಮಾನಗಳನ್ನು ದಾಟಿ ಬಂದರೂ ಇಂದಿನ ಭಾಷೆಗೆ ಈ ಸಾಹಿತ್ಯ ಸಮಕಾಲೀನ ಎನಿಸಲು ಕಾರಣ ಹೀಗೂ ಇರಬಹುದು ಎನಿಸುತ್ತದೆ, 
ಅದು ಅಡು ಭಾಷೆಯ ಬಗೆಗಿನದು.

ಗ್ರಾಂಥಿಕ ಭಾಷೆಯು ಕೃತಿಕಾರನ ಪ್ರೌಢಿಮೆಯ ಮಾಧ್ಯಮವಾಗಿದ್ದು, 
ಅದು ಕಾಲ ಕಾಲಕ್ಕೆ ಕವಿಯ ಭಾಷಾ ಬಳಕೆಯನ್ನು ಅವಲಂಭಿಸಿದೆ. 
ಅಲ್ಲಿ ಆತ ಬಳಸುವ ಕನ್ನಡವು ಆತನ ಬದುಕಿದ್ದ ಕಾಲ, ಪರಿಸರವನ್ನು ಪ್ರತಿನಿಧಿಸುತ್ತದೆ.

ಹಳೆಗನ್ನಡ, ನಡುಗನ್ನಡ ಮತ್ತು ಹೊಸ ಕನ್ನಡಗಳ ನಡುವೆ ಎದ್ದು 
ಕಾಣುವ ವ್ಯತ್ಯಾಸಗಳು ಮತ್ತು ಕಾಲ ಘಟ್ಟವು ಗ್ರಾಂಥಿಕ ಭಾಷೆಗೆ 
ಮಾತ್ರ ಸಂಬಂಧಪಟ್ಟದ್ದು ಅನಿಸುತ್ತದೆ.

ಪ್ರಾಯಶಃ ಆಡು ಭಾಷೆಯು ಶತಮಾನಗಳಿಂದಲೂ ಇಷ್ಟು ತೀವ್ರವಾಗಿ ಬದಲಾವಣೆಗೆ ಈಡಾಗಿರದು. ಕಾಲ ಕಾಲಕ್ಕೆ ಅನ್ಯ ದೇಶಿಯ ಪದಗಳು 
ಆಡು ಭಾಷೆಗೆ ಸೇರ್ಪಡೆಯಾಗುತ್ತಾ ಹೋಗಿದ್ದರೂ ಅದರ
ಮೂಲ ಸ್ವರೂಪಕ್ಕೆ ಅಂತಹ ಎದ್ದು ಕಾಣುವ ಬದಲಾವಣೆ ಕಂಡಿಲ್ಲ.


ಮೇಲೆ ಉದಾಹರಿಸಿದ ಪ್ರಕಾರಗಳ ಕೃತಿಕಾರರೆಲ್ಲ ಜನ ಮಾನಸಕ್ಕೆ ಹತ್ತಿರವಾಗುವ ಸಾಹಿತ್ಯ ರಚಿಸಿದವರೇ. ದೇವರ ಬಗ್ಗೆಯೇ ಆಗಲಿ 

ಸಾಮಾಜಿಕ ಕಳಕಳಿಯನ್ನೇ ಆಗಲಿ, ಸಾಮಾನ್ಯರಿಗೆ ಅರ್ಥವಾಗುವಂತೆ ರಚಿಸಲು ಇವರು ಆಡು ಭಾಷೆಯನ್ನೇ ಬಳಸಿಕೊಂಡರು.

ಅದಕ್ಕಾಗಿಯೇ ಇರಬಹುದು ಈ ಕೃತಿಗಳ ಭಾಷೆಯು ಇಂದಿನ ಆಡು 
ಭಾಷೆಯ ಕನ್ನಡದಂತೆಯೇ ಇದೆಯಲ್ಲವೇ ಅನಿಸುವುದು.

ಈ ನಿಟ್ಟಿನಲ್ಲಿ ನಾನೂ ಹೆಚ್ಚು ಓದಿಕೊಳ್ಳಬೇಕಿದೆ.

“ಪಲವಳ್ಳಿ ಅಂಕಣ” – 2ನೇ ವಾರ

‘ಗಲ್ಫ್ ಕನ್ನಡಿಗ’ ಈ ಪತ್ರಿಕೆ
12/10/2012

http://gulfkannadiga.com/news/culture/8689.html

ಅವರೂ ಇವರೂ…

ಆರುವ ದೀಪಗಳಂತೆ
ನಾವುಗಳು ನೀವುಗಳು
ಯಾವ ಕ್ಷಣವೋ
ಇಲ್ಲಿಂದ ಅಲ್ಲಿಗೆ ಪಯಣ?

ದಕ್ಕಿದ್ದೇ ಅರೆಪಾವು ಜಿಂದಗಿ!
ಜೀಕುವುದು ಗ್ರಾಫು ಏರುಪೇರು,
ಕತ್ತಲಲ್ಲೇ ಗುರಿ ತಡಕೋ ಕುರುಡ್ಗಣ್ಣು,
ಮೇಲೆ ಕೋಟಿ ಮಿಸ್ಸಂಡೆರ್ಸ್ಟಾಂಡಿಂಗೂ?

ಚಿಕ್ಕ ಕೆರೆತಗಳು
ದೊಡ್ಡ ಹುಣ್ಣುಗಳೇ,
ಅತ್ತು ಹಗುರಾಗಬೇಕು
ಚುಚ್ಚು ಮಾತುಗಳಿಗೆಲ್ಲ
ನಕ್ಕು ಸಾಗಬೇಕು
ಮಿಕ್ಕ ರಹದಾರಿ

ನಂಬ ಬೇಕೋ
ನಂಬ ಬಾರದೋ
ಕೆಲವೊಮ್ಮೆ ಮುಖಗಳಿಗೆ,
ಅವು ಮುಖವಾಡವೋ
ಪಿಗ್ಗಿ ಬೀಳಿಸುವ
ಎರೆಗಳೋ ಹೊಳೆಯದು
ಸುಲಭ ಓದಿಗೆ

ದೇಗುಲ ಹೊಕ್ಕು
ಕಲ್ಲುಗಳಿಗೂ ಕೈ ಮುಗಿದು
ಅಡ್ಡ ಬಿದ್ದಂತೆ
ನಂಬಿಕೆಯೇ ಬದುಕು,
ಒಪ್ಪಿ ಬಿಟ್ಟು ನೋಡೋಣ
ಒಮ್ಮೆ ಆದದ್ದಾಗಲೀ
ಅವರನೂ ಇವರನೂ…

(ಚಿತ್ರ ಕೃಪೆ : ಅಂತರ್ಜಾಲ)

ಜಯಂತಿ…

ಹತ್ತರಲ್ಲೊಂದು
ಸಾರ್ವತ್ರಿಕ ರಜೆ ದಿವಸ,
ಎಬ್ಬಿಸ ಬೇಡಿರಿ
ಹೊದ್ದು ಮಲಗಿದ್ದೇವೆ ಕಂಬಳಿ

ನಿನ್ನೆ ತಟ್ಟಲೆ ಇಲ್ಲ
ಇಂದು ಒಣ ದಿನ,
ಅಟ್ಟ ತಡಕಾಡಿದರೆ
ಖಾಲೀ ಬಾಟಲಿ

ಭಟ್ಟಿ ಇಳಿಯವು
ಎದೆಗಂತೂ ಆದರ್ಶಗಳು,
ಈಗವೇ ಬೀದಿ ತಿರುವಲಿ
ನಾಮ ಫಲಕಗಳು

ಬಾನುಲಿ ಉಲಿದು
ಪತ್ರಿಕೆಯೂ ಅಚ್ಚಿಸಿದಾಗ
ಅಂತರ್ಜಾಲದಲೇ
ಹುಡುಕಾಟ ಚಹರೆಗೂ

ಸಾಧನೆ ಮರೆತರು
ಒರಸಿಡಿ ಗಾಜು ಬೂಜನು
ಅದೇ ಚೌಕಟ್ಟಿನ ಚಿತ್ರ
ಬೇಕು ವರ್ಧಂತಿಗೂ

ಗುರುತೇ ಹತ್ತಿರಲಿಲ್ಲ
ರಸ್ತೆ ಧೂಳಲಿ,
ಮುನ್ನ ದಿನ ಮಜ್ಜನದಿ
ಲಕಲಕಿಸಿದ ಪ್ರತಿಮೆ!

ಬಾಡಿಗೆಯ
ಏಣಿ ಏರಿ ಏರಿಸಿ
ಚಪ್ಪಾಳೆ ಗಿಟ್ಟಿಸಿರಿ
ದೇಣಿಗೆಯ
ಮಾರುದ್ದ ಹಾರ

ಇದು ನನ್ನ “ಪಲವಳ್ಳಿ ಅಂಕಣ”ದ ಮೊದಲ ಕವನ.

ಗಲ್ಫ್ ಕನ್ನಡಿಗ ಈ ಪತ್ರಿಕೆಯ ಸಂಪಾದಕರಾದ ಶ್ರೀಯುತ. ಬಿ.ಜಿ. ಮೋಹನದಾಸ್ ಮತ್ತು ಶ್ರೀಯುತ ಪದ್ಯಾಣ ರಾಮಚಂದ್ರ ಅವರಿಗೆ ನನ್ನ ಕೃತಜ್ಞತೆಗಳು.

http://gulfkannadiga.com/news/culture/7231.html

(ಚಿತ್ರ ಕೃಪೆ : ಅಂತರ್ಜಾಲ)

ಮುದ್ದು…


ಮುದ್ದುಗಳ ವಿನಿಮಯ
ಇರಲಿ ಅನಿಯಮಿತ ನಲ್ಲೇ,
ನನಗದೇ ಹಳೆಯ ಮದ್ದು!

ಬೇಡಿ ಕಾಡಿಯೇ ಪಡೆದ
ದಿವ್ಯ ತಾಕೇ ಗಮ್ಮತ್ತು,
ತಟ್ಟಾಡು ನಡಿಗೆಯವನ
ತಿದ್ದುವುದಿದರ ತಾಕತ್ತು,
ಕಾಪಿಡುತದೆನ್ನ ಮಿಂಚಿಗೆ
ಪಂಚರಿಸದಂತೆ ನಿಯತ್ತು!

ಕೋಟಿ ಮುತ್ತುಗಳಿಗಿರಲಿ
ಬಡ್ಡಿ ಚಕ್ರಬಡ್ಡಿಯ ಸುಲಿಗೆ
ತಪ್ಪುತಲೇ ಇರಲಿ ಲೆಕ್ಕ,
ನಿನ್ನೆ ತರಬೇತಿಯ ಸುತ್ತು
ಮುತ್ತಿಗೆ ಅವಧಿಯ ಮತ್ತು
ದಾಖಲೆಯನಿಂದು ಮುರಿವ

ಮೊದಲ ಮುತ್ತಿಗೆ
ವರುಷ ವರುಷವೂ
ಸಂಪ್ರತಿಸುತಿರಲಿ
ಮರು ಮುದ್ರಣದ
ಪರಿಷ್ಕೃತ ಆವೃತ್ತಿ!

ನಗೆಯ ಸಂಕ್ರಮಿಸಿ…

ಕಲ್ಪನೆಯಲೇ ಮೊರಟು
ಕನಕಾಂಬರಿಯ ಗಿಡವು
ಮೊಗ್ಗರಳಿಸೆವು ಚಿವುಟಿ,
ಏರಿಸದೆಯೇ ಉದರದು
ಬಲಗಡೆಗೇ ಹೂವೂ?

ಬೆರಗಿರದ ಬದುಕುಗಳಿಗೆ
ಸವೆವುದೇ ಹುಟ್ಟು ಗುಣ
ಅವನಿಗೆ ಏಬರಾಸಿ ವಜನು,
ಅಮರತ್ವ ಚಪಲತೆಯೇ
ಅರೆ ಕಾಸಿನೀ ಚಪ್ಪಲಿಗೆ

ಫಲವತ್ತು ಭೂಮಿಯೊಳು
ನುಸುಳಿ ಗಟ್ಟಿ ಬೇರೂರಿ
ಬುಡ ಗಟ್ಟಿಸಿದರೂ ವ್ಯರ್ಥ,
ಕಾಂಡ ಉಬ್ಬಿಸಿಕೊಂಡ
ನೆರಳಿಗಾಗದ ಮರವೂ

ಉರುವಲಿಗು ಹಸಿ ಹಸಿ
ಚಿತೆಗೂ ಬೇಡದೀ ಕಟ್ಟಿಗೆ,
ಸೂರಿಗೊದಗದ ತೊಲೆಯ
ಮುಲಾಜಿಗೇ ಹೊರುವುದೇ
ಎಲ್ಲೋ ಬೆಂದ ಇಟ್ಟಿಗೆಯೂ

ಹಚ್ಚಡದೊಳು ಬಚ್ಚಿಟ್ಟು
ಮುಕ್ಕಿದರೆ ಪ್ರಾಪ್ತಿ ಬಿಕ್ಕಳಿಕೆ
ಉಸಿರಗಟ್ಟುತ್ತೆ ನಮಗೂ,
ನಗೆ ಟಿಸಿಲು ಸಂಕ್ರಮಿಸಿ
ಮಂದಿ ಮನ ಗೆಲ್ಲ ಬನ್ನಿ

ಹಳೇ ನೀರಲೇ ತೇಲಿ
ಹೊಸ ಬಂದರಿನಾಚೆ
ಹುಡುಕ ಹೊರಡೋಣ
ಆಳಕಾಳಕೆ ಲಂಗರಿಳಿಸಿ

ಆಯ’ವ್ಯಯ’…

ಅರಸೊತ್ತಿಗೆ ತಿಕ್ಕಲಿಗೆ
ಅಪಮೌಲ್ಯ ರೂಪಾಯಿ,
ಬರೆ ಹಾಕಲು ಕಂಡದ್ದು
ಬಡವನ ಬಡಕಲು ಹೊಟ್ಟೆ

ಸೋರುತ್ತೆ ಆದಾಯ ಗಡಿಗೆ
ಸಿಕ್ಕನು ಉತ್ತರ ಭೂಪ ಕೈಗೆ,
ತಿದ್ದ ಬೇಕಿದ್ದ ಸದನಗಳೂ
ಗದ್ದಲದಲೇ ಅಂತ್ಯ ಮತ್ತೆ

ಓಟು ಬೇಟೆಗೆ ತೆರಿಗೆ ಪಾಲು
ತಲುಪೀತೆ ಬಡವನ ತಾಟು?
ಗೊಬ್ಬರಕಿಲ್ಲದ ಸಬ್ಸೀಡೀ
ಮಧುಮೇಹ ದೇಹಿ ಪಾಲು

ತರಂಗಾಂತರವ ಹಂಚಿ
ಹುಲುಸಾಗಿ ಮೇಯ್ದರು ಹುಲ್ಲು,
ಅನಿಲವ ಆಕಾಶಕೇರಿಸಿ
ಕಲ್ಲಿದ್ದಲು ದಾನ ಕೊಟ್ಟರು

ಕೋಟಿ ಕಾರಿನ ಮೇಲೆ
ಲಕ್ಷ ಹೊರಿಸಿದರಾಯ್ತು,
ಉಳುವ ಯಂತ್ರವೇ ಬೇಕೇ
ಭರಿಸಲು ತೈಲ ತುಟ್ಟಿ?

ಕಳ್ಳ ಲೆಕ್ಕವ ಬರೆದು
ಕದ್ದವನಷ್ಟೇ ಸತ್ಯಸಂಧ,
ಪುಡಿ ಸಂಬಳದವ ಸಿಕ್ಕ
ಸುಲಿಗೆ ಸುಂಕಕ್ಕೆ ಸುಂಕ

ದುರಾಸೆ ಗೆಬರಪ್ಪಗಳನೇ
ಯಾಮಾರಿ ಆರಿಸಿದ ಮೇಲೆ,
ಎಳೆಯ ಬನ್ನಿರಿ ಹೆಗಲ ಕೊಟ್ಟು
ಜೋಡಿ ಎತ್ತನೂ ಅಡವಿಟ್ಟು

(ಚಿತ್ರ ಕೃಪೆ : ಅಂತರ್ಜಾಲ)

ಅಪಾತ್ರ ದಾನ…

ದಾನಿಗಳಾರೋ
ಪೀಕದಾನಿಗಳಾರೋ,
ನಕಲಿ ವಜ್ರಗಳು ಮಾತ್ರ
ಜನಜನಿತವೀಗ

ತಕ್ಕಡಿಯಲಿ ತೂಗುವರು
ಒಲುಮೆಯದೂ ನಿಯತ್ತು?
ಮುಲಾಮಿಗಷ್ಟೇ ಬೋರಲು
ಹಡೆದವರ ಅಸಲೀಯತ್ತು

ಜೀವಂತ ಮೈ ಸುಲಿವರು
ಕೋಶ ಓದಿದ ಮಕ್ಕಳು,
ಸಲುಹಿದರೂ ಮರೆವರು
ಹೆಬ್ಬೆಟ್ಟು ಒತ್ತು ಹೆತ್ತವರು

ಸವಕಲು ಪಾವಲಿ ಕೊಟ್ಟು
ಮಹಾ ಪೋಷಕನ ಪೋಸು
ಮೇಲಿವರು ಕೇಳುತ್ತಾರಲ್ಲ
ತೆರಿಗೆ ವಿನಾಯತಿ ನಕಲು

ನಕ್ಕ ನಗೆಗಳಿಗೆಲ್ಲ ಲೆಕ್ಕ
ಹಸ್ತಾಲಿಂಗನವೇ ಬುರುಡೆ
ಸುಪ್ತ ಕಾಮನೆಯೂ ಗುಪ್ತ
ಪೊಳ್ಳು ಪುರುಷೋತ್ತಮತೆ

ಹಾಲುಣಿಸೋ ರಾಸುಗಳು
ನೆನಪಿಟ್ಟಾವೇ ಕರೆದ ಲೆಕ್ಕ,
ನೆಲದವ್ವ ಕೇಳುವಳೇ
ಫಸಲ ರಾಶಿಯಲೂ ಭಾಗ!

(ಚಿತ್ರ ಕೃಪೆ : ಅಂತರ್ಜಾಲ)

ಬಿರಿಯ ಬಹುದೇ…

ಇದು ನಾನು
ಅದು ನೀನು
ಗೆರೆ ಗೀಚದಿರು ಹೀಗೆ,
ಬೆಳೆ ತೆಗೆದರಾಯ್ತು
ಬಿಡು ಬಂಜರಲ್ಲೂ
ಖುಷ್ಕಿ ಏಕೆ ಬೇಕು?

ಒಣ ಜಂಭ ಕೊಲ್ಲುತದೆ
ಘಾಸಿ ಮುನಿಸಿನೀಟಿ
ಬೇಡಮ್ಮಾ ಆಮ್ಲ ಮಳೆಯು,
ನಗೆಯ ಬುಗ್ಗೆಯೊಂದು
ನಡು ನಡುವೆ ಹಾರುತಿರೆ
ಮೂಕಿ ಕಳೆದು ಟಾಕಿ

ಇನ್ನು ಹೊಸೆಯಲಿದೆ
ಕನಸ ಹಸೆಯನಿಂದು
ಸೇರಿ ನಾನು ನೀನು,
ಕೊಸರಿ ಕೊಸರಿ
ಮುಚ್ಚಿಟ್ಟ ಮುತ್ತುಗಳ
ಮತ್ತೆ ಗುಣಿಸಲೇನು?

ಚಳುವಳಿಯೇ ಆಗಲಿ
ಅಪ್ಪಿಕೊಂಡು ಕೂತು,
ಬಿರಿಯ ಬಹುದು
ಹೆಸರಿಲ್ಲದೊಂದು ಹೂ
ನೀರಿರದ ಚಂದ್ರನಲ್ಲೂ?

(ಚಿತ್ರ ಕೃಪೆ : ಅಂತರ್ಜಾಲ)

ಗುರುಭ್ಯೋ ನಮಃ


ಗುರುಗಳೆಂದರೆ ನಮಗೆ ನಮ್ಮ ಶಿಕ್ಷಕರು, ವಿಮರ್ಷಕರು, ಪರೀಕ್ಷರು ಮತ್ತು ಕರಿ ಬಸಜ್ಜನಂತಹ ದೇವರುಗಳು. ಸದಾ ನಮ್ಮನ್ನು ಸರಿ ದಿಕ್ಕಿನಲ್ಲೇ ಮುನ್ನಡೆಸುವ ಇವರ ನಿಸ್ವಾರ್ಥ ಪ್ರೀತಿಯು ನಮ್ಮ ಬಾಳ ಬೆಳಕು.

ಶಾಲೆಯಲಿ ಕಲಿಸಿದ ಗುರುಗಳು ನಮ್ಮ ಬದುಕಲ್ಲಿ ಎನಿತು ಮುಖ್ಯರಾಗುತ್ತಾರೋ ಅಂತೆಯೇ ನಮ್ಮ ಬದುಕಲ್ಲಿ ಪಾಠ ಕಲಿಸಿದವರೂ ನಮಗೆ ಗುರುಗಳ ಸಮಾನರೇ.

ಬದುಕಿನ ಎಷ್ಟೋ ಕಹಿ ಘಟನೆಗಳನ್ನು ಹುಟ್ಟು ಹಾಕುವ ಆಪ್ತರಿಂದ ನಾವು ಪಾಠ ಕಲಿತಿರುತ್ತೇವೆ. ಅಂತಹ ಅನುಭವವು ನಮ್ಮನ್ನು ಹೊಸ ದಿಕ್ಕಿಗೆ ಹೊಸ ಆಲೋಚನೆಗಳಿಗೆ ಮತ್ತಷ್ಟು ಹುಷಾರಾಗಿಯೂ ಉತ್ಸಹಕತೆಯಿಂದಲೂ ಮುನ್ನಡೆಸುತ್ತದೆ. ಇವರೂ ನಮಗೆ ಗುರುಗಳೇ.

ಶಾಲೆ ಕಾಲೇಜುಗಳ ಉಪಾದ್ಯಾಯ ಪ್ರಾಧ್ಯಾಪಕರ ಜೊತೆಗೆ ನಮಗೆ ಹೊರ ಜಗತ್ತಿನಲ್ಲಿ ಕೆಲಸ ಕಲಿಸುವ ನಮ್ಮನ್ನು ತಿದ್ದುವ ಎಲ್ಲರೂ ನಮಗೆ ಗುರು ಸಮಾನರೇ.

ಕ್ಯಾಮರಾ ಹೇಳಿಕೊಟ್ಟವರು, ಗಣಕಯಂತ್ರ ಕಲಿಸಿದವರೂ, ಬ್ಲಾಗ್ ಪರಿಚಯಿಸಿದವರೂ, ನನ್ನ ಕವನಗಳನ್ನು ಮುಲಾಜಿಲ್ಲದೆ ತಿದ್ದಿದವರೂ, ನನ್ನ ವಸ್ತ್ರ ವಿನ್ಯಾಸ ಮಾಡುವ ದರ್ಜಿ ಜೊತೆಗೆ ಅನುಕ್ಷಣ ನಮ್ಮನ್ನು ತಿದ್ದುವುದರಲ್ಲೇ ಮೆತ್ತಗಾಗುವ ನಮ್ಮ ಬಾಳ ಸಂಗಾತಿಗಳೂ ನಮಗೆ ಗುರುಗಳೇ.

“ಹೊರ ಜಗವ ತೋರುವರು
ಒಳ ತೋಟಿ ನೀಗುವರು
ಬುದ್ದಿ ಸಾಣೆ ಹಿಡಿವವರು
ಅವ್ಯಕ್ತ ಬೆತ್ತಗಾಹಿಗಳು
ಎನಿತೋ ನನಗೆ
ದಿನ ದಿನ ಗುರುಗಳು…”

ಅಹಂಕಾರಿ…

ಎಲ್ಲ ಹುಟ್ಟುಗಳಿಗಿಲ್ಲ
ಸಾರ್ಥಕತೆ ಅರ್ಥ ವಿಸ್ತಾರ,
ಬರೀ ಭೂ ಭಾರ
ಕೂಳು ಕತ್ತರಿಸೋ ಕಾಯ

ಸುಳ್ಳುಗಳ ಕಾಪಾಡಿ
ಸತ್ಯಗಳ ಮರೆ ಮಾಚಿ
ಭ್ರಮೆಗಳ ನಡುವೆ
ಬದುಕಿಸೋ ಜನತಂತ್ರ

ಸೆರೆ ಸಿಕ್ಕ ಉಗ್ರಗಾಮಿಯ
ಚೀಲದಲಿ ಕೊಲ್ಲು ಪಟ್ಟಿ,
ನುಸುಳಿ ಬರುತಿವೆ ಕ್ರಿಮಿ
ಭ್ರಷ್ಟವಾಯಿತು ಗಡಿ!

ಅಹಂಕಾರವೇ ನರಾಧಮ?
ಸರ್ವ ಶಕ್ತತೆಯ ಪೊಗರೇ?
ಇರಗೊಡೆಯ ಚರಾಚರಗಳ
ನಿನ್ನ ಪರಧಿಗೂ ಮೀರಿ!

ಅಖಂಡ ನೆಲ ಭಾಗ
ಈಗದು ಛಿಧ್ರ ಖಂಡ,
ಬರೀ ಗೆರೆಗಳೇ ನಡುವೆ
ಅಷ್ಟಾವಕ್ರವು ಭೂಪಟ

ಪಾಪ ಸಾಂಧ್ರತೆಯ
ಹೆಣ ಭಾರ ಹೊತ್ತೀತೆ
ತಾಯಿ ಧರಿತ್ರೀ?
ತಾಳಿಕೊಳ್ಳಳು ಕ್ರೌರ್ಯ

ಅಂಗಡಿ ಮುಚ್ಚಲಸಲು
ಪ್ರಳಯವೇ ಬರಬೇಕೇ?

(ಚಿತ್ರ ಕೃಪೆ : ಅಂತರ್ಜಾಲ)

ಸಂಯಮಿಸು ಮನವೇ…

ಎಂತ ಕತ್ತಲಲೂ ಕವಾಯತು
ಹೃದಯ ನಿಲ್ಲಿಸದು ತಾ ಪಂಪು,
ದೇಹವೋ ವಾಂಛೆಗಳ ವಸಾಹತು
ಮುನಿದು ಇಳಿಯದು ತಾ ಸಂಪು!

ನನ್ನ ಹಂಗಿಗೇ ಸಿಗದ
ಒಳ ಅಂಗಾಂಗ ಶಿಸ್ತು ಬದ್ಧ,
ಪಾಳಿ ಕೇಳದು, ಭತ್ಯೆ ಬಯಸದು
ದೂಷಿಸದು ಕೀಳು ಕೆಲಸ,
ಯಾರದೋ ಕಣ್ಗಾವಲಿಗೆ
ಮೀರಿ ಇಲ್ಲಿಲ್ಲ ಮೈಗಳ್ಳತನ

ಒಳ ಸುಳಿದ ಗ್ರಹಿಕೆಗಳನೆಲ್ಲ
ತಾಳೆ ನೋಡುತ್ತೆ ಮೆದುಳು
ಇದು ಸತ್ಯ ಇದು ಸುಳ್ಳು ಕೇಳು,
ಅದು ಕೆಡುವುದೇ ಜಾಯಮಾನ
ಬುದ್ಧಿ ಹೇಳಿದರೂ ಕೇಳದದು
ಪಾಪಿ ನಮ್ಮದೇ ಲದ್ದಿ ಮನಸು

ಕುಡಿವವನ ಯಕೃತ್ತು
ಧೂಮಪಾನದ ತಿತ್ತಿಗಳು
ತಂಬಾಕಿನವನ ಬಾಯಿ
ಕೊಳೆತು ನಾರುತ್ತೆ ಪಾಪ,
ಹಾಳು ಬಿದ್ದದ್ದು ತನ್ನದೇ
ಸ್ವಂತ ಮನೆ ಇಲ್ಲಿ

ಭಗವಂತ ಕೊಟ್ಟ ಭಿಕ್ಷೆ
ಈ ದಿವ್ಯ ಬದುಕು,
ಹಳಸಲು ಹಿಡಿಸದಿರು
ಮುಟ್ಟಾಳ ಮನುಜ!

ಗರಡಿ ಮನೆ…

ಗರಡಿ ಮನೆ ಹೊಕ್ಕು
ಮೈ ಜರಡಿ ಹಿಡಿಯಬೇಕು
ಕೊಬ್ಬು ಕರಗಿಸಿ ಈಗ
ಕಡ್ಡಿಯಾಗಲೇ ಬೇಕು
ಗರಡಿ ಮನೆ ಹೊಕ್ಕೂ…

ಹನುಮಂತರಾಯನ
ಪಾದಕೆ ಎರಗುತ
ಜಂಭ ಕಳೆಯೋ ದೈವ
ಎಂದು ಕೈಮುಗಿಯುತ,
ಭಕ್ತಿಯಿಂದಲಿ ನಮಿಸಿ
ಸಿದ್ಧನಾಗಲು ಬೇಕು…

ಮಣ್ಣ ಮೇಲೆ ಸಾಮು
ವಿದ್ಯೆ ಅರಿಯಲು ಬೇಕು,
ಪಟ್ಟುಗಳೆಲ್ಲವ ಕಲಿತು
ಜಗ ಜಟ್ಟಿಯಾಗಲು ಬೇಕು,
ಹಳೆ ಹುಲಿ ಕೆಡವಿ
ಮೀಸೆ ತಿರುವಲೇ ಬೇಕು…

ನಮ್ಮ ಕಲೆ ಕಲೆಯೋ
ಮನಸ್ಸು ಬರಲೇ ಬೇಕು,
ದೇಹ ದಂಡಿಸಿ ಮನಸ
ಹದ ಮಾಡಬೇಕು,
ದೆಂಡಿ ಕಾಯವ ಇಳಿಸಿ
ಚಂದಗೊಳಿಸಲು ಬೇಕೂ…

ಮುತ್ತತ್ತಿರಾಯನ
ಕರುಣೆಯಿದ್ದರೆ ನಾನೂ
ಪೈಲ್ವಾನನಾದೇನೂ,
ಗರಡಿ ಮನೆ ಹೊಕ್ಕೂ…

 

ಅವಳು…

ತುಂತುರು ಮಳೆ ಹನಿಗೆ
ತೊಯ್ದ ಮಲ್ಲಿಗೆ ಬಳ್ಳಿ
ನಾಚಿ ನೀರಾಗಿ ನನಗಾಗಿ
ಹನಿಯುತಿದೆ ಒಲುಮೆ

ರಂಗವಲ್ಲಿಯ ತುಂಬೆಲ್ಲ
ಒದ್ದೆ ಮಲ್ಲಿಗೆಯ ಹಾಸು
ಪಾದಕೆ ಅಂಟುವ ಪಕಳೆ
ಅವಳದೇ ಬಿರಿದ ನಗು

ಅವಳ ನಗೆಯೇ ಹಾಗೆ
ಅದು ಬಿಡದ ಜಡಿ ಮಳೆ
ಬಿಟ್ಟ ಮೇಲೂ ಹನಿವುದು
ನೆನೆಸಿ ಹಾಕುತಲಿರುವುದು

ರೂಪ ರೂಪಕೂ ಒಗ್ಗುತ
ನಿಂತು ಹರೆದು ಜಿಗಿಯುತ
ಅವಳ ರೂಪವೇ ಎಲ್ಲೆಡೆ
ಪುಳಕಗೊಳಿಸಿದೆ ನನ್ನೆದೆ

(ಚಿತ್ರ ಕೃಪೆ : ಅಂತರ್ಜಾಲ)

ಹಾರೈಕೆ…

ಹಾಲುಗೆನ್ನೆಯ ಪಾಪುವು
ತೊಟ್ಟಿಲಲೆ ನಗುತಲಿದೆ
ಯಾವ ಜನುಮದ ನೆನಪೋ
ಇಲ್ಲಿ ಅರಳುತಿದೆ ಹೀಗೆ…

ಬಲು ಕೆಟ್ಟ ಪ್ರಪಂಚವು
ಹೊರಗೆ ಸಮ್ಮಿಶ್ರ ಸರ್ಕಾರ
ಒಳ್ಳೆಯವರೂ ಸಮ ಪ್ರಮಾಣ,
ಕಳೆ ಕಿತ್ತು ಬೆಳೆ ತೆಗೆಯೋ
ವಿದ್ಯೆ ಸಿದ್ಧಿಸಬೇಕು ನಿನಗೆ

ಮೊದಲು ಮಾನವನಾಗು
ಮನೆಯವರಿಗೆ ಹೊಟ್ಟೆ ತುಂಬು,
ಗಾಣದೆತ್ತಿನ ಹಾಗೆ ದುಡಿ
ಮನೆ ಕಟ್ಟು, ಕೊಳ್ಳು ಬಂಗಾರ,
ಜೊತೆ ಜೊತೆಗೆ ನಗುವ ಕಲಿ
ಉಲಿಯಲಿ ಸಾಮಜ ವರಗಮನ…

ಅಳುವೆಡೆ ಅತ್ತು ಬಿಡು
ನಗುವಾಗ ಮನ ಬಿಚ್ಚಿಯೇ ನಗು,
ನಿನ್ನಂತೆ ನೀನಾಗು ಕೊನೆಗೆ…

ಬೆನ್ನುಡಿ…

ಸೋತವನಿಗೆ ಗೊತ್ತು
ಸೋತವನ ಕಹಿ,
ಹೊರಗೆ ಲೊಚಗುಟ್ಟುವ
ಉಪದೇಶಾಮೃಕೋ
ಮನದಲೇ ಚಿತೆ ಒಟ್ಟಿ
ಬೆಂಕಿ ಇಟ್ಟು ಬಿಡಿ…

ಗೆದ್ದೆತ್ತು ಉಬ್ಬಿಸುತ್ತದೆ ಎದೆ
ಜಗಕೆ ತೋರಲಹಮು,
ಸೋತವನೂ ಉಬ್ಬಿಸುತ್ತಾನೆದೆ
ತುಂಬಲಷ್ಟೇ ಉಸಿರ ತಿತ್ತಿ!

ಅಸಡ್ಡೆಯು ಸಹಿಸಲಸದಳ…

ದೂರವಾದವರೆಲ್ಲ
ಕಳೆದು ಕೊಂಡರು ಪಾಪ
ನಿಜ ಪ್ರೀತಿಯ ಈ ಒರತೆ,
ಕೃತಜ್ಞತೆಗೂ ಗೆಳೆಯ
ಕೃತಘ್ನತೆಗೂ ಅಲಲಾ
ಅಕ್ಷರವೇ ಬದಲು!

ಸಾಲ ಕೇಳುವನೋ
ಕೆಲಸ ಕೇಳುವನೋ
ಬಿದ್ದನಲ್ಲ ಹೆಗಲ ಮೇಲೆ!
ಕರೆಯೂ ಖರ್ಚಿನ ಬಾಬ್ತು,
ಹೇಳಲೊಲ್ಲರು ತಾವು
ನಗುವಿಗೂ ನಿಖರ ಬೆಲೆ

ಕಲಿಯ ಬೇಕಿದೆ ನಾನೂ
ಮನುಜ ನಿಜ ವರ್ಣ,
ಕೆಲವರಾದರೂ ಉಣಿಸಿದರು
ಸೋಲಲೂ ಗೆಲ್ಲವನಾಮೃತ
ಬೆನ್ನಿಗಾಸರೆ ನಿಂತ ಜನ
ದೇವರಿಗವರೇ ಸಮಾನ…

(ಚಿತ್ರ ಕೃಪೆ : ಅಂತರ್ಜಾಲ)

ತಿರಂಗೀ…

ವ್ಯಾಧಿಗ್ರಸ್ತವು ನರನಾಡಿ
ಬರಿಯ ಕಳೇವರ ದೇಹವೀಗ
ಪೊಳ್ಳು ಬದುಕುತಿದೆ ನನ್ನ ದೇಶ…

ಇಲ್ಲಿ ಹಾರಲು ಪತಾಕೆಗೂ
ಗಾಳಿ ತಿವಿತವದಿಲ್ಲ
ಕಡೆದ ಕಾಡುಗಳಿಂದ ಬೀಸದು
ಮಂದ ಮಾರುತವಂತೂ
ಮುನಿದಿದೆ ಮುಂಗಾರೂ…

ಕೇಸರಿಯು ಬಣ್ಣಗೆಟ್ಟಿದೆ
ಬಿಳಿಯು ಅನುಮಾನಾಸ್ಪದ
ಹಸಿರಂತು ಬರಿಯ ಕನಸ್ಸು,
ಗಟ್ಟಿಯೊಂದೇ ನಡು ಬೀದಿಯಲಿ
ನೆಟ್ಟ ಒಬ್ಬಂಟಿ ಕಂಭ!

ಬಿತ್ತಿದ ಬೇವನೇ ನೆಚ್ಚಿ
ಬೆಳೆದೀತೆಲ್ಲಿ ಕಬ್ಬು ಜಲ್ಲೇ?
ಮೆರೆಸು ಉಮೇದಿಗೆ ಬಿದ್ದು
ಮರೆತ ಬೇರುಗಳೆಷ್ಟು
ಉತ್ತರಿಸಲಾರವು ಪಠ್ಯಗಳು!

ಈಗೀಗ ನೆನಪು
ನಿಂಬೆ ಹುಳಿ ಮತ್ತು ಬೂಂದಿ ಕಾಳು,
ದ್ವನಿ ಮುದ್ರಿತ ತಟ್ಟೆಯ
ಕೊರಳಲಿ ರಾಷ್ಟ್ರಗೀತೆ…

ಅಪ್ಪ…

ಪಿ.ಎನ್. ನಾರಣಯ್ಯ ಶೆಟ್ಟಿ

ಈ ಗೋಕುಲಾಷ್ಟಮಿಗೆ ನನ್ನ ತಂದೆಯವರು ತೀರಿಕೊಂಡು ೪೦ ವರ್ಷಗಳಾಯಿತು. ವರ್ಷಕ್ಕೊಂದು ವಿಶೇಷವೆಂಬಂತೆ ನಾವು  ಅಣ್ಣ ತಮ್ಮಂದಿರು ಮಲ್ಲೇಶ್ವರಂ ವೈದಿಕ ಭವನದಲ್ಲಿ ತಿಥಿ ನೆರವೇರಿಸುತ್ತೇವೆ. ನಾವು ಒಟ್ಟು ಏಳು ಜನ ಗಂಡು ಮಕ್ಕಳು.

ಅಪ್ಪ ಬದುಕಿದ್ದರೇ ಈಗ ಅವರಿಗೆ ಭರ್ತಿ ೧೦೦ ವರ್ಷ.

ನಾನು ಮೂರು ವರ್ಷ ಮಗುವಾಗಿದ್ದಾಗ ನಮ್ಮ ತಂದೆ ತೀರಿಕೊಂಡರು. ಆದ್ದರಿಂದ ಅವರು ರೂಪು, ತಾಕು, ದನಿ ಮತ್ತು ಕೋಪಗಳು ನನಗೆ ನೆನಪಿಲ್ಲ.

ನಮ್ಮ ಹಳ್ಳಿ ಚಿಕ್ಕಬಳ್ಳಾಪುರ ಜಿಲ್ಲೆ, ಗೌರಿಬಿದನೂರು ತಾಲ್ಲೂಕು ವಾಟದಹೊಸಹಳ್ಳಿ. ಅದು ಸುತ್ತ ೧೬ ಪುಟ್ಟ ಹಳ್ಳಿಗಳಿಗೆ ದೊಡ್ಡ ಹಳ್ಳಿ. ನಮ್ಮಪ್ಪ ಅಲ್ಲಿ ಬಟ್ಟೆ ಅಂಗಡಿ ನಡೆಸುತ್ತಿದ್ದರು. ಜೊತೆಗೆ ಕೃಷಿಯೂ ಸಹ. ಮನೆ ಕೊಟ್ಟಿಗೆಯಲ್ಲಿ ಹಸು ಕರುಗಳು. ಗಾರೆಯಿಂದ ಕಟ್ಟಿದ ಉದ್ದೋ ಉದ್ದದ ತಾರಸೀ ಮಹಡಿ ಮನೆ. ಸಾಕಷ್ಟು ಸ್ಥಿತಿವಂತ, ಗೌರವಯುತ ಕುಟುಂಬ.

ಇಡೀ ಹಳ್ಳಿಗೆ ನಮ್ಮದೇ ಸ್ವಂತ ಪಾಯಖಾನೆ ಇದ್ದ ಮನೆ! ನಮ್ಮಪ್ಪ ಹೊಸತೇನನ್ನೋ ಯೋಚಿಸುತ್ತಿದ್ದ ಹರಿಕಾರ. ಈಗಲೂ ಹಳೇ ತಲೆಮಾರಿನ ಸುತ್ತಲಿನ ಹಳ್ಳಿ ಮಂದಿಗೆ ನಮ್ಮಪ್ಪ ಬಹು ಚಿರಪರಿಚಿತ.

ಆಗೆಲ್ಲ ವಿದ್ಯುಚ್ಛಕ್ತಿಯನ್ನೂ ಗುತ್ತಿಗೆಗೆ ತರುತ್ತಿದ್ದ ಕಾಲ, ಅಪ್ಪನೂ ವಿದ್ಯುತ್ ಗುತ್ತಿಗೆದಾರ. ಅವರು ಜೈಪುರದವರೆಗೂ ಹೋಗಿ ಒಂದು ಸುಂದರ ಬಿಳಿ ಅಮೃತ ಶಿಲೆಯ ಕನ್ಯಕಾಪರಮೇಶ್ವರಿ ವಿಗ್ರಹ ತಂದು ಪ್ರತಿಷ್ಠಾಪಿಸಿದ್ದಾರೆ. ಆನಂತರ ನಮ್ಮ ಅಣ್ಣಂದಿರು ತಿಮ್ಮಪ್ಪನನ್ನು ಪ್ರತಿಷ್ಠಾಪಿಸಿದ್ದಾರೆ.   

ಆ ಕಾಲದಲ್ಲಿ ನಮ್ಮಪ್ಪ ಅಂಗಡಿಗೆ ಬಟ್ಟೆ ಕೊಳ್ಳಲು ಜೈಪುರ, ಅಹಮದಾಬಾದ್ ಮತ್ತು ಉತ್ತರ ಭಾರತವೆಲ್ಲ ಓಡಾಡುತ್ತಿದ್ದದ್ದು ಈಗಲೂ ನಮ್ಮ ತಾಯಿ ನೆನೆಯುತ್ತಾರೆ. ನಮ್ಮಪ್ಪ ಗುಡಿಯಾತ್ತಮ್ ಬೀಡಿ ಸೇದುತ್ತಿದ್ದರಂತೆ.

ಬರೀ ಗಂಡು ಸಂತಾನವೇ ಇದ್ದ ಮನೆಯಲ್ಲಿ ನಮ್ಮಪ್ಪ ನನಗೆ ಲಂಗ ಜಾಕೆಟ್ ಹಾಕಿ, ಇಜ್ಜಡೆಗೆ ಹೂವು ಮುಡಿಸಿ, ಗೆಜ್ಜೆ ಹಾಕಿ ಕೈ ಹಿಡಿದು ನಿಲ್ಲಿಸಿದರೆ ನಿಲ್ಲಿಸಿದರೆ ಥಕಥೈ ಎಂದು ಕುಣಿಯುತ್ತಿದ್ದೆ ಅಂತ ನಮ್ಮ ಚಿಕ್ಕಮ್ಮನ ಮಗಳು ಈಗಲೂ ಹೇಳುತ್ತಾಳೆ.

ಅಪ್ಪ ತೀರಿಕೊಂಡ ನಂತರ ಅಣ್ಣಂದಿರು ನನಗೆ ಅಪ್ಪನ ನೆನಪೇ ಬಾರದಂತೆ ಮುದ್ದಾಗಿ ಬೆಳೆಸಿದರು. ಅಂತೆಯೇ ನಮ್ಮ ಅತ್ತಿಗೆಯರೂ ಸಹ.

ವಾರ್ಷಿಕ ವೈದಿಕವೂ ತೀರಿಕೊಂಡವರನ್ನು ನೆನೆಪಿಗೆ ತರುವ ಒಂದು ನೆಪವೇ…

 

ಶಾಪಗ್ರಸ್ತ…

ಗೋಮಾತೆಯನೇ ಕೇಳಿದೆ
ತಾಯೇ ಎನಿತು ದೇವರುಗಳೋ
ನಿನ್ನೊಳಗೆ, ಹೇಳಿ ನೋಡು…

ಇಲ್ಲೊಂದು ಶಾಪಗ್ರಸ್ತನು
ಎಡಗಣ್ಣ ಮುಚ್ಚಿ ಬಲಗಣ್ಣ
ತೆರೆದಿಟ್ಟು ಧ್ಯಾನಸ್ಥನು,
ಕ್ಯಾಮರಾ ತಾಕಿಗೆ ಕಾದ
ಪಾಪ ಅಹಲ್ಯೆಯಂತವನು

ತೆರೆದ ಬಲಗಣ್ಣು ಹುಡುಕುತ್ತೆ
ಕ್ಯಾಮರದ ಒಳ ಹೊಕ್ಕು
ಚೌಕಟ್ಟಿನೊಳು ಮೂರ್ತ ಭಾವ,
ಮತ್ತೆ ಸಂಯೋಜಿಸ ಬೇಕು ಹರಿವು
ತೀಡಬೇಕು ಒರೆಗೆ ಅರಿವು

ನೂರಾರು ದೈವಗಳಲೊಬ್ಬ
ಚಡಪಡಿಕೆಗೆ ಮರುಗಿ ಕನಿಕರಿಸಿ
ಕ್ಯಾಮರಾ ತಾಕಿಸಿದರೆ ಸಾಕು,
ಅರೆ ಸತ್ತ ಛಾಯಾಗ್ರಾಹಕನಿಗೆ
ಮತ್ತೆ ಜೀವ ಸಂಚಲನ…

ಡಾ|| ರಾಜ್…

ಅಭಿಮಾನಿಗಳ ಕಣ್ಮಣಿ ಅಣ್ಣಾವ್ರು ನಿರಂತರವಾಗಿ ಪಾತ್ರದಿಂದ ಪಾತ್ರಕ್ಕೆ ಪರಕಾಯ ಪ್ರವೇಶ ಮಾಡುತ್ತಾ ಹೋದರು. ಅದು ಅವರ ಶಕ್ತಿಯು ಆಗಿತ್ತು. ನಟನೆಯಲ್ಲಿ ಶಿಸ್ತು, ಸಂಯಮ ಮತ್ತು ಗ್ರಹಿಕೆ ಅವರಿಗೆ ಒಲಿದು ಬಂದಿತ್ತು. ಯಾವುದಕ್ಕೂ ಬ್ರಾಂಡ್ ಆಗದೆ ಬಾಂಡ್ ನಿಂದ ಪಾಂಡುರಂಗನವರೆಗೂ ಜೀವತುಂಬುತ್ತಾ ಹೋದರು.

ಪ್ರಾಯಶಃ ಭಾರತೀಯ ಚಿತ್ರರಂಗದಲ್ಲಿ ಇಷ್ಟೊಂದು ವೈವಿಧ್ಯಮಯ ಪಾತ್ರಗಳಲ್ಲಿ ಕಾಣಿಸಿಕೊಂಡ ನಟ ಇನ್ನೊಬ್ಬರು ಖಂಡಿತ ಇರಲಾರರು. ರಾಕ್ಷಸ, ದೇವರು, ರಾಜ, ಅಮಾಯಕ, ಅಮರ ಪ್ರೇಮಿ, ತ್ಯಾಗಿ, ರೈತ, ಬಾಂಡ್, ಪೊಲೀಸ್, ಕಳ್ಳ, ಅಂಧ, ಹಳ್ಳಿ ಗಮಾರ, ನ್ಯಾಯವಾದಿ, ಇಂಗ್ಲೀಷ್ ಪ್ರೊಫೇಸರ್, ಮನೋರೋಗಿ ಹಂತಕ, ಸಾಮಾನ್ಯರಲ್ಲಿ ಸಾಮಾನ್ಯ, ಪತ್ರಕರ್ತ, ಜಗಳಗಂಟ, ವಯೋವೃದ್ಧ, ಹೀಗೆ! ಪಟ್ಟಿ ಮಾಡುತ್ತ ಕೂತರೆ ನೂರಾರು.

ಸಾಮಾಜಿಕ, ಪೌರಾಣಿಕ, ಕಾಲ್ಪನಿಕ, ಐತಿಹಾಸಿಕ ಯಾವ ಪ್ರಕಾರದಲ್ಲೂ ಅಲ್ಲಿ ರಾಜ್ ಪ್ರಯೋಗಶೀಲ.

ತೆರೆಯ ಮೇಲೆ ಯಾವತ್ತಿಗೂ ಧೂಮಪಾನ, ಮದ್ಯಪಾನ, ಸ್ತ್ರೀ ಪೀಡಕನಂತಹ ಪ್ರಚೋದನಕಾರಿ ಪಾತ್ರಗಳನ್ನು ನಟಿಸದ. ಬೇರೆ ಭಾಷೆಗಳಲ್ಲಿ ಹಣದ ಹೊಳೆಯೇ ಕರೆದರೂ ಕನ್ನಡ ಚಿತ್ರ ರಂಗವನ್ನು ಬಿಟ್ಟು ಹೋಗದ. ಕನ್ನಡ ಕೆಲಸವೆಂದರೆ ಉಸಿರೆಂದು ಹೋರಾಟಕ್ಕೆ ಧುಮುಕುತ್ತಿದ್ದ ಅವರ ಅಖಂಡ ಕನ್ನಡ ಪ್ರೇಮವೇ ನಮಗೆಲ್ಲ ಮಾದರಿ.

೧೯೯೨ ರಲ್ಲಿ ಅವರಿಗೆ “ನಾದಮಯ ಈ ಲೋಕವೆಲ್ಲ” (ಚಿತ್ರ: ಜೀವನ ಚೈತ್ರ) ಕ್ಕೆ ಹಿನ್ನಲೆ ಗಾಯನಕ್ಕೆ ರಾಷ್ಟ್ರಪ್ರಶಸ್ತಿ ಬಂತು. ೧೦ ಬಾರಿ ಫಿಲಿಂ ಫೇರ್ ಪ್ರಶಸ್ತಿ, ೯ ಬಾರಿ ನಾಯಕ ನಟ ನೆಗಾಗಿ ರಾಜ್ಯ ಪ್ರಶಸ್ತಿ ಹೀಗೆ ಅವರಿಗೆ ಒಲಿದು ಬಂದ ಪ್ರಶಸ್ತಿಗಳ ಮಹಾ ಪೂರವೇ ಇದೆ.

ಹಿಂದಿಯ ಮೇರು ಗಾಯಕ ಕಿಶೋರ್ ಕುಮಾರ್ ತಮ್ಮ ವೃತ್ತಿ ಬದುಕಿನಲ್ಲಿ ಕೆಲವು ಚಿತ್ರಗಳಲ್ಲಿ ನಟಿಸಿದ್ದೂ ಉಂಟು ಹಾಗೆಯೇ ತೆಲುಗಿನ ಡಾ|| ಭಾನುಮತಿ ರಾಮಕೃಷ್ಣ, ನಮ್ಮ ಅಭಿನವ ಭಾರ್ಗವ ಡಾ|| ವಿಷ್ಣುವರ್ಧನ್ ತಮ್ಮ ಸಿನಿಮಾಗಳಿಗಾಗಿ ಒಂದೆರಡು ಹಾಡು ಹಾಡಿದ್ದೂ ಇದ್ದೆ. ಆದರೆ ತಮ್ಮ ನಟನೆಯ ಮೂಲಕ ಜನಮನ ಗೆದ್ದ ರಾಜಣ್ಣ ಮತ್ತೊಮ್ಮೆ ಅತ್ಯುತ್ತಮ ಗಾಯಕರಾಗಿ ನಮ್ಮ ಮಾನಸದಲ್ಲಿ ನಿಂತಿದ್ದಾರೆ. ಅವರು ತಮ್ಮ ಸಿನಿಮಾಗಳಿಗೆ, ಇತರ ನಟರ ಸಿನಿಮಾಗಳಿಗೆ, ಭಾವಗೀತೆ ಮತ್ತು ಭಕ್ತಿ ಗೀತೆ ಎಂದು ಹಾಡಿದ ನೂರಾರು ಹಾಡುಗಳು ಇಂದಿಗೂ ನಾವು ಗುನುಗುನಿಸುತ್ತೇವೆ.

ಕೆಳ ಮನೆಯಿಂದ ತಾರಕಸ್ಥಾಯಿ, ಶುದ್ಧ ಶಾಸ್ತ್ರೀಯದಿಂದ ಪಾಶ್ಚಿಮಾತ್ಯ, ಮೆಲೋಡಿಯಿಂದ ಫಾಸ್ಟ್ ಬೀಟ್, ಯಾವುದಕ್ಕಾದರೂ ಅವರು ಸೈ! ಅದಕ್ಕೇ ಇಂದಿಗೂ ಪದ್ಮಭೂಷಣ, ದಾದಾ ಸಾಬ್ ಪಾಲ್ಕೆ ಪ್ರಶಸ್ತಿ ವಿಜೇತ, ಗಾನಗಂಧರ್ವ ಡಾ|| ರಾಜ್ ಕುಮಾರ್ ಅವರ ಹಾಡುಗಳೆಂದರೆ: “ಬಿಸಿ ಬಿಸಿ ಕಜ್ಜಾಯ, ರುಚಿ ರುಚಿ ಕಜ್ಜಾಯ, ತಗೋ ತಿನ್ನು ತಗೋ ತಿನ್ನು”…

ರೇಖೆಗಳೆರಡು…

ಅವಳ ಪ್ರೀತಿಗೆ ಕಾದ
ಕಾಡಿ ಬೇಡಿಯೇ ಪಡೆದ
ಅವಳೂ ಕರಗಿದಳು

ಉರಿದೇ ಉರಿಯಿತು
ಹೊಸ ತೈಲಕೆ ಧಗಧಗಿಸಿ
ದಾಂಪತ್ಯ ಜ್ಯೋತಿ

ವರ್ತನೆಗೆ ಬಿದ್ದು ಹಳಸಿ
ಪಕ್ವವಾದಳು ಆಕೆ
ಅವನೋ ಮರಗಟ್ಟಿದ!

ಒಲುಮೆ ಹನಿ ನೀರಾವರಿ
ಪಡಖಾನೆ ತಲುಪಲೇ ಇಲ್ಲ
ನಿಟ್ಟುಸಿರೇ ಪೂರ ಮನೆಗೆ

ಬೆನ್ನುಗಳ ಸಂವಾದ
ಬೇರ್ಪಡುವ ನಿರ್ಧಾರ
ಸಡಲಿಸಲು ತಂತುವೊಂದು

ಬಿಂದುಗಳ ಎಳೆ ತಂದು
ಅರಳಿಸಲು ನಗು ಬುಗ್ಗೆ
ಕಂದ ಬಂತೊಂದು…

(ಚಿತ್ರ ಕೃಪೆ : ಅಂತರ್ಜಾಲ)

ಗುಬ್ಬಚ್ಚಿಯ ಗೂಡು -2

ಆಗೆಲ್ಲ ನಾನು ಎಷ್ಟು ಸೋಮಾರಿಯಾಗಿದ್ದೆ ಅಂದರೆ ಹತ್ತಿರದ ಸಿಗರೇಟ್ ಅಂಗಡಿಗೂ ಸ್ಕೂಟರ್ ಬಳಸುತ್ತಿದ್ದೆ. ಬಹುಶಃ ಹೊಸ ಸ್ಕೂಟರಿನಲ್ಲಿ ಅಲೆಯುವ ಹುಚ್ಚೂ ಇದ್ದಿರಬಹುದು ಅಂತ ಈಗ ಅನಿಸುತ್ತದೆ.

ಅಲ್ಲಿಯವರೆಗೂ ಬಡತನವನ್ನೇ ನೋಡಿದ್ದ ನನಗೆ, ಈ ಗುಬ್ಬಚ್ಚಿಯ ಗೂಡು ಇನ್ನಿಲ್ಲದ ಸ್ವಾತಂತ್ರ್ಯವನ್ನು ತಂದುಕೊಟ್ಟಿತ್ತು. ಒಟ್ಟೊಟ್ಟಿಗೆ ಐದಾರು ಹೊಸ ಜೊತೆ ಬಟ್ಟೆ ತಂದು ಬಿಡುತ್ತಿದ್ದೆ. ಅವನ್ನೆಲ್ಲ ಕೊಠಡಿಯ ನಡುವೆ ಹಗ್ಗ ಕಟ್ಟಿ ನೇತು ಹಾಕುತ್ತಿದ್ದೆ. ಅಷ್ಟು ಬಟ್ಟೆ ಇಟ್ಟುಕೊಳ್ಳಲು ನನಗೆ ಸರಿಯಾದ ಕಪಾಟೂ ಇರಲಿಲ್ಲ. ಬಂದ ಗೆಳೆಯರೆಲ್ಲ ಒಳ್ಳೆ ಲಾಂಡ್ರಿ ಮಾಡಿಟ್ಟಿದ್ದಿಯಲ್ಲೋ ಅಂತ ರೇಗಿಸುತ್ತಿದ್ದೂ ಉಂಟು.

ನಮ್ಮ ಕಟ್ಟಡದಲ್ಲಿ ಕುಡಿಯುವ ನೀರಿಗೇ ತತ್ವಾರ, ಇದರ ಮೇಲೆ ಬಟ್ಟೆ ಒಗೆಯಲು ನೀರೆಲ್ಲಿ ತರುವುದು? ಸರಿ, ಹತ್ತಿರದ ಲಾಂಡ್ರಿಯವನು ನನ್ನ ಬಟ್ಟೆ ಒಗೆದು ಒಗೆದೇ ಉದ್ಧಾರವಾಗಿ ಹೋದ!

ನನ್ನ ಮದುವೆಯಾಗಿ ನನ್ನ ಹೆಂಡತಿ ಆ ಪುಟ್ಟ ಕೊಠಡಿಗೆ ಬಂದಾಗ, ನಾನು ಒಂದಷ್ಟು ಬಟ್ಟೆ ಒಟ್ಟಿಗೆ ಅವಳಿಗೆ ಒಗಯಲಿಕ್ಕೆ ಹಾಕಿದೆ. ಪುರುಷಾಹಂಕಾರ ನೋಡಿ, ಹತ್ತು ಜೊತೆಗಳ ಮೇಲೆಯೇ ಪಾಪ ಅವಳೂ ಒಗೆದುಕೊಟ್ಟಳು. ನನ್ನ ಜೀನ್ಸ್ ಪ್ಯಾಂಟುಗಳಿಗೆ ನೀರು ಬಿದ್ದರೆ ಎತ್ತುವುದೇ ಕಷ್ಟ, ಪಾಪ ಈಗಲೂ ಅವನ್ನೆಲ್ಲ ಹೇಗೆ ಒಗೆಯುತ್ತಾಳೋ ಆಕೆ?

ಅವೆಲ್ಲ ಹೊತ್ತುಕೊಂಡು ನಾನು ಒಣಗಿ ಹಾಕಲು ತಾರಸಿ ಏರಿದೆ. ಅಲ್ಲಿ  ಹಗ್ಗವಾಗಲೀ, ತಂತಿಯಾಗಲಿ ಇರಲಿಲ್ಲ. ಸರಿ ನಾನೇ ಒಂದು ನೈಲಾನ್ ಹಗ್ಗ ತಂದು ಈ ಮೂಲೆಯ ಪಿಲ್ಲರಿಗೆ ಕಟ್ಟಿದೆ. ಮತ್ತೊಂದು ಕೊನೆ ಎಲ್ಲಿ ಕಟ್ಟೋಣ ಅಂತ ನೋಡಿದಾಗ  ಹಿಂದಿನ ರೂಂನಲ್ಲಿದ್ದ ಪಾರಿವಾಳಗಳನ್ನು ಸಾಕುತ್ತಿದ್ದ ಹಾಷೀಂ ಭಾಯ್ ಅವರು ತಮ್ಮ ಹಕ್ಕಿಗಳಿಗಾಗಿ ನಿರ್ಮಿಸಿದ್ದ ಹಕ್ಕಿಯ ಚಪ್ಪರ ಕಾಣಿಸಿತು. ಅದನ್ನು ಅವರು ಖಾಲಿ ಬ್ಯಾರಲಿನಲ್ಲಿ ಮಣ್ಣು ತುಂಬಿ ಇಟ್ಟಿದ್ದರು. ಹಗ್ಗದ ಇನ್ನೊಂದು ತುದಿ ಅಲ್ಲಿಗೆ ಕಟ್ಟಿದೆ.

ಒಂದೊಂದಾಗಿ ಬಟ್ಟೆ ಒಣಹಾಕುತ್ತಾ ಬಂದೆ, ಒದ್ದೆ ಬಟ್ಟೆಗಳ ಯಮ ಭಾರಕ್ಕೆ ಹಕ್ಕಿ ಚಪ್ಪರವೂ ಜಗ್ಗುತ್ತಿತ್ತು. ಆ ಕಡೆ ನನ್ನ ಗಮನವೇ ಇರಲಿಲ್ಲ. ಪೂರ್ತಿ ಬಟ್ಟೆ ಒಣ ಹಾಕುವಷ್ಟರಲ್ಲಿ ಧೊಪ್ ಅಂತ ಒಂದು ಸದ್ದು ಕೇಳಿಸಿತು. ಹಕ್ಕಿಯ ಚಪ್ಪರ ನನ್ನ ಕಡೆಯೇ ಜಗ್ಗಿ ನನ್ನ ಮೇಲೆ ಬಿದ್ದಿತ್ತು. ಅದರ ಒಂದು ಚೂಪಾದ ಕೊನೆ ನನ್ನ ಕುತ್ತಿಗೆಗೆ ತಾಕಿ ದೊಡ್ಡ ಗಾಯವೇ ಆಗಿಹೋಯ್ತು.

ಇದ್ದ ಬಟ್ಟೆಗಳನ್ನೆಲ್ಲ ತಾರಸಿಯಲ್ಲೇ ಬಿಟ್ಟವನೇ, ಹೌಹಾರುತ್ತಾ ಗುಬ್ಬಚ್ಚಿ ಗೂಡಿಗೆ ಬಂದೆ. ತೊಟ್ಟ ಬಟ್ಟೆಯೆಲ್ಲ ರಕ್ತ ಸಿಕ್ತ. ನನ್ನವಳು ಮೂರ್ಛೆ ಹೋಗುವುದೊಂದು ಬಾಕಿ!

 

ನನ್ನ ಹೆಂಡತಿಯನ್ನು ಕೂರಿಸಿಕೊಂಡು ಅದೇ ಹೊಸ ಸ್ಕೂಟರಿನಲ್ಲಿ ನನ್ನ ಅಣ್ಣ ವೈದ್ಯರಾಗಿದ್ದ ನರ್ಸಿಂಗ್ ಹೋಂಗೆ ಓಡಿದೆ.

ಆಗ ಆದ ದೊಡ್ಡ ಗಾಯದ ಗುರುತು ಇಷ್ಟು ವರ್ಷಗಳ ನಂತರವೂ ನನ್ನ ಪುರುಷಾಹಾಂಕಾರದ ಕುರುಹಾಗಿ ನನ್ನ ಕುತ್ತಿಗೆಯಲ್ಲಿದೆ.

ಗುಬ್ಬಚ್ಚಿಯ ಗೂಡು -1

ನಾನು ಮದುವೆಗೆ ಮುಂಚೆ ಮಲ್ಲೇಶ್ವರಂ ಸರ್ಕಲ್ ಹತ್ತಿರ, ನನ್ನ ನೆಚ್ಚಿನ ನಟಿ ಸುಧಾರಾಣಿಯವರ ಮನೆ ಪಕ್ಕದಲ್ಲಿ ಚಿಕ್ಕ ರೂಮಿನಲ್ಲಿದ್ದೆ.

ಅದಕ್ಕೆ ನಾನು ಇಟ್ಟ ಹೆಸರು “ಗುಬ್ಬಚ್ಚಿಯ ಗೂಡು” ಅಂತ.

ಇದೇ ಗುಬ್ಬಚ್ಚಿ ಗೂಡಿನಲ್ಲಿ ರಾಮ ಸೀತೆ ಅಂತ ಎರಡು ಗಿಣಿಗಳೂ, ಚಿನ್ನಿ ಅಂತ ಒಂದು ಮುದ್ದಾದ ಪಾಮೋರಿಯನ್ ನಾಯಿ ಹಾಗೂ ಹೆಸರು ಗೊತ್ತಿರದ ಜಿರಲೆ ಪರಳೆಗಳನ್ನೂ ಸಾಕಿದ್ದೆ. ಮೊನಲಿಸಾ ಮತ್ತು ಬರ್ಮಾ ಬಜಾರಿನ ಹಲವು ಮಾಲುಗಳು ನನ್ನ ರೂಮಿನಲ್ಲಿ ತುಂಬಿ ಹೋಗಿದ್ದವು.

ಅದು ೧೨ ರೂಮುಗಳಿದ್ದ ಮಹಡಿ, ಕೆಳಗೆ ಮನೆಯ ಓನರ್ ನಾಗಪ್ಪನವರ ಕುಟುಂಬದ ವಾಸ. ನಾಗಪ್ಪನವರು ಇಸ್ಪೀಟ್ ಹುಚ್ಚಿನ ವಯೋವೃದ್ಧ. ಆಗ ಅವರದೇ ವಯೋಮಾನದ ಮುದುಕರ ಪಡೆಯೊಂದು ಅವರ ಜೊತೆ ರಮ್ಮಿ ಆಡಲು ಬರುತ್ತಿತ್ತು.

ನೀರು ಬಿಡುವವ ಜೊತೆ ಸರಿಯಾಗಿ ವ್ಯವಹಾರ ಕುದುರಿಸದ ಮನೆ ಮಾಲಿಕನಿಂದಾಗಿ, ವಾರಕ್ಕೊಂದು ಬಾರಿ ಬೆಳಗಿನ ಜಾವಕ್ಕೆ ಸಣ್ಣದಾಗಿ ಬರುತ್ತಿದ್ದ ನೀರನ್ನೇ ಹಿಡಿದಿಟ್ಟುಕೊಳ್ಳುತ್ತಿದ್ದೆ. ಮಿಕ್ಕದಿನ ರಸ್ತೆ ಮೂಲೆಯ ಕೈ ಪಂಪೇ ಗತಿ!

ಇಲ್ಲಿದ್ದಾಗಲೇ ನನಗೂ ಮದುವೆಯಾಗಿ, ನನ್ನ ಮಡದಿಯನ್ನೂ ಮನೆ ತುಂಬಿಸಿಕೊಳ್ಳ ಬೇಕಾಯಿತು. ಆ ಪುಟ್ಟ ಜಾಗದಲ್ಲೇ ಪಂಪ್ ಸ್ಟೌವ್ ಇಟ್ಟುಕೊಂಡು ಸುಮಾರು ಇಪ್ಪತ್ತು ದಿನ ನನ್ನ ಮೇಲೆ ಹಲ ರೀತಿಯ ಉಪ್ಪಿಟ್ಟುಗಳನ್ನು ನನ್ನವಳು ಪ್ರಯೋಗಿಸಿದಳು! ಬರೀ ಹೋಟೆಲುಗಳಲ್ಲೇ ತಿನ್ನುತ್ತಿದ್ದ ನನಗೆ ತರೇವಾರಿ ಉಪ್ಪಿಟ್ಟುಗಳೇ ಗತಿಯಾಯಿತು.

ಒಮ್ಮೆ ನನ್ನವಳು ಜಪಾತಿ ಮಾಡಿದ್ದಳು, ಅದನ್ನು ನಾವು ಆನಂತರ ಕುಕ್ಕರಿನಲ್ಲಿ ಬೇಯಿಸಿಯೇ ತಿನ್ನಬೇಕಾಯಿತು. ಈಗ ಬಿಡಿ ನನ್ನಾಕೆ ಪಾಕ ಪ್ರವೀಣೆ. ನನ್ನ ಭೀಮಾಕಾರದ ಹೊಟ್ಟೆ ನೋಡಿದರೆ ನಿಮಗೆ ಅರ್ಥವಾದೀತು ಅಲ್ವೇ?

ಮದುವೆಗೂ ಮುಂಚೆ ಗೋಡೆಯನ್ನು ಅಲಂಕರಿಸಿದ್ದ ಸಮಂತಾಫಾಕ್ಸ್, ರಾಣಿ ಮುಖರ್ಜಿ ಮರೆಯಾಗಿ, ರಾಘವೇಂದ್ರ ಸ್ವಾಮಿ ಮತ್ತು ತಿರುಪತಿ ವೆಂಕಟೇಶ್ವರ ರಾರಾಜಿಸತೊಡಗಿದರು. ಸಿಗರೇಟ್ ಹೊಗೆಯ ಜಾಗದಲ್ಲಿ ಘಮಘಮ ಊದು ಬತ್ತಿ.

ನಮಗೇ ಜಾಗವಿರದ ಆ ಪುಟ್ಟ ಕೊಠಡಿಯಲ್ಲಿ ಪ್ರೀತಿಯು ಮಾತ್ರ ಬೆಟ್ಟದಷ್ಟಿತ್ತು. ಯಾಕೋ ನನ್ನ ಬದುಕಿನ ಈ ಪುಟ ಈವತ್ತು ತೀವ್ರವಾಗಿ ಕಾಡಿತು.

ಎನ್ನ ಎಳೆಗರುವೇ…

ಮರೆತು ಹೋದೆಯೋ ನೀನು
ಎನ್ನ ಎಳೆಗರುವೇ
ಸಂಸಾರ ಚೆರಿಗೆ ಒಬ್ಬಂಟಿ
ನಾನಿಲ್ಲಿ ತುಂಬುತಲಿರುವೇ

ನನ್ನ ಮಡಿಲಲಿ ಆಡೋ
ಕಂದ ನೀನೇನಲ್ಲ ಇಂದು
ಎನಿತು ಬೆಳೆದರೂ ಖುಷಿಯೇ
ಕರುಳ ಕಣ್ಣಿಗೆ ಕರುವೇ

ನೊಗವು ಹೊರುತೀ ಎಂದು
ಪೆದ್ದಿ ಕಾಯುತಲಿದ್ದೆ
ಅಂಗಳ ಹರಕೊಂಡು ಜಿಗಿದೆ
ಬೇರ ಕತ್ತರಿಸೀ ತೊರೆದೆ

ಹೆತ್ತ ತಾಯಿಯೇ ಹೊರಗೆ
ಮಮತೆ ಬಿಕ್ಷಿಸುವಾಗ
ಮಜಲು ಕಟ್ಟುತ ಹೊರಟೇ
ಇಲ್ಲಿ ಸೂರಿಗೂ ಕೊರತೇ!

ಎನಿತು ದಿನವೋ ಹಸಿವು
ಎಂದೋ ಕಳೆದಿದೆ ಕಸುವು
ಇನ್ನೆಲ್ಲ ಜವರಾಯನಾಟ
ಕಳೆದರೆ ಸಾಕು ಜಂಜಾಟ

ಪೊರೆ ಕವಚೋ ಮುನ್ನ
ನಿನ್ನ ಕಣ್ ತುಂಬಿಕೊಂಡೇನು,
ಎತ್ತಿಕೊಟ್ಟರೆ ದುಡ್ಡು ಕಾಸು
ತೀರೀತು ಸಾಲ ಬಾಧೆ

ಈಗ ಬಂದರೆ ತುತ್ತಿಕ್ಕೇನು
ಅಪ್ಪಿ ಮುತ್ತಿಕ್ಕೇನು ಹಾಗೇ
ಮರೆತೇನು ಪಟ್ಟ ಪಾಡು,
ಸತ್ತರೇನಿದೆ ಹೇಳು ನೀನು…

(ಚಿತ್ರ ಕೃಪೆ : ಅಂತರ್ಜಾಲ)

ಹೊಗೆ ಕಾರ್ಯಕ್ರಮ…

ಚಿಲುಮೆಯ ಕಾವು
ಸುಡಬಾರದು ಕೈಯ
ಅದಕೇ ಈ ಸುತ್ತು ಬಟ್ಟೆ,
ಸುಟ್ಟರೇ ಸುಡಲಿ ತಿತ್ತಿಗಳ
ತೇಲಿಸುತ್ತೆ ಸ್ವರ್ಗಾದಪಿ
ಈ ಭಂಗೀ ಸೊಪ್ಪು!

“ತಂಬಾಕಿನ ಗಮಲೂ
ತಿಲೋತ್ತಮೆಯ ಅಮಲು;
ಸಹೋದರಾ…
ಸವಿದವನೇ ಬಲ್ಲ
ಪ್ರೀತಿಯ ಸವಿ ಬೆಲ್ಲ”
ಅಂತಾನೆ ಪಾಪಿಯೊಬ್ಬ!

ಸುತ್ತಿದರೆ ಹಸನಾದ ಬೀಡಿ
ವಿಲಾಯತಿ ಚುಟ್ಟ ಇಲ್ಲಿ ನೋಡಿ
ಶರ್ಲಾಕ್ ಹೋಮ್ಸ್ ಪೈಪು ಮೋಡಿ
ಹಾಗಂತ,
ಹುಕ್ಕಾ ಸಿಗರೇಟ್ ಸೇದ ಬೇಡಿ!

ಚಟ ಚಟ್ಟವ ಹತ್ತಿಸೀತು,
ಸೇದಿದರೆ ಧೂಮಪಾನ
ಜೊತೆಗೆ ಮದ್ಯಪಾನ
ಮನೆ ಮುಂದೆ ಹಾಕ್ತಾರೆ
ಹೊಗೆ ಜೋಪಾನ!!!

ಬದರಿನಾಥ ಪಲವಳ್ಳಿಗಾಗಿ
ಬದರಿನಾಥ ಪಲವಳ್ಳಿ
ಬರೆದುಕೊಂಡ ಶೋಕಗೀತೆ!

 

 

 

 

 

(ಚಿತ್ರ ಕೃಪೆ : ಅಂತರ್ಜಾಲ)

ಅವನಿಲ್ಲದ ಕಾಡು…

ಭೀಮನ ಅಮಾವಾಸ್ಯೆಯ ಮರುದಿನ
ಸುಪ್ರಭಾತಕೆ ತಲ್ಲಣಿಸಿತಲ್ಲ ನಾಡು,
ಹುಂಬನು ಹೊತ್ತೊಯ್ದ ಮೇರು ನಟರೂ
ನೂರೆಂಟು ದಿನ ವನವಾಸ ಪಾಡು…

ಅಸಲವನ ಕಾಡೇ ಅಭೇದ್ಯ
ಒಮ್ಮೆ ಕುರುಚಲು ಬೀಡು
ಮುಗಿಲೆತ್ತರಕೆ ಆನೆ ಹುಲ್ಲು
ನಿಬಿಡ ಮರಗಿಡ ಸಂಪತ್ತು
ಮತ್ತೆ ಬಟಾ ಬಯಲು…

ಈಗಲ್ಲಿ ನೆಲ ಬಾಂಬು ಸಿಡಿಯುವುದಿಲ್ಲ
ತುಪಾಕಿ ಮೊರೆಯುವುದಿಲ್ಲ
ಸುಳ್ಳು ಸಂಧಾನಕಾರರಿಲ್ಲ
“ಹರಹರ ಮಹಾದೇವ್” ಉದ್ಘೋಷವಿಲ್ಲ
ನಿರಮ್ಮಳವಾಗಿದೆ ಕಾಡು ಮೇಡು

ಮಡಿದ ಪೊಲೀಸರ ನಿಟ್ಟುಸಿರ
ಹೊತ್ತು ಹರಿಯುತ್ತೆ ಅದೇ ಪಾಲಾರ್,
ಘೀಳಿಟ್ಟು ಅತ್ತ ಆನೆಗಳೇ ಮುದಿಬಿದ್ದು
ಮರೆತಿವೆ ಕಳಕೊಂಡ ತಮ್ಮ ದಂತ,
ಚಿಗುರೊಡೆದು ನಳನಳಿಸಿದೆ ಶ್ರೀಗಂಧ…

ತಲೆ ಕತ್ತರಿಸಿ ಕೊಂದ ಶ್ರೀನಿವಾಸನ್
ಕಾಹು ಕೊಂದಿಟ್ಟ ಶಕೀಲ್ ಅಹಮದ್
ತಾ ಕೊಂದಿಲ್ಲವೆಂದಿದ್ದ ನಾಗಪ್ಪನಂತವರೂ
ಬದುಕಿ ಬಂದಾರೇ ನಿರ್ಧಯೀ ಹೇಳು?
ಉತ್ತರಿಸುವವನೇ ಜೀವಂತವಿಲ್ಲ…

ಕಾಡುಗಳ್ಳನವನು ಬಲು ಗುನ್ನೆಗಾರ
ಅಪಹರಣ ಅಟ್ಟಹಾಸ ಮರಸು ಬೇಟೆಯೇ
ನರ ಹಂತಕ ವೀರಪ್ಪನ್ ಜಮಾನ!
ಕಾಲಧರ್ಮಕೆ ಸಿಕ್ಕು ಅವನೇ ಸತ್ತರೂ
ಕಳ್ಳ ಗಂಟಿನ ಕುಂಭ ಬಯಲಾಗಲೊಲ್ಲ!

ಪಾಪ ಉಸಿರಾಡುತಿದೆ ಈಗೀಗ
ಆವನಿಲ್ಲದ ಕಾಡು…

(ಚಿತ್ರ ಕೃಪೆ : ಅಂತರ್ಜಾಲ)

(ಅವಧಿ ಡಾಟ್ ಕಾಂನಲ್ಲಿ ದಿನಾಂಕ: 25.07.2011 ಪ್ರಕಟಿತ) 

http://avadhimag.com/?p=58684

ಮಾನವೀಯತೆ…

“ವಯಸ್ಸಾದ ಮೇಲೆ ಯಾಕ್ರೀ ಊರು ಅಲೀತೀರ?”

ಎನ್ನುತ್ತ ಅವನು ಯಾರೋ ಕೊಸರಿಕೊಂಡ, ಕಷ್ಟ ಪಟ್ಟು ಬಸ್ಸು ಏರುತ್ತಿದ್ದ ಆ ಹಣ್ಣು ಹಣ್ಣು ಮುದುಕ ಅವನನ್ನೊಮ್ಮೆ ದಿಟ್ಟಿಸಿ ಮತ್ತೆ ಬಸ್ಸು ಏರಿದ.

ಮೊದಲೇ ಕಿಕ್ಕಿರಿದಿದ್ದ ಜನ, ಹುಡುಗಿಯರ ಪಕ್ಕದಲ್ಲಿ ಕೂತು ಆಕೆಯ ಕಿವಿಗೊಂದು ತನ್ನ ಕಿವಿಗೊಂದು ಈಯರ್ ಫೋನ್ ಸಿಕ್ಕಿಸಿಕೊಂಡು ಹಾಡು ಕೇಳುತ್ತಿದ್ದ ಹುಡುಗರಾಗಲೀ ಮುದುಕನ ಆಗಮನಕ್ಕೆ ಮಿಸುಕಾಡಲಿಲ್ಲ.

ಹೊರಗೆ ಈವತ್ತೇ ಪ್ರಳಯವೋ ಎನ್ನುವಂತೆ ಧೋ ಎಂದು ಮಳೆ ಸುರಿಯುತ್ತಿತ್ತು.

ಮೊದಲೇ ಇಕ್ಕಟ್ಟು ಮುಖ್ಯ ರಸ್ತೆಯಲ್ಲಿ, ಸಾವಿರದೊಂದು ಕಾರು ಲಾರಿಗಳ ತುಂಬಿ ಹೋಗಿದ್ದವು.

ತನ್ನ ಒಂದು ಕೈಯಲ್ಲಿ ಊರುಗೋಲು ಮತ್ತೊಂದು ಕೈಯಲ್ಲಿ ಭರ್ತಿ ತರಕಾರಿ ಬುಟ್ಟಿ ಹಿಡಿದ ಮುದುಕ ಕ್ಷಣಕ್ಕೊಮ್ಮೆ ಬಿದ್ದೇ ಹೋಗುತ್ತಿದ್ದ.

ಬಸ್ಸು ಯಾವುದರ ಪರಿವಿಲ್ಲದೆ ಬಸವನ ಹುಳುವಿನಂತೆ ಸಾಗುತ್ತಲೇ ಇತ್ತು.

ಇಲ್ಲಿ ಮುದುಕನ ಪಾಡು ಕಂಡು ಮರುಗವವರೆ ಇಲ್ಲದೇ, ಆತ ನಿಲ್ಲಲೂ ಆಗದೆ ಕೂರಲೂ ಆಗದೆ ಒದ್ದಾಡುತ್ತಲೇ ಇದ್ದ.

ಗಟ್ಟಿ ಮುಟ್ಟಾಗಿದ್ದ ದಂಡ ಪಿಂಡಗಳೆಲ್ಲ ಎದ್ದು ಸೀಟು ಕೊಡೋಣ ಎಂದು  ಅಂದುಕೊಳ್ಳಲೂ ಇಲ್ಲ.

ಮೊದಲಿಂದಲೂ ಗಮನಿಸುತ್ತ ಕೂತಿದ್ದ ವ್ಯಕ್ತಿಯೊಬ್ಬ ತನ್ನ ಎರಡು ಊರುಗೋಲುಗಳ ಸಮೇತ ಮೇಲಕ್ಕೆದ್ದು ಮುದುಕನಿಗೆ ಸೀಟುಕೊಟ್ಟ.

ತಾನು ಮೇಲಿನ ರಾಡು ಹಿಡಿದು ತೂರಾಡುತ್ತಾ ನಿಂತ.

ಎದ್ದವನಿಗೆ ಒಂದು ಕಾಲು ಮುಕ್ಕಾಲಿದ್ದರೆ. ಎರಡನೆ ಕಾಲಿನ ಅವಶೇಷವೂ ಇರಲಿಲ್ಲ.

ಅವನು ಕುಂಟನಾಗಿದ್ದ!!!

ಚಿತ್ರಾಂಕಣ -2

ಮರೆತ ಹಾದಿಯ ಮಣ್ಣಲಿ
ಅಚ್ಚೇ ಮೂಡದ
ನನ್ನದಲ್ಲದ ಹೆಜ್ಜೆ ಗುರುತು….

ಚಿತ್ರಾಂಕಣ – 1

ನೀಳ ಗೆರೆಗಳಿವು
ನಿನ್ನಂತೆಯೇ ನೇರಾ ನೇರಾ
ಸಂಧಿಸಲಾರೆವು
ಗೆಳತಿ ಬಾಳ ಪೂರಾ…

ಶಿವಮೊಗ್ಗ ಪಾರ್ಕಿನಲ್ಲಿ ನಾನು ತೆಗೆದ ಚಿತ್ರ

ಇತಿಹಾಸ ದಿಟವೇ?


ಇಂದು ನಾವು ಓದುತ್ತಿರುವ ಚರಿತ್ರೆಯು ನೂರಕ್ಕೆ ನೂರರಷ್ಟು ಸತ್ಯವೇ? ಇದು ನನ್ನನ್ನು ಕಾಡಿದ ದೊಡ್ಡ ಪ್ರಶ್ನೆ.

ಸ್ವಾತಂತ್ರ್ಯ ಪೂರ್ವ ಮತ್ತು ಆನಂತರದ ಚರಿತ್ರೆಯು ಎಷ್ಟೋ ಕಡೆ ’ಬರೆಸಿದ’ ಹಾಗೆ ಕಾಣುತ್ತದೆ.

ಪ್ರತಿ ಪುಟವೂ ನಿಜಾಯತಿ ಇಂದ ಕೂಡಿದ್ದರೆ,  ಸ್ವಾತಂತ್ರಾ ನಂತರದ ಭಾರತೀಯ ಇತಿಹಾಸವನ್ನು ನಾವು ಯಾಕೆ ಇದ್ದದ್ದನ್ನು ಇದ್ದ ಹಾಗೇ ಬೋಧಿಸುವುದಿಲ್ಲ?

ತುರ್ತು ಪರಿಸ್ಥಿತಿಯ ದಿನಗಳ ಬಗ್ಗೆ ನಮಗೆ ಯಾವ ತರಗತಿಯಲ್ಲೂ ಕಲಿಸುವುದೇ ಇಲ್ಲ!

ರಾಜಾಶ್ರಯದ ತೊತ್ತಿಗೆ ಅಥವಾ ಯಾವನೋ ಪೂರ್ವಾಗ್ರಹ ಪೀಡಿತ ನಮಗೆ ಬರೆದುಕೊಟ್ಟ ಸುಳ್ಳೇ ಇತಿಹಾಸವನ್ನೇ  ಇಂದಿಗೂ ಓದುತ್ತಿದ್ದೇವೆ ಅನಿಸುತ್ತದೆ.

ಸ್ವಾತಂತ್ರ್ಯಕ್ಕಾಗಿ ಹೋರಾಡಿದ ನಿಜವಾದ ದೇಶ ಭಕ್ತರು ದಾಖಲಾಗದೇ ಅಲ್ಲೂ ರಾಜಕೀಯ ಹಿತಾಸಕ್ತರೇ ಪ್ರಕಾಶಕ್ಕೆ ಬಂದದ್ದು ನನಗೆ ಸೋಜಿಗ.

ಭಗತ್ ಸಿಂಗ್, ಸುಭಾಸ್ ಚಂದ್ರ ಬೋಸ್ ಅವರಂತಹ ಹೋರಾಟಗಾರರು ನಮಗೆ ಅಷ್ಟಾಗಿ ಗೋಚರಿಸುವುದೇ ಇಲ್ಲ.

ಕರ್ನಾಟಕದ ಸ್ವಾತಂತ್ರ್ಯ ಹೋರಾಟಗಾರರನ್ನು ರಾಜ್ಯ ಸರ್ಕಾರವೇ ಸರಿಯಾಗಿ ಗುರುತಿಸಿಲ್ಲ.

ಛಪ್ಪನ್ನಾರು ದೇಶಗಳಿದ್ದದ್ದು ಕಡೆಗೆ ಪುಟ್ಟ ದೇಶವೇಕಾಯಿತು? ಯಾರು ಇದಕ್ಕೆ ಹೊಣೆಯಾದರು ಎಂಬುದು ಇಂದಿಗೂ ಅಪ್ರಸ್ತುತ!

ಸ್ವಾತಂತ್ರ್ಯ ಮನುಷ್ಯನ ವಿಕಸನಕ್ಕೆ ದಾರಿಯಾಗದೆ ಬರಿಯ ಭಾಷೆ, ಆರ್ಥಿಕ, ರಾಜಕೀಯ ಮತ್ತು ಬೌಗೋಳಿಕ ಗಡಿ ರೇಖೆಯಾದದ್ದು ಖೇದ.

ಅಂದಿನ ಅನಿವಾರ್ಯತೆಗಾಗಿ ರೂಪಗೋಂಡ ಕೇಂದ್ರಾಡಳಿತ ಪ್ರದೇಶಗಳು ಇಂದಿಗೂ ಖಂಡಿತ ಬೇಡದ ಗುರುತಿಸುವಿಕೆ.

ನಿಜವಾದ ಇತಿಹಾಸ ಇನ್ನಾದರೂ ಬೋಧನಾ ಸರಕಾದರೆ ಚೆನ್ನ.

(ಚಿತ್ರ ಕೃಪೆ : ಅಂತರ್ಜಾಲ)

ಇದೀಗ ಬಂದ ಸುದ್ದಿ…

ಹೊಸ ಗೆದ್ದ ಎತ್ತಿನ ಹಿಂದೆ
ಹಳೇ ಹಿಂಬಾಲಕರ ಪಡೆಯ
ಬಾಜಾಬಜಂತ್ರಿಯ ಘೋಷ,
ಸೋತವನೋ ಮನೆ ಹೊಕ್ಕ
ಅಂಗಳದಿ ಮಸಣ ವೈರಾಗ್ಯ…

ತೊಟ್ಟ ಮುಳ್ಳು ಕಿರೀಟವ
ಕಳಚಿಕೊಂಡವನೇ ತೊಟ್ಟ
ಒಳಗೀಗ ಗುಲಾಬಿ ಪಕಳೆ,
ಇಲ್ಲಿ ಸಿಂಹಾಸನದ ಕೆಳಗೆ
ಹಳೇ ಹಾವುಗಳೆಲ್ಲ ಮತ್ತೆ
ಬುಟ್ಟಿ ಮೀರುವ ಗಳಿಗೆ…

ಮಂತ್ರ ದಂಡವ ಕಸಿದ
ಹೊಸ ಮಂತ್ರವಾದಿಗೂ
ಗೊತ್ತಿರುವುದದೇ ಹಳೆಯ
ಉಚ್ಛಾಟನಾ ಮಂತ್ರ,
ಹಿಂದೆಯೇ ಕಿಸುಗುಳಿ ನಕ್ಕ
ನನ್ನದೂ ಅದೇ ಶಾಲೇ!

ಅಭದ್ರವೀ ಊರಿದ ಅಂಡು
ಹಿರೀಕ ಹುಡುಕು ಅಂಟು!

(ಚಿತ್ರ ಕೃಪೆ : ಅಂತರ್ಜಾಲ)

ಪಡುಮಟಿ ಸಂಧ್ಯಾ ರಾಗಂ…

ಕೆಲವು ಸಿನಿಮಾಗಳೇ ಹಾಗೆ, ಎಷ್ಟೋ ವರ್ಷಗಳ ನಂತರವೂ ಅದರ ಛಾಯೇ ಮನಸ್ಸಿನಲ್ಲಿ ಉಳಿದು ಬಿಡುತ್ತವೆ.

ಇಲ್ಲಿ ಭಾಷೆ ಮುಖ್ಯವೇ ಆಗುವುದಿಲ್ಲ, ಸಿನಿಮಾಗೆ ಅದರದೇ ಭಾಷೆ ಇರುವುದರಿಂದ ಅದು ಲೋಕ ಭಾಷೆ.

ನನಗೆ ಸದಾ ನೆನಪಿಗೆ ಬರುವ ಸಿನಿಮಾವೆಂದರೆ, ತೆಲುಗಿನ  “ಪಡುಮಟಿ ಸಂಧ್ಯಾ ರಾಗಂ”

೧೪ ರೀಲುಗಳ (೩೮೬೧.೯೦ ಮೀಟರ್) ಈ ಸಿನಿಮಾ ಏಪ್ರಿಲ್ ೨, ೧೯೮೭ರಲ್ಲಿ ಸೆನ್ಸಾರ್ ಆಯಿತು. ಮರುದಿನವೇ ತೆರೆ ಕಂಡಿತು.

ಈ ಚಿತ್ರ ಹಲವು ವಿಶಿಷ್ಟಗಳ ಸಂಗಮ:

ಈ ಚಿತ್ರವು ಪ್ರವಾಸಾಂಧ್ರ ಚಿತ್ರ ಲಾಂಛನದಲ್ಲಿ ನಿರ್ಮಾಣವಾಯಿತು. ನಿರ್ಮಾಪಕರು ಅನಿವಾಸಿ ಭಾರತೀಯರಾದ ಗುಮ್ಮಲೂರಿ ಶಾಸ್ತ್ರಿ ಮತ್ತು ಮೀರ್ ಅಬ್ಧುಲ್ಲ. ಸ್ವತಃ ನಿರ್ಮಾಪಕರು ನಾಯಕಿಯ ತಂದೆ ಹಾಗೂ ಚಿಕ್ಕಪ್ಪನ ಪಾತ್ರದಲ್ಲಿ ನಟಿಸಿದ್ದಾರೆ.


ತೆಲುಗಿನ ಮಾಹಾನ್ ಪ್ರತಿಭೆ, ಜಂಧ್ಯಾಲ (ಜಂಧ್ಯಾಲ ಸುಬ್ರಹ್ಮಣ್ಯ ಶಾಸ್ರಿ; ೧೯೫೨ – ೨೦೦೧) ಈ ಚಿತ್ರದ ನಿರ್ದೇಶಕರು. ಸದಾ ಹೊಸತನವನ್ನು ತೆರೆಗೆ ತರುವ ಹಾಸ್ಯಬ್ರಹ್ಮ  ಹಲವು ಹಾಸ್ಯ ನಟರನ್ನೂ ಪರಿಚಯಿಸಿದ್ದಾರೆ.

ಹಾಸ್ಯ ಚಿತ್ರಗಳನ್ನು ಅಮೋಘವಾಗಿ ರೂಪಿಸಿಕೊಡುವ ಇವರ ಸಿನಿಮಾಗಳಲ್ಲಿ ಹಾಸ್ಯವು ಸರಳವಾಗಿದ್ದು, ದ್ವಂದ್ವಾರ್ಥಗಳಿರುವುದೇಇಲ್ಲ. ಇವರನ್ನು “ಬೈಗುಳಗಳ ಜನಕ” ಅಂತಲೂ ಕರೆಯುತ್ತಾರೆ, ಅಷ್ಟು ಬೈಗುಳಗಳನ್ನು ತೆರೆಗೆ ಪರಿಚಯಿಸಿದ್ದಾರೆ. ಒಳ್ಳೆಯ ಚಿತ್ರಕಥೆ ಮತ್ತು ಸಂಭಾಷಣೆ ಬರೆಯುತ್ತಿದ್ದ ಇವರು ಕೆ. ವಿಶ್ವನಾಥ್ ನಿರ್ದೇಶನದ ಶಂಕರಾಭರಣಂ ಚಿತ್ರಕ್ಕೂ ಸಂಭಾಷಣೆಕಾರರು.

ಖ್ಯಾತ ಹಿನ್ನಲೆ ಗಾಯಕ ಪದ್ಮಭೂಷಣ ಡಾ|| ಎಸ್.ಪಿ. ಬಾಲಸುಬ್ರಹ್ಮಣ್ಯಂ ಈ ಚಿತ್ರದ ಸಂಗೀತ ನಿರ್ದೇಶಕರು. ಸುಮಾರು ೪೦ ಸಿನಿಮಾಗಳ ಮೇಲೆ ಸಂಗೀತ ನಿರ್ದೇಶನ ಮಾಡಿರುವ ಎಸ್.ಪಿ.ಬಿ. ಈ ಚಿತ್ರದಲ್ಲಿ ಪಾಶ್ಚಾತ್ಯ ಮತ್ತು ಭಾರತೀಯ ಸಂಗೀತವನ್ನು ಅತ್ಯದ್ಭುತವಾಗಿ ಬಳಸಿಕೊಂಡಿದ್ದಾರೆ. ಈ ಚಿತ್ರಕ್ಕೆ ಶೀರ್ಷಿಕೆ ಹುಡುಕಿಕೊಟ್ಟವರೂ ಇವರೇ.

ಟಾಮ್ ಎಂಬ ಅಮೇರಿಕನ್ ಈ ಚಿತ್ರದ ನಾಯಕ ಮತ್ತು ತೆಲುಗಿನ ಅತ್ಯುತ್ತಮ ನಟಿ ವಿಜಯ ಶಾಂತಿ ಈ ಚಿತ್ರದ ನಾಯಕಿ. ಇಂದಿನ ವಿಶ್ವ ವಿಖ್ಯಾತ ಡ್ರಮ್ಮರ್ ಶಿವಮಣಿಯವರು ಈ ಚಿತ್ರದಲ್ಲಿ ನಟಿಸಿದ್ದಾರೆ.

ಬಹುತೇಕ ನಟರು ಅನಿವಾಸೀ ಭಾರತೀಯರೇ ಆಗಿದ್ದು, ಉಳಿದಂತೆ ಕನ್ನಡದ ಜ್ಯೋತಿ ಮತ್ತು ಸುತ್ತಿ ವೇಲಭದ್ರರಾವ್ ನಟಿಸಿದ್ದಾರೆ.

ಮುಕ್ಕಾಲು ವಾಸಿ ಚಿತ್ರೀಕರಣ ಅಮೇರಿಕದಲ್ಲೇ ಜರುಗಿತು. ಅನ್ನಮಾಚಾರ್ಯರ ಅಮೋಘ ಕೀರ್ತನೆ “ಮುದ್ದುಗಾರೆ ಯಶೋಧ”ವನ್ನು ಎಸ್. ಜಾನಕಿಯವರು ಪುಟ್ಟ ಕಂದನ ಧ್ವನಿಯಲ್ಲಿ ಹಾಡಿದ್ದಾರೆ.

ಈ ಚಿತ್ರಕ್ಕೆ ಜಂಧ್ಯಾಲರ ಅತ್ಯುತ್ತಮ ಚಿತ್ರ ಕಥೆಗೆ ನಂದಿ ಪ್ರಶಸ್ತಿ ಮತ್ತು ಗುಮ್ಮಲೂರಿ ಶಾಸ್ತ್ರಿಯವರಿಗೆ ಫಿಲಿಂ ಫೇರ್ ಪ್ರಶಸ್ತಿ ಬಂದಿತು.

ಕಥಾ ಹಂದರ: ಪಕ್ಕಾ ಭಾರತೀಯ ಮನಸ್ಥಿತಿಯ ನಾಯಕಿಯ ತಂದೆ, ಮಗಳು ಮತ್ತು ಹೆಂಡತಿ ಸಮೇತ ಅಮೇರಿಕಾದಲ್ಲಿ ಕೆಲಸ ಮಾಡಲು ವಲಸೆ ಹೋಗುತ್ತಾರೆ. ನಾಯಕಿಗೆ ಅಮೇರಿಕನ್ ಹುಡುಗನ ಜೊತೆಗೆ ಪ್ರೇಮಾಂಕುರವಾಗುತ್ತದೆ. ಇದನ್ನು ವಿರೋಧಿಸುವ ಅಪ್ಪನನ್ನು ಒಪ್ಪಿಸಲಾರದೇ ನಾಯಕಿ ಅವಳ ಚಿಕ್ಕಪ್ಪನ ಸಹಾಯದಿಂದ ಮದುವೆಯಾಗುತ್ತಾಳೆ.

ಮುನಿಸಿಕೊಂಡ ತಂದೆ ಅಮೇರಿಕ ಬಿಟ್ಟು ಭಾರತಕ್ಕೆ ವಾಪಸ್ಸಾಗುತ್ತಾರೆ. ತೆಲುಗು ಕಲೆಯುವ ನಾಯಕ, ಭಾರತೀಯ ಆಚಾರ ವಿಚಾರ ರೂಢಿಸಿಕೊಳ್ಳುತ್ತಾನೆ. ಕಡೆಗೆ ನಾಯಕಿಯ ತಂದೆಗೆ ಭಾರತದಲ್ಲಿ ಭಾರತೀಯ ಪದ್ಧತಿಯಂತೆ ಚಿತೆಗೆ ಅಗ್ನಿಸ್ಪರ್ಷ ನೀಡುತ್ತಾನೆ.

ಭಾರತೀಯ ಸಂಸ್ಕೃತಿಯು ಶ್ರೇಷ್ಟವಾದದ್ದು ಅದು ಒಳ್ಳೆಯ ವಿಚಾರಗಳನ್ನೂ ಸ್ವೀಕರಿಸುತ್ತದೆ ಎನ್ನುವುದು ಈ ಚಿತ್ರದ ಸಾರ.

ಭರಪೂರ ತಮಾಷೆ ಇರುವ ನೀವು ನೋಡಲೇ ಬೇಕಾದ ಸಿನಿಮಾ ಇದು.

ಈ ಚಿತ್ರವು ಒಳ್ಳೆಯ ಹಾಡುಗಳನ್ನು ಹೊಂದಿದ್ದು, ಕಥೆಗೆ ತಕ್ಕ ಛಾಯಾಗ್ರಹಣವನ್ನು ಪಿ. ದಿವಾಕರ್ ನೀಡಿದ್ದು, ಸಂಕಲನ ಗೌತಮ್ ರಾಜು ಅವರದು.
————————

ಜಂಧ್ಯಾಲ ನಿರ್ದೇಶನದ ಸಿನಿಮಾಗಳು:
ಮುದ್ದ ಮಂದಾರಂ, ಮಲ್ಲೆ ಪಂದಿರಿ, ನಾಲುಗು ಸ್ಥಂಭಾಲಾಟ, ನೆಲವಂಕ, ರೆಂಡು ಜಳ್ಳ ಸೀತಾ, ಅಮರಜೀವಿ, ಮೂಡು ಮುಳ್ಳು, ಆನಂದಭೈರವಿ. ಶ್ರೀವಾರಿಕಿ ಪ್ರೇಮ ಲೇಖ, ರಾವು ಗೋಪಾಲರಾವು, ಪುಟ್ಟಡಿ ಬೊಮ್ಮ, ಬಾಬಾಯಿ ಅಬ್ಬಾಯಿ, ಶ್ರೀವಾರಿ ಶೋಭನಂ, ಮೊಗುಳ್ಳು ಪೆಳ್ಳಾಲು, ಮುದ್ದುಲ ಮನವರಾಲು, ರೆಂಡು ರೆಳ್ಳ ಆರು, ಸೀತಾ ರಾಮ ಕಲ್ಯಾಣಂ, ಚಂಟಬ್ಬಾಯ್, ಪಡುಮಟಿ ಸಂಧ್ಯಾ ರಾಗಂ, ರಾಗ ಲೀಲ, ಸತ್ಯಾಗ್ರಹಂ, ಅಹಾ ನಾ ಪೆಳ್ಳಂಟ, ಚಿನ್ನಿ ಕೃಷ್ಣುಡು, ಚೂಪುಲು ಕಲಸಿನ ಶುಭವೇಳ, ಹೈ ಹೈ ನಾಯಕ, ಜಯಮ್ಮು ನಿಶ್ಚಯಂಮ್ಮುರ, ಭಾವ ಭಾವ ಪನ್ನೀರು, ಪ್ರೇಮ ಎಂತ ಮಧುರಂ ಹಾಗೂ ಕಡೆಯ ಚಿತ್ರ ವಿಚಿತ್ರಂ.

ಮೂರು ಬಾರಿ ರಾಜ್ಯ ನಂದಿ ಪ್ರಶಸ್ತಿ ಪಡೆದ ಜಂಧ್ಯಾಲ, ಹಲವು ಪ್ರಶಸ್ತಿಗಳನ್ನೂ ಪಡೆದಿದ್ದಾರೆ.

(ಚಿತ್ರ ಕೃಪೆ : ಅಂತರ್ಜಾಲ, ವಿಡಿಯೋ ಕೃಪೆ: ಯೂ ಟ್ಯೂಬ್, ಮಾಹಿತಿ ಕೃಪೆ : ವಿಕಿಪೀಡಿಯಾ)

ಅಲಾ ಬೆಂಗಳೂರೇ…


ನನ್ನ ಬೆಂಗಳೂರು, ಮೊದಲಿಂದಲೂ ಅರ್ಥ ಮಾಡಿಕೊಳ್ಳುವ ಮನದೆನ್ನೆಯಂತೆ ಅಪ್ಪಿ ಮುದಗೊಳಿಸಿದರೇ, ಕೆಲವೊಮ್ಮೆ ಅರ್ಥ ಮಾಡಿಕೊಳ್ಳದೆ ದೂರವಾದ ಗೆಳತಿಯಂತೆ ಕಕ್ಕಾಬಿಕ್ಕಿಯಾಗಿಸುತ್ತಾಳೆ!

  • ನನ್ನ ತಾಯಿ ನನ್ನ ಮನೆ ರಸ್ತೆಯಲ್ಲಿ ಬೆಳಿಗ್ಗೆ ೮ ಗಂಟೆ ಮೇಲೆ ವಾಕಿಂಗ್ ಹೋಗಲು ಆಗಲ್ಲ ಮಗ, ಮೈ ಮೇಲೇ ಕಾರು ಲಾರಿಗಳು ಬರ್ತವೆ ಅಂದಾಗ…

  • ಅತಿ ಮಳೆ ಹುಯ್ದು ನಮ್ಮ ತಗ್ಗು ಪ್ರದೇಶಗಳೆಲ್ಲಾ ಜಲಾವೃತವಾದಾಗ, ಕಾಪಾಡುವ ಗಾಳಿ ಆಂಜನೇಯನ ದೇವಸ್ಥಾನಕ್ಕೂ ನೀರು ನುಗ್ಗಿ, ಪರಮಾತ್ಮ ನಿನಗ್ಯಾರಪ್ಪಾ ಕಾಪಾಡ್ತಾರೆ ಅನಿಸಿದಾಗ…

  • ಹಾದಿ ಬದಿ ಧುತ್ತೆಂದು ಯಾವುದೋ ಭಿಕ್ಷುಕಿ ಎಳೇ ಕಂದಮ್ಮನನ್ನು ಹಳೇ ಸೀರೆಯಲಿ ಸುತ್ತಿಕೊಂಡು ಕೈ ಚಾಚಿದಾಗ..

  • ಒಳ್ಳೆ ಓಡುವ ಕುದುರೆಯಂತಹವರು ಥಟ್ ಅಂತ ನೌಕರಿ ಕಳೆದುಕೊಂಡಾಗ ಪರಿಚಿತರೆಲ್ಲ ಅಪರಿಚಿರು ಅನಿಸುವಾಗ…

  • ನಟ್ಟ ನಡು ರಾತ್ರಿಯಲಿ ಬಸ್ಸೇ ಬರದ ಬಸ್ ಸ್ಟಾಪಿನಲ್ಲಿ, ಕರೆದ ಕಡೆ ಬಾರದ ಆಟೋ ಬಂಧುಗಳನ್ನು ಶಪಿಸುತ್ತಾ ನಿಂತಾಗ, ಅಲ್ಲೇಲ್ಲೋ ಹೊಯ್ಸಳ ಗಾಡಿಯ ಸೈರನ್ ಕೇಳಿದಾಗ…

  • ಸರಗಳ್ಳರ ಹಾವಳಿಗೆ ಬೇಸತ್ತು ಪೊಲೀಸರು ಬೆಳಿಗ್ಗೆಯೇ ಚೀತಾ – ಹೊಯ್ಸಳಾಗಳಲ್ಲಿ ಬೀಟ್ ಆರಂಭಿಸಿದಾಗಲಿಂದ, ನನ್ನ ಪಾರ್ಕಿನಲ್ಲಿ ವ್ಯಾಯಾಮ ಮಾಡುವಾಗ ಬಲಗಡೆ ಚೀತಾ ಕಾಣಿಸಿ, ಎಡಗಡೆ ಹೊಯ್ಸಳ ಕಾಣಿಸಿ, ನಗರ ಮೊದಲಷ್ಟು ಸುರಕ್ಷಿತ ಅಲ್ಲ ಅನಿಸತೊಡಗಿದಾಗ…

  • ಲಾಲ್ ಬಾಗಿಗೆ ಪ್ರವೇಶ ಧನ ಅಂತ ಬೋರ್ಡ್ ನೇತು ಹಾಕಿದಾಗ…

  • ಚಿಕ್ಕ ಪುಟ್ಟ ಹೋಟೆಲ್ ಮುಚ್ಚಿ ಅದೇನೋ ಡೇ, ಅಲ್ಲೇನೋ ಹಟ್ ಅಂತ ಶುರುವಾದಾಗ…

  • ಮೆಟ್ರೋ ಕಾಮಗಾರಿ, ರಸ್ತೆ ಅಗೆತ, ಏಕ ಮುಖ ಸಂಚಾರ ಮತ್ತು ಭೋರಿಡುವ ವಾಹನಗಳ ನಡುವೆ, ನನ್ನ ಗಾಡಿ ಸ್ಟಾರ್ಟಿಂಗ್ ಟ್ರಬಲ್ ಕೊಟ್ಟಾಗ…

  • ಇಡೀ ದೇಶದಲ್ಲಿ ಪದೇ ಪದೇ ದುಬಾರಿ ನಗರ ಅಂತ ಘೋಷಿಸಿದಾಗ…

ನನಗೆ ಬೆಂಗಳೂರು ಅಪರಿಚಿತ ಅನಿಸಲಾರಂಭಿಸುತ್ತದೆ!!!

ಸಾಧಿಸಲೇ ಬೇಕು…

ನಡು ವಯಸಲೇ ಏಕೆ
ಸ್ವಯಂ ನಿವೃತ್ತಿಯ ಮೋಹ?
ಶೂನ್ಯ ಸಾಧನೆ ಸಾಕೇ
ಉಕ್ಕಲಿ ಜೀವನೋತ್ಸಾಹ…

ಕಲಿಯಲಿದೆ ಎನಿತೋ
ಹಲವರಿಂದಲೂ ಪಾಠ…

ಮೊದಲ ಗುರುವೇ ಎನಗೆ ಗದುಗಿನ ದೈವ
ಪಂಡಿತೋತ್ತಮ ಪುಟ್ಟರಾಜ ಗವಾಯೀ
ಜಗಕೇ ಕಣ್ಣಾದ ಶರಣರಲಿ ಶರಣ,

ಈತ ಗಾಲಿ ಕುರ್ಚಿಯ ನಿಶ್ಚಲ ದೇಹಿ
ಹಾಂವ್ ಕಿಂಗ್ಸ್ ಬಲು ಮೇಧಾವಿ
ಬಿಡಿಸಿಟ್ಟರಲ್ಲ ಕಪ್ಪು ರಂಧ್ರದ ಗೋಜಲು,

ಕಿವಿಗಳೆರಡೂ ಕೇಳಿಸದೆಯೂ
ಬರೀ ತುಟಿಯ ಚಲನೆ ಗಮನಿಸಿಯೇ
ಗೆದ್ದರಲ್ಲವೇ ಕನ್ನಡ ನಟ ಬಾಲಣ್ಣ,

ಕೊರಗಲಿಲ್ಲ ಕಳೆದ ಕಾಲಿಗೆ ನಿರಂತರ
ಕೃತಕ ಕಾಲಲೇ ನರ್ತಿಸುತ ಆದರಲ್ಲವೇ
ಸುಧಾ ಚಂದ್ರನ್ ತಾವು ನಾಟ್ಯ ಮಯೂರಿ,

ಅರೆ ದೇಹ ಸೋತರೂ ಫರ್ಮಾನ್ ಭಾಷಾ
ಭಾರಗಳನೆತ್ತಿ ಗೆದ್ದು ತಂದರು
ಕಂಚು ಪದಕ; ತುಂಬು ಗರ್ವಿಸಿತು ದೇಶ…

ಬ್ರೈಲು ತಾಕಲೇ ಉದ್ಗ್ರಂಥ
ಬರೆದವರೂ ಸಿಗಬಹುದು,
ಕಾಲು ಕಳೆದವರೂ ಕೂಡ
ಹಿಮಗಿರಿಯ ಏರಬಹುದು…

ನೆಟ್ಟಗಿವೆ ನನ್ನ ಅಂಗಾಂಗ
ಗಟ್ಟಿಗಿದೆ ಪಾಪಿ ಆಯುಷ್ಯ ರೇಖೆ,
ಒಲಿಸಲು ತಾರಕ ಮಂತ್ರ
ಏನಾದರೂ ಸಾಧನೆ ತೋರಬೇಕು…

ಮನಸು…

ನಿಲ್ಲಲೆಂದರೂ ನಿಲ್ಲಗೊಡದಿದು
ಹೊರಟು ನಿಂತರೂ ತಡೆವುದು,
ಅಂಕೆ ಮೀರಿತೆನ್ನ ಮನಸಿದು
ತನ್ನ ಮಾತನೂ ತಾ ಕೇಳದು…

ಒಳಗೆ ಗುಣಿಸಿದೆ ಸ್ವಗತ ರಿಂಗಣ
ಹೇಳಿಕೊಳ್ಳದು ಯಾರಿಗೂ,
ಎದೆಯ ಗಾಯಗಳೆಲ್ಲ ಮಾಗಿಯೂ
ಕೊರಗು ಉಳಿಸಿತು ಕೊಸರಿಗೆ,
ಆವಿಯಾದವು ಕಣ್ಣ ಹನಿಗಳು
ಮಾಸಿತೆಲ್ಲೋ ಆ ಕಿರುನಗೆ!

ಗಾಳಿ ಮೆಟ್ಟಿಲನೇರು ಭ್ರಮೆಯಲಿ
ನಿಂತ ನೆಲವನೇ ಒದ್ದರೇ,
ಏರಬಲ್ಲೆನೇ ಅರಿವಿನೆತ್ತರ
ಮರಳಿ ಯತ್ನಿಸೆ ಗೆಲುವೆನೇ?
ಇಲ್ಲಿ ಕ್ಷಣವಿರೆ ಅಲ್ಲಿ ಕಳೆದರೆ
ಪಡೆಯಬಲ್ಲೆನೇ ಏಕಾಗ್ರತೆ?

ಒಳಗೆ ಇಣುಕಲೂ, ಹುಳುಕು ಮುಚ್ಚಲು
ಬಿಟ್ಟುಕೊಳ್ಳದು ಒಳ ಮನೆ,
ಸಭ್ಯ ಪೊರೆ ಒಳಗಿನ್ನೆಂತ ಸ್ವಗತವೋ
ಓದಗೊಡದು ಮನ ಪುಸ್ತಿಕೆ…

ಅಪ್ರಾಪ್ತ ಚಿನ್ನ…

ನೆಲ ಬಗೆದು ಚಿನ್ನದದಿರನು ಎತ್ತಿ
ತಿಜೋರಿಗಳ ಮೊದಲು ತುಂಬಿದೆವು,
ಮತ್ತೆ ಕಾಡಿತು ಪಾಪ ಪ್ರಜ್ಞೆಯು
ಎತ್ತಿ ಕೊಟ್ಟೆವು ದೇವರಿಗೂ ಒಂತಿಷ್ಟೂ!

ಕಾರ್ಕೋಟಕ ಉರಗಗಳಿಗೋ ಇನಿತಿಲ್ಲ
ಕಾಳ ಸರ್ಪದ ಕಾವಲಿನ ಭಯವೂ,
ದುರ್ಮತಿಗೆ ಹುಂಡಿ ಕದ್ದರೂ ಅರಿವಿಲ್ಲ
ಲೂಟಿಯಾದರೂ ಪ್ರಚ್ಛನ್ನರು ನಾವೂ!

ನಭವ ದಾಟಲಿ ಬೆಲೆಯು ಅನುದಿನ
ತೇಜಿಯಲೇ ತೇಲಲೀ ಚಿನಿವಾರ ಪೇಟೆಯು,
ದುಡಿಮೆಯ ರಕ್ತವ ಬಸಿದಾದರೂ ಸೈ
ಮಕ್ಕಳನು ಉಪವಾಸ ಕೆಡವಿಯಾದರೂ
ಗ್ರಾಮು ಕೊಳ್ಳುತ್ತೆ ಹುಚ್ಚು ಮಂದಿ…

ಹುತ್ತದಾಳವೂ ಅಳೆಯಲಾರದ
ದಡ್ಡರೆಲ್ಲ ಏರಬಾರದು ಸಿಂಹಾಸನ,
ಬಿಲಗಳ ಆಳದಲೆಷ್ಟಿದೆಯೋ
ಮುಲ್ಕಿ ಚಿನ್ನ ಬೆಳ್ಳೀ ನವರತ್ನ?
ಸಾಲ ಶೂಲವ ತಪ್ಪಿಸಲುಪಾಯ
ಆಳರಸನಿಗೂ ಬೇಕು ವಿತ್ತದರಿವು…

ಕೋಲಾರವೂ ಖಾಲಿ ಖಾಲಿ
ಹಟ್ಟಿಯೂ ಮುಚ್ಚದೇ ಹೇಳಿ?
ಬಚ್ಚಿಟ್ಟಿದ್ದು ತಾನೇ ಪರರಿಗೆ
ಪಾಲಾಗಲಿ ವಿದೇಶಿಯರಿಗೆ…

(ಚಿತ್ರ ಕೃಪೆ : ಅಂತರ್ಜಾಲ)

ಯಾಕೆ ದೇವರು ಹೀಗೆ?…

ಇನ್ನೂ ಬಾರದ ಮಳೆಗೆ
ಬರೀ ಜಾಹೀರಾತೇ
ಆಷಾಢದೀ ಮೊರೆವ ಗಾಳಿ!

ಅಲ್ಲೆಲ್ಲೋ ಜಿಟಿ ಜಿಟಿ ಮಳೆಯ
ಸಂಭ್ರಮವಂತೆ ಮಾಧ್ಯಮಗಳಿಗೆ,
ನಮ್ಮ ಪಾಲಿಗೆಂದೋ ಮುಂಗಾರು
ಕಾದದ್ದೇ ಬಂತು ನನ್ನ ಬಂಜರು!

ಯಾಕೆ ದೇವರು ಹೀಗೆ?
ಜಲ ಮಂಡಲಿಗಿಂತಲೂ ಕಡೆಯೇ
ನಿನ್ನ ನೀರ ಸರಬರಾಜು…

ಬರದ ನೆರಳಿದೆ ನೆರೆಯ ಸಾವಿದೆ
ನಿನ್ನವವೇ ಬಿಲ್ಲೆಯ ಮುಖಗಳೆರಡು,
ಸಾಲ ಶೂಲವೂ ನಿನಗೆ ತಟ್ಟದು
ಬಿಕ್ಕೆ ಬಿದ್ದರೂ ಬಾಸಿಂಗ ಹುಟ್ಟದು
ಕತ್ತೆ ಮದುವೆಯ ಖರ್ಚಿಗೂ…

ಯಾಕೆ ಚರಾಚರವ ನುಲಿಚೋ ಹುಚ್ಚು
ಸಹಿಸಲಾರೆಯಾ ತಂದೆ,  ನಿನ್ನದೇ ಸೃಷ್ಟಿ?
ಬರದ ನಾಡಿದೆ, ಹಸಿರು ಕಾಡಿದೆ
ತಡ ಮಾಡದೇ ಹಚ್ಚಿಕೋ ಕಾಳ್ಗಿಚ್ಚೂ…

(ಚಿತ್ರ ಕೃಪೆ : ಅಂತರ್ಜಾಲ)

ನೆಲೆಗೆಡುವಾಗ…

ಕುಣಿಕುಣಿದು ಚಿತ್ರಿಸಿದ ಆ ಬಿಂಬ ಯಾತ್ರೆ
ಅವು ನನ್ನವೇ ಕನಸುಗಳ ಪುಟ್ಟ ಪರದೆ…

ಪರದೆ ಹಿಂದೆಯ ಅಗೋಚರ ಕೆಣಕು
ತಿವಿವ ವಿಕಟ ಅಟ್ಟಹಾಸದ ನಗು
ಕೇಳಿಸದು ಖಾಲಿ ಹೊಟ್ಟೆಯ ಕಿವಿಗೆ,
ಮೀಟಿದ್ದು ಚಪ್ಪಡಿಯಲ್ಲ ಗೋರಿ ಕಲ್ಲು
ಅನಾಥ ಅತ್ಮ ಬದಲಿಸಿತು ಮಗ್ಗಲು,
ನೆಲಹಿಡಿದು ಬಿದ್ದ ಹಳ್ಳವೂ ನನ್ನದೇನೇ  
ಇಗೋ ಈ ಕಲ್ಲು ಎಸೆ ಘಾಸಿಯಾಗಲಿ…

ಇನ್ನು ಭಯವಿಲ್ಲ ಜವರಾಯ
ಈ ದೇಹ ಹಿಂಡಿ ಬಿಸಾಕಿದ್ದಾರೆ
ನಿಶೆ ಹನಿಯ ಬಟ್ಟಿ ಇಳಿಸಿ ಬಿಡು!
ಕಿಸಿಯಲು ನೀನ್ಯಾವ ಕೊಪ್ಪಲು?
ಬರೀ ತೊಪ್ಪೆ ಈಗಿದು ಉರುವಲು!
ರೂಬುರೂಬು ನಿಲ್ಲಲಾರದ ಗಳಿಗೆ
ಆಕಳಿ ಉಳಿದ ಕಸಕಡ್ಡಿ ನಾನು…

ಅರವಳಿಕೆ ಮದ್ದೂ ಕೊಡದೆ ಸಲೀಸು
ರುಂಡಾಭರಣಾ ನಿನಗೆ ರೂಢಿ ತಲೆದಂಡ!
ಬಯಸಿ ಬಯಸಿಯೇ ಕುತ್ತಿಗೆ ಕೊಡಲಿಲ್ಲ
ನನಗಿಲ್ಲ ಇಚ್ಛಾ ಮರಣದ ತೆವಲು?
ನಡು ಮಧ್ಯಾಹ್ನಕ್ಕೆ ಗಕ್ಕನೆ ಅಮರಿತು
ವಾನಪ್ರಸ್ಥಾಶ್ರಮವೆಂಬೋ ಸಾವು…

ಇನ್ನು,
ಚಿತ್ರಿಸುವೆನೆಂದೋ ಬೆಳಕ ಕುಂಚವದ್ದೀ
ಛಾಯಾಪೆಟ್ಟಿಗೆಯ ಅಪ್ಪಿ ಮುದ್ದಾಡಿ!

(ಚಿತ್ರ ಕೃಪೆ : ಅಂತರ್ಜಾಲ)

ಪಾತ್ರ ಅನ್ವೇಷಣಾ…


ನಾನಸಲು ಕೆರೆಯೇ ನದಿಯೇ
ಉಪ್ಪುಪ್ಪು ಕಡಲೇ?
ಅರಿಯಬೇಕಿದೆ ಇನ್ನೂ ನನ್ನತನವ…

ಯಾವುದೋ ಮಳೆ ಕನಿಕರಿಸಿ
ಹುಯ್ದರಲ್ಲವೇ ಕೆರೆಗೂ ನೀರು!
ತಳಪಾಯ ಹೂಳುಮಯ
ನಿಂತೀತಾದರೂ ಎಷ್ಟು ಮಡ್ಡಿ ನೀರು?
ಬಿಟ್ಟ ಮರಿಗಳು ಬದುಕಿದರಷ್ಟೇ
ಬುಟ್ಟಿಯಲೂ ಹಿಡಿ ಮೀನು

ತಡೆಗಳಿಗೆ ಜಗ್ಗದೆಯೇ
ಸುರಿವ ಮಲಿನಕೂ ನಾರದೆಯೇ
ಹರಿಯುವುದು ಸಿಹಿ ನೀರು ಮಾತ್ರ
ನದಿಯೋ ನನಗೆ ಅಚ್ಚರಿಯ ಪಾತ್ರ!
ಅಸ್ಥಂಗತ ಪಿನಾಕಿನಿಯ ಹೊರತು
ತೆಪ್ಪವಾದರೂ ತುಂಬೀತು ಮೀನು

ವಿಶಾಲ ಶರಧಿಯು ಮಾತ್ರ
ಯಾರ ನಿಲುಕಿಗೂ ಸಿಗದ ಗಾತ್ರ,
ಅದು ಪರಿಗತ ಬಿಚ್ಚಿಡದು ಒಳಗುದಿ
ಅದಕೂ ಅಂಕುಶ ಘೋರ ಸುನಾಮಿ!
ಕುಡಿಯಲಾರದ ಉಪ್ಪು ನೀರಲೂ
ದೋಣಿಗಟ್ಟಲೆ ದೆಂಡಿ ಮೀನು

ಅಥವಾ,
ಬರೀ ಸೆಲೆಗೆ ಕಾದು ಕುಳಿತ
ಆಮೆ ತೇಲು ಪ್ರಾಕಾರದ
ಇಷ್ಟಗಲ ಬಾವಿಯೇ ನಾನು?

(ಚಿತ್ರ ಕೃಪೆ : ಅಂತರ್ಜಾಲ)

ಸ್ವರ ಸಂಸಾರ…


ಶೃತಿಯ ಹಿಡಿದು
ಸರಸತಿಯ ಪಿಡಿದು
ಗಾನ ಹರಿಸೊ ವೀಣೆಯೇ,
ನನ್ನ ಬಿನ್ನಹ ಕೇಳು ಒಮ್ಮೆಲೆ
ನಾದಗಾತಿಯೇ ತುಸು ತಾಮಸ

ನಿನ್ನ ಸ್ವರದ ಆಲಾಪವೆಲ್ಲವೂ
ಮೀಟು ಬೆಳಲಿನ ಮಾಂತ್ರಿಕತೆ
ಅದರ ಕೃಷಿಯ ಸಾರ್ಥಕತೆ,
ನೀನು ಮರೆತರೆ ಕಲೆಯ ಬೆಲೆಯನ
ಒಲುಮೆಗೆಲ್ಲಿದೆ ಚಿರಂತನ?

ಅಹಮು ಬಿಮ್ಮು ನಿನಗೆ ಸಲ್ಲ,
ನಿನ್ನ ತಂತಿ ತಂತಿಗಳಲು
ಇಲ್ಲ ನಾದ ವೈಭವ,
ಮೀಟು ಬೆರಳ ಒನಪಿನಲ್ಲೇ
ನಿನ್ನ ಜೀವ ಸಂಭವ!

ಬೀಗದಿರಲಿ ಆ ಬೆಳಲೂ
ನಿನ್ನ ವಿನಹ ಅಮೂರ್ತವೇ,
ನೀನು ದಂ ಅವನು ಪತಿ
ಸಮಾಗಮವೇ ಸಂಸಾರ
ಸಪ್ತಸ್ವರ ಮಿಳಿತ ಸಂಸ್ಕಾರ…

’ಗಲ್ಫ್ ಕನ್ನಡಿಗ’ ಈ ಪತ್ರಿಕೆಯಲ್ಲಿ 05.06.2012 ರಲ್ಲಿ ಪ್ರಕಟಿತ
http://www.gulfkannadiga.com/news-67218.html

(ಚಿತ್ರ ಕೃಪೆ : ಅಂತರ್ಜಾಲ)

ಚರಂಡೀಪುರದ ಕಥೆ…


ಬರೀ ಉಬ್ಬುತ್ತ
ಗಬ್ಬು ನಾರುತ್ತ
ಒಳಗೊಳಗೇ ಸಾಯುತಿದೆ
ಚರಂಡೀಪುರ!

ತಿಳಿ ನೀರೂ ನರಕದ ಹೊಳೆ
ಪೆದ್ದು ನೆಲಕೆ ಕಳ್ಳ ಬಸಿರು,
ರಾಗಿಗೆ ಗಾಂಜಾ ಪರ್ಯಾಯ
ದುಡ್ಡು ಬೆಳೆಸಿರಿ ದೆಂಡಿ,
ಮುಡುಪಿನ ಗಂಟೇಕೆ ಸೆರಗಲಿ?
ಅಂದೆಂದೋ ಬೀದಿ ಪಾಲು
ಕಾಮಾಟಿಯ ಪಾತಿವ್ರತ್ಯ!

ಸಾಯಲಿ ಸಂಸ್ಕಾರ
ಕಬಳಿಕೆಯೇ ಸುಲಭ ಮಂತ್ರ,
ನಿಜಾಯತಿಯ ಕೊಂದು
ಅರೆ ಬೆಂದ ಹೆಣ ತೇಲಿಸಿ
ವಿಸರ್ಜನೆ ವಿಷವ ಬಸಿದು
ತೀರ್ಥವೂ ಮಲಿನ ಬಿಂದು,
ದಡ್ಡ ಊರೀಗ ಕೊಳಗೇರಿ

ಕೊಳಕು ಮಂಡಲ ಪ್ರಭೆಗೆ
ಮುಸುಕು ಅಪರಂಜಿ ಹೊಳಪು,
ತಂಪು  ಕನ್ನಡಕದ ಮಾಯೆ
ಒಣ ಮೆದೆಯು ಹಸಿರ ಹುಲ್ಲು,
ಇವರು ಕಾಲಿಟ್ಟ ಮೇಲೇನಿದೆ?
ಐಭೋಗ ಅಮರಾವತಿಯೂ
ಪಾಳು ಹಂಪೆ ಹಳೇಬೀಡು!

ಜೀವಂತ ನದಿ ಪಾತ್ರ,
ಗಠಾರವಾಗಿಸಿದ ಗಿರಿಮೆ
ನಿಮ್ಮದಲ್ಲದೆ ಇನ್ನೇನು?

(ಚಿತ್ರ ಕೃಪೆ : ಅಂತರ್ಜಾಲ)

ಇದೂ ನಾನೇ…

ಅಣ್ಣ ಕೊಟ್ಟ
ಇಪ್ಪತ್ತು ಪೈಸೆ ನಾಣ್ಯಗಳೆಲ್ಲ
ಗೋಲಿಗಳಾಗಿ
ಬೋಟಿಗಳಾಗಿ
ಖರ್ಚಾಗಿ ಹೋದವು,
ಯಾಕೋ
ಗೋಲಕವೇ ತುಂಬಲಿಲ್ಲ!

ಹಳ್ಳಿ ಅಮ್ಮಂದಿರು
ಮನೆ ಬಾಗಿಲಲಿ
ಬಾಯಿ ಬೊಂಬಾಯಿಸಿ
ನನ್ನ ಲೀಲೆಗಳ
ಚಾಡಿಸದಿರಲೆಂದಿದ್ದೇ,
ಅಗಸರ ಪದ್ದಿಯ
ಕತ್ತೆ ಗಲ್ಲಿ ಬಿತ್ತಂತೆ
ಬಾಲಕೆ ಪಟಾಕಿ!

ಟೆಂಟು ಸಿನಿಮಾದಲ್ಲಿ
ಬಾಲ ನಾಗಮ್ಮ…
ರೀಲು ತುಂಡಿಗೆ
ಹಲ್ಲು ಗಿಂಜಿ ತಂದು
ಸಿನಿಮಾ ಬಿಡಬೇಕು!
ಎಡಿಸನ್ ತಗೋ
ನನ್ನ ರಟ್ಟು ಪೆಟ್ಟಿಗೆ
ಒಳಗೆ ಬಲ್ಬಲ್ಲಿ ನೀರು!

(ಚಿತ್ರ ಕೃಪೆ : ಅಂತರ್ಜಾಲ)

ಕಾಮನ ಹುಣ್ಣಿಮೆ…


ಮನ್ಮಥ ವೈರಿ ತೆರೆದಾನೆಷ್ಟು
ಮುಕ್ಕಣ್ಣ ಬಾರಿ ಬಾರೀ?

ವರ್ಣಾಲಂಕಾರ ಬೆವರಿಗೆ ತೊಳೆದು
ನಗುವು ಹಳಸಲಿಡಿದು
ಒಳ ಬಯಕೆಗಳೆಲ್ಲ ಹೊರಗೂ ಒಸರಿ
ನೋಟ ಭಂಗಕ್ಕೆ ಸಿಕ್ಕ ತರಳೆ ಮುದುಡಿದರೂ
ತಿದ್ದಲೇ ಇಲ್ಲ ಅಂತರಂಗ

ಅಸಲು ಸುಟ್ಟೀತೆ ಕಾಮನ ಹುಣ್ಣಿಮೆ?

ವಯಸ್ಸಿನಂತರ ಮೀರಿ
ವಾಮಿ ವರಸೆಗಳೂ ಮರೆಸಿ
ದಕ್ಕಿಸಿಕೊಳ್ಳುವ ಚಪಲ ಚಿತ್ತ,
ಚಾತುರ್ಯ ಸಿದ್ಧಿಗೆ ಒಲಿವ
ಉತ್ಕಟಾಕರ್ಷಣೆಯ ಕ್ಷಣ ಪಿತ್ತ!

ಹುಲ್ಲು ಮೇಯುವ ಮನಕೆ
ಯಾರಾದರೂ ಸೈ ಮೇನಕೆ!
ಆಕ್ರಮಿಸೋ ಹವಣಿಕೆ ಏಕೋ
ಯಾರದೋ ಸೊತ್ತುಗಳನೆಲ್ಲ
ತನ್ನ ಹಳದಿಯ ಕಣ್ಣ ಪರಧಿಗೆ

ಸ್ಪರ್ಶ ಶೃಂಗಾರ
ಮಧುರಾಲಿಂಗನ ಇನ್ನಿತರೇ ಎಲ್ಲ.,
ಬಯಕೆ ಕಾವಿಗೆ ತಟ್ಟನಿಳಿವ
ಕಾಮನೆಯ ತತ್ತಿ!!!

(ಚಿತ್ರ ಕೃಪೆ : ಅಂತರ್ಜಾಲ)

ಸಿಂಗ್ಪೂರ್ ಕಣ್ರೀ – ನಮ್ಮ ಬೆಂಗಳೂರು…


ತಳತಳನೆ ಹೊಳೆವ ಎಂ.ಜಿ. ರೋಡು;
ಸೀಳಿಕೊಂಡ ಬ್ರಿಗೇಡ್ ರೋಡು,
ಹೆಜ್ಜೆಗೊಂಡು ಪಬ್ಬು – ಬಾರು;
ಗಲ್ಲಿಗೊಂಡು ಸೈಬರು…

ಒನ್ ವೇಗಳ ಕರಾಮತ್ತು;
ಮೇಲೆ ಫ್ಲೈ ಓವರ್ರು,
ಎಡಕ್ಕೆ ಪೇ – ಅಂಡ್ – ಪಾರ್ಕು;
ಬಲಕ್ಕೆ ನಿರ್ಮಲ ಟಾಯ್ಲೆಟ್ಟು –
ಮೂತ್ರಕ್ಕೆ ಬರೀ ಎಂಟಾಣೆ!

ಸಿಗ್ನಲ್ಲಿಗೊಬ್ಬ ಕಿಸೆ ಕತ್ತರಿಸೋ ಟ್ರಾಫಿಕ್ಕು;
ಹೊತ್ತೊಯ್ಯಲಿಕ್ಕೆ ಟೈಗರ್ರು,
ಸದಾ ಮಿಣುಕು ಮಿಣುಕು ಟ್ಯೂಬ್ಲೈಟು,
ಪ್ಲಾಸ್ಟಿಕ್ ಗೊಬ್ಬರ ತಿನ್ನೋ ಬೀದಿ ದನ;
ಹಳ್ಳಕ್ಕೊಂದು ಸಸಿ ನೆಡಿ;
ಆಹಾ ಎಂಥಾ ರೋಡು?

ಸರ್ಕಾರಿ ವಾಹನಗಳಿಗೆ
ಭರಪೂರ ಹೊಗೆ – ರಿಯಾಯತಿ;
ಆನಂದ್ರಾವ್ ಸರ್ಕಲ್ಲಿನಲ್ಲಿ –
ವಾಯುಮಾಲಿನ್ಯ ನಿಯಂತ್ರಣ ಅಳಿಯೋ  ಗಾಡಿ!

ಅಬ್ಬಾ ಬೆಂಗ್ಳೂರೇ; ನೀನು ಸಿಂಗ್ಪೂರೇ!

(ಚಿತ್ರ ಕೃಪೆ : ಅಂತರ್ಜಾಲ)

ಮರವಾಗುವುದು…


ಮಾರಗಲ ಕಾಂಡ
ಮೇಲೆ ಊರಗಲ ಅದರ ರೆಂಬೆ ಕೊಂಬೆ;
ಇದೀಗ ಘಟಿಸಲಿಲ್ಲ ಈ ಸಿದ್ಧಿ…
ಹಿಂದೆ ಕರಗಿದ ನೆರಳು
ಬಿಚ್ಚಿಟ್ಟೀತು ನೂರು ಹೋರಾಟ ಗಾಥೆ
ಶತಮಾನದ್ದೋ ಕನಿಷ್ಠ ದಶಕದ್ದೋ ಹೀಗೆ…

ಕುಂಡೆಯೊಳು ಕುಂಡೆಯೂರಿ
ಮುದ್ದುಗೆರೆದಿತ್ತ ಗೊಬ್ಬರವಿತರೆ ಹೀರಿ;
ಬಿಸಿಲು ಕಾಯದ ಕಾಲಕ್ಕೆ ಸೊರಗೋ,
ಗಳಿಗೆ ತಳಿಗಳ ಉದ್ಯಾನವಿದಲ್ಲ…

ಇದು ಬಯಲ ಕಾಡು…

ತಲೆಮಾಸಿದ ಆಸಾಮಿಗಳದೆಲ್ಲ
ದಿನಗೊಂದು ಹಿಂಸೆ!
ಈ ನಡುವೆ ಮರವೂ ಮರವಾಗ ಬೇಕು;
ಮಳೆಗಾಲ ತೊಯ್ದು ಬಿಸಿಲಿಗೆ ಒಣಗಿ
ಚಳಿಗೆ ಮರಗಟ್ಟಿ (!)
ದಿಗ್ಗನೇಳೋ ಕಾಡ್ಗಿಚ್ಚಿಗೂ ಸುಟ್ಟುಕೊಂಡು
ಉಸಿರಿನ ಹಿಡೀ ಹಿಡಿಗೂ ಉಸಿಗಟ್ಟಿ
ಅದರ ಮೇಲೂ ಬದುಕುಳಿಯಬೇಕು…

ಹೊರಗಡೆ ಎಂತೆಂಥ ಬೀಜಗಳು
ಯಾವ ಕಾಲದಿಂದಲೂ ಕಾದದ್ದೇ ಬಂತು;
ನೆಲದ ಮೈಯನು ಸೀಳೋ ತಾಕತ್ತು
ಬೀಜಕಾದರೂ ಜನ್ಮೇಪಿ ಬಂದಿರಬೇಕು!
ಒಪ್ಪಲಾರದು ಭೂಮಿ ಬಿಟ್ಟಿ ಮೈಥುನಕ್ಕೆ…

ತನ್ನದೇ ರೆಂಬೆ ತುದಿಗೆ
ಪಾಪ ನನ್ನಂಥ
ಅಜ್ಞಾತ ಹಕ್ಕಿ ಗೂಡು, ತುಂಬೆಲ್ಲ ಮೊಟ್ಟೆ…
ಕಾದ ಹಾವುಗಳೆಲ್ಲ ಕಾಂಡ ಏರುವಾಗ
ಮೊಟ್ಟೆ ಕಾಯದ ವೃಕ್ಷವೂ ನೊಂದೀತು

ಅಂಥ ಭವ್ಯ ಮರವೂ ಅತ್ತೀತು
ಅಸಹಾಯಕತೆಗೂ ನಿರ್ವೀರ್ಯತೆಗೂ
ಆಗಾಗ…

ಅಲ್ಲಿಗೆ ಅರಿವಿಗೆ ಬಂತೇ
ಮರವಾಗುವುದಷ್ಟು ಸುಲಭವಲ್ಲ!

(ಚಿತ್ರ ಕೃಪೆ : ಅಂತರ್ಜಾಲ)

ದಂಡಯಾತ್ರೆ…


(೧೯೯೨ ರಲ್ಲಿ ಬರೆದ ಒಂದು ಹಳೇ ಕವನ)

ನನ್ನ ಹುಡುಗಿಯರೆಲ್ಲ
ನನ್ನ ನೀರಲ್ಲೇ ಈಜಿ
ದಡ ಸೇರಿಕೊಂಡು,
ಸೇಫ್ ಆಗಿ ಮದುವೆ ಮಾಡಿಕೊಂಡು
ಎಸ್ಕೇಪ್ ಆಗಿ ಹೋದರು

ಆದರೆ, ಈಗಲೂ
ನಾನು ಅದೇ ಪಾಪದ
ಬ್ರಹ್ಮಚಾರಿ…

ಸೈಕಲ್ ಪೋರಿ ಸುಬ್ಬುಲೂ
ಬಸ್ಟಾಪ್ ಗೆಳತಿ ಕಮಲೂ
ಚಡ್ಡೀ ದೋಸ್ತ್ ಮೀನಾಕ್ಷಿ
ಸದಾ ಬಾಲ್ಕಾನಿ ರೂಪಾವತಿ
ಹೈಹೀಲ್ಡ್ ಕುಳ್ಳಿ ವಿಜೀ ಲಕ್ಷೀ
ಗಬ್ಬು ನಾತದ ಪರಿಮಳ
ಹೀಗೆ, ಅದು
ಪರಷ್ಕರಣೆ ಆಗುತ್ತಲೇ ಇದ್ದ
ಮತದಾರರ ಪಟ್ಟಿ!

ಎಲ್ಲರಿಗೂ ಮದುವೆಯಾದಾಗ
ಥೇಟ್! ಪರನಾರಿ ಸೋದರನಂತೆ
ಹರಸಿ ಒಬ್ಬಟ್ಟು ತಿಂದು ಬಂದೆ…

ಸದ್ಯಕ್ಕೆ…
ಹೋಟೆಲ್ ಮೇ ಖಾನಾ
ಆಯಿಲ್ ಮಿಲ್ ಮೇ ಸೋನಾ
ವರ್ತನೆಯಾಗಿ ಹೋಗಿದೆ

ಹುಡುಕಾಟ ಚಾಲ್ತಿಯಲ್ಲಿದೆ
ಹೊಸ ಗರ್ಲ್ ಫ್ರೆಂಡ್ಸಿಗೆ
ಅವರಿಗೂ,
ಮದುವೆ ಫಿಕ್ಸ್ ಆಗೋವರಗೆ!

(ಚಿತ್ರ ಕೃಪೆ : ಅಂತರ್ಜಾಲ)

ನನ್ನ ಕೂಸೇ…


ಕಣ್ಣ ಮುಂದೆಯೇ ಗಿಡವಾಗಿ ಬೆಳೆದೆವಳೇ
ಎದೆಯೆತ್ತರದ ಮಗಳೇ
ನೀನೀಗ ನನ್ನ ಗೆಳತಿ…

ನೀನು ಚಿಕ್ಕವಳಿದ್ದಾಗ
ಅತ್ತಾಗಲೆಲ್ಲ ಎತ್ತಿಕೊಳ್ಳುತ್ತಿದ್ದೆ…
ಅಲ್ಲ ಅಲ್ಲ ಮುದ್ದು ಬಂದಾಗಲೂ ಸಹ!
ಎಷ್ಟು ಪುಟ್ಟದಿತ್ತು ಮರೀ ನಿನ್ನ
ಬೆಳಲುಗಳು ಮೊದಲ ಸಲ
ಹೆರಿಗೆ ಮನೆಯಲಿ ತಾಕಿದಾಗ..

ನಾನಗೋ ಮುಗಿಯದ ಮನೆಗೆಲಸ
ಯಾರನು ಏಗ ಬೇಕೋ! ಮಗುವನೋ?
ಇಲ್ಲ, ಇನ್ನೂ ಕೂಸುತನ ಬಿಡದ ಅಪ್ಪನನೋ?
ನಡುವೆಲ್ಲಿತ್ತು ಹೇಳೇ ಅಂತರ…
ನೀನೋ ದಿನವಿಡೀ ಅಂಟಿಕೊಂಡಿರುತಿದ್ದೆ
ನಿದ್ರಿಸಲೆಲ್ಲಿ ಬಿಟ್ಟಿದ್ದೀ ನೀನಾಗ ನನಗೆ?…

ಮೊದಲು ಬೋರಲು ಬಿದ್ದಾಗ
ಕರ್ಜೀಕಾಯಿ ಕರೆದಿದ್ದೆ, ನಿನ್ನ ಬಾಯಿಗದರ ಚೂರು…
ಮೊದಲು ದೇಕಿದಾಗ ಚಪ್ಪಾಳೆ ತಟ್ಟಿದ್ದೆ
ಗೋಡೆಗಾತು ಪುಟ್ಟ ಹೆಜ್ಜೆಗಳನು
ಊರಿ ಊರಿ ನನ್ನೆಡೆಗೆ ಬಂದಾಗ ಕುಣಿದಾಡಿದ್ದೆ
ಆ ಜೇನ ಹೆಬ್ಬೆರಳನೆಷ್ಟು ಚೀಪಿದೆಯೋ
ಈಗೆಲ್ಲ ಅವೆಲ್ಲ ಆಲ್ಬಮಿನ ಚಿತ್ರಗಳು…

ಹೆಣ್ಣು ಹೆತ್ತವರಿಗೆ ವರ್ಷಗಳು ನಿಮಿಷಗಳು
ಬೆಳವಣಿಗೆ ವಾಯು ವೇಗ!
ನೀನು ನನ್ನೆತ್ತರ
ಮನಸು ಅದಕಿಂತ ಎತ್ತರ!
ಈಗ ನಾನೇ ನಿನ್ನ ಕೂಸು ಮಗಳೇ…

(ಚಿತ್ರ ಕೃಪೆ : ಅಂತರ್ಜಾಲ)

ಸೂರ್ಯ ನಮಸ್ಕಾರ…


ಆ ರವಿಯ ಬೆಳಕಿನಲೇ ಭೂಮಿಯ ಬದುಕು;
ಪಕ್ಷಕಲೆವಾತ್ಮ ತಿಂಗಳನ ಹೊಳಹು!
ಒಂದು ಪರಮಾತ್ಮ ಇನ್ನೊಂದು ಜೀವಾತ್ಮ
ಹುಟ್ಟಿನಿಂದೆರೆಡು ಸೌಮ್ಯ ಬಿಂದು…

ಎವೆಗೂ ನಿಲುಕದೀ ನಭೆಯು
ಶತ ಕೋಟಿ ತಾರೆಗಳ ಸಂತೆ;
ಹಾಳು ಸುರಿದಿದೆ ಬೆಳಕಿನೋಕುಳಿ
ನಡುವೆ ಏನೀ ಗಾಢಾಂಧಕಾರ?

ಏಳು ಕುದುರೆಗಳು ಮೇಲೆ ಸರದಾರ
ಮೂಡಣಕು ಪಡುವಣಕೂ ಸಂಚಾರ;
ತಾನುರಿದು ತನ್ನೊಳಗೆ, ಧಗಧಗಿಸೋ
ಆದಿ ಅಶಾಂತ ರುದ್ರ ರೂಪಿ!

ಕ್ರಮಿಸಿ ಜಗದುದ್ದ ತನ್ನದೇ ಹಾದಿ
ತಣಿದು ತುಸು ತಾನಿಳಿದು ಧರೆಗೀವ ಮುತ್ತು;
ಹಸಿದ ಜೀವ ಜಾಲಕೆ ಅನ್ನವ ಬಸಿದು
ಉಸಿರುಣಿಸಿ ಗುಕ್ಕು ಗುಕ್ಕು…

ಅವನಲ್ಲವೇ ನಿಜಕೂ ದೈವ?
ಕರ್ಣ ಧಾತುವಿನ ಕರುಣೆ ಅಪಾರ,
ಕಪ್ಪು ರಂಧ್ರವು ಬಾರದಿರಲಿ ಎಂದೂ
ಭುವಿಯತ್ತ ಚುಂಬನವು ಸಾಗುತಿರಲೆಂದೂ…

(ಚಿತ್ರ ಕೃಪೆ : ಅಂತರ್ಜಾಲ)

ಉಪನಯನ…


ಅವಳೂ ಬಂದಿದ್ದಳು
ನನ್ನ ಉಪನಯನಕ್ಕೆ
ಕಂಕುಳಲ್ಲಿ ವರ್ಷಾರ್ಧದ ಮಗು!

ಬದಲಾಗಿದ್ದಾಳೆ ಎನಿಸಿತ್ತು
ಮೊದಲಿಗಿಂತಲೂ ಮೈದುಂಬಿಕೊಂಡಿದ್ದಳು
ಕಂಗಳಲ್ಲಿ ಅದೇ ಮಾದಕತೆ

ಎಷ್ಟು ವರ್ಷಗಳಾಗಿತ್ತು
ಇವಳನ್ನ ಹತ್ತಿರದಿಂದ ನೋಡಿ…
ಅವಳು ಹಳದೀ ಸೀರೆಯಲ್ಲಿದ್ದಳು
ಪತಿರಾಯ ಕುಸುರಿಯ ಹಳದೀ ಜುಬ್ಬ
ಮಗುವಿಗೆ ಹಳದೀ ಸ್ವೆಟರ್ರು
ನಾನೂ… ಹಳದೀಮಯನಾಗಿದ್ದೆ
ಜನಿವಾರ ದಟ್ಟಿ ಅಂಗವಸ್ತ್ರ

ಇಂತದೇ ಹಳದೀ ಚೂಡಿಯಲ್ಲಿ
ಅಂದಿನ ಧಗೆ ದಿನಗಳಲ್ಲಿ
ಕ್ರೆಸೆಂಟ್ ಪಾರ್ಕಿನ
ಗುಲ್ಮೊಹರದ ಅಡಿಯಲ್ಲಿ
ಪ್ರೀತಿ ಕಿಚ್ಚು ಹಚ್ಚಿದವಳು

ಭಲೇ ಕಲಾವಿದೆ!
ಹಳತನ್ನ ಮರೆತಂತೆ
ದಿವ್ಯ ನಟನೆ!
ನನ್ನ ಕಣ್ಣಾಲಿಯಲಿ
ದುಮ್ಮಿಕ್ಕಲಾರದೆ ತಡೆದ
ಕಣ್ಣಿರ ಹನಿ…

(ಚಿತ್ರ ಕೃಪೆ : ಅಂತರ್ಜಾಲ)

 

ಪ್ರಳಯಾತಂಕ…


ಮೊದಲೇ ಬದುಕಿ ಸತ್ತವರಿವರು
ಮತ್ತೇಕೆ ಸಾಯ ಬಡಿಯುತ್ತೀರಿ!
ಪ್ರಳಯಾತಂಕವೂ
ಮಾರಬಲ್ಲ ಸರಕೇ ಮಾಧ್ಯಮಕ್ಕೆ?

ಗ್ರಹ ಫಲಾಫಲಗಳೆಲ್ಲ ಲೆಕ್ಕಿಸೋ
ಉದ್ದಾಮ ಪಂಡಿತರೆಲ್ಲದ್ದರೋ ಸುನಾಮಿಸುವಾಗ;
ಶಂಖದಮಲಲಿ ಗಾಂಡೀವಿ
ಪಾಂಚಜನ್ಯವ ಮರೆತು
ದೇವದತ್ತವ ಊದಿದರೆಲ್ಲಿ ಸದ್ದು?

ಪ್ರಳಯದ ಉಮೇದೂ ರೋಗವೇ
ಕಾಣಬಾರದ ಸುಖವೆಲ್ಲ ಹುಡುಕಾಟ
ಉಳಿದಾಯುಷ್ಯ ಲೋಲುಪತೆಗೆ ಮೀಸಲೇ?
ಭಯಗ್ರಸ್ತ ಮಂದಿಗೇಂತ ಸಮೂಹ ಸನ್ನಿ
ಯಾರ ಅಂತ್ಯಕೆ ಯಾರ ಹುಸಿ ಚುಚ್ಚು ಮದ್ದು?

ಭೂಮಿ ಬಿರಿಯುವುದಿಲ್ಲ
ಕಾಲ ಸ್ತಂಭಿಸುವುದಿಲ್ಲ
ಇದು ಬರಿ ತಲೆ ಕೆಟ್ಟವರ ಅಪಪ್ರಚಾರ!
ಕಲ್ಕಿಗಿನ್ನೂ ಕಾಲ ಕೂಡಿಬಂದಿಲ್ಲ
ಕುದುರೆ ಏರುವುದೂ ಹತ್ತಿರದಲಿಲ್ಲ…

ನೆರೆಗೂ ಬರಕೂ ಮಿಡಿಯಲಿ ಮನ
ಒಮ್ಮೆ ನೀರಿಗಾಹಾಕಾರ,
ಮತ್ತೆ ಕೊಚ್ಚಿ ಮುಳುಗಿಸೋ ವರ್ಷಧಾರೆ
ಕಂಗಾಲು ಜನಸ್ತೋಮ ಬರಿಗೈ ಈಗ;
ಎತ್ತೊಕೊಡಿ ನಿಮ್ಮ ತುತ್ತಿನ ಪಾಲ…

ಒಂದೊಮ್ಮೆ ಪ್ರಳಯವಾದರೆ ದಿಟವಾಗೂ
ದಕ್ಕೀತು ಒಳ್ಳೆ ಜನ್ಮ!

ಶೂನ್ಯ ಸೃಷ್ಟಿಗೆ ಕುಂಬಳವು ಸಿದ್ಧಿಸದು
ಉದುರ ಬಲ್ಲದು ಬರೀ ಬೂದಿ!

(ಚಿತ್ರ ಕೃಪೆ : ಅಂತರ್ಜಾಲ)

ನಿರೀಕ್ಷಣ…


ಎಂದಿನವರೆಗೋ ಈ ನಿರೀಕ್ಷಣ
ಯಾವ ವರ ಸಿದ್ಧಿಗೆ ತಪಿಸೋ ಜೀವನ?
ಮುಕ್ತ ರಶ್ಮಿಗೆ ಅರಳೋ ಸ್ಪಂದನ
ಎಂಥಾ ಗಾನದ ಅಮಲಿಗೆ ಪಾವನ
ಚಿರಂತನ ತೆವಲಲಿ ಗೋಳು ಮುದಿತನ

ಅವಚಿಕೊಳ್ಳಲಿ ನೆಲ ನೀರು ಆಕಾಶ
ರಮ್ಯ ಭೂಮಿಯ ಗೋಲಕೂ,
ನಿಲುಕು ಸೂರ್ಯನ ಮೀರಿ ಮಿಂಚಲಿ
ಅಗೋಚರ ಚುಕ್ಕಿ ಚುಕ್ಕಿಯೂ
ಪ್ರಕಟವಾಗಲಿ ಅದರದೂ
ಸುಪ್ತ ಬೃಹತ್ ಪ್ರತಿಭೆಯೂ!

ಪುಟ್ಟ ಹೊಗಳಿಕೆ – ಸಣ್ಣ ಕದಲಿಕೆ
ಬಿರಿದೂ ಬಿರಿಯದ ಹೂ ನಗೆ!
ಹಂಬಲಿಸಿ ಹಂಬಲಿಸಿ ಶಬರಿತನ!
ಗ್ರಹಣಗ್ರಸ್ಥ ಅಲ್ಪ ಬದುಕಿದು,
ಅರಿವಿನೀ ಅಹಂ ಪುಟ್ಟ ಬಾವಿಗೆ
ಕಿರಿದು ನೋಟವು, ಬುದ್ಧಿ ಹಿಡಿ ಗಾತ್ರವು

ನಡುವೆ ಏನಿದು ಮೋಹವೋ!

ಮೇರು ಶಿಖರವು
ನಿಚ್ಚಳಾಕಾಶವ ಹೊಗಳಿದರೆ
ಕಣವೆಯಲರಳೋ
ಅಘ್ರಾಣಿತ ಪುಷ್ಪದಂತಹ
ನನಗೇಕೆ ಸಲ್ಲದ ಪುಳಕವೋ!

(ಚಿತ್ರ ಕೃಪೆ : ಅಂತರ್ಜಾಲ)

ನೆನಪ ಪಳಿಯುಳಿಕೆ…


ನೆನಪ ಪಳಿಯುಳಿಕೆಯಲಿ
ಅವಳ ಹೆಜ್ಜೆಯ ಅಚ್ಚು
ತಾಕಿದಾಗಲೆಲ್ಲ ನನಗೆ ಪುಳಕ

ನೆಲ ಮೋಡ ಸರಸಕೆ
ಎದೆ ಗದ್ದೆ ಬೈಲು ಒದ್ದೆ ಒದ್ದೆ
ನೆಂದಾಳೋ? ನೆಗಡಿಯೋ! ಅಳುಕು

ಹಳ್ಳಿ ಹಾದಿಯಲಿ ನೆರಿಗೆ ಲಂಗವ
ಒದೆದು ನಡೆದವಳ ಕಾಲ್ಗೆಜ್ಜೆ ಗಲುಕ
ಸದ್ಧಿನ್ನೂ ಕಿವಿಯಲೇ ಸ್ತಬ್ಧ

ಕಬ್ಬು ಜಲ್ಲೆ ಸೀಳಿ
ಅಗೆದಗೆದು ರಸ ಹೀರಿದಾಗ
ನಾನೇ ಕಬ್ಬಂತಾಗೋ ಮೆಲುಕು

ಅವಳಿಗೂ ನನ್ನೆತ್ತರದ ಮಗನೀಗ
ನಕ್ಕಾಗ ಅದೇ ಕೆನ್ನೆ ಗುಂಡಿ
ನೆನವಳೋ ಇಲ್ಲವೋ, ಆತಂಕ!

ಕೆಲ ಚಿತ್ರಗಳೇ ಹಾಗೆ, ಚೆನ್ನ ಚೌಕಟ್ಟಿನೊಳಗೇ…

ಪ್ರಶಾಂತ್ ಪಿ ಪಟವಾಕರ್…

Dec 10, 2011

ನಿಮ್ಮ ಕವನಗಳನ್ನು ತಕ್ಷಣಕ್ಕೆ ಓದಿದರೆ.. ಅದರ ಸುಂದರ ಸವಿನುಡಿಗಳ ಸೊಗಸು ಅರಿಯಲು ಸಾಧ್ಯವಿಲ್ಲ…
ಅವಿಶ್ರಾಂತ ಮನಸ್ಸನ್ನು ಚಿಂತೆಗಳಿಂದ ದೂರ ಸರಿಸಿ.. ಅದರಲ್ಲಿ ನಿಮ್ಮ ಕವಿತೆಯೊಂದನ್ನೇ ಆಡಲು… ಕುಣಿಯಲು.. ಹಾಡಲು ಬಿಡಬೇಕು…
ಆಗಲೇ ಅದರ ರುಚಿ ಅದ್ಭುತ.. ಹಾಗಾಗಿಯೇ ತಡೆದು ತಡೆದು ಓದಿದರೆ ಎಂದೂ ಮರೆಯದ ಕವನ… ಇದು ನಮ್ಮ ಮನಸಿನ ಮಾತು…
ಇನ್ನು ನಿಮ್ಮ ಈ ಕವನದ ಭಾವಾರ್ಥವನ್ನು ಕಂಡರೆ… ಎಲ್ಲವನ್ನು ಕಾಣುತ್ತೇವೆ… ಏನನ್ನೂ ತಿಳಿಯದೆ , ಎಲ್ಲ ಬಲ್ಲವರಂತೆ ಬದುಕು..
ಹುಡುಕಿದರೂ ಎಲ್ಲಾ ಖಾಲಿ .. ಆದರೂ ದರ್ಬಾರು ಜೋರು… ಬ್ರಹ್ಮನ ಹಣೆಬರಹ .. ನಿಮ್ಮ ಕಲ್ಪನೆಯ ಬರಮಪ್ಪನ ಲೇಖನ…
ರಾಜಕೀಯ ಎಲ್ಲೆಡೆ .. ರಾಜರೇ ಕೈಬೊಂಬೆಗಳು .. ಇಲ್ಲಿ ಮಂತ್ರಿಗಳದ್ದೆ ಆಡಳಿತ… ಕಂತ್ರಿ ಬುದ್ದಿಯಲಿ ಸಿಕ್ಕ ಸಿಕ್ಕದ್ದನ್ನೆಲ್ಲಾ ದೋಚುತ..
ಮೆರೆಯುತಿರುವ ಅಟ್ಟಹಾಸ… ಅರಿವಿಲ್ಲದೆ .. ಆಸೆಗಳಿಗೆ ಮನಸೋತ ಮುದ್ದ ಜನಗಳ ಗೋಳಾಟ … ಮಹಡಿ ಭಂಗಲೆಗಳ ಸಾಹುಕಾರರೂ
ಇಲ್ಲಿ ಕೈಯೊಡ್ಡಿ ಭಿಕ್ಷೆ ಬೇಡುವ ವಿಭಿನ್ನತೆಯ ವರ್ಣನೆ… ಒಟ್ಟಾರೆ ಹೇಳುವುದಾದರೆ … ಸರ್… ನಿಮ್ಮ ಕವನಗಳಲ್ಲಿ ಅದೆಷ್ಟೇ ಖುಷಿ , ದುಃಖ , ಆಸೆ , ಪ್ರೇಮ , ವರ್ಣನೆ , ವಿಶ್ಲೇಷಣೆ , ವಿಡಂಬನೆ , ಹೋಲಿಕೆ , ಬಯಕೆ , ಸ್ನೇಹ … ಹೀಗೆ ಇನ್ನು ಅನೇಕ ವಿವಿಧತೆಯಲ್ಲಿ .. ಓದಿದಾಗ ಮೊದಲು ಸಿಗುವ ಸ್ವಾದವು ಹಾಸ್ಯ.. ಕಾರಣ ನಿಮ್ಮ ಕವನದ ರಚನೆಯ ಶೈಲಿ ಮತ್ತು ವಿಶೇಷತೆ ಎಂಬಂತೆ ಕಾಣುವ ಪದಗಳ ಪ್ರಯೋಗ… “ಬುದ್ಧಿ ಜೀವಿಗಳ ಸಾಲಿನಲ್ಲಿ ಒಬ್ಬ ಮಗುವಿನಂತಹಾ ಮುಗ್ದ ಜೀವಿ.” ಅದು ನೀವು ಸರ್.. ನಿಮಗೆ ನಮ್ಮ ಮನಸ್ಪೂರ್ವಕ ವಂದನೆಗಳು..

ಅಹ್ಹಃ … ಇದೇ ಮಾತಿನ ಶೈಲಿ ಮತ್ತು ಪದಗಳ ಪ್ರಯೋಗಗಳು.. ನಿಮ್ಮನ್ನು ಮಗುವಿನಂತೆ ಮುಗ್ದರಾಗಿಸುತ್ತದೆ..
ವಯಸ್ಸಿನ ಅಂತರದಲ್ಲಿ ಇರುವ ವ್ಯತ್ಯಾಸಕ್ಕೆ ನಾವು ನಿಮ್ಮಿಂದ ಆಶೀರ್ವಾದ ಬಯಸಬೇಕು.. ನೀವು ನಮ್ಮೆದುರು ಅಡ್ಡ ಬೀಳುವುದು.. ನಮ್ಮಲ್ಲಿ ಮುಜುಗರದ ಸಂಗತಿಯನ್ನು ತೋರಿಸುತ್ತದೆ.. ಅದರೂ ನಿಮ್ಮೊಳಗಿರುವ ಮಗುವಿನ ತುಂಟತನ ಸುಂದರ ಕವನಗಳ ರೂಪದಲ್ಲಿ ಕಾಣುವುದು… ಸರ್…
ನೀವು ಇಲ್ಲಿ ಮರ ಹಿಡಿದು ನಿಂತಿರುವ ಚಿತ್ರಕ್ಕೆ ಮನಸ್ಸಿನಲ್ಲಿ ಕವನ ಮೂಡುತಿದೆ.. ಅದರ ಬಗ್ಗೆ ಇನ್ನೂ ಹೆಚ್ಚು ಚಿಂತಿಸಿ.. ಭಾವನೆಗಳ ಸೆರೆ ಹಿಡಿದಿಡುವ ಆಸೆ.. ಅದಕ್ಕೆ ಬೇಕು.. ನಿಮ್ಮ ಅನುಮತಿ…

 

Dec 21, 2011

ನೆನಪುಗಳ ನೆನಪು ಸದಾ ನೆನಪಾಗಿರಲು

————————————–

ಅನನ್ಯ ಅದ್ವಿತೀಯ ಅದ್ಭುತಗಳ ಕಾರಣ
ನೀವು ಬಿಡುವ ಅಪರೂಪದ ಪದಗಳ ಬಾಣ
ಅಲ್ಲೊಂದು ಕಥೆ ಕವನ ಕಾಲ ಹರಣ
ಅಲ್ಲೊಮ್ಮೆ ನಿಮ್ಮ ಪರಿಚಯದ ಕ್ಷಣ

ಅಂಧ ದೀಪಾವಳಿಯ ಆ ಒಂದು ಕವನ
ಮೈಮರೆತು ಎಲ್ಲೋ ಹೋಯಿತು ಮನ
ಅದರ ನಂತರ ಓದುತ್ತಾ ಪ್ರತಿ ದಿನ
ಬಾನೆತ್ತರದ ಭಾವನೆಗಳ ನಿಮ್ಮ ಕವನ

ಮತ್ತೆ ಮಾಡಿದಿರಿ ದಂಡಯಾತ್ರೆಯ
ಹೇಳಿದಿರಿ ನಿಮ್ಮ ಗೆಳತಿಯರ ಪರಿಚಯ
ಹಳೆ ಭಾವನೆಗಳಿಗೆ ಹೊಸ ಪ್ರೀತಿಯ
ಸೇರಿಸಿ ಬರೆದಿರಿ ಮಜವಾದ ಕವಿತೆಯ

ಮರಗಿಡಗಳ ಮೇಲಿನ ನಿಮ್ಮ ಪ್ರೀತಿ
ಆಗಿತ್ತು ಅಲ್ಲಿ ಕವನಕ್ಕೆ ಹೊಸ ಸಂಗತಿ
ಗಿಂಡಿಯ ಮಾಣಿ , ಪಿಕಲಾಟದ ಪಜೀತಿ
ಜೀ ಹುಜೂರ್ ಇನ್ನು ನಮ್ಮನ್ನು ಕಾಡುತೈತಿ

ಹೊಸ ರಾಮಾಯಾಣದ ಸುಗ್ರೀವರಂತೆ
ಎಲ್ಲರೂ ಕಾಣುವರಂತೆ ನಿಮ್ಮದಿಲ್ಲಿ ಚಿಂತೆ
ನಿಮ್ಮ ಮಾತುಗಳಲ್ಲಿ ನೀವು ಗುರುವಿನಂತೆ
ಅದೇನೇ ಇರಲಿ ಕೊನೆಯಲ್ಲಿ ಮಗುವಿನಂತೆ

ಮರ ಹಿಡಿದ ನಿಮ್ಮನ್ನು ಮಗುವಿನಂತೆ ಕಂಡಿದೆ
ನನ್ನ ಮನಸ್ಸಿನ ನೆನಪುಗಳು ಕವನವಾಗಿದೆ
ಬರೆಯಲು ಹಲವು ದಿನಗಳ ಯೋಚನೆ ಮಾಡಿದೆ
ನೆನಪುಗಳ ನೆನಪು ಸದಾ ನೆನಪಾಗಿರಲು ಕವನ ಬರೆದೆ..

|| ಪ್ರಶಾಂತ್ ಖಟಾವಕರ್ ||

 

Jan 19, 2011

ಅಗೋಚರ
**************

ಬಚ್ಚಿಟ್ಟ ಬಣ್ಣ ಬಣ್ಣಗಳ
ಭಾವನೆಗಳ ಅವತಾರಗಳನ್ನು
ಬಿಂಬಿಸುವ ಬದುಕು..

ಬಣ್ಣ ಹಚ್ಚಿ ಮುಖವಾಡ ಧರಿಸಿ
ನಟಿಸಿ ನಗಿಸಿ ಕುಣಿದು ಹಾಡಿ
ಕೂಗಾಡಿ ನುಡಿವ ನೂರಾರು
ಭಾವಜೀವಿಗಳ ಬದುಕನ್ನು
ಕಾಲ್ಪನಿಕ ಕಥೆಗಳ ಕನಸಿನ
ಮಾಯಾಲೋಕ ಸೃಷ್ಟಿಸಿ..

ಅಭಿಮಾನಿಗಳ
ಮಹಾ ಸಾಗರದಲ್ಲಿ
ದೂರದ ತೀರವ
ಹತ್ತಿರಕ್ಕೆ ಕಾಣುವಂತೆ
ಮನೆ ಮನೆ ಮಾತುಗಳ ಕಟ್ಟಿಟ್ಟು
ಇಡೀ ಜಗದ ನಾಟಕವ ಹಿಡಿದಿಟ್ಟು
ಮನಸೆಳೆಯುವ ಚಿತ್ರಗಳ
ತೆರೆಯ ಮೇಲೆ ತರುವ
ತೆರೆಯ ಹಿಂದಿನ
ಕಾಣದ ಕೈ ಎಂದರೆ
ಛಾಯಾಗ್ರಾಹಕ ..
.
.
ಅದೇ ಪ್ರಪಂಚವ
ಪ್ರಕೃತಿ ಸೌಂದರ್ಯವ
ಐತಿಹಾಸಿಕ ಪುರಾಣವ
ನೈಜ ಘಟನೆಗಳ ನೋಟವ

ಕನ್ನಡ ಪದಗಳ ಮಾಲೆಯ ಮಾಡಿ
ಅದಕ್ಕಲ್ಲಿ ಸುಂದರ ಚಿತ್ರಣವ ನೀಡಿ
ಕಹಿ ಸಿಹಿ ನೆನಪುಗಳ ಸ್ವಲ್ಪ ಕೂಡಿ
ಬದಲಾವಣೆಯ ರಾಗದ ಜೊತೆ ಹಾಡಿ

ಎಲ್ಲರನ್ನು ವಿಸ್ಮಯಗೊಳಿಸುವ
ಅನನ್ಯ ಅತ್ಯದ್ಬುತ ಕವನಗಳೇ
ಬದರಿನಾಥ ಪಲವಳ್ಳಿಯವರ ಕವನಗಳು ..

|| ಪ್ರಶಾಂತ್ ಖಟಾವಕರ್ ||

 

 

ಮರವಾಗುವುದು…


ಮಾರಗಲ ಕಾಂಡ
ಮೇಲೆ ಊರಗಲ ಅದರ ರೆಂಬೆ ಕೊಂಬೆ;
ಇದೀಗ ಘಟಿಸಲಿಲ್ಲ ಈ ಸಿದ್ಧಿ…
ಹಿಂದೆ ಕರಗಿದ ನೆರಳು
ಬಿಚ್ಚಿಟ್ಟೀತು ನೂರು ಹೋರಾಟ ಗಾಥೆ
ಶತಮಾನದ್ದೋ ಕನಿಷ್ಠ ದಶಕದ್ದೋ ಹೀಗೆ…

ಕುಂಡೆಯೊಳು ಕುಂಡೆಯೂರಿ
ಮುದ್ದುಗೆರೆದಿತ್ತ ಗೊಬ್ಬರವಿತರೆ ಹೀರಿ;
ಬಿಸಿಲು ಕಾಯದ ಕಾಲಕ್ಕೆ ಸೊರಗೋ,
ಗಳಿಗೆ ತಳಿಗಳ ಉದ್ಯಾನವಿದಲ್ಲ…

ಇದು ಬಯಲ ಕಾಡು…

ತಲೆಮಾಸಿದ ಆಸಾಮಿಗಳದೆಲ್ಲ
ದಿನಗೊಂದು ಹಿಂಸೆ!
ಈ ನಡುವೆ ಮರವೂ ಮರವಾಗ ಬೇಕು;
ಮಳೆಗಾಲ ತೊಯ್ದು ಬಿಸಿಲಿಗೆ ಒಣಗಿ
ಚಳಿಗೆ ಮರಗಟ್ಟಿ (!)
ದಿಗ್ಗನೇಳೋ ಕಾಡ್ಗಿಚ್ಚಿಗೂ ಸುಟ್ಟುಕೊಂಡು
ಉಸಿರಿನ ಹಿಡೀ ಹಿಡಿಗೂ ಉಸಿಗಟ್ಟಿ
ಅದರ ಮೇಲೂ ಬದುಕುಳಿಯಬೇಕು…

ಹೊರಗಡೆ ಎಂತೆಂಥ ಬೀಜಗಳು
ಯಾವ ಕಾಲದಿಂದಲೂ ಕಾದದ್ದೇ ಬಂತು;
ನೆಲದ ಮೈಯನು ಸೀಳೋ ತಾಕತ್ತು
ಬೀಜಕಾದರೂ ಜನ್ಮೇಪಿ ಬಂದಿರಬೇಕು!
ಒಪ್ಪಲಾರದು ಭೂಮಿ ಬಿಟ್ಟಿ ಮೈಥುನಕ್ಕೆ…

ತನ್ನದೇ ರೆಂಬೆ ತುದಿಗೆ
ಪಾಪ ನನ್ನಂಥ
ಅಜ್ಞಾತ ಹಕ್ಕಿ ಗೂಡು, ತುಂಬೆಲ್ಲ ಮೊಟ್ಟೆ…
ಕಾದ ಹಾವುಗಳೆಲ್ಲ ಕಾಂಡ ಏರುವಾಗ
ಮೊಟ್ಟೆ ಕಾಯದ ವೃಕ್ಷವೂ ನೊಂದೀತು

ಅಂಥ ಭವ್ಯ ಮರವೂ ಅತ್ತೀತು
ಅಸಹಾಯಕತೆಗೂ ನಿರ್ವೀರ್ಯತೆಗೂ
ಆಗಾಗ…

ಅಲ್ಲಿಗೆ ಅರಿವಿಗೆ ಬಂತೇ
ಮರವಾಗುವುದಷ್ಟು ಸುಲಭವಲ್ಲ!

(ಚಿತ್ರ ಕೃಪೆ : ಅಂತರ್ಜಾಲ)

ಮಧುಮಯ ಸಮಯ…

ನಿನಗಿಂತ ದೊಡ್ಡ ಚೋರಿ
ಇನ್ನಾರಿದ್ದಾರೇ ಹೇಳೆ ಪೋರಿ?

ಕದ್ದೆನ್ನ ಹೃದಯವನೊಮ್ಮೆ
ಮರೆಯಲಿ ಕಿವಿಕೊಟ್ಟು ಕೇಳು
ಅದು ಮಿಡಿಯುತಿಹ ನಿನ್ಹೆಸರ
ಕವನ ಸಂಕಲನವನೊಮ್ಮೆ
ಮನಸಾರೆ ಓದಿ ನೋಡು

ಹತ್ತು ವರುಷಗಳಿಗೂ ಮಿಗಿಲು
ನಲ್ಲೇ ಈ ಪ್ರೇಮ ಸಿಂಧು,
ಸವೆದ ಹಾದಿಯ ಹಿನ್ನೋಟ
ಹಬ್ಬಿ ಬದುಕೆಲ್ಲಾ ದಿವ್ಯ ಗಂಧ
ಅರೆದುಕೊಂಡಿತೀ ತಂತಾನೇ ಕವಿತೆ

ಸುಮ್ಮನೆ ಬಿಮ್ಮನೆ ಕಮ್ಮನೆಯು
ನನ್ನೊಳಗ ನೀನೆಂಬ ಸಂಚಲನ ಕೋಶ
ಉಣಿಸಿದ್ದು ಚೈತನ್ಯ ಪೂರ ಒಳಲೆ
ಯಾವ ಜನ್ಮದ ನಂಟೋ, ಮರೀ!
ಜೀವಮಾನವೂ ಮಧುಮಯ ಸಮಯ…

(ಚಿತ್ರ ಕೃಪೆ : ಅಂತರ್ಜಾಲ)

ಕಾಮಧೇನು…


ಅಭ್ಯುತ್ಥಾನದ ಹುಸಿ ಆಶ್ವಾಸನೆ;
ಅಪ್ರಬುದ್ಧ ಅಕಾಲ ಕಾಮನೆ;
ನಂಜು ಹಿಡಿದಿದೆ ಮೆದುಳು;
ಮುಗಿಲು ಮುಟ್ಟಿದೆ ತ್ರಸ್ತ ಒಡಲು…

ಕಾಣದ್ದ ಕಂಡಂತೆ ಬೆಚ್ಚಿ;
ಹುಳುಕು ಹಲ್ಲುಗಳ ಮುಚ್ಚಿ;
ಸತ್ಯಕ್ಕೆ! ನಿರಂತರ ಆವಿಷ್ಕಾರ;
ಕೆತ್ತು ಕಂಗೆಟ್ಟ ಚೀತ್ಕಾರ…

ಎಲ್ಲಿದ್ದೀ ನನ್ನ ಕಾಮಧೇನು?
ನಾನು ನಾನೇ ಅರಿತಿಲ್ಲದ ಮೇಲೆ
ನೀನು ಯಾರು?

ಎಲ್ಲಪ್ಪನ ಬಸಿರೇ,
ಕಲಸು ಮೇಲೊಗರೇ;
ಉಳಿದು ಎಲ್ಲೋ, ನನ್ನಲ್ಲಿ ಇನ್ನೂ
ನಿರಂತರ ಕಾಡ್ವ ಹೆಣ್ತನದ ಉಸಿರೇ!

(ಚಿತ್ರ ಕೃಪೆ : ಅಂತರ್ಜಾಲ)

ಪಲವಳ್ಳಿ ಕವಿತೆ ಓದಿದ್ದೀರಾ ?

ಮೂಕ ಹಕ್ಕಿಯ ಕನಸುಗಳ ಪಯಣ………………………

 ಶನಿವಾರ 21 ಎಪ್ರಿಲ್ 2012

ಪಲವಳ್ಳಿ ಕವಿತೆ ಓದಿದ್ದೀರಾ ?

 -ರವಿ ಮೂರ್ನಾಡು

ತಿಳಿ ನೀರಿಗೆ ಬೆರಳಾಡಿಸಿದಾಗ ಅಲೆ ಅಲೆಗಳ ಉಂಗುರ. ಬೆರಳಿಗೆಂಥ ಉಮ್ಮಸ್ಸು ..! ಉಬ್ಬುಬ್ಬಿ ತಬ್ಬಿಕೊಳ್ಳುವುದು ತೀರಕೆ. ಸಂವೇಧನೆಯ ಸೂಕ್ಷ್ಮಗಳನ್ನು ಎಳೆ ಎಳೆಯಾಗಿ ಬಿಡಿಸಿಡುವ ಕವಿತೆ, ತಾಳ್ಮೆಯಿಲ್ಲದಿದ್ದರೆ ಓದಿಸುವುದೇ ಇಲ್ಲ. ಬರೆದ ಕವಿಯ ಬರವಣಿಗೆಯನ್ನು ಲೆಕ್ಕಕ್ಕೆ ತೆಗೆದುಕೊಳ್ಳುವುದೇ ಇಲ್ಲ. ಕವಿತೆ ಅನ್ನುವ ಹೆಸರೇಳಿಕೊಂಡೇ ಉಳಿದು ಬಿಡುವ ಇಂತಹ ಕವಿತೆಗಳಲ್ಲಿ ಸತ್ವಗಳು ಬೆಳೆಯುತ್ತಲೇ ಇರುತ್ತವೆ. ಅದರ ನಿಜತ್ವದ ಸಾರವನ್ನು  ನಿಜವಾದ ಮನಸ್ಸು ಹೀರುವವರೆಗೆ. ಪಲವಳ್ಳಿಯ ಕವಿತೆ ಅಂತ ಬರೆದರೆ ಹೇಗಿರುತ್ತದೆ ? ಅಂದರೆ, ಭಾವ ಪಲ್ಲಟಗಳು .ಇದು ಮೂರ್ತ ಹೆಸರು. ಈಗ ನೋಡಿದ ಚಂದ್ರ, ಕಣ್ಣು ಮಿಟುಕಿಗೆ  ಕ್ಷಣಾರ್ಧದಲ್ಲೇ ಬೆಟ್ಟದ ಮರೆಯಲ್ಲಿ  ಇಣುಕುತ್ತಾನೆ ಇವರ ಕವಿತೆಗಳಲ್ಲಿ.  ಅಗಾಗ್ಗೆ ಕವಿತೆಗಳಲ್ಲಿ ಸಿಕ್ಕಿದ್ದನ್ನು ಹೆಕ್ಕಿ ಭಾವಕ್ಕೆ ಸಿಕ್ಕಿಸಿಕೊಳ್ಳುವಾಗ ನಿಜದ ಕವಿಯ ನಿಜ ಕವಿತೆಗಳ ಬಗ್ಗೆ ಕಟುವಾಗಿ ಹೇಳಬೇಕೆನಿಸಿತು.. ಅಲ್ಲಿ ಯಾವುದೇ ಮುಲಾಜಿಗೆ ಬೀಳುವ ಅಗತ್ಯ ಕಾಣುವುದಿಲ್ಲ.  ಯಾವುದೇ “ಸರ್ಟಿಫಿಕೇಟು” ಬೇಕಾಗಿಲ್ಲ. ಅಂದ ಹಾಗೇ ನೀವುಗಳು ಬದ್ರಿನಾಥ ಪಲವಳ್ಳಿಯವರ ಕವಿತೆಗಳನ್ನು ನಿಜವಾಗಿ ಓದಿದ್ದೀರಾ?. ಅದು ಪದಗಳಲ್ಲಿ ಸಿಕ್ಕಿಸುವ ಉಪಾಯಗಳು. ಮುಟ್ಟಿದರೆ ಅಂಟಿಕೊಳ್ಳುವುದು.. ಅಲ್ಲಿರುವುದು ಬಲಿಷ್ಠ ಪದಗಳೊಂದಿಗೆ ಮೇಳೈಸುವ ಭಾವಗಳ ತಿಕ್ಕಾಟಗಳು.

ನೃತ್ಯಗಾತಿಯ ನರ್ತನ ಆಸ್ವಾಧಿಸುವಾಗ ಹಾವ-ಭಾವ-ಭಂಗಿಯ ಮತ್ತು ತೀಕ್ಷಣತೆಗೆ ಕಣ್ಣಾಲಿಗಳು ತಿರುಗುವುದು. ಹಾಗೇ ಮನಸ್ಸು. ಮೂರ್ತತೆಯ ದೃಶ್ಯವನ್ನು ನೋಡುವಾಗಲೂ ಅಷ್ಟೇ, ಮನಸ್ಸಿನೊಳಗೆ ಆ ಚಿತ್ರ  ಜೀವಂತ ಹರಿದಾಡಬೇಕು. ಅದಿಲ್ಲದೆ, ಚಿತ್ರ ಚಿತ್ರವಾಗಿಯೇ ಇರುತ್ತವೆ. ನಾವು ನಾವಾಗಿಯೇ ಇರುತ್ತೇವೆ. ಸಂಪೂರ್ಣವಾಗಿ ಒಪ್ಪಿಸಿ, ಭಾವ ಪರವಶವಾಗುವಾಗ ಒಂದು ಗೊತ್ತಿಲ್ಲದ ಸ್ವರ “ಅಹಾ..!” ನಮ್ಮನ್ನೇ ಮರೆತಂತೆ. ಅದು ಒಪ್ಪಿಸಿಕೊಳ್ಳುವಿಕೆ. ಇಂತಹ ನೃತ್ಯ ಮತ್ತು ಚಿತ್ರಗಾರಿಕೆಯ ಕಲೆ ಸಾಹಿತ್ಯಕ್ಕೆ ಬಂದಾಗ ಬದ್ರಿನಾಥರ ಪದ ಬಳಕೆ ಸಲೀಸಾಗಿ ನಮ್ಮನ್ನು ” ಮನಸ್ಸಿನ ಇಕ್ಕಳಕ್ಕೆ” ಸಿಕ್ಕಿಸಿದೆ. ಒಂದಷ್ಟು ಅರ್ಥವಾದಂತೆ , ಇನ್ನೊಂದಷ್ಟು ಅರ್ಥವಾಗದಂತೆ, ಹಲವು ಬಣ್ಣಗಳು ಒಂದಕ್ಕೊಂದು ಮಿಲನಗೊಂಡಂತೆ.

ಒಂದು ಅಂದಾಜಿಗೆ ತೆಗೆದುಕೊಂಡಾಗ , ಮೊತ್ತ ಮೊದಲು ಎದುರಾಗುವ ಪ್ರಶ್ನೆ . ಇವರ ಕವಿತೆಗಳು ನಿಜವಾಗಿ ಏಕೆ ಅರ್ಥವಾಗುತ್ತಿಲ್ಲ ? ಹಾಗಂತ ಹಲವು ಓದುಗರು ಅವರನ್ನೇ ಪ್ರಶ್ನೆ ಹಾಕಿದ್ದಾರೆ ಅಂದುಕೊಳ್ಳುತ್ತೇನೆ. ” ಫೇಸ್ಬುಕ್‍” ಎಂಬ ಅಂತರ್ಜಾಲ ತಾಣದಲ್ಲಿ ಅಗಾಗ್ಗೆ ಹರಿದಾಡುತ್ತವೆ ಇವರ ಕವಿತೆಗಳು. ಕೇವಲ ಕವಿತೆಗಳು. ಅದಕ್ಕಷ್ಟೇ ಒಗ್ಗಿಸಿಕೊಂಡ ಕವಿತೆಗಳು, “ಕಬ್ಬಿಣದ ಕಡಲೇ ಕಾಯಿ” ಅಂದವರೆಷ್ಟೋ. ಒಂದಿಷ್ಟು ಪರಿಚಯಸ್ಥರು ಮೆಚ್ಚಿ , ಒಂದಷ್ಟು ಬೆನ್ನ ತಟ್ಟುವ ಪದಗಳು ಬಿಟ್ಟರೆ, ಈ ಕವಿತೆಗಳಿಗೆ ಸಿಕ್ಕಿದ್ದು ಕವಡೆ ಕಾಸಿನ ಮುಖಬೆಲೆಗಳು. ಅಷ್ಟರಲ್ಲೇ ತೃಪ್ತಿ ಹೊಂದುವ ಈ ಕವಿ, ಇನ್ನೊಂದು ಭಾವ ಸಂಕಲನಕ್ಕೆ ಲಯ ಹುಡುಕುತ್ತಾರೆ. ನಿಜ ಕವಿತೆಗೆ ಇಷ್ಟು ಸಾಕು ಅಂದುಕೊಳ್ಳುತ್ತೇನೆ.  ನಿಜವಾದ ಆಳಕ್ಕೆ ಹೋದಾಗ ಗೊತ್ತಾಗಿದ್ದು, ಅಲ್ಲಿರುವುದು ಓಭಿರಾಯನ ಹೊಕ್ಕಳ ಬಳ್ಳಿಯಲಿ ಸಿಗಿದಾಡುವ ಮನುಷ್ಯಾವಸ್ಥೆಯ ಪ್ರಸಕ್ತ  ಚಿತ್ರಗಳು. ಈ ಫ್ಯಾಷನ್ ಶೋ ಬದುಕಿನಲ್ಲಿ ಕಲಬೆರಕೆ ಬಣ್ಣ ಹಚ್ಚಿದ ಸಮಾಜದ ಬದುಕುಗಳು ನಾಲ್ಕಾರು ದೌರ್ಬಲ್ಯಕ್ಕೆ ಹಲ್ಲುಗಿಂಜಿ ಹರಾಜಾಗುತ್ತಿವೆ. ಈ ಕವಿತೆ ” ಸಂಧ್ಯಾ ರಾಗ ” ಓದಿ ನೋಡಿ.

ಹೊರಟು ನಿಂತಿರೇ ದೊರೆ..

ಇರುಳು ಕರಗಿತೇ ಇಷ್ಟು ಬೇಗ?

ಒಂದೂ ಮಾತಿರಲಿಲ್ಲ

ಬೆಸೆದ ಮನಗಳ ನಡುವೆ; ಹೆಪ್ಪುಗಟ್ಟಿತ್ತು ಮೌನ

ಮತ್ತೆ ಮೊದಲಂತಿರಲಿಲ್ಲೇಕೆ?

ಪ್ರೇಮ ಬಾಂದಳದಲ್ಲಿ ಪ್ರಣಯ ಹಕ್ಕಿ !

–  ಕವಿತೆ ಏಕೆ ಇಷ್ಟೊಂದು ಕೈ ಮುಗಿಯುತ್ತಿದೆ  ಅಂತ ಪ್ರಶ್ನೆ ಬಂತು. ವಿದಾಯದ ಆ ಒಂದು ಕ್ಷಣ ಒಂದೇ ಮಾತಿನಲ್ಲಿ  ಮತ್ತೆ ಮತ್ತೆ  ತಿರುಗಿಸುವಷ್ಟು ಭಾವಗಳು ಸುರುಳಿಗಟ್ಟಿವೆ ಇಲ್ಲಿ. ಮತ್ತೆ ಬರಲಾಗದ ಜಗತ್ತನ್ನು ಸೃಷ್ಟಿಸಿದ ಪರಿಗೆ ಅಚ್ಚರಿಗೊಂಡಿದ್ದೇನೆ. ಮಾತುಗಳಲ್ಲಿ ಹೇಳಲಾಗದೆ ಕೊರಗಿದವರ ಧ್ವನಿ ಇಲ್ಲಿದೆ. ಅದು ಸ್ಪಷ್ಟವಾಗಿ ವಿವರಿಸುತ್ತಿದೆ.  ತಿರುಗಿ ಬಾರದವರ ಬಗ್ಗೆ ಹೇಳಲಾಗದ ಮಾತುಗಳಿಗೆ ಕಣ್ಣೀರು ಧ್ವನಿಯಾಗಬಹುದು. ಅಲ್ಲಿ ಮಾತುಗಳಿಗೆ ಸ್ವರ ಸೇರುವುದೇ ಇಲ್ಲ. ಅಂತರಾಳದ ಮೌನದ ಹರಳುಗಳನ್ನು ಪದಗಳಲ್ಲಿ ಸಮರ್ಥವಾಗಿ ಹರವಿ ಬಿಡಲಾಗಿದೆ. ಇದೇ ಕವಿತೆಯಲ್ಲಿ “ಸಾವಿರ ಬೇಸಿಗೆಯಲಿ ತಂಪಾಗಿ ಇದ್ದೇನು ದೊರೆಯೇ”  ಅನ್ನುವಾಗ ಮಂಜಿಗಿಂತಲೂ ತಂಪಾಗಿದೆ ಈ ನೆನಪಿನ ಮಾತು ಅನ್ನಿಸಿತು. ವಿದಾಯದ ಆ ಕ್ಷಣಕೆ ಒತ್ತರಿಸಿ ಬರುವ ಮೌನಗಳು ಹೆಪ್ಪುಗಟ್ಟುತ್ತಿವೆ.

ಒಂದೇ ಗುಕ್ಕಿನಲ್ಲಿ ಸೆರೆ ಹಿಡಿಯುವ ಪದಾರ್ಥಗಳು ಇವರ ಕವಿತೆಗಳಲ್ಲಿ ದೊರೆಯುವುದೇ ಇಲ್ಲ. ಪ್ರತಿಮೆಗಳಲ್ಲಿ ಸಿಂಗರಿಸಿದ ಪದಗಳು ಗಮನ ಸೆಳೆಯಬಹುದು. ಆದರೆ, ಭಾವಕ್ಕೆ ತಕ್ಕಂತೆ ಮತ್ತೆ ಮತ್ತೆ ಕೆದಕಿದಾಗ  ನಿಧಾನವಾಗಿ ಅಲ್ಲಿರುವ ಗಂಟುಗಳು ಬಿಚ್ಚಿಕೊಳ್ಳುವುದನ್ನು ಕಾಣಬಹುದು. ಯಾವತ್ತಿಗೂ ತೂಕಬದ್ಧ ಕವಿತೆಗಳ ಅರ್ಥವಾಗುವಿಕೆ ವಿಧಾನ ಹೀಗೆ. ಅಂತಹ ಅನುಭವಗಳು ಇವರ ಎಲ್ಲಾ ಕವಿತೆಗಳಲ್ಲಿ ಕಂಡು ಬರುತ್ತವೆ. ಬ್ಲಾಗಂಗಳ http://badari-poems.blogspot.com ಗೆ  ಸಮಯ ಸಿಕ್ಕಿದಾಗ ಭೇಟಿ ನೀಡುವುದು ಅಂದರೆ, ಕ್ಲಿಷ್ಟ ಪದಗಳ ಲಯಬದ್ಧ ಭಾವ ಸಮಾಧಿ ಅಂತ ಅರ್ಥೈಸಿಕೊಂಡಿದ್ದೆ.

ಗುಡಿಯೇ ಅಂಗಡಿಯಾದ ಮೇಲೆ ಎಲ್ಲಿದೆ ಬಕುತಿ

ನೋಡಿ ನೋಡಿಯೇ ಅವನೂ ಕಲ್ಲಾಗಿ ಕುಳಿತ !

ಪ್ರಶ್ನೆ ಪತ್ರಿಕೆಯಲೇಕೆ ಹುಡುಕುವಿರಿ

ಉತ್ತರವನ್ನೇ…..!

-“ದೇವರು ದೇವರಂಥವನೇ” ಅನ್ನುವ ಕವಿತೆಯಲ್ಲಿ ದೇವರ ದೌರ್ಬಲ್ಯದ ಬಗ್ಗೆ ಮಾತುಗಳು ಹರಿದಾಡುತ್ತಿವೆ. ಹೇಗೆಂದರೆ, ಯಾರಿಗೂ ಮಾತನಾಡಿಸಲಾಗದ ಕಲ್ಲು ದೇವರನ್ನು ಮಾತಿಗಿಳಿಸಿದ ಬಗೆ ಸೂಜಿಗವೆನಿಸುವುದು. ಮನುಷ್ಯನ ಅತ್ಯಂತ ಸೂಕ್ಷ್ಮ ದೌರ್ಬಲ್ಯಗಳಲ್ಲಿ ಭಕ್ತಿ ಕೂಡ ಒಂದು ಅನ್ನುವ ಸಂದೇಶ ಇಲ್ಲಿ ರವಾನೆಯಾಗಿದೆ. ಇದೇ ದೌರ್ಬಲ್ಯಗಳನ್ನು ಉಪಯೋಗಿಸಿ ವ್ಯಾಪಾರಕ್ಕಿಳಿದ ಹಲವರ ಬದುಕನ್ನು ಸಮಾಜಕ್ಕೆ ಅನಾವರಣಗೊಳಿಸಿ ಪ್ರಶ್ನಿಸಲಾಗಿದೆ. ಪರಮ ಪೂಜ್ಯತೆ ಮಂದಿರಗಳು , ಗುಡಿ ಗುಣ್ಣಾಣಗಳು ಪವಿತ್ರತೆಯನ್ನು ಸಾರಿದ ಸ್ಥಳದಲ್ಲೇ ಮೂಗು ಮುಚ್ಚುವ ಘಟನಾವಳಿಗಳ ದಾಖಲೆ ಬಿಚ್ಚುತ್ತಿವೆ. ಈ ಕವಿತೆಯಲ್ಲಿ ಸ್ಪಷ್ಟವಾಗಿ ಸಾರುವ ಸಂದೇಶದಂತೆ , ಇವೆಲ್ಲವನ್ನೂ ಕಂಡ ನಿಜವಾದ ದೇವರು ನಿಜವಾಗಿ ಕಲ್ಲಾಗಿ ಕುಳಿತಿದ್ದಾನೆ ಅನ್ನುತ್ತಾರೆ ಪಲವಳ್ಳಿಯವರು. ದೇವರು ಅನ್ನುವ ಮನುಷ್ಯ ಸೃಷ್ಟಿಯ ” ಭಾವ ತೀವ್ರತೆಯೇ” ಒಂದು  ಪ್ರಶ್ನೆ. ಇಂತಹ ಒಂದು ಪ್ರಶ್ನೆಗೆ ಉತ್ತರ ಹುಡುಕುವುದು ಕತ್ತಲಲ್ಲಿ ಕತ್ತಲೆಯನ್ನು ಸಂಯೋಜನೆಗೊಳಿಸಿದಂತೆ ಅನ್ನುವಷ್ಟು ಸತ್ಯ.

” ಜೀ ಹುಜೂರ‍್” ಅಂತ ಒಂದು ಕವಿತೆ ಬರೆದಿದ್ದಾರೆ. ಓದುವಾಗ ನೆನಪಿಗೆ ಬಂದು ಮತ್ತೆ ಮತ್ತೆ ಕೆದಕುವ ಪದ ” ಬಕೇಟು ಸಂಸ್ಕೃತಿ”.  ನೀವು ಚೆನ್ನಾಗಿ ಬರೆದಿದ್ದೀರಿ ಅಂದರೆ ” ಹೊಗಳುತ್ತಾರೆ” ಅಂತ ಸರ್ಟಿಪಿಕೇಟು ಕೊಡುವರೋ ಅನ್ನುವ  ಅನುಮಾನ. ಬಕೇಟು ಸಂಸ್ಕೃತಿ ಅಂದರೆ ಗುಲಾಮ. ಮನುಷ್ಯ ಮನುಷ್ಯನಿಗೆ ಮಾನವೀಯತೆಯನ್ನು ತೊರೆದು ಸ್ವಾರ್ಥಕೆ ಬಲಿಯಾಗುವ ಸಂದರ್ಭ ಎಂಥ ವಿಪರ್ಯಾಸದ ವರ್ತುಲ..!? ದಿ. ಪದ್ಯಾಣ ಗೋಪಾಲಕೃಷ್ಣರು ಇಂತಹ ನಡವಳಿಕೆ ಮನುಷ್ಯರಿಗೆ ” ಹಿತ್ತಾಳೆ ದೂರು ಗಂಟೆ” ಅಂತ ನೇರವಾಗಿ ಹೇಳಿದ್ದಾರೆ. ” ಜೀ ಹುಜೂರು” ಕವಿತೆ ಬಂದದ್ದು ಇದರ ಇನ್ನೊಂದು ಮುಖ. “ಬಾಸ್‍ ಈಸ್‍ ಅಲ್ವೇಸ್‍ ರೈಟ್‍” ಅನ್ನುವಾಗ ಪರೋಕ್ಷವಾಗಿ ತಿವಿದ ಈ ಜೀ ಹುಜೂರ‍್ ಕವಿತೆ ,  ಹೊಗಳು ಭಟ್ಟರಿಗೆ ನೀಡಿದ ಉತ್ತರ ಮಾರ್ಮಿಕವಾಗಿದೆ. ಹೊಗಳಿಕೆ ಅಂದರೆ ಮೇಲೇರಿಸುವುದು. ಇದನ್ನು ಈ ಜಗತ್ತು ಮೊದಲು ಕಲಿತದ್ದು  ದೇವರನ್ನು ಮತ್ತು ಹೆಣ್ಣನ್ನು ಓಲೈಸಿ. ಯಾವುದೇ ದೇವರ  ಶ್ಲೋಕ, ಭಜನೆ, ಭಕ್ತಿ ಪರವಶ ಸಂಗೀತಗಳು ದೇವರನ್ನು ಹೊಗಳಿಯೇ ಇದೆ. ಏಕೆ ಈ ರೀತಿ ಇದೆ? ಅಂದರೆ, ಹೊಗಳದಿದ್ದರೆ ನಮಗೆ ಸಿಗಬಾರದ್ದು ಸಿಗದು ಅನ್ನುವ ಕಾರಣವನ್ನು ಅಂದಾಜಿಸುತ್ತೇವೆ. ದೇವರು ಅನ್ನುವ ವಿಸ್ಮಯದಲ್ಲಿ ಏನೆಲ್ಲಾ ನ್ಯಾಯಗಳು ತೆರೆದುಕೊಂಡವು,ಎಷ್ಟೆಲ್ಲಾ ಅನ್ಯಾಯಗಳು ಮತ್ತೆ ಮತ್ತೆ ಬೀದಿಗೆ ಬಂದವು. ದೇವರು ಅನ್ನುವ ಮಾತಾಡದ ಅಗೋಚರ ಏನೂ ಅಲ್ಲದ ಶೂನ್ಯದಲ್ಲಿ ಕುಳಿತಿದೆ. ಮನುಷ್ಯ ಮಾತ್ರ ಅದನ್ನು ತನ್ನ ಸ್ವಾರ್ಥಕೆ, ತನಗೆ ಬೇಕಾದಂತೆ, ತನ್ನೊಳಗೆ ವರ್ತುಲ ಸೃಷ್ಟಿಸಿ ಮಂತ್ರ ಪ್ರೋಕ್ಷಣೆ ಮಾಡಿದ. ಅದು ಇಂದಿನ ಜಗತ್ತಿನ ಅನಾವರಣ. ಈ ಹೊಟ್ಟೆ, ಈ ಮೋಹ , ತನಗೋಷ್ಕರ ಹೊರಗೆ ಮಿರ ಮಿರ ಮಿಂಚುವ ಬಟ್ಟೆ ಧರಿಸಿ, ಒಳಗೊಳಗೇ ಬೆತ್ತಲೆ ನಡೆಯುತ್ತಿದ್ದಾನೆ. ಮನುಷ್ಯನಿಗೆ ಆಸೆ ಹೆಚ್ಚು. ಹಾಗಾಗಿ ಬುದ್ಧನಂತಹ ಹತ್ತು ಜನರು ಬಂದರೂ ಈ ದುಃಖ್ಖಕ್ಕೆ ಮರುಗಿ ಇಲ್ಲವಾಗುತ್ತಾರೆ. ಬದ್ರಿನಾಥರ ಕವಿತೆ ಇಷ್ಟರವರೆಗೆ ವಿಸ್ತಾರವಾಗುವುದು.

ಇದರ ಪರ್ಯಾಯವಾಗಿ ಉದ್ಭವಿಸಿದೆ  ಈ” ಬಕೇಟು ಸಂಸ್ಕೃತಿ”. ಮನುಷ್ಯನನ್ನು ದೇವರನ್ನಾಗಿಸಿದ ಪರಿ.  ಕಚೇರಿಯ ಆಡಳಿತ ವ್ಯವಸ್ಥೆಗಳಲ್ಲಿ, ರಾಜಕೀಯದಲ್ಲಿ  ಇದನ್ನು ಹೆಚ್ಚಾಗಿ ಕಾಣುತ್ತೇವೆ. ಈ ಅಂತರ್ಜಾಲ ಯುಗದಲ್ಲಿ  ಈಗ ಎಲ್ಲಾ ಕ್ಷೇತ್ರದಲ್ಲೂ  ಇದಕ್ಕೆಂದೇ ಕೆಲವು ಮಂದಿಯನ್ನು ಸೃಷ್ಟಿಸಲಾಗುತ್ತಿದೆ. ಅದು “ಫೇಸ್ಬುಕ್‍” ಎಂಬ ತನ್ನಿಚ್ಚೆಯ ತಾಣವನ್ನೂ ಬಿಟ್ಟಿಲ್ಲ. ಸತ್ಯವನ್ನು ಮರೆಮಾಚುವ  ಕೈಲಾಗದ ಮನುಷ್ಯ ಇದನ್ನು ಮಾಡಿಯೇ ಸಿಗಬೇಕಾದದ್ದನ್ನು ದಕ್ಕಿಸುತ್ತಾನೆ. ಅದರಲ್ಲೂ ” ಹೆಣ್ಣು” ಈ ಹೊಗಳಿಕೆಗೆ ಮೊದಲು ಬಾಧ್ಯಸ್ಥಳಾಗುವುದು. ಕರಗುವುದು  ಹೆಣ್ಣಿನ ಮೊದಲ ದೌರ್ಬಲ್ಯ. ಬದ್ರಿನಾಥರ ಕವಿತೆ ” ಜೀ ಹುಜೂರ್” ಇದರ ಸ್ಪಷ್ಟ ಚಿತ್ರಣವನ್ನು ನೀಡುವುದು.

ಗಂಡು ಮತ್ತು ಹೆಣ್ಣು ಎಂಬ ಈ ಎರಡು ವಿಭಿನ್ನ ಮೋಹಗಳ ಒಂದಕ್ಕೊಂದು ಅಂಟಿಕೊಂಡೇ ಸಾಗುವ ಜಗತ್ತಿನಲ್ಲಿ ಒಬ್ಬರಿಗೆ ಇನ್ನೊಬ್ಬರ ಬಗ್ಗೆ ಆಸಕ್ತಿಗಳು, ಕುತೂಹಲಗಳು, ಆಕರ್ಷಣೆಗಳು. ಇವಿಷ್ಟೇ ಜಗತ್ತನ್ನು ಮುನ್ನೆಡೆಸುತ್ತಿದೆ ನೋಡಿ. ಅದರಲ್ಲೇ ಜಗತ್ತು ತುಂಬಿ ಹೋಗುವುದು. ಇಬ್ಬರಿಗೂ ಇಬ್ಬರ ಬಗೆಗಿನ ಚಿಂತನೆಗಳು, ಆಲೋಚನೆಗಳು ಕೆಲವು ಕೌತುಕಗಳನ್ನು ಸೃಷ್ಟಿಸುತ್ತಿವೆ. ಗಂಡು ಕಾಣುವ ಕನಸುಗಳಷ್ಟೇ ವಿಶಾಲವಾಗಿ ಹೆಣ್ಣು ಕೂಡ ಹೊಂದಿರುತ್ತಾಳೆ. ಅವರಿಬ್ಬರಿಗೂ ಇರುವ ಹೃದಯ ಮಿಡಿತಗಳು, ಮನೋವೇಗಗಳು, ಅತಿರೇಕಗಳು ಎಲ್ಲವೂ ಒಂದೇ. ಇಂತಹ ಹಲವು ವಿಶೇಷಣಗಳು ಪಲವಳ್ಳಿಯವರ ಕವಿತೆಗಳಲ್ಲಿ ಢಾಳಾಗಿ ಹುಟ್ಟಿಕೊಳ್ಳುತ್ತವೆ. ತಮಗೇ ತಾವೇ ತರ್ಕಕ್ಕೆ ಸಿಕ್ಕಿಸಿ, ಒಂದೇ ಸಾಲಿನಲ್ಲಿ  ಭಾವಗಳು ಒಂದರಿಂದ ಇನ್ನೊಂದಕ್ಕೆ ಪದಗಳಲ್ಲಿ ಘರ್ಶಿಸುತ್ತವೆ. ಕೆಲವೊಮ್ಮೆ ಗರ್ಜಿಸುತ್ತಿವೆ. ಹೊಗಳಿಕೆಗೆ ಉಬ್ಬಿಸುವುದಿಲ್ಲ, ತೆಗೆಳಿದರೆ ಮುಖ ಗಂಟಿಕ್ಕುವುದೂ ಇಲ್ಲ. ಒಟ್ಟಾರೆ ಪದಗಳಲ್ಲಿ ಮೈ ತಟ್ಟಿಸುವುದು ಇವರ ಕವಿತೆಗಳಿಗಂಟಿದ ಸೂಕ್ಷ್ಮ ಗುಣ. ದಿ. ಪಿ. ಲಂಕೇಶರ ಮಾತುಗಳು ನೆನಪಿಗೆ ಬರುತ್ತವೆ. ಬೆಂಗಳೂರಿನ ” ಸಂಚಯ” ಸಾಹಿತ್ಯ ಮಾಸಿಕದ ಡಿ. ಪ್ರಹ್ಲಾದವರು ಒಂದು ಬಾರಿ ಮಾತಿಗಿಳಿಸಿದಾಗ ಹೇಳಿದ್ದಾರೆ ” ಹೊಗಳಿಕೆ ಅಂದರೆ ನನಗೆ ಅಲರ್ಜಿ. ಯಾರಾದರೂ ಹೊಗಳುವಾಗ , ಅಲ್ಲಿ ಹಲವು ಅನುಮಾನಗಳು ಕಂಡು ಬರುತ್ತವೆ. ಅಂದರೆ, ಹೊಗಳುವ ವ್ಯಕ್ತಿ, ನಮ್ಮಲ್ಲಿರುವ ನಿಜವಾದ ನಿಜತ್ವವನ್ನು ಕುಗ್ಗಿಸುತ್ತಾನೆ” ಅನ್ನೋದು ಲಂಕೇಶರ ಮಾತುಗಳು. ನಿಜವನ್ನೇ ಹೇಳಿ, ಅದು ಒಳ್ಳೆಯದಿರಬಹುದು, ಕಲಿಯುವಂತಿರಬಹುದು ಅಂದಿದ್ದಾರೆ. ಹೊಗಳಿಕೆ ಅಂದರೆ ಓಲೈಸುವ ಕುಗ್ಗಿಸುವ ಇನ್ನೊಂದು ಮಾರ್ಗ. ಇಂದಿನ ರಾಜಾಧಿರಾಜ ರಾಜಕಾರಣಿಗೆಳಿಗೆ ಇವಿಲ್ಲದಿದ್ದರೆ  ಓಟೇ ಸಿಗುವುದಿಲ್ಲ. ಅದು ಮತದಾರರ ದೌರ್ಬಲ್ಯ.  !

ಈ ಜಗತ್ತಿನಲ್ಲಿ ಪ್ರತಿಯೊಂದು ಜೀವಿಗೂ ಸ್ವಂತಿಕೆ ಅನ್ನೋದು ಬೇಕು. ಅದಿಲ್ಲದೆ ಅನುಸರಿಸುವ ಮಾರ್ಗದಿಂದ ಹೊಸತನವನ್ನು ಹುಡುಕುವುದು ಕಷ್ಟ ಸಾಧ್ಯ. ಈ ಜನರ ಸಂತೆಯಲ್ಲಿ ಒಬ್ಬ ವ್ಯಕ್ತಿ ಹೇಗೆ ವಿಭಿನ್ನವಾಗಿ ಎದ್ದು ಕಾಣುತ್ತಾನೆ ಅಂತ ಪ್ರಶ್ನೆ. “ಗಿಂಡಿ ಮಾಣಿ” ಅನ್ನುವ ಕವಿತೆಯಲ್ಲಿ ಬದ್ರಿನಾಥರು ನೇರವಾಗಿ ಹೇಳುವ ಮಾತಿದು. ಅನುಸರಿಸುವುದೇ ಆದರೆ, ಬದುಕುವ ರೀತಿಯಲ್ಲಿ ಸೃಜನಶೀಲತೆ ಕಂಡುಕೊಳ್ಳುವುದು ಹೇಗೆ ಮತ್ತು ಯಾಕೆ?

ಪ್ರತಿಫಲನವೇ ಬದುಕೇ…ಸ್ವಂತಿಕೆ ಏಕಿಲ್ಲ ಜನಕೆ?

ಇಲ್ಲಿ ಮೊಗೆದ ನೀರು …ಮತ್ತೆಲ್ಲೋ ಒಗೆವ ಕಲೆ

ಕಲಿತ ಬಿತ್ತಾಸುರರ ಲೀಲೆ,

-ತೋಚಿದಂತೆ ಬದುಕುವುದಕ್ಕೂ, ನಮಗೆ ನಮ್ಮಲ್ಲೇ ನಿರ್ಮಾಣಗೊಂಡ  ವರ್ತುಲಕ್ಕೆ ಒಗ್ಗಿಸಿಕೊಂಡು ಬದುಕುವುದಕ್ಕೂ ವ್ಯತ್ಯಾಸವಿದೆ. ಎಲ್ಲಾ ಬೇಕುಗಳ ನಡುವೆ ಹೊಯ್ದಾಡಿ ಎಲ್ಲಿಂದ ಎಲ್ಲಿಗೋ  ಕೊಂಡೊಯ್ಯುವುದು ಬದುಕು. ತೃಪ್ತಿ ಅನ್ನುವ ಗೋಡೆಗಳ ನಡುವೆ ಮೈ ಪರಚಿಕೊಳ್ಳುತ್ತೇವೆ. ಇಲ್ಲವೆಂದಾಗ ಇನ್ನೊಂದು ತೃಪಿಗಳಿಗೆ ಆಶಾಭಾವನೆಗಳನ್ನು ಮೈಗೂಡಿಸಿಕೊಂಡಿರುವ ಮನುಷ್ಯರು ನಾಳೆಗಳಿಗೆ ದಿನಗಳನ್ನು  ಕಾಯುತ್ತಾರೆ. ಇಲ್ಲಿ ಸ್ವಂತಿಕೆ ಬೇಕು. ಅವರಿವರು ಅನುಸರಿಸಿದಂತೆ ಬದುಕು ಪಾಠ ಕಲಿಸಿದ ನಂತರ ತನ್ನದೇ ಬದುಕು ಪರಿಚಯವನ್ನು  ಕುಟುಂಬ, ಸಮಾಜಕ್ಕೆ ಕೊಡುವುದು ಧರ್ಮ ಅಂತ ಈ ಕವಿತೆಯ ಒಟ್ಟಾಂಶ ಅಡಕವಾಗುವುದು.

ಬಿಗುಗೊಂಡ ಮನಸ್ಸನ್ನು ಒಂದೇ ಪದಗಳ ಓದಿಗೆ ಸಡಿಲಗೊಳಿಸುವ ಪದ ಬಳಕೆ ಕಂಡು ಬರುವುದು. ಯಾವುದೇ ಬರಹಗಾರನ ಆಲೋಚನೆಗಳನ್ನು ಸ್ವೀಕರಿಸುವುದು ಅಂದರೆ ಅವನ ಹೆಜ್ಜೆಗಳ ಪರಿಚಯ ಮಾಡಿಕೊಳ್ಳುವುದು ಎಂದರ್ಥ. ಓದುವ ಮನಸ್ಸು ಹೊಸತನವನ್ನು ಬಯಸುವುದಾದರೆ ಬರಹಗಳಲ್ಲಿ  ಅಂತಹ ಸಂದರ್ಭಗಳನ್ನು ಪಡೆದುಕೊಳ್ಳಬಹುದು. ಎಳೆ ಎಳೆಯಾಗಿ ಅವನ ಪದಗಳ ಎದೆಗಿಳಿದು ಓಡಾಡುವುದು. “ಕಿಟಕಿಯಾಚೆ ಮಳೆ” ಕವಿತೆಯಲ್ಲಿ ಈ  ಮಳೆಗೆ ತಣ್ಣಗಾದ ಮನಸ್ಸಿನ  ಹೊಸ ಅನಾವರಣ ಗೋಚರವಾಗುತ್ತಿದೆ.

ಇರುಳೆಲ್ಲ ಸುರಿದ ಮಳೆಗೆ…ಇವಳ ನರ ನಾಡಿಗಳೆಲ್ಲ ಮುದ್ದೆ ಮುದ್ದೆ…!

ಈ ಮಳೆಯ ಇಷ್ಟೊಂದು ತಂಪುಗಳು ನರ ನರಗಳನ್ನು ಹೆಪ್ಪುಗಟ್ಟಿಸಿದಾಗ, ಬೆಳಗ್ಗಿನ ಸೂರ್ಯನ ಬಿಸಿಗೆ ಕಾದು ಕುಳಿತುಕೊಳ್ಳುವ ಅವಕಾಶವನ್ನು ಇಲ್ಲಿ ನೀಡಲಾಗಿದೆ. ಬದುಕು ಇಷ್ಟರಲ್ಲೇ ತೆರೆದುಕೊಳ್ಳುವುದು ಮತ್ತು ಅರ್ಥವಾಗುತ್ತಿದೆ. ಗಂಡು ಮತ್ತು ಹೆಣ್ಣಿನಿಂದಲೇ ಸಾಗುತ್ತಿರುವ ಜಗತ್ತಿನ ಜೀವ ಸಂಚಲನಕೆ ಇಲ್ಲಿನ ಸೂಕ್ಷ್ಮ ಹೆಜ್ಜೆಗಳು ಬೆಳಕು. ಯಾವುದೇ ಒತ್ತಡಗಳು  ಅಡ್ಡ ಬರುತ್ತಿಲ್ಲ. ತನ್ನನ್ನೇ ತಾನು ಒಪ್ಪಿಸಿಕೊಳ್ಳುವ ಬಗೆ ಹೀಗೆ “ತಾಲೀಮು” ಕವಿತೆಯಲಿ “ಎತ್ತಿಕೋ ಉಳಿ,ಕೆತ್ತು ಈ ಕಗ್ಗಲ್ಲು ,ದೇವರಾಗದಿದ್ದರೂ  ದ್ವಾರಪಾಲಕನಾಗಲಿ…” ಅನ್ನುವಾಗ ಕವಿಯ ಮನಸ್ಸಿನ ವಿಶಾಲತೆಯನ್ನು ತೆರೆಯುತ್ತಿದೆ. ಗುರುವಿನ ಬಗೆಗಿನ  ಹುಡುಕಾಟ , ಅದೇ ರೀತಿ ಪರಿಪೂರ್ಣತೆಯಲ್ಲಿಯೂ ಸ್ವಾಮಿನಿಷ್ಠೆಯನ್ನು ಪ್ರತಿಬಿಂಭಿಸುವ ಈ ಕವಿತೆಯ ಸಾಲಿನಲ್ಲಿ  ಯಾವುದಕ್ಕೂ “ನೀ ಕೊಡುವ ರಂಗ ತಾಲೀಮಿನಲಿ ಛಾಟೀ ಏಟಾದರೂ ಸೈ! ತಾಳಿಕೊಂಡೇನು…” ಅನ್ನುವ ಪರಾಕಾಷ್ಠತೆ ಮನಸ್ಸಿನಲ್ಲಿ ಒಂದಷ್ಟು ಗೀಚುವುದು. ಸಲೀಸಾಗಿ ಸಿಗುವ ಯಾವುದೇ ಕಾರ್ಯದಲ್ಲಿ ಆನಂದ ಸಿಗುವುದು ಅಲ್ಪ. ದೀರ್ಘ ಕಾಲದ ನಿರೀಕ್ಷೆಯಲ್ಲಿ  ಅಥವಾ ಅದರ  ಹುಡುಕಾಟದಲ್ಲಿ  ಹೊರಟವನಿಗೆ ಪ್ರತಿಫಲ ಸಿಗುವುದೆಂದರೆ ಅದರ ಆನಂದ ಬದುಕಿನಲ್ಲಿ ಮರೆಯಾಲಾಗದ ಕ್ಷಣಗಳು. ಪಲವಳ್ಳಿಯವರ ಹಲವು ಕವಿತೆಗಳು ಹೀಗೆ ಹುಡುಕಾಟದಲ್ಲಿ ಮರೆತು ಹೋದ ದಿನಗಳಿಗೆ ಸಿಕ್ಕಿದ ಅನಂತ ತಾಳ್ಮೆಗಳನ್ನು ಪರಿಚಯಿಸುತ್ತವೆ. ಹೇಗೆಂದರೆ “ಬದುಕಿನ ಓಟ” ಕವಿತೆಯಲ್ಲಿ  ಹುಚ್ಚು ಕುದುರೆಯ ಓಟವೀ ಬದುಕು..ಲಗಾಮು ಕಳೆದಿದೆ ಪಯಣ ಭೀಭಿತ್ಸ.. ಅಂತ ಹೇಳುತ್ತಾ ಓಡಿದ  ಭಾವಗಳು,  ಅಹಂಕಾರದ ಪೊರೆ ಕಳಚಿದ ದಾಖಲೆ ಲಭ್ಯವಾಗುವುದು.  ಮತ್ತಷ್ಟು ಅನುಭವಕ್ಕೆ ತಿಕ್ಕಿಸಿಕೊಂಡ ಕವಿ ಅದ್ಭುತವಾದ ಸಮಾಧಿ ಮಾತಿಗೆ ಶರಣಾಗುತ್ತಾರೆ.

ಹೂವ ಹಾಸಿಗೆ ಎಂದೇನು ಹಿಗ್ಗದಿರು

ಕೆಳಗೆ ನಕ್ಕೀತು ವಿಷದ ಮುಳ್ಳು!

-ಇದು ಮೂರ್ತತೆ ಬದುಕಿನ  ಚಿಂತನೆಗಳು. ಹೆಜ್ಜೆ ಹೆಜ್ಜೆಗೆ  ಎಚ್ಚರ ತಪ್ಪದ ನಡಿಗೆ ಇವರ ಎಲ್ಲಾ ಕವಿತೆಗಳಲ್ಲಿ ಕಂಡು ಬರುವುದು. ಕೆಲವೊಮ್ಮೆ ಹರಿದಾಡುವಾಗ ನೇರವಾಗಿ, ಮಗದೊಮ್ಮೆ ಅಲ್ಲಿ ಸರಿದು, ಇಲ್ಲಿಗೆ ಬರುವಂತೆ ನಡಿಗೆಯಲಿ ತೊಡರುವಂತೆ ಕಾಣಿಸುವುದು.ಏಕೆಂದರೆ , ಬಿಳಿ ಹಾಳೆಯಲ್ಲಿ ದೃಷ್ಠಿಗೆಂದೇ ಅಮ್ಮ ಮಗುವಿನ ಗಲ್ಲಕೆ ಕಪ್ಪಿಟ್ಟಂತೆ. ಆಟವಾಡುತ್ತಲೇ ಕೆಲ ಸಮಯದಲ್ಲಿ ಮರೆಯಾಗುವುದು. ಅದು ಬೇಕು. ಕೆಲವಷ್ಟು ಪೌಡರು ಪರಿಮಳ, ಕಾಲ ಗೆಜ್ಜೆಯ ಸಪ್ಪಳ, ಸ್ವರಗಳ ನಿನಾದ, ಬಿಗುವಾದಾಗ  ಅಡುಗೆ ಕೋಣೆಯಲಿ ಪಾತ್ರೆಗಳನ್ನು ಎತ್ತಿ ಎತ್ತಿ ಕುಕ್ಕುವ ಕೈಬಳೆ ನಾದ, ಮುಖ ಸಿಂಡರಿಸಿ ಸಿಂಬಳ ಸುರಿಸುವ ಸಿಡುಕುಗಳು  ಓದುತ್ತಿದ್ದಂತೆ ಓದುಗನಿಗೆ ಇನ್ನೊಂದು ಭಾವಾವೇಷವನ್ನು ತೆರೆದುಕೊಳ್ಳುವುದು. ಇದು ಪ್ರತೀ ಬರಹಗಾರನ ಬರಹದಲ್ಲಿ ಬೇಕು. ಏಕೆಂದರೆ ಬರಹಗಾರನಂತೆ ಓದುಗನೂ ನಿಜ ಬದುಕಿನ ಮನುಷ್ಯನಾಗಬೇಕು.

http://ravimurnad.blogspot.in/2012/04/blog-post_21.html

ಕದನ ವಿರಾಮ…


ಇನ್ನೂ ಮುನಿಸು ಬೇಡ ಕಣೇ!
ನೀನು ನಾನು ಇಬ್ಬರೇ ಈ ಗುಬ್ಬಚ್ಚೀ ಗೂಡಿನೊಳಗೆ…

ಇರುವುದೇ ಅರೆಪಾವು ಹೊತ್ತು
ಅದರಲೂ ಕಳೆವುದು ನಿದ್ರೆ, ನಸುಕಿನ ನಡಿಗೆ ಹೀಗೆ!
ಇನ್ನು ಗಡಿಯಾರಕ್ಕೆಲ್ಲಿ ಹೃದಯ ಹೇಳು,
ಮುಳ್ಳುಗಳು ಓಡುವವು ಬೇಡದ ವಿರಾಮದಲ್ಲೇ;
ಇಷ್ಟರಲ್ಲೇ ಸಂಸಾರ ತೂಗ ಬೇಕು,
ಸಂಧಿಸಬೇಕು ಎಲ್ಲ ಬಾಣಗಳು ಸರತಿಯಲ್ಲೇ…

ಅಂಟಿ ಕುಳಿತರೂ ಸಾಕು
ನನ್ನ ಬಳಲಿಕೆ ಮರೆಸಲಿಕ್ಕೆ
ಅಷ್ಟೇ ಬಂಗಾರು ನಾನು ಬೇಡೋ ಸಂತೈಕೆ…

ಉಳಿವುದಿಬ್ಬರೇ ಶೇಷ, ಬದುಕಲಿ
ಅಗೆಯದಿರು ನಡುವೆ ಈ ಘೋರ ಪ್ರಪಾತ!
ಮುತ್ತು ಸಿಹಿಯಾಗಿರಲಿ ಒರಟು ದನಿಗಿಂತ,
ಏಕೆಂದರೇ, ಯವ್ವನ ಕಳೆದಿದೆ ನನಗೆ;
ನೀನೂ ಮಾಗಿದ್ದೀಯಲ್ಲವೇ?
ನಾನು ಇರುವುದೇ ಹೀಗೆ
ಹುಂಬ, ಹಳ್ಳಿ ಅದಿರು ಲೋಹ

ಕಟ್ಟಿಕೊಂಡದ್ದೇ ಕದನ ಕುತೂಹಲಕಲ್ಲ
ನಲ್ಲೇ!
ಇದ್ದು ಬಿಡೋಣ ಮರೆತೆಲ್ಲ ಹಳತನ್ನ
ಘೋಷಿಸಿ ಬಿಡು ಕದನ ವಿರಾಮ….

(ಚಿತ್ರ ಕೃಪೆ : ಅಂತರ್ಜಾಲ)

ಎಲೆ ಮರೆ ಕಾಯಿ ೧೦

ಎಲೆ ಮರೆ ಕಾಯಿಗಳ ಜೊತೆ ಮಾತುಕತೆ

ಬುಧವಾರ 8 ಫೆಬ್ರವರೀ 2012

ಎಲೆ ಮರೆ ಕಾಯಿ ೧೦  

ನನ್ನ ಹುಡುಗಿಯರೆಲ್ಲ
ನನ್ನ ನೀರಲ್ಲೇ ಈಜಿ
ದಡ ಸೇರಿಕೊಂಡು,
ಸೇಫ್ ಆಗಿ ಮದುವೆ ಮಾಡಿಕೊಂಡು
ಎಸ್ಕೇಪ್ ಆಗಿ ಹೋದರು

ಎಂಬ ಮೇಲಿನ ಸಾಲುಗಳನ್ನು ಕವಿ ಬರೆದದ್ದು ಇಸವಿ ೧೯೯೨ ರಲ್ಲಂತೆ..ಈಗ ಇಸವಿ ೨೦೧೨ … ಅಂದರೆ ಈ ಕವಿತೆಗೀಗ ಇಪ್ಪತ್ತು ವರುಷದ ಸಂಭ್ರಮ..ಅಂದರೆ ಎರಡು ತುಂಬು ದಶಕಗಳು.. ಆ ಸಂಭ್ರಮವನ್ನು ಆಚರಿಸಿಕೊಳ್ಳಲು ನಮ್ಮ ಕವಿ ಗೆಳೆಯ ಇಷ್ಟಪಡುತ್ತಾರೋ ಇಲ್ಲವೋ..ನಾನಂತೂ ಆ ಕವಿಯ ಕವನಗಳನು ಓದಿ ಸಂಭ್ರಮಿಸಿ, ಅವರ ಕವನಗಳನು ಓದಿ ಸಂಭ್ರಮಿಸುವ ಸರದಿ ನಿಮ್ಮದಾಗಲಿ ಎಂದು ಈ ಕವಿ ಗೆಳಯನನ್ನು ಇಲ್ಲಿಗೆ ಕರೆತಂದು ಕೂರಿಸಿದ್ದೇನೆ..

ಕವಿತೆ ಎಂದರೆ ಗೆಳೆಯ
ಅದು ಉದಯ ರವಿ ಚುಂಬನಕೆ
ಫಳಫಳಿಸೋ ಇಬ್ಬನಿಯ ಬಿಂದು
ಎದೆಗೆ ನಸು ಕಂಪನವೀಯೋ
ನಲ್ಲೆ ಇರುವನು ಘೋಷಿಸುವ
ದುಂಡು ಮಲ್ಲಿಗೆಯ ಕಂಪು…

ಎಂಬ ಮೇಲಿನ ಸಾಲುಗಳ ನೋಡಿದರೆ ಆಹಾ!! ಅನಿಸಿಬಿಡುವಂತೆ ಸಾಲುಗಳ ಗೀಚುವ ಕವಿ ಈ ಗೆಳೆಯ

ಎತ್ತಿಕೋ ಉಳಿ
ಕೆತ್ತು ಈ ಕಗ್ಗಲ್ಲು
ದೇವರಾಗದಿದ್ದರೂ
ದ್ವಾರಪಾಲಕನಾಗಲಿ…

ಎನ್ನುವ ಸುಂದರ ಸಾಲುಗಳನ್ನು ಬರೆದುಕೊಡುವ ಈ ಕವಿ ನಮ್ಮ ಕನ್ನಡ ಬ್ಲಾಗಿನಿಂದ ಒಮ್ಮೆ ಒಂದಷ್ಟು ದಿನ ಇದ್ದಕ್ಕಿದ್ದ ಹಾಗೆ ಕಾಣೆಯಾಗಿದ್ದರು..ಕನ್ನಡ ಬ್ಲಾಗಿನಲಿ ನನ್ನ ಮೊದಲ ಬರಹವೊಂದಕೆ ಮೊದಲ ಪ್ರತಿಕ್ರಿಯೆ ನೀಡಿದ್ದ ಈ ಹಿರಿಯಣ್ಣ ನಮ್ಮ ಕನ್ನಡ ಬ್ಲಾಗಿನಲಿ ಕಾಣದಿದ್ದಾಗ “ಕನ್ನಡ ಬ್ಲಾಗಿನಲ್ಲಿ ನಿಮ್ಮ ಪತ್ತೆ ಇಲ್ಲ. ಹೇಗಿದ್ದೀರ ಸಾರ್?” ಎಂದು ಕಳೆದ ನವೆಂಬರ್ ತಿಂಗಳ ಒಂದು ದಿನ ಸಂದೇಶ ಕಳಿಸಿದ್ದೆ..

“ಎರಡು ತಿಂಗಳ ಹಿಂದೆ ನನ್ನ ಬೈಕ್ ನಿಂದ ಬಿದ್ದು ಬಲಗೈ ಮೂಳೆ ಮುರಿದಿತ್ತು. ಈವತ್ತಷ್ಟೆ ಬ್ಯಾಂಡೇಜು ತೆಗೆದರು.. ದೇವರ ದಯೆಯಿಂದ ಮುರಿದ ಮೂಳೆ ಕೂಡಿದೆ” ಎಂದು ನನ್ನ ಸಂದೇಶಕ್ಕೆ ಈ ಕವಿ ಗೆಳೆಯ ಆಂಗ್ಲ ಭಾಷೆಯಲ್ಲಿ ಪ್ರತಿಕ್ರಿಯೆ ನೀಡಿದ್ದರು.. “ದೇವರು ದೊಡ್ಡವನು. ಈ ಬೈಕು ಎಲ್ಲಾ ಬಿಟ್ಟು ಒಂದು ಕಾರು ತಗೊಂಡ್ ಬಿಡಿ ಬ್ರದರ್” ಎಂದು ನಾನು ಪ್ರತಿಕ್ರಿಯಿಸುವಾಗ

ವೈದೇಹಿಯಲಿ ಬಂಡಾಯಗಾರ್ತಿ
ಊರ್ಮಿಳೆಯಲಿ ನಿರಂತರ ಎಚ್ಚರ
ಕೌಸಲ್ಯೆ ಕೈಯಲಿ ದಶರಥನ ಜುಟ್ಟು
ಇದ್ದಿದ್ದರೇ, ಓದಿಗೆ ಒದಗುತ್ತಿತ್ತು
ಒಂದು ಸಹ್ಯ ರಾಮಾಯಣ!

ಎಂಬಂತಹ ಸಾಲುಗಳಿರುವ ತಮ್ಮ ಕವನವನು ಪ್ರಶ್ನೆಗಳು ಎಂಬ ತಲೆಬರಹದಡಿ ನನ್ನ ಮುಂದಿಟ್ಟಾಗ “ನಿಜಕ್ಕೂ ಸುಂದರ ಸಾಲುಗಳು.. ಬೈಕ್ ನಿಂದ ಬಿದ್ದು ಬಲಗೈ ಏಟು ಮಾಡಿಕೊಂಡಿದ್ದರೂ ಅಧ್ಬುತವಾಗಿ ಬರೆಯೋ ನಿಮ್ಮ ಕವಿ ಮನಸಿಗೆ ನನ್ನ ನಮನ. ಬೇಗ ಗುಣಮುಖರಾಗಿ ಬ್ರದರ್..” ಅಂತ ಹೇಳಿ ಈ ಕವಿಗೆ ವಂದಿಸಿದ್ದೆ..

 ಹಿರಿಯ ಲೇಖಕರೊಬ್ಬರನು ತನ್ನ ಗುರುಗಳು ಎಂದು ಗೌರವಿಸುವ ಕವಿ ಗೆಳೆಯ ಬದರಿನಾಥ ಪಲವಳ್ಳಿಯವರ ಜೊತೆ ನಡೆಸಿದ ಪುಟ್ಟ ಮಾತುಕತೆ ನಿಮ್ಮ ಮುಂದೆ….

“ನಾನು ವೃತ್ತಿಯಲ್ಲಿ ಛಾಯಾಗ್ರಾಹಕ, ಪ್ರಸಕ್ತ ಕಸ್ತೂರಿ ವಾಹಿನಿಯಲ್ಲಿ ಹಿರಿಯ ಛಾಯಾಗ್ರಾಹಕ. ಚಿಕ್ಕಬಳ್ಳಾಪುರ ಜಿಲ್ಲೆಯ ವಾಟದಹೊಸಹಳ್ಳಿ ನನ್ನ ಗ್ರಾಮ. ಓದಿದ್ದು ಮುದ್ದೇನಹಳ್ಳಿ ಮತ್ತು ಬೆಂಗಳೂರಿನಲ್ಲಿ.

ಕಥೆ, ಕಾದಂಬರಿ, ನಾಟಕ ಮತ್ತು ವ್ಯಕ್ತಿ ಚಿತ್ರಣ ಅಂತೆಲ್ಲಾ ಪ್ರಯತ್ನಿಸಿ ಕಡೆಗೆ ಒಲಿಸಿಕೊಂಡದ್ದು ಕಾವ್ಯ. ಸರಳವಾಗಿ, ಅರ್ಥಗರ್ಭಿತವಾಗಿ, ಓದುಗರಿಗೆ ಸುಲಭವಾಗಿ ಜೀರ್ಣವಾಗುವ ಮತ್ತು ಸತ್ವವಿರುವ ಕವಿತೆ ಬರುವ ಆಸೆ ನನ್ನದು. ಕೆಲ ಪದ್ಯಗಳು ಪತ್ರಿಕೆಗಳಲ್ಲಿ ಬೆಳಕು ಕಂಡಿವೆ ಮತ್ತು ಈಗ ನನ್ನ ಮೊದಲ ಕವನ ಸಂಕಲನ ’ಹೀಗೆ, ಲಹರಿಗೆ ಬಿದ್ದು’ ಮುದ್ರಣದಲ್ಲಿದೆ.

ಫೇಸ್ ಬುಕ್ಕಿನ ಕನ್ನಡ ಬ್ಲಾಗ್ ಪರಿವಾರದ ಹಿರಿಯ ಸದಸ್ಯ ಎಂದು ಹೇಳಿಕೊಳ್ಳಲು ನನಗೆ ಹೆಮ್ಮೆ ಎನಿಸುತ್ತದೆ. ಇಲ್ಲಿ ಅರಳಿದ ನನ್ನಂತ ಕುಸುಮಗಳೆಷ್ಟೋ! ಪರಿಚಯವಾದ ಹೊಸ ಕವಿಗಳೆಷ್ಟೋ! ನಿಮ್ಮೆಲ್ಲರ ಒಲುಮೆಗೆ ನನ್ನ ಅನಂತ ಕೃತಜ್ಞತೆಗಳು.”

ಎಂದು ಮಾತು ಮುಗಿಸಿದ ಬದರಿಯಣ್ಣ ಇನ್ನೊಂಚೂರು ಹೆಚ್ಚು ಮಾತನಾಡಿದ್ದರೆ ಚಂದವಿತ್ತು ಅನ್ನಿಸುತ್ತಿದೆಯೇ..? ಕವಿ ಗೆಳೆಯ ಮಾತಿಗಿಂತ ತನ್ನ ಕವಿತೆಗಳಲ್ಲೇ ಎಲ್ಲವನು ಹೇಳುವ ಪರಿ ಚಂದ..ಕವಿಯೊಳಗೊಬ್ಬ ಉತ್ತಮ ಛಾಯಾಗ್ರಾಹಕ ಕೂಡ ಇರುವ ಪರಿ ಇನ್ನೂ ಚಂದ..

ಬದರಿಯಣ್ಣನ ಬ್ಲಾಗ್ ವಿಳಾಸದ ಕೊಂಡಿಗಳು ಈ ಕೆಳಗಿನಂತಿವೆ.. ಒಮ್ಮೆ ಕಣ್ಣಾಡಿಸಿ..
www.badari-poems.blogspot.com
www.badari-notes.blogspot.com
www.badaripoems.wordpress.com

ಹಾಗೆಯೇ ಬದರಿಯಣ್ಣನ ಈ ಕವಿತೆ ಓದಿಬಿಡಿ..

ನೀನು ಚಿಕ್ಕವಳಿದ್ದಾಗ
ಅತ್ತಾಗಲೆಲ್ಲ ಎತ್ತಿಕೊಳ್ಳುತ್ತಿದ್ದೆ…
ಅಲ್ಲ ಅಲ್ಲ ಮುದ್ದು ಬಂದಾಗಲೂ ಸಹ!
ಎಷ್ಟು ಪುಟ್ಟದಿತ್ತು ಮರೀ ನಿನ್ನ
ಬೆಳಲುಗಳು ಮೊದಲ ಸಲ
ಹೆರಿಗೆ ಮನೆಯಲಿ ತಾಕಿದಾಗ..

ಮತ್ತೆ ಸಿಗೋಣ :))))

ನಿಮ್ಮ ಪ್ರೀತಿಯ
ನಟರಾಜು

“ಸಾಯುಕುಟ್ಟಿರು ಜೀವವಾ, ಬರಿ ಸಾಯುಕಷ್ಟೇ ಬಿಡ್ಬಾರ್ದು. ಸಾಯುದ್ರೊಳಗೆ ಯೇನಾರ ಒಂದೊಳ್ಳೆದಾ ಮಾಡ್ ಬುಟ್ಟು ಮನ್ಸಾ ಅನಿಸ್ಕಬೇಕು.” ಇದು ಚಂದದ ಕಥೆಗಾರ ಮೊಗಳ್ಳಿ ಗಣೇಶ್ ರವರ ನನ್ನಜ್ಜನಿಗೊಂದಾಸೆಯಿತ್ತು ಎಂಬ ಕಥೆಯಲ್ಲಿನ ಸಾಲು. ಈ ಸಾಲಿನ ಪ್ರಕಾರ ಏನಾದರು ಒಂದು ಒಳ್ಳೆಯದನ್ನು ಮಾಡೋಣ ಎಂದು ಈ ಬ್ಲಾಗ್ ಮಾಡಿರುವೆ.. ಖುಷಿಯಿಂದ ಓದಿಕೊಳ್ಳಿ..

ಇಂದಿಗಿಂತ ಅಂದೇನೆ ಚಂದವೋ…

ನಾನು ನನ್ನ ಕುಟುಂಬವನ್ನು ಬಿಟ್ಟರೆ ಅತ್ಯಂತ ಪ್ರೀತಿಸುವುದು ನನ್ನ ಬೆಂಗಳೂರನ್ನು. ಒಮ್ಮೆ ಗೆಳತಿಯಂತೆ, ಇನ್ನೊಮ್ಮೆ ಪ್ರೇಯಸಿಯಂತೆ, ಮನಸು ಬಾಡಿದಾಗ ಥೇಟ್ ಹೆತ್ತಮ್ಮನಂತೆ ನನಗೆ ಬೆಂಗಳೂರು, ಆಪ್ತವಾಗುವ ನನ್ನೂರು. ಹುಟ್ಟಿ ಬೆಳೆದದ್ದೆಲ್ಲ ಪಕ್ಕದ ಚಿಕ್ಕಬಳ್ಳಾಪುರ ಜಿಲ್ಲೆಯಾದರೂ ಬದುಕು ಕಟ್ಟಿಕೊಂಡದ್ದು ಇಲ್ಲೆ. ಭಗವಂತ ಅವಕಾಶ ಕೊಟ್ಟರೆ ನನ್ನ ಕಡೆ ಯಾತ್ರೆಯೂ ಹರಿಶ್ಚಂದ್ರ ಘಾಟ್ ಕಡೆಗೆ!

ನಾನು ಹತ್ತನೇ ಕ್ಲಾಸ್ ಮುದ್ದೇನಹಳ್ಳಿಯಲ್ಲಿ ಮುಗಿಸಿ, ಪಿ.ಯು.ಸಿ ಓದಲು ಬೆಂಗಳೂರಿಗೆ ಬಂದದ್ದು ೧೯೮೫ರಲ್ಲಿ. ಅದಾಗಲೆ ನನ್ನ ಏಳು ಜನ ಅಣ್ಣಂದಿರಲ್ಲಿ ನಾಲ್ಕು ಜನ ಬೆಂಗಳೂರಿನಲ್ಲೆ ನೆಲಸಿಯಾಗಿತ್ತು. ಮೂರನೇ ಅಣ್ಣ ಡಾ. ಗೋವಿಂದರಾಜುಲು ಮಕ್ಕಳ ತಙ್ಞರಾಗಿ ತುಂಬಾ ಹೆಸರು ಮಾಡಿದ್ದರು.

ವಿ.ವಿ. ಪುರಂ, ಪ್ಯಾಲೆಸ್ ಗುಟ್ಟಹಳ್ಳಿ, ಚಾಮಾರಾಜ ಪೇಟೆ, ಮಲ್ಲೇಶ್ವರಂ, ಗಂಗೇನಹಳ್ಳಿ ಹೀಗೆ ನನ್ನ ವಿಳಾಸ ಬದಲಾದಂತೆಲ್ಲ ಬೆಂಗಳೂರೂ ಸಾಕಷ್ಟು ಬದಲಾಗುತ್ತ ಹೋಯಿತು.

ನನಗೇ ನೆನಪಿದ್ದಂತೆ ಹೆಬ್ಬಾಳ ವೆಟರ್ನರಿ ಕಾಲೇಜು ದಾಟಿದರೆ ಸರಹದ್ದೆ ಮುಗಿದೇ ಹೊಗುತಿತ್ತು. ನಗರ ಸಾರಿಗೆ ಬಸ್ಸುಗಳಲ್ಲಿ ೩೦, ೪೦, ೫೦ ಪೈಸೆ ಟಿಕೆಟ್ ಇರುತ್ತಿತ್ತು. ಚಾಮರಾಜ ಪೇಟೆಯ ೪ನೇ ಮುಖ್ಯ ರಸ್ತೆಯ ಪುರಾತನ ಗಜಾನನ ಹೋಟೆಲಿನಲ್ಲಿ ೭೦ ಪೈಸೆಗೆ ಊರಗಲ ಮಸಾಲೆ ದೋಸೆ, ಕೇಳಿದವರಿಗೆ ಕೇಳಿದಷ್ಟು ಚಟ್ನಿ ಸಾಂಬರು, ೩೦ ಪೈಸೆಗೆ ಚಂಬು ಲೆಕ್ಕದಲ್ಲಿ ಕಾಫಿ! ಎರಡೂವರೆ ರೂಪಾಯಿಗೆಲ್ಲ ಥೀಯಟರುಗಳಲ್ಲಿ ಕನ್ನಡ ಸಿನಿಮಾಗಳೂ, ೧೦೦೦ಕ್ಕೆ ಬಾಡಿಗೆಗೆ ಎರಡು ರೂಮಿನ ಮನೆ, ೨೦೦ ರೂಪಾಯಿಗೆಲ್ಲ ಮೂಲೆ ಶೆಟ್ಟರ ಅಂಗಡಿಯಲ್ಲಿ ತಿಂಗಳ ರೆಷನ್ನೂ. ಸಂಪೇ ಬೇಕಿರದೆ ದಿನ ಪೂರ ಸುರಿದು ಹೋಗುತ್ತಿದ್ದ ಕಾರ್ಪೊರೇಷನ್ ನೀರು.

ಹೀಗೆ ಪಟ್ಟಿ ಬೆಳೆಯುತ್ತದೆ. ನನಗೆ ಫ್ರೀ ಹಾಸ್ಟೆಲ್ನಲ್ಲಿ ವಾಸ್ತವ್ಯ, ತಿಂಡಿ ಊಟ ಅಲ್ಲೇ ಮುಗಿಯುತಿತ್ತು. ನನಗೆ ಅಣ್ಣಂದಿರು ಕೊಡುತ್ತಿದ್ದದ್ದೇ ೫೦ ರೂಪಾಯಿ ಪಾಕೆಟ್ ಮನಿ ಅದರಲ್ಲೆ ವಾರ ಪೂರ ಊರೆಲ್ಲ ಅಲೆದಾಡಿ, ಪ್ಯಾಕು ಗಟ್ಟಲೆ ಸಿಗರೇಟು ಸುಟ್ಟು, ಸಂಜೆಗೆ ಸಜ್ಜನ್ ರಾವ್ ಸರ್ಕಲ್ಲಿನ ಅಸಂಖ್ಯಾತ ಗಾಡಿಗಳಲ್ಲಿ ಪಾನಿ ಪುರಿಯೋ ಬಾತ್ ಮಸಾಲೆಯೋ ತಿಂದು, ಸ್ನೇಹಿತರಿಗೆ ಬಾದಾಮಿ ಹಾಲು ಕುಡಿಸಿಯೂ ವಾರದ ಕೊನೆಗೆ ರಾಜಣ್ಣಾ, ವಿಷ್ಣು, ಶಿವಣ್ಣ, ಅಂಬಿ ಸಿನಿಮಾಗಳಿಗೆ ಬಾಲ್ಕಾನಿ ಟಿಕೇಟಿಗೆ ಕಾಸು ಮಿಕ್ಕಿರುತಿತ್ತು.

ಆಗೆಲ್ಲ ನನ್ನೂರು ಇಷ್ಟು ತುಟ್ಟಿಯಾಗಿರಲಿಲ್ಲ. ತೀರಾ ಭಾನುವಾರ ೧೦೦೦ದ ನೋಟು ಜೇಬಲ್ಲಿ ಮಡಗಿಕೊಂಡು, ಹೆಂಡತಿ ಕರೆದುಕೊಂಡು ಸಿನಿಮಾಗೆ ಅಂತ ಹೋದರೂ… ಕಡೆಗೆ ಪಾರ್ಕಿಂಗ್ ದುಡ್ಡೂ ಅವಳೇ ಸಾಲ ಕೊಡುವಂತ ಕಾಲ ಆವಾಗಿರಲಿಲ್ಲ!

ಕಾಲ ಕೆಟ್ಟೋಯ್ತು ಬಿಡ್ರಿ…

(ಚಿತ್ರ ಕೃಪೆ : ಅಂತರ್ಜಾಲ)

ಗುರುತ್ವಾಕರ್ಷಣೆ…

ನಿಮ್ಮ ತಾಕಿದೀ ತಾಕು
ತಲುಪಿಸಿ ಬಿಡಿ ನನ್ನ ಗುರುವು ತನಕ;
ಏಕೆಂದರೀಗೀಗ ನನ್ನ ಕೂಗಿಗೂ
ನಿಲುಕದೆತ್ತರ ಅವರ ರೂಪು…

ದನಿ ಚಹರೆ ಬರವಣಿಗೆ; ನನ್ನೆಡೆಗೆ
ಅಕ್ಷರದ ಅಚ್ಚರಿಯ ಗುರುತ್ವಾಕರ್ಷಣೆ,
ತಿಳಿಸಿ ಬಿಡಿ ಇನ್ನೂ ಈ ತುದಿಯಲುಳಿದಿದೆ
ಮಿಡಿವುದದೇ ಹಚ್ಚ ಹಳೇ ಪ್ರೀತಿ

ತಲುಪಿಸಿ ಬಿಡಿ ಇನ್ನೂ ಉಸಿರಾಡೋ
ಈ ಭಕ್ತನಲ್ಲಿರೋ ಅಮಾಯಕ ಭಾವ,
ತಳ್ಳಿದಷ್ಟೂ ಮತ್ತೂ ಹತ್ತಿರವಾಗೋ
ಹುಚ್ಚುತನ ಕಾವಲು ಸ್ವಭಾವ!

ಅಂದೆಲ್ಲ ಗುಡಿಗೇರೋ
ಮೆಟ್ಟಿಲಷ್ಟೇ ದೂರ ಗರ್ಭ ಗುಡಿ
ಒಳಗಣ ದೇವರೂ ಉಸಿರಂತರ…
ಇಂದದೇ ಹಿಮಗಿರಿಗೂ
ಮೇಲು ಶಿಖರಾಗ್ರ ಅದರ ತುದಿ
ಸೂಜಿ ಮೊನೆ, ನಿಲ್ಲ ಬಲ್ಲಿನೇ ಹೇಳಿ?

ಗುರುವಿನ ಒಡನಾಡಿ ನೀವು!
ಸಿಕ್ಕಾಗಲೊಮ್ಮೆ ಹೇಳಿ ನೋಡಿ;
ಮರೆವು ಮೀರಿದ ಗುರುವು
ಮುನಿಯಬಾರದು ಹೀಗೆಲ್ಲ ಅಂತ…

ಬೆಳಕ ಕೊಡುವವರೇ ಬೆನ್ನ ತಿರುವಿದರೇ
ಶಾಪಗ್ರಸ್ತ ಸೂರ್ಯ ಪಾನರು ನಾವು,
ಏನು ಮಾಡಬೇಕು?

(ಚಿತ್ರ ಕೃಪೆ : ಅಂತರ್ಜಾಲ)