ಚಿಟ್ಟೆ ಚಪ್ಪಲಿ…


ನಟ್ಟ ನಡು ರಸ್ತೆಯಲಿ
ಅನಾಥವಾಗಿ ಬಿದ್ದಿತ್ತು
ಪುಟ್ಟ ಒಂಟೀ ಚಪ್ಪಲಿ,
ಅದರ
ಅಂಗುಷ್ಟದ ಮೇಲೆ
ಬಣ್ಣದ ಚಿಟ್ಟೆ!

ತಾಯಿಯ ಅವಚಿಕೊಂಡು
ಬೈಕಿನಲೇ ನಿದ್ರಿಸಿದ ಕಂದ
ಎಚ್ಚರಗೊಂಡರೇ,
ಅಣುಕಿಸಿತು ಒಂಟಿ ಚಪ್ಪಲಿ!

ಶುರುವಾಯ್ತು
ಬಿಕ್ಕಳಿಸಿ ಬಿಕ್ಕಳಿಸಿ ಅಳು,
ಸಂತೈಸಿತೆಂತು
ತಾಯಿ ಹೃದಯ?

“ಚಪ್ಪಲಿ ಕಳೆದರೆ
ಮಗೂ,
ಲತ್ತೆ ಕಳೆದಂತೆ!
ಹೊಸತು ಕೊಡಿಸುವೆ
ಈಗಲೇ ಮತ್ತೆ”

“ಹೊಸ ಚಪ್ಪಲಿ
ಬೇಡ,
ಕಡಿಯುತ್ತೆ ಕಾಲು!
ಎಳವೆ ಪಾದಕೆ ಗಾಯ
ನೆನೆ ನೆನೆದೇ ಅತ್ತಿತು
ಆಗಲೇ ಮತ್ತೆ

ಬೈಕು ಹೊರಟಿತು
ಗಾಂಧಿ ಬಜಾರಿನತ್ತ,
ಹತ್ತು ಅಂಗಡಿಗಳಲೆದು
ಮೆಟ್ಟು ಸವೆಯಿತು,
ಚಪ್ಪಲಿ ಒಪ್ಪಿಗೆ ಇಲ್ಲ
ಮಗುವಿಗೆ…

ಚಿಟ್ಟೆ ಸಿಕ್ಕಿತೇ ಮತ್ತೆ?
ನಿಲ್ಲಲೇ ಇಲ್ಲವಳ ರಚ್ಚೆ!

ಬಳೆ ಅಂಗಡಿ ಹೊಕ್ಕು ತಾಯಿ
ಕೊಂಡು ತಂದಳಾಗಲೇ
ಜೋಡಿ ಚಿಟ್ಟೆ!
ಮರೆಯಲಿ ನಿಂತು ಅಂಟಿಸಿದಳು
ಚಪ್ಪಲಿ ಉಂಗುಷ್ಟಕ್ಕೆ
ಬಣ್ಣ ಬಣ್ಣದ ಚಿಟ್ಟೆ…

ಚಿಟ್ಟೆ ಚಪ್ಪಲಿ ಕಂಡದ್ದೇ
ಮೊರ ಇಷ್ಟಗಲವಾಯ್ತು
ಮಗು ಕುಣಿ ಕುಣಿದಾಡಿ
ಅಮ್ಮನನು ಬಿಗಿದಪ್ಪಿ
ಕೊಟ್ಟಳೆಷ್ಟೋ ಪಪ್ಪಿ
ಅಪ್ಪನಿಗೂ ಅದರ ಕಾಪಿ!

(ಚಿತ್ರ ಕೃಪೆ : ಅಂತರ್ಜಾಲ)

About Badarinath Palavalli

ನಾನು ಟೀವಿ ಛಾಯಾಗ್ರಾಹಕ.

Posted on 02/04/2012, in ಕವನಗಳು. Bookmark the permalink. Leave a comment.

Leave a comment