Category Archives: ಕವನಗಳು

ಅಲ್ಪತನ…

1ಮಿಂಚುವುದು ಅಕ್ಷಮ್ಯ
ಗತಿ ಇರದೆ ಒಳ ಬೆಳಕು
ಮೇಲೆ ಅಮಿತ ಪೊಗರು

ಉಗುರು ಮಾತ್ರದ ಪ್ರಸಿದ್ಧಿ
ಗೆಲುವಿಗೆ ಮೆರೆವುದು ಅಲ್ಪತನ
ಮೆರೆಯ ಬಾರದು ಮರೆತೂ
ಮಿಂಚು ಹುಳು ಕ್ಷಣಿಕ ಬದುಕ

ಎಂತ ಪರಮಳಿಸೋ ಹೂವೂ
ನಿರ್ಮಾಲ್ಯ ಮರು ದಿನಕೆ
ತನ್ನದೇ ಗಿಡದ ತೊಪ್ಪಲಿಗೆ
ಗೊಬ್ಬರವಾಗುವ ಸಾರ್ಥಕ್ಯ

ಪದ್ಮಜನ ಹಣೆ ಕೆತ್ತುವಾಟ
ಪುರುಡು ಸಂಭ್ರಮದ ಅಂತ್ಯ
ಜೀವಕ್ಕೆ ಸೂತಕ ಕಡೆಯಾಟ
ಉಳಿವವ ಸಮವರ್ತಿ ಸತ್ಯ

ಅಮರತ್ವ ಪಡೆವುದದೇ
ಜೀವಮಾನದ ಒಳಿತು
ಮೀರಿ ಸಾವಿನಾಚೆಗೂ…

Advertisements

ಅಜ್ಞಾತ ಕವಿ…

808681_Poet-Tree
ನನ್ನೊಳಗೆ ನಾನಿರದ
ಶೂನ್ಯ ವೇಳೆಯಲೊಮ್ಮೆ
ಗುಡಿಸಿ ಹಾಕಲಿ ಮನಸು
ಮಹಾ ಕವಿಯ ತೆವಲು

ಅದೇ ಪದಗಳ ಅರೆದು
ಮೇಲಿನಿತು ಬಣ್ಣ ಪೂಸಿ
ಬೆನ್ನು ತಟ್ಟಿಕೊಳದಿರಲಿ
ಈ ಅಜ್ಞಾತ ಕವಿಯು

ನಿಜಾಗ್ನಿ ಕರಗಿಸಲಿ ಕೊಬ್ಬು
ಎನ್ನದೇ ಕಾವ್ಯವೆನು ಮಂಕು
ದೈವ ಮಳೆ ತೊಳೆಯಲದು
ಹೂಳುಮಯ ಒಳ ಮೋರಿ

ಸಂಗ್ರಹಿತ ಕತ್ತಲಳಿಸಲಿ
ತಿಳುವಳಿಕೆ ಬಿರು ಬೆಳಕು
ನಾತ ಒಳಾಂಗಣವನು
ಪರಿಮಳಿಸಲಿ ನವ್ಯ ಗಾಳಿ

ಪೇರಿಸುವ ಗ್ರಂಥಗಳೆಲ್ಲ
ತುಂಬಲವು ಜ್ಞಾನ ಸಿದ್ದಿ
ಅರೆ ಪಾವು ತಿಳುವಳಿಕೆ
ಒಪ್ಪವಾಗಿಸಲೆನ್ನ ತಿದ್ದಿ

(ಚಿತ್ರ ಕೃಪೆ: ಅಂತರ್ಜಾಲ)

ಬಂಕರುಗಳಾಚೆಯೂ ಬದುಕಿದೆ…

500ಗೋಜಲಿಸದಿರು ಪ್ರಭುವೇ,
ತಂತಿಗಳಿವು ನಿನ್ನವೇ
ಗೊಂಬೆಯೇ ಮೀರಬಾರದು
ಸೂತ್ರಧಾರನನ್ನೇ!

ನಾಡಿಗಿದ್ದರೂ ಕಿತ್ತು ತಿನ್ನೋ ಬಡತನ
ನಿನಗೇನು ಸ್ವಾಮಿ,  ಬಿಚ್ಚಲೊಲ್ಲೆ
ನಿನ್ನ ದೇಗುಲದಡಿಯ ಭಂಡಾರ!
ನೂರು ದೇಶಗಳನೇನೋ ಚಿತ್ರಿಸಿದೆ
ವರ್ಣ ಭೇದವೋ ಭಾಷಾ ವಿಭೇದವೋ
ಧರ್ಮ ಅಸಹಿಷ್ಣತೆಯೋ, ಏನೋ ಕರ್ಮ!
ಅಗೋಚರ ಗಡಿ ರೇಖೆಗೆ ಆಚೀಚೆ ತಂದಿಟ್ಟೆ
ಹುಟ್ಟು ಹೋರಾಟಗಾರ ದಾಯಾದಿ ಸಂಸಾರ
ನಿನ್ನ ಆಟಕೆ ಹಾವೂ ಮೇಲೆ ಹದ್ದೂ…

ಸಿಕ್ಕ ಸೆರೆ ತಾಜಾ ಮಾಲು
ಕಿತ್ತು ಕಳಿಸುವರಲ್ಲ ಅಂಗಾಂಗ
ಮತ್ತೆ ಅದೇ ಶಾಂತಿ ಮಂತ್ರವೇ?
ನೊಂದು ಬಿಕ್ಕಿತು ಹುತಾತ್ಮ…

ಜಠರ ಮರೆತಿದೆ, ದೊರೆಯೇ!
ಅರೆಯೋ ಕಾಯಕವನ್ನೇ,
ಪಿಜ್ಜಾ ಬರ್ಗರ್ರು ಕಲ್ಮೀ ಕಬಾಬು
ಸಾಹುಕಾರರ ಟೈಂಪಾಸಿನಾಹಾರ
ನನಗೆ ಅಂಬಲಿಸು ಸಾಕು,
ನಂಜಿಕೊಳ್ಳಲು ಹಸಿ ಮೆಣಸಿನಕಾಯಿ…

ಏಕೆ ಜಾಣ ಕುರುಡೋ ನಮ್ಮ ಬಡಿದಾಟಕ್ಕೆ?
ಹಸಿವು ನೆರೆ ಬರ ರೋಗ ರುಜಿನ
ಸತ್ತು ಮಲಗಲಿ ಪೆದ್ದ ಮತದಾರ…
ಖಜಾನೆ ಖಾಲಿಯಾದರೂ ಬೇಸರವಿಲ್ಲ
ಸಿದ್ಧವಿರಲೇ ಬೇಕು ಜಲಾಂತರ್ಗಾಮಿ ಯುದ್ಧ ವಿಮಾನ
ಪಿರಂಗಿ ತುಂಬಾ ಸುಡು ಗುಂಡು ಅಣು ಬಾಂಬು
ಉದರ ಒಣಕಲು ಕೊಡವಾಗಲೇನು
ಬಂಗಾರದ ಕುಚ್ಚು ಚೌರಿ ಕೂದಲಿಗೆ….

ಕಿತ್ತೆಸೆ ನಿನ್ನ ತಂಪು ಕನ್ನಡಕ
ಉದ್ದುದ್ದ ಮಲಗಿದ್ದು ಸಾಕು ನೀನು,
ಪಕ್ಕೆಗೊದ್ದು ಇನ್ನಾದರೂ ಹೇಳು
ದಡ್ಡ ಮಗನೇ,
ಬಂಕರುಗಳಾಚೆಯೂ ಬದುಕಿದೆ…

(ಚಿತ್ರ ಕೃಪೆ : ಅಂತರ್ಜಾಲ)

ಅಮ್ಮ ಮತ್ತು ಮಗಳು…

tottiluಕಲ್ಪಿಸಿ ತೊಟ್ಟಿಲನು
ತೂಗುವಳು ತಾಯಿ
ನೆನಪಾದಾಗ ಮಗಳು

ಅಪ್ಪ ಅಮ್ಮರ ಬಯಕೆ
ಮೂರ್ತತೆಯ ಸಾಕರಿಸಿ,
ನೆನಸಿದ ಎತ್ತರಗಳ
ಮೀರಿ ಬೆಳೆದಿಹಳಾಕೆ
ತಪ್ಪದೆಯೇ ಚಾಚೂ

ಇಯತ್ತೆ ಪಟ್ಟಿಯಲು
ಮುಂಚೂಣಿ ತಮ್ಮವಳೇ,
ಪುಸ್ತಕದ ಹುಳುವಲ್ಲ
ಗೆದ್ದು ಪೇರಿಸಿದಳಂದು
ಆಟೋಟ ಫಲಕ ಪದಕ

ಹೆತ್ತವರ ಮುಪ್ಪರಿತು
ನೌಕರಿಯಲು ಭರ್ತಿ,
ದುಡಿದು ತಂದಳಂದು
ಅಹೋ ರಾತ್ರಿಯೆಲ್ಲ
ತಾ ಕೀಲಿ ಮಣಿ ಕುಟ್ಟಿ

ಗೊತ್ತು ಮಾಡಿದ ವರ
ಒಪ್ಪಿ ಹಸೆ ಏರಿದಳು,
ತವರ ತೊರೆದರು
ಕೈ ಬಿಚ್ಚಿ ಕೊಟ್ಟಳು
ತಪ್ಪದೆಯೇ ತಿಂಗಳು

ತಿಂಗಳು ತುಂಬಿದೆಯಲ್ಲಿ
ಇನ್ನಲ್ಲೂ ಕೈಗೂಸು,
ಆಗ ತೂಗಿದ ಅಮ್ಮ
ಮತ್ತೆ ತೂಗುವ ಕಾಲ
ಮಗಳ ಮನೆ ಜೋಲಿ

(ಚಿತ್ರ ಕೃಪೆ : ಅಂತರ್ಜಾಲ)

ಅಷ್ಟೇ…

1ಕೆನೆಯನೇ ಪುರಸ್ಕರಿಸಿ
ಒಲೆಯ ಮರೆತರೆ ಹೇಗೆ
ಕಾವ ಸಹಿಸಿಕೊಂಡದ್ದು
ಪಾಪ ಮಣಭಾರ ತಪಲೆ

ಸಿಡುಬು ಮೂತಿಗೇಕೆ
ಮಹಾರಾಜನಾಗಿಸಿದ
ಪ್ರಸಾದನ ಕಲಾವಿದ
ಬಣ್ಣ ಕಳಚಿದ ಮೇಲೆ

ದಂತ ಕತ್ತರಿಸಿದ ಗಳಿಗೆ
ಮುದಿ ಆನೆಗೆಲ್ಲಿ ಬೆಲೆ
ಕ್ರಿಯಾಕರ್ಮಕೂ ಮುನ್ನ
ಹಸಿದೇ ಸಾಯಲೀ ಅಪ್ಪ

ಈಜಿ ತೊಳಕೊಂಡರಾಯ್ತು
ನದಿಯ ನೆನಪದೇಕೆ?

(ಚಿತ್ರಕೃಪೆ : ಅಂತರ್ಜಾಲ)

ರಾಮ ನವಮಿಯ ದಿವಸ…

ramರಾಮ ನವಮಿಯ ದಿವಸ
ಅಡಿಗಡಿಗೆ ನೆನಪು ಅಡಿಗರು,
ಅವನ ರಾಜ್ಯವ ಕನಸಿದರೂ
ಮಹಾತ್ಮರ ಚರಮೋದ್ಗಾರ

ಕಲ್ಲು ಗುಂಡಿಗೆ ದ್ರವಿಸಿ ಬಿಡು
ಬಾಲ ಮುರಳಿ ದನಿಯಲಿ
ಸೆರೆ ಮನೆಯ ರಾಮದಾಸ,
ಶ್ರೋತೃ ಬೃಂದಾವನ ಸೋಸು
ಕೋಟೆ ಮೈದಾನದ ಸಂಗೀತ
ಭರ್ತಿ ಪಾನಕ ಕೋಸಂಬರಿ

ಭಕ್ತ ಭಗವಂತ ಅನುಸಂಧಾನ
ಅನತಿ ದೂರಕು ಸಾರಿ ಹೇಳು
ತಬ್ಬಿ ನಿಂತ ರಾಮಾಂಜನೇಯ,
ಇತ್ತ ನಂಬಿಯೇ ಅವನ ದಯೆ
ಹರಕೊಂಡರು ಬಿಸಿಲಲು ಗಂಟಲ
ಹಗಲು ವೇಷಧಾರಿಗೆ ಹಸಿವು

ಮದ್ಯಾಹ್ನಕೆ ಮಾದಪ್ಪನ ಮೆಸ್ಸಿನ
ತಟ್ಟೆ ತುಂಬಲಿ ಮಜ್ಜಿಗೆ,
ಅರಿವುಗೇಡಿಗೆ ಎಟಕದ ಸಂಗತಿ
ಅಮ್ಮನೇ ಅನುದಿನಕು ಶಬರಿ!

(ಚಿತ್ರಕೃಪೆ: ಅಂತರ್ಜಾಲ)

ಪ್ರಜಾ’ಸತ್ತೇ’…

indian_poor

ಒಳಗುದಿಯು ಕುದಿಕುದಿದು
ಬಿಲದ ಬಾಯಿಯ ಹುಡುಕುತ್ತೆ
ನೆಲದಾಳದಿ ಮಿಸುಕೋ ಲಾವಾ

ಮೇಲೆ ನಿರಮ್ಮಳ ಮೌನ
ಕಲ್ಲು ದೇವರು ಕೂಡ
ಪ್ರಳಯ ಮಾರುತ ಮುನ್ನ,
ಕಾದು ಅಪ್ಪಳಿಸುವ ತಾನು
ನೋಟೀಸು ಪೋಣಿಸದು
ಪೆದ್ದನ ಕಿವಿಯ ಮೇಲೆ

ತುಕ್ಕುಗಟ್ಟಿದ ತುಪಾಕಿಯ
ನಂಬಿ ಕಾಯುವ ಸಿಪಾಯಿ
ಖಾದಿಗೆ ಅಮಾಯಕ ಬಲಿ,
ಗಡಿಯಲಿ ಶಾಂತಿ ಪಠನೆ
ನುಸುಳು ಕ್ರಿಮಿ ನುಸುಳುತ್ತೆ
ಬಿದ್ದ ಮೇಲೆ ಲೆಕ್ಕ ಹೆಣ

ಕೋಟಿ ನುಂಗಲಿ ಮತದಾನ
ಕಡೆಗೆ ಬಸಿರಿಳಿದದ್ದು ಅದೇ
ಪಾಪ ಗರ್ಭದ ಕಾರಸ್ಥಾನ,
ಕೊಂಡ ಚಿಹ್ನೆಯ ಛತ್ರಿಯಡಿ
ಹೆಗ್ಗಣಗಳ ಪಾದಯಾತ್ರೇ
ಉಗುಳು ಎರಚು ಅಭಿಯಾನ

ಗುಂಡಿ ಒತ್ತಿದ ತಪ್ಪಿಗೆ
ಗುಂಡಿ ತೋಡಿಸಿಕೊಳ್ಳೋ
ಅರೆ ಹೊಟ್ಟೆ ಪ್ರಜಾ’ಸತ್ತೇ’

(ಚಿತ್ರಕೃಪೆ : ಅಂತರ್ಜಾಲ)

ಬಂತು ಉಗಾದಿ…

ugadiಮಾವಿನ ಎಲೆ ತೋರಣ
ತಂದು ಕಟ್ಟುವ ಪಜೀತಿ
ಪ್ಲಾಸ್ಟಿಕ್ಕಿನ ಸಿದ್ಧ ತೋರಣ
ಅಲಂಕರಿಸಲಿ ಬಾಗಿಲಿಗೆ

ಹರಳೆಣ್ಣೆ ಬಲು ಜಿಡ್ಡು
ತಿಕ್ಕಿ ತಿಕ್ಕಿದರು ತೊಳೆಯದು
ನೆತ್ತಿಗೊಂದು ಹನಿ ಎದೆಗೂ
ಮಜ್ಜನವಾಯಿತು ಬಿಡಿ

ರುಬ್ಬಿ ಬೇಳೆಯ ಕಟ್ಟು
ತಟ್ಟಿ ಸುಡುವುದು ತ್ರಾಸ
ಉಡುಪಿ ಸ್ಟೋರ್ ಮಾರುತ್ತಾರೆ
ಬಿಸಿ ಬಿಸಿ ಹೋಳಿಗೆ

ಹೊಸ ಬಟ್ಟೆಗಳು ತುಟ್ಟಿ
ಹಳತೇ ಆಗಲಿ ಇಸ್ತ್ರೀ ತಿಕ್ಕಿ
ಕೇಳಿ ಟೀವಿ ಜ್ಯೋತಿಷಿಗಳ
ವರ್ಷ ಭವಿಷ್ಯ ಪಾವನರಾಗಿ

ಬಟ್ಟಲಲ್ಲಿ ಬೆಲ್ಲ ಹೆಕ್ಕಿಕೊಳ್ಳಿ
ಬಾಯಿಗೆ ಕಹಿ ಬೇವಿನ ಚಿಗುರು!
ಹುಡುಕಿ ಹಂಚಿರಿ ಮುಖ ಪುಟದಲಿ
ಕನ್ನಡ ಗೀತೆ ನೀವೇ ಮೊದಲು

ಅಮಾಯಕನ ಜಾಡಿ…

jadiಊರು ಪಾದಗಳ ಕೆಳಗೆ
ಜವುಗು ಭೂಮಿ
ತಟ್ಟಾಡದೇ ನಿಲುಗಡೆ ಇಲ್ಲ
ಜಾರುತಿವೆ ಹೆಜ್ಜೆ

ದುಡಿದ ಕವಡೆಯ ಮತ್ತೆ
ಕಸಿದುಕೊಳ್ಳುತ್ತೆ ಸರ್ಕಾರ
ಗೆರೆ ಗೀಚಿ ಮತ ಸೆಳೆಯುತ್ತೆ
ಬಡವ ಮೇಲ್ಗಡೆ ಬಲ್ಲಿದ

ಶುಕ್ರ ದೆಸೆ ಮಾರಾಟಕ್ಕಿದೆ
ಬೆರಳಿಗೆ ಭಾರದ ಹರಳು
ಭಾಮಿನಿ ಕಟಾಕ್ಷ ವ್ರತದಲ್ಲಿ
ಭೂಕಳ್ಳ ಖಾವೀ ಸ್ವಾಮಿ

ಸಾಲ ಕೊಡುತ್ತವೆ ಪಾಶ್ಚಾತ್ಯ
ಪ್ರಸಾಧನ ಕೊಂಡುಕೊಳ್ಳಿ
ಕಿತ್ತ ಎಕ್ಕಡ ತಲಪು ರಸ್ತೆಗಳು
ಹಳ್ಳಿಗಾಡು ಮರೆತುಕೊಳ್ಳಿ

ಜಗಳಗಂಟನ ಮನೆ ಮುಂದೆ
ಪಾಲಿಕೆಯ ನಿರಂತರ ಪೊರಕೆ
ಮೆತ್ತಗಿದ್ದರೆ ನೂರು ಕೈ ಸ್ವಾಮೀ!
ಮುಚ್ಚಲು ಅಮಾಯಕನ ಜಾಡಿ

(ಚಿತ್ರ ಕೃಪೆ: ಅಂತರ್ಜಾಲ)

ಬಂದರುಗಳಿಗೆ…

shipಬಂದರೇ ಅನುಮತಿಸು
ಅಕ್ಷರಗಳ ನಾವೆ ಬಂದಿದೆ
ಲಂಗರಿಳಿಸಲು ನಿಮ್ಮಲ್ಲಿ

ನನ್ನ ಧಕ್ಕೆಯಿಂದ ನಿಮ್ಮ
ಡಕ್ಕೆಯ ಕಂಡು ಪುಳಕ
ಯಾನ ತಾಪತ್ರಯ ದಾಟಿ
ಒಪ್ಪಿಸುವ ತೀವ್ರ ತವಕ

ಗ್ರಹಿಕೆಗೆ ಸಿಕ್ಕೆಲ್ಲ ಸರಕು
ತುಂಬಿ ತಂದಿದೆ ಹಡಗು
ಕಲಾವಂತಿಕೆ ಹಸೆಯು
ಮಾಲು ಅಪ್ಪಟ ಕುಸುರಿ

ಮೊದಲಲ್ಲಿ ತಲುಪಲಿ
ಹುಡುಕಿಕೊಳ್ಳಲಿ ಗಿರಾಕಿ
ಅವರರವರ ಅಳತೆಗೆ
ನೂರು ದಿರಸಿದೆ ಇಲ್ಲಿ

ಇದ್ದೀಯ ನೀನೆಂಬ
ನಂಬುಗೆಯ ಹಂಬಲದೇ
ಕವಿತೆ ಕಟ್ಟಿದೆ ನಾನೂ
ಇಳಿಸಿಕೋ ತೆರೆದ ಮನದಿ

(ಚಿತ್ರ ಕೃಪೆ : ಅಂತರ್ಜಾಲ)

ಒಂದರಗಳಿಗೆ…

coupleಒಂದರಗಳಿಗೆ
ಜಗದ ಜಂಜಡ ಮರೆತು,
ನಿನ್ನೊಳಗಿನಾ ಅಳಲ
ಆಳ ಸಾಂದ್ರಗಳ ತಾಕಿ
ಸಂತೈಸುವ ತವಕ ಎನಗೆ

ದಿನ ದಿನವೂ ಮಗುವಂತೆ
ಎನ್ನ ಕಂಬನಿ ಒರಸಿ
ಲಾಲಿಸುವೆ ತಾಯಿಯಂತೆ,
ಒಮ್ಮೆಯಾದರೂ ನನಗೂ
ಅರ್ಥವಾಗಲಿ ನಿನ್ನತನ
ನಿನ್ನ ನೋವಿನ ಭಾವನಾ

ಒಟ್ಟಾಗಿದ್ದರೂ ಒಟ್ಟಾಗದು
ಎನಿತೋ ದಡ್ಡ ಮನಗಳು,
ರಾಗ ತಾಳ ಮಿಳಿತವಾದರೆ
ಸುಶ್ರಾವ್ಯ ಜೀವ ಸಂಗೀತವು,
ಬೆರೆತು ಹೋದರೆ ಇಮ್ಮನ
ಒಂದೇ ಹೆಜ್ಜೆಯ ನಡಿಗೆಯು

ನಿನ್ನ ಸಹನೆಯ ಕಟ್ಟೆಯು
ಮೀರಿ ಹರಿದರೆ ಒಮ್ಮೆಲೆ
ತೆರೆಯಲಿ ನನ್ನ ನಾಲೆಯು

ಪರದೆ ಸರಿದರೆ…

aಪರದೆ ಸರಿದರೆ,

ಕಿಕ್ಕಿರಿವ ಅಭಿಮಾನಿಗಳು
ಕಿವಿಗಡಚಿಕ್ಕುವ ಚಪ್ಪಾಳೆ
ಶಿಳ್ಳೆಗಳ ಮೊರೆತ
ತೂರಿ ಬರುವ ಚಿಲ್ಲರೆ ಕಾಸು
ಕಟೌಟಿಗೆ ಕ್ಷೀರಾಭಿಷೇಕ

ಕೆಮ್ಮಿದರೂ ಸುದ್ದಿ
ಮೂಗು ಸುರಿದರೆ ವಿಲಾಯತಿ!
ಕ್ರಾಪು ಬದಲಿಸಿದರೆ
ಅಲವತ್ತುಕೊಳ್ಳುವ
ಬೋಳು ತಲೆ ಮಂದಿ

ತಾರಾ ಬಲವಿದ್ದ ಕಾಲಕೆ
ಕಾಲಿಗೊಂದು ಕೊಪ್ಪರಿಗೆ,
ಒಪ್ಪಿಗೆ ಹಸ್ತಾಕ್ಷರಕಂತೂ
ಮುಂಗಡವೋ ಇಡಿಗಂಟೋ
ಕಪ್ಪವೂ ಕಪ್ಪು ಬಿಳುಪೂ

ಹಡಗಿನಂಥ ರಥವು
ಬೀದಿಗಿಳಿದರೆ ಮೈಲುಗಟ್ಟಲೇ ಖಾಲಿ,
ಚುನಾವಣಾ ಕಾಲಕೆ
ಎಡತಾಕುವ ರಾಜಕೀಯ ಮಂದಿ,
ಸುಲಭ ವಿಸರ್ಜನಾ ಚೂರ್ಣಕೂ
ಬೇಡಿಕೆ ತನ್ನದೇ ಚಹರೆ

ಚಿರ ಯೌವ್ವನಿಗನ
ಹೊಸ ಚಿತ್ರಕೂ ಹದಿನಾರರ ಹುಡುಗಿ,
ಮೇಯ್ದ ಹುಲ್ಲುಗಾವಲುಗಳೂ
ಮರೆತ ಚಿತ್ರಾಂಗಧೆಯರೂ ಎನಿತೋ?

pyle_torn_curtainಪರದೆ ಸರಿದರೆ,

ನೆರೆದಿದ್ದವರೆಲ್ಲ ಕರಗಿ
ಉಳಿದದ್ದು ತಲೆಯ ನೆರೆತ,
ಲಗಾಮುಗಳ ಮೀರಿ
ಬಳಸ ಬಾರದ್ದಕ್ಕೆ ಬಳಸಿ
ಮುಷ್ಕರ ಕೂತ ಅಂಗಾಂಗ

ಸಂಜೆ ದೂರದರ್ಶನದಿ
ಪ್ರಸಾರವಂತೆ ತನ್ನದೇ ಚಿತ್ರ
ಮನವೂ ಗಾಡಾಂಧಕಾರ
ಕಟ್ಟದೆ ಉಳಿದ ಬಾಕಿ ಮೊತ್ತಕೆ
ಕಿತ್ತಿಟ್ಟ ಕರೆಂಟು ಫಿಸೂ

ನೂರನೆಯವಳ ಪ್ರವೇಶಕೆ
ಹಗ್ಗಕೆ ನೇತಾಡಿದಳು ಕಟ್ಟಿಕೊಂಡವಳು,
ರಸಿಕತೆಯ ದಾಖಲೆ ಬರೆದ
ಪಾಳು ಬಂಗಲೆಯಲೀಗ
ತಾನೇ ಜೀವಂತ ಭೂತ!

ತೊಟ್ಟ ಕೋಟಿನ ಹಿಂದೆ
ನಕ್ಕ ಹರಿದ ಬನಿಯನು,
ಕಿಮ್ಮತ್ತಿರದ ದಿವಾಳಿಯ ಸುತ್ತ
ಕಳಚಿಕೊಂಡ ಭಟ್ಟಂಗಿಗಳು,
ಬಂಗಲೆಯ ಗೋಡೆಗಳಲಿ
ಅವೇ ಶತಮಾನೋತ್ಸವ ಫಲಕ

ಬಣ್ಣ ಕಳಚಿದ ಮೇಲೆ
ಬಯಲು ಒಳ ಬೆತ್ತಲೆ,
ಸತ್ತರೆ ಬೇಕಂತಲ್ಲ
ತಯಾರಾಗಲಿ ಸಾಕ್ಷ್ಯಚಿತ್ರ!

(ಚಿತ್ರ ಕೃಪೆ : ಅಂತರ್ಜಾಲ)

ನಿವೇದನೆ…

pic2ಹದಿನೈದು ವರ್ಷಗಳ ಹಾದಿ
ಹೂವ ಹಾಸಲೇ ಇಲ್ಲ ನಾನು,
ಬರಿಯ ಏರು ಬರಿಯ ತೊಡರು
ಎಡವದೆಲೆ ನೀ ನಡೆಸಿಬಿಟ್ಟೆ

ಕತ್ತಲನು ಅಪ್ಪಿ ಹಗಲಲೇ
ಬೆದರಿ ಹಿಂದೆಲ್ಲೋ ಉಳಿದೆ
ಬರೀ ಕೊರಗುತಲೇ ಕಳೆದೇ,
ಎಬ್ಬಿಸುತ ಮುದ್ದಿಸುತ ಸಂತೈಸಿ
ಎಳೆ ತಂದು ನಿಲ್ಲಿಸಿದೆ
ನೆಟ್ಟಗೆನ್ನ ಮತ್ತೆ ಮತ್ತೆ…

ಸಂಸಾರ ನೊಗದ ಭಾರವ
ಹಂಚಿ ನೆಪ ಮಾತ್ರ
ನಾನು ಭ್ರಮೆಯಲೇ ನಡೆದೆ,
ಹಿಂದೆಲ್ಲ ಎಳೆದೆಳೆದು ಬಳಲಿ
ಮುಂದೆಯೂ ಹುಡುಕುತ್ತ ಹಾದಿ
ಎಂದೂ ನಿಟ್ಟುಸಿರಿಸಲಿಲ್ಲವಲ್ಲೇ!

ಅದುಮಿಟ್ಟ ನೋವ ಸೆಲೆ
ಮರೆಯಲೇ ಒರೆಸಿದ ಹನಿ
ಸಾವರಿಸುತಲೇ ನಕ್ಕ ನಗೆ,
ಶೂನ್ಯ ಗಳಿಕೆಯ ದಿನವೂ
ನಡುವೆ ನಗುತಲೇ ಕಳೆದೆ
ಹಂಚಿ ಸಂತಸದ ಸಿಹಿಯೇ

ನಿನ್ನೊಳಗು ಅರಿಯಲಿಲ್ಲ
ಜೊತೆಗಿನಿತು ಹೊಂಚಲಿಲ್ಲ
ಎಂದಿಗಾದರೂ ಕ್ಷಮಿಸು…

(ಚಿತ್ರ ಕೃಪೆ : ಅಂತರ್ಜಾಲ)

ನಡುಗಡ್ಡೆಗಳಿಗೆಲ್ಲ…

islನೆನಪಿರುವುದೇ ಇಲ್ಲ,
ಬಿಸುಟು ಬಂದು ಬಿದ್ದ
ಹಲ ಇಸುಮುಗಳಲಿ
ಅರೆ ಸತ್ತ ಜೀವಂತ
ಇಂತೊಂದು ಚಹರೆ

ಬಯಸಿ ಬಂದದ್ದಲ್ಲ
ಕರೆಸಿಕೊಳ್ಳಲೂ ಇಲ್ಲ
ಪ್ರಕ್ಷುಬ್ಧವಾ ಕಾಲ ಘಟ್ಟ,
ದೇಗುಲವ ಕನವರಿಸಿ
ಪಡೆದ ಗೋರಿ ಫಲಕ

ಹೆಸರನಾದರೂ ಕೆತ್ತಿ
ಇರುವಿಕೆಯ ಅಜರಾಮರ
ಮಾಡಿಯೇ ತೀರಬೇಕು
ಎಂದೆನಿತು ತಡಕಿದರೂ
ಬರೀ ಮಳಲೇ ಸುತ್ತ

ಒಂದೊಮ್ಮೆ ಹಿಂದಿರುಗಿ
ಕೆದಕಿ ಕೇಳಲೇ ಬೇಕು
ಬೇಡದಿದ್ದರೂ ತೆಕ್ಕೆ
ಬಳಸಿಕೊಂಡಾ ಗಳಿಗೆ
ಉನ್ಮತ್ತತೆಯು ಸುಳ್ಳೇ?

ನೆನಪಿರುವುದೇ ಇಲ್ಲ
ನಡುಗಡ್ಡೆಗಳಿಗೆಲ್ಲ
ಅನಿವಾರ್ಯ ಅದಕಲ್ಲ,
ಕ್ಷಣ ಗಾಹಿಗಳದೆಲ್ಲ
ಉತ್ತರಕ್ರಿಯಾ ಕರ್ಮ

ನೀರು…

Week : 17

Gulf Kannadiga
Gulf Kannadiga

water 1ಕಾಡು ಕಾಯದ ಹೊರತು
ಕಾರ್ಮೋಡ ಹನಿಗಟ್ಟದು,
ಮೋಡ ಬಿತ್ತನೆ ಯತ್ನಕು
ಮಳೆ ಮೋಡ ಸುಳಿಯದು

ಕನಿಕರಿಸಿದ ಮಳೆಯನು
ಇಂಗಿಸುವದ ಮರೆತೆವು,
ಎನಿತೀಗ ಕೊರೆದರೇನು
ಗಂಗಾಮಯಿ ಜಿನುಗದು

ಸುರಿದ ರಾಸಾಯನಿಕವು
ಹೊಲ ಗದ್ದೆ ನೆಲಕಿಳಿದು,
ಸೇದು ಪ್ರತಿ ಬಿಂದಿಗೆಯು
ಕುಡಿವ ವಿಷದ ನೀರು

ಉಳಿತಾಯ ಅರಿತವರು
ನಮ್ಮ ಜಾಣ ಹಳ್ಳಿಗರು,
ಹಾಕಿಸಲಲ್ಲಿ ಸರ್ಕಾರವು
ಹನಿ ಹನಿ ನೀರಾವರಿಯು

ಇನ್ನು ಬೇಕಿದೆ ನಗರಕು
ಪುನರ್ ಬಳಕೆಯ ನೀರು
water2

 

 

 

 

Gulf Kannadiga

 

 

ಗಲ್ಫ ಕನ್ನಡಿಗ ಈ ಪತ್ರಿಕೆಯಲ್ಲಿ ಪ್ರಕಟಿತ.
26.01.2013
http://gulfkannadiga.com/news/culture/39732.html

 

ಎರಡು ಚಿತ್ರಗಳು…

Gulf Kannadiga

Week : 14

ಚಿತ್ರ ಪಟ : ೧
ಯಾವುದೀ ಓಘ? ಹುಚ್ಚು ಆವೇಗ?
ಎತ್ತ ಸಾಗಿದೆ ಪ್ರಿಯೇ! ಬೆಂಗಳೂರು…

ರಾಯರಾಳ್ವಿಕೆಯಲಿ ರಾಶಿ ಲೆಕ್ಕದಲಿ
ವಜ್ರ ವೈಢೂರ್ಯ ರತ್ನಾದಿಗಳು,
ನನ್ನ ಕಾಲಕೆ; ಕಳ್ಳೇ ಕಾಯಿ ಪರಿಷೆಯಲಿ
ಪ್ರದ್ಯುಮ್ನ ಬಾಣಕ್ಕೆ ಸಿಕ್ಕ ಪದ್ಮ ಮೀನಾಕ್ಷಿಯರು!

ರಸಿಕ ಮಣಿಗಳಿಗೆ ಕೆಂಪೇಗೌಡ ಹಿಮಾಲಯ
ಸಭ್ಯರಿಗೆ! ರಾಜ್ಕುಮಾರ್ ವಿಷ್ಣು ಅಂಬಿ ರಮೇಶ
ಇಷ್ಟ ದೇವತಾ ಕ್ಯಾಲಂಡರಿನ ಹಿಂದೆ
ಸಿಲ್ಕು ಡಿಸ್ಕೋ ಮುಲುಕೋ ಜನ್ಮಸ್ಥ ಉಡುಗೆ!

ಊರಗಲವಿದ್ದ ಮಸಾಲೆ ದೋಸೆ ಕಾಸಗಲ
ನಲ್ಲಿ ನೀರಿಗೂ ಬ್ರಾಂಡಿನ ಬಿರುಡೆ
ಸುರಿದ ಮಳೆ, ಒಂಥರಾ ಹೆಂಡತಿ ಉಪದೇಶ
ರಾಜ ಕಾಲುವೆಗಳೆಲ್ಲ ಒತ್ತುವರಿ ಈಗ!

ದಮ್ಮು ರಮ್ಮು ಲಲನೆಯಕೂಡ, ಎಲ್ಲಿಂದಲೋ ಬಂದವರಿಗೆ
ಅಫೀಮು ಗಾಂಜ ಲೈವ್ ಬ್ಯಾಂಡುಗಳ ತೆವಲು
ನೂರ ತೊಂಬತ್ತೆಂಟು ಹುತ್ತಗಳಲೂ ಪರಕೀಯ ಹಾವುಗಳು
ನಮ್ಮ ಬಸ್ಸಲ್ಲೇ ನಾವು ನಿಂತ ಪಯಣಿಗರು…

ನಗರ ಭೂಪಟಕೀಗ ಆನೆ ಕಾಲು ರೋಗ
ನನ್ನ ಪ್ರಾರಬ್ಧ ಕರ್ಮಕೆ
ಈಕೆ ಗತ ತ್ರಿಪುರ ಸಿಲಿಕಾನ್ ಸುಂದರಿ…

 

***

 ಚಿತ್ರ ಪಟ: ೨

ಪ್ರೇಯಸಿಯೇ ಬದಲಾದ ಮೇಲೆ

ಕಾಲ ಚಕ್ರಕೆ ಸಿಕ್ಕ ನನ್ನ ಹಳ್ಳಿ?

ತಿರು ತಿರುವಿ ಚಕ್ರ; ಮಣ್ಣ ಮುದ್ದೆಗೆ

ಕುಂಬಾರ ಜೀವ ಕೊಡುತಿದ್ದ

ನೇಗಿಲು ಕುಡುಗೋಲು ಗುದ್ದಲಿಗೆ

ಕಮ್ಮಾರ ತಿದಿ ಒತ್ತಿ ರೂಪ ಕೊಡುತಿದ್ದ

ವಿಷ್ಣು ಪತ್ನಿ ಬಲು ಕರುಣಾಮಯಿ

ನಿತ್ಯ ಹರಿಧ್ವರ್ಣ ಕಾಡುಗಳು; ಕಾಲ ಕಾಲಕೆ ಮಳೆ

ಬಾಳೆ ತೆಂಗು ರಾಗಿ ಜೋಳ ಇನ್ನಿತರೆ…

ಸಮೃದ್ಧ ಫಸಲಿಗೆ ರೈತಾಪಿ ಬೆವರು

ಪಟ್ಟಣಕ್ಕೊರಟ ಬಸ್ಸುಗಳ ತುಂಬೆಲ್ಲ

ಹಳ್ಳೀ ಹೈಕಳದ್ದೇ ಗಂಟು ಮೂಟೆ

ಊರಿಗೆ ಊರೇ ಗುಳೆ ಎದ್ದ ಮೇಲೆ

ಸಾವಿತ್ರಮ್ಮನ ಗದ್ದೆಗೆ ಆಳುಗಳೇ ಬರ!

ಯಾವುದೋ ಹುಚ್ಚು ಸೆಳೆತಕೆ ಸಿಕ್ಕು

ನೆಲದ ಬೆಲೆ ಅಂಬರಕ್ಕೇರಿ

ತುಂಡು ರೈತರಿಗೆಲ್ಲಾ ಕಾರು ಬಾರು

ಉಂಡದ್ದೆಲ್ಲಾ ಬಿರಿಯಾನಿ, ಕಬಾಬು!

ಯಾರು ಬೆಳೆಯುತ್ತಾರೆ ನಾಟಿ-ಗೀಟಿ ಮಾಡಿ ಎಲ್ಲಾ?

ಉಂಡು ಮಜಾ ಮಾಡಿದ ಮೇಲೆ; ಇದ್ದದ್ದೇ ಬಿಡಿ

ಸರ್ಕಾರದ ಸಾಲ ಮನ್ನಾ, ಚುನಾವಣೆಗೂ ಮುನ್ನ!

ಗಲ್ಫ ಕನ್ನಡಿಗ ಈ ಪತ್ರಿಕೆಯಲ್ಲಿ ಪ್ರಕಟಿತ.
04.01.2013

http://gulfkannadiga.com/news/culture/32691.html
(ಚಿತ್ರಗಳ ಕೃಪೆ : ಅಂತರ್ಜಾಲ)

ನಾವು ಕುದುರೆಗಳು…

   Week : 13

 h2

ನಾವು ಕುದುರೆಗಳೇ ಇಷ್ಟು
ಕದ ತೆರೆವುದೇ ತಡ
ಪಿಲ್ಲರಿನಿಂದ ಪೋಸ್ಟಿಗೆ
ಫೇರಿಬಿಡುವುದೇ ಕಲಿಸಿದ ವಿದ್ಯೇ…

ಬೆನ್ನಿಗೇರಿದ ವಾಸನೆಯ
ಭಾರೀ ಪೃಷ್ಠಗಳನೊತ್ತು
ಬಾಗಿದೆ ನಮ್ಮದೇ ಪೃಷ್ಠ!
ಕಿಮಿಕ್ ಎನ್ನುವ ಮಾತೆಲ್ಲಿ
ಅಸಲು ಹುಟ್ಟಿದ್ದೇ
ಹೊತ್ತುಕೊಂಡೇ ಓಡಲಿಕ್ಕೇ!

ಕೆನೆಯಲೇ ಬಾರದು
ಕಚ್ಚುವುದು, ಇನೆಲ್ಲಿಯ ಮಾತು?
ಪಕ್ಕೆಗೊದ್ದರೂ
ತಪ್ಪಲೇಬಾರದು ಆಯ,
ಏನೆಲ್ಲ ತಾಕಿ ಎಲ್ಲೆಲ್ಲೋ ಹರಿದು
ರಕ್ತ ನಲ್ಲಿಯಂತೆ ಬಸಿದರೂ,
ತೊಡೆ ಮಾಂಸ ಗಟ್ಟಿಯಿದೆ
ಸವಾರ ನುಗ್ಗಿಸುವ
ಅರಿವಿರದ ಹಾದಿಗಳ ಗುಂಟ
ಓಡುವುದಷ್ಟೇ ನಮ್ಮ ಕಾಯ

ಹುಟ್ಟಿದ ಅನಿವಾರ್ಯಕ್ಕಾಗಿ
ರೇಸಿಗೋ, ದೊರೆಯ ಲಾಯಕ್ಕೋ
ಸರ್ಕಲ್ಲಿನಲ್ಲಿ ವಿಗ್ರಹದಂಡಿಗೋ
ಬರೆದಂತೆ ಹಣೆ ಬರಹ,
ಕಣ್ಕಾಪು, ಜೀನು, ಕಾಲ್ಗೊರಸು
ಮಿರಿ ಮಿರಿ ಮಿಂಚಲು ಮಾಲೀಸು ಎಣ್ಣೆ
ಚಲಾವಣೆ ಇರು ತನಕ ನಾಣ್ಯವೂ
ಒಳ್ಳೆ ತಳಿಗೆ ಮಾತ್ರ ಬೆಂದ ಹುರುಳಿಯೂ

ನಷ್ಟ ಜಾತಕ ಕುದುರೆಯು
ತೇಕುತಲೇ ಇರಬೇಕು
ಎಳೆದೆಳೆದು ಜಟಕ…

h1

ಸುಲೋಚನ... ಗಲ್ಫ ಕನ್ನಡಿಗ ಈ ಪತ್ರಿಕೆಯಲ್ಲಿ ಪ್ರಕಟಿತ.
28.12.2012

http://gulfkannadiga.com/news/culture/30933.html 
(ಚಿತ್ರ ಕೃಪೆ : ಅಂತರ್ಜಾಲ)

ದೊಂಬರಾಟ…

palavalli ankana

Gulf Kannadiga

  Week : 10  

Dombarata copy

ಈ ತುದಿಗಿದೆ ಜನನ
ಆ ತುದಿಗಿದೆ ಮರಣ
ನಡುವೆ ಹಗ್ಗದ ಮೇಲೆ
ತೊಯ್ದಾಡುತಿದೆ ಜೀವ,
ಯಾರದೋ ತಿಕ್ಕಲಿಗಿಲ್ಲಿ
ಬದುಕು ದೊಂಬರಾಟ!

ಒಂಟಿ ಕಾಲಿನ ಮೇಲೋ
ಎರಡೂ ಬಳಸಬಹುದೋ
ನಿಲುವೂ ನಮದಲ್ಲದ ತಾಣ,
ಕ್ಷಣ ಕ್ಷಣಕು ತೊಯ್ದಾಟ
ಯಾರದೆಲ್ಲ ಗಾಳಿ ತಳ್ಳಾಟ
ನೆಟ್ಟಗಿದ್ದೀತೆಲ್ಲಿ ತೋಲನ?

ಅಗೋಚರ ಬಲೆ ಇದೆಯೋ
ಏನು ಕಾದಿದೆಯೋ ಬುಡಕೆ
ಬೀಳು ಭಯವೇ ನಿರಂತರ,
ತ್ರಿಕಾಲ ಜ್ಞಾನ ಸಂಪತ್ತೆಲ್ಲ
ಗಿಲೀಟು ನಗೆಯಲಿ ಪೂಸಿ
ಕಕ್ಕುತಿರಬೇಕು ಪೋಸನೂ

ಗೋಚರದ ಮಸುಕು ಹಾದಿ
ಎಡರು ತೊಡರಿನ ಹೆಜ್ಜೆ
ಊಹೆ ನಿಲುಕದ ಗ್ರಹಚಾರ,
ಉಟ್ಟುಡುಗೆಯೇ ಭಾರ
ಜಾರುತದೆ ನಾಚಿಕೆ ಬಿಲ್ಲೆ
ಸ್ವ ಕೆರೆತಕಿಲ್ಲ ಪುರುಸೊತ್ತು

ಪಲ್ಟಿ ಬಿದ್ದೆದ್ದು ಸಾವರಿಸಿ
ಮತ್ತೆದ್ದರೂ ಕಡೆಗಣಿಸಿ
ಅವನ ಪಾಡಿಗವನ ಆಟ,
ಪ್ರಾಯೋಜಕರ ಪಾಲಿಗೆ
ಹತ್ತರಲ್ಲೊಂದು ಹುಟ್ಟಿದು
ಅಪ್ರಯೋಜಕ ದುಡಿಮೆ

ಜೀವ ಇರು ಹೊತ್ತೂ ಅವಗೆ
ಡೊಳ್ಳು ಬಡಿವ ಉಮೇದಿ
ಎಲ್ಲಿಹನೋ ತಾನು ತಳವೂರಿ?
ನಡಿಗೆ ನಮ್ಮದೇ ಕರ್ಮ
ಚಪ್ಪಾಳೆಯೋ ಕಲ್ಲೇಟೋ
ಪಾಪ ಪುಣ್ಯದ ಕೋಲನೇ ನಂಬಿ!

ಗಲ್ಫ ಕನ್ನಡಿಗ ಈ ಪತ್ರಿಕೆಯಲ್ಲಿ ಪ್ರಕಟಿತ.
07.12.2012

http://gulfkannadiga.com/news/culture/24864.html 
ದಿನಕರ ಮೋಗೇರ ಕ್ಲಿಕ್ಕಿಸಿದ ಕ್ಯಾಮರಾ ಕಣ್ಣಿಗೆ 
ಪಲವಳ್ಳಿ ಬರೆದ “ದೊಂಬರಾಟದ ಕವಿತೆ!

ಕವಿತೆ ಎಂದರೆ ಗೆಳೆಯ!

Week : 9

 

 

 

ಕವಿತೆ ಎಂದರೆ ಗೆಳೆಯ
ಅದು ಉದಯ ರವಿ ಚುಂಬನಕೆ
ಫಳಫಳಿಸೋ ಇಬ್ಬನಿಯ ಬಿಂದು
ಎದೆಗೆ ನಸು ಕಂಪನವೀಯೋ
ನಲ್ಲೆ ಇರುವನು ಘೋಷಿಸುವ
ದುಂಡು ಮಲ್ಲಿಗೆಯ ಕಂಪು…

ಅದು,
ಹೂವು ತಾಕಿದ ಮೇಲೂ
ಹೊತ್ತು ಕಳೆದರೂ ಉಳಿವ ಪರಾಗ ರೇಣು,
ಎಳವೆಯಲಿ ಎಂದೋ ಕಟ್ಟಿಟ್ಟು
ಮರೆತರೀಗೂ ಗಾಳಿಗೆ ತೂಗೋ ಹಗ್ಗದುಯ್ಯಾಲೆ,
ಸತ್ತ ಪಿನಾಕಿನಿಯೊಡಲ
ಬಗೆದಾಗಲೊಮ್ಮೆ ಪುಟಿವ ಊಟೆ,
ಕರೆವೋಲೆ ಸಂದಂತೆ
ಸಪ್ತ ಸಾಗರ ದಾಟೋ ಪುಟ್ಟ ಹಕ್ಕಿ,
ಹಾಲುಗೆನ್ನೆಯ ಮಗುವು
ಯಾವ ಕನಸಿಗೋ ತೊಟ್ಟಿಲಲಿ ನಗುವ ನಗು,
ಯಾರ ಹಂಗಿಗೂ ಸಿಗದ
ನೀಲಾಗಾಸದ ತುಂಬೆಲ್ಲ ಮೋಡಗಳ ಚಿತ್ತಾರ…

ಅದು,
ಬರಿದೇ ಸಾಲುಗಾಚೆ, ಹೊಳೆವ
ಅಕ್ಕರದ ಅಚ್ಚರಿಯ ಮಾಯಾ ಹಾದಿ
ತನ್ನರಿವಿನೆತ್ತರಕೂ ಜ್ವಲಿಪ ದಾರಿ ದೀಪ…

ಕವಿತೆ ಎಂದರೆ ಗೆಳೆಯ!
ನನ್ನ ಕಲ್ಪನೆಗಳೇ ಹಾಗೆ,
ದ್ವೀಪದಿಂದೆತ್ತಿ ದಡ ಸೇರಿಸುವ
ನೆನೆದಾಗ ಬರುವ ಆಪ್ತ ಮಿತ್ರ…

ಗಲ್ಫ ಕನ್ನಡಿಗ ಈ ಪತ್ರಿಕೆಯಲ್ಲಿ ಪ್ರಕಟಿತ.

30.11.2012

http://gulfkannadiga.com/news/culture/22150.html

ತ್ಯಾಜ್ಯ ವ್ಯಾಜ್ಯ…

 

ನೆಲದಾಳ ಬಿಲ ಬಗೆದು
ನನ್ನತನ ಹೊತ್ತೊಯ್ದನವ
ಯಾರೋ ಪರಕೀಯ!
ಸದ್ದಿರದೆ ಬಿಕ್ಕಳಿಸಿದೆ,
ಅವನು ಹೊರಗಿನವ
ತಿಳಿದಾನೆಲ್ಲಿ ನನ್ನ ನೋವ?

ಇವರು ನಮ್ಮವರೇ
ನೆರೆ ಊರಿನವರು
ತಿಪ್ಪೆಯಾದೆನೇ ನಿಮಗೆ?
ಇವರು ಬೇರೆಯವರಲ್ಲ
ಅವರ ನುಡಿ ಅರ್ಧ ನೀವೇ
ಮರೆತರೇ ಹೇಗೆ?

ಈಗ ನನ್ನೆದೆ ತಿತ್ತಿಗಳು
ಖಾಲೀ ಸುರಂಗಗಳು
ತುಂಬಿಕೊಂಡಿದೆ ನೀರು
ಉಸಿರು ಕಟ್ಟುವ ಗಾಳಿ
ಮೇಲೆ ಸೈನೈಡು ಬೆಟ್ಟ

ಬಗೆದರೆ ಮಿಂಚು ಹಳದಿ
ಆಳಕಿಳಿದರೆ ಅದಿರು
ನಂಬಿದ ಮಂದಿ ಹೊಟ್ಟೆ
ತುಂಬಬಹುದಿತ್ತು ಇನ್ನೂ,
ಮತದಾನ ದೂರವಿದೆ
ಗೆದ್ದವನಿಗೆ ಭರ್ತಿ ನಿದ್ರೆ

ಬಿಟ್ಟಿ ಇಂಧನ ಮೂಲ
ಸೂರ್ಯನೇ ಇರುವಾಗ
ಕೌಪೀನ ಅಣು ಸ್ಥಾವರ!
ಗಾಳಿ ಯಂತ್ರವೂ ಹಳ್ಳಿ ಬೆಳಕು
ಹಸಿ ಕಸವೂ ಲಕುಮೀ

ಹಿಡಿ ಧಾತು ಗುದ್ದಿಸಲು
ಗುಡ್ಡ ಪುಡಿ ಮಾಡಿದರು
ಉಳಿವುದದೇ ಮರಳು ತ್ಯಾಜ್ಯ
ಘನ ಘೋರ ಖಾಯಿಲೆ
ತಲಮಾರು ಹೊರಬೇಕು

ಸ್ಥಾವರವು ನೆರೆ ನಾಡಲಿ
ಮಲ ಗುಂಡಿ ಇಲ್ಲಿ ಬೇಕೆ?
ಹುಗಿದ ಕಸವದು ಕೇಳಿ
ಜೀವಂತ ಬಾಂಬದು ಅಯ್ಯೋ
ಗೋಡೆ ತಡೆದೀತೆ ಸೋರಿಕೆ

ಮುಂದೆ ಹುಟ್ಟುಗಳೆಲ್ಲ
ಅಂಗವಿಕಲರೇ ನಿಮಗೆ
ಇಂಗಿದ ಕಣ್ಣಲಿ ನೀರು,
ಕೂಡಿ ಅಟ್ಟಿ ಒಮ್ಮೆಲೆ
ದನಿ ಎತ್ತಿ ಅಬ್ಬರಿಸಿ
ಮಲವಿಲ್ಲಿ ತರಬೇಡಿ!

3K – ಸಂಭ್ರಮದ ಸಲುವಾಗಿ3k ಆಚರಿಸಲ್ಪಟ್ಟ ನವೆಂಬರ್ ತಿಂಗಳಿನ ಅತ್ಯುತ್ತಮ ಕವನಗಳ ಸ್ಪರ್ದೆಯಲ್ಲಿ ನನ್ನ ಕವನ ಪ್ರಶಸ್ತಿಗೆ ಆಯ್ಕೆಯಾಗಿದೆ.

ನನ್ನ ಮೆಚ್ಚಿನ ಕವಿ ಗೆಳೆಯ ಪುಷ್ಪರಾಜ್ ಚೌಟ ರವರ “ಗಾಂಧಿ ನಗುತ್ತಿದ್ದಾನೆ ನೋಟಿಗಂಟಿ!” ಕವನದ ಜೊತೆ ಹಂಚಿಕೊಂಡದ್ದು ಇನ್ನಷ್ಟು ತೃಪ್ತಿ ತಂದಿದೆ.

ನದಿಯ ಸ್ವ’ಗತ’

  Week : 8

ಬೀಸಿದ ಬಲೆಗಳಿಗೆಲ್ಲ ಇಲ್ಲವೆನ್ನಲಿಲ್ಲ
ರಾಶಿಯಲಿ ಮತ್ಸ್ಯಜಾಲ
ಅಣೆಕಟ್ಟು ಎಬ್ಬಿಸಿ ತೂಬರೆತೆರೆದರೆ
ನಾಡೆಲ್ಲ ನಾಲಾಜಾಲ

ತೊರೆ, ಝರಿ, ಉಪನದಿ ಹೊಳೆಗೂ
ಸಂಗಮ ಯೋಗ
ಮಲೆ ಹಾಯ್ದು ಹಾರಿ ಜಿಗಿದರೆ
ವಿಹಂಗಮ ಜೋಗ

ನೀವು ಸಾಗರಗಳೂ ಕನಿಕರಿಸಬೇಕು
ನದಿ ಪ್ರೀತಿ ನಿಮ್ಮ ತಾಕಬೇಕು
ನಿಮ್ಮದೇ ನೀರು ಬಿಸಿಲಿಗಾವಿಯಾಗಿ
ಮಳೆಗೆರೆದರೆ ಪಾತ್ರಕ್ಕೆ ನೀರು

ಅರ್ಕಾವತಿ, ವೃಷಭಾವತಿ, ಪಿನಾಕಿನಿ
ಯಾರ ತಪ್ಪಿಗೆ ಇಂಥ ತಲೆದಂಡ?
ಬತ್ತಿದ ಗಂಗೆಯ ಒಡಲ ಮರಳ
ಬಗೆದಿರಿ ಇಂಗಲಾರದಿನ್ನು ನೀರು

ಮಳೆಗಾಲ ನೆರೆ ಬಿರಿದು
ಬೇಸಿಗೆಗೆ ತೊರೆ ಹರಿದು
ಜೀವ ಜಾಲಕೆ ಉಣಿಸಿ ಉಸಿರು
ಕಡೆಗೆ ಸಾಗರದಲೇ ಐಕ್ಯ…

ಗಲ್ಫ ಕನ್ನಡಿಗ ಈ ಪತ್ರಿಕೆಯಲ್ಲಿ ಪ್ರಕಟಿತ.
23.11.2012
http://gulfkannadiga.com/news/culture/19894.html

(ಚಿತ್ರ ಕೃಪೆ : ಅಂತರ್ಜಾಲ)

ಗೂಡಿನಿಂದ ಬುರುಜಿಗೆ…

Gulf Kannadiga

   Week : 7

ಮನೆಯಲಿ ಕೋಣೆಗಳಂತೆಯೇ
ಮನದಲಿ ಗೂಡುಗಳಿರಲಿ ನಮ್ಮೊಳು
ಅಂಗಳದೆಲ್ಲ ಗದ್ದಲಗಳ ಮೀರಿಯೇ
ಏಕಾಂತ ದೊರೆಯಲಿ ಅಂತಃಪುರದೊಳು

ನಿನ್ನೆ ಮಡಚಿಯೇ ನಾಳೆ ತೆರೆಯಲಿ
ಇಂದು ಕನಸಿರೆ ಹಿಮಗಿರಿ ಎತ್ತರ
ಸವೆದ ಹೆಜ್ಜೆಗಳೆಲ್ಲ ತೊಡರಲೇ
ಹುಡುಕು ಬದುಕು ಹಾದಿಗೂ ಉತ್ತರ

ತಿರುಗು ತಟ್ಟೆ ಸುಪ್ರಭಾತದ ಕೊರಳಲಿ
ಘಂಟಸಾಲ ಸುಬ್ಬಲಕ್ಷ್ಮಿಯು ಚಿರಂತನ
ಅದರ ಮೇಲೂ ಗಾನ ಅರಳಲಿ
ಹೊಸದು ಬೇಡವೇ ದಿನ ದಿನ?

ಸ್ಮರಣ ಸಂಚಿಕೆ ಗೋಡೆ ಕಟ್ಟಿರೆ
ಗಟ್ಟಿ ಛಾವಣಿ ಹೊದಿಕೆಯು
ಆಳ ಪಾಯದ ಗ್ರಂಥ ಸ್ಮೃತಿ ಇರೆ
ನವ್ಯ ಕಾವ್ಯಕೂ ಗಿರಿಮೆಯು

ಕಲಿಕೆ ನಿಲ್ಲದು, ಬಳಪ ಮುರಿದರೂ
ಹಲಗೆ ತುಂಬಿರಿ ದುಂಡು ಅಕ್ಕರ
ಏಕತಾನದ ತಿರುಗು ಪರಧಿಗು
ಆಚೆ ಕಾದಿದೆ ನೂರು ಹೊಸ ತರ

ತುಡಿತವಿದ್ದರೆ ದೂರ ತೀರವೇ
ಯೋಜನವದೂ ಇಂಚು ಈಜಿಗೆ
ಗೆಲ್ಲು ಹುರುಪಿರೆ ರಾಜ್ಯ ಕಾದಿದೆ
ಹೊಸ ಪತಾಕೆ ಹಾರಲಿ ಬುರುಜಿಗೆ

ನಾಳೆ ಮಳೆ ಹನಿ ನೆಚ್ಚಿಯೇ
ಇಲ್ಲಿ ಒಳ ಭೂ ಹದವಾಗಲೀ
ಒಂದೇ ಬೀಜವು ಮೊಳೆತರೂ ಅದೇ
ನೆರಳು ನೀಡೋ ಮರವಾಗಲೀ

ಗಲ್ಫ ಕನ್ನಡಿಗ ಈ ಪತ್ರಿಕೆಯಲ್ಲಿ ಪ್ರಕಟಿತ.
16.11.2012
http://gulfkannadiga.com/news/culture/18111.html

ಪೊಳ್ಳು ಪ್ರಭಾವಳಿ…

Gulf Kannadiga

Week : 6

ಇದು ಸುಗ್ಗಿ ಕಾಲ
ಆಗಲಿ ಬಿಡಿ ನಿಮ್ಮದೇ ತಳಿ ಅಭಿವೃದ್ಧಿ…

ಜನ್ಮೇಪಿ ಮಂಗರು ನಾವು,
ಆಳಿಕೊಳ್ಳಿ; ರೂಢಿಯಾಗಿದೆ ನಮಗೆ,
ಬಗ್ಗಿ ನಡೆಯುವುದು, ತಗ್ಗಿ ಮಾತನಾಡುವುದು
ಓಟು ಗುದ್ದೀ ಗುದ್ದೀ ಪೆದ್ದರಾಗುವುದು ಹೀಗೆ,
ಬೆನ್ನು ಖಾಲೀ ಇದೆ ಕೆತ್ತಿಕೊಳ್ಳಿ ಶಿಲಾ ಶಾಸನ
ನಡೆಯಲಿ ಜನಾರ್ದನ ಸೇವೆ…

ತಿಜೋರಿಗಳ ತುಂಬಿರಿ
ಬಂಗಲೆಗಳ ಎಬ್ಬಿಸಿರಿ
ಹೆಸರು ಉಳಿಯಲಿ ಆಚಂದ್ರಾರ್ಕ!

ಪುಟ್ಟ ನಾಗರ ಕಲ್ಲು ನೆಡುವಾಗ
ಫ್ಯಾನಿನ ಮೂರು ಅಲಗುಗಳ ತುಂಬ
ನೀರೇ ತುಂಬದ ತೊಟ್ಟಿಯ ಬದಿಗೆ
ಪಾಯಖಾನೆ ಸಂಡಾಸಿಗೆ
ಮಸಣದ ಕಲ್ಲುಗಳ ಮೇಲೂ
ಮಹಾದಾನಿಗಳು ನಿಮ್ಮದೇ ಹೆಸರು…

ಹಳ್ಳಿ ಶಾಲೆಯ ಗೋಪಿ ಬಣ್ಣದ ಗೋಡೆ
ಸಂತಾನ ನಿಯಂತ್ರಣ ಪಾಠಕ್ಕೆ ತಕ್ಕ ಜಾಗ
ಊರಗಲ ಕೆಂಪು ತ್ರಿಕೋಣ ಬರೆದು ಬಿಡಿ…

ಜಾತ್ರೆ ತಳುಕಿಗೆ ತೂತು ಟಾರ್ಪಾಲಿನ
ಟೂರಿಂಗ್ ಟಾಕೀನಿಂತಹ ಮಂದಿ;
ಹಸಿವಿನಿಂದಲೇ ಸತ್ತ ಮುದುಕಿಯ
ದೊಡ್ಡ ಕಾರ್ಯಕೆ ತಿಂದುಕೊಳ್ಳಲಿ ಊರ ಜನ
ಮುದ್ದೆ ಮಾಂಸದೂಟ!
ಝಗಮಗಿಸೋ ರೇಷಿಮೆ ಪತ್ತಲಕೂ
ಹಿಂದೆ ಅಡಗಿದ್ದೀತು ಅದೇ ರೋಗಿಷ್ಠ ಮೀನಖಂಡ…

ಒಡ್ಡೋಲಗದ ತುಂಬ ಪಾನಮತ್ತ
ಭಟ್ಟಂಗಿಗಳದೇ ಬಹು ಪರಾಕು,
ಗುಧ ಸ್ಫೋಟವೂ ಆಹಾ ದಿವ್ಯ ಪರಿಮಳ!

ಹೊದ್ದದ್ದೇ ಕನಸುಗಳ ಹಚ್ಚಡ
ಗಟ್ಟಿ ನೆಲವೋ, ಹಾಸೆ ಪಲ್ಲಂಗ ಮೆತ್ತೆ
ಮಲಗಿದರಗಳಿಗೆ ಬೆವೆತ ಜೀವ
ಭೋರಿಡುವ ಗೊರಕೆ ಚಂಡ ಮದ್ದಲೆ!
ಮೀಸಲಿಟ್ಟ ಬೆಳಕಿನಾಟಕು ಒಲ್ಲೆ
ಹೊಗೆ ಕವಿದ ಬುಡ್ಡೀ ದೀಪಕೇ ತೃಪ್ತ…

ಬಂಜೆ ಮಣ್ಣೊಳು ಹೊಕ್ಕು ಮುಕ್ಕಿ
ನೆಲ ಫಲವತಾಗಿಸೋ ಎರೆಹುಳು;
ಧಮನಿಯೊಳು ನುಗ್ಗೋ ರುಜಿನಗಳ
ಕಾದು ಹೋರಾಡಿ ಮಡಿವ ಬಿಳಿ ರಕ್ತ ಕಣ,
ಹೀಗೆ ಹೆಸರಿಗಂಬಲಿಸದೇ ದುಡಿವ ಹತ್ತು ಹಲವು
ಶಾಲು ಸಂಭಾವನೆ ಸ್ಮಾರಕ ಒಂದೂ ಒಲ್ಲವು…

ಕಾಡಿಗೂ ಬೇಕಲ್ಲ ಹಬ್ಬಲು ಸಹಸ್ರಮಾನ
ಪೊಳ್ಳು ಪ್ರಭಾವಳಿಗೆಷ್ಟು ಕಾಲ ಮಾನ?

ಗಲ್ಫ ಕನ್ನಡಿಗ ಈ ಪತ್ರಿಕೆಯಲ್ಲಿ ಪ್ರಕಟಿತ.
09.11.2012
http://gulfkannadiga.com/news/culture/16159.html 

ಜೋಡಿ ಗಾನ…

(ಚಿತ್ರ ಕೃಪೆ : ಅಂತರ್ಜಾಲ)

ಇತಿಹಾಸ ತಜ್ಞ…

Gulf Kannadiga / Week :4

ಮಮ್ಮಲ ಮರುಗುವನು
ಬನವಾಸಿಯಲಿ ಅಲೆವಾಗ
ಪಂಪ ಮಯೂರನ
ಕುರುಹೂ ತಾಕದೇ ತಾನು,
ಹುಡುಕಿ ಕೊಡಬೇಕವನೇ
ಸುಂದರ ಮಧುಕೇಶ್ವರ

ಆ ರಂಗನಾಥನೇ ಬಲ್ಲ
ಶ್ರೀರಂಗಪಟ್ಟಣವದೇಕೆ
ಅವಜ್ಞ ತಾಣವೀಗ?
ಹೆಜ್ಜೆ ಹೆಜ್ಜೆಗು ಅಲ್ಲಿ
ಟಿಪ್ಪುವಿನ ಗತ ಚರಿತೆ
ಮೂಕ ಭಾವಗೀತೆ

ಅಂತೆಯೇ ಬೆಂಗಳೂರು
ಗಗನ ಚುಂಬಿಯ ಅಡಿಗೆ
ಯಾವುದೋ ವೀರಗಲ್ಲು,
ಕಬ್ಬನ್ ನೆನೆವರೇ ಇಲ್ಲ
ಮುಚ್ಚಿದೆವು ಕೆರೆ ಕಟ್ಟೆ
ಮಂಟಪವು ಪಾಲಿಕೆ ಗುರುತು

ಎಲ್ಲಿಯದೋ ದೊರೆ ಗಾಥೆ
ಬೋಧಿಸುವ ಪಠ್ಯ ಕ್ರಮ
ಕಲಿಸದು ನೆಲದ ಧರ್ಮ,
ಅಂತ ವಿಸ್ಮರಿತ ಐತಿಹ್ಯಗಳ
ಸಿಕ್ಕು ಬಿಡಿಸಲು ಕುಳಿತ
ಇಲ್ಲೊಬ್ಬ ಇತಿಹಾಸತಜ್ಞ

ಬುದ್ಧಿಗೇಡಿಯ ತಿಕ್ಕಲಿಗೆ
ಹಾಳು ಹಂಪೆ ಹಳೇ ಬೀಡು,
ಮಿಕ್ಕ ಸ್ಮಾರಕಗಳ ಮಾರಕರು
ನಾವೇ ಅಸಲು ಘಜ್ನಿಗಳು
ಹೊಸಕುವೆವು ಗುರುತುಗಳೂ…

(ಚಿತ್ರ ಕೃಪೆ : ಅಂತರ್ಜಾಲ)
ಗಲ್ಫ ಕನ್ನಡಿಗ ಈ ಪತ್ರಿಕೆಯಲ್ಲಿ ಪ್ರಕಟಿತ.
26.10.2012
http://gulfkannadiga.com/news/culture/12288.html

ಪರಸ್ಪರ…

 

 

 

 

 

 

 

 

ಉಳಲು ಅನುಮತಿ ಉಂಟೆ
ಬಂಜರು ಮನಸುಗಳೇ?
ಒಲುಮೆ ಬೀಜವ ನೆಟ್ಟು
ಗೆಳೆತನದ ಮಳೆ ಹುಯಿಸಿ
ನಗೆ ಭತ್ತ ಬೆಳೆಯುವೆ

ನನ್ನ ಗದ್ದೆಗೆ ಕಾಲಿಟ್ಟೀಯೇ
ಜೋಕೆ! ಯಾರು ನೀ ಎನ್ನದಿರಿ,
ನಾನೂ ಮೊದಲು ಬರಡು
ಯಾರೋ ಹಸನಾಗಿಸಿದರಲ್ಲ
ನನ್ನ ಖಾಲಿ ಒಡಲೂ

ಇಲ್ಲಿ ಹುಟ್ಟಿದ ಮೇಲೆ
ಆಗಲೇ ಬೇಕು ಆಗಾಗ
ಒಬ್ಬರಿಗೆ ಒಬ್ಬರು,
ಅಂತ ಚಂದ್ರನು ಕೂಡ
ಭಾನುವಿನ ದಾನದಲೇ
ಹುಣ್ಣಿಮೆ ಚೆಲ್ಲ ಬೇಕು…

(ಚಿತ್ರ ಕೃಪೆ : ಅಂತರ್ಜಾಲ)

ವಿಳಾಸಗಳು…

ಇರುಕು ವಠಾರದ ಬಾಲ್ಕಾನಿ
ಗುಲ್ಮೊಹರದಡಿಯ ಕಲ್ಲು ಬೆಂಚು
ವಿವಿ ಪುರಂನ ಆ ತಿರುವು
ನೆನಪಾಗಲೇ ಬಾರದೆಂದು
ಎದೆ ಕಪಾಟಿನಲಿ ಹೂತಿಟ್ಟೆ

ನನ್ನ ಲಕೋಟೆಯ ಮೇಲೆ
ಬರೆದ ಆ ವಿಳಾಸಗಳೆಲ್ಲ
ಅವಧಿ ಮೀರಿ ತೀರಿ
ಟಿಸಿಲೊಡೆದಿದ್ದೀತು ಎಲ್ಲೋ

ಅಂದೆಂದೋ ಡಬ್ಬಿಗೂ
ಹಾಕದೆಲೆ ಮುಚ್ಚಿಟ್ಟ
ಪ್ರೇಮ ಪತ್ರಗಳಿಗೆಲ್ಲ
ತಿವಿವ ತಿರಸ್ಕೃತ ಮುದ್ರೆ!

ಮರೆವಿನ ಆಸೆ ಎಂಜಲು
ಒಣಗಿ ಗಟ್ಟಿ ಚೀಟಿ,
ಹಬೆಗಿಟ್ಟರೂ ಬರದು
ಬಿಡಿಸಲಾರದ ಅತುಕು

ಆಗಾಗ ಹುಡುಕುವೆನು
ಮುಖಪುಟದ ಒಳಗೂ
ಅಂತರ್ಜಾಲದ ಹೊರಗೂ
ಸಿಕ್ಕೀತೇ ವಿಳಾಸ?

(ಚಿತ್ರ ಕೃಪೆ : ಅಂತರ್ಜಾಲ)

ಅವರೂ ಇವರೂ…

ಆರುವ ದೀಪಗಳಂತೆ
ನಾವುಗಳು ನೀವುಗಳು
ಯಾವ ಕ್ಷಣವೋ
ಇಲ್ಲಿಂದ ಅಲ್ಲಿಗೆ ಪಯಣ?

ದಕ್ಕಿದ್ದೇ ಅರೆಪಾವು ಜಿಂದಗಿ!
ಜೀಕುವುದು ಗ್ರಾಫು ಏರುಪೇರು,
ಕತ್ತಲಲ್ಲೇ ಗುರಿ ತಡಕೋ ಕುರುಡ್ಗಣ್ಣು,
ಮೇಲೆ ಕೋಟಿ ಮಿಸ್ಸಂಡೆರ್ಸ್ಟಾಂಡಿಂಗೂ?

ಚಿಕ್ಕ ಕೆರೆತಗಳು
ದೊಡ್ಡ ಹುಣ್ಣುಗಳೇ,
ಅತ್ತು ಹಗುರಾಗಬೇಕು
ಚುಚ್ಚು ಮಾತುಗಳಿಗೆಲ್ಲ
ನಕ್ಕು ಸಾಗಬೇಕು
ಮಿಕ್ಕ ರಹದಾರಿ

ನಂಬ ಬೇಕೋ
ನಂಬ ಬಾರದೋ
ಕೆಲವೊಮ್ಮೆ ಮುಖಗಳಿಗೆ,
ಅವು ಮುಖವಾಡವೋ
ಪಿಗ್ಗಿ ಬೀಳಿಸುವ
ಎರೆಗಳೋ ಹೊಳೆಯದು
ಸುಲಭ ಓದಿಗೆ

ದೇಗುಲ ಹೊಕ್ಕು
ಕಲ್ಲುಗಳಿಗೂ ಕೈ ಮುಗಿದು
ಅಡ್ಡ ಬಿದ್ದಂತೆ
ನಂಬಿಕೆಯೇ ಬದುಕು,
ಒಪ್ಪಿ ಬಿಟ್ಟು ನೋಡೋಣ
ಒಮ್ಮೆ ಆದದ್ದಾಗಲೀ
ಅವರನೂ ಇವರನೂ…

(ಚಿತ್ರ ಕೃಪೆ : ಅಂತರ್ಜಾಲ)

ಜಯಂತಿ…

ಹತ್ತರಲ್ಲೊಂದು
ಸಾರ್ವತ್ರಿಕ ರಜೆ ದಿವಸ,
ಎಬ್ಬಿಸ ಬೇಡಿರಿ
ಹೊದ್ದು ಮಲಗಿದ್ದೇವೆ ಕಂಬಳಿ

ನಿನ್ನೆ ತಟ್ಟಲೆ ಇಲ್ಲ
ಇಂದು ಒಣ ದಿನ,
ಅಟ್ಟ ತಡಕಾಡಿದರೆ
ಖಾಲೀ ಬಾಟಲಿ

ಭಟ್ಟಿ ಇಳಿಯವು
ಎದೆಗಂತೂ ಆದರ್ಶಗಳು,
ಈಗವೇ ಬೀದಿ ತಿರುವಲಿ
ನಾಮ ಫಲಕಗಳು

ಬಾನುಲಿ ಉಲಿದು
ಪತ್ರಿಕೆಯೂ ಅಚ್ಚಿಸಿದಾಗ
ಅಂತರ್ಜಾಲದಲೇ
ಹುಡುಕಾಟ ಚಹರೆಗೂ

ಸಾಧನೆ ಮರೆತರು
ಒರಸಿಡಿ ಗಾಜು ಬೂಜನು
ಅದೇ ಚೌಕಟ್ಟಿನ ಚಿತ್ರ
ಬೇಕು ವರ್ಧಂತಿಗೂ

ಗುರುತೇ ಹತ್ತಿರಲಿಲ್ಲ
ರಸ್ತೆ ಧೂಳಲಿ,
ಮುನ್ನ ದಿನ ಮಜ್ಜನದಿ
ಲಕಲಕಿಸಿದ ಪ್ರತಿಮೆ!

ಬಾಡಿಗೆಯ
ಏಣಿ ಏರಿ ಏರಿಸಿ
ಚಪ್ಪಾಳೆ ಗಿಟ್ಟಿಸಿರಿ
ದೇಣಿಗೆಯ
ಮಾರುದ್ದ ಹಾರ

ಇದು ನನ್ನ “ಪಲವಳ್ಳಿ ಅಂಕಣ”ದ ಮೊದಲ ಕವನ.

ಗಲ್ಫ್ ಕನ್ನಡಿಗ ಈ ಪತ್ರಿಕೆಯ ಸಂಪಾದಕರಾದ ಶ್ರೀಯುತ. ಬಿ.ಜಿ. ಮೋಹನದಾಸ್ ಮತ್ತು ಶ್ರೀಯುತ ಪದ್ಯಾಣ ರಾಮಚಂದ್ರ ಅವರಿಗೆ ನನ್ನ ಕೃತಜ್ಞತೆಗಳು.

http://gulfkannadiga.com/news/culture/7231.html

(ಚಿತ್ರ ಕೃಪೆ : ಅಂತರ್ಜಾಲ)

ಮುದ್ದು…


ಮುದ್ದುಗಳ ವಿನಿಮಯ
ಇರಲಿ ಅನಿಯಮಿತ ನಲ್ಲೇ,
ನನಗದೇ ಹಳೆಯ ಮದ್ದು!

ಬೇಡಿ ಕಾಡಿಯೇ ಪಡೆದ
ದಿವ್ಯ ತಾಕೇ ಗಮ್ಮತ್ತು,
ತಟ್ಟಾಡು ನಡಿಗೆಯವನ
ತಿದ್ದುವುದಿದರ ತಾಕತ್ತು,
ಕಾಪಿಡುತದೆನ್ನ ಮಿಂಚಿಗೆ
ಪಂಚರಿಸದಂತೆ ನಿಯತ್ತು!

ಕೋಟಿ ಮುತ್ತುಗಳಿಗಿರಲಿ
ಬಡ್ಡಿ ಚಕ್ರಬಡ್ಡಿಯ ಸುಲಿಗೆ
ತಪ್ಪುತಲೇ ಇರಲಿ ಲೆಕ್ಕ,
ನಿನ್ನೆ ತರಬೇತಿಯ ಸುತ್ತು
ಮುತ್ತಿಗೆ ಅವಧಿಯ ಮತ್ತು
ದಾಖಲೆಯನಿಂದು ಮುರಿವ

ಮೊದಲ ಮುತ್ತಿಗೆ
ವರುಷ ವರುಷವೂ
ಸಂಪ್ರತಿಸುತಿರಲಿ
ಮರು ಮುದ್ರಣದ
ಪರಿಷ್ಕೃತ ಆವೃತ್ತಿ!

ನಗೆಯ ಸಂಕ್ರಮಿಸಿ…

ಕಲ್ಪನೆಯಲೇ ಮೊರಟು
ಕನಕಾಂಬರಿಯ ಗಿಡವು
ಮೊಗ್ಗರಳಿಸೆವು ಚಿವುಟಿ,
ಏರಿಸದೆಯೇ ಉದರದು
ಬಲಗಡೆಗೇ ಹೂವೂ?

ಬೆರಗಿರದ ಬದುಕುಗಳಿಗೆ
ಸವೆವುದೇ ಹುಟ್ಟು ಗುಣ
ಅವನಿಗೆ ಏಬರಾಸಿ ವಜನು,
ಅಮರತ್ವ ಚಪಲತೆಯೇ
ಅರೆ ಕಾಸಿನೀ ಚಪ್ಪಲಿಗೆ

ಫಲವತ್ತು ಭೂಮಿಯೊಳು
ನುಸುಳಿ ಗಟ್ಟಿ ಬೇರೂರಿ
ಬುಡ ಗಟ್ಟಿಸಿದರೂ ವ್ಯರ್ಥ,
ಕಾಂಡ ಉಬ್ಬಿಸಿಕೊಂಡ
ನೆರಳಿಗಾಗದ ಮರವೂ

ಉರುವಲಿಗು ಹಸಿ ಹಸಿ
ಚಿತೆಗೂ ಬೇಡದೀ ಕಟ್ಟಿಗೆ,
ಸೂರಿಗೊದಗದ ತೊಲೆಯ
ಮುಲಾಜಿಗೇ ಹೊರುವುದೇ
ಎಲ್ಲೋ ಬೆಂದ ಇಟ್ಟಿಗೆಯೂ

ಹಚ್ಚಡದೊಳು ಬಚ್ಚಿಟ್ಟು
ಮುಕ್ಕಿದರೆ ಪ್ರಾಪ್ತಿ ಬಿಕ್ಕಳಿಕೆ
ಉಸಿರಗಟ್ಟುತ್ತೆ ನಮಗೂ,
ನಗೆ ಟಿಸಿಲು ಸಂಕ್ರಮಿಸಿ
ಮಂದಿ ಮನ ಗೆಲ್ಲ ಬನ್ನಿ

ಹಳೇ ನೀರಲೇ ತೇಲಿ
ಹೊಸ ಬಂದರಿನಾಚೆ
ಹುಡುಕ ಹೊರಡೋಣ
ಆಳಕಾಳಕೆ ಲಂಗರಿಳಿಸಿ

ಆಯ’ವ್ಯಯ’…

ಅರಸೊತ್ತಿಗೆ ತಿಕ್ಕಲಿಗೆ
ಅಪಮೌಲ್ಯ ರೂಪಾಯಿ,
ಬರೆ ಹಾಕಲು ಕಂಡದ್ದು
ಬಡವನ ಬಡಕಲು ಹೊಟ್ಟೆ

ಸೋರುತ್ತೆ ಆದಾಯ ಗಡಿಗೆ
ಸಿಕ್ಕನು ಉತ್ತರ ಭೂಪ ಕೈಗೆ,
ತಿದ್ದ ಬೇಕಿದ್ದ ಸದನಗಳೂ
ಗದ್ದಲದಲೇ ಅಂತ್ಯ ಮತ್ತೆ

ಓಟು ಬೇಟೆಗೆ ತೆರಿಗೆ ಪಾಲು
ತಲುಪೀತೆ ಬಡವನ ತಾಟು?
ಗೊಬ್ಬರಕಿಲ್ಲದ ಸಬ್ಸೀಡೀ
ಮಧುಮೇಹ ದೇಹಿ ಪಾಲು

ತರಂಗಾಂತರವ ಹಂಚಿ
ಹುಲುಸಾಗಿ ಮೇಯ್ದರು ಹುಲ್ಲು,
ಅನಿಲವ ಆಕಾಶಕೇರಿಸಿ
ಕಲ್ಲಿದ್ದಲು ದಾನ ಕೊಟ್ಟರು

ಕೋಟಿ ಕಾರಿನ ಮೇಲೆ
ಲಕ್ಷ ಹೊರಿಸಿದರಾಯ್ತು,
ಉಳುವ ಯಂತ್ರವೇ ಬೇಕೇ
ಭರಿಸಲು ತೈಲ ತುಟ್ಟಿ?

ಕಳ್ಳ ಲೆಕ್ಕವ ಬರೆದು
ಕದ್ದವನಷ್ಟೇ ಸತ್ಯಸಂಧ,
ಪುಡಿ ಸಂಬಳದವ ಸಿಕ್ಕ
ಸುಲಿಗೆ ಸುಂಕಕ್ಕೆ ಸುಂಕ

ದುರಾಸೆ ಗೆಬರಪ್ಪಗಳನೇ
ಯಾಮಾರಿ ಆರಿಸಿದ ಮೇಲೆ,
ಎಳೆಯ ಬನ್ನಿರಿ ಹೆಗಲ ಕೊಟ್ಟು
ಜೋಡಿ ಎತ್ತನೂ ಅಡವಿಟ್ಟು

(ಚಿತ್ರ ಕೃಪೆ : ಅಂತರ್ಜಾಲ)

ಅಪಾತ್ರ ದಾನ…

ದಾನಿಗಳಾರೋ
ಪೀಕದಾನಿಗಳಾರೋ,
ನಕಲಿ ವಜ್ರಗಳು ಮಾತ್ರ
ಜನಜನಿತವೀಗ

ತಕ್ಕಡಿಯಲಿ ತೂಗುವರು
ಒಲುಮೆಯದೂ ನಿಯತ್ತು?
ಮುಲಾಮಿಗಷ್ಟೇ ಬೋರಲು
ಹಡೆದವರ ಅಸಲೀಯತ್ತು

ಜೀವಂತ ಮೈ ಸುಲಿವರು
ಕೋಶ ಓದಿದ ಮಕ್ಕಳು,
ಸಲುಹಿದರೂ ಮರೆವರು
ಹೆಬ್ಬೆಟ್ಟು ಒತ್ತು ಹೆತ್ತವರು

ಸವಕಲು ಪಾವಲಿ ಕೊಟ್ಟು
ಮಹಾ ಪೋಷಕನ ಪೋಸು
ಮೇಲಿವರು ಕೇಳುತ್ತಾರಲ್ಲ
ತೆರಿಗೆ ವಿನಾಯತಿ ನಕಲು

ನಕ್ಕ ನಗೆಗಳಿಗೆಲ್ಲ ಲೆಕ್ಕ
ಹಸ್ತಾಲಿಂಗನವೇ ಬುರುಡೆ
ಸುಪ್ತ ಕಾಮನೆಯೂ ಗುಪ್ತ
ಪೊಳ್ಳು ಪುರುಷೋತ್ತಮತೆ

ಹಾಲುಣಿಸೋ ರಾಸುಗಳು
ನೆನಪಿಟ್ಟಾವೇ ಕರೆದ ಲೆಕ್ಕ,
ನೆಲದವ್ವ ಕೇಳುವಳೇ
ಫಸಲ ರಾಶಿಯಲೂ ಭಾಗ!

(ಚಿತ್ರ ಕೃಪೆ : ಅಂತರ್ಜಾಲ)

ಬಿರಿಯ ಬಹುದೇ…

ಇದು ನಾನು
ಅದು ನೀನು
ಗೆರೆ ಗೀಚದಿರು ಹೀಗೆ,
ಬೆಳೆ ತೆಗೆದರಾಯ್ತು
ಬಿಡು ಬಂಜರಲ್ಲೂ
ಖುಷ್ಕಿ ಏಕೆ ಬೇಕು?

ಒಣ ಜಂಭ ಕೊಲ್ಲುತದೆ
ಘಾಸಿ ಮುನಿಸಿನೀಟಿ
ಬೇಡಮ್ಮಾ ಆಮ್ಲ ಮಳೆಯು,
ನಗೆಯ ಬುಗ್ಗೆಯೊಂದು
ನಡು ನಡುವೆ ಹಾರುತಿರೆ
ಮೂಕಿ ಕಳೆದು ಟಾಕಿ

ಇನ್ನು ಹೊಸೆಯಲಿದೆ
ಕನಸ ಹಸೆಯನಿಂದು
ಸೇರಿ ನಾನು ನೀನು,
ಕೊಸರಿ ಕೊಸರಿ
ಮುಚ್ಚಿಟ್ಟ ಮುತ್ತುಗಳ
ಮತ್ತೆ ಗುಣಿಸಲೇನು?

ಚಳುವಳಿಯೇ ಆಗಲಿ
ಅಪ್ಪಿಕೊಂಡು ಕೂತು,
ಬಿರಿಯ ಬಹುದು
ಹೆಸರಿಲ್ಲದೊಂದು ಹೂ
ನೀರಿರದ ಚಂದ್ರನಲ್ಲೂ?

(ಚಿತ್ರ ಕೃಪೆ : ಅಂತರ್ಜಾಲ)

ಅಹಂಕಾರಿ…

ಎಲ್ಲ ಹುಟ್ಟುಗಳಿಗಿಲ್ಲ
ಸಾರ್ಥಕತೆ ಅರ್ಥ ವಿಸ್ತಾರ,
ಬರೀ ಭೂ ಭಾರ
ಕೂಳು ಕತ್ತರಿಸೋ ಕಾಯ

ಸುಳ್ಳುಗಳ ಕಾಪಾಡಿ
ಸತ್ಯಗಳ ಮರೆ ಮಾಚಿ
ಭ್ರಮೆಗಳ ನಡುವೆ
ಬದುಕಿಸೋ ಜನತಂತ್ರ

ಸೆರೆ ಸಿಕ್ಕ ಉಗ್ರಗಾಮಿಯ
ಚೀಲದಲಿ ಕೊಲ್ಲು ಪಟ್ಟಿ,
ನುಸುಳಿ ಬರುತಿವೆ ಕ್ರಿಮಿ
ಭ್ರಷ್ಟವಾಯಿತು ಗಡಿ!

ಅಹಂಕಾರವೇ ನರಾಧಮ?
ಸರ್ವ ಶಕ್ತತೆಯ ಪೊಗರೇ?
ಇರಗೊಡೆಯ ಚರಾಚರಗಳ
ನಿನ್ನ ಪರಧಿಗೂ ಮೀರಿ!

ಅಖಂಡ ನೆಲ ಭಾಗ
ಈಗದು ಛಿಧ್ರ ಖಂಡ,
ಬರೀ ಗೆರೆಗಳೇ ನಡುವೆ
ಅಷ್ಟಾವಕ್ರವು ಭೂಪಟ

ಪಾಪ ಸಾಂಧ್ರತೆಯ
ಹೆಣ ಭಾರ ಹೊತ್ತೀತೆ
ತಾಯಿ ಧರಿತ್ರೀ?
ತಾಳಿಕೊಳ್ಳಳು ಕ್ರೌರ್ಯ

ಅಂಗಡಿ ಮುಚ್ಚಲಸಲು
ಪ್ರಳಯವೇ ಬರಬೇಕೇ?

(ಚಿತ್ರ ಕೃಪೆ : ಅಂತರ್ಜಾಲ)

ಸಂಯಮಿಸು ಮನವೇ…

ಎಂತ ಕತ್ತಲಲೂ ಕವಾಯತು
ಹೃದಯ ನಿಲ್ಲಿಸದು ತಾ ಪಂಪು,
ದೇಹವೋ ವಾಂಛೆಗಳ ವಸಾಹತು
ಮುನಿದು ಇಳಿಯದು ತಾ ಸಂಪು!

ನನ್ನ ಹಂಗಿಗೇ ಸಿಗದ
ಒಳ ಅಂಗಾಂಗ ಶಿಸ್ತು ಬದ್ಧ,
ಪಾಳಿ ಕೇಳದು, ಭತ್ಯೆ ಬಯಸದು
ದೂಷಿಸದು ಕೀಳು ಕೆಲಸ,
ಯಾರದೋ ಕಣ್ಗಾವಲಿಗೆ
ಮೀರಿ ಇಲ್ಲಿಲ್ಲ ಮೈಗಳ್ಳತನ

ಒಳ ಸುಳಿದ ಗ್ರಹಿಕೆಗಳನೆಲ್ಲ
ತಾಳೆ ನೋಡುತ್ತೆ ಮೆದುಳು
ಇದು ಸತ್ಯ ಇದು ಸುಳ್ಳು ಕೇಳು,
ಅದು ಕೆಡುವುದೇ ಜಾಯಮಾನ
ಬುದ್ಧಿ ಹೇಳಿದರೂ ಕೇಳದದು
ಪಾಪಿ ನಮ್ಮದೇ ಲದ್ದಿ ಮನಸು

ಕುಡಿವವನ ಯಕೃತ್ತು
ಧೂಮಪಾನದ ತಿತ್ತಿಗಳು
ತಂಬಾಕಿನವನ ಬಾಯಿ
ಕೊಳೆತು ನಾರುತ್ತೆ ಪಾಪ,
ಹಾಳು ಬಿದ್ದದ್ದು ತನ್ನದೇ
ಸ್ವಂತ ಮನೆ ಇಲ್ಲಿ

ಭಗವಂತ ಕೊಟ್ಟ ಭಿಕ್ಷೆ
ಈ ದಿವ್ಯ ಬದುಕು,
ಹಳಸಲು ಹಿಡಿಸದಿರು
ಮುಟ್ಟಾಳ ಮನುಜ!

ಗರಡಿ ಮನೆ…

ಗರಡಿ ಮನೆ ಹೊಕ್ಕು
ಮೈ ಜರಡಿ ಹಿಡಿಯಬೇಕು
ಕೊಬ್ಬು ಕರಗಿಸಿ ಈಗ
ಕಡ್ಡಿಯಾಗಲೇ ಬೇಕು
ಗರಡಿ ಮನೆ ಹೊಕ್ಕೂ…

ಹನುಮಂತರಾಯನ
ಪಾದಕೆ ಎರಗುತ
ಜಂಭ ಕಳೆಯೋ ದೈವ
ಎಂದು ಕೈಮುಗಿಯುತ,
ಭಕ್ತಿಯಿಂದಲಿ ನಮಿಸಿ
ಸಿದ್ಧನಾಗಲು ಬೇಕು…

ಮಣ್ಣ ಮೇಲೆ ಸಾಮು
ವಿದ್ಯೆ ಅರಿಯಲು ಬೇಕು,
ಪಟ್ಟುಗಳೆಲ್ಲವ ಕಲಿತು
ಜಗ ಜಟ್ಟಿಯಾಗಲು ಬೇಕು,
ಹಳೆ ಹುಲಿ ಕೆಡವಿ
ಮೀಸೆ ತಿರುವಲೇ ಬೇಕು…

ನಮ್ಮ ಕಲೆ ಕಲೆಯೋ
ಮನಸ್ಸು ಬರಲೇ ಬೇಕು,
ದೇಹ ದಂಡಿಸಿ ಮನಸ
ಹದ ಮಾಡಬೇಕು,
ದೆಂಡಿ ಕಾಯವ ಇಳಿಸಿ
ಚಂದಗೊಳಿಸಲು ಬೇಕೂ…

ಮುತ್ತತ್ತಿರಾಯನ
ಕರುಣೆಯಿದ್ದರೆ ನಾನೂ
ಪೈಲ್ವಾನನಾದೇನೂ,
ಗರಡಿ ಮನೆ ಹೊಕ್ಕೂ…

 

ಅವಳು…

ತುಂತುರು ಮಳೆ ಹನಿಗೆ
ತೊಯ್ದ ಮಲ್ಲಿಗೆ ಬಳ್ಳಿ
ನಾಚಿ ನೀರಾಗಿ ನನಗಾಗಿ
ಹನಿಯುತಿದೆ ಒಲುಮೆ

ರಂಗವಲ್ಲಿಯ ತುಂಬೆಲ್ಲ
ಒದ್ದೆ ಮಲ್ಲಿಗೆಯ ಹಾಸು
ಪಾದಕೆ ಅಂಟುವ ಪಕಳೆ
ಅವಳದೇ ಬಿರಿದ ನಗು

ಅವಳ ನಗೆಯೇ ಹಾಗೆ
ಅದು ಬಿಡದ ಜಡಿ ಮಳೆ
ಬಿಟ್ಟ ಮೇಲೂ ಹನಿವುದು
ನೆನೆಸಿ ಹಾಕುತಲಿರುವುದು

ರೂಪ ರೂಪಕೂ ಒಗ್ಗುತ
ನಿಂತು ಹರೆದು ಜಿಗಿಯುತ
ಅವಳ ರೂಪವೇ ಎಲ್ಲೆಡೆ
ಪುಳಕಗೊಳಿಸಿದೆ ನನ್ನೆದೆ

(ಚಿತ್ರ ಕೃಪೆ : ಅಂತರ್ಜಾಲ)

ಹಾರೈಕೆ…

ಹಾಲುಗೆನ್ನೆಯ ಪಾಪುವು
ತೊಟ್ಟಿಲಲೆ ನಗುತಲಿದೆ
ಯಾವ ಜನುಮದ ನೆನಪೋ
ಇಲ್ಲಿ ಅರಳುತಿದೆ ಹೀಗೆ…

ಬಲು ಕೆಟ್ಟ ಪ್ರಪಂಚವು
ಹೊರಗೆ ಸಮ್ಮಿಶ್ರ ಸರ್ಕಾರ
ಒಳ್ಳೆಯವರೂ ಸಮ ಪ್ರಮಾಣ,
ಕಳೆ ಕಿತ್ತು ಬೆಳೆ ತೆಗೆಯೋ
ವಿದ್ಯೆ ಸಿದ್ಧಿಸಬೇಕು ನಿನಗೆ

ಮೊದಲು ಮಾನವನಾಗು
ಮನೆಯವರಿಗೆ ಹೊಟ್ಟೆ ತುಂಬು,
ಗಾಣದೆತ್ತಿನ ಹಾಗೆ ದುಡಿ
ಮನೆ ಕಟ್ಟು, ಕೊಳ್ಳು ಬಂಗಾರ,
ಜೊತೆ ಜೊತೆಗೆ ನಗುವ ಕಲಿ
ಉಲಿಯಲಿ ಸಾಮಜ ವರಗಮನ…

ಅಳುವೆಡೆ ಅತ್ತು ಬಿಡು
ನಗುವಾಗ ಮನ ಬಿಚ್ಚಿಯೇ ನಗು,
ನಿನ್ನಂತೆ ನೀನಾಗು ಕೊನೆಗೆ…

ಬೆನ್ನುಡಿ…

ಸೋತವನಿಗೆ ಗೊತ್ತು
ಸೋತವನ ಕಹಿ,
ಹೊರಗೆ ಲೊಚಗುಟ್ಟುವ
ಉಪದೇಶಾಮೃಕೋ
ಮನದಲೇ ಚಿತೆ ಒಟ್ಟಿ
ಬೆಂಕಿ ಇಟ್ಟು ಬಿಡಿ…

ಗೆದ್ದೆತ್ತು ಉಬ್ಬಿಸುತ್ತದೆ ಎದೆ
ಜಗಕೆ ತೋರಲಹಮು,
ಸೋತವನೂ ಉಬ್ಬಿಸುತ್ತಾನೆದೆ
ತುಂಬಲಷ್ಟೇ ಉಸಿರ ತಿತ್ತಿ!

ಅಸಡ್ಡೆಯು ಸಹಿಸಲಸದಳ…

ದೂರವಾದವರೆಲ್ಲ
ಕಳೆದು ಕೊಂಡರು ಪಾಪ
ನಿಜ ಪ್ರೀತಿಯ ಈ ಒರತೆ,
ಕೃತಜ್ಞತೆಗೂ ಗೆಳೆಯ
ಕೃತಘ್ನತೆಗೂ ಅಲಲಾ
ಅಕ್ಷರವೇ ಬದಲು!

ಸಾಲ ಕೇಳುವನೋ
ಕೆಲಸ ಕೇಳುವನೋ
ಬಿದ್ದನಲ್ಲ ಹೆಗಲ ಮೇಲೆ!
ಕರೆಯೂ ಖರ್ಚಿನ ಬಾಬ್ತು,
ಹೇಳಲೊಲ್ಲರು ತಾವು
ನಗುವಿಗೂ ನಿಖರ ಬೆಲೆ

ಕಲಿಯ ಬೇಕಿದೆ ನಾನೂ
ಮನುಜ ನಿಜ ವರ್ಣ,
ಕೆಲವರಾದರೂ ಉಣಿಸಿದರು
ಸೋಲಲೂ ಗೆಲ್ಲವನಾಮೃತ
ಬೆನ್ನಿಗಾಸರೆ ನಿಂತ ಜನ
ದೇವರಿಗವರೇ ಸಮಾನ…

(ಚಿತ್ರ ಕೃಪೆ : ಅಂತರ್ಜಾಲ)

ತಿರಂಗೀ…

ವ್ಯಾಧಿಗ್ರಸ್ತವು ನರನಾಡಿ
ಬರಿಯ ಕಳೇವರ ದೇಹವೀಗ
ಪೊಳ್ಳು ಬದುಕುತಿದೆ ನನ್ನ ದೇಶ…

ಇಲ್ಲಿ ಹಾರಲು ಪತಾಕೆಗೂ
ಗಾಳಿ ತಿವಿತವದಿಲ್ಲ
ಕಡೆದ ಕಾಡುಗಳಿಂದ ಬೀಸದು
ಮಂದ ಮಾರುತವಂತೂ
ಮುನಿದಿದೆ ಮುಂಗಾರೂ…

ಕೇಸರಿಯು ಬಣ್ಣಗೆಟ್ಟಿದೆ
ಬಿಳಿಯು ಅನುಮಾನಾಸ್ಪದ
ಹಸಿರಂತು ಬರಿಯ ಕನಸ್ಸು,
ಗಟ್ಟಿಯೊಂದೇ ನಡು ಬೀದಿಯಲಿ
ನೆಟ್ಟ ಒಬ್ಬಂಟಿ ಕಂಭ!

ಬಿತ್ತಿದ ಬೇವನೇ ನೆಚ್ಚಿ
ಬೆಳೆದೀತೆಲ್ಲಿ ಕಬ್ಬು ಜಲ್ಲೇ?
ಮೆರೆಸು ಉಮೇದಿಗೆ ಬಿದ್ದು
ಮರೆತ ಬೇರುಗಳೆಷ್ಟು
ಉತ್ತರಿಸಲಾರವು ಪಠ್ಯಗಳು!

ಈಗೀಗ ನೆನಪು
ನಿಂಬೆ ಹುಳಿ ಮತ್ತು ಬೂಂದಿ ಕಾಳು,
ದ್ವನಿ ಮುದ್ರಿತ ತಟ್ಟೆಯ
ಕೊರಳಲಿ ರಾಷ್ಟ್ರಗೀತೆ…

ಶಾಪಗ್ರಸ್ತ…

ಗೋಮಾತೆಯನೇ ಕೇಳಿದೆ
ತಾಯೇ ಎನಿತು ದೇವರುಗಳೋ
ನಿನ್ನೊಳಗೆ, ಹೇಳಿ ನೋಡು…

ಇಲ್ಲೊಂದು ಶಾಪಗ್ರಸ್ತನು
ಎಡಗಣ್ಣ ಮುಚ್ಚಿ ಬಲಗಣ್ಣ
ತೆರೆದಿಟ್ಟು ಧ್ಯಾನಸ್ಥನು,
ಕ್ಯಾಮರಾ ತಾಕಿಗೆ ಕಾದ
ಪಾಪ ಅಹಲ್ಯೆಯಂತವನು

ತೆರೆದ ಬಲಗಣ್ಣು ಹುಡುಕುತ್ತೆ
ಕ್ಯಾಮರದ ಒಳ ಹೊಕ್ಕು
ಚೌಕಟ್ಟಿನೊಳು ಮೂರ್ತ ಭಾವ,
ಮತ್ತೆ ಸಂಯೋಜಿಸ ಬೇಕು ಹರಿವು
ತೀಡಬೇಕು ಒರೆಗೆ ಅರಿವು

ನೂರಾರು ದೈವಗಳಲೊಬ್ಬ
ಚಡಪಡಿಕೆಗೆ ಮರುಗಿ ಕನಿಕರಿಸಿ
ಕ್ಯಾಮರಾ ತಾಕಿಸಿದರೆ ಸಾಕು,
ಅರೆ ಸತ್ತ ಛಾಯಾಗ್ರಾಹಕನಿಗೆ
ಮತ್ತೆ ಜೀವ ಸಂಚಲನ…

ರೇಖೆಗಳೆರಡು…

ಅವಳ ಪ್ರೀತಿಗೆ ಕಾದ
ಕಾಡಿ ಬೇಡಿಯೇ ಪಡೆದ
ಅವಳೂ ಕರಗಿದಳು

ಉರಿದೇ ಉರಿಯಿತು
ಹೊಸ ತೈಲಕೆ ಧಗಧಗಿಸಿ
ದಾಂಪತ್ಯ ಜ್ಯೋತಿ

ವರ್ತನೆಗೆ ಬಿದ್ದು ಹಳಸಿ
ಪಕ್ವವಾದಳು ಆಕೆ
ಅವನೋ ಮರಗಟ್ಟಿದ!

ಒಲುಮೆ ಹನಿ ನೀರಾವರಿ
ಪಡಖಾನೆ ತಲುಪಲೇ ಇಲ್ಲ
ನಿಟ್ಟುಸಿರೇ ಪೂರ ಮನೆಗೆ

ಬೆನ್ನುಗಳ ಸಂವಾದ
ಬೇರ್ಪಡುವ ನಿರ್ಧಾರ
ಸಡಲಿಸಲು ತಂತುವೊಂದು

ಬಿಂದುಗಳ ಎಳೆ ತಂದು
ಅರಳಿಸಲು ನಗು ಬುಗ್ಗೆ
ಕಂದ ಬಂತೊಂದು…

(ಚಿತ್ರ ಕೃಪೆ : ಅಂತರ್ಜಾಲ)

ಎನ್ನ ಎಳೆಗರುವೇ…

ಮರೆತು ಹೋದೆಯೋ ನೀನು
ಎನ್ನ ಎಳೆಗರುವೇ
ಸಂಸಾರ ಚೆರಿಗೆ ಒಬ್ಬಂಟಿ
ನಾನಿಲ್ಲಿ ತುಂಬುತಲಿರುವೇ

ನನ್ನ ಮಡಿಲಲಿ ಆಡೋ
ಕಂದ ನೀನೇನಲ್ಲ ಇಂದು
ಎನಿತು ಬೆಳೆದರೂ ಖುಷಿಯೇ
ಕರುಳ ಕಣ್ಣಿಗೆ ಕರುವೇ

ನೊಗವು ಹೊರುತೀ ಎಂದು
ಪೆದ್ದಿ ಕಾಯುತಲಿದ್ದೆ
ಅಂಗಳ ಹರಕೊಂಡು ಜಿಗಿದೆ
ಬೇರ ಕತ್ತರಿಸೀ ತೊರೆದೆ

ಹೆತ್ತ ತಾಯಿಯೇ ಹೊರಗೆ
ಮಮತೆ ಬಿಕ್ಷಿಸುವಾಗ
ಮಜಲು ಕಟ್ಟುತ ಹೊರಟೇ
ಇಲ್ಲಿ ಸೂರಿಗೂ ಕೊರತೇ!

ಎನಿತು ದಿನವೋ ಹಸಿವು
ಎಂದೋ ಕಳೆದಿದೆ ಕಸುವು
ಇನ್ನೆಲ್ಲ ಜವರಾಯನಾಟ
ಕಳೆದರೆ ಸಾಕು ಜಂಜಾಟ

ಪೊರೆ ಕವಚೋ ಮುನ್ನ
ನಿನ್ನ ಕಣ್ ತುಂಬಿಕೊಂಡೇನು,
ಎತ್ತಿಕೊಟ್ಟರೆ ದುಡ್ಡು ಕಾಸು
ತೀರೀತು ಸಾಲ ಬಾಧೆ

ಈಗ ಬಂದರೆ ತುತ್ತಿಕ್ಕೇನು
ಅಪ್ಪಿ ಮುತ್ತಿಕ್ಕೇನು ಹಾಗೇ
ಮರೆತೇನು ಪಟ್ಟ ಪಾಡು,
ಸತ್ತರೇನಿದೆ ಹೇಳು ನೀನು…

(ಚಿತ್ರ ಕೃಪೆ : ಅಂತರ್ಜಾಲ)

ಹೊಗೆ ಕಾರ್ಯಕ್ರಮ…

ಚಿಲುಮೆಯ ಕಾವು
ಸುಡಬಾರದು ಕೈಯ
ಅದಕೇ ಈ ಸುತ್ತು ಬಟ್ಟೆ,
ಸುಟ್ಟರೇ ಸುಡಲಿ ತಿತ್ತಿಗಳ
ತೇಲಿಸುತ್ತೆ ಸ್ವರ್ಗಾದಪಿ
ಈ ಭಂಗೀ ಸೊಪ್ಪು!

“ತಂಬಾಕಿನ ಗಮಲೂ
ತಿಲೋತ್ತಮೆಯ ಅಮಲು;
ಸಹೋದರಾ…
ಸವಿದವನೇ ಬಲ್ಲ
ಪ್ರೀತಿಯ ಸವಿ ಬೆಲ್ಲ”
ಅಂತಾನೆ ಪಾಪಿಯೊಬ್ಬ!

ಸುತ್ತಿದರೆ ಹಸನಾದ ಬೀಡಿ
ವಿಲಾಯತಿ ಚುಟ್ಟ ಇಲ್ಲಿ ನೋಡಿ
ಶರ್ಲಾಕ್ ಹೋಮ್ಸ್ ಪೈಪು ಮೋಡಿ
ಹಾಗಂತ,
ಹುಕ್ಕಾ ಸಿಗರೇಟ್ ಸೇದ ಬೇಡಿ!

ಚಟ ಚಟ್ಟವ ಹತ್ತಿಸೀತು,
ಸೇದಿದರೆ ಧೂಮಪಾನ
ಜೊತೆಗೆ ಮದ್ಯಪಾನ
ಮನೆ ಮುಂದೆ ಹಾಕ್ತಾರೆ
ಹೊಗೆ ಜೋಪಾನ!!!

ಬದರಿನಾಥ ಪಲವಳ್ಳಿಗಾಗಿ
ಬದರಿನಾಥ ಪಲವಳ್ಳಿ
ಬರೆದುಕೊಂಡ ಶೋಕಗೀತೆ!

 

 

 

 

 

(ಚಿತ್ರ ಕೃಪೆ : ಅಂತರ್ಜಾಲ)

ಅವನಿಲ್ಲದ ಕಾಡು…

ಭೀಮನ ಅಮಾವಾಸ್ಯೆಯ ಮರುದಿನ
ಸುಪ್ರಭಾತಕೆ ತಲ್ಲಣಿಸಿತಲ್ಲ ನಾಡು,
ಹುಂಬನು ಹೊತ್ತೊಯ್ದ ಮೇರು ನಟರೂ
ನೂರೆಂಟು ದಿನ ವನವಾಸ ಪಾಡು…

ಅಸಲವನ ಕಾಡೇ ಅಭೇದ್ಯ
ಒಮ್ಮೆ ಕುರುಚಲು ಬೀಡು
ಮುಗಿಲೆತ್ತರಕೆ ಆನೆ ಹುಲ್ಲು
ನಿಬಿಡ ಮರಗಿಡ ಸಂಪತ್ತು
ಮತ್ತೆ ಬಟಾ ಬಯಲು…

ಈಗಲ್ಲಿ ನೆಲ ಬಾಂಬು ಸಿಡಿಯುವುದಿಲ್ಲ
ತುಪಾಕಿ ಮೊರೆಯುವುದಿಲ್ಲ
ಸುಳ್ಳು ಸಂಧಾನಕಾರರಿಲ್ಲ
“ಹರಹರ ಮಹಾದೇವ್” ಉದ್ಘೋಷವಿಲ್ಲ
ನಿರಮ್ಮಳವಾಗಿದೆ ಕಾಡು ಮೇಡು

ಮಡಿದ ಪೊಲೀಸರ ನಿಟ್ಟುಸಿರ
ಹೊತ್ತು ಹರಿಯುತ್ತೆ ಅದೇ ಪಾಲಾರ್,
ಘೀಳಿಟ್ಟು ಅತ್ತ ಆನೆಗಳೇ ಮುದಿಬಿದ್ದು
ಮರೆತಿವೆ ಕಳಕೊಂಡ ತಮ್ಮ ದಂತ,
ಚಿಗುರೊಡೆದು ನಳನಳಿಸಿದೆ ಶ್ರೀಗಂಧ…

ತಲೆ ಕತ್ತರಿಸಿ ಕೊಂದ ಶ್ರೀನಿವಾಸನ್
ಕಾಹು ಕೊಂದಿಟ್ಟ ಶಕೀಲ್ ಅಹಮದ್
ತಾ ಕೊಂದಿಲ್ಲವೆಂದಿದ್ದ ನಾಗಪ್ಪನಂತವರೂ
ಬದುಕಿ ಬಂದಾರೇ ನಿರ್ಧಯೀ ಹೇಳು?
ಉತ್ತರಿಸುವವನೇ ಜೀವಂತವಿಲ್ಲ…

ಕಾಡುಗಳ್ಳನವನು ಬಲು ಗುನ್ನೆಗಾರ
ಅಪಹರಣ ಅಟ್ಟಹಾಸ ಮರಸು ಬೇಟೆಯೇ
ನರ ಹಂತಕ ವೀರಪ್ಪನ್ ಜಮಾನ!
ಕಾಲಧರ್ಮಕೆ ಸಿಕ್ಕು ಅವನೇ ಸತ್ತರೂ
ಕಳ್ಳ ಗಂಟಿನ ಕುಂಭ ಬಯಲಾಗಲೊಲ್ಲ!

ಪಾಪ ಉಸಿರಾಡುತಿದೆ ಈಗೀಗ
ಆವನಿಲ್ಲದ ಕಾಡು…

(ಚಿತ್ರ ಕೃಪೆ : ಅಂತರ್ಜಾಲ)

(ಅವಧಿ ಡಾಟ್ ಕಾಂನಲ್ಲಿ ದಿನಾಂಕ: 25.07.2011 ಪ್ರಕಟಿತ) 

http://avadhimag.com/?p=58684

ಇದೀಗ ಬಂದ ಸುದ್ದಿ…

ಹೊಸ ಗೆದ್ದ ಎತ್ತಿನ ಹಿಂದೆ
ಹಳೇ ಹಿಂಬಾಲಕರ ಪಡೆಯ
ಬಾಜಾಬಜಂತ್ರಿಯ ಘೋಷ,
ಸೋತವನೋ ಮನೆ ಹೊಕ್ಕ
ಅಂಗಳದಿ ಮಸಣ ವೈರಾಗ್ಯ…

ತೊಟ್ಟ ಮುಳ್ಳು ಕಿರೀಟವ
ಕಳಚಿಕೊಂಡವನೇ ತೊಟ್ಟ
ಒಳಗೀಗ ಗುಲಾಬಿ ಪಕಳೆ,
ಇಲ್ಲಿ ಸಿಂಹಾಸನದ ಕೆಳಗೆ
ಹಳೇ ಹಾವುಗಳೆಲ್ಲ ಮತ್ತೆ
ಬುಟ್ಟಿ ಮೀರುವ ಗಳಿಗೆ…

ಮಂತ್ರ ದಂಡವ ಕಸಿದ
ಹೊಸ ಮಂತ್ರವಾದಿಗೂ
ಗೊತ್ತಿರುವುದದೇ ಹಳೆಯ
ಉಚ್ಛಾಟನಾ ಮಂತ್ರ,
ಹಿಂದೆಯೇ ಕಿಸುಗುಳಿ ನಕ್ಕ
ನನ್ನದೂ ಅದೇ ಶಾಲೇ!

ಅಭದ್ರವೀ ಊರಿದ ಅಂಡು
ಹಿರೀಕ ಹುಡುಕು ಅಂಟು!

(ಚಿತ್ರ ಕೃಪೆ : ಅಂತರ್ಜಾಲ)

ಸಾಧಿಸಲೇ ಬೇಕು…

ನಡು ವಯಸಲೇ ಏಕೆ
ಸ್ವಯಂ ನಿವೃತ್ತಿಯ ಮೋಹ?
ಶೂನ್ಯ ಸಾಧನೆ ಸಾಕೇ
ಉಕ್ಕಲಿ ಜೀವನೋತ್ಸಾಹ…

ಕಲಿಯಲಿದೆ ಎನಿತೋ
ಹಲವರಿಂದಲೂ ಪಾಠ…

ಮೊದಲ ಗುರುವೇ ಎನಗೆ ಗದುಗಿನ ದೈವ
ಪಂಡಿತೋತ್ತಮ ಪುಟ್ಟರಾಜ ಗವಾಯೀ
ಜಗಕೇ ಕಣ್ಣಾದ ಶರಣರಲಿ ಶರಣ,

ಈತ ಗಾಲಿ ಕುರ್ಚಿಯ ನಿಶ್ಚಲ ದೇಹಿ
ಹಾಂವ್ ಕಿಂಗ್ಸ್ ಬಲು ಮೇಧಾವಿ
ಬಿಡಿಸಿಟ್ಟರಲ್ಲ ಕಪ್ಪು ರಂಧ್ರದ ಗೋಜಲು,

ಕಿವಿಗಳೆರಡೂ ಕೇಳಿಸದೆಯೂ
ಬರೀ ತುಟಿಯ ಚಲನೆ ಗಮನಿಸಿಯೇ
ಗೆದ್ದರಲ್ಲವೇ ಕನ್ನಡ ನಟ ಬಾಲಣ್ಣ,

ಕೊರಗಲಿಲ್ಲ ಕಳೆದ ಕಾಲಿಗೆ ನಿರಂತರ
ಕೃತಕ ಕಾಲಲೇ ನರ್ತಿಸುತ ಆದರಲ್ಲವೇ
ಸುಧಾ ಚಂದ್ರನ್ ತಾವು ನಾಟ್ಯ ಮಯೂರಿ,

ಅರೆ ದೇಹ ಸೋತರೂ ಫರ್ಮಾನ್ ಭಾಷಾ
ಭಾರಗಳನೆತ್ತಿ ಗೆದ್ದು ತಂದರು
ಕಂಚು ಪದಕ; ತುಂಬು ಗರ್ವಿಸಿತು ದೇಶ…

ಬ್ರೈಲು ತಾಕಲೇ ಉದ್ಗ್ರಂಥ
ಬರೆದವರೂ ಸಿಗಬಹುದು,
ಕಾಲು ಕಳೆದವರೂ ಕೂಡ
ಹಿಮಗಿರಿಯ ಏರಬಹುದು…

ನೆಟ್ಟಗಿವೆ ನನ್ನ ಅಂಗಾಂಗ
ಗಟ್ಟಿಗಿದೆ ಪಾಪಿ ಆಯುಷ್ಯ ರೇಖೆ,
ಒಲಿಸಲು ತಾರಕ ಮಂತ್ರ
ಏನಾದರೂ ಸಾಧನೆ ತೋರಬೇಕು…

ಮನಸು…

ನಿಲ್ಲಲೆಂದರೂ ನಿಲ್ಲಗೊಡದಿದು
ಹೊರಟು ನಿಂತರೂ ತಡೆವುದು,
ಅಂಕೆ ಮೀರಿತೆನ್ನ ಮನಸಿದು
ತನ್ನ ಮಾತನೂ ತಾ ಕೇಳದು…

ಒಳಗೆ ಗುಣಿಸಿದೆ ಸ್ವಗತ ರಿಂಗಣ
ಹೇಳಿಕೊಳ್ಳದು ಯಾರಿಗೂ,
ಎದೆಯ ಗಾಯಗಳೆಲ್ಲ ಮಾಗಿಯೂ
ಕೊರಗು ಉಳಿಸಿತು ಕೊಸರಿಗೆ,
ಆವಿಯಾದವು ಕಣ್ಣ ಹನಿಗಳು
ಮಾಸಿತೆಲ್ಲೋ ಆ ಕಿರುನಗೆ!

ಗಾಳಿ ಮೆಟ್ಟಿಲನೇರು ಭ್ರಮೆಯಲಿ
ನಿಂತ ನೆಲವನೇ ಒದ್ದರೇ,
ಏರಬಲ್ಲೆನೇ ಅರಿವಿನೆತ್ತರ
ಮರಳಿ ಯತ್ನಿಸೆ ಗೆಲುವೆನೇ?
ಇಲ್ಲಿ ಕ್ಷಣವಿರೆ ಅಲ್ಲಿ ಕಳೆದರೆ
ಪಡೆಯಬಲ್ಲೆನೇ ಏಕಾಗ್ರತೆ?

ಒಳಗೆ ಇಣುಕಲೂ, ಹುಳುಕು ಮುಚ್ಚಲು
ಬಿಟ್ಟುಕೊಳ್ಳದು ಒಳ ಮನೆ,
ಸಭ್ಯ ಪೊರೆ ಒಳಗಿನ್ನೆಂತ ಸ್ವಗತವೋ
ಓದಗೊಡದು ಮನ ಪುಸ್ತಿಕೆ…

ಅಪ್ರಾಪ್ತ ಚಿನ್ನ…

ನೆಲ ಬಗೆದು ಚಿನ್ನದದಿರನು ಎತ್ತಿ
ತಿಜೋರಿಗಳ ಮೊದಲು ತುಂಬಿದೆವು,
ಮತ್ತೆ ಕಾಡಿತು ಪಾಪ ಪ್ರಜ್ಞೆಯು
ಎತ್ತಿ ಕೊಟ್ಟೆವು ದೇವರಿಗೂ ಒಂತಿಷ್ಟೂ!

ಕಾರ್ಕೋಟಕ ಉರಗಗಳಿಗೋ ಇನಿತಿಲ್ಲ
ಕಾಳ ಸರ್ಪದ ಕಾವಲಿನ ಭಯವೂ,
ದುರ್ಮತಿಗೆ ಹುಂಡಿ ಕದ್ದರೂ ಅರಿವಿಲ್ಲ
ಲೂಟಿಯಾದರೂ ಪ್ರಚ್ಛನ್ನರು ನಾವೂ!

ನಭವ ದಾಟಲಿ ಬೆಲೆಯು ಅನುದಿನ
ತೇಜಿಯಲೇ ತೇಲಲೀ ಚಿನಿವಾರ ಪೇಟೆಯು,
ದುಡಿಮೆಯ ರಕ್ತವ ಬಸಿದಾದರೂ ಸೈ
ಮಕ್ಕಳನು ಉಪವಾಸ ಕೆಡವಿಯಾದರೂ
ಗ್ರಾಮು ಕೊಳ್ಳುತ್ತೆ ಹುಚ್ಚು ಮಂದಿ…

ಹುತ್ತದಾಳವೂ ಅಳೆಯಲಾರದ
ದಡ್ಡರೆಲ್ಲ ಏರಬಾರದು ಸಿಂಹಾಸನ,
ಬಿಲಗಳ ಆಳದಲೆಷ್ಟಿದೆಯೋ
ಮುಲ್ಕಿ ಚಿನ್ನ ಬೆಳ್ಳೀ ನವರತ್ನ?
ಸಾಲ ಶೂಲವ ತಪ್ಪಿಸಲುಪಾಯ
ಆಳರಸನಿಗೂ ಬೇಕು ವಿತ್ತದರಿವು…

ಕೋಲಾರವೂ ಖಾಲಿ ಖಾಲಿ
ಹಟ್ಟಿಯೂ ಮುಚ್ಚದೇ ಹೇಳಿ?
ಬಚ್ಚಿಟ್ಟಿದ್ದು ತಾನೇ ಪರರಿಗೆ
ಪಾಲಾಗಲಿ ವಿದೇಶಿಯರಿಗೆ…

(ಚಿತ್ರ ಕೃಪೆ : ಅಂತರ್ಜಾಲ)

ಯಾಕೆ ದೇವರು ಹೀಗೆ?…

ಇನ್ನೂ ಬಾರದ ಮಳೆಗೆ
ಬರೀ ಜಾಹೀರಾತೇ
ಆಷಾಢದೀ ಮೊರೆವ ಗಾಳಿ!

ಅಲ್ಲೆಲ್ಲೋ ಜಿಟಿ ಜಿಟಿ ಮಳೆಯ
ಸಂಭ್ರಮವಂತೆ ಮಾಧ್ಯಮಗಳಿಗೆ,
ನಮ್ಮ ಪಾಲಿಗೆಂದೋ ಮುಂಗಾರು
ಕಾದದ್ದೇ ಬಂತು ನನ್ನ ಬಂಜರು!

ಯಾಕೆ ದೇವರು ಹೀಗೆ?
ಜಲ ಮಂಡಲಿಗಿಂತಲೂ ಕಡೆಯೇ
ನಿನ್ನ ನೀರ ಸರಬರಾಜು…

ಬರದ ನೆರಳಿದೆ ನೆರೆಯ ಸಾವಿದೆ
ನಿನ್ನವವೇ ಬಿಲ್ಲೆಯ ಮುಖಗಳೆರಡು,
ಸಾಲ ಶೂಲವೂ ನಿನಗೆ ತಟ್ಟದು
ಬಿಕ್ಕೆ ಬಿದ್ದರೂ ಬಾಸಿಂಗ ಹುಟ್ಟದು
ಕತ್ತೆ ಮದುವೆಯ ಖರ್ಚಿಗೂ…

ಯಾಕೆ ಚರಾಚರವ ನುಲಿಚೋ ಹುಚ್ಚು
ಸಹಿಸಲಾರೆಯಾ ತಂದೆ,  ನಿನ್ನದೇ ಸೃಷ್ಟಿ?
ಬರದ ನಾಡಿದೆ, ಹಸಿರು ಕಾಡಿದೆ
ತಡ ಮಾಡದೇ ಹಚ್ಚಿಕೋ ಕಾಳ್ಗಿಚ್ಚೂ…

(ಚಿತ್ರ ಕೃಪೆ : ಅಂತರ್ಜಾಲ)

ನೆಲೆಗೆಡುವಾಗ…

ಕುಣಿಕುಣಿದು ಚಿತ್ರಿಸಿದ ಆ ಬಿಂಬ ಯಾತ್ರೆ
ಅವು ನನ್ನವೇ ಕನಸುಗಳ ಪುಟ್ಟ ಪರದೆ…

ಪರದೆ ಹಿಂದೆಯ ಅಗೋಚರ ಕೆಣಕು
ತಿವಿವ ವಿಕಟ ಅಟ್ಟಹಾಸದ ನಗು
ಕೇಳಿಸದು ಖಾಲಿ ಹೊಟ್ಟೆಯ ಕಿವಿಗೆ,
ಮೀಟಿದ್ದು ಚಪ್ಪಡಿಯಲ್ಲ ಗೋರಿ ಕಲ್ಲು
ಅನಾಥ ಅತ್ಮ ಬದಲಿಸಿತು ಮಗ್ಗಲು,
ನೆಲಹಿಡಿದು ಬಿದ್ದ ಹಳ್ಳವೂ ನನ್ನದೇನೇ  
ಇಗೋ ಈ ಕಲ್ಲು ಎಸೆ ಘಾಸಿಯಾಗಲಿ…

ಇನ್ನು ಭಯವಿಲ್ಲ ಜವರಾಯ
ಈ ದೇಹ ಹಿಂಡಿ ಬಿಸಾಕಿದ್ದಾರೆ
ನಿಶೆ ಹನಿಯ ಬಟ್ಟಿ ಇಳಿಸಿ ಬಿಡು!
ಕಿಸಿಯಲು ನೀನ್ಯಾವ ಕೊಪ್ಪಲು?
ಬರೀ ತೊಪ್ಪೆ ಈಗಿದು ಉರುವಲು!
ರೂಬುರೂಬು ನಿಲ್ಲಲಾರದ ಗಳಿಗೆ
ಆಕಳಿ ಉಳಿದ ಕಸಕಡ್ಡಿ ನಾನು…

ಅರವಳಿಕೆ ಮದ್ದೂ ಕೊಡದೆ ಸಲೀಸು
ರುಂಡಾಭರಣಾ ನಿನಗೆ ರೂಢಿ ತಲೆದಂಡ!
ಬಯಸಿ ಬಯಸಿಯೇ ಕುತ್ತಿಗೆ ಕೊಡಲಿಲ್ಲ
ನನಗಿಲ್ಲ ಇಚ್ಛಾ ಮರಣದ ತೆವಲು?
ನಡು ಮಧ್ಯಾಹ್ನಕ್ಕೆ ಗಕ್ಕನೆ ಅಮರಿತು
ವಾನಪ್ರಸ್ಥಾಶ್ರಮವೆಂಬೋ ಸಾವು…

ಇನ್ನು,
ಚಿತ್ರಿಸುವೆನೆಂದೋ ಬೆಳಕ ಕುಂಚವದ್ದೀ
ಛಾಯಾಪೆಟ್ಟಿಗೆಯ ಅಪ್ಪಿ ಮುದ್ದಾಡಿ!

(ಚಿತ್ರ ಕೃಪೆ : ಅಂತರ್ಜಾಲ)

ಪಾತ್ರ ಅನ್ವೇಷಣಾ…


ನಾನಸಲು ಕೆರೆಯೇ ನದಿಯೇ
ಉಪ್ಪುಪ್ಪು ಕಡಲೇ?
ಅರಿಯಬೇಕಿದೆ ಇನ್ನೂ ನನ್ನತನವ…

ಯಾವುದೋ ಮಳೆ ಕನಿಕರಿಸಿ
ಹುಯ್ದರಲ್ಲವೇ ಕೆರೆಗೂ ನೀರು!
ತಳಪಾಯ ಹೂಳುಮಯ
ನಿಂತೀತಾದರೂ ಎಷ್ಟು ಮಡ್ಡಿ ನೀರು?
ಬಿಟ್ಟ ಮರಿಗಳು ಬದುಕಿದರಷ್ಟೇ
ಬುಟ್ಟಿಯಲೂ ಹಿಡಿ ಮೀನು

ತಡೆಗಳಿಗೆ ಜಗ್ಗದೆಯೇ
ಸುರಿವ ಮಲಿನಕೂ ನಾರದೆಯೇ
ಹರಿಯುವುದು ಸಿಹಿ ನೀರು ಮಾತ್ರ
ನದಿಯೋ ನನಗೆ ಅಚ್ಚರಿಯ ಪಾತ್ರ!
ಅಸ್ಥಂಗತ ಪಿನಾಕಿನಿಯ ಹೊರತು
ತೆಪ್ಪವಾದರೂ ತುಂಬೀತು ಮೀನು

ವಿಶಾಲ ಶರಧಿಯು ಮಾತ್ರ
ಯಾರ ನಿಲುಕಿಗೂ ಸಿಗದ ಗಾತ್ರ,
ಅದು ಪರಿಗತ ಬಿಚ್ಚಿಡದು ಒಳಗುದಿ
ಅದಕೂ ಅಂಕುಶ ಘೋರ ಸುನಾಮಿ!
ಕುಡಿಯಲಾರದ ಉಪ್ಪು ನೀರಲೂ
ದೋಣಿಗಟ್ಟಲೆ ದೆಂಡಿ ಮೀನು

ಅಥವಾ,
ಬರೀ ಸೆಲೆಗೆ ಕಾದು ಕುಳಿತ
ಆಮೆ ತೇಲು ಪ್ರಾಕಾರದ
ಇಷ್ಟಗಲ ಬಾವಿಯೇ ನಾನು?

(ಚಿತ್ರ ಕೃಪೆ : ಅಂತರ್ಜಾಲ)

ಸ್ವರ ಸಂಸಾರ…


ಶೃತಿಯ ಹಿಡಿದು
ಸರಸತಿಯ ಪಿಡಿದು
ಗಾನ ಹರಿಸೊ ವೀಣೆಯೇ,
ನನ್ನ ಬಿನ್ನಹ ಕೇಳು ಒಮ್ಮೆಲೆ
ನಾದಗಾತಿಯೇ ತುಸು ತಾಮಸ

ನಿನ್ನ ಸ್ವರದ ಆಲಾಪವೆಲ್ಲವೂ
ಮೀಟು ಬೆಳಲಿನ ಮಾಂತ್ರಿಕತೆ
ಅದರ ಕೃಷಿಯ ಸಾರ್ಥಕತೆ,
ನೀನು ಮರೆತರೆ ಕಲೆಯ ಬೆಲೆಯನ
ಒಲುಮೆಗೆಲ್ಲಿದೆ ಚಿರಂತನ?

ಅಹಮು ಬಿಮ್ಮು ನಿನಗೆ ಸಲ್ಲ,
ನಿನ್ನ ತಂತಿ ತಂತಿಗಳಲು
ಇಲ್ಲ ನಾದ ವೈಭವ,
ಮೀಟು ಬೆರಳ ಒನಪಿನಲ್ಲೇ
ನಿನ್ನ ಜೀವ ಸಂಭವ!

ಬೀಗದಿರಲಿ ಆ ಬೆಳಲೂ
ನಿನ್ನ ವಿನಹ ಅಮೂರ್ತವೇ,
ನೀನು ದಂ ಅವನು ಪತಿ
ಸಮಾಗಮವೇ ಸಂಸಾರ
ಸಪ್ತಸ್ವರ ಮಿಳಿತ ಸಂಸ್ಕಾರ…

’ಗಲ್ಫ್ ಕನ್ನಡಿಗ’ ಈ ಪತ್ರಿಕೆಯಲ್ಲಿ 05.06.2012 ರಲ್ಲಿ ಪ್ರಕಟಿತ
http://www.gulfkannadiga.com/news-67218.html

(ಚಿತ್ರ ಕೃಪೆ : ಅಂತರ್ಜಾಲ)

ಚರಂಡೀಪುರದ ಕಥೆ…


ಬರೀ ಉಬ್ಬುತ್ತ
ಗಬ್ಬು ನಾರುತ್ತ
ಒಳಗೊಳಗೇ ಸಾಯುತಿದೆ
ಚರಂಡೀಪುರ!

ತಿಳಿ ನೀರೂ ನರಕದ ಹೊಳೆ
ಪೆದ್ದು ನೆಲಕೆ ಕಳ್ಳ ಬಸಿರು,
ರಾಗಿಗೆ ಗಾಂಜಾ ಪರ್ಯಾಯ
ದುಡ್ಡು ಬೆಳೆಸಿರಿ ದೆಂಡಿ,
ಮುಡುಪಿನ ಗಂಟೇಕೆ ಸೆರಗಲಿ?
ಅಂದೆಂದೋ ಬೀದಿ ಪಾಲು
ಕಾಮಾಟಿಯ ಪಾತಿವ್ರತ್ಯ!

ಸಾಯಲಿ ಸಂಸ್ಕಾರ
ಕಬಳಿಕೆಯೇ ಸುಲಭ ಮಂತ್ರ,
ನಿಜಾಯತಿಯ ಕೊಂದು
ಅರೆ ಬೆಂದ ಹೆಣ ತೇಲಿಸಿ
ವಿಸರ್ಜನೆ ವಿಷವ ಬಸಿದು
ತೀರ್ಥವೂ ಮಲಿನ ಬಿಂದು,
ದಡ್ಡ ಊರೀಗ ಕೊಳಗೇರಿ

ಕೊಳಕು ಮಂಡಲ ಪ್ರಭೆಗೆ
ಮುಸುಕು ಅಪರಂಜಿ ಹೊಳಪು,
ತಂಪು  ಕನ್ನಡಕದ ಮಾಯೆ
ಒಣ ಮೆದೆಯು ಹಸಿರ ಹುಲ್ಲು,
ಇವರು ಕಾಲಿಟ್ಟ ಮೇಲೇನಿದೆ?
ಐಭೋಗ ಅಮರಾವತಿಯೂ
ಪಾಳು ಹಂಪೆ ಹಳೇಬೀಡು!

ಜೀವಂತ ನದಿ ಪಾತ್ರ,
ಗಠಾರವಾಗಿಸಿದ ಗಿರಿಮೆ
ನಿಮ್ಮದಲ್ಲದೆ ಇನ್ನೇನು?

(ಚಿತ್ರ ಕೃಪೆ : ಅಂತರ್ಜಾಲ)

ಇದೂ ನಾನೇ…

ಅಣ್ಣ ಕೊಟ್ಟ
ಇಪ್ಪತ್ತು ಪೈಸೆ ನಾಣ್ಯಗಳೆಲ್ಲ
ಗೋಲಿಗಳಾಗಿ
ಬೋಟಿಗಳಾಗಿ
ಖರ್ಚಾಗಿ ಹೋದವು,
ಯಾಕೋ
ಗೋಲಕವೇ ತುಂಬಲಿಲ್ಲ!

ಹಳ್ಳಿ ಅಮ್ಮಂದಿರು
ಮನೆ ಬಾಗಿಲಲಿ
ಬಾಯಿ ಬೊಂಬಾಯಿಸಿ
ನನ್ನ ಲೀಲೆಗಳ
ಚಾಡಿಸದಿರಲೆಂದಿದ್ದೇ,
ಅಗಸರ ಪದ್ದಿಯ
ಕತ್ತೆ ಗಲ್ಲಿ ಬಿತ್ತಂತೆ
ಬಾಲಕೆ ಪಟಾಕಿ!

ಟೆಂಟು ಸಿನಿಮಾದಲ್ಲಿ
ಬಾಲ ನಾಗಮ್ಮ…
ರೀಲು ತುಂಡಿಗೆ
ಹಲ್ಲು ಗಿಂಜಿ ತಂದು
ಸಿನಿಮಾ ಬಿಡಬೇಕು!
ಎಡಿಸನ್ ತಗೋ
ನನ್ನ ರಟ್ಟು ಪೆಟ್ಟಿಗೆ
ಒಳಗೆ ಬಲ್ಬಲ್ಲಿ ನೀರು!

(ಚಿತ್ರ ಕೃಪೆ : ಅಂತರ್ಜಾಲ)

ಕಾಮನ ಹುಣ್ಣಿಮೆ…


ಮನ್ಮಥ ವೈರಿ ತೆರೆದಾನೆಷ್ಟು
ಮುಕ್ಕಣ್ಣ ಬಾರಿ ಬಾರೀ?

ವರ್ಣಾಲಂಕಾರ ಬೆವರಿಗೆ ತೊಳೆದು
ನಗುವು ಹಳಸಲಿಡಿದು
ಒಳ ಬಯಕೆಗಳೆಲ್ಲ ಹೊರಗೂ ಒಸರಿ
ನೋಟ ಭಂಗಕ್ಕೆ ಸಿಕ್ಕ ತರಳೆ ಮುದುಡಿದರೂ
ತಿದ್ದಲೇ ಇಲ್ಲ ಅಂತರಂಗ

ಅಸಲು ಸುಟ್ಟೀತೆ ಕಾಮನ ಹುಣ್ಣಿಮೆ?

ವಯಸ್ಸಿನಂತರ ಮೀರಿ
ವಾಮಿ ವರಸೆಗಳೂ ಮರೆಸಿ
ದಕ್ಕಿಸಿಕೊಳ್ಳುವ ಚಪಲ ಚಿತ್ತ,
ಚಾತುರ್ಯ ಸಿದ್ಧಿಗೆ ಒಲಿವ
ಉತ್ಕಟಾಕರ್ಷಣೆಯ ಕ್ಷಣ ಪಿತ್ತ!

ಹುಲ್ಲು ಮೇಯುವ ಮನಕೆ
ಯಾರಾದರೂ ಸೈ ಮೇನಕೆ!
ಆಕ್ರಮಿಸೋ ಹವಣಿಕೆ ಏಕೋ
ಯಾರದೋ ಸೊತ್ತುಗಳನೆಲ್ಲ
ತನ್ನ ಹಳದಿಯ ಕಣ್ಣ ಪರಧಿಗೆ

ಸ್ಪರ್ಶ ಶೃಂಗಾರ
ಮಧುರಾಲಿಂಗನ ಇನ್ನಿತರೇ ಎಲ್ಲ.,
ಬಯಕೆ ಕಾವಿಗೆ ತಟ್ಟನಿಳಿವ
ಕಾಮನೆಯ ತತ್ತಿ!!!

(ಚಿತ್ರ ಕೃಪೆ : ಅಂತರ್ಜಾಲ)

ಸಿಂಗ್ಪೂರ್ ಕಣ್ರೀ – ನಮ್ಮ ಬೆಂಗಳೂರು…


ತಳತಳನೆ ಹೊಳೆವ ಎಂ.ಜಿ. ರೋಡು;
ಸೀಳಿಕೊಂಡ ಬ್ರಿಗೇಡ್ ರೋಡು,
ಹೆಜ್ಜೆಗೊಂಡು ಪಬ್ಬು – ಬಾರು;
ಗಲ್ಲಿಗೊಂಡು ಸೈಬರು…

ಒನ್ ವೇಗಳ ಕರಾಮತ್ತು;
ಮೇಲೆ ಫ್ಲೈ ಓವರ್ರು,
ಎಡಕ್ಕೆ ಪೇ – ಅಂಡ್ – ಪಾರ್ಕು;
ಬಲಕ್ಕೆ ನಿರ್ಮಲ ಟಾಯ್ಲೆಟ್ಟು –
ಮೂತ್ರಕ್ಕೆ ಬರೀ ಎಂಟಾಣೆ!

ಸಿಗ್ನಲ್ಲಿಗೊಬ್ಬ ಕಿಸೆ ಕತ್ತರಿಸೋ ಟ್ರಾಫಿಕ್ಕು;
ಹೊತ್ತೊಯ್ಯಲಿಕ್ಕೆ ಟೈಗರ್ರು,
ಸದಾ ಮಿಣುಕು ಮಿಣುಕು ಟ್ಯೂಬ್ಲೈಟು,
ಪ್ಲಾಸ್ಟಿಕ್ ಗೊಬ್ಬರ ತಿನ್ನೋ ಬೀದಿ ದನ;
ಹಳ್ಳಕ್ಕೊಂದು ಸಸಿ ನೆಡಿ;
ಆಹಾ ಎಂಥಾ ರೋಡು?

ಸರ್ಕಾರಿ ವಾಹನಗಳಿಗೆ
ಭರಪೂರ ಹೊಗೆ – ರಿಯಾಯತಿ;
ಆನಂದ್ರಾವ್ ಸರ್ಕಲ್ಲಿನಲ್ಲಿ –
ವಾಯುಮಾಲಿನ್ಯ ನಿಯಂತ್ರಣ ಅಳಿಯೋ  ಗಾಡಿ!

ಅಬ್ಬಾ ಬೆಂಗ್ಳೂರೇ; ನೀನು ಸಿಂಗ್ಪೂರೇ!

(ಚಿತ್ರ ಕೃಪೆ : ಅಂತರ್ಜಾಲ)

ಮರವಾಗುವುದು…


ಮಾರಗಲ ಕಾಂಡ
ಮೇಲೆ ಊರಗಲ ಅದರ ರೆಂಬೆ ಕೊಂಬೆ;
ಇದೀಗ ಘಟಿಸಲಿಲ್ಲ ಈ ಸಿದ್ಧಿ…
ಹಿಂದೆ ಕರಗಿದ ನೆರಳು
ಬಿಚ್ಚಿಟ್ಟೀತು ನೂರು ಹೋರಾಟ ಗಾಥೆ
ಶತಮಾನದ್ದೋ ಕನಿಷ್ಠ ದಶಕದ್ದೋ ಹೀಗೆ…

ಕುಂಡೆಯೊಳು ಕುಂಡೆಯೂರಿ
ಮುದ್ದುಗೆರೆದಿತ್ತ ಗೊಬ್ಬರವಿತರೆ ಹೀರಿ;
ಬಿಸಿಲು ಕಾಯದ ಕಾಲಕ್ಕೆ ಸೊರಗೋ,
ಗಳಿಗೆ ತಳಿಗಳ ಉದ್ಯಾನವಿದಲ್ಲ…

ಇದು ಬಯಲ ಕಾಡು…

ತಲೆಮಾಸಿದ ಆಸಾಮಿಗಳದೆಲ್ಲ
ದಿನಗೊಂದು ಹಿಂಸೆ!
ಈ ನಡುವೆ ಮರವೂ ಮರವಾಗ ಬೇಕು;
ಮಳೆಗಾಲ ತೊಯ್ದು ಬಿಸಿಲಿಗೆ ಒಣಗಿ
ಚಳಿಗೆ ಮರಗಟ್ಟಿ (!)
ದಿಗ್ಗನೇಳೋ ಕಾಡ್ಗಿಚ್ಚಿಗೂ ಸುಟ್ಟುಕೊಂಡು
ಉಸಿರಿನ ಹಿಡೀ ಹಿಡಿಗೂ ಉಸಿಗಟ್ಟಿ
ಅದರ ಮೇಲೂ ಬದುಕುಳಿಯಬೇಕು…

ಹೊರಗಡೆ ಎಂತೆಂಥ ಬೀಜಗಳು
ಯಾವ ಕಾಲದಿಂದಲೂ ಕಾದದ್ದೇ ಬಂತು;
ನೆಲದ ಮೈಯನು ಸೀಳೋ ತಾಕತ್ತು
ಬೀಜಕಾದರೂ ಜನ್ಮೇಪಿ ಬಂದಿರಬೇಕು!
ಒಪ್ಪಲಾರದು ಭೂಮಿ ಬಿಟ್ಟಿ ಮೈಥುನಕ್ಕೆ…

ತನ್ನದೇ ರೆಂಬೆ ತುದಿಗೆ
ಪಾಪ ನನ್ನಂಥ
ಅಜ್ಞಾತ ಹಕ್ಕಿ ಗೂಡು, ತುಂಬೆಲ್ಲ ಮೊಟ್ಟೆ…
ಕಾದ ಹಾವುಗಳೆಲ್ಲ ಕಾಂಡ ಏರುವಾಗ
ಮೊಟ್ಟೆ ಕಾಯದ ವೃಕ್ಷವೂ ನೊಂದೀತು

ಅಂಥ ಭವ್ಯ ಮರವೂ ಅತ್ತೀತು
ಅಸಹಾಯಕತೆಗೂ ನಿರ್ವೀರ್ಯತೆಗೂ
ಆಗಾಗ…

ಅಲ್ಲಿಗೆ ಅರಿವಿಗೆ ಬಂತೇ
ಮರವಾಗುವುದಷ್ಟು ಸುಲಭವಲ್ಲ!

(ಚಿತ್ರ ಕೃಪೆ : ಅಂತರ್ಜಾಲ)

ದಂಡಯಾತ್ರೆ…


(೧೯೯೨ ರಲ್ಲಿ ಬರೆದ ಒಂದು ಹಳೇ ಕವನ)

ನನ್ನ ಹುಡುಗಿಯರೆಲ್ಲ
ನನ್ನ ನೀರಲ್ಲೇ ಈಜಿ
ದಡ ಸೇರಿಕೊಂಡು,
ಸೇಫ್ ಆಗಿ ಮದುವೆ ಮಾಡಿಕೊಂಡು
ಎಸ್ಕೇಪ್ ಆಗಿ ಹೋದರು

ಆದರೆ, ಈಗಲೂ
ನಾನು ಅದೇ ಪಾಪದ
ಬ್ರಹ್ಮಚಾರಿ…

ಸೈಕಲ್ ಪೋರಿ ಸುಬ್ಬುಲೂ
ಬಸ್ಟಾಪ್ ಗೆಳತಿ ಕಮಲೂ
ಚಡ್ಡೀ ದೋಸ್ತ್ ಮೀನಾಕ್ಷಿ
ಸದಾ ಬಾಲ್ಕಾನಿ ರೂಪಾವತಿ
ಹೈಹೀಲ್ಡ್ ಕುಳ್ಳಿ ವಿಜೀ ಲಕ್ಷೀ
ಗಬ್ಬು ನಾತದ ಪರಿಮಳ
ಹೀಗೆ, ಅದು
ಪರಷ್ಕರಣೆ ಆಗುತ್ತಲೇ ಇದ್ದ
ಮತದಾರರ ಪಟ್ಟಿ!

ಎಲ್ಲರಿಗೂ ಮದುವೆಯಾದಾಗ
ಥೇಟ್! ಪರನಾರಿ ಸೋದರನಂತೆ
ಹರಸಿ ಒಬ್ಬಟ್ಟು ತಿಂದು ಬಂದೆ…

ಸದ್ಯಕ್ಕೆ…
ಹೋಟೆಲ್ ಮೇ ಖಾನಾ
ಆಯಿಲ್ ಮಿಲ್ ಮೇ ಸೋನಾ
ವರ್ತನೆಯಾಗಿ ಹೋಗಿದೆ

ಹುಡುಕಾಟ ಚಾಲ್ತಿಯಲ್ಲಿದೆ
ಹೊಸ ಗರ್ಲ್ ಫ್ರೆಂಡ್ಸಿಗೆ
ಅವರಿಗೂ,
ಮದುವೆ ಫಿಕ್ಸ್ ಆಗೋವರಗೆ!

(ಚಿತ್ರ ಕೃಪೆ : ಅಂತರ್ಜಾಲ)

ನನ್ನ ಕೂಸೇ…


ಕಣ್ಣ ಮುಂದೆಯೇ ಗಿಡವಾಗಿ ಬೆಳೆದೆವಳೇ
ಎದೆಯೆತ್ತರದ ಮಗಳೇ
ನೀನೀಗ ನನ್ನ ಗೆಳತಿ…

ನೀನು ಚಿಕ್ಕವಳಿದ್ದಾಗ
ಅತ್ತಾಗಲೆಲ್ಲ ಎತ್ತಿಕೊಳ್ಳುತ್ತಿದ್ದೆ…
ಅಲ್ಲ ಅಲ್ಲ ಮುದ್ದು ಬಂದಾಗಲೂ ಸಹ!
ಎಷ್ಟು ಪುಟ್ಟದಿತ್ತು ಮರೀ ನಿನ್ನ
ಬೆಳಲುಗಳು ಮೊದಲ ಸಲ
ಹೆರಿಗೆ ಮನೆಯಲಿ ತಾಕಿದಾಗ..

ನಾನಗೋ ಮುಗಿಯದ ಮನೆಗೆಲಸ
ಯಾರನು ಏಗ ಬೇಕೋ! ಮಗುವನೋ?
ಇಲ್ಲ, ಇನ್ನೂ ಕೂಸುತನ ಬಿಡದ ಅಪ್ಪನನೋ?
ನಡುವೆಲ್ಲಿತ್ತು ಹೇಳೇ ಅಂತರ…
ನೀನೋ ದಿನವಿಡೀ ಅಂಟಿಕೊಂಡಿರುತಿದ್ದೆ
ನಿದ್ರಿಸಲೆಲ್ಲಿ ಬಿಟ್ಟಿದ್ದೀ ನೀನಾಗ ನನಗೆ?…

ಮೊದಲು ಬೋರಲು ಬಿದ್ದಾಗ
ಕರ್ಜೀಕಾಯಿ ಕರೆದಿದ್ದೆ, ನಿನ್ನ ಬಾಯಿಗದರ ಚೂರು…
ಮೊದಲು ದೇಕಿದಾಗ ಚಪ್ಪಾಳೆ ತಟ್ಟಿದ್ದೆ
ಗೋಡೆಗಾತು ಪುಟ್ಟ ಹೆಜ್ಜೆಗಳನು
ಊರಿ ಊರಿ ನನ್ನೆಡೆಗೆ ಬಂದಾಗ ಕುಣಿದಾಡಿದ್ದೆ
ಆ ಜೇನ ಹೆಬ್ಬೆರಳನೆಷ್ಟು ಚೀಪಿದೆಯೋ
ಈಗೆಲ್ಲ ಅವೆಲ್ಲ ಆಲ್ಬಮಿನ ಚಿತ್ರಗಳು…

ಹೆಣ್ಣು ಹೆತ್ತವರಿಗೆ ವರ್ಷಗಳು ನಿಮಿಷಗಳು
ಬೆಳವಣಿಗೆ ವಾಯು ವೇಗ!
ನೀನು ನನ್ನೆತ್ತರ
ಮನಸು ಅದಕಿಂತ ಎತ್ತರ!
ಈಗ ನಾನೇ ನಿನ್ನ ಕೂಸು ಮಗಳೇ…

(ಚಿತ್ರ ಕೃಪೆ : ಅಂತರ್ಜಾಲ)

ಸೂರ್ಯ ನಮಸ್ಕಾರ…


ಆ ರವಿಯ ಬೆಳಕಿನಲೇ ಭೂಮಿಯ ಬದುಕು;
ಪಕ್ಷಕಲೆವಾತ್ಮ ತಿಂಗಳನ ಹೊಳಹು!
ಒಂದು ಪರಮಾತ್ಮ ಇನ್ನೊಂದು ಜೀವಾತ್ಮ
ಹುಟ್ಟಿನಿಂದೆರೆಡು ಸೌಮ್ಯ ಬಿಂದು…

ಎವೆಗೂ ನಿಲುಕದೀ ನಭೆಯು
ಶತ ಕೋಟಿ ತಾರೆಗಳ ಸಂತೆ;
ಹಾಳು ಸುರಿದಿದೆ ಬೆಳಕಿನೋಕುಳಿ
ನಡುವೆ ಏನೀ ಗಾಢಾಂಧಕಾರ?

ಏಳು ಕುದುರೆಗಳು ಮೇಲೆ ಸರದಾರ
ಮೂಡಣಕು ಪಡುವಣಕೂ ಸಂಚಾರ;
ತಾನುರಿದು ತನ್ನೊಳಗೆ, ಧಗಧಗಿಸೋ
ಆದಿ ಅಶಾಂತ ರುದ್ರ ರೂಪಿ!

ಕ್ರಮಿಸಿ ಜಗದುದ್ದ ತನ್ನದೇ ಹಾದಿ
ತಣಿದು ತುಸು ತಾನಿಳಿದು ಧರೆಗೀವ ಮುತ್ತು;
ಹಸಿದ ಜೀವ ಜಾಲಕೆ ಅನ್ನವ ಬಸಿದು
ಉಸಿರುಣಿಸಿ ಗುಕ್ಕು ಗುಕ್ಕು…

ಅವನಲ್ಲವೇ ನಿಜಕೂ ದೈವ?
ಕರ್ಣ ಧಾತುವಿನ ಕರುಣೆ ಅಪಾರ,
ಕಪ್ಪು ರಂಧ್ರವು ಬಾರದಿರಲಿ ಎಂದೂ
ಭುವಿಯತ್ತ ಚುಂಬನವು ಸಾಗುತಿರಲೆಂದೂ…

(ಚಿತ್ರ ಕೃಪೆ : ಅಂತರ್ಜಾಲ)

ಉಪನಯನ…


ಅವಳೂ ಬಂದಿದ್ದಳು
ನನ್ನ ಉಪನಯನಕ್ಕೆ
ಕಂಕುಳಲ್ಲಿ ವರ್ಷಾರ್ಧದ ಮಗು!

ಬದಲಾಗಿದ್ದಾಳೆ ಎನಿಸಿತ್ತು
ಮೊದಲಿಗಿಂತಲೂ ಮೈದುಂಬಿಕೊಂಡಿದ್ದಳು
ಕಂಗಳಲ್ಲಿ ಅದೇ ಮಾದಕತೆ

ಎಷ್ಟು ವರ್ಷಗಳಾಗಿತ್ತು
ಇವಳನ್ನ ಹತ್ತಿರದಿಂದ ನೋಡಿ…
ಅವಳು ಹಳದೀ ಸೀರೆಯಲ್ಲಿದ್ದಳು
ಪತಿರಾಯ ಕುಸುರಿಯ ಹಳದೀ ಜುಬ್ಬ
ಮಗುವಿಗೆ ಹಳದೀ ಸ್ವೆಟರ್ರು
ನಾನೂ… ಹಳದೀಮಯನಾಗಿದ್ದೆ
ಜನಿವಾರ ದಟ್ಟಿ ಅಂಗವಸ್ತ್ರ

ಇಂತದೇ ಹಳದೀ ಚೂಡಿಯಲ್ಲಿ
ಅಂದಿನ ಧಗೆ ದಿನಗಳಲ್ಲಿ
ಕ್ರೆಸೆಂಟ್ ಪಾರ್ಕಿನ
ಗುಲ್ಮೊಹರದ ಅಡಿಯಲ್ಲಿ
ಪ್ರೀತಿ ಕಿಚ್ಚು ಹಚ್ಚಿದವಳು

ಭಲೇ ಕಲಾವಿದೆ!
ಹಳತನ್ನ ಮರೆತಂತೆ
ದಿವ್ಯ ನಟನೆ!
ನನ್ನ ಕಣ್ಣಾಲಿಯಲಿ
ದುಮ್ಮಿಕ್ಕಲಾರದೆ ತಡೆದ
ಕಣ್ಣಿರ ಹನಿ…

(ಚಿತ್ರ ಕೃಪೆ : ಅಂತರ್ಜಾಲ)

 

ಪ್ರಳಯಾತಂಕ…


ಮೊದಲೇ ಬದುಕಿ ಸತ್ತವರಿವರು
ಮತ್ತೇಕೆ ಸಾಯ ಬಡಿಯುತ್ತೀರಿ!
ಪ್ರಳಯಾತಂಕವೂ
ಮಾರಬಲ್ಲ ಸರಕೇ ಮಾಧ್ಯಮಕ್ಕೆ?

ಗ್ರಹ ಫಲಾಫಲಗಳೆಲ್ಲ ಲೆಕ್ಕಿಸೋ
ಉದ್ದಾಮ ಪಂಡಿತರೆಲ್ಲದ್ದರೋ ಸುನಾಮಿಸುವಾಗ;
ಶಂಖದಮಲಲಿ ಗಾಂಡೀವಿ
ಪಾಂಚಜನ್ಯವ ಮರೆತು
ದೇವದತ್ತವ ಊದಿದರೆಲ್ಲಿ ಸದ್ದು?

ಪ್ರಳಯದ ಉಮೇದೂ ರೋಗವೇ
ಕಾಣಬಾರದ ಸುಖವೆಲ್ಲ ಹುಡುಕಾಟ
ಉಳಿದಾಯುಷ್ಯ ಲೋಲುಪತೆಗೆ ಮೀಸಲೇ?
ಭಯಗ್ರಸ್ತ ಮಂದಿಗೇಂತ ಸಮೂಹ ಸನ್ನಿ
ಯಾರ ಅಂತ್ಯಕೆ ಯಾರ ಹುಸಿ ಚುಚ್ಚು ಮದ್ದು?

ಭೂಮಿ ಬಿರಿಯುವುದಿಲ್ಲ
ಕಾಲ ಸ್ತಂಭಿಸುವುದಿಲ್ಲ
ಇದು ಬರಿ ತಲೆ ಕೆಟ್ಟವರ ಅಪಪ್ರಚಾರ!
ಕಲ್ಕಿಗಿನ್ನೂ ಕಾಲ ಕೂಡಿಬಂದಿಲ್ಲ
ಕುದುರೆ ಏರುವುದೂ ಹತ್ತಿರದಲಿಲ್ಲ…

ನೆರೆಗೂ ಬರಕೂ ಮಿಡಿಯಲಿ ಮನ
ಒಮ್ಮೆ ನೀರಿಗಾಹಾಕಾರ,
ಮತ್ತೆ ಕೊಚ್ಚಿ ಮುಳುಗಿಸೋ ವರ್ಷಧಾರೆ
ಕಂಗಾಲು ಜನಸ್ತೋಮ ಬರಿಗೈ ಈಗ;
ಎತ್ತೊಕೊಡಿ ನಿಮ್ಮ ತುತ್ತಿನ ಪಾಲ…

ಒಂದೊಮ್ಮೆ ಪ್ರಳಯವಾದರೆ ದಿಟವಾಗೂ
ದಕ್ಕೀತು ಒಳ್ಳೆ ಜನ್ಮ!

ಶೂನ್ಯ ಸೃಷ್ಟಿಗೆ ಕುಂಬಳವು ಸಿದ್ಧಿಸದು
ಉದುರ ಬಲ್ಲದು ಬರೀ ಬೂದಿ!

(ಚಿತ್ರ ಕೃಪೆ : ಅಂತರ್ಜಾಲ)

ನಿರೀಕ್ಷಣ…


ಎಂದಿನವರೆಗೋ ಈ ನಿರೀಕ್ಷಣ
ಯಾವ ವರ ಸಿದ್ಧಿಗೆ ತಪಿಸೋ ಜೀವನ?
ಮುಕ್ತ ರಶ್ಮಿಗೆ ಅರಳೋ ಸ್ಪಂದನ
ಎಂಥಾ ಗಾನದ ಅಮಲಿಗೆ ಪಾವನ
ಚಿರಂತನ ತೆವಲಲಿ ಗೋಳು ಮುದಿತನ

ಅವಚಿಕೊಳ್ಳಲಿ ನೆಲ ನೀರು ಆಕಾಶ
ರಮ್ಯ ಭೂಮಿಯ ಗೋಲಕೂ,
ನಿಲುಕು ಸೂರ್ಯನ ಮೀರಿ ಮಿಂಚಲಿ
ಅಗೋಚರ ಚುಕ್ಕಿ ಚುಕ್ಕಿಯೂ
ಪ್ರಕಟವಾಗಲಿ ಅದರದೂ
ಸುಪ್ತ ಬೃಹತ್ ಪ್ರತಿಭೆಯೂ!

ಪುಟ್ಟ ಹೊಗಳಿಕೆ – ಸಣ್ಣ ಕದಲಿಕೆ
ಬಿರಿದೂ ಬಿರಿಯದ ಹೂ ನಗೆ!
ಹಂಬಲಿಸಿ ಹಂಬಲಿಸಿ ಶಬರಿತನ!
ಗ್ರಹಣಗ್ರಸ್ಥ ಅಲ್ಪ ಬದುಕಿದು,
ಅರಿವಿನೀ ಅಹಂ ಪುಟ್ಟ ಬಾವಿಗೆ
ಕಿರಿದು ನೋಟವು, ಬುದ್ಧಿ ಹಿಡಿ ಗಾತ್ರವು

ನಡುವೆ ಏನಿದು ಮೋಹವೋ!

ಮೇರು ಶಿಖರವು
ನಿಚ್ಚಳಾಕಾಶವ ಹೊಗಳಿದರೆ
ಕಣವೆಯಲರಳೋ
ಅಘ್ರಾಣಿತ ಪುಷ್ಪದಂತಹ
ನನಗೇಕೆ ಸಲ್ಲದ ಪುಳಕವೋ!

(ಚಿತ್ರ ಕೃಪೆ : ಅಂತರ್ಜಾಲ)

ನೆನಪ ಪಳಿಯುಳಿಕೆ…


ನೆನಪ ಪಳಿಯುಳಿಕೆಯಲಿ
ಅವಳ ಹೆಜ್ಜೆಯ ಅಚ್ಚು
ತಾಕಿದಾಗಲೆಲ್ಲ ನನಗೆ ಪುಳಕ

ನೆಲ ಮೋಡ ಸರಸಕೆ
ಎದೆ ಗದ್ದೆ ಬೈಲು ಒದ್ದೆ ಒದ್ದೆ
ನೆಂದಾಳೋ? ನೆಗಡಿಯೋ! ಅಳುಕು

ಹಳ್ಳಿ ಹಾದಿಯಲಿ ನೆರಿಗೆ ಲಂಗವ
ಒದೆದು ನಡೆದವಳ ಕಾಲ್ಗೆಜ್ಜೆ ಗಲುಕ
ಸದ್ಧಿನ್ನೂ ಕಿವಿಯಲೇ ಸ್ತಬ್ಧ

ಕಬ್ಬು ಜಲ್ಲೆ ಸೀಳಿ
ಅಗೆದಗೆದು ರಸ ಹೀರಿದಾಗ
ನಾನೇ ಕಬ್ಬಂತಾಗೋ ಮೆಲುಕು

ಅವಳಿಗೂ ನನ್ನೆತ್ತರದ ಮಗನೀಗ
ನಕ್ಕಾಗ ಅದೇ ಕೆನ್ನೆ ಗುಂಡಿ
ನೆನವಳೋ ಇಲ್ಲವೋ, ಆತಂಕ!

ಕೆಲ ಚಿತ್ರಗಳೇ ಹಾಗೆ, ಚೆನ್ನ ಚೌಕಟ್ಟಿನೊಳಗೇ…

ಮರವಾಗುವುದು…


ಮಾರಗಲ ಕಾಂಡ
ಮೇಲೆ ಊರಗಲ ಅದರ ರೆಂಬೆ ಕೊಂಬೆ;
ಇದೀಗ ಘಟಿಸಲಿಲ್ಲ ಈ ಸಿದ್ಧಿ…
ಹಿಂದೆ ಕರಗಿದ ನೆರಳು
ಬಿಚ್ಚಿಟ್ಟೀತು ನೂರು ಹೋರಾಟ ಗಾಥೆ
ಶತಮಾನದ್ದೋ ಕನಿಷ್ಠ ದಶಕದ್ದೋ ಹೀಗೆ…

ಕುಂಡೆಯೊಳು ಕುಂಡೆಯೂರಿ
ಮುದ್ದುಗೆರೆದಿತ್ತ ಗೊಬ್ಬರವಿತರೆ ಹೀರಿ;
ಬಿಸಿಲು ಕಾಯದ ಕಾಲಕ್ಕೆ ಸೊರಗೋ,
ಗಳಿಗೆ ತಳಿಗಳ ಉದ್ಯಾನವಿದಲ್ಲ…

ಇದು ಬಯಲ ಕಾಡು…

ತಲೆಮಾಸಿದ ಆಸಾಮಿಗಳದೆಲ್ಲ
ದಿನಗೊಂದು ಹಿಂಸೆ!
ಈ ನಡುವೆ ಮರವೂ ಮರವಾಗ ಬೇಕು;
ಮಳೆಗಾಲ ತೊಯ್ದು ಬಿಸಿಲಿಗೆ ಒಣಗಿ
ಚಳಿಗೆ ಮರಗಟ್ಟಿ (!)
ದಿಗ್ಗನೇಳೋ ಕಾಡ್ಗಿಚ್ಚಿಗೂ ಸುಟ್ಟುಕೊಂಡು
ಉಸಿರಿನ ಹಿಡೀ ಹಿಡಿಗೂ ಉಸಿಗಟ್ಟಿ
ಅದರ ಮೇಲೂ ಬದುಕುಳಿಯಬೇಕು…

ಹೊರಗಡೆ ಎಂತೆಂಥ ಬೀಜಗಳು
ಯಾವ ಕಾಲದಿಂದಲೂ ಕಾದದ್ದೇ ಬಂತು;
ನೆಲದ ಮೈಯನು ಸೀಳೋ ತಾಕತ್ತು
ಬೀಜಕಾದರೂ ಜನ್ಮೇಪಿ ಬಂದಿರಬೇಕು!
ಒಪ್ಪಲಾರದು ಭೂಮಿ ಬಿಟ್ಟಿ ಮೈಥುನಕ್ಕೆ…

ತನ್ನದೇ ರೆಂಬೆ ತುದಿಗೆ
ಪಾಪ ನನ್ನಂಥ
ಅಜ್ಞಾತ ಹಕ್ಕಿ ಗೂಡು, ತುಂಬೆಲ್ಲ ಮೊಟ್ಟೆ…
ಕಾದ ಹಾವುಗಳೆಲ್ಲ ಕಾಂಡ ಏರುವಾಗ
ಮೊಟ್ಟೆ ಕಾಯದ ವೃಕ್ಷವೂ ನೊಂದೀತು

ಅಂಥ ಭವ್ಯ ಮರವೂ ಅತ್ತೀತು
ಅಸಹಾಯಕತೆಗೂ ನಿರ್ವೀರ್ಯತೆಗೂ
ಆಗಾಗ…

ಅಲ್ಲಿಗೆ ಅರಿವಿಗೆ ಬಂತೇ
ಮರವಾಗುವುದಷ್ಟು ಸುಲಭವಲ್ಲ!

(ಚಿತ್ರ ಕೃಪೆ : ಅಂತರ್ಜಾಲ)

ಮಧುಮಯ ಸಮಯ…

ನಿನಗಿಂತ ದೊಡ್ಡ ಚೋರಿ
ಇನ್ನಾರಿದ್ದಾರೇ ಹೇಳೆ ಪೋರಿ?

ಕದ್ದೆನ್ನ ಹೃದಯವನೊಮ್ಮೆ
ಮರೆಯಲಿ ಕಿವಿಕೊಟ್ಟು ಕೇಳು
ಅದು ಮಿಡಿಯುತಿಹ ನಿನ್ಹೆಸರ
ಕವನ ಸಂಕಲನವನೊಮ್ಮೆ
ಮನಸಾರೆ ಓದಿ ನೋಡು

ಹತ್ತು ವರುಷಗಳಿಗೂ ಮಿಗಿಲು
ನಲ್ಲೇ ಈ ಪ್ರೇಮ ಸಿಂಧು,
ಸವೆದ ಹಾದಿಯ ಹಿನ್ನೋಟ
ಹಬ್ಬಿ ಬದುಕೆಲ್ಲಾ ದಿವ್ಯ ಗಂಧ
ಅರೆದುಕೊಂಡಿತೀ ತಂತಾನೇ ಕವಿತೆ

ಸುಮ್ಮನೆ ಬಿಮ್ಮನೆ ಕಮ್ಮನೆಯು
ನನ್ನೊಳಗ ನೀನೆಂಬ ಸಂಚಲನ ಕೋಶ
ಉಣಿಸಿದ್ದು ಚೈತನ್ಯ ಪೂರ ಒಳಲೆ
ಯಾವ ಜನ್ಮದ ನಂಟೋ, ಮರೀ!
ಜೀವಮಾನವೂ ಮಧುಮಯ ಸಮಯ…

(ಚಿತ್ರ ಕೃಪೆ : ಅಂತರ್ಜಾಲ)

ಕಾಮಧೇನು…


ಅಭ್ಯುತ್ಥಾನದ ಹುಸಿ ಆಶ್ವಾಸನೆ;
ಅಪ್ರಬುದ್ಧ ಅಕಾಲ ಕಾಮನೆ;
ನಂಜು ಹಿಡಿದಿದೆ ಮೆದುಳು;
ಮುಗಿಲು ಮುಟ್ಟಿದೆ ತ್ರಸ್ತ ಒಡಲು…

ಕಾಣದ್ದ ಕಂಡಂತೆ ಬೆಚ್ಚಿ;
ಹುಳುಕು ಹಲ್ಲುಗಳ ಮುಚ್ಚಿ;
ಸತ್ಯಕ್ಕೆ! ನಿರಂತರ ಆವಿಷ್ಕಾರ;
ಕೆತ್ತು ಕಂಗೆಟ್ಟ ಚೀತ್ಕಾರ…

ಎಲ್ಲಿದ್ದೀ ನನ್ನ ಕಾಮಧೇನು?
ನಾನು ನಾನೇ ಅರಿತಿಲ್ಲದ ಮೇಲೆ
ನೀನು ಯಾರು?

ಎಲ್ಲಪ್ಪನ ಬಸಿರೇ,
ಕಲಸು ಮೇಲೊಗರೇ;
ಉಳಿದು ಎಲ್ಲೋ, ನನ್ನಲ್ಲಿ ಇನ್ನೂ
ನಿರಂತರ ಕಾಡ್ವ ಹೆಣ್ತನದ ಉಸಿರೇ!

(ಚಿತ್ರ ಕೃಪೆ : ಅಂತರ್ಜಾಲ)

ಕದನ ವಿರಾಮ…


ಇನ್ನೂ ಮುನಿಸು ಬೇಡ ಕಣೇ!
ನೀನು ನಾನು ಇಬ್ಬರೇ ಈ ಗುಬ್ಬಚ್ಚೀ ಗೂಡಿನೊಳಗೆ…

ಇರುವುದೇ ಅರೆಪಾವು ಹೊತ್ತು
ಅದರಲೂ ಕಳೆವುದು ನಿದ್ರೆ, ನಸುಕಿನ ನಡಿಗೆ ಹೀಗೆ!
ಇನ್ನು ಗಡಿಯಾರಕ್ಕೆಲ್ಲಿ ಹೃದಯ ಹೇಳು,
ಮುಳ್ಳುಗಳು ಓಡುವವು ಬೇಡದ ವಿರಾಮದಲ್ಲೇ;
ಇಷ್ಟರಲ್ಲೇ ಸಂಸಾರ ತೂಗ ಬೇಕು,
ಸಂಧಿಸಬೇಕು ಎಲ್ಲ ಬಾಣಗಳು ಸರತಿಯಲ್ಲೇ…

ಅಂಟಿ ಕುಳಿತರೂ ಸಾಕು
ನನ್ನ ಬಳಲಿಕೆ ಮರೆಸಲಿಕ್ಕೆ
ಅಷ್ಟೇ ಬಂಗಾರು ನಾನು ಬೇಡೋ ಸಂತೈಕೆ…

ಉಳಿವುದಿಬ್ಬರೇ ಶೇಷ, ಬದುಕಲಿ
ಅಗೆಯದಿರು ನಡುವೆ ಈ ಘೋರ ಪ್ರಪಾತ!
ಮುತ್ತು ಸಿಹಿಯಾಗಿರಲಿ ಒರಟು ದನಿಗಿಂತ,
ಏಕೆಂದರೇ, ಯವ್ವನ ಕಳೆದಿದೆ ನನಗೆ;
ನೀನೂ ಮಾಗಿದ್ದೀಯಲ್ಲವೇ?
ನಾನು ಇರುವುದೇ ಹೀಗೆ
ಹುಂಬ, ಹಳ್ಳಿ ಅದಿರು ಲೋಹ

ಕಟ್ಟಿಕೊಂಡದ್ದೇ ಕದನ ಕುತೂಹಲಕಲ್ಲ
ನಲ್ಲೇ!
ಇದ್ದು ಬಿಡೋಣ ಮರೆತೆಲ್ಲ ಹಳತನ್ನ
ಘೋಷಿಸಿ ಬಿಡು ಕದನ ವಿರಾಮ….

(ಚಿತ್ರ ಕೃಪೆ : ಅಂತರ್ಜಾಲ)

ಗುರುತ್ವಾಕರ್ಷಣೆ…

ನಿಮ್ಮ ತಾಕಿದೀ ತಾಕು
ತಲುಪಿಸಿ ಬಿಡಿ ನನ್ನ ಗುರುವು ತನಕ;
ಏಕೆಂದರೀಗೀಗ ನನ್ನ ಕೂಗಿಗೂ
ನಿಲುಕದೆತ್ತರ ಅವರ ರೂಪು…

ದನಿ ಚಹರೆ ಬರವಣಿಗೆ; ನನ್ನೆಡೆಗೆ
ಅಕ್ಷರದ ಅಚ್ಚರಿಯ ಗುರುತ್ವಾಕರ್ಷಣೆ,
ತಿಳಿಸಿ ಬಿಡಿ ಇನ್ನೂ ಈ ತುದಿಯಲುಳಿದಿದೆ
ಮಿಡಿವುದದೇ ಹಚ್ಚ ಹಳೇ ಪ್ರೀತಿ

ತಲುಪಿಸಿ ಬಿಡಿ ಇನ್ನೂ ಉಸಿರಾಡೋ
ಈ ಭಕ್ತನಲ್ಲಿರೋ ಅಮಾಯಕ ಭಾವ,
ತಳ್ಳಿದಷ್ಟೂ ಮತ್ತೂ ಹತ್ತಿರವಾಗೋ
ಹುಚ್ಚುತನ ಕಾವಲು ಸ್ವಭಾವ!

ಅಂದೆಲ್ಲ ಗುಡಿಗೇರೋ
ಮೆಟ್ಟಿಲಷ್ಟೇ ದೂರ ಗರ್ಭ ಗುಡಿ
ಒಳಗಣ ದೇವರೂ ಉಸಿರಂತರ…
ಇಂದದೇ ಹಿಮಗಿರಿಗೂ
ಮೇಲು ಶಿಖರಾಗ್ರ ಅದರ ತುದಿ
ಸೂಜಿ ಮೊನೆ, ನಿಲ್ಲ ಬಲ್ಲಿನೇ ಹೇಳಿ?

ಗುರುವಿನ ಒಡನಾಡಿ ನೀವು!
ಸಿಕ್ಕಾಗಲೊಮ್ಮೆ ಹೇಳಿ ನೋಡಿ;
ಮರೆವು ಮೀರಿದ ಗುರುವು
ಮುನಿಯಬಾರದು ಹೀಗೆಲ್ಲ ಅಂತ…

ಬೆಳಕ ಕೊಡುವವರೇ ಬೆನ್ನ ತಿರುವಿದರೇ
ಶಾಪಗ್ರಸ್ತ ಸೂರ್ಯ ಪಾನರು ನಾವು,
ಏನು ಮಾಡಬೇಕು?

(ಚಿತ್ರ ಕೃಪೆ : ಅಂತರ್ಜಾಲ)

ಮಿರ್ಜಾ ಗಾಲೀಬನ ಗಜ಼ಲು – 2


(ಇಂಗ್ಲೀಷ್ ಅವತರಣಿಕೆಯಿಂದ)
(ಭಾವಾನುವಾದದ ಪ್ರಯತ್ನ)


ಹೂವ ಮೇಲೊಂದು ಇಬ್ಬನಿಯ ಬಿಂದು,
  ಕಣ್ಣೀರೋ ಅದು ಮತ್ತೊಂದೋ?
ನನ್ನ ಸುಟ್ಟ ಗಾಯಗಳ ಹಿಂದಿದ್ದಾಳೆ,
  ಅವಳೇ ಆ ಕ್ರೂರಿ ಹೆಣ್ಣು…


ಮುಂಜಾವು ಒಂದಿಡೀ ಬೂದಿ,
  ಕೋಗಿಲೆಯೂ ಸಹ ಕಪ್ಪನೆ ಚಿನ್ಹೆ;
ಬೆಂದ ಹೃದಯದ ಚೀತ್ಕಾರ,
  ಅವಳಿಗೇನೂ ಅಲ್ಲವೇ ಅಲ್ಲ!


ಅಗ್ನಿ ಏನು ಮಾಡಬಲ್ಲದು ಹೇಳಿ?
  ಕೆನ್ನಾಲಿಗೆ ಸಾಕಲ್ಲವೇ ಸುಡಲಿಕ್ಕೆ;
ಎಷ್ಟು ನೋವ ತಿನ್ನಲಿ ಹೇಳಿ,
  ಹೇಳಿ ಮುಚ್ಚಿಕೊಳ್ಳಲಿ ಇನ್ನೆಷ್ಟು ಗಾಯ?


ಪ್ರೇಮ ಕೈದಿಯ ಅಳಲು;
  ಪ್ರೇಮ ಕೈದಿಗೇ ತಿಳಿದಾವು,
ನೋಡಿ ಸ್ವಾಮಿ! ನನ್ನ ಬದುಕ
  ಸಿಕ್ಕಿಕೊಂಡಿದೆ ಚಪ್ಪಡಿ ಅಡಿಯಲ್ಲಿ


ಓ ಸೂರ್ಯ ದೇವ!
  ಧರೆಗೆಲ್ಲ ಬೆಳಕನೀಯುವವನೇ,
ಕೃಪೆ ತೋರಿ ಕಣ್ಣ ತೆರೆ;
  ಚಾಚಿಕೊಂಡಿದೆ ಕಾಲನ ದೀರ್ಘ ನೆರಳು

(ಚಿತ್ರ ಕೃಪೆ : ಅಂತರ್ಜಾಲ)

ಮಿರ್ಜಾ ಗಾಲೀಬನ ಗಜ಼ಲು : ೧

(ಇಂಗ್ಲೀಷ್ ಅವತರಣಿಕೆಯಿಂದ)
(ಭಾವಾನುವಾದದ ಪ್ರಯತ್ನ)

ನನ್ನೊಳಗೆ ತುಂಬಿರುವ ತೀರದಾಸೆಗಳ
ಖಾತೆ ಕರಗಲು ಬೇಕು ಮರು ಜನ್ಮ
ಗಿಟ್ಟಿದ್ದು ಗುಲಗಂಜಿ; ನೆನೆದದ್ದು ಆಕಾಶ
ದಕ್ಕಬಲ್ಲವೇ ಹೇಳಿ ಈ ಜನ್ಮದಲ್ಲಿ?

ನಿಮಗೂ ಗೊತ್ತಿದೆ ಈಗ ಆದೆಮ್ ಸ್ವರ್ಗವಾಸಿ
ಭೋರಿಟ್ಟು ಅತ್ತರಂತೆ ಈಡನ್ ಬಿಡುವಾಗ
ದೋಸ್ತ! ನಾನೂ ಹೊರಟು ಬಂದವನೇ ನಿಮ್ಮಿಂದ
ಪೀಡೆ ಕಳೆಯಿತೆಂಬಂತೆ ಕುಣಿದಾಡಿದಿರಂತೆ!

ಆಗೆಲ್ಲ ಕುಡಿತವೆಂದೆ ಗಾಲಿಬ್;
ಗಾಲಿಬ್ ಎಂದರೆ ಕುಡಿತ
ಹಾಗಿತು ನೋಡಿ ನನ್ನ ಜಮಾನಾ
ಮತ್ತೊಂದು ಶಕೆ ಬಂದಂತಿದೆ, ನೋಡಬೇಕು
ಜಂಶೇಡನ ಬಟ್ಟಲಿನಲ್ಲಿ ಕಾಣುವುದು ಏನೋ?

ಅರೆ ಭಾಯಿ ಸಾಹೇಬ! ನಾನು ಕೇಳಿದ್ದಾದರೂ ಏನು
ನನ್ನ ಸೋಲಿಗೆ ನಿನ್ನ ಸಮಾಧಾನ
ಹೇಗೆ ಅರೆತೇನು ನೀನು ಗದ್ಧಾರ್ ಮಗನೆಂದು
ಕಾದು ಇಕ್ಕುತ್ತೀಯಂತ ಬೆನ್ಗೆ ಚೂರಿ

ಓ! ಪ್ರವಾದಿಯೇ, ಅಲ್ಲಾಹುವಿನಾಣೆ
ಸರಿಸದಿರು ನೀನು ಖ್ವಾಬಾದ ಹೊದಿಕೆ
ಗಾಲಿಬ್! ನಿನ್ನ ಗ್ರಹಚಾರದ ಹಣೆ ಬರಹಕ್ಕೆ
ಅಲ್ಲಿ ಕಲ್ಲು ದೇವರು ನಿಂತು ಗಹ ಗಹಿಸಿ ನಕ್ಕೀತು…

___________________________________

ಜಂಶೇಡ: ಪರ್ಷಿಯನ್ ದೊರೆ, ಇವನ ಬಳಿ ಇದ್ದ
ಮಾಯಾ ಬಟ್ಟಲಿನಲ್ಲಿ ಭೂತ, ಭವಿಷ್ಯತ್ ಮತ್ತು ವರ್ತಮಾನ
ಕಾಲಗಳು ಕಾಣುತ್ತಿದ್ದವೆಂಬ ನಂಬಿಕೆ.

(ಚಿತ್ರ ಕೃಪೆ : ಅಂತರ್ಜಾಲ)

ಗಡಿಯಾರವೂ ಹೆಂಡತಿಯೂ…


ಗಡಿಯಾರಕೂ ಹೆಂಡತಿಗೂ
ಹೋಲಿಕೆ ಮಹಾಪೂರ!
ಅಲ್ಲಿ ಮುಳ್ಳು ಗೋಚರ
ಇಲ್ಲಿ ಮುಳ್ಳು ಅಗೋಚರ?

ಕೆಲವು ಸಪೂರ, ಸುಲಲಿತ
ಸ್ವಯಂ ಚಾಲಿತ, ನಿಶ್ಯಬ್ಧ
ಗತಿಯೂ ಸ್ಪಷ್ಟ, ನೋಟವೂ ರಮ್ಯ,
ಕಟ್ಟೊಕೊಂಡದ್ದಕ್ಕೂ ನೆಮ್ಮದಿ…

ಇನ್ನು ಬಹು ಸಂಖ್ಯಾತವೋ
ಯಮ ತೂಕ, ಬೃಹತ್ ಆಕಾರ
ಹಿಂಸಾ ಪ್ರವೃತ್ತಿ, ಕರ್ಣ ಕಠೋರ,
ನಿತ್ಯವೂ ಕೊಡಲೇ ಬೇಕು ಕೀಲಿ!

“ಹೆಣ್ಣು ಹೊನ್ನು ಮಣ್ಣು”
ದಾಸರೇ ನುಡಿದಂತೆ ’ಪ್ರಾಪ್ತಿ’!
ಹಾಗೇ ನಾವು ಕಟ್ಟಿಕೊಳ್ಳುವ
ಗಡಿಯಾರವೂ ಹೆಂಡತಿಯೂ…

(ಚಿತ್ರ ಕೃಪೆ : ಅಂತರ್ಜಾಲ)

ದೊಡ್ಡವರು ಸತ್ತರೆ…


ಖ್ಯಾತನಾಮರು ತೀರಿಕೊಂಡರು
ಪತ್ರಿಕೆ ಟೀವಿ ರೇಡಿಯೋ
ತುಂಬೆಲ್ಲ ಸಾವಿನದೇ ಸುದ್ದಿ…
ಹಿನ್ನಲೆಗೆ ಕುಯ್ಯುವುದು ಪಿಟೀಲು!
ಚಿತ್ರಪಟ ಮುಳುಗುವವರೆಗೂ
ಮಾರುಕಟ್ಟೆಯ ಅಳಿದುಳಿದ ಹೂವು
ಶೋಕ ಸಭೆಯಲಿ ಕಿಕ್ಕಿರಿದ ಮಂದಿ
ಕರೆಂಟು ಕಂಬಕೊಂದು ಫ್ಲೆಕ್ಸು

“ದೊಡ್ಡ ಮರ ಉರುಳಿತು”
“ತುಂಬಲಾರದ ನಷ್ಟ”
“ದಿಕ್ಕು ತಪ್ಪಿದ ಅಭಿಮಾನಿ ಬಳಗ”
ಮುಗಿಬಿದ್ದ ಗಣ್ಯರ ಹೇಳಿಕೆಗಳು
ವಾರ್ಡಿನಿಂದೆತ್ತಿ ಮಾರ್ಚರಿಗೆಸೆವಾಗ
ಎಲ್ಲಿ ಮಲಗಿತ್ತೋ?
ಅಪಾರ ಬಂಧು ಬಳಗ ಅಭಿಮಾನಿ ಸಮೂಹ?..

ಸತ್ತವನ ಹೆಂಡತಿಗೋ
ಮರುಜನ್ಮಕೂ ತೀರದ ಸಾಲ ಬಾಧೆ
ಅವನ ಸಾಧನೆ, ಬಿರುದು, ಗೌರವ
ಎಂದು ತುಂಬಿತ್ತು ಗಂಜಿ ಪಾತ್ರೆ?
ತಾಳಿ ಕಾಲುಂಗುರ ಕರಗಿದರೂ
ಮುರಿಯಲಿಲ್ಲ ಆಸ್ಪತ್ರೆ ಬಿಲ್ಲು
ಫುಲ್ ಬಾಟಲಿಗಷ್ಟೆ ಕೊಡುಗೈ ದಾನಿಗಳು

ಭೋ! ರಸಿಕನೀತ
ಎಲ್ಲೆಲ್ಲಿ ಉಪಪತ್ನಿಯರೋ
ಪಿನ್ಕೋಡಿಗೆಷ್ಟು ಮಕ್ಕಳೋ?
ಉಳಿದ ಗುಡಿಲು ಸೂರಿಗೂ
ಎಲ್ಲಿ ಕಾದಿದ್ದಾನೋ ನೆಲಗಳ್ಳ
ಅವಳಿಗೆ ನೂರು ಚಿಂತೆ

ಸರ್ಕಾರಿ ಖರ್ಚಿನಲಿ
ಬಡಕಲು ಹೆಣಕೊಂದು ಶೀತಲ ಪೆಟ್ಟಿಗೆ
ಸಂಜೆಗೆ ಊರೆಲ್ಲ ಮೆರವಣಿಗೆ
ಗಾಡಿಯ ಹಿಂದೆ, ಮನೆ ತಾರಸಿ ಮೇಲೆ
ರಸ್ತೆ ಇಕ್ಕೆಲಕ್ಕೂ ಜನವೋ ಜನ..

ಆಗಲೇ ಅವರಿಗೂ ಅರಿವಾದದ್ದು
ಹೀಗೊಬ್ಬ ನಡುವೆ ಜೀವಿಸಿದ್ದ…

ಶ್ರೀಗಂಧ ಮರ ಮೇಲೆ ಶುದ್ಧ ತುಪ್ಪ
ಧಗಿಧಗಿಸಿ ಉರಿವಾಗ ಚಿತೆ
ಸುದ್ದಿವಾಹಿಗದೇ ನೇರ ಪ್ರಸಾರ!
ಕಥೆ ಮುಗಿಯಿತೇ?
ಇನ್ನೂ ಇದೆ ತಡೆದುಕೊಳ್ಳಿ…
ಇನ್ನು ಎತ್ತಿರಿ ಚಂದ, ಎಬ್ಬಿಸಲು ಶಿಲಾ ವಿಗ್ರಹ
ಯಾವನೋ ತಲೆ ಮಾಸಿದವನು
ಛಾಪಿಸಿದೆ ಸ್ಮಾರಕದ ಲೆಟರ್ ಹೆಡ್ಡು
ಬಿಡುಗಡೆಯೂ ಆಗಿ ಹೋಗಲಿ
ಬಡ್ಜೆಟ್ಟಿನ ಒಂದಷ್ಟು ಕೋಟಿ…

(ಚಿತ್ರ ಕೃಪೆ : ಅಂತರ್ಜಾಲ)

ಬದುಕಿನ ಓಟ…


ಹುಚ್ಚು ಕುದುರೆಯ
ಓಟವೀ ಬದುಕು
ಲಗಾಮು ಕಳೆದಿದೆ
ಪಯಣ ಬೀಭಿತ್ಸ…

ಮೇಲೆ ಅಹಮ್ಮಿನ
ಗಾಢ ಪೊರೆ?
ಹಾದಿ ಅಗೋಚರ;
ಮಿಥ್ಯಾ ಲೋಕ…

ಹೂವ ಹಾಸಿಗೆ
ಎಂದೇನು ಹಿಗ್ಗದಿರು
ಕೆಳಗೆ ನಕ್ಕೀತು
ವಿಷದ ಮುಳ್ಳು!

(ಚಿತ್ರ ಕೃಪೆ : ಅಂತರ್ಜಾಲ)

ಕೆಟ್ಟ ಗಾಳಿ…

ಅಗೆದ ಬಾವಿಗಳನೆಲ್ಲ
ಕೆದಕೆದಕಿ ಕೇಳುತಲಿದ್ದೆ
ನಿನ್ನ ನೀರದು ನನಗೇ ಏಕೆ ಉಪ್ಪು?
ಆಳ ಕಾಣದ ಕತ್ತಲಲಿ ಕಳೆಯಿತು ದನಿ
ಬರಿಯ ಮಾರ್ಧನಿ ನನ್ನದೇ ಉಸಿರು

ನನ್ನ ಹಾದಿಯೇ ತಪ್ಪೇ
ಗೊತ್ತಿರದ ಜವುಗು ಭೂಮಿ
ನಡೆ ನಡೆಗೂ ಜಾರು ಪಾದ
ಚುಚ್ಚೋ ನೂರು ಮುಳ್ಳುಗಂಟಿ,
ಆಸರೆಗೆ ಮತ್ತದೇ ಗಾಳಿ
ಹೆಣದ ಮನೆ ವಾಸನೆ ನೆನಪು…

ಕೆಟ್ಟ ಗಾಳಿಗೆ ಪುಪ್ಪಸವು ಒತ್ತುತಿದೆ
ಆಮ್ಲಜನಕವ ಕೊಡು ಅಜ್ಜಯ್ಯ!
ಮೈ ಪೂರ ಬೊಬ್ಬೆಗಳು ಕಾಣವು ನಿನಗೆ,
ನೆನೆಯಬಾರದ ಆಮ್ಲ ಮಳೆಗೆ ಸಿಕ್ಕು!
ಬಿರುಗಾಳಿಗೆದ್ದ ತರಗೆಲೆ ಮನಸು
ತಹಬದಿಗೆ ಬಂದೀತೆ ಬೇಗ?

ನನ್ನ ಹೆಸರೇ ಸೋಲೇ ಹೇಳು
ಸ್ವಾಮಿ ಕರಿಬಸವೇಶ್ವರ?
ಉಕ್ಕಡಗಾತ್ರಿಯು ಕಿವುಡೇ ಈಗ!

(ಚಿತ್ರ ಕೃಪೆ : ಅಂತರ್ಜಾಲ)

ದೇವರೂ ದೇವರಂಥವನೇ…

ಜಗದೋದ್ಧಾರಕನೇ ಸರಳುಗಳ ಹಿಂದೆ ತಾ ಬಂಧಿ
ಪುತ್ಥಳಿಗೆ ಮಣಭಾರ ಬಂಗಾರ
ಎಂತೆಂಥವೋ ರತ್ನಾಭರಣದಲಂಕಾರ;
ಶಿಲ್ಪ ಚಾತುರ್ಯವೇ ಮೆರೆವ ಖಾಲಿ ಗುಡಿ
ಗಂಟೆಗಳ ಕಲರವವಿಲ್ಲ, ಆರತಿ ಬೆಳಗುವುದಿಲ್ಲ…

ಎದ್ದು ಬಿದ್ದು ಬೆವರಿಳಿಸಿ, ಒಡ್ಡುಗಳಲೆಲ್ಲ ಕಕ್ಕಿ
ತೀರ್ಥಕ್ಷೇತ್ರವಿಳಿದರೆ ದೇವರೆಲ್ಲಿದ್ದಾನೆ ಅಲ್ಲಿ?
ಕೇಶ ಮುಂಡನ, ಪಾಚಿ ಕಲ್ಯಾಣಿಯಲಿ ಮೂರು ಮುಳುಗು
ಹಣೆಗೆ ಉದ್ದುದ್ದ ನಾಮ, ಪಾಪ ಕರ್ಮ ಭುಜಾಂತರಿಸಿದ ಭ್ರಮೆ!
ಸೇವೆಗೊಂದಾವರ್ತಿ ಕಿಂಡಿ, ಆಳುದ್ದ ಹುಂಡಿ

ಬಂಡವಾಳಕೆ ತಕ್ಕ ಸಾಲು ಸಾಲಲೂ ಜನ
ತಳ್ಳು ದರ್ಶನ ಭಾಗ್ಯ; ರೆಪ್ಪೆ ಬಡೆವಷ್ಟು ಹೊತ್ತು
ಮಂದ ಬೆಳಕಲೆಲ್ಲಿ ಗೋಚರ ಅವನ ಭಾವ?
ಖಾದಿಗಿದೆ ಮೈಲಿಗೆ ವಿನಾಯತಿ; ಜಾಗಟೆ, ಡೋಲು
ಮಂತ್ರ ಪುಷ್ಪ ಇನ್ನಿತರೆ ಮೇಲೆ ಪೂರ್ಣ ಕುಂಭ

ಗುಡಿಯೇ ಅಂಗಡಿಯಾದ ಮೇಲೆ ಎಲ್ಲಿದೆ ಬಕುತಿ
ನೋಡಿ ನೋಡಿಯೇ ಅವನೂ ಕಲ್ಲಾಗಿ ಕುಳಿತ!
ಕೈಗಳೆಲ್ಲ ಅಸ್ತ್ರಮಯ, ಆದರೂ ಎತ್ತಲೊಲ್ಲ,
ತಟ್ಟೆ ಕಾಸಿನ ಸದ್ದೇ ಕೇಳದೆ
ಹನಿ ತೀರ್ಥವೂ ಅಂಗೈಗೆ ಬೀಳಲೊಲ್ಲ…

ಘಜ್ನಿ ಘಾತಕೆ ಆಲಯ ಗೋಪುರಗಳೇ ಭಗ್ನವಾದರೂ
ಒಳಗಿದ್ದ ನಗ ನಾಣ್ಯ ವಿಗ್ರಹಗಳೇ ಲೂಟಿಯಾದರೂ,
ಭ್ರಾಂತ ರೋಗಿಷ್ಠ ಹುಚ್ಚು ಮಂದಿ
ಕಿತ್ತೆಸೆದರೂ ಇವರ ದೇವರುಗಳ ಅವರು
ಪರಮಾತ್ಮ ಆಗಲೂ ತುಟಿ ಬಿಚ್ಚಲಿಲ್ಲ!

ಬಯಲ ದೇವರು ಕೇಳುವನೇ ಆಲಯ ದತ್ತಿ
ಹರೆಸುವನೇ ಹರಿಸಿದರೆ ಬಲಿಯ ರಕ್ತ
ಮುನಿಯುವನೇ ಬಡಿಯುವನೇ ಬರವ ಊರಿಗೆಲ್ಲಾ
ಯಾರನ್ನ ಪ್ರಶ್ನಿಸುವಿರಿ; ಇಲ್ಲಿ ಅವನೇ ಮೌನಿ
ದೇವರೂ ದೇವರಂಥವನೇ ತಾನೆ?

ಪ್ರಶ್ನ ಪತ್ರಿಕೆಯಲೇಕೆ ಹುಡುಕುತ್ತೀರಿ
ಉತ್ತರವನ್ನೇ…

(ಚಿತ್ರ ಕೃಪೆ : ಅಂತರ್ಜಾಲ)

ಸಂಧ್ಯಾ ರಾಗ…

ಹೊರಟು ನಿಂತಿರೇ ದೊರೆ..
ಇರುಳು ಕರಗಿತೇ ಇಷ್ಟು ಬೇಗ?
ಒಂದೂ ಮಾತಿರಲಿಲ್ಲ
ಬೆಸೆದ ಮನಗಳ ನಡುವೆ; ಹೆಪ್ಪುಗಟ್ಟಿತ್ತು ಮೌನ
ಮತ್ತೆ ಮೊದಲಂತಿರಲಿಲ್ಲೇಕೆ?
ಪ್ರೇಮ ಬಾಂದಳದಲ್ಲಿ ಪ್ರಣಯ ಹಕ್ಕಿ

ಸಾವಿರ ಬೇಸಿಗೆಗಳಲ್ಲಿ ತಂಪಾಗಿ ಇದ್ದೇನು
ನಿಮ್ಮಾಣೆ!
ಮಂಜಿಗಿಂತಲು ತಂಪು ನಿಮ್ಮ ನೆನಹು
ಹಾಸಿಟ್ಟ ಗರಿ ಗರಿ ಚಾದರಕ್ಕೇನು ಗೊತ್ತು
ಇನ್ನೆಷ್ಟು ಹೊತ್ತು ಈ ಬಿನ್ನಾಣ
ಮುಡಿದ ಮಲ್ಲಿಗೆಗೂ ಗೊತ್ತೇ ತನ್ನ ಅಂತ್ಯ?

ದೊರೆ!… ಮೊಜಾವಿನ ಕಲರವದಷ್ಟೇ
ಗೋಧೂಳಿ ಸಮಯಕೂ ನನ್ನ ನಿಷ್ಠೆ
ಅದು ಎಂದೋ ಹಚ್ಚಿಟ್ಟ ನಂದಾದೀಪ

ಸಂತೃಪ್ತ ನನ್ನ ಕಣ್ಣಾಲಿಗಳಲ್ಲಿ,
ಚಕ್ರತೀರ್ಥ
ನಿಮಗೋ ಬರುವ ಮಾರ್ನವಮವಿಗೆ ಪೂರಾ ಎಂಬತ್ತು
ಎಂಟು ಹೆತ್ತವಳು ನಾನು, ಅವಕ್ಕೆ ಮತ್ತೂ ಅವಕ್ಕೆ
ಎಣಿಸಿದರೆ ಹೋದ ಷಷ್ಟ್ಯಬ್ದಿಗೇ ನೋರ ಹನ್ನೊಂದು

ಮತ್ತವೇ ಚಿತ್ರಗಳು,
ನಾನು ಹಾರ್ಮೋನಿಯಂ ಮುಂದೆ
ನೀವು ಅವರೇ ಕಾಳು ಉಪ್ಪಿಟ್ಟಿನ ಮುಂದೆ
ತುಟಿಯಂಚಲೆಂತದೋ ತುಂಟ ನಗೆ
ತಿಂಗಳೊಪ್ಪತ್ತಿನಲ್ಲಿ
ನನ್ನ ಮನೆಯಂಗಳದಿ ಚಪ್ಪರ!..

(ಚಿತ್ರ ಕೃಪೆ : ಅಂತರ್ಜಾಲ)

ಬೇಸಿಗೆ ಬಲು ಹೇಸಿಗೆ!


ಬಿಸಿಲು ಕಾದಿದೆ
ಮೊದಲೇ ಸೋಮಾರಿ ದೇಹ!
ಮೇಲೆ ಕೆಂಡದಂತಹ ಸೂರ್ಯ…

ಬೇಸಿಗೆ ಬಲು ಹೇಸಿಗೆ…

ಸೆಖೆಗೆ ಕೂಸು ದಿನವೆಲ್ಲ
ಅತ್ತು ಅತ್ತು
ತಾಯಿ ಶಪಿಸುವಳು
ಬೇಸಿಗೆ ಬಲು ಹೇಸಿಗೆ…

ಮಿಂದ ಬಚ್ಚಲ ಬೇಯು ಗಾಳಿ
ಎಂಥ ವಿರಹಿ ನಾನು,
ಎಂಥ ಚಡಪಡಿಕೆ
ತಂಪು ಗಾಳಿಗೂ ಬರವೇ ತಂದೆ?

(ಚಿತ್ರ ಕೃಪೆ : ಅಂತರ್ಜಾಲ)

ಈಕ್ಲಿಪಸ್ ಮರ…

ಅಷ್ಟೆತ್ತರಕ್ಕೆ ಬೆಳೆದು ನಿಂತು
ಅಂಬರಕೆ ಚುಂಬನವೀಯುತಿದೆ
ಒಂದು ಈಕ್ಲಿಪಸ್ ಮರ…

ಪಾಪ! ಅದರ ಕರ್ಮ
ಎತ್ತರಕೆ ಏರಿದಷ್ಟೂ
ಅದಕೆ ಕೊಡಲಿ ಏಟಿನ
ರಭಸ ತೀವ್ರ

ಪಾತಿ ಮಾಡಲಿಲ್ಲ
ಕೊಡ ಕೊಡ ನೀರೆರೆದು
ನಿದ್ದೆಗೆಟ್ಟು ಚಪ್ಪರವೇರಲಿಲ್ಲ;
ನೆಲ ನಿಮ್ಮ ಹೆಸರಿಲ್ಲಿದ್ದರಾಯ್ತು
ಒಂದಡಿ ಗುಣಿ ಬಗೆದು
ಗಿಡವಿರಿಸಿ; ಮಣ್ಣು ಮುಚ್ಚಿ
ನೀರ ಚಿಮುಕಿಸಿದ್ದಷ್ಟೇ ನೆನಪು…

ಸುತ್ತಲೂ
ನೀರು ಸಾರಂಶ ಗೊಬ್ಬರ ಬಿಸಿಲು
ಹೀರಿ ಇಪ್ಪತ್ತಡಿ ಬೆಳೆದ
ಮರ – ಕಡಿಯಲಿಕ್ಕೇನಿದೆ ಹಕ್ಕು?

ಇದಷ್ಟೇ ಏಕೆ?
ಸ್ವಾಮಿ!
ಹಲವಿವೆ ಇಂತವೇ ಸ್ವಾರ್ಥಗಳು
ಸಾಮಾಜಿಕ ನೆರಳಲ್ಲೋ…
ನಾಗರೀಕತೆಯ ತಳುಕಲ್ಲೋ…
ಧಾರ್ಮಿಕತೆಯ ಸೋಗಿನಲ್ಲೋ…
ನಿರಂತರ ಪಾಪ ಕರ್ಮಗಳು

ಮರ ಕಡಿದಷ್ಟು ಸಲೀಲಸಲ್ಲ
ಒಂದು ಮರ ಬೆಳೆಯಲು…

(ಚಿತ್ರ ಕೃಪೆ : ಅಂತರ್ಜಾಲ)

ಮುಂಬೈ ರಕ್ಕಸ ತಂಗಡಿ…


ಕುಡಿಕೆಯೊಳೇ ಮೊಳಕೆ
ಕುಡಿಕೆಯೊಳೇ ಸಂಗ್ರಹ
ಕಡೆಗೆ ಹಿಡಿ ಚಿತಾಭಸ್ಮ
ಯಾವುದಿದೆ ಆ ಧರ್ಮ
ಚಿರಂತನ ಭ್ರಮೆ ಕರ್ಮ
ಅಮೃತವೂ ಕಳ್ಳ ಭಟ್ಟಿ!

ಮುಕ್ಕಾಲು ಗೋಲಕೂ ಕವಿದ
ಕುಡಿಯಲಾರದ ಉಪ್ಪುಪ್ಪು ನೀರು
ತುಂಡು ನೆಲ ಕೂಪ ಮಂಡೂಕ
ನುಡಿ ಬೇಲಿ ಇನ್ನಿತರೇ ನಜರು
ಶಿಲ್ಪಿಗೂ ಮರೆಗುಳಿ ಈ ಸೃಷ್ಟಿ
ಅಲ್ಪ ಬುದ್ಧಿ ನೆರೆಮನೆ ಕುತಂತ್ರೀ!

ಕಾಯಬಲ್ಲವೇ ಮುರಿದ ಲಾಠಿಗಳು
ಸರಣಿ ಸ್ಫೋಟ, ಬಂದೂಕು ಮೊರೆತ?
ಹಿಂದೆ ತಿವಿದಟ್ಟಿ, ಸಂತಾಪಿಸೋ
ಜಗತ್ ರಕ್ಷಕ ಪೋಸು ಕೊಡೋ ದೇಶ!
ಗಗನ ಚುಂಬಿಗೂ ಉಕ್ಕು ಹಕ್ಕಿ ತಿವಿತ
ಹರಾಜು ದೊಡ್ಡಣ್ಣನ ಖದರು

ಕಡಲ ತಡಿ ಬರಿ ಮರಳೂ
ಕುಲುಮೆ ಕಾವಿಗೆ ಊದಿಸಿಕೊಂಡ
ಫಳಪಳಿಸೋ ಗಾಜು!

(ಚಿತ್ರ ಕೃಪೆ : ಅಂತರ್ಜಾಲ)

ತುಟ್ಟಿ ತೈಲ…

ದೆಲ್ಲಿ ಗದ್ದುಗೆಗೆ ಹತ್ತಿರದಲಿಲ್ಲ
ಚುನಾವಣೆಯ ಕಾವು,
ರಾಜ್ಯ ಸರ್ಕಾರಕ್ಕೋ
ತೆರಿಗೆ ನೀತಿಯ ಹುಳುಕಿನರಿವಿಲ್ಲ

ನನ್ನ ನೆಲ ಬರಡು ಭೂಮಿ
ಕೊರೆದಷ್ಟು ಹುಡಿ ಮಣ್ಣು ಕಲ್ಲು ಧೂಳು
ನೀರಿಗೇ ತಾತ್ವಾರವಿಲ್ಲ
ಗರೀಬನಿಗೋ ಅಪ್ಸರೆಯ ತೆವಲು
ಇರುಳೆಲ್ಲ ತೈಲ ಬಾವಿಯ ಕನಸು!

ಬಲೂನಿನೆತ್ತರಕೂ ಬೆಲೆಯ
ಯಶಸ್ವೀ ಹಾರಾಟ.
ಬಾಯ್ಬಿಟ್ಟು ಕೂತ ಪೆಚ್ಚು ಮತದಾರ…

ಮಧ್ಯಮ ವರ್ಗದ ಬಡಪಾಯಿ
ಒಳಗೊಳಗೆ ಬೈದದ್ದೇ ಬಂತು,
ಹೋರಾಟ ಉಪವಾಸ ವಾಚಕರವಾಣಿ
ನಮಗ್ಯಾಕೆ ಬೇಕು ಇಲ್ಲದ ಉಸುಬಾರಿ ತಂತು?

ತುಟಿ ಚಿಚ್ಚಿ ಮಾತಾಡಿ
ಇನ್ನಾದರೂ ಕಳಚಿ ಜಾಣ ನಿದ್ರೆ,
ತೈಲ ಬಲು ತುಟ್ಟಿ!

ಬಂಕು ಹುಡುಗನನು ರೇಗಿದರೆ
ಏನು ಬಂತು? ಇನ್ನು ಕಾಯಿರಿ ಸ್ವಾಮಿ,
ಲೀಟರಿಗೂ ಎಣಿಸುವ ಕಾಲ
ಗರಿಗರಿಯ ನೂರರ ನೋಟು…

(ಚಿತ್ರ ಕೃಪೆ : ಅಂತರ್ಜಾಲ)

ಕಾಮನ ಹುಣ್ಣಿಮೆ…

ಮನ್ಮಥ ವೈರಿ ತೆರೆದಾನೆಷ್ಟು
ಮುಕ್ಕಣ್ಣ ಬಾರಿ ಬಾರೀ?

ವರ್ಣಾಲಂಕಾರ ಬೆವರಿಗೆ ತೊಳೆದು
ನಗುವು ಹಳಸಲಿಡಿದು
ಒಳ ಬಯಕೆಗಳೆಲ್ಲ ಹೊರಗೂ ಒಸರಿ
ನೋಟ ಭಂಗಕ್ಕೆ ಸಿಕ್ಕ ತರಳೆ ಮುದುಡಿದರೂ
ತಿದ್ದಲೇ ಇಲ್ಲ ಅಂತರಂಗ

ಅಸಲು ಸುಟ್ಟೀತೆ ಕಾಮನ ಹುಣ್ಣಿಮೆ?

ವಯಸ್ಸಿನಂತರ ಮೀರಿ
ವಾಮಿ ವರಸೆಗಳೂ ಮರೆಸಿ
ದಕ್ಕಿಸಿಕೊಳ್ಳುವ ಚಪಲ ಚಿತ್ತ,
ಚಾತುರ್ಯ ಸಿದ್ಧಿಗೆ ಒಲಿವ
ಉತ್ಕಟಾಕರ್ಷಣೆಯ ಕ್ಷಣ ಪಿತ್ತ!

ಹುಲ್ಲು ಮೇಯುವ ಮನಕೆ
ಯಾರಾದರೂ ಸೈ ಮೇನಕೆ!
ಆಕ್ರಮಿಸೋ ಹವಣಿಕೆ ಏಕೋ
ಯಾರದೋ ಸೊತ್ತುಗಳನೆಲ್ಲ
ತನ್ನ ಹಳದಿಯ ಕಣ್ಣ ಪರಧಿಗೆ

ಸ್ಪರ್ಶ ಶೃಂಗಾರ
ಮಧುರಾಲಿಂಗನ ಇನ್ನಿತರೇ ಎಲ್ಲ.,
ಬಯಕೆ ಕಾವಿಗೆ ತಟ್ಟನಿಳಿವ
ಕಾಮನೆಯ ತತ್ತಿ!!!

(ಚಿತ್ರ ಕೃಪೆ : ಅಂತರ್ಜಾಲ)

 

ಬಂಗಾರದ ಕುರುಡು…

ಹೊತ್ತು ಕಳೆಯೆದ ಪ್ರಭೃತಿಗಳಾಟ
ಕೆರೆವ ಹುಚ್ಚಿನ ಮಾಟ
ಮೇಲೆ ಆತ್ಮೀಯ ಲೇಪ…

ಯಾವನೋ ಹೊರುವವನು
ಆನೆ ತೂಕದ ಕಾರ್ಯಭಾರ
ಮಿಕ್ಕ ಛದ್ಮ ವೇಷಧಾರಿಗಳದೆಲ್ಲ
ಬೆವರು ಕಕ್ಕುವ ಪೋಸಿನವತಾರ!

ನಾನೂ ನಮ್ಮಪ್ಪ ಅವನಪ್ಪ
ಜನ್ಮೇಪಿ ಗುಲಾಮರ ವಂಶ,
ಬಲಿ ಕೊಡುವ ಗಳಿಗೆಗೆ, ಕಾದ
ಕುರಿ ಮಂದೆ ಸಾಲು ಸಾಲು…

ಪಾತಾಳಗರಡಿಗೂ ಸಿಗದ
ಉಬ್ಬಿದ ಹೆಣಗಳಿಗೆಲ್ಲ
ನಿಜಾಯತಿ ಬೋಧಿಸೋ ಉಮೇದಿ,
ಕದ್ದವನೇ ಖರೇ ಪ್ರಾಮಾಣಿಕ!

ನಟ್ಟ ಗರುಡಗಂಬದ ನೆರಳು
ಭಗವಂತನನೇ ಕವಿದರೂ
ಬಹು ಪರಾಕಿಗೆ ಒಗ್ಗಿದವನು,
ಕರ್ತೃವಿಗೋ ಭರ್ತಿ ನಿದ್ರೆ…

ಅದಿರಗೆದು ಕಲ್ಲು ಹೆಕ್ಕು ಕಾಯ,
ನಕಲಿಗೇ ಒಗ್ಗಿದ ಧಣಿಗೆ
ಎಂತದೋ ಬಂಗಾರದ ಕುರುಡು,
ಗುರುತಿಸಲಾರ ವಜ್ರದ ಹರಳು…

’ಗಲ್ಫ್ ಕನ್ನಡಿಗ’ ಈ ಪತ್ರಿಕೆಯಲ್ಲಿ 20.05.2012 ರಲ್ಲಿ ಪ್ರಕಟಿತ
http://www.gulfkannadiga.com/news-66195.html

(ಚಿತ್ರ ಕೃಪೆ : ಅಂತರ್ಜಾಲ)

ಚಿಟ್ಟೆ ಚಪ್ಪಲಿ…


ನಟ್ಟ ನಡು ರಸ್ತೆಯಲಿ
ಅನಾಥವಾಗಿ ಬಿದ್ದಿತ್ತು
ಪುಟ್ಟ ಒಂಟೀ ಚಪ್ಪಲಿ,
ಅದರ
ಅಂಗುಷ್ಟದ ಮೇಲೆ
ಬಣ್ಣದ ಚಿಟ್ಟೆ!

ತಾಯಿಯ ಅವಚಿಕೊಂಡು
ಬೈಕಿನಲೇ ನಿದ್ರಿಸಿದ ಕಂದ
ಎಚ್ಚರಗೊಂಡರೇ,
ಅಣುಕಿಸಿತು ಒಂಟಿ ಚಪ್ಪಲಿ!

ಶುರುವಾಯ್ತು
ಬಿಕ್ಕಳಿಸಿ ಬಿಕ್ಕಳಿಸಿ ಅಳು,
ಸಂತೈಸಿತೆಂತು
ತಾಯಿ ಹೃದಯ?

“ಚಪ್ಪಲಿ ಕಳೆದರೆ
ಮಗೂ,
ಲತ್ತೆ ಕಳೆದಂತೆ!
ಹೊಸತು ಕೊಡಿಸುವೆ
ಈಗಲೇ ಮತ್ತೆ”

“ಹೊಸ ಚಪ್ಪಲಿ
ಬೇಡ,
ಕಡಿಯುತ್ತೆ ಕಾಲು!
ಎಳವೆ ಪಾದಕೆ ಗಾಯ
ನೆನೆ ನೆನೆದೇ ಅತ್ತಿತು
ಆಗಲೇ ಮತ್ತೆ

ಬೈಕು ಹೊರಟಿತು
ಗಾಂಧಿ ಬಜಾರಿನತ್ತ,
ಹತ್ತು ಅಂಗಡಿಗಳಲೆದು
ಮೆಟ್ಟು ಸವೆಯಿತು,
ಚಪ್ಪಲಿ ಒಪ್ಪಿಗೆ ಇಲ್ಲ
ಮಗುವಿಗೆ…

ಚಿಟ್ಟೆ ಸಿಕ್ಕಿತೇ ಮತ್ತೆ?
ನಿಲ್ಲಲೇ ಇಲ್ಲವಳ ರಚ್ಚೆ!

ಬಳೆ ಅಂಗಡಿ ಹೊಕ್ಕು ತಾಯಿ
ಕೊಂಡು ತಂದಳಾಗಲೇ
ಜೋಡಿ ಚಿಟ್ಟೆ!
ಮರೆಯಲಿ ನಿಂತು ಅಂಟಿಸಿದಳು
ಚಪ್ಪಲಿ ಉಂಗುಷ್ಟಕ್ಕೆ
ಬಣ್ಣ ಬಣ್ಣದ ಚಿಟ್ಟೆ…

ಚಿಟ್ಟೆ ಚಪ್ಪಲಿ ಕಂಡದ್ದೇ
ಮೊರ ಇಷ್ಟಗಲವಾಯ್ತು
ಮಗು ಕುಣಿ ಕುಣಿದಾಡಿ
ಅಮ್ಮನನು ಬಿಗಿದಪ್ಪಿ
ಕೊಟ್ಟಳೆಷ್ಟೋ ಪಪ್ಪಿ
ಅಪ್ಪನಿಗೂ ಅದರ ಕಾಪಿ!

(ಚಿತ್ರ ಕೃಪೆ : ಅಂತರ್ಜಾಲ)

ಮತ್ತೊಂದು ವರ್ಷ…


ಒಂದಿಡೀ ವರ್ಷ
ಮೆಟ್ಟಿಲೇರದೆ ಹೆಜ್ಜೆ ಛಾಪಿಸದೆ
ಇರುವಿಕೆಯ ಪದ ಬಿಡಿಸದೆ
ಎಚ್ಚರವೂ ಇರದೆ ಗೂಡೊಳಗೆ
ನಿದ್ರಿಸುತಲೇ ಕಳೆದೆ,
ನಾಳೆ ಉಗಾದಿ!

ಹೆಸರಿರದ ಮರಳಂತವೇ
ಹಳತೆಲೆ ಚೆಲ್ಲಿ ಮೈ ಕೊಡವಿ
ಹೊಸತನದ ಹಸಿರ ಹೊದ್ದವು,
ನನಗೆಂತ ಮಂಕು ದಾಡಿ?
ಚಳಿ ಬಿಡದೆ ಸೆಟೆಸದೆ ಎದೆ
ಬರೀ ನೆರೆಯಿತು ದಾಡಿ!

ಇಂತೆಷ್ಟು ವರ್ಷಗಳ ಕಳೆದು
ಪಂಚಾಂಗ ಸುತ್ತೆಸೆದೆ ಅಟ್ಟಕೆ
ಪೊರೆ ಕಳಚಲೇ ಇಲ್ಲ ಒಳಗೆ,
ತುಳಿದರಲ್ಲವೇ ತಾನೇ ಹಾದಿ
ಸೀಳು ಹುಮ್ಮಸ್ಸಿರೆ ನಿಶಾನೆ
ಸಾಧನೆಗೆಲ್ಲಿದೆ ವಯೋಮಿತಿ?

ಇಲ್ಲಿ ಸುಮ್ಮನೆ ಇದ್ದೆದ್ದರೆ
ಹುಟ್ಟಿಗಾದರೂ ಸಮ್ಮಾನವೆಲ್ಲಿ?
ಮುದುಳ ತೀಡಿ ತಿಕ್ಕಿ ತಿದಿ ಒತ್ತಿ
ಕೊಡವಿ ನನ್ನದೇ ಧೂಳ,
ಚಿಗುರಿಕೊಳ್ಳಲು ಎಂಟೆದೆಗೆ
ಕೋಟೆ ಬಿರುಕಲೂ ಮೊಳಕೆ

ಸೋಮಾರಿಗಳು…
ಹಲುಬಬಾರದಲ್ಲ…!
ವಿಕಸನವೇ ತಟಸ್ಥ….!!

(ಚಿತ್ರ ಕೃಪೆ : ಅಂತರ್ಜಾಲ)

ಪ್ರೇಮಾರ್ಪಣೆ…

ನಲ್ಲೆ,
ಇನ್ನುಳಿದ ಬದುಕಿನಲು
ಮರು ಹುಟ್ಟಿನಲೂ ಸರಿಯೇ
ನಾನೇ ನಿನ್ನ ದಾಸ!

ಅಸಲೇ ಶೂನ್ಯ ಮಸ್ತಕ
ನಾನು ಗೀಚಿಟ್ಟ ಪುಸ್ತಕ
ತಿದ್ದಿ ತಿದ್ದಿಯೇ ಬಳಲಿದೆ,
ಮನೆ ತುಂಬುವುದೂ ಕಲೆಯೇ
ಅರೆ ಬರೆ ಹೊಟ್ಟೆಯಲೂ
ಅರಳಿಸಿದೆ ನಗೆ ನಂದನವನ

ನಿನ್ನ ಪ್ರೀತಿಯು ಅಕ್ಷಯ
ಹೃದಯವೋ ವಿಶಾಲ ಶರಧಿ,
ಈ ಹೊರೆಗೆ ಗೊಣಗದೆಯೇ
ಹೆಗಲಲ್ಲ ಬದುಕನೇ ಕೊಟ್ಟೆ,
ಸದಾ ಅಂಟಿಸಿಕೊಂಡೆ
ನಿನ್ನ ಹೆಸರಿಗೂ ನನ್ನ ಹೆಸರ

ಎಂಥ ರಾಗವೂ ನಿರ್ಜೀವ
ಸರಸತಿಯ ವಿನಹ,
ಪುರುಷೋತ್ತಮನೂ ಖಾಲಿ
ಜಾನಕಿಯ ಹೊರತು,
ನಾನೆಷ್ಟರವನು ಬರಿಯ
ಬದರಿ, ಈ ದೇವಿ ದಾಸ!

ನೀನು ಸಂಕಲನ
ನಾನು ವ್ಯವಕಲನ
ಸಂಭಾಳಿಸು
ಸಂಸಾರ ಗಣಿತ…

(ಚಿತ್ರ ಕೃಪೆ : ಅಂತರ್ಜಾಲ)

ಪ್ರಾರ್ಥನೆ…

ನನ್ನ ಹೆಣ ಭಾರಕ್ಕೆ
ಹೊತ್ತವರು ಬಳಲಬಾರದು
ಪ್ರಭುವೇ!
ದೇಹ ಉಬ್ಬಿಸಬೇಡ ಇನ್ನೂ…

ನಿತ್ಯತೃಪ್ತನು ನೀನು
ನಿತ್ಯಯಾತ್ರಿಕನಿವನು
ಬೇಡುವುದೇ ಸುಲಭ ವಿದ್ಯೆ!
ನಿನ್ನ ತಂತಿಯೋ ನೇರ
ತೂರಾಡದಂತೆ ಕಾಪಾಡು

ಸುಡುವ ಕಿಡಿಯಾಗಿಸದೇ
ಬೆಳಕ ಹಂಚಲಿ ಮನಸು
ಗೂಡಾದರೂ ಬೆಳಗಲಿ ಹಣತೆ,
ಉಪ್ಪರಿಗೆಯ ಚಪಲಕೆ ಚಿತ್ತ
ಭ್ರಷ್ಟವಾಗದಂತೆ ಕಾಪಾಡು

ಹಾಲುಗೆರೆಯೋ ಭಾಗ್ಯವಿಲ್ಲ
ವಿಷವ ಹಿಂಡುವ ಬಾಯಿ ಬೇಡ
ನಗುವನೇ ಅರಳಿಸಲಿ ಮಾತು,
ಮುಳ್ಳಿವನು ಎಂದ್ಯಾರೋ ಕುದ್ದು
ಮುರಿಯದಂತೆ ಕಾಪಾಡು

ಖಾಯಿಲೆ ಬಿದ್ದಿವನು ಮಲಗಿ
ಕೆಮ್ಮಿ ಕಕ್ಕಿ ಕೆರೆದು ನರಳೋ
ಇಂಚಿಂಚು ಸಾವ ತರಬೇಡ,
ಆಗಿದ್ದ ಈಗಿಲ್ಲ – ಎಂಬ ಮರಣ
ಕೊಟ್ಟಾದರೂ ಕಾಪಾಡು

ಸಂಗಮ ಸುಖ…

ನಾನು ನದಿ
ನೀನೂ ನದಿ
ಒಬ್ಬಂಟಿ ಹರವೂ ಬೇಜಾರು!
ಸಂಗಮ ಸುಖ
ಬೇಡವೇನೇ ಪದ್ಮ?
ಬ್ರಹ್ಮಪುತ್ರನ ಅಳಲು
ನೀನಾದರೂ ಕೇಳು…

ಕೂಡಲದ ತಿರುವಿನಲಿ
ಬೆರೆತು ಹೋಗಲಿ
ನಿನ್ನ ತಿಳಿ ನೀರ ಪಾನಕವೂ
ನನ್ನ ಬಗ್ಗಡದ ನೀರು!
ಮಿಂದುಕೊಳ್ಳಲಿ ಭಕ್ತ ಜನ
ಮಾಡಲಿ ಮಾಘ ಸ್ನಾನ

ಮುನಿಯ ಬೇಡವೇ ನೀನು
ನನ್ನಿಂದ ನೀನು ರಾಡಿ ನೀರು,
ನಾನು ಹಿಮ ಗಿರಿಗಳಿಳಿದು
ದೇಶ ಸೀಮೆಗಳ ಹಾದು
ಇವರು ಸುರಿದದ್ದೆಲ್ಲಾ ಕುಡಿದು
ಮಲಿನಗೊಂಡ ಶತ ಒರಟ,
ನೀನೇ ತಿಳಿಗೊಳಿಸಬೇಕು…

ಸಾಗರವೋ ದೂರ ಯಾನ
ನಮ್ಮ ಬದುಕಿದು ಸಾರ್ವತ್ರಿಕ
ಸುಮ್ಮನೆ ಕ್ರಮಿಸಿ ಬಿಡೋಣ!
ನಡುವೆ ನೀರ ಹಂಚಿಕೆಯ
ರಾಜಕೀಯದ ಕಾವು…

ಬಿಸಿಲು ಆವಿಸಲಿ ಬೆಳಗಿನಲಿ
ಇರುಳೆಲ್ಲ ಮೀನ ಫಸಲು,
ಮೊಗೆದು ಬೆಳೆಯಲಿ ತೆನೆ ಭತ್ತ
ಹೀರಿಕೊಳ್ಳಲಿ ತೆಂಗು ಬೇರು,
ಬೇಸಿಗೆಯ ಝಳದಲಿ
ಈಸು ಬೀಳಲಿ ಚಿಳ್ಳೆಪುಳ್ಳೆ
ಆಗ ತಾನೇ ಸಾರ್ಥಕವೀ ಉಗಮ?

ಕಡೆಗಂತೂ ಕಾದಿಹನು ಕಡಲು…
(ಚಿತ್ರ ಕೃಪೆ : ಅಂತರ್ಜಾಲ)

ಅಕ್ಷರಗಳ ಹೂಮಾಲೆ…

ಗೋರಿಗಳ ಮೇಲೆ,
ಬೇಲಿ ಹೂಗಳು ಅರಳಿ;
ನಳನಳಿಸಿ ನಗಲಿ,
ಮಿತ್ರ ನಿನ್ನ ಸಾಂಗತ್ಯ ಇಂದಿಗೆ
ಭೂಗತವಾಗಲಿ…

ನನ್ನ ದಾರಿಯ ಮರೆತು
ನಿನ್ನ ದಾರಿಯ ಗುಂಟ ನಡೆನಡೆದು
ಮೆಟ್ಟು ಸವೆಸಿದ್ದೇ ಬಂತು…

ಸತ್ತದ್ದು ನೀನಲ್ಲವಾದ್ದರಿಂದ,
ಸತ್ತದ್ದು ಬರೀ ನಿನ್ನ ಜೊತೆಯಾದ್ದರಿಂದ
ದರಿದ್ರ!
ಶ್ರಾದ್ಧ ಸೂತಕಗಳ ರಗಳೆ ಇಲ್ಲ…

ಇದೋ ಮೋಟೆ ಕಟ್ಟಿ; ಚಾಪೆ ಸುತ್ತಿ
ನೆಲ ಬಗೆದು ಹೂತಿಟ್ಟು
ತಲೆ ಬೋಳಿಸಿದ್ದೇನೆ;
ನೆನಪುಗಳು ಅಸ್ತಂಗತವಾಗಲಿ…

ಎಬ್ಬಿಸಲಾರೆ ಪಿರಮಿಡ್ಡುಗಳ
ನೆಡಲಾರೆ ವೀರಗಲ್ಲುಗಳ
ಗೆಳೆಯ! ಕಟ್ಟಿಕೊಡಬಲ್ಲೆ
ಐವತ್ತೂ ಮುಕ್ಕಾಲು ಅಕ್ಷರಗಳ
ಈ ಸಂತಾಪ ಹೂಮಾಲೆ…

ನಾಳೆ ಹೊಸ ಬೆಳಗು
ನನ್ನದೇ ದಾರಿಗುಂಟ
ಒಬ್ಬಂಟಿ ಪಯಣ ,
ಉಳಿದದ್ದು ಬರೀ ವಿಷಾದ…

ಪ್ರಶ್ನೆಗಳು?

ವೈದೇಹಿಯಲಿ ಬಂಡಾಯಗಾರ್ತಿ
ಊರ್ಮಿಳೆಯಲಿ ನಿರಂತರ ಎಚ್ಚರ
ಕೌಸಲ್ಯೆ ಕೈಯಲಿ ದಶರಥನ ಜುಟ್ಟು
ಇದ್ದಿದ್ದರೇ, ಓದಿಗೆ ಒದಗುತ್ತಿತ್ತು
ಒಂದು ಸಹ್ಯ ರಾಮಾಯಣ!

ಉತ್ತರಿಸಬೇಕಿದ್ದ ಪುರುಷೋತ್ತಮನೇ
ನಾರುಟ್ಟು ಹೊರಟ,
ಮಂಥರೆ ನೆಪಮಾತ್ರ ಪಾತ್ರ
ಅಲ್ಲಿನ್ನೊಂದು ಮಾಯಾ ಜಿಂಕೆ!

ನಾವು ಬರೆಸಿದ್ದಲ್ಲ
ಕೃತ ಯುಗದ ಅಳಲಿನ ವ್ರಣ;
ನಮಗೂ ಬೇಕಿರಲಿಲ್ಲ,
ಅಪ್ಪನು ಮೆಚ್ಚೋ ಶ್ರೀರಾಮ
ಅಣ್ಣನ ಹಿಂಬಾಲಕ ಲಕ್ಷ್ಮಣ
ರಾಜ್ಯ ಸುಖ ವಂಚಿತ ಭರತ
ಕಾದು ಕಾದೇ ಉಳಿದ ಶತೃಜ್ಞ…

ಒಂದಿಡೀ ಸಮೃದ್ಧ ರಾಜ್ಯಕೆ
ಜೋಡಿ ಪಾದುಕೆ ಕಾವಲೇ?
ವಧಿಸ ಬಹುದೇ ಪತಿವ್ರತೆಯ ಗಂಡ
ಪತಿವ್ರತೆಯರ ಗಂಡಿರನೇ?
ವಿಭೀಷಣನೂ ನ್ಯಾಯಮತಿಯೇ?
ಪ್ರಶ್ನೆಗಳ ಸರಮಾಲೆ…

ಹೆಣ್ಣಿನೆಡೆ ತುಸು ಮೃದುತ್ವ
ಸುದೀರ್ಘ ಕಾಲ ರಾಮ ರಾಜ್ಯ
ರಾವಣಗೆ ಆತ್ಮ ಲಿಂಗ,
ಕಲ್ಪಿಸೋ ಸುಖ ಕಥನ
ಬರೆದುಕೊಡ ಬಹುದಿತ್ತು
ನೆಮ್ಮದಿ ಶಾಯಿಯಲಿ ಅದ್ದಿ…

ಕಥೆಗಾರನೂ ಏಕೋ
ಮನಸು ಮಾಡಲೇ ಇಲ್ಲ!

(ಚಿತ್ರ ಕೃಪೆ : ಅಂತರ್ಜಾಲ)

ಗಿಂಡಿ ಮಾಣಿ…

ಪ್ರತಿಫಲನವೇ ಬದುಕೇ
ಸ್ವಂತಿಕೆ ಏಕಿಲ್ಲ ಜನಕೆ?

ಇಲ್ಲಿ ಮೊಗೆದ ನೀರು
ಮತ್ತೆಲ್ಲೋ ಒಗೆವ ಕಲೆ
ಕಲಿತ ಬಿತ್ತಾಸುರರ ಲೀಲೆ,
ಕೈಮಸಕು ಬಾಣಸಿಗರು
ನಮ್ಮನೇ ಅರೆಯುವರು
ರುಬ್ಬುವರು ಮಸಾಲೆ…

ದಿನ ಸಾಯೋ ಮಂದಿ
ಸ್ವಯಂಭು ಸಜೀವ ಕಳೇವರ
ಅದುಮಿಡರು ನಾರದುಬ್ಬರ,
ಬೂಟು ನೆಕ್ಕುವುದೇ ಪದವಿ
ಬಾನುಲಿಸಿ ಹರಾಮೀ ಕಥೆ
ಜಾಲರಿಯಾದ ಧನ್ಯತ್ವ…

ರಾವಣ ಸಂಹಾರಕಾಗೇ
ಜನ್ಮವೆತ್ತುವ ರಾಮನೂ
ಕೇಳಬಹುದೇ ಬದಲೀ ಹಂತಕ?
ಭ್ರಷ್ಟ ಸಿಂಹಾಸನವೇರಿ
ಹಸಿದು ಕುಳಿತ ಪ್ರಭುವೇ
ಆಗಬಾರದು ಕಿವಿ ಹಿತ್ತಾಳೇ!

ಗಿಂಡಿ ಮಾಣಿಗೇ ಪೀಠ
ಪ್ರತಿಭೆ ಚರಂಡಿ ಪಾಲು…

ಕೀಚಕನ ಕರೆಗೊಲಿದು
ಐದೂ ಮೀರಿ ತೆಕ್ಕೆ ಬಿದ್ದರೆ
ಪಾತ್ರಕೆಲ್ಲಿದೆ ಔನತ್ಯ?

(ಚಿತ ಕೃಪೆ : ಅಂತರ್ಜಾಲ)

ಗಿಂಡಿ ಮಾಣಿ : ಕೆಲವು ಸ್ವಾಮಿಗಳು ಹಳ್ಳಿ ಕಡೆ ಭಕ್ತರ ಮನೆಗೆ ಪಾದ ಪೂಜೆಗೆ ಹೋದಾಗ, ಬಹಳಷ್ಟು ಮನೆಗಳಲ್ಲಿ ಶೌಚಾಲಯ ವ್ಯವಸ್ಥೆ ಇರುವುದಿಲ್ಲ. ಬೆಳಗಿನ ಬಹಿರ್ದೆಶೆಗೆ ಸ್ವಾಮಿಗಳು ಕೆರೆ ಕಡೆ ಹೊರಟರೆ ಆ ಮನೆಯ ಯಾರಾದರೂ ಒಂದು ಚೊಂಬು ನೀರು ಹೊತ್ತು ಹಿಂದೆ ಅನುಸರಿಸುತ್ತಾರೆ.

ವೃಕ್ಷೋ ಭಕ್ಷತಿ ಭಕ್ಷಿತಃ…

ಏನು ಹಿತವಾಗಿದ್ದೆ
ಅಂದು ನೀ ಪ್ರಿಯೇ ಬೆಂದಕಾಳೂರೇ…
ಮಳೆಗಾಲಕ್ಕೆ ನೀನು ಇಂತಿಷ್ಟೇ ಒದ್ದೆ
ಚಳಿಗೆ ಇರುಳೆಲ್ಲ ಕಾಡೋ ಅಪ್ಪುಗೆ
ಬೇಸಿಗೆಗೊಂದಿಷ್ಟು ಬೆವರ ಸಾಲು

ಎತ್ತರದಿ ನಿರುಕಿದರೆ
ನಿನ್ನ ಮೈಪೂರ ಕಡು ಹಸಿರ ಸೀರೆ

ಇವೆಲ್ಲ ಯವ್ವನದ ನೆನಪುಗಳು!
ಸವೆಯಲೆಲ್ಲಿದೆ ಬರೀ ಸವೆದವು
ಈಗ, ಗತ ಕಾಂಡ ವೃಕ್ಷಗಳು…

ಅವನೇ ಮತ್ತೊಮ್ಮೆ ಇಲ್ಲಿ ಜನಿಸಿದರೂ
ನೆಡಲಾರ ಬಿಡು ಸಾಲು ಮರಗಳನವನು
ಅಶೋಕ! ಬಗೆಯಲೆಲ್ಲಿದೆ ಮಣ್ಣು
ಅಲ್ಲಿ ಬರೀ ಕೇಬಲ್ಲುಗಳ ಜಾಲ

ಮೆಟ್ರೋಗೆ ಒಂದಿಷ್ಟು
ಹೊಸ ವಿಮಾನದಡ್ಡೆಗೆ ಮತ್ತಷ್ಟು
ಟ್ರಾಫಿಕ್ಕಿನ ಬಸಿರಿಳಿಸಲು,
ನಂದಿ ಮಾರ್ಗಕೋ, ವರ್ತುಲ್ಲ ರಸ್ತೆಗೋ,
ಇಲ್ಲ ಅಮರರಾಗಿಸುವ ಉಮೇದಿಗೋ
ಹೀಗೆ ಕಡಿದೇ ಕಡಿದೆವು
ಹಳೇ ಮರಗಳ ಹುಡುಕುಡಿಕಿ!
ಈಗವೇ ನಮ್ಮ ಖಾಸಗೀ ಪಡಖಾನೆ ಮಂಚಗಳು

ಉಳಿದ ಮರಗಳೆಲ್ಲ, ಪ್ರಿಯೇ!
ವೈಶಾಖನ ಹೊಡೆತಕ್ಕೆ ಬೋಳು ಬೋಳು

ಸರ್ಕಾರೀ ತುಘಲಕೀಕರಣ
ಆಧುನೀಕರಣದ ಅಂಧ ಕಾರ್ಯಚರಣೆ,
ಜರಿಯ ಬಾರದು ಬೇಸಿಗೆಯ ನಾವು
ನಮ್ಮ ತಿಕ್ಕಲಿಗೆ!

ಉಸಿರ ಕಕ್ಕಲಿಕ್ಕೆಲ್ಲಿವೆ
ಹಸಿರ ಮರಗಳ ಹಿಂಡು?
ಇನ್ನೆಲ್ಲಿ ಕೇಳುವುದು
ಚಿಲಿಪಿಲಿ ಸದ್ದು…

(ಚಿತ್ರಗಳ ಕೃಪೆ : ಅಂತರ್ಜಾಲ)

ಪಾಪಿಷ್ಟ ಕೆಟ್ಟ ರಸ್ತೆ…

ಪಕ್ಷಿರಾಜನೇ ಕರುಣಿಸು
ಯುದ್ಧ ಟ್ಯಾಂಕರಿನ ಚಕ್ರ
ನನ್ನ ಮೋಟಾರು ಗಾಡಿಗೂ

ಪಾಪಿಷ್ಟ ಕೆಟ್ಟ ರಸ್ತೆ ಇದು
ಬ್ರೇಕು ಬ್ರೇಕಿಗೂ ಭೂನರಕ
ಜೋರು ಗೇರೂ ಕಂಗಾರು,
ದಾಟಿಸಿ ಬಿಡು ಲೆಕ್ಕಿಗನೆ
ಬದುಕಲಿನ್ನೂ ಬೇಜಾನಿದೆ
ಸವಿಯಲು ಮಧುಪಾನ!
ಜೀವಂತ ತಲುಪಿಸಿ ಬಿಡು
ಮನೆಗೆ ಪೂರ್ಣ ಅಂಗಾಂಗ…

ಮೈಮೂಳೆ ಹಿಟ್ಟನು ರುಬ್ಬಿ
ತಿಂದನ್ನ ಕಕ್ಕಿಸಿ
ಗಾಡಿಯ ಸರ್ವಾಂಗ ಕುಲುಕಿಸಿ
ಗಟ್ಟಿಗನ ಅರೆ ಜೀವ ಮಾಡಿಡುವ
ಅಂತಿಂಥಾ ರಸ್ತೆ ಇವಲ್ಲ
ಅಪರ ಕಂಬಳ ಗದ್ದೆ…

ಸಾಪಾಟೋ ಪರಪಾಟೋ
ನಿನ್ನಿಚ್ಛೆಯಂತೆ ನಮ್ಮ ರಸ್ತೆ
ಹಳ್ಳಗಳು ನೀರುಮಯ
ಟಾರು ಕಿತ್ತು ಜಾರುಮಯ,
ಇರದಿರೆ ಚಾಲಕ ಚಾಲಾಕೀ
ಹೊಂಡಕಿಳಿದೀತು ಹೋಂಡಾ!

ರಿಪೇರಿಸೋ ಅಶ್ವಾಸನೇ ಕೊಟ್ಟ
ಶಾಸಕನು ಗೆದ್ದು ತಲೆ ಮರೆಸಿಕೊಂಡ,
ಹೇಮಾಮಾಲಿನಿ ಕೆನ್ನೆಯ ನುಣುಪಂತೆ
ಸವರಿಸುವೆ ಎಂದಿದ್ದ ಲಾಲೂ!
ಸರ್ಕಾರಗಳು ಪರಿಹಾಸಕೆ
ಸುಲಿದವು ರಸ್ತೆ ತೆರಿಗೆ…

ರಸ್ತೆಗಿಳಿದ ತಪ್ಪಿಗೆ
ಪಾಪ ನಮ್ಮ ನಿಮ್ಮ
ಕಾರೂ ಸ್ಕೂಟರೂ
ಗ್ಯಾರೇಜು ಪಾಲು…

ಪೀಳಿಗೆಯ ಪೀಕಲಾಟ…

ಪೂರ್ವಾಚರಿತವೇ ಇರಲೋ
ಪಾಶ್ಚಿಮಾತ್ಯವೂ ಬರಲೋ
ಪೀಳಿಗೆಗೆ ಅದೇ ಪೀಕಲಾಟ!

ಹಗಲು ರಾತ್ರಿಗಳ ಪಾಳಿಯಲಿ
ನೋಟು ಮುದ್ರಣವೊಂದೇ
ನೆಚ್ಚಿ ಕುಳಿತಿಹ ಯುವತರ,
ಮರೆತು ಕುಳಿತಿದೆ ತನ್ನವರ
ತುತ್ತಿಗೂ ಕಣ್ಣೀರಿಡೋ ಹೆತ್ತವರ

ಮನೋ ಪ್ರಾರ್ಥನೆಗೆ ಸಮಯಾಭಾವ
ಜಂಗಮಗಂಟೆ ಒತ್ತು ಸಂದೇಶ
ಅಂತರ್ಜಾಲದ ಮಾಯಾ ಲೋಕ!

ಇನ್ನೆಲ್ಲಿ ಸನಾತನ ದೈವ
ಮತ್ತೆಲ್ಲಿ ಭೂತದ ಕೋಲ?

ಪುಣ್ಯವೂ ಸೇಲಿಗಿದ್ದರೆ ಸಲೀಸು
ಉಜ್ಜ ಬಹುದಿತ್ತು ಕಾರ್ಡಲೇ!
ಶ್ರಾದ್ಧ ಕರ್ಮಕೆ ನೆಟ್ ಪೌರೋಹಿತ್ಯ
ದ್ವನಿ ಸುರಳಿ ಮುಖೇನ ವ್ರತಾಚರಣೆ
ಅಂಚೆಯಲೆ ಲಭ್ಯ ಪ್ರಸಾದ ತೀರ್ಥ…

ಬಾಯಿ ಕೆಡದೇ ಕಲ್ಲು ದೇವರಿಗೂ
ಅದೇ ಹುಳಿಯನ್ನ ಮೊಸರನ್ನ
ಕೊಳೆತ ಪಚ್ಚ ಬಾಳೆ ರಸಾಯನ,
ವಿಗ್ರಹವೇ ನಿಗ್ರಹಿಸಿ ಸಹಿಸುತಿದೆ
ಬಲು ಜಿಡ್ಡು ಪಂಚಾಮೃತಾಭಿಷೇಕ,
ತರಿಸಿ ಬಿಡಿ ಅವನೂ ತಿಂದುಕೊಳ್ಳಲಿ
ನೂಡಲ್ಸೂ, ಹಸಿವಿನೋತ್ಕರ್ಷಕೆ ಗೋಬಿ

ಗ್ರಹ ಕೂಟ, ನವಾಂಶ ಕುಂಡಲಿ
ಕಾಳ ಸರ್ಪ ದೋಷ, ಭುಕ್ತಿ ಫಲ
ಎಲ್ಲ ತಟ್ಟನೆ ಪಂಚಾಂಗ ಬಿಚ್ಚಿಡುವ
ಪಂಡಿತರ ತೊಡೆ ಗಣಕ ಯಂತ್ರ,
ಪೆದ್ದು ಮಿಕವಿದೆ ದೋಷ ಬೆದರಿಸಿ
ಕಾಸಿಳಿಸಿ ಅಮರಿಸಿ ಹವನ ಹೋಮ

ಹಿಂದಿನ ಬಿಳಿಲೇ ಭದ್ರವಲ್ಲ
ಒಳ ಬರಲಿ ಜ್ಞಾನದ ಬೆಳಕು
ಅರಳಲಿ ಅರಿವು; ಅರಿವಿಗೆ ಬರಲಿ,
ರಾಗಿ ಬೆಳೆದರೆ ಮುದ್ದೆ ಊಟವು
ಜಂಕು ಮೆಂದರೆ ಬೊಜ್ಜು ಸಾಂಧ್ರ!

ತುಸು ತಗ್ಗಿ ತುಸು ಮಾಗಿ ನೋಡಿ,
ಅಪ್ಪ ಮಾಡಿಕೊಳ್ಳಲಿ ಸಂಧ್ಯಾವಂದನೆ
ಹೊಂದಿಸಿಕೊಡಿ ಪೂಜಾ ಸಾಮಾಗ್ರಿ,
ಅಮ್ಮ ನೋಡಿಕೊಳ್ಳಲಿ ಅಳುಮುಂಜಿ ಟೀವಿ
ಮಡದಿ ಉಡಲಿ ಬಯಸಿದ ಸೀರೆ
ಮಗನಿಗೆ ಕೊಡಿಸಿ ಟ್ಯಾಬ್ಲೆಟ್ಟು ಪೀಸಿ
ಅಗೆದವನೂ ನೋಡಲಿ ಅರಿವಿರದ
ವಿಶ್ವ ವ್ಯಾಪಿ ಜಾಲ…

ಪೂರ್ವಾಚರಿತದ ಸಿಹಿ ನೀರು
ಪಾಶ್ಚಿಮಾತ್ಯದ ಸಂಪು ನಲ್ಲಿಗಳೆರಡೂ
ಅರಿತು ಬಳಸಿದರೆ ಹಿತಮಿತ
ಬದುಕು ಹಸನದು ನಿಶ್ಚಿತ…

(ಚಿತ್ರ ಕೃಪೆ : ಅಂತರ್ಜಾಲ)

ದಂಡಯಾತ್ರೆ…


ನನ್ನ ಹುಡುಗಿಯರೆಲ್ಲ
ನನ್ನ ನೀರಲ್ಲೇ ಈಜಿ
ದಡ ಸೇರಿಕೊಂಡು,
ಸೇಫ್ ಆಗಿ ಮದುವೆ ಮಾಡಿಕೊಂಡು
ಎಸ್ಕೇಪ್ ಆಗಿ ಹೋದರು

ಆದರೆ, ಈಗಲೂ
ನಾನು ಅದೇ ಪಾಪದ
ಬ್ರಹ್ಮಚಾರಿ…

ಸೈಕಲ್ ಪೋರಿ ಸುಬ್ಬುಲೂ
ಬಸ್ಟಾಪ್ ಗೆಳತಿ ಕಮಲೂ
ಚಡ್ಡೀ ದೋಸ್ತ್ ಮೀನಾಕ್ಷಿ
ಸದಾ ಬಾಲ್ಕಾನಿ ರೂಪಾವತಿ
ಹೈಹೀಲ್ಡ್ ಕುಳ್ಳಿ ವಿಜೀ ಲಕ್ಷೀ
ಗಬ್ಬು ನಾತದ ಪರಿಮಳ
ಹೀಗೆ, ಅದು
ಪರಷ್ಕರಣೆ ಆಗುತ್ತಲೇ ಇದ್ದ
ಮತದಾರರ ಪಟ್ಟಿ!

ಎಲ್ಲರಿಗೂ ಮದುವೆಯಾದಾಗ
ಥೇಟ್! ಪರನಾರಿ ಸೋದರನಂತೆ
ಹರಸಿ ಒಬ್ಬಟ್ಟು ತಿಂದು ಬಂದೆ…

ಸದ್ಯಕ್ಕೆ…
ಹೋಟೆಲ್ ಮೇ ಖಾನಾ
ಆಯಿಲ್ ಮಿಲ್ ಮೇ ಸೋನಾ
ವರ್ತನೆಯಾಗಿ ಹೋಗಿದೆ

ಹುಡುಕಾಟ ಚಾಲ್ತಿಯಲ್ಲಿದೆ
ಹೊಸ ಗರ್ಲ್ ಫ್ರೆಂಡ್ಸಿಗೆ
ಅವರಿಗೂ,
ಮದುವೆ ಫಿಕ್ಸ್ ಆಗೋವರಗೆ!

(ಚಿತ್ರ ಕೃಪೆ : ಅಂತರ್ಜಾಲ)
(೧೯೯೨ರಲ್ಲಿ ಬರೆದ ಹಳೇ ಕವನ)

ಅಂಧ ದೀಪಾವಳಿ…

ಕಣ್ಣು ತುಂಬಿಕೊಳ್ಳುವ ಹಬ್ಬ
ಬೆಳಕಿನಾಟದ ದೀಪಾವಳಿ…
ಕಿಸೆ ಕೊಬ್ಬು ಕರಗಿಸುತ
ಸುಡುವರೆಲ್ಲರೂ ಪಟಾಕಿ!

ಮನೆಯಂಗಳದ ತುಂಬ
ಹಣತೆಗಳ ಸಾಲು;
ಅದೆಂತದೋ ಗಬ್ಬು ನಾತದ
ಟಪಾಸು ಬಾಂಬು ಸರ
ಮತಾಪು ಭೂಚಕ್ರ ಹೀಗೆ…

ಪಟಾಸಿನ ಬೆಂಬೆಳಕೂ
ಅಸಲೇನೆಂದೇ ಅರಿವಿಲ್ಲ!
ಬರೀ ಸ್ಫೋಟ ಸದ್ದಿಗೆ
ಅಜಮಾಸು ಘನ ಘೋರ
ಯುದ್ದ ಪರಿಕಲ್ಪನೆ…

ಇಂಗಿದೀ ನೋಟದಾಚೆಯ
ಜಗ ಸೃಷ್ಟಿ ಸೊಬಗೆಲ್ಲ
ಯಾರದೋ ಹೇಳಿಕೆಗೆ
ಚಿತ್ರಿಸಿದ ನಚಿತ್ರ ಕಲ್ಪನೆ,
ಸರಸ್ವತಿಯೂ ಬ್ರೈಲು ತಾಕು

ಕಾಣಲಾರದ ಕುರುಡು ಕಣ್ಣುಗಳು
ಇವು, ಹುಟ್ಟಿನಿಂದಲೇ ಕತ್ತಲು!

ಸಾವುಗಳು ದಿನಚರಿ ಭಾಗ
ವ್ಯರ್ಥವಾಗದಿರಲಿ ನೇತ್ರದ್ವಯ;
ಹೂತಿಟ್ಟೋ ಕಳೇವರವವ
ಕೊಲ್ಲದಿರಿ ಕಾಷ್ಠದಿ ಸುಟ್ಟೋ,
ಈ ಜೋಡಿ ನೋಟ ಯಂತ್ರ!

ಸ್ವರ್ಗಾರ್ಹವಾಗಲಿ ಯಾನ
ನಿಮ್ಮ ಕಣ್ಣುಗಳಿಂದಾಗಲಿ
ಮತ್ತೆರಡು ಜೀವ ದಾನ!
ಪಿಂಡ ಪ್ರದಾನಕೂ ಮುನ್ನ
ಸರ್ವ ಶ್ರೇಷ್ಠವು ನೇತ್ರ ದಾನ…

(ಚಿತ್ರ ಕೃಪೆ : ಅಂತರ್ಜಾಲ)

ಸಾವಿಗೆ ಬಾರದ ನೆಂಟ…

ಸಾವಿಗೆ ಬಾರದ ನೆಂಟ
ವೈಕುಂಟ ಸಮಾರಾಧನೆಗೆ ಹಾಜರು!

ಹಿಂದೆಯೇ ಕೌರವ ಪ್ರಸೂತಿನಿ
ತುಂಬು ಗರ್ಭಿಣಿ ಹೆಂಡತಿ,
ಶಿವ ಕೊಟ್ಟ ಮಕ್ಕಳದೇ ಸಾಲು
ಚಟಾಕು ಪಾವು ಅಚ್ಚೇರು ಸೇರು

ಸತ್ತವನ ಹಿರೀ ಮಗ
ಸಪ್ಪಗೆ ನಿಂತಿದ್ದ,
ಅವನ ಕೈಯನೊಮ್ಮೆ ಹಿಚುಕಿ
ಸಾಂತ್ವನದ ಲೊಚಗುಟ್ಟಿ
ಒರೆಸೇ ಒರೆಸಿದ
ಬಾರದ ಕಣ್ಣೀರ…

ಮುಂದೆ ರೈಲು ನಿಂತದ್ದು
ಎಲೆ ಹರವೋ ಮುಂಚೆಯೋ
ಮೊದಲ ಪಂಕ್ತಿಗೇ…

ಓಸಿರಾಯನಿಗೆ ಮೈಯೆಲ್ಲ ತೂತು
ತುಂಬಿಕೊಳ್ಳುತ್ತೆ ಪಂಚ ಭಕ್ಷ್ಯ!
ವಡೇ ಮೇಲೆ ವಡೇ ಪೋಣಿಸಿದ
ಲೊಚ ಲೊಚನೆ ನೆಕ್ಕಿದ ಪಾಯಸ.
ಹದಿನಾರನೇ ವಡೆ ಸಂಹಾರಕೆ ಮುನ್ನ
ಪಕ್ಕದವನ ಕಿವಿಗೆ ಪಿಸುರಿದ
ಇತ್ತಿತ್ತಲಾಗೆ ಸಣ್ಣ ಮಾಡುತಾರಲ್ಲೋ
ತಮ್ಮ ವಡೆಯ?
ನೀನು ನೋಡಬೇಕಿತ್ತು
ಶೆಟ್ಟರು ಸತ್ತಾಗ
ಅಂಗೈ ಅಗಲ ವಡೆ
ಅಲ್ಲೂ
ಪೊಗದಸ್ತು ಗೋಡಂಬಿ!

ಸಾವಿಗೆ ಬಾರದ ನೆಂಟ
ವೈಕುಂಟ ಸಮಾರಾಧನೆಗೆ ಹಾಜರು
ಕರೆದರೂ ಕರೆ ಓಲೆ ಮರೆತರೂ!

ಅಮೇಧ್ಯದಿ ನಾಣ್ಯಾನ್ವೇಷಕ
ಮಂದಿ ನೆಂಟರು,
ಕಳೇಬರಕೆ ಸುತ್ತೋ ಹಸಿದ
ಹದ್ದುಗಳಂತವರು…

ಅಂತಃ ಶತ್ರು…

ಎಲ್ಲೆಲ್ಲಿ ವಾಮನರೋ
ಪಿತೂರಿ ಸಾಧಕರೋ
ಬುಡ ಘಾತಕರೋ
ತಿಳಿಯಲ್ಲ ಪಾಚಿ ಹೊಂಡ…

ಯಾರದೋ ಕೈವಾಡವೇನಲ್ಲ…
ಅಸಲು,
ಅಂತಃ ಶತ್ರುವೇ ಮೊದಲ
ಅಪರಾಧಿ!

ಸುಳ್ಳೇ ಮರ್ಯಾದಸ್ಥನ ಪೋಸು
ಜಗ್ಗುವನು ದುರಾಸೆಯ ಸೈತಾನ;
ಅಲ್ಲಿ,
ಮುಚ್ಚಿದೆ ಕಿಟಕಿ ಪರದೆ ಗವಾಕ್ಷಿ
ಸ್ವಯಾರ್ಜಿತ ಗರ್ವ, ಗರ್ಭಸ್ಥ ಕತ್ತಲು!

ಉಸಿರನೂ ತೊಳೆಯದು ಮಡಿ
ಗಬ್ಬು ನಾರಲಿ ಬಿಡಿ ಒಳ ಮನೆ;
ಅದೋ,
ಪೈಶಾಚ್ಯ ಗುಣಿಸುತ್ತೆ ಖಾಲೀ
ಕಪಾಲದೊಳ ಜೀವಂತ ಗೋರಿ!

ಜನನ ಕಾಲವೂ ದೈವಗತಿ ಈಗಲ್ಲ
ದುಡ್ಡಿನನುಗುಣ ಗ್ರಹಚಾರ ಪುಣ್ಯ ಫಲ;
ಅದೂ,
ಜ್ಯೋತಿಷಿ ಇಡುವ ಶುಭ ಗಳಿಗೆಗೆ
ಸೀಳೋ ಸಿಜರಿಯನ್ನು ಕತ್ತಿ!

ತೆರೆದ ಬಾಗಿಲು
ಹೊರಗೆ ಬೆಳಕು ದೇದೀಪ್ಯಮಾನ;
ಅದರೂ,
ಕತ್ತಲಲೇ ಕೊರಗುತ್ತ ಕೂತಿದೆ
ಹಾಳು ಮನಸು!