ಶಸ್ತ್ರ ಚಿಕಿತ್ಸಾ ಕೊಠಡಿ ಎಂಬ ಕೌತುಕ…

Gulf Kannadiga

Gulf Kannadiga

Week : 11

OT1

“ಶರೀರೇ ಜರ್ಜರೀಭೂತೇ ವ್ಯಾಧಿಗ್ರಸ್ತೇ ಕಳೇವರೇ |
ಔಷಧಂ ಜಾಹ್ನವೀತೋಯಂ ವೈದ್ಯೋ ನಾರಾಯಣೋ ಹರಿಃ ||”  

ವಾಹಿನಿಗಳ ಛಾಯಾಗ್ರಾಹಕನಾಗಿ ನನ್ನ ವೃತ್ತಿ ಆರಂಭಿಸಿದ ಮೇಲೆ, ನಾನು ತುಂಬಾ ಪ್ರೀತಿಯಿಂದ ಇಂದಿಗೂ ಹೆಚ್ಚಿನ ಮುತವರ್ಜಿ ವಹಿಸಿ ಛಾಯಾಗ್ರಾಹಣ ಮಾಡುವ ವಿಭಾಗವೆಂದರೆಂದರೆ ವೈದ್ಯಕೀಯ ಛಾಯಾಗ್ರಹಣ. ಅದರಲ್ಲೂ ಮುಖ್ಯವಾಗಿ ಶಸ್ತ್ರ ಚಿಕಿತ್ಸೆಗಳು.

ದೇವರ ಕೃಪೆಯಿಂದ ಇಂದಿನವರೆಗೂ ನಾನು ತಲೆಯಿಂದ ಪಾದದವರೆಗೂ ಹಲವಾರು ಶಸ್ತ್ರ ಚಿಕಿತ್ಸೆಗಳನ್ನು, ಜಿಗಣೆ ಚಿಕಿತ್ಸೆ, ಕೇರಳದ ಕಾಯ ಕಲ್ಪ,  ಪ್ರಕೃತಿ ಚಿಕಿತ್ಸೆಯ ಎಲ್ಲಾ ಹಂತಗಳು (ಎನಿಮಾ ಒಂದನ್ನು ಹೊರತುಪಡಿಸಿ! ಹಹ್ಹಹ್ಹಾ…) ಮುಂತಾದ ಹಲವು ವೈದ್ಯ ಪದ್ಧತಿಗಳನ್ನು ಛಾಯಾಗ್ರಹಣ ಮಾಡಿದ್ದೇನೆ.

ಅದರಲ್ಲೂ ನನಗೆ ಶಸ್ತ್ರ ಚಿಕಿತ್ಸೆಯ ಛಾಯಾಗ್ರಹಣವೆಂದರೆ ಅತ್ಯಂತ ಮೆಚ್ಚಿನ ಜವಾಬ್ದಾರಿ. ಶಸ್ತ್ರ ಚಿಕಿತ್ಸಾ ಕೊಠಡಿ ಪ್ರವೇಶಿಸುವ ಮುನ್ನ ನನ್ನ ಎಲ್ಲ ಬಟ್ಟೆಗಳನ್ನು ಬಿಚ್ಚಿಟ್ಟು ಆಸ್ಪತ್ರೆಯ ಉಡುಗೆ ಧರಿಸಿ ಕೊಠಡಿ ಹೊಕ್ಕೆನೆಂದರೆ, ನನಗೆ ಜೀವ ಉಳಿಸುವ ಆ ವೈದ್ಯ ಲೋಕದ ವಿಸ್ಮಯಗಳು ತೆರೆದುಕೊಳ್ಳುತ್ತಾ ಹೋಗುತ್ತದೆ.

ಹಿಡಿ ಗಾತ್ರದ ಮೂತ್ರ ಪಿಂಡಗಳು ಕೈ ಕೊಟ್ಟಾಗ, ರೋಗಿಯ ಮೂತ್ರವನ್ನು ಶುದ್ಧೀಕರಿಸುವ ಆ ಬೃಹತ್ ಯಂತ್ರ.

ಹೃದಯದ ಶಸ್ತ್ರ ಚಿಕಿತ್ಸೆಗಳ ಸಮಯದಲ್ಲಿ ಬಳಸುವ ದೊಡ್ಡ ಗಾತ್ರದ ರಕ್ತ ಸಂಚಾಲನಾ ಯಂತ್ರ.  

ಮೂಳೆ ತಜ್ಞರು ಶಸ್ತ್ರ ಚಿಕಿತ್ಸೆಗಾಗಿ ಬಳಸುವ ಕತ್ತರಿಸುವ, ನೆಟ್ ಬೋಲ್ಟ್, ಸರಳು, ಕೃತಕ ಮಂಡಿ, ಮುಂತಾದ ಮರಗೆಲಸದಂತಹ ಸರಂಜಾಮುಗಳು.

ಅಲ್ಲೇಲ್ಲೋ ದೂರದ ದೇಶದಲ್ಲಿ ಕುಳಿತ ತಜ್ಞ ವೈದ್ಯ ಇಲ್ಲಿನ ರೋಗಿಗೆ ಯಂತ್ರ ಮಾನವ ಕೈಗಳ ಮೂಲಕ ಅಥವಾ ಸೂಚನೆಗಳನ್ನು ಕೊಡುವ ಮೂಲಕ ನಡೆಸುವ ಶಸ್ತ್ರ ಚಿಕಿತ್ಸೆ ಹೀಗೆ ಹತ್ತು ಹಲವು ಅಚ್ಚರಿಗಳು ತೆರೆದುಕೊಳ್ಳುವ ಪ್ರಪಂಚವದು.

ಇವೆಲ್ಲ ನೋಡಿದಾಗಲೆಲ್ಲ ಭಗವಂತ ಸೃಷ್ಟಿಯ ಕೌತುಕತೆ ಅಚ್ಚರಿ ತರಿಸುತ್ತದೆ. (ನಾಸ್ತಿಕ ಮಿತ್ರರಿಗಾಗಿ ಹೇಳುವುದಾದರೆ ಜೀವ ವಿಜ್ಞಾನದ ವಿಕಸನದ ಅದ್ಭುತ).

ನನಗೆ ಒದಗಿ ಬಂದ ಸದವಕಾಶಗಳಲ್ಲಿ ನನಗೆ ನೆನಪಿನಲ್ಲಿ ಉಳಿದ ಶಸ್ತ್ರ ಚಿಕಿತ್ಸೆ ಎಂದರೆ, ಆಂಧ್ರದ ಗಡಿ ಭಾಗದ ಜಲ್ಲೀ ಕ್ರಷರ್ ಕಾರ್ಮಿಕನೊಬ್ಬ ಅಚಾನಕ್ಕಾಗಿ ಅಪಘಾತಕ್ಕೆ ಒಳಗಾದ. ಆತನ ಒಂದು ಕೈಯು ಮೊಳ ಕೈ ಮೇಲ್ಭಾಗದವರೆಗೂ ಕತ್ತರಿಸಿ ಹೋಗಿತ್ತು. ಪ್ರಥಮ ಚಿಕಿತ್ಸೆಯ ನಂತರ ಆತನನ್ನು ಮತ್ತು ಆತನ ಕತ್ತರಿಸಿದ ಕೈಯನ್ನು ರಾಜಧಾನಿಯ ಆಸ್ಪತ್ರೆಗೆ ತಂದರು. ಅಪರೂಪದ ಶಸ್ತ್ರ ಚಿಕಿತ್ಸೆಯಾದ್ದರಿಂದ ಪರಿಚಿತ ವೈದ್ಯರು ನನ್ನನ್ನೂ ಕರೆಸಿಕೊಂಡಿದ್ದರು. ಇಡೀ ಎಂಟು ಗಂಟೆಗಳ ಪರಿಶ್ರಮದಿಂದ ರೋಗಿಗೆ ಕೈ ಮತ್ತೆ ಜೋಡಿಸಲಾಯಿತು.

ಇನ್ನೊಂದು ಪ್ರಕರಣದಲ್ಲಿ ೫ ತಿಂಗಳ ಮಗುವೊಂದು ಹುಟ್ಟಿನಲ್ಲೇ ಅದರ ಎರಡೂ ಕಣ್ಣು ರೆಪ್ಪೆಗಳ ಚರ್ಮ ಒಂದಕ್ಕೊಂದು ಬೆಸೆದು ಬಿಟ್ಟಿತ್ತು. ಕಣ್ಣು ತೆರೆಯಲೇ ಆಗುತ್ತಿರಲಿಲ್ಲ. ಅತ್ಯಂತ ನಾಜೂಕಿನ ಶಸ್ತ್ರ ಚಿಕಿತ್ಸೆಯಿಂದ ಎರಡೂ ರೆಪ್ಪೆಗಳನ್ನು ಬಿಡಿಸಿ ಮಗುವಿಗೆ ಕಣ್ಣು ಕಾಣಲು ಅವಕಾಶ ಮಾಡಿಕೊಡ ಬೇಕಾಯಿತು. ಆ ಮಗುವು ಈಗ ಯಾವುದೋ ಶಾಲೆಯ ಯಾವ ಪಠ್ಯ ಪುಸ್ತಕವನ್ನೋ ಶ್ರದ್ಧೆಯಿಂದ ಓದುತ್ತಿರಬಹುದು. ಪ್ರತಿ ನೋಟದಲ್ಲೂ ಆಕೆ ಬದುಕಿನ ಪೂರ ಅಂದು ಗಂಟೆಗಟ್ಟಲೆ ಸೂಕ್ಷ್ಮವಾಗಿ ಶಸ್ತ್ರ ಚಿಕಿತ್ಸೆ ಮಾಡಿದ ವೈದ್ಯರ ತಂಡವನ್ನು ನೆನೆಯುತ್ತಿರಬಹುದು.

ನಾನೇ ಗಮನಿಸುತ್ತಾ ಬಂದಂತೆ, ಶಸ್ತ್ರ ಚಿಕಿತ್ಸಾ ವಿಧಾನಗಳು, ಬಳಸುವ ಪರಿಕರಗಳು, ಶಸ್ತ್ರ ಚಿಕಿತ್ಸೆಗಾಗಿ ತೆಗೆದುಕೊಳ್ಳುವ ಸಮಯ ಮತ್ತು ರೋಗಿಯು ಚೇತರಿಸಿಕೊಳ್ಳಲು ತೆಗೆದುಕೊಳ್ಳುವ ಸಮಯದಲ್ಲೂ ಕ್ರಾಂತಿಕಾರಕ ಸುಧಾರಣೆಗಳಾಗಿವೆ. ಅಂತರ್ಜಾಲದ ಮೂಲಕ, ಪುಟ್ಟ ಯಂತ್ರ ಮಾನವ ಕೈಗಳ ಮೂಲಕ, ತೆರೆದ ಶಸ್ತ್ರ ಚಿಕಿತ್ಸೆಯನ್ನು ತಪ್ಪಿಸುವ ಲ್ಯಾಪ್ರೋಸ್ಕೋಪಿ ಎಂಬ ವೈದ್ಯಕೀಯ ವರದಾನದ ಮೂಲಕ ದಿನೇ ದಿನೇ ಶಸ್ತ್ರ ಚಿಕಿತ್ಸೆ ಪರಿಣಾಮಕಾರಿ ಆಗುತ್ತಿದೆ.

ಒಮ್ಮೆ ಹೀಗೆ ಬದಲೀ ಮೂತ್ರ ಪಿಂಡದ ಮರು ಜೋಡಣೆ ಶಸ್ತ್ರ ಚಿಕಿತ್ಸೆಗಾಗಿ ನಾನೂ ಮತ್ತು ನನ್ನ ಸಹಾಯಕ ಆಸ್ಪತ್ರೆಗೆ ಹೋಗಿದ್ದೆವು. ಇದು ನಡೆದದ್ದು ಸುಮಾರು ಹತ್ತು ವರ್ಷಗಳ ಹಿಂದಿನ ಮಾತು. ಆಗ ಕ್ಯಾಮರಾ ಬೇರೆ ಯಮ ಗಾತ್ರದ್ದು ಮತ್ತು ಅದಕ್ಕೆ ವಿದ್ಯುತ್ ಕೊಡುವ ಬ್ಯಾಟರಿಯೇ ಬೇರೆ ಇರುತಿತ್ತು. ನಾವಿಬ್ಬರೂ ಆಸ್ಪತ್ರೆಯ ಉಡುಪು ಬದಲಿಸಿಕೊಂಡು ಶಸ್ತ್ರ ಚಿಕಿತ್ಸೆ ಕೊಠಡಿ ಪ್ರವೇಶಿಸಿದೆವು. ನಾನು ಕ್ಯಾಮರಾ ಹೆಗಲಿಗೆ ಏರಿಸಿದ್ದರೆ, ನನ್ನ ಪಕ್ಕದಲ್ಲಿ ತೂಕದ ಬ್ಯಾಟರಿ ಪೆಟ್ಟಿಗೆ ನೇತು ಹಾಕಿಕೊಂಡು ನನ್ನ ಸಹಾಯಕ. ಮಂಚದ ಮೇಲೆ ರೋಗಿಯನ್ನು ಮಲಗಿಸಿ ಮೊದಲೇ ಗುರುತಿಸಿದ್ದ ಚುಕ್ಕೆಗಳ ಅನ್ವಯ ವೈದ್ಯರು ಮೂತ್ರ ಪಿಂಡದ ಸ್ಯಾಂಪಲ್ ಸಂಗ್ರಹಿಸಲು ದಬ್ಬಳದಂತಹ ಉದ್ದದ ಸೂಜಿಯನ್ನು ದೇಹದೊಳಗೆ ತೂರಿಸಿದರು. ನಾನು ಯಾವ ಹಂತವೂ ತಪ್ಪಿಹೋಗದಂತೆ ಚಿತ್ರೀಕರಿಸುತ್ತಲೇ ಇದ್ದೆ. ಯಾಕೋ ನನ್ನ ಕ್ಯಾಮರಾವು ಜಗ್ಗಿದಂತಾಯ್ತು. ಸಹಾಯಕನಿಗೆ ಹುಷಾರಪ್ಪ ಎಂದು ಹೇಳಲು ಅವನ ಕಡೆ ತಿರುಗಿದೆ. ಆಸಾಮಿ ನಾಪತ್ತೇ! ಅರೆ ಎಲ್ಲಿ ಹೋದ ಎಂದು ನೋಡಿದರೆ ರಕ್ತ, ಶಸ್ತ್ರ ಚಿಕಿತ್ಸೆ ಕೊಠಡಿಯ ವಾತಾವರಣ, ಅದರ ವಾಸನೆಗಳು ಮತ್ತು ಸೂಜಿ ಚುಚ್ಚಿದ್ದನ್ನು ನೋಡಿದ ಆ ಹುಡುಗು ಮೂರ್ಚೆ ಹೋಗಿದ್ದ!

ಅಂತಹ ಜೀವನ್ಮರಣದ ಪ್ರಶ್ನೆ ಇರುವ ಗಳಿಗೆಯಲ್ಲೂ ನಾನು ನೆನಸಿಕೊಂಡು ನಗುವ ಹಾಸ್ಯದ ಸಂಗತಿ ಎಂದರೆ, ಯಾರೋ ರಾಜಕಾರಣಿಗೆ ಚಿಕ್ಕದೇನೋ ಶಸ್ತ್ರ ಚಿಕಿತ್ಸೆ ಇದ್ದಾಗ ವೈದ್ಯರು ಸ್ಥಳೀಯ ಅರವಳಿಕೆ ಕೊಡಲು ಮುಂದಾದರು. ಇದನ್ನು ತಿಳಿದುಕೊಂಡ ಆತ ವೈದ್ಯರಿಗೆ ಇಂಪೋರ್ಟೆಡ್ ಆರವಳಿಕೆ ಮದ್ದೇಕೊಡಿ ಎಂದು ದುಂಬಾಲು ಬಿದ್ದನಂತೆ.

ತುಂಬಾ ಪರಿಚಿತ ಪರಿಚಿತ ವೈದ್ಯರೊಬ್ಬರು ನನಗೇ ಆಪರೇಷನ್ ಟೇಬಲ್ಲಿನಲ್ಲೂ ರೀ ಟೇಕ್ ಕೇಳಬೇಡಪ್ಪ ಎಂದು ಹಾಸ್ಯ ಮಾಡುತ್ತಿದ್ದರು!

ಇತ್ತೀಚೆಗಂತೂ ವೈದ್ಯಕೀಯ, ಆಸ್ಪತ್ರೆ ಮತ್ತು ಔಷಧಿ ದುಬಾರಿಯಾಗುತ್ತ, ಮಧ್ಯಮ ಹಾಗೂ ಬಡ ರೋಗಿಗಳ ಪಾಲಿಗೆ ಗಗನ ಕುಸುಮವಾಗುತ್ತಿದೆ. ಈ ನಡುವೆಯೂ ದಾನಿಗಳು ಮುಂದೆ ಬಂದು ವೆಚ್ಚವನ್ನು ಭರಸುತ್ತಿದ್ದಾರೆ. ಸರ್ಕಾರೀ ಪ್ರಾಥಮಿಕ ಚಿಕಿತ್ಸಾ ಕೇಂದ್ರಗಳು ಮತ್ತು ದೊಡ್ಡ ಆಸ್ಪತ್ರೆಗಳು ತಕ್ಕ ಮಟ್ಟಿಗೆ ಒಳ್ಳೆಯ ಕೆಲಸವನ್ನೇ ಮಾಡುತ್ತಿವೆ. ಅಂತೆಯೇ ನೌಕರರಿಗೆ ಲಭ್ಯವಿರುವ ಇ.ಎಸ್.ಐ ಮತ್ತು ಶ್ರೀಸಾಮಾನ್ಯರಿಗೂ ಒದಗುವ ವೈದ್ಯಕೀಯ ವಿಮಾ ಯೋಜನೆಗಳು ಸಹ.

ಇಂದು ಹಲವು ಪ್ರತಿಷ್ಠಿತ ಆಸ್ಪತ್ರೆಗಳು ದಾನಿಗಳ ಪಟ್ಟಿ ಮಾಡಿಟ್ಟು, ಬಡ ರೋಗಿಗಳ ಶಸ್ತ್ರ ಚಿಕಿತ್ಸೆಯನ್ನು ಉಚಿತವಾಗಿ ನೆರೆವೇರಿಸುತ್ತಿದ್ದಾರೆ.

ಮುಖ್ಯವಾಗಿ ಸರ್ಕಾರಗಳು ಮುತವರ್ಜಿ ವಹಿಸಿ, ವೈದ್ಯ ಶಾಸ್ತ್ರದ ಬಗೆಗೆ ಹೆಚ್ಚಿನ ಸಂಶೋಧನೆಗಳನ್ನು ಪ್ರೇರೇಪಿಸಬೇಕಿದೆ. ಮನುಜ ಮತ್ತು ಪಶುಗಳ ಅರೋಗ್ಯದ ದೃಷ್ಟಿಯಿಂದ ವಾರ್ಷಿಕ ಅಯವ್ಯಯದಲ್ಲೂ ಸಂಶೋಧನೆಗಳಿಗೆ ದೊಡ್ಡ ಪಾಲನ್ನು ಎತ್ತಿಡಬೇಕಿದೆ. ಸುಲಭ ಮತ್ತು ಮಿತವ್ಯಯಕಾರಿ ಚಿಕಿತ್ಸಾ ಪದ್ಧತಿಗಳು ಮುಂದಿನ ದಿನಗಳಲ್ಲಿ ನಗರಗಳಲ್ಲಿ ಮಾತ್ರವೇ ಅಲ್ಲದೇ ಗ್ರಾಮೀಣ ಪ್ರದೇಶಗಳಲ್ಲೂ ಗುಡ್ಡಗಾಡುಗಳಲ್ಲೂ ಬರಲೆಂದು ಆಶಿಸುತ್ತೇನೆ.

ಅಂತೆಯೇ ಇಲ್ಲಿಯವರೆಗೂ ನಾನು ಚಿತ್ರೀಕರಣ ಮಾಡದ ಎಲ್ಲ ಶಸ್ತ್ರ ಚಿಕಿತ್ಸೆಗಳ ಮತ್ತು ವೈದ್ಯಕೀಯ ಪದ್ಧತಿಗಳ ಛಾಯಾಗ್ರಹಣ ಮಾಡುವ ಅವಕಾಶವೂ ನನಗೆ ದೊರೆಯಲಿ.

ನಮ್ಮ ಬದುಕಿನ ಅವಭಾಜ್ಯ ಅಂಗವಾಗಿ ನಮ್ಮ ಸ್ವಾಸ್ಥ್ಯವನ್ನು ಸದಾ ಕಾಪಾಡುವ ಎಲ್ಲ ವೈದ್ಯರಿಗೆ ನಾನು ಈ ಮೂಲಕ ನಮಿಸುತ್ತೇನೆ.

OT2

Gulf Kannadiga

ಗಲ್ಫ ಕನ್ನಡಿಗ ಈ ಪತ್ರಿಕೆಯಲ್ಲಿ ಪ್ರಕಟಿತ.
14.12.2012

http://gulfkannadiga.com/news/culture/26881.html

(ಚಿತ್ರ ಕೃಪೆ : ಅಂತರ್ಜಾಲ)

Advertisements

About Badarinath Palavalli

ನಾನು ಟೀವಿ ಛಾಯಾಗ್ರಾಹಕ.

Posted on 14/12/2012, in ಗಲ್ಫ್ ಕನ್ನಡಿಗ, ಪಲವಳ್ಳಿ ಅಂಕಣ, ಲೇಖನಗಳು. Bookmark the permalink. Leave a comment.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: