ಆಡು ಭಾಷೆ ಸರ್ವಕಾಲೀನ…

ಪಂಪನಿಂದ ಕಾವ್ಯವನ್ನು ಓದಿಕೊಂಡು ಬಂದಿದ್ದೇವೆ. 
ಚಂದಸ್ಸು ಸಮಾಸಗಳನ್ನು ಶಾಲಾ ಮಟ್ಟದಲ್ಲೇ ಅಭ್ಯಸಿಸಿದ್ದೇವೆ.  
ಹಳೆಗನ್ನಡ, ನಡುಗನ್ನಡ ಮತ್ತು ಹೊಸ ಕನ್ನಡದ ರಸ ಪಾಕವನ್ನು ಸವಿದಿದ್ದೇವೆ,ಸವಿಯುತ್ತಲೇ ಇದ್ದೇವೆ.

ಈ ನಡುವೆ ಅಚ್ಚರಿ ಮೂಡಿಸುವುದು ನಮ್ಮ ದಾಸ, ವಚನ, ಜನಪದ ಮತ್ತು ತತ್ವ ಪದ ಸಾಹಿತ್ಯಗಳು. ಹಲವು ಶತಮಾನಗಳ ಹಿಂದೆಯೇ ಪ್ರಚಾರಕ್ಕೆ ಬಂದ ಇವು ಇಂದಿನ ಬಳಕೆಯ ಕನ್ನಡಕ್ಕೆ ತುಂಬಾ ಹತ್ತಿರವಿವೆ.

ಹೆಜ್ಜೆಯ ಮೇಲೆ ಹೆಜ್ಜೆಯನಿಕ್ಕುತ
ಗೆಜ್ಜೆ ಕಾಲ್ಗಳ ಧ್ವನಿಯ ತೋರುತ
ಸಜ್ಜನ ಸಾಧು ಪೂಜೆಯ ವೇಳೆಗೆ
ಮಜ್ಜಿಗೆಯೊಳಗಿನ ಬೆಣ್ಣೆಯಂತೆ

ಎನ್ನುತ್ತ ಪುರಂದರ ದಾಸರ ಈ ಕೀರ್ತನೆಯನ್ನು ಕಲಿಯುವ ಪುಟ್ಟ 
ಮಗುವಿಗೆ ಸಂಗೀತ ಮೇಸ್ಟ್ರು ಕೃತಿಯ ಅರ್ಥ ಹೇಳಿಕೊಡುವ 
ಅವಶ್ಯಕತೆಯೇ ಬೀಳುವುದಿಲ್ಲ. ಪುರಂದರ ಕನಕರಾದಿಯಾಗಿ 
ದಾಸರು ಬಳಸಿದ ಭಾಷೆಯು ಅಷ್ಟು ಸರಳ ಮತ್ತು ನಮ್ಮ ಇಂದಿನ 
ಭಾಷೆಗೂ ಅಷ್ಟೇ ಹತ್ತಿರ.

’ಲೋಕದ ಡೊಂಕ ನೀವೇಕೆ ತಿದ್ದುವಿರಿ?’ ಎನ್ನುವ ಬಸವಣ್ಣ ಮತ್ತು 
ಹಲವಾರು ವಚನಕಾರರ ವಚನಗಳು, ’ಕಿಬ್ಬದಿಯ ಕೀಲು ಮುರಿದಂತೆ’ ಎನ್ನುವ ಸರ್ವಙ್ಞ. ’ಮುಂಜಾನೆದ್ದು ಕುಂಬಾರಣ್ಣ’ ಮುಂತಾದ ಸಹಸ್ರಾರು ಜನಪದ ಗೀತೆಗಳು ನಮ್ಮ ಇಂದಿನ ಕನ್ನಡಕ್ಕೆ ತುಂಬಾ ಹತ್ತಿರವಿವೆ.

ಬುಟ್ಟಿಯಲ್ಲಿ ಪತ್ತಲ ಇಟ್ಟಿ
ಅದನು ಉಟ್ಟ ಹೊತ್ತೊಳು ಜೋಕಿ;
ಕೆಟ್ಟಗಂಟಿ ಚೌಡೇರು ಬಂದು
ಉಟ್ಟುದನ್ನೆ ಕದ್ದಾರ ಜೋಕಿ!
ಬುದ್ಧಿಗೇಡಿ ಮುದುಕಿ ನೀನು ಬಿದ್ದೀಯಬೇ.

ಎನ್ನುವ ಸಂತ ಶಿಶುನಾಳ ಶರೀಫರು ತಮ್ಮ ನೆಲದ ಉತ್ತರ ಕರ್ನಾಟಕ 
ಭಾಷೆ ಬಳಸಿದರೂ ಅವರ ಕೃತಿಗಳೂ ಸಹ ಇಂದಿನ ಕನ್ನಡವೇ ಎನಿಸುತ್ತದೆ.

ಶತ ಶತಮಾನಗಳನ್ನು ದಾಟಿ ಬಂದರೂ ಇಂದಿನ ಭಾಷೆಗೆ ಈ ಸಾಹಿತ್ಯ ಸಮಕಾಲೀನ ಎನಿಸಲು ಕಾರಣ ಹೀಗೂ ಇರಬಹುದು ಎನಿಸುತ್ತದೆ, 
ಅದು ಅಡು ಭಾಷೆಯ ಬಗೆಗಿನದು.

ಗ್ರಾಂಥಿಕ ಭಾಷೆಯು ಕೃತಿಕಾರನ ಪ್ರೌಢಿಮೆಯ ಮಾಧ್ಯಮವಾಗಿದ್ದು, 
ಅದು ಕಾಲ ಕಾಲಕ್ಕೆ ಕವಿಯ ಭಾಷಾ ಬಳಕೆಯನ್ನು ಅವಲಂಭಿಸಿದೆ. 
ಅಲ್ಲಿ ಆತ ಬಳಸುವ ಕನ್ನಡವು ಆತನ ಬದುಕಿದ್ದ ಕಾಲ, ಪರಿಸರವನ್ನು ಪ್ರತಿನಿಧಿಸುತ್ತದೆ.

ಹಳೆಗನ್ನಡ, ನಡುಗನ್ನಡ ಮತ್ತು ಹೊಸ ಕನ್ನಡಗಳ ನಡುವೆ ಎದ್ದು 
ಕಾಣುವ ವ್ಯತ್ಯಾಸಗಳು ಮತ್ತು ಕಾಲ ಘಟ್ಟವು ಗ್ರಾಂಥಿಕ ಭಾಷೆಗೆ 
ಮಾತ್ರ ಸಂಬಂಧಪಟ್ಟದ್ದು ಅನಿಸುತ್ತದೆ.

ಪ್ರಾಯಶಃ ಆಡು ಭಾಷೆಯು ಶತಮಾನಗಳಿಂದಲೂ ಇಷ್ಟು ತೀವ್ರವಾಗಿ ಬದಲಾವಣೆಗೆ ಈಡಾಗಿರದು. ಕಾಲ ಕಾಲಕ್ಕೆ ಅನ್ಯ ದೇಶಿಯ ಪದಗಳು 
ಆಡು ಭಾಷೆಗೆ ಸೇರ್ಪಡೆಯಾಗುತ್ತಾ ಹೋಗಿದ್ದರೂ ಅದರ
ಮೂಲ ಸ್ವರೂಪಕ್ಕೆ ಅಂತಹ ಎದ್ದು ಕಾಣುವ ಬದಲಾವಣೆ ಕಂಡಿಲ್ಲ.


ಮೇಲೆ ಉದಾಹರಿಸಿದ ಪ್ರಕಾರಗಳ ಕೃತಿಕಾರರೆಲ್ಲ ಜನ ಮಾನಸಕ್ಕೆ ಹತ್ತಿರವಾಗುವ ಸಾಹಿತ್ಯ ರಚಿಸಿದವರೇ. ದೇವರ ಬಗ್ಗೆಯೇ ಆಗಲಿ 

ಸಾಮಾಜಿಕ ಕಳಕಳಿಯನ್ನೇ ಆಗಲಿ, ಸಾಮಾನ್ಯರಿಗೆ ಅರ್ಥವಾಗುವಂತೆ ರಚಿಸಲು ಇವರು ಆಡು ಭಾಷೆಯನ್ನೇ ಬಳಸಿಕೊಂಡರು.

ಅದಕ್ಕಾಗಿಯೇ ಇರಬಹುದು ಈ ಕೃತಿಗಳ ಭಾಷೆಯು ಇಂದಿನ ಆಡು 
ಭಾಷೆಯ ಕನ್ನಡದಂತೆಯೇ ಇದೆಯಲ್ಲವೇ ಅನಿಸುವುದು.

ಈ ನಿಟ್ಟಿನಲ್ಲಿ ನಾನೂ ಹೆಚ್ಚು ಓದಿಕೊಳ್ಳಬೇಕಿದೆ.

“ಪಲವಳ್ಳಿ ಅಂಕಣ” – 2ನೇ ವಾರ

‘ಗಲ್ಫ್ ಕನ್ನಡಿಗ’ ಈ ಪತ್ರಿಕೆ
12/10/2012

http://gulfkannadiga.com/news/culture/8689.html

Advertisements

About Badarinath Palavalli

ನಾನು ಟೀವಿ ಛಾಯಾಗ್ರಾಹಕ.

Posted on 12/10/2012, in ಗಲ್ಫ್ ಕನ್ನಡಿಗ, ಲೇಖನಗಳು. Bookmark the permalink. Leave a comment.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: