ಸುಲೋಚನ…

Gulf Kannadiga

Gulf Kannadiga

Week: 12

 

 

ಈ ಭೂತ ಕನ್ನಡಿ ಇದೆಯಲ್ಲ ಇದಕ್ಕೂ ನನಗೂ ನಂಟು ಈವತ್ತಿನದಲ್ಲ.

ಏಕೆಂದರೆ ಈವತ್ತು ನನ್ನ ಹೊಟ್ಟೆ ತುಂಬಿಸುತ್ತಿರುವ ಕ್ಯಾಮರಾ ಮತ್ತು ಅದರ ಮೂಲಕ ಜಗತ್ತನ್ನು ’ಸರಿಯಾಗಿ’ ನೋಡಲು ನಾನು ಧರಿಸುವ ಕನ್ನಡಕ ಎರಡಕ್ಕೂ ಮೂಲ ಆಧಾರ ’ಭೂತ ಕನ್ನಡಿ’ ಅಥವ ಇನ್ನೂ ಸುಲಭ ಅರ್ಥದಲ್ಲಿ ಮಸೂರ ಅಥವಾ ಲೆನ್ಸ್!

ನನ್ನ ಹಳ್ಳಿಯ ಹಣ್ಣು ಹಣ್ಣು ಮುದುಕರು ಮೋದಿ ಡಾಕ್ಟರ್ ಅವರ ಕಣ್ಣು ಚಿಕಿತ್ಸಾ ಶಿಬಿರಗಳಲ್ಲಿ ಮುಫತ್ತಾಗಿ ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡು ಬಂದು, ಮೊದಲು ಕೆಲವು ದಿನ ಕಪ್ಪು ಕನ್ನಡಕ ಹಾಕಿಕೊಂಡು ಜಗಲಿಯಲಿ ಕೂತು ಎಲೆ ಅಡಿಕೆ ಮೆಲ್ಲುತ್ತಿದ್ದರು. ಆ ನಂತರದ ದಿನಗಳಲ್ಲಿ ಆ ಕಪ್ಪು ಕನ್ನಡಕದ ಜಾಗದಲ್ಲಿ ದಪ್ಪಗಿನ ಕನ್ನಡಕವೊಂದು ಬಂದು ಕೂರುತಿತ್ತು. ಆ ದಪ್ಪಗಿನ ಮಸೂರದ ಹಿಂದಿನ ಅವರ ಕಣ್ಣುಗಳು ಇಷ್ಟಗಲ ಕಾಣುತ್ತಿದ್ದವು. ಆ ನಂತರ ಅವರ ಪತಿನಿಯರನ್ನು ನೋಡಿ ಬಹುಶಃ ನಿನಗೂ ವಯಸಾಯಿತಲ್ಲೇ ರಂಗಮ್ಮ ಎಂದು ಮನಸ್ಸಿನಲ್ಲೇ ಹೇಳಿಕೊಳ್ಳುತ್ತಿದ್ದರೇನೋ?

ನಮ್ಮ ಅಜ್ಜಿ ಕನ್ನಡವನ್ನು ’ಸುಲೋಚನ’ ಎಂದೇ ಕರೆಯುತ್ತಿದ್ದರು. ಅಜ್ಜಿ ತನ್ನ ಟ್ರಂಕಿಗೆ ಯಮ ಭಾರದ ಬೀಗ ಜಡೆಯುತ್ತಿದ್ದರು. ಅದರ ಬೀಗದ ಕೈಗಳನ್ನು ತಮ್ಮ ಕುತ್ತಿಗೆ ದಾರದಲ್ಲಿ ಜತನ ಮಾಡುತ್ತಿದ್ದರು. ಆ ಬೀಗಗಳನ್ನು ಆಕೆ ಜೋಪಾನ ಮಾಡುತ್ತಿದ್ದ ರೀತಿಗೂ ಅವಳ ಕನ್ನಡಕವನ್ನು ಕಾಪಾಡಿಕೊಳ್ಳುತ್ತಿದ್ದ ರೀತಿಗೂ ಅಂತಹ ವ್ಯತ್ಯಾಸವೇನೂ ಇರಲಿಲ್ಲ. ಪದೇ ಪದೇ ತಮ್ಮ ಹಾಸಿಗೆ ಪಕ್ಕ ಇಟ್ಟಿರುತ್ತಿದ್ದ ಕನ್ನಡಕದ ಡಬ್ಬವನ್ನು ಮುಟ್ಟಿ ನೋಡಿಕೊಳ್ಳುವುದು ಮತ್ತು ತನ್ನ ಕುತ್ತಿಗೆಯ ಬೀಗದ ಗೊಂಚಲನ್ನು ಸವರಿಕೊಳ್ಳುವುದು ಆಕೆಯ ಕ್ಷಣ ಕ್ಷಣದ ಕೆಲಸ.

ಕನ್ನಡಕ ಒಡೆದರೆ ಅದನ್ನು ರಿಪೇರಿಯನ್ನು ಯಾರೂ ಮಾಡಿಸಿಕೊಡರು, ಎಂಬ ಹಸಿ ಸತ್ಯ ಅಜ್ಜಿಗೆ ಗೊತ್ತಿತ್ತು. ಸ್ವತಃ ಕನ್ನಡಕವೂ ಇಲ್ಲದೆ ಮಾ|| ಹಿರಣ್ಣಯ್ಯನವರು ಹೇಳುವಂತೆ ಕನಸುಗಳೂ ಕ್ಲೀಯರ್ ಆಗಿ ಕಾಣಿಸವು ಎಂಬ ಥಿಯರಿ ಆಕೆಯದು. ಆಕೆ ತೀರಿಕೊಂಡಾಗ ಬಹುಶಃ ಆಕೆಯೊಡನೆ ಚಿತೆ ಏರಿದ ಕೆಲವೇ ಆಕೆಯ ಮೂಲ ಗುರುತುಗಳಲ್ಲಿ ಕನ್ನಡಕವೂ ಒಂದಿರಬಹುದು.

ನಿಮ್ಮ ಮನೆ ಗೋಡೆಗಳಿಗೆ ನಿಮ್ಮ ಪೂರ್ವಜರ ಹಳೇ ಚಿತ್ರಗಳಿದ್ದರೆ ಗಮನಿಸಿ. ಮೈಸೂರು ಪೇಟ, ಹುರಿ ಮಾಡಿದ ಮೀಸೆ, ಚಿನ್ನದ ಸರದ ಸಮೇತ ಆ ದುಂಡಗಿನ ಗಡಿಯಾರ ಮತ್ತು ವಿವಿಧಾಕಾರದ ಆ ಕನ್ನಡಕಗಳು. ಕನ್ನಡಕವು ಹೊರಗಿನ ಜಗವನ್ನು ಸ್ಪಷ್ಟವಾಗಿ ಕಾಣಿಸಲು ಎಷ್ಟು ಸಹಕಾರಿಯೋ ಹಾಗೆ ನಮ್ಮ ಹೊರ ರೂಪವನ್ನು ತುಸುವಾದರೂ ಸಹ್ಯವಾಗಿ ಕಾಣಿಸಬಲ್ಲ ತಾಕತ್ತು ಅವಕ್ಕೂ ಇದೆ.

ನಮ್ಮ ಮಹಾತ್ಮ ಗಾಂಧಿಯವರ ಅತ್ಯಂತ ಸುಲಭದ ರೇಖಾ ಚಿತ್ರ ಬಿಡಿಸುವಾಗ ನಾವು ಅವರ ಕನ್ನಡದಿಂದಲೇ ಶುರು ಮಾಡುತ್ತೇವೆ ಹೌದೋ ಅಲ್ಲವೋ?

ಹಳೇ ಸಿನಿಮಾಗಳಲ್ಲಿ ನಾಯಕ ನಟರು ಬಳಸುತ್ತಿದ್ದ ಊರಗಲದ ತಂಪು ಕನ್ನಡಕ ಗಮನ ಸೆಳೆಯುತ್ತಿದ್ದವು. ಕೆಲ ರಾಜಕೀಯ ನಾಯಕರನ್ನು ನಾವು ಅವರ ಕನ್ನಡಕವಿಲ್ಲದೆ ಗುರುತೂ ಹಿಡಿಯಲಾರವೇನೋ ಅಲ್ಲವೇ? ಅಂತಹ ಊರಗಲದಿಂದ ಈಗ ಸಾವಿರಗಟ್ಟಲೆ ಬೆಲೆ ಬಾಳುವ ತಂಪು ಕನ್ನಡಕಗಳ ಜಮಾನಾದವರೆಗೂ ಅವು ನಮ್ಮ ಬದುಕಿನ ಅವಿಭಾಜ್ಯ ಅಂಗವೇ. ನಾನು ’ಆ ಕಂಪನಿ’ ತಂಪು ಕನ್ನಡಕ ಧರಿಸಿದ್ದೇನೆ ಎನ್ನುವುದು ಪ್ರತಿಷ್ಠೆಯ ಸೂಚಕವೇ.

ಸಿನಿಮಾಗಳಲ್ಲಿ ಜಿಪುಣ ಪಾತ್ರಗಳನ್ನು ತೋರಿಸುವ ಪರಿಕಲ್ಪನೆ ಗಮನಿಸಿ, ಅವರ ಕನ್ನಡಕದ ಒಂದು ಆಧಾರ ಮುರಿದಿತ್ತೆನ್ನಿ ಅದಕ್ಕೆ ಅವರು ದಾರ ಕಟ್ಟಿಕೊಂಡು ಮೂಗಿನ ಮೇಲೆ ಏರಿಸಿರುತ್ತಾರೆ!

ಇನ್ನೂ ಅಚ್ಚರಿ ಎಂದರೆ ನಮ್ಮ ಅತ್ತೆ ಮತ್ತು ಮಾವನವರದು ಅಪರೂಪದ ಆದರ್ಶ ದಾಂಪತ್ಯ. ಅವರು ಹೇಗೆ  ಒಬ್ಬರನ್ನೊಬ್ಬರು ಬಿಟ್ಟಿರಲಾರೊ ಹಾಗೆಯೇ ಅವರ ಕನ್ನಡಕವೂ ಸಹ. ಒಂದೇ ಕನ್ನಡಕ ಅದು ಹೇಗೋ ಇಬ್ಬರು ಬಳಸಬಹುದಾಗಿದೆ.

ಈಗ ಬಿಡಿ ಚಾಳೀಸುಗಳ ನಿವಾರಣೆಗಾಗಿ ನೇತ್ರ ತಜ್ಞರು ಕೆಲವೇ ನಿಮಿಷಗಳ ಶಸ್ತ್ರ ಚಿಕಿತ್ಸೆ ಮಾಡುತ್ತಾರೆ. ಹುಡುಗ ಹುಡುಗಿಯರು ಕಣ್ಣಿನ ಒಳಗೇ ಲೆನ್ಸ್ ಹಾಕಿಕೊಂಡು ತಮ್ಮ ಐಬು ಜಗದ್ಜಾಹೀರಾಗದ ಹಾಗೇ ಎಚ್ಚರಿಕೆ ವಹಿಸುತ್ತಾರೆ. ವಿದ್ಯಾವಂತರಿಗೆ ತಮ್ಮ ಓದಿನ ಪುಟ್ಟ ಕನ್ನಡಕವನ್ನು ಜೇಬಿನ ಪುಟ್ಟ ಹೋಲ್ಡರಿನಿಂದ ತೆಗೆದು ಹಾಕಿಕೊಳ್ಳುವುದೇ ಒಂದು ಗರ್ವ ಸೂಚಕವೇ.

ಈ ಮಸೂರಗಳು ಕನ್ನಡಕಕ್ಕೆ ಹೇಗೋ ಹಾಗೆ ಬದುಕಿನ ಹಲವು ಉಪಕರಣಗಳಿಗೆ ಮೂಲ. ಕ್ಯಾಮರಾ, ಪ್ರೊಜೆಕ್ಟರ್, ಸೂಕ್ಷ್ಮ ದರ್ಶಕ, ಉದರ ದರ್ಶಕ ಶಸ್ತ್ರ ಚಿಕಿತ್ಸಾ ಸಾಧನ ಹೀಗೆ ಇವುಗಳ ಬಳಕೆ ವಿಶ್ವ ವ್ಯಾಪಿ. 

ಚಿಕ್ಕವನಾಗಿದ್ದಾಗ ಬರ್ನ್ ಆದ ಬಲ್ಪುಗಳ ತಲೆ ಬುರುಡೆ ಒಡೆದು, ಖಾಲೀ ಪೆಟ್ಟಿಗೆಯ ಒಳಗಡೆ ಅದನ್ನು ಜೋಡಿಸಿ ಬಲ್ಪಿನ ಒಳಗಡೆ ನೀರು ತುಂಬಿಟ್ಟು ಸಿನಿಮಾ ಪ್ರೊಜೆಕ್ಟರ್ ಅಂತ ತಯಾರು ಮಾಡುತ್ತಿದ್ದೆ. ಆ ನೀರು ತುಂಬಿದ ಬಲ್ಬೇ ಮಸೂರದ ಹಾಗೆ ಕೆಲಸ ಮಾಡುತ್ತಿತ್ತು. ಕಿಟಕಿಯ ತೂತಿನಿಂದ ಕನ್ನಡಿ ಮುಖೇನ ಹಾಯಿಸಿದ ಸೂರ್ಯನ ಬೆಳಕಲ್ಲಿ,  ಮೂಡುತ್ತಿದ್ದ  ಸಿನಿಮಾ ರೀಲಿನ ಒಂದೊಂದೇ ಫ್ರೇಮು ಅಮಿತಾನಂದವನ್ನು ಕೊಡುತ್ತಿತ್ತು. ಏನೋ ಕಂಡು ಹಿಡಿದ ಸಂಭ್ರಮ ನನಗೆ. ನೀರು ತುಂಬಿದ ಬಲ್ಬೂ ಮಸೂರದ ಕೆಲಸ ಮಾಡುತ್ತಿತ್ತು.

ಅಂದ ಹಾಗೆ ಈ ಲೇಖನವನ್ನು ಬೆರಳಚ್ಚಿಸುವಾಗಲೂ ನಾನು ಕನ್ನಡಕ ಹಾಕಿಕೊಂಡೇ ಕುಳಿತಿದ್ದೇನೆ ಎಂದರೆ, ಇದರ ಅನಿವಾರ್ಯತೆ ನಿಮಗೆ ಅರಿವಾಗಿರಬಹುದಲ್ಲವೇ?

ಗಲ್ಫ ಕನ್ನಡಿಗ ಈ ಪತ್ರಿಕೆಯಲ್ಲಿ ಪ್ರಕಟಿತ.
21.12.2012

http://gulfkannadiga.com/news/culture/29066.html

(ಚಿತ್ರ ಕೃಪೆ : ಅಂತರ್ಜಾಲ)

Advertisements

About Badarinath Palavalli

ನಾನು ಟೀವಿ ಛಾಯಾಗ್ರಾಹಕ.

Posted on 21/12/2012, in ಗಲ್ಫ್ ಕನ್ನಡಿಗ, ಪಲವಳ್ಳಿ ಅಂಕಣ, ಲೇಖನಗಳು. Bookmark the permalink. Leave a comment.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: