Category Archives: ಲೇಖನಗಳು

ನಮ್ಮೂರು – 3

164472_535156209862166_232ಆ818961_nಈ ಸಂಚಿಕೆಯಲ್ಲಿ ಬರುವ ಊರಿನ ಪರಿಚಯ ಸುಮಾರು 40 ವರ್ಷಗಳ ಹಿಂದಿನದು. ಈಗ ಅಲ್ಲಿನ ಪರಿಸರ ಮತ್ತು ಜೀವನ ವಿಧಾನವೂ ಬಹಳಷ್ಟು ಬದಲಾಗಿ ಹೋಗಿದೆ. ಈಗ ಅಲ್ಲಿನ ಮನೆ ಮನೆಗೂ ಭೂಷಣ: ದನ ಕರು ಮತ್ತು ಸೂರಿಗೆ ಡಿಷ್ ಆಂಟನಾ!

ನಾನು ಹೇಳಲು ಹೊರಟಿರುವುದು ನಾನು ಶಾಲೆ ಓದುತ್ತಿದ್ದ ದಿನಗಳ ಬಗ್ಗೆ. ಆಗ ಮುರುಕಲು ತರಗತಿಗಳಿದ್ದ ಸ್ಥಳದಲ್ಲಿ ಈಗ ಚಂದದ ಗೋಪಿ ಬಣ್ಣದ ಶಾಲಾ ಕಟ್ಟಡವಿದೆ. ನಾವೆಲ್ಲ ಮರಳು ಹಾಸಿದ ನೆಲದ ಮೇಲೆ ಕುಳಿತು ಬಳಪ ಮುರಿಯುತ್ತಿದ್ದ ಜಾಗದಲ್ಲೇ ಬೆಂಚುಗಳು ರಾರಾಜಿಸುತ್ತಿವೆ.

ನಮ್ಮ ಹಳ್ಳಿಯು ಮೊದಲೇ ನಿಮಗೆ ಹೇಳಿದಂತೆ ಆಂಧ್ರದ ಗಡಿಗೆ ಬಹಳ ಸಮೀಪವಿರುವುದರಿಂದ ಆಚಾರ ವಿಚಾರಗಳಲ್ಲೂ, ಬಳಕೆಯಲ್ಲೂ ದ್ವಿ ಭಾಷೆ ನುಸುಳಿಬಿಟ್ಟಿರುತ್ತದೆ. ಹಾಗಾಗಿಯೇ ನಮ್ಮ ಮನೆಯಲ್ಲಿ ಈಗಲೂ ನಮ್ಮ ಮಾತು ಕನ್ನಡದಲ್ಲೇ ಶುರುವಾಗಿ, ನಡುವೆಲ್ಲೂ ತೆಲುಗಿಗೆ ಹೊರಳಿ, ಕಡೆಗೆ ಕನ್ನಡದಲ್ಲೇ ಉಪಸಂಹಾರವಾಗುತ್ತದೆ!

ಹೀಗಿರಲು, ನಮ್ಮ ಶಾಲಾ ದಿನಗಳಲ್ಲಿ ಕನ್ನಡ ಮೇಸ್ಟರರ ತರಗತಿಗಳ ಝಲಕ್ ಹೀಗಿರುತ್ತಿತ್ತು. ಮೇಸ್ಟ್ರು ತರಗತಿ ಪ್ರವೇಶಿಸಿ, ಆದೇಶಿಸುತ್ತಿದ್ದರು :

“ಏಮಂಡ್ರ ಕನ್ನಡ ಬುಕ್ಕುಲು ತೀಯಂಡಾ… ಅಕ್ಕಡ ಯಾಬೈ ಮೂಡೋ ಪೇಜುಲೋ ಪದ್ಯಂ ತೀಸ್ಕೋಂಡಾ… ಆ ಪದ್ಯಂಲೋ ಕುವೆಂಪು ಏಮಿ ಚೆಪ್ತಾರಂಟೇ….”
(“ಏನ್ರೋ ಕನ್ನಡ ಬುಕ್ಕು ತೆಗೀರೀ… ಅಲ್ಲಿ ಐವತ್ತ ಮೂರನೇ ಪೇಜಲ್ಲಿ ಪದ್ಯ ತೆಗೀರಿ… ಆ ಪದ್ಯದಲ್ಲಿ ಕುವೆಂಪು ಏನ್ ಹೇಳ್ತಾರಂದ್ರೇ…)

ಇನ್ನೊಂದು ನಮಗೆ ಪರಮಾಶ್ಚರ್ಯದ ಸಂಗತಿ ಎಂದರೆ ನಮಗೆ ಮೊದಲನೆ ತರಗತಿ ಪಾಠ ಮಾಡುತ್ತಿದ್ದವರು, ಪಕ್ಕದ ನಕ್ಕಲಹಳ್ಳಿಯ ಮಲ್ಲಪ್ಪ ರೆಡ್ಡಿ ಮಾಸ್ತರರು. ನಾವು ಹತ್ತನೇ ಕ್ಲಾಸು ಮುಗಿಸಿದರೂ ಅವರಿನ್ನೂ ಒಂದನೇ ಕ್ಲಾಸೇ ತೆಗೆದುಕೊಳ್ಳುತ್ತಿದ್ದರು, ಆಗ ನನಗೆ ಹುಟ್ಟಿದ ಎರಡು ಸಾಲು…

ಹಂಗೋ ಹಿಂಗೋ
ದಾಟ್ಕೊಂಡ್ ಬಿಟ್ಟೆ
ಎಸ್ಸೆಸ್ ಎಲ್ ಸೀನಾ,
ಮಲ್ಲಪ್ಪ ರೆಡ್ಡಿ
ಮಾಸ್ತರ್ ಮಾತ್ರ
ಪಾಸಾಗಲೇ ಇಲ್ರೀ
ಒಂದನೇ ಇಯತ್ತೇನಾ!

(ಮುಂದುವರೆಯುವುದು…)

ಫೇಸ್ ಬುಕ್ – ನಮ್ ಕನ್ನಡ ಗುಂಪಿನಲ್ಲಿ ನಿಮ್ಮೊಳಗೊಬ್ಬ ಬಾಲು ಅವರು ಪ್ರಕಟಿಸಿದ ನಮ್ಮೂರ ಚಿತ್ರಣ.
http://www.facebook.com/photo.php?fbid=535156209862166&set=o.109902029135307&type=1&theater

Advertisements

ನಮ್ಮೂರು – 1

playಫೇಸ್ ಬುಕ್ – ನಮ್ ಕನ್ನಡ ಗುಂಪಿನಲ್ಲಿ ನಿಮ್ಮೊಳಗೊಬ್ಬ ಬಾಲು ಅವರು ಪ್ರಕಟಿಸಿದ ನಮ್ಮೂರ ಚಿತ್ರಣ.

ಭಾಗ – 1

ನನಗೆ ಬಾಲ್ಯ ಎಂದ ಕೂಡಲೆ ನನಗೆ ನೆನಪಾಗುವುದು ನನ್ನ ಹಳ್ಳಿಯಾದ ವಾಟದಹೊಸಹಳ್ಳಿ.

ಐದನೇ ತರಗತಿಯವರೆಗೂ ಅಲ್ಲಿ ಓದಿ ನಂತರ ಮುದ್ದೇನಹಳ್ಳಿಗೆ ಸೇರಿದೆ.

ನನ್ನ ಬಾಲ್ಯದಲ್ಲಿ ನನ್ನ ನೆಚ್ಚಿನ ಆಟಗಳೆಂದರೆ, ಬಸ್ಸಾಟ, ಪೈಪಾಟ, ಲಗೋರಿ, ಕಳ್ಳ ಪೋಲಿಸ್ ಮತ್ತು ಕುಂಟೇ ಬಿಲ್ಲೆ.

ಬಸ್ಸಾಟ ದಾರ ಕಟ್ಟಿಕೊಂಡು ಮಕ್ಕಳೆಲ್ಲ ಒಳಗೆ ಸೇರಿ ಮುಂದಿನವನು ಚಾಲಕ, ಹಿಂದಿನವನು ನಿರ್ವಾಹಕನಂತೆ ಆಡುವ ಆಟ. ಊರಿನ ಗಲ್ಲಿಗಲ್ಲಿಗಳಲ್ಲೂ ನಮ್ಮ ಬಸ್ಸು ಓಡಿದ್ದೇ ಓಡಿದ್ದು.

ಪೈಪಾಟವೆಂದರೆ, ಹಳ್ಳಿಯಲ್ಲಿ ನಮ್ಮದು ಬಟ್ಟೆ ಅಂಗಡಿ, ಬಟ್ಟೆ ಸುತ್ತಲು ಪ್ಲಾಸ್ಟಿಕ್ ಪೈಪ್ ಇರುತ್ತದೆ. ನಮ್ಮ ಮನೆಯ ಹಿಂದೆ ನಮ್ಮ ತಾಯಿ ಪುಟ್ಟ ತೋಟ ಮಾಡಿದ್ದರಲ್ಲ ಅಲ್ಲಿ ಹತ್ತಾರು ಗಿಡಗಳು. ದಾಸವಾಳ, ದಾಳಿಂಬೆ, ರೋಜಾ ಹೀಗೆ. ಅವುಗಳನ್ನೆಲ್ಲ ಬೆಸೆಯುವಂತೆ ಪ್ಲಾಸ್ಟಿಕ್ ಪೈಪುಗಳನ್ನು ಭೂಮಿಯ ಒಳಗೆ ಮುಚ್ಚಿ, ಒಂದು ಕಡೆ ನೀರು ಹಾಕಿದರೆ ಎಲ್ಲ ಗಿಡಗಳಿಗೂ ಸಮನಾಗಿ ಹರಿಯುವಂತೆ ಜೋಡಿಸುವುದು.

ಇನ್ನು ಲಗೋರಿ, ಮರ ಕೋತಿ ಆಟ, ಐಸ್ ಪೈಸ್, ನೀರು ತುಂಬುವ ಆಟ ಮತ್ತು ಮರ ಏರುವುದು ಹೊರಾಂಗಣ ಸಾಹಸಗಳಾದರೆ, ಕಳ್ಳ ಪೊಲೀಸ್, ಚಕ್ಕಾಬಾರ ಮತ್ತು ಗುಳಿಮನೆ ಒಳಾಂಗಣ ಆಟಗಳು.

ಮತ್ತೆ ಬಾಲ್ಯ ಹಿಂದಿರುಗಬಾರದೇ ಅನಿಸುವುದು ಇದನ್ನೆಲ್ಲ ನೆನೆದಾಗಲೇ!

ನನ್ನ ಹಳ್ಳಿಯ ಚಿತ್ರಗಳಿಗೆ ಇದು ಮುನ್ನುಡಿ ಎಂದುಕೊಂಡರೆ, ಮುಂದೆ ಆಂಧ್ರದ ಗಡಿಯಲ್ಲಿರುವ ನನ್ನ ಹಳ್ಳಿಯ ನೆನಪುಗಳನ್ನು ಮುಂದೆ ಬಿಚ್ಚಿಡುತ್ತೇನೆ.

(ಸಶೇಷ)
(ಚಿತ್ರ ಕೃಪೆ : ಅಂತರ್ಜಾಲ)

http://www.facebook.com/photo.php?fbid=496637223714065&set=o.109902029135307&type=1&theater

ಸುಲೋಚನ…

Gulf Kannadiga

Gulf Kannadiga

Week: 12

 

 

ಈ ಭೂತ ಕನ್ನಡಿ ಇದೆಯಲ್ಲ ಇದಕ್ಕೂ ನನಗೂ ನಂಟು ಈವತ್ತಿನದಲ್ಲ.

ಏಕೆಂದರೆ ಈವತ್ತು ನನ್ನ ಹೊಟ್ಟೆ ತುಂಬಿಸುತ್ತಿರುವ ಕ್ಯಾಮರಾ ಮತ್ತು ಅದರ ಮೂಲಕ ಜಗತ್ತನ್ನು ’ಸರಿಯಾಗಿ’ ನೋಡಲು ನಾನು ಧರಿಸುವ ಕನ್ನಡಕ ಎರಡಕ್ಕೂ ಮೂಲ ಆಧಾರ ’ಭೂತ ಕನ್ನಡಿ’ ಅಥವ ಇನ್ನೂ ಸುಲಭ ಅರ್ಥದಲ್ಲಿ ಮಸೂರ ಅಥವಾ ಲೆನ್ಸ್!

ನನ್ನ ಹಳ್ಳಿಯ ಹಣ್ಣು ಹಣ್ಣು ಮುದುಕರು ಮೋದಿ ಡಾಕ್ಟರ್ ಅವರ ಕಣ್ಣು ಚಿಕಿತ್ಸಾ ಶಿಬಿರಗಳಲ್ಲಿ ಮುಫತ್ತಾಗಿ ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡು ಬಂದು, ಮೊದಲು ಕೆಲವು ದಿನ ಕಪ್ಪು ಕನ್ನಡಕ ಹಾಕಿಕೊಂಡು ಜಗಲಿಯಲಿ ಕೂತು ಎಲೆ ಅಡಿಕೆ ಮೆಲ್ಲುತ್ತಿದ್ದರು. ಆ ನಂತರದ ದಿನಗಳಲ್ಲಿ ಆ ಕಪ್ಪು ಕನ್ನಡಕದ ಜಾಗದಲ್ಲಿ ದಪ್ಪಗಿನ ಕನ್ನಡಕವೊಂದು ಬಂದು ಕೂರುತಿತ್ತು. ಆ ದಪ್ಪಗಿನ ಮಸೂರದ ಹಿಂದಿನ ಅವರ ಕಣ್ಣುಗಳು ಇಷ್ಟಗಲ ಕಾಣುತ್ತಿದ್ದವು. ಆ ನಂತರ ಅವರ ಪತಿನಿಯರನ್ನು ನೋಡಿ ಬಹುಶಃ ನಿನಗೂ ವಯಸಾಯಿತಲ್ಲೇ ರಂಗಮ್ಮ ಎಂದು ಮನಸ್ಸಿನಲ್ಲೇ ಹೇಳಿಕೊಳ್ಳುತ್ತಿದ್ದರೇನೋ?

ನಮ್ಮ ಅಜ್ಜಿ ಕನ್ನಡವನ್ನು ’ಸುಲೋಚನ’ ಎಂದೇ ಕರೆಯುತ್ತಿದ್ದರು. ಅಜ್ಜಿ ತನ್ನ ಟ್ರಂಕಿಗೆ ಯಮ ಭಾರದ ಬೀಗ ಜಡೆಯುತ್ತಿದ್ದರು. ಅದರ ಬೀಗದ ಕೈಗಳನ್ನು ತಮ್ಮ ಕುತ್ತಿಗೆ ದಾರದಲ್ಲಿ ಜತನ ಮಾಡುತ್ತಿದ್ದರು. ಆ ಬೀಗಗಳನ್ನು ಆಕೆ ಜೋಪಾನ ಮಾಡುತ್ತಿದ್ದ ರೀತಿಗೂ ಅವಳ ಕನ್ನಡಕವನ್ನು ಕಾಪಾಡಿಕೊಳ್ಳುತ್ತಿದ್ದ ರೀತಿಗೂ ಅಂತಹ ವ್ಯತ್ಯಾಸವೇನೂ ಇರಲಿಲ್ಲ. ಪದೇ ಪದೇ ತಮ್ಮ ಹಾಸಿಗೆ ಪಕ್ಕ ಇಟ್ಟಿರುತ್ತಿದ್ದ ಕನ್ನಡಕದ ಡಬ್ಬವನ್ನು ಮುಟ್ಟಿ ನೋಡಿಕೊಳ್ಳುವುದು ಮತ್ತು ತನ್ನ ಕುತ್ತಿಗೆಯ ಬೀಗದ ಗೊಂಚಲನ್ನು ಸವರಿಕೊಳ್ಳುವುದು ಆಕೆಯ ಕ್ಷಣ ಕ್ಷಣದ ಕೆಲಸ.

ಕನ್ನಡಕ ಒಡೆದರೆ ಅದನ್ನು ರಿಪೇರಿಯನ್ನು ಯಾರೂ ಮಾಡಿಸಿಕೊಡರು, ಎಂಬ ಹಸಿ ಸತ್ಯ ಅಜ್ಜಿಗೆ ಗೊತ್ತಿತ್ತು. ಸ್ವತಃ ಕನ್ನಡಕವೂ ಇಲ್ಲದೆ ಮಾ|| ಹಿರಣ್ಣಯ್ಯನವರು ಹೇಳುವಂತೆ ಕನಸುಗಳೂ ಕ್ಲೀಯರ್ ಆಗಿ ಕಾಣಿಸವು ಎಂಬ ಥಿಯರಿ ಆಕೆಯದು. ಆಕೆ ತೀರಿಕೊಂಡಾಗ ಬಹುಶಃ ಆಕೆಯೊಡನೆ ಚಿತೆ ಏರಿದ ಕೆಲವೇ ಆಕೆಯ ಮೂಲ ಗುರುತುಗಳಲ್ಲಿ ಕನ್ನಡಕವೂ ಒಂದಿರಬಹುದು.

ನಿಮ್ಮ ಮನೆ ಗೋಡೆಗಳಿಗೆ ನಿಮ್ಮ ಪೂರ್ವಜರ ಹಳೇ ಚಿತ್ರಗಳಿದ್ದರೆ ಗಮನಿಸಿ. ಮೈಸೂರು ಪೇಟ, ಹುರಿ ಮಾಡಿದ ಮೀಸೆ, ಚಿನ್ನದ ಸರದ ಸಮೇತ ಆ ದುಂಡಗಿನ ಗಡಿಯಾರ ಮತ್ತು ವಿವಿಧಾಕಾರದ ಆ ಕನ್ನಡಕಗಳು. ಕನ್ನಡಕವು ಹೊರಗಿನ ಜಗವನ್ನು ಸ್ಪಷ್ಟವಾಗಿ ಕಾಣಿಸಲು ಎಷ್ಟು ಸಹಕಾರಿಯೋ ಹಾಗೆ ನಮ್ಮ ಹೊರ ರೂಪವನ್ನು ತುಸುವಾದರೂ ಸಹ್ಯವಾಗಿ ಕಾಣಿಸಬಲ್ಲ ತಾಕತ್ತು ಅವಕ್ಕೂ ಇದೆ.

ನಮ್ಮ ಮಹಾತ್ಮ ಗಾಂಧಿಯವರ ಅತ್ಯಂತ ಸುಲಭದ ರೇಖಾ ಚಿತ್ರ ಬಿಡಿಸುವಾಗ ನಾವು ಅವರ ಕನ್ನಡದಿಂದಲೇ ಶುರು ಮಾಡುತ್ತೇವೆ ಹೌದೋ ಅಲ್ಲವೋ?

ಹಳೇ ಸಿನಿಮಾಗಳಲ್ಲಿ ನಾಯಕ ನಟರು ಬಳಸುತ್ತಿದ್ದ ಊರಗಲದ ತಂಪು ಕನ್ನಡಕ ಗಮನ ಸೆಳೆಯುತ್ತಿದ್ದವು. ಕೆಲ ರಾಜಕೀಯ ನಾಯಕರನ್ನು ನಾವು ಅವರ ಕನ್ನಡಕವಿಲ್ಲದೆ ಗುರುತೂ ಹಿಡಿಯಲಾರವೇನೋ ಅಲ್ಲವೇ? ಅಂತಹ ಊರಗಲದಿಂದ ಈಗ ಸಾವಿರಗಟ್ಟಲೆ ಬೆಲೆ ಬಾಳುವ ತಂಪು ಕನ್ನಡಕಗಳ ಜಮಾನಾದವರೆಗೂ ಅವು ನಮ್ಮ ಬದುಕಿನ ಅವಿಭಾಜ್ಯ ಅಂಗವೇ. ನಾನು ’ಆ ಕಂಪನಿ’ ತಂಪು ಕನ್ನಡಕ ಧರಿಸಿದ್ದೇನೆ ಎನ್ನುವುದು ಪ್ರತಿಷ್ಠೆಯ ಸೂಚಕವೇ.

ಸಿನಿಮಾಗಳಲ್ಲಿ ಜಿಪುಣ ಪಾತ್ರಗಳನ್ನು ತೋರಿಸುವ ಪರಿಕಲ್ಪನೆ ಗಮನಿಸಿ, ಅವರ ಕನ್ನಡಕದ ಒಂದು ಆಧಾರ ಮುರಿದಿತ್ತೆನ್ನಿ ಅದಕ್ಕೆ ಅವರು ದಾರ ಕಟ್ಟಿಕೊಂಡು ಮೂಗಿನ ಮೇಲೆ ಏರಿಸಿರುತ್ತಾರೆ!

ಇನ್ನೂ ಅಚ್ಚರಿ ಎಂದರೆ ನಮ್ಮ ಅತ್ತೆ ಮತ್ತು ಮಾವನವರದು ಅಪರೂಪದ ಆದರ್ಶ ದಾಂಪತ್ಯ. ಅವರು ಹೇಗೆ  ಒಬ್ಬರನ್ನೊಬ್ಬರು ಬಿಟ್ಟಿರಲಾರೊ ಹಾಗೆಯೇ ಅವರ ಕನ್ನಡಕವೂ ಸಹ. ಒಂದೇ ಕನ್ನಡಕ ಅದು ಹೇಗೋ ಇಬ್ಬರು ಬಳಸಬಹುದಾಗಿದೆ.

ಈಗ ಬಿಡಿ ಚಾಳೀಸುಗಳ ನಿವಾರಣೆಗಾಗಿ ನೇತ್ರ ತಜ್ಞರು ಕೆಲವೇ ನಿಮಿಷಗಳ ಶಸ್ತ್ರ ಚಿಕಿತ್ಸೆ ಮಾಡುತ್ತಾರೆ. ಹುಡುಗ ಹುಡುಗಿಯರು ಕಣ್ಣಿನ ಒಳಗೇ ಲೆನ್ಸ್ ಹಾಕಿಕೊಂಡು ತಮ್ಮ ಐಬು ಜಗದ್ಜಾಹೀರಾಗದ ಹಾಗೇ ಎಚ್ಚರಿಕೆ ವಹಿಸುತ್ತಾರೆ. ವಿದ್ಯಾವಂತರಿಗೆ ತಮ್ಮ ಓದಿನ ಪುಟ್ಟ ಕನ್ನಡಕವನ್ನು ಜೇಬಿನ ಪುಟ್ಟ ಹೋಲ್ಡರಿನಿಂದ ತೆಗೆದು ಹಾಕಿಕೊಳ್ಳುವುದೇ ಒಂದು ಗರ್ವ ಸೂಚಕವೇ.

ಈ ಮಸೂರಗಳು ಕನ್ನಡಕಕ್ಕೆ ಹೇಗೋ ಹಾಗೆ ಬದುಕಿನ ಹಲವು ಉಪಕರಣಗಳಿಗೆ ಮೂಲ. ಕ್ಯಾಮರಾ, ಪ್ರೊಜೆಕ್ಟರ್, ಸೂಕ್ಷ್ಮ ದರ್ಶಕ, ಉದರ ದರ್ಶಕ ಶಸ್ತ್ರ ಚಿಕಿತ್ಸಾ ಸಾಧನ ಹೀಗೆ ಇವುಗಳ ಬಳಕೆ ವಿಶ್ವ ವ್ಯಾಪಿ. 

ಚಿಕ್ಕವನಾಗಿದ್ದಾಗ ಬರ್ನ್ ಆದ ಬಲ್ಪುಗಳ ತಲೆ ಬುರುಡೆ ಒಡೆದು, ಖಾಲೀ ಪೆಟ್ಟಿಗೆಯ ಒಳಗಡೆ ಅದನ್ನು ಜೋಡಿಸಿ ಬಲ್ಪಿನ ಒಳಗಡೆ ನೀರು ತುಂಬಿಟ್ಟು ಸಿನಿಮಾ ಪ್ರೊಜೆಕ್ಟರ್ ಅಂತ ತಯಾರು ಮಾಡುತ್ತಿದ್ದೆ. ಆ ನೀರು ತುಂಬಿದ ಬಲ್ಬೇ ಮಸೂರದ ಹಾಗೆ ಕೆಲಸ ಮಾಡುತ್ತಿತ್ತು. ಕಿಟಕಿಯ ತೂತಿನಿಂದ ಕನ್ನಡಿ ಮುಖೇನ ಹಾಯಿಸಿದ ಸೂರ್ಯನ ಬೆಳಕಲ್ಲಿ,  ಮೂಡುತ್ತಿದ್ದ  ಸಿನಿಮಾ ರೀಲಿನ ಒಂದೊಂದೇ ಫ್ರೇಮು ಅಮಿತಾನಂದವನ್ನು ಕೊಡುತ್ತಿತ್ತು. ಏನೋ ಕಂಡು ಹಿಡಿದ ಸಂಭ್ರಮ ನನಗೆ. ನೀರು ತುಂಬಿದ ಬಲ್ಬೂ ಮಸೂರದ ಕೆಲಸ ಮಾಡುತ್ತಿತ್ತು.

ಅಂದ ಹಾಗೆ ಈ ಲೇಖನವನ್ನು ಬೆರಳಚ್ಚಿಸುವಾಗಲೂ ನಾನು ಕನ್ನಡಕ ಹಾಕಿಕೊಂಡೇ ಕುಳಿತಿದ್ದೇನೆ ಎಂದರೆ, ಇದರ ಅನಿವಾರ್ಯತೆ ನಿಮಗೆ ಅರಿವಾಗಿರಬಹುದಲ್ಲವೇ?

ಗಲ್ಫ ಕನ್ನಡಿಗ ಈ ಪತ್ರಿಕೆಯಲ್ಲಿ ಪ್ರಕಟಿತ.
21.12.2012

http://gulfkannadiga.com/news/culture/29066.html

(ಚಿತ್ರ ಕೃಪೆ : ಅಂತರ್ಜಾಲ)

ಶಸ್ತ್ರ ಚಿಕಿತ್ಸಾ ಕೊಠಡಿ ಎಂಬ ಕೌತುಕ…

Gulf Kannadiga

Gulf Kannadiga

Week : 11

OT1

“ಶರೀರೇ ಜರ್ಜರೀಭೂತೇ ವ್ಯಾಧಿಗ್ರಸ್ತೇ ಕಳೇವರೇ |
ಔಷಧಂ ಜಾಹ್ನವೀತೋಯಂ ವೈದ್ಯೋ ನಾರಾಯಣೋ ಹರಿಃ ||”  

ವಾಹಿನಿಗಳ ಛಾಯಾಗ್ರಾಹಕನಾಗಿ ನನ್ನ ವೃತ್ತಿ ಆರಂಭಿಸಿದ ಮೇಲೆ, ನಾನು ತುಂಬಾ ಪ್ರೀತಿಯಿಂದ ಇಂದಿಗೂ ಹೆಚ್ಚಿನ ಮುತವರ್ಜಿ ವಹಿಸಿ ಛಾಯಾಗ್ರಾಹಣ ಮಾಡುವ ವಿಭಾಗವೆಂದರೆಂದರೆ ವೈದ್ಯಕೀಯ ಛಾಯಾಗ್ರಹಣ. ಅದರಲ್ಲೂ ಮುಖ್ಯವಾಗಿ ಶಸ್ತ್ರ ಚಿಕಿತ್ಸೆಗಳು.

ದೇವರ ಕೃಪೆಯಿಂದ ಇಂದಿನವರೆಗೂ ನಾನು ತಲೆಯಿಂದ ಪಾದದವರೆಗೂ ಹಲವಾರು ಶಸ್ತ್ರ ಚಿಕಿತ್ಸೆಗಳನ್ನು, ಜಿಗಣೆ ಚಿಕಿತ್ಸೆ, ಕೇರಳದ ಕಾಯ ಕಲ್ಪ,  ಪ್ರಕೃತಿ ಚಿಕಿತ್ಸೆಯ ಎಲ್ಲಾ ಹಂತಗಳು (ಎನಿಮಾ ಒಂದನ್ನು ಹೊರತುಪಡಿಸಿ! ಹಹ್ಹಹ್ಹಾ…) ಮುಂತಾದ ಹಲವು ವೈದ್ಯ ಪದ್ಧತಿಗಳನ್ನು ಛಾಯಾಗ್ರಹಣ ಮಾಡಿದ್ದೇನೆ.

ಅದರಲ್ಲೂ ನನಗೆ ಶಸ್ತ್ರ ಚಿಕಿತ್ಸೆಯ ಛಾಯಾಗ್ರಹಣವೆಂದರೆ ಅತ್ಯಂತ ಮೆಚ್ಚಿನ ಜವಾಬ್ದಾರಿ. ಶಸ್ತ್ರ ಚಿಕಿತ್ಸಾ ಕೊಠಡಿ ಪ್ರವೇಶಿಸುವ ಮುನ್ನ ನನ್ನ ಎಲ್ಲ ಬಟ್ಟೆಗಳನ್ನು ಬಿಚ್ಚಿಟ್ಟು ಆಸ್ಪತ್ರೆಯ ಉಡುಗೆ ಧರಿಸಿ ಕೊಠಡಿ ಹೊಕ್ಕೆನೆಂದರೆ, ನನಗೆ ಜೀವ ಉಳಿಸುವ ಆ ವೈದ್ಯ ಲೋಕದ ವಿಸ್ಮಯಗಳು ತೆರೆದುಕೊಳ್ಳುತ್ತಾ ಹೋಗುತ್ತದೆ.

ಹಿಡಿ ಗಾತ್ರದ ಮೂತ್ರ ಪಿಂಡಗಳು ಕೈ ಕೊಟ್ಟಾಗ, ರೋಗಿಯ ಮೂತ್ರವನ್ನು ಶುದ್ಧೀಕರಿಸುವ ಆ ಬೃಹತ್ ಯಂತ್ರ.

ಹೃದಯದ ಶಸ್ತ್ರ ಚಿಕಿತ್ಸೆಗಳ ಸಮಯದಲ್ಲಿ ಬಳಸುವ ದೊಡ್ಡ ಗಾತ್ರದ ರಕ್ತ ಸಂಚಾಲನಾ ಯಂತ್ರ.  

ಮೂಳೆ ತಜ್ಞರು ಶಸ್ತ್ರ ಚಿಕಿತ್ಸೆಗಾಗಿ ಬಳಸುವ ಕತ್ತರಿಸುವ, ನೆಟ್ ಬೋಲ್ಟ್, ಸರಳು, ಕೃತಕ ಮಂಡಿ, ಮುಂತಾದ ಮರಗೆಲಸದಂತಹ ಸರಂಜಾಮುಗಳು.

ಅಲ್ಲೇಲ್ಲೋ ದೂರದ ದೇಶದಲ್ಲಿ ಕುಳಿತ ತಜ್ಞ ವೈದ್ಯ ಇಲ್ಲಿನ ರೋಗಿಗೆ ಯಂತ್ರ ಮಾನವ ಕೈಗಳ ಮೂಲಕ ಅಥವಾ ಸೂಚನೆಗಳನ್ನು ಕೊಡುವ ಮೂಲಕ ನಡೆಸುವ ಶಸ್ತ್ರ ಚಿಕಿತ್ಸೆ ಹೀಗೆ ಹತ್ತು ಹಲವು ಅಚ್ಚರಿಗಳು ತೆರೆದುಕೊಳ್ಳುವ ಪ್ರಪಂಚವದು.

ಇವೆಲ್ಲ ನೋಡಿದಾಗಲೆಲ್ಲ ಭಗವಂತ ಸೃಷ್ಟಿಯ ಕೌತುಕತೆ ಅಚ್ಚರಿ ತರಿಸುತ್ತದೆ. (ನಾಸ್ತಿಕ ಮಿತ್ರರಿಗಾಗಿ ಹೇಳುವುದಾದರೆ ಜೀವ ವಿಜ್ಞಾನದ ವಿಕಸನದ ಅದ್ಭುತ).

ನನಗೆ ಒದಗಿ ಬಂದ ಸದವಕಾಶಗಳಲ್ಲಿ ನನಗೆ ನೆನಪಿನಲ್ಲಿ ಉಳಿದ ಶಸ್ತ್ರ ಚಿಕಿತ್ಸೆ ಎಂದರೆ, ಆಂಧ್ರದ ಗಡಿ ಭಾಗದ ಜಲ್ಲೀ ಕ್ರಷರ್ ಕಾರ್ಮಿಕನೊಬ್ಬ ಅಚಾನಕ್ಕಾಗಿ ಅಪಘಾತಕ್ಕೆ ಒಳಗಾದ. ಆತನ ಒಂದು ಕೈಯು ಮೊಳ ಕೈ ಮೇಲ್ಭಾಗದವರೆಗೂ ಕತ್ತರಿಸಿ ಹೋಗಿತ್ತು. ಪ್ರಥಮ ಚಿಕಿತ್ಸೆಯ ನಂತರ ಆತನನ್ನು ಮತ್ತು ಆತನ ಕತ್ತರಿಸಿದ ಕೈಯನ್ನು ರಾಜಧಾನಿಯ ಆಸ್ಪತ್ರೆಗೆ ತಂದರು. ಅಪರೂಪದ ಶಸ್ತ್ರ ಚಿಕಿತ್ಸೆಯಾದ್ದರಿಂದ ಪರಿಚಿತ ವೈದ್ಯರು ನನ್ನನ್ನೂ ಕರೆಸಿಕೊಂಡಿದ್ದರು. ಇಡೀ ಎಂಟು ಗಂಟೆಗಳ ಪರಿಶ್ರಮದಿಂದ ರೋಗಿಗೆ ಕೈ ಮತ್ತೆ ಜೋಡಿಸಲಾಯಿತು.

ಇನ್ನೊಂದು ಪ್ರಕರಣದಲ್ಲಿ ೫ ತಿಂಗಳ ಮಗುವೊಂದು ಹುಟ್ಟಿನಲ್ಲೇ ಅದರ ಎರಡೂ ಕಣ್ಣು ರೆಪ್ಪೆಗಳ ಚರ್ಮ ಒಂದಕ್ಕೊಂದು ಬೆಸೆದು ಬಿಟ್ಟಿತ್ತು. ಕಣ್ಣು ತೆರೆಯಲೇ ಆಗುತ್ತಿರಲಿಲ್ಲ. ಅತ್ಯಂತ ನಾಜೂಕಿನ ಶಸ್ತ್ರ ಚಿಕಿತ್ಸೆಯಿಂದ ಎರಡೂ ರೆಪ್ಪೆಗಳನ್ನು ಬಿಡಿಸಿ ಮಗುವಿಗೆ ಕಣ್ಣು ಕಾಣಲು ಅವಕಾಶ ಮಾಡಿಕೊಡ ಬೇಕಾಯಿತು. ಆ ಮಗುವು ಈಗ ಯಾವುದೋ ಶಾಲೆಯ ಯಾವ ಪಠ್ಯ ಪುಸ್ತಕವನ್ನೋ ಶ್ರದ್ಧೆಯಿಂದ ಓದುತ್ತಿರಬಹುದು. ಪ್ರತಿ ನೋಟದಲ್ಲೂ ಆಕೆ ಬದುಕಿನ ಪೂರ ಅಂದು ಗಂಟೆಗಟ್ಟಲೆ ಸೂಕ್ಷ್ಮವಾಗಿ ಶಸ್ತ್ರ ಚಿಕಿತ್ಸೆ ಮಾಡಿದ ವೈದ್ಯರ ತಂಡವನ್ನು ನೆನೆಯುತ್ತಿರಬಹುದು.

ನಾನೇ ಗಮನಿಸುತ್ತಾ ಬಂದಂತೆ, ಶಸ್ತ್ರ ಚಿಕಿತ್ಸಾ ವಿಧಾನಗಳು, ಬಳಸುವ ಪರಿಕರಗಳು, ಶಸ್ತ್ರ ಚಿಕಿತ್ಸೆಗಾಗಿ ತೆಗೆದುಕೊಳ್ಳುವ ಸಮಯ ಮತ್ತು ರೋಗಿಯು ಚೇತರಿಸಿಕೊಳ್ಳಲು ತೆಗೆದುಕೊಳ್ಳುವ ಸಮಯದಲ್ಲೂ ಕ್ರಾಂತಿಕಾರಕ ಸುಧಾರಣೆಗಳಾಗಿವೆ. ಅಂತರ್ಜಾಲದ ಮೂಲಕ, ಪುಟ್ಟ ಯಂತ್ರ ಮಾನವ ಕೈಗಳ ಮೂಲಕ, ತೆರೆದ ಶಸ್ತ್ರ ಚಿಕಿತ್ಸೆಯನ್ನು ತಪ್ಪಿಸುವ ಲ್ಯಾಪ್ರೋಸ್ಕೋಪಿ ಎಂಬ ವೈದ್ಯಕೀಯ ವರದಾನದ ಮೂಲಕ ದಿನೇ ದಿನೇ ಶಸ್ತ್ರ ಚಿಕಿತ್ಸೆ ಪರಿಣಾಮಕಾರಿ ಆಗುತ್ತಿದೆ.

ಒಮ್ಮೆ ಹೀಗೆ ಬದಲೀ ಮೂತ್ರ ಪಿಂಡದ ಮರು ಜೋಡಣೆ ಶಸ್ತ್ರ ಚಿಕಿತ್ಸೆಗಾಗಿ ನಾನೂ ಮತ್ತು ನನ್ನ ಸಹಾಯಕ ಆಸ್ಪತ್ರೆಗೆ ಹೋಗಿದ್ದೆವು. ಇದು ನಡೆದದ್ದು ಸುಮಾರು ಹತ್ತು ವರ್ಷಗಳ ಹಿಂದಿನ ಮಾತು. ಆಗ ಕ್ಯಾಮರಾ ಬೇರೆ ಯಮ ಗಾತ್ರದ್ದು ಮತ್ತು ಅದಕ್ಕೆ ವಿದ್ಯುತ್ ಕೊಡುವ ಬ್ಯಾಟರಿಯೇ ಬೇರೆ ಇರುತಿತ್ತು. ನಾವಿಬ್ಬರೂ ಆಸ್ಪತ್ರೆಯ ಉಡುಪು ಬದಲಿಸಿಕೊಂಡು ಶಸ್ತ್ರ ಚಿಕಿತ್ಸೆ ಕೊಠಡಿ ಪ್ರವೇಶಿಸಿದೆವು. ನಾನು ಕ್ಯಾಮರಾ ಹೆಗಲಿಗೆ ಏರಿಸಿದ್ದರೆ, ನನ್ನ ಪಕ್ಕದಲ್ಲಿ ತೂಕದ ಬ್ಯಾಟರಿ ಪೆಟ್ಟಿಗೆ ನೇತು ಹಾಕಿಕೊಂಡು ನನ್ನ ಸಹಾಯಕ. ಮಂಚದ ಮೇಲೆ ರೋಗಿಯನ್ನು ಮಲಗಿಸಿ ಮೊದಲೇ ಗುರುತಿಸಿದ್ದ ಚುಕ್ಕೆಗಳ ಅನ್ವಯ ವೈದ್ಯರು ಮೂತ್ರ ಪಿಂಡದ ಸ್ಯಾಂಪಲ್ ಸಂಗ್ರಹಿಸಲು ದಬ್ಬಳದಂತಹ ಉದ್ದದ ಸೂಜಿಯನ್ನು ದೇಹದೊಳಗೆ ತೂರಿಸಿದರು. ನಾನು ಯಾವ ಹಂತವೂ ತಪ್ಪಿಹೋಗದಂತೆ ಚಿತ್ರೀಕರಿಸುತ್ತಲೇ ಇದ್ದೆ. ಯಾಕೋ ನನ್ನ ಕ್ಯಾಮರಾವು ಜಗ್ಗಿದಂತಾಯ್ತು. ಸಹಾಯಕನಿಗೆ ಹುಷಾರಪ್ಪ ಎಂದು ಹೇಳಲು ಅವನ ಕಡೆ ತಿರುಗಿದೆ. ಆಸಾಮಿ ನಾಪತ್ತೇ! ಅರೆ ಎಲ್ಲಿ ಹೋದ ಎಂದು ನೋಡಿದರೆ ರಕ್ತ, ಶಸ್ತ್ರ ಚಿಕಿತ್ಸೆ ಕೊಠಡಿಯ ವಾತಾವರಣ, ಅದರ ವಾಸನೆಗಳು ಮತ್ತು ಸೂಜಿ ಚುಚ್ಚಿದ್ದನ್ನು ನೋಡಿದ ಆ ಹುಡುಗು ಮೂರ್ಚೆ ಹೋಗಿದ್ದ!

ಅಂತಹ ಜೀವನ್ಮರಣದ ಪ್ರಶ್ನೆ ಇರುವ ಗಳಿಗೆಯಲ್ಲೂ ನಾನು ನೆನಸಿಕೊಂಡು ನಗುವ ಹಾಸ್ಯದ ಸಂಗತಿ ಎಂದರೆ, ಯಾರೋ ರಾಜಕಾರಣಿಗೆ ಚಿಕ್ಕದೇನೋ ಶಸ್ತ್ರ ಚಿಕಿತ್ಸೆ ಇದ್ದಾಗ ವೈದ್ಯರು ಸ್ಥಳೀಯ ಅರವಳಿಕೆ ಕೊಡಲು ಮುಂದಾದರು. ಇದನ್ನು ತಿಳಿದುಕೊಂಡ ಆತ ವೈದ್ಯರಿಗೆ ಇಂಪೋರ್ಟೆಡ್ ಆರವಳಿಕೆ ಮದ್ದೇಕೊಡಿ ಎಂದು ದುಂಬಾಲು ಬಿದ್ದನಂತೆ.

ತುಂಬಾ ಪರಿಚಿತ ಪರಿಚಿತ ವೈದ್ಯರೊಬ್ಬರು ನನಗೇ ಆಪರೇಷನ್ ಟೇಬಲ್ಲಿನಲ್ಲೂ ರೀ ಟೇಕ್ ಕೇಳಬೇಡಪ್ಪ ಎಂದು ಹಾಸ್ಯ ಮಾಡುತ್ತಿದ್ದರು!

ಇತ್ತೀಚೆಗಂತೂ ವೈದ್ಯಕೀಯ, ಆಸ್ಪತ್ರೆ ಮತ್ತು ಔಷಧಿ ದುಬಾರಿಯಾಗುತ್ತ, ಮಧ್ಯಮ ಹಾಗೂ ಬಡ ರೋಗಿಗಳ ಪಾಲಿಗೆ ಗಗನ ಕುಸುಮವಾಗುತ್ತಿದೆ. ಈ ನಡುವೆಯೂ ದಾನಿಗಳು ಮುಂದೆ ಬಂದು ವೆಚ್ಚವನ್ನು ಭರಸುತ್ತಿದ್ದಾರೆ. ಸರ್ಕಾರೀ ಪ್ರಾಥಮಿಕ ಚಿಕಿತ್ಸಾ ಕೇಂದ್ರಗಳು ಮತ್ತು ದೊಡ್ಡ ಆಸ್ಪತ್ರೆಗಳು ತಕ್ಕ ಮಟ್ಟಿಗೆ ಒಳ್ಳೆಯ ಕೆಲಸವನ್ನೇ ಮಾಡುತ್ತಿವೆ. ಅಂತೆಯೇ ನೌಕರರಿಗೆ ಲಭ್ಯವಿರುವ ಇ.ಎಸ್.ಐ ಮತ್ತು ಶ್ರೀಸಾಮಾನ್ಯರಿಗೂ ಒದಗುವ ವೈದ್ಯಕೀಯ ವಿಮಾ ಯೋಜನೆಗಳು ಸಹ.

ಇಂದು ಹಲವು ಪ್ರತಿಷ್ಠಿತ ಆಸ್ಪತ್ರೆಗಳು ದಾನಿಗಳ ಪಟ್ಟಿ ಮಾಡಿಟ್ಟು, ಬಡ ರೋಗಿಗಳ ಶಸ್ತ್ರ ಚಿಕಿತ್ಸೆಯನ್ನು ಉಚಿತವಾಗಿ ನೆರೆವೇರಿಸುತ್ತಿದ್ದಾರೆ.

ಮುಖ್ಯವಾಗಿ ಸರ್ಕಾರಗಳು ಮುತವರ್ಜಿ ವಹಿಸಿ, ವೈದ್ಯ ಶಾಸ್ತ್ರದ ಬಗೆಗೆ ಹೆಚ್ಚಿನ ಸಂಶೋಧನೆಗಳನ್ನು ಪ್ರೇರೇಪಿಸಬೇಕಿದೆ. ಮನುಜ ಮತ್ತು ಪಶುಗಳ ಅರೋಗ್ಯದ ದೃಷ್ಟಿಯಿಂದ ವಾರ್ಷಿಕ ಅಯವ್ಯಯದಲ್ಲೂ ಸಂಶೋಧನೆಗಳಿಗೆ ದೊಡ್ಡ ಪಾಲನ್ನು ಎತ್ತಿಡಬೇಕಿದೆ. ಸುಲಭ ಮತ್ತು ಮಿತವ್ಯಯಕಾರಿ ಚಿಕಿತ್ಸಾ ಪದ್ಧತಿಗಳು ಮುಂದಿನ ದಿನಗಳಲ್ಲಿ ನಗರಗಳಲ್ಲಿ ಮಾತ್ರವೇ ಅಲ್ಲದೇ ಗ್ರಾಮೀಣ ಪ್ರದೇಶಗಳಲ್ಲೂ ಗುಡ್ಡಗಾಡುಗಳಲ್ಲೂ ಬರಲೆಂದು ಆಶಿಸುತ್ತೇನೆ.

ಅಂತೆಯೇ ಇಲ್ಲಿಯವರೆಗೂ ನಾನು ಚಿತ್ರೀಕರಣ ಮಾಡದ ಎಲ್ಲ ಶಸ್ತ್ರ ಚಿಕಿತ್ಸೆಗಳ ಮತ್ತು ವೈದ್ಯಕೀಯ ಪದ್ಧತಿಗಳ ಛಾಯಾಗ್ರಹಣ ಮಾಡುವ ಅವಕಾಶವೂ ನನಗೆ ದೊರೆಯಲಿ.

ನಮ್ಮ ಬದುಕಿನ ಅವಭಾಜ್ಯ ಅಂಗವಾಗಿ ನಮ್ಮ ಸ್ವಾಸ್ಥ್ಯವನ್ನು ಸದಾ ಕಾಪಾಡುವ ಎಲ್ಲ ವೈದ್ಯರಿಗೆ ನಾನು ಈ ಮೂಲಕ ನಮಿಸುತ್ತೇನೆ.

OT2

Gulf Kannadiga

ಗಲ್ಫ ಕನ್ನಡಿಗ ಈ ಪತ್ರಿಕೆಯಲ್ಲಿ ಪ್ರಕಟಿತ.
14.12.2012

http://gulfkannadiga.com/news/culture/26881.html

(ಚಿತ್ರ ಕೃಪೆ : ಅಂತರ್ಜಾಲ)

ಸಾಹಿತಿ ಮತ್ತು ಸಹೃದಯತೆ…

Gulf Kannadiga

Week : 5

 

 

 

ಚಿತ್ರ ಕೃಪೆ : ಗಲ್ಫ್ ಕನ್ನಡಿಗ

ಮರಣೋತ್ತರ ಪ್ರಶಸ್ತಿ
ಅಮೃತ ಶಿಲೆ ಗೋರಿ,
ಬದುಕಿದ್ದಾಗ ತುಂಬೀತೆ
ಖಾಲೀ ಹೊಟ್ಟೆ?

ನಮಸ್ಕಾರ, ನಿಮ್ಮೆಲ್ಲರಿಗೂ ಕನ್ನಡ ರಾಜ್ಯೋತ್ಸವದ ಸುಭಾಶಯಗಳು. ಏಕೀಕೃತ ಕರ್ನಾಟಕದಲ್ಲಿ ಈಗ ಸಾಹಿತಿ ಎದುರಿಸುತ್ತಿರುವ ಸಮಸ್ಯೆಗಳ ಕಿರು ಪರಿಚಯ ಈ ಬರಹ.

ಡಾ|| ಕರೀಂ ಖಾನ್

ಇದು ಅತಿಶೋಯುಕ್ತಿ ಅನಿಸಿದರೂ ಸಹ ನಾವು ಭಾರತೀಯರು ಸಾಹಿತ್ಯ ಪೋಷಕರಲ್ಲವೇನೋ ಎನ್ನುವ ಅನುಮಾನ ಕಾಡುತ್ತದೆ. ಹಿಂದೆಲ್ಲ ರಾಜಾಶ್ರಯ ಸಿಕ್ಕ ಕವಿ ಮಹೋದಯರು ನೆಲೆ ಕಂಡುಕೊಂಡರೆ, ಆಗಿನ ಕಾಲದಲ್ಲೂ ಬೆಳಕಿಗೆ ಬಾರದ ಅದೆಷ್ಟೋ ಮೇರು ಸಾಹಿತಿಗಳು ಇದ್ದಲ್ಲೇ ಸೊರಟಿ ಹೋಗಿರಬಹುದು.

ಅಂತೆಯೇ ಇಂದಿನ ಕಾಲಮಾನದಲ್ಲೂ ಬೆರಳೆಣಿಕೆಯಷ್ಟು ಸಾಹಿತಿಗಳು ಪ್ರಕಾಶಮಾನವಾಗಿ ಕಂಡರೂ, ಇತರರ ಬರಹಗಳು ಈಗಲೂ ಅಲಭ್ಯವೇ. ರಾಜಧಾನಿಯಲ್ಲಿ ನೆಲೆಸಿರುವ ಸಾಹಿತಿಗಳು ಹೆಚ್ಚು ಜನಜನಿತವಾದರೆ, ಗ್ರಾಮೀಣ ಸಾಹಿತಿಗಳು ಎಲೆ ಮರೆಯಲ್ಲೇ ಉಳಿದು ಬಿಡುತ್ತಾರೆ.

ಬರೆಯಲು ಆರಂಭಿಸಿರುವ ನನ್ನಂತಹ ಹಲವರಿಗೆ ಬರಹಗಳನ್ನು ಪತ್ರಿಕೆಗಳಿಗೆ ಕಳುಹಿಸಿ, ಅವು ಪ್ರಕಟವಾಗದೆ ನೊಂದುಕೊಳ್ಳುವುದು ಒಂದು ಮಾತಾದರೆ, ಮುಖ್ಯವಾಗಿ ಕಾಡುವುದು ಪ್ರಕಾಶಕರ ಕೊರತೆ.

ಪ್ರಕಾಶಕ ಬಂಧುಗಳು ಹೊಸಬರ ಸಾಹಿತ್ಯವನ್ನೂ ಗಂಭೀರವಾಗಿ ಪರಿಣಮಿಸಿ, ಕಾಳುಗಳನ್ನು ಆಯ್ದು ಜೊಳ್ಳುಗಳನ್ನು ಗಾಳಿಗೆ ತೂರಿ ಪುಸ್ತಕ ರೂಪದಲ್ಲಿ ಪ್ರಕಟಿಸಬೇಕು. ಪ್ರಕಟಿತ ಪುಸ್ತಕಗಳು ಗ್ರಂಥಾಲಯಗಳಲ್ಲೂ ಮತ್ತು ಚಿಕ್ಕ ಊರುಗಳ ಪುಸ್ತಕದ ಅಂಗಡಿಗಳಲ್ಲೂ ಸಿಗುವಂತೆ ನೋಡಿಕೊಳ್ಳಬೇಕು.  
ಈಗಾಗಲೇ ಸರ್ಕಾರ, ವಿಶ್ವವಿದ್ಯಾಲಯಗಳು ಮತ್ತು ಪುಸ್ತಕ ಪ್ರಾಧಿಕಾರ ವರ್ಷಕ್ಕೆ ಇಂತಿಷ್ಟು ಎನ್ನುವಂತೆ ಕನ್ನಡ ಪುಸ್ತಕಗಳನ್ನು ಅಗ್ಗದ ಬೆಲೆಗೆ ಪ್ರಕಟ ಮಾಡುತ್ತಿದೆ. ಹೊಸ ಬರಹಗಾರರಿಗೂ ಇಲ್ಲಿ ಅವಕಾಶವಿದ್ದರೆ ಅವರೂ ಜನಜನಿತರಾಗುತ್ತಾರೆ.

ಈಗಾಗಲೇ ಜನ ಮಾನಸದಲ್ಲಿರುವ ಕೃತಿಗಳನ್ನು ಅಗ್ಗದ ಧರದಲ್ಲಿ ಸರ್ಕಾರವೇ ಜನರ ಬಳಿ ತಂದರೆ, ನಿಜವಾದ ಸಾಹಿತ್ಯ ಸೇವೆಯಾಗುತ್ತದೆ. ಗ್ರಂಥಾಲಯಗಳು ಉತ್ತಮ ಸಾಹಿತ್ಯದ ಆಗರಗಳಾಗಬೇಕು.

ಸಾಹಿತಿಯು ಬದುಕಿದ್ದಾಗಲೇ ಆತನ ಕೃತಿಗಳು ಪ್ರಕಟವಾಗಿ, ಮಾರಾಟವಾಗಿ ಅದರಿಂದ ಬರುವ ಲಾಭವು ಅವನಿಗೆ ದೊರಕುವಂತಾಗಬೇಕು. ಬಡತನದಲ್ಲಿರುವ ಸಾಹಿತಿಗಳಿಗೆ ಸರ್ಕಾರವು ಮತ್ತು ಸಂಸ್ಥೆಗಳು ಅರ್ಥಿಕ ಸಹಾಯ ನೀಡಬೇಕು.

ಕನ್ನಡ ಸಾಹಿತ್ಯ ಪರಿಷತ್ತು ಅಂತರ್ಜಾಲವನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ಇಲ್ಲಿನ ಮತ್ತು ಹೊರನಾಡಿನ ಕನ್ನಡಿಗರು ಬ್ಲಾಗ್ ಮುಂತಾದ ಅಂತರ್ಜಾಲ ಮಾಧ್ಯಮವನ್ನು ಬಳಸಿಕೊಂಡು, ಅತ್ಯುತ್ತಮವಾಗಿ ಸಾಹಿತ್ಯ ಸೇವೆ ಮಾಡುತ್ತಿದ್ದಾರೆ. ಮುಂದಿನ ದಿನಗಳು ಅಂತರ್ಜಾಲದ ದಿನಗಳು ಎಂಬುದನ್ನು ಅವರು ಮನಗಾಣಬೇಕು.

ಕನ್ನಡದ ಏಕರೀತಿಯ ಫಾಂಟ್, ತಂತ್ರಾಂಶ ಮತ್ತು ಕೀಲಿ ಮಣೆ ಪ್ರಚಾರಕ್ಕೆ ಬರಬೇಕು. ಗಣಕ ಯಂತ್ರವಲ್ಲದೆ ಎಲ್ಲ ರೀತಿಯ ಮೊಬೈಲ್ ಪರಿಕರಗಳಲ್ಲೂ ಕನ್ನಡ ಓದಲು ಮತ್ತು ಬೆರಳಚ್ಚು ಮಾಡಲು ಅನುಕೂಲವಾಗುವಂತೆ ತಂತ್ರಾಂಶ ದೊರಕಬೇಕು.

ಮಾಸ್ತಿಯವರ ಗಾಂಧಿ ಬಜಾರಿನ ಮನೆ

ಕಡೆಯದಾಗಿ, ನಮ್ಮ ಮೇರು ಸಾಹಿತಿಗಳು ಇದ್ದ ಮನೆಗಳು ಪೂಜನೀಯ ಸ್ಥಳವಾಗಬೇಕಿತ್ತು, ಆದರೆ ಅವು ನಾಮಾವಶೇಷವೂ ಇಲ್ಲದೆ ಅವಸಾನ ಹೊಂದಿವೆ. ರಾಜಧಾನಿ ಬೆಂಗಳೂರಿನಲ್ಲಿಯ ಮಾಸ್ತಿ, ಕೈಲಾಸಂ ಅವರ ಮನೆಗಳು ಎಲ್ಲಿದ್ದವೆಂದರೆ ಮುಂದಿನ ತಲೆಮಾರಿಗೆ ತೋರಿಸುವುದಾದರೂ ಹೇಗೆ? ಅವುಗಳನ್ನು ಇನ್ನಾದರೂ ಕಾಪಾಡುವತ್ತ ಗಮನ ಹರಿಸಬೇಕು.
(ಚಿತ್ರ ಕೃಪೆ : ಅಂತರ್ಜಾಲ)
ಗಲ್ಫ ಕನ್ನಡಿಗ ಈ ಪತ್ರಿಕೆಯಲ್ಲಿ ಪ್ರಕಟಿತ.
02.11.2012
http://gulfkannadiga.com/news/culture/14166.html

ಮತ್ತೆ ಹಸಿರು ಹೊದ್ದೀತೇ?

19/10/2012

         week : 3

ತಾರಸಿ ಏರಿ ನಿಂತಾಗಲೆಲ್ಲ ಕಣ್ಣಿಗೆ ತಂಪು ಮಾಡುತ್ತಿದ್ದದ್ದು ಆ ದಟ್ಟ ಹಸಿರಿನ ಹೊದಿಕೆ. ಬೇಸಿಗೆಯಲ್ಲೂ ತಂಪು ನೀಡುತ್ತಿದ್ದ ಆ ಅನನ್ಯ ಸಸ್ಯ ಸಂಪತ್ತು. ರಸ್ತೆ ಇಕ್ಕೆಲಗಳಗಳಲ್ಲೂ ದಾರಿ ಹೋಕರಿಗೆ ನೆರಳು ನೀಡುತ್ತಿದ್ದ ಸಾಲು ಮರಗಳು. ಇವೆಲ್ಲ ಕನಸಿನ ಚಿತ್ರಗಳಂತೆ ಕರಗಿ ಹೋದಾಗ ವ್ಯಥೆಯಾಗುತ್ತದೆ.

ತಮ್ಮ ಪ್ರೇಮ ಮಣ್ಣಾದರೂ ಹೆಸರಾದರೂ ಅಮರವಾಗಲಿ ಎಂದು ಬೃಹದ್ ಕಾಂಡಗಳ ಮೇಲೆ ಕೆತ್ತಿಟ್ಟ ಆ ಪ್ರೇಮ ಚಿಹ್ನೆಗಳೆಲ್ಲ ಎಲ್ಲಿ ಉರುವಲಾದವೋ?

ನನಗೆ ಬೆಂಗಳೂರೆಂದರೆ ಮನಸ್ಸಿನಲ್ಲಿ ಮೂಡುವ ಚಿತ್ರವೇ ವನ ಸಿರಿಯ ಪ್ರಶಾಂತ ನಗರ. ಮುಂಚಿನ ನಗರದ ಗಲ್ಲಿ ಗಲ್ಲಿಯೂ ಕಬ್ಬನ್ ಪಾರ್ಕೋ ಅಥವಾ ಲಾಲ್ ಬಾಗೋ ಅನಿಸುತ್ತಿದ್ದ ಕಾಲ ಈಗ ಗತ ನೆನಪು. ಕಲ್ಪವೃಕ್ಷಗಳಿಂದ ತುಂಬಿ ಮೆರೆಯುತ್ತಿದ್ದ ಮಲ್ಲೇಶ್ವರಂನ ತೆಂಗಿನ ಮರದ ರಸ್ತೆ ಕೂಡ ಈಗ ಬರೀ ಹೆಸರಷ್ಟೇ.  

ಎಂ.ಜಿ. ರಸ್ತೆಯಲ್ಲಿ ಮೆಟ್ರೋ ಕಾಮಗಾರಿಗಾಗಿ ತೆರವು ಮಾಡಿದ ಒಂದೆರಡು ಮರಗಳನ್ನು ಕಂಠೀರವ ಸ್ಟುಡಿಯೋದಲ್ಲಿ ನೆಟ್ಟರು ಅಂತ ಕೇಳಿದ್ದೆ. ಅಪ್ಪಿಕೋ ಚಳುವಳಿ ಮಾಡಿದರೂ ಸಹ ಸ್ಯಾಂಕೀ ಕೆರೆ ಬಳಿಯ ಹಲವು ಮರಗಳನ್ನು ಉಳಿಸಲಾಗಲೇ ಇಲ್ಲ! ದೊಡ್ಡ ದೊಡ್ಡ ಮರಗಳನ್ನು ಹೊತ್ತೊಯ್ದು ಎಲ್ಲೋ ನೆಡಲು ಅಪಾರ ಖರ್ಚು ವೆಚ್ಚ ಮತ್ತು ಸಾಗಾಣಿಕೆಯ ಸಮಸ್ಯೆಯನ್ನು ಸರ್ಕಾರ ಮುಂದಿಡಬಹುದು. ಬೇಡದ ಬಾಬ್ತುಗಳಿಗೆಲ್ಲ ಕೋಟ್ಯಾಂತರ ತೆರಿಗೆ ಹಣ ವ್ಯಯಿಸುವ ಸರ್ಕಾರಗಳಿಗೆ ನಗರದ ಸ್ವಾಸ್ಥ್ಯ ಕಾಪಾಡುವ ಮರಗಳನ್ನು ನಗರದ ಸುತ್ತ ಹಸಿರು ಪಟ್ಟಿ ಮಾಡಿ, ಅಲ್ಲಿ ಹೋಗಿ ನೆಡಲು ಅದರ ಖಜಾನೆ ಬರಿದಾಗುವುದಿಲ್ಲ. ಲಕ್ಷಾಂತರ ಸುರಿದು ಬಸ್ ಶೆಲ್ಟರುಗಳನ್ನು ನಿರ್ಮಿಸುವಾಗ ಇಕ್ಕೆಲಗಳಲ್ಲಿ ಮರಗಳನ್ನು ನೆಡಬಹುದು. ನಗರದ ಹಲವು ಬಸ್ ಸ್ಟಾಪುಗಳು ಈವಾಗಲೂ ಆಲದ ಮರ, ಹುಣಿಸೇ ಮರ ಎಂದೇ ಗುರುತಿಸುತ್ತೇವೆ. ಅದು ಮನುಷ್ಯ ಮತ್ತು ಮರದ ನಡುವಿನ ಅವಿನಾಭಾವ ಸಂಬಂಧ.

ಇಂದಿನ ಹವಾ ಮಾಲಿನ್ಯವನ್ನು ಶುದ್ಧೀಕರಿಸುವ, ಮಳೆಯನ್ನು ಸೆಳೆಯುವ ಮತ್ತು ಆಮ್ಲಜನಕವನ್ನು ನೀಡುವ ಮರಗಳನ್ನು ಉಳಿಸುವ ಕೆಲಸ ಅದರ ಆದ್ಯತಾ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಇರಬೇಕಿತ್ತು. ನನ್ನ ಮುತ್ತಜ್ಜನ ಕಾಲದ ಮರಗಳೆಲ್ಲ ಅಭಿವೃದ್ಧಿ ಹೆಸರಲ್ಲಿ ಬುಡ ಮೇಲಾಗುವಾಗ ಕರುಳು ಕಿವುಚುತ್ತದೆ. ಹೊಸ ತಂತ್ರಙ್ಞಾನವೋ  ಮಣ್ಣು ಮಸಿಯೋ ಬಳಸಿ, ಬೇರು ಸಮೇತ ಮರಗಳನ್ನು ಜತನವಾಗಿ ಹೊತ್ತೊಯ್ದು ಹೊರ ವಲಯದ ಬಯಲುಗಳಲಿ ಮರು ನೆಡಬಾರದೆ? ಎನಿಸುತ್ತದೆ.

ಬಲು ಬೇಗ ಎತ್ತರಕ್ಕೆ ಬೆಳೆಯುವ ಆದರೆ ಮಳೆ ಗಾಳಿಗೆ ನೆಳಕ್ಕೆ ಉರುಳುವ ಟೊಳ್ಳು ಕಾಂಡದ, ಬೇರಿಳಿಸದ ಮರಗಳನ್ನು ಬೆಳೆಸುವ ಬದಲು. ವೈಜ್ಞಾನಿಕವಾಗಿ ನಮ್ಮ ನೆಲಕ್ಕೆ ಒಗ್ಗುವ ಹಲವು ಉಪಯೋಗಗಳಿಗೆ ಆಗುವ ಮರಗಳನ್ನು ಕನಿಷ್ಟ ಪಕ್ಷ ಹೊಸ ಬಡಾವಣೆಗಳಲ್ಲಾದರೂ ನೆಟ್ಟು ಕಾಪಾಡುವ ಕ್ರಿಯಾ ಯೋಜನೆಗಳನ್ನು ನಗರಾಡಳಿತ, ನಗರಾಭಿವೃದ್ಧಿ ಪ್ರಾಧಿಕಾರ, ಸಾಮಾಜಿಕ ಅರಣ್ಯ ಇಲಾಖೆ ಮತ್ತು ಸರ್ಕಾರ ಕೂಡಲೇ ಕೈಗೊಳ್ಳಬೇಕಿದೆ. ಈಗಾಗಲೇ ಪೋಷಣೆ ಇಲ್ಲದೆ ಸೊರಗಿದ ಹಳೇ ಮರಗಳಿಗೂ ಕಾಯಕಲ್ಪ ಮಾಡಬೇಕಿದೆ.

ಜೊತೆಗೆ ತೋಟಗಾರಿಕೆ ಇಲಾಖೆಯೂ ಹಳೆಯ ಬಡಾವಣೆಗಳಲ್ಲಿ ಖಾಲಿ ಜಾಗವನ್ನು ಗುರ್ತಿಸಿ ಉದ್ಯಾನವನ ನಿರ್ಮಿಸಬೇಕು. ರಸ್ತೆಗಳನ್ನು ಹೂ ಗಿಡಗಳಿಂದ ಸಿಂಗರಿಸಬೇಕು. ಮನೆಗೊಂದು ಮರ ನೆಡಿ ಮತ್ತದ್ದನ್ನು ನಿಮ್ಮ ಮನೆ ಮಕ್ಕಳಂತೆ ನೋಡಿಕೊಳ್ಳಿ ಎಂಬ ಅರಿವೂ ಜನರಲ್ಲೂ ಮೂಡಿಸಬೇಕಿದೆ.

ಪಕ್ಕದ ರಾಯಲ ಸೀಮೆಯ ತಿರುಪತಿಯಂತೂ ಕುರುಚಲು ಗಿಡಗಳಷ್ಟೇ ಬೆಳೆಯುವ ನೆಲ. ತಿರುಮಲೈ ಬೆಟ್ಟವನ್ನು ಹಲವು ವರ್ಷಗಳ ತಪಸ್ಸಿನಂತೆ ಇಂದು ಹಸಿರಿನಿಂದ ನಳನಳಿಸುವಂತೆ ಮಾಡಿದ್ದು ನಮಗೆ ಉದಾಹರಣೆಯಾಗಲಿ.

ದುಖದ ಸಂಗತಿ ಎಂದರೆ, ಮೇಕ್ರೀ ಸರ್ಕಲ್ಲಿನ ಮೇಲೆ ನಕಲಿ ಮರವನ್ನು ರೂಪಿಸಿ, ಜಾಗೃತಿ ಮೂಡಿಸಿದ್ದೇವೆ ಎಂದು ಬೀಗುವವರು ಅಲ್ಲಿ ನಿಜವಾದ ಮರವನ್ನೇ ನೆಟ್ಟು ಪೋಷಿಸಿದ್ದರೆ, ನಿಜವಾಗಿ ಖುಷಿ ಪಡುತ್ತಿದ್ದೆವು. ನನ್ನ ನಗರ ಮಾತ್ರವಲ್ಲ ಇಡೀ ಭೂಮಿ ಹಸಿರು ಮಯವಾಗಿರಲಿ, ಕಾಡುಗಳು ನೆಲಗಳ್ಳರ ಪಾಲಾಗದಿರಲಿ ಎಂದು ಆಶಿಸುತ್ತೇನೆ.

(ಚಿತ್ರ ಕೃಪೆ : ಅಂತರ್ಜಾಲ)

http://gulfkannadiga.com/news/culture/10520.html

ಆಡು ಭಾಷೆ ಸರ್ವಕಾಲೀನ…

ಪಂಪನಿಂದ ಕಾವ್ಯವನ್ನು ಓದಿಕೊಂಡು ಬಂದಿದ್ದೇವೆ. 
ಚಂದಸ್ಸು ಸಮಾಸಗಳನ್ನು ಶಾಲಾ ಮಟ್ಟದಲ್ಲೇ ಅಭ್ಯಸಿಸಿದ್ದೇವೆ.  
ಹಳೆಗನ್ನಡ, ನಡುಗನ್ನಡ ಮತ್ತು ಹೊಸ ಕನ್ನಡದ ರಸ ಪಾಕವನ್ನು ಸವಿದಿದ್ದೇವೆ,ಸವಿಯುತ್ತಲೇ ಇದ್ದೇವೆ.

ಈ ನಡುವೆ ಅಚ್ಚರಿ ಮೂಡಿಸುವುದು ನಮ್ಮ ದಾಸ, ವಚನ, ಜನಪದ ಮತ್ತು ತತ್ವ ಪದ ಸಾಹಿತ್ಯಗಳು. ಹಲವು ಶತಮಾನಗಳ ಹಿಂದೆಯೇ ಪ್ರಚಾರಕ್ಕೆ ಬಂದ ಇವು ಇಂದಿನ ಬಳಕೆಯ ಕನ್ನಡಕ್ಕೆ ತುಂಬಾ ಹತ್ತಿರವಿವೆ.

ಹೆಜ್ಜೆಯ ಮೇಲೆ ಹೆಜ್ಜೆಯನಿಕ್ಕುತ
ಗೆಜ್ಜೆ ಕಾಲ್ಗಳ ಧ್ವನಿಯ ತೋರುತ
ಸಜ್ಜನ ಸಾಧು ಪೂಜೆಯ ವೇಳೆಗೆ
ಮಜ್ಜಿಗೆಯೊಳಗಿನ ಬೆಣ್ಣೆಯಂತೆ

ಎನ್ನುತ್ತ ಪುರಂದರ ದಾಸರ ಈ ಕೀರ್ತನೆಯನ್ನು ಕಲಿಯುವ ಪುಟ್ಟ 
ಮಗುವಿಗೆ ಸಂಗೀತ ಮೇಸ್ಟ್ರು ಕೃತಿಯ ಅರ್ಥ ಹೇಳಿಕೊಡುವ 
ಅವಶ್ಯಕತೆಯೇ ಬೀಳುವುದಿಲ್ಲ. ಪುರಂದರ ಕನಕರಾದಿಯಾಗಿ 
ದಾಸರು ಬಳಸಿದ ಭಾಷೆಯು ಅಷ್ಟು ಸರಳ ಮತ್ತು ನಮ್ಮ ಇಂದಿನ 
ಭಾಷೆಗೂ ಅಷ್ಟೇ ಹತ್ತಿರ.

’ಲೋಕದ ಡೊಂಕ ನೀವೇಕೆ ತಿದ್ದುವಿರಿ?’ ಎನ್ನುವ ಬಸವಣ್ಣ ಮತ್ತು 
ಹಲವಾರು ವಚನಕಾರರ ವಚನಗಳು, ’ಕಿಬ್ಬದಿಯ ಕೀಲು ಮುರಿದಂತೆ’ ಎನ್ನುವ ಸರ್ವಙ್ಞ. ’ಮುಂಜಾನೆದ್ದು ಕುಂಬಾರಣ್ಣ’ ಮುಂತಾದ ಸಹಸ್ರಾರು ಜನಪದ ಗೀತೆಗಳು ನಮ್ಮ ಇಂದಿನ ಕನ್ನಡಕ್ಕೆ ತುಂಬಾ ಹತ್ತಿರವಿವೆ.

ಬುಟ್ಟಿಯಲ್ಲಿ ಪತ್ತಲ ಇಟ್ಟಿ
ಅದನು ಉಟ್ಟ ಹೊತ್ತೊಳು ಜೋಕಿ;
ಕೆಟ್ಟಗಂಟಿ ಚೌಡೇರು ಬಂದು
ಉಟ್ಟುದನ್ನೆ ಕದ್ದಾರ ಜೋಕಿ!
ಬುದ್ಧಿಗೇಡಿ ಮುದುಕಿ ನೀನು ಬಿದ್ದೀಯಬೇ.

ಎನ್ನುವ ಸಂತ ಶಿಶುನಾಳ ಶರೀಫರು ತಮ್ಮ ನೆಲದ ಉತ್ತರ ಕರ್ನಾಟಕ 
ಭಾಷೆ ಬಳಸಿದರೂ ಅವರ ಕೃತಿಗಳೂ ಸಹ ಇಂದಿನ ಕನ್ನಡವೇ ಎನಿಸುತ್ತದೆ.

ಶತ ಶತಮಾನಗಳನ್ನು ದಾಟಿ ಬಂದರೂ ಇಂದಿನ ಭಾಷೆಗೆ ಈ ಸಾಹಿತ್ಯ ಸಮಕಾಲೀನ ಎನಿಸಲು ಕಾರಣ ಹೀಗೂ ಇರಬಹುದು ಎನಿಸುತ್ತದೆ, 
ಅದು ಅಡು ಭಾಷೆಯ ಬಗೆಗಿನದು.

ಗ್ರಾಂಥಿಕ ಭಾಷೆಯು ಕೃತಿಕಾರನ ಪ್ರೌಢಿಮೆಯ ಮಾಧ್ಯಮವಾಗಿದ್ದು, 
ಅದು ಕಾಲ ಕಾಲಕ್ಕೆ ಕವಿಯ ಭಾಷಾ ಬಳಕೆಯನ್ನು ಅವಲಂಭಿಸಿದೆ. 
ಅಲ್ಲಿ ಆತ ಬಳಸುವ ಕನ್ನಡವು ಆತನ ಬದುಕಿದ್ದ ಕಾಲ, ಪರಿಸರವನ್ನು ಪ್ರತಿನಿಧಿಸುತ್ತದೆ.

ಹಳೆಗನ್ನಡ, ನಡುಗನ್ನಡ ಮತ್ತು ಹೊಸ ಕನ್ನಡಗಳ ನಡುವೆ ಎದ್ದು 
ಕಾಣುವ ವ್ಯತ್ಯಾಸಗಳು ಮತ್ತು ಕಾಲ ಘಟ್ಟವು ಗ್ರಾಂಥಿಕ ಭಾಷೆಗೆ 
ಮಾತ್ರ ಸಂಬಂಧಪಟ್ಟದ್ದು ಅನಿಸುತ್ತದೆ.

ಪ್ರಾಯಶಃ ಆಡು ಭಾಷೆಯು ಶತಮಾನಗಳಿಂದಲೂ ಇಷ್ಟು ತೀವ್ರವಾಗಿ ಬದಲಾವಣೆಗೆ ಈಡಾಗಿರದು. ಕಾಲ ಕಾಲಕ್ಕೆ ಅನ್ಯ ದೇಶಿಯ ಪದಗಳು 
ಆಡು ಭಾಷೆಗೆ ಸೇರ್ಪಡೆಯಾಗುತ್ತಾ ಹೋಗಿದ್ದರೂ ಅದರ
ಮೂಲ ಸ್ವರೂಪಕ್ಕೆ ಅಂತಹ ಎದ್ದು ಕಾಣುವ ಬದಲಾವಣೆ ಕಂಡಿಲ್ಲ.


ಮೇಲೆ ಉದಾಹರಿಸಿದ ಪ್ರಕಾರಗಳ ಕೃತಿಕಾರರೆಲ್ಲ ಜನ ಮಾನಸಕ್ಕೆ ಹತ್ತಿರವಾಗುವ ಸಾಹಿತ್ಯ ರಚಿಸಿದವರೇ. ದೇವರ ಬಗ್ಗೆಯೇ ಆಗಲಿ 

ಸಾಮಾಜಿಕ ಕಳಕಳಿಯನ್ನೇ ಆಗಲಿ, ಸಾಮಾನ್ಯರಿಗೆ ಅರ್ಥವಾಗುವಂತೆ ರಚಿಸಲು ಇವರು ಆಡು ಭಾಷೆಯನ್ನೇ ಬಳಸಿಕೊಂಡರು.

ಅದಕ್ಕಾಗಿಯೇ ಇರಬಹುದು ಈ ಕೃತಿಗಳ ಭಾಷೆಯು ಇಂದಿನ ಆಡು 
ಭಾಷೆಯ ಕನ್ನಡದಂತೆಯೇ ಇದೆಯಲ್ಲವೇ ಅನಿಸುವುದು.

ಈ ನಿಟ್ಟಿನಲ್ಲಿ ನಾನೂ ಹೆಚ್ಚು ಓದಿಕೊಳ್ಳಬೇಕಿದೆ.

“ಪಲವಳ್ಳಿ ಅಂಕಣ” – 2ನೇ ವಾರ

‘ಗಲ್ಫ್ ಕನ್ನಡಿಗ’ ಈ ಪತ್ರಿಕೆ
12/10/2012

http://gulfkannadiga.com/news/culture/8689.html

ಗುರುಭ್ಯೋ ನಮಃ


ಗುರುಗಳೆಂದರೆ ನಮಗೆ ನಮ್ಮ ಶಿಕ್ಷಕರು, ವಿಮರ್ಷಕರು, ಪರೀಕ್ಷರು ಮತ್ತು ಕರಿ ಬಸಜ್ಜನಂತಹ ದೇವರುಗಳು. ಸದಾ ನಮ್ಮನ್ನು ಸರಿ ದಿಕ್ಕಿನಲ್ಲೇ ಮುನ್ನಡೆಸುವ ಇವರ ನಿಸ್ವಾರ್ಥ ಪ್ರೀತಿಯು ನಮ್ಮ ಬಾಳ ಬೆಳಕು.

ಶಾಲೆಯಲಿ ಕಲಿಸಿದ ಗುರುಗಳು ನಮ್ಮ ಬದುಕಲ್ಲಿ ಎನಿತು ಮುಖ್ಯರಾಗುತ್ತಾರೋ ಅಂತೆಯೇ ನಮ್ಮ ಬದುಕಲ್ಲಿ ಪಾಠ ಕಲಿಸಿದವರೂ ನಮಗೆ ಗುರುಗಳ ಸಮಾನರೇ.

ಬದುಕಿನ ಎಷ್ಟೋ ಕಹಿ ಘಟನೆಗಳನ್ನು ಹುಟ್ಟು ಹಾಕುವ ಆಪ್ತರಿಂದ ನಾವು ಪಾಠ ಕಲಿತಿರುತ್ತೇವೆ. ಅಂತಹ ಅನುಭವವು ನಮ್ಮನ್ನು ಹೊಸ ದಿಕ್ಕಿಗೆ ಹೊಸ ಆಲೋಚನೆಗಳಿಗೆ ಮತ್ತಷ್ಟು ಹುಷಾರಾಗಿಯೂ ಉತ್ಸಹಕತೆಯಿಂದಲೂ ಮುನ್ನಡೆಸುತ್ತದೆ. ಇವರೂ ನಮಗೆ ಗುರುಗಳೇ.

ಶಾಲೆ ಕಾಲೇಜುಗಳ ಉಪಾದ್ಯಾಯ ಪ್ರಾಧ್ಯಾಪಕರ ಜೊತೆಗೆ ನಮಗೆ ಹೊರ ಜಗತ್ತಿನಲ್ಲಿ ಕೆಲಸ ಕಲಿಸುವ ನಮ್ಮನ್ನು ತಿದ್ದುವ ಎಲ್ಲರೂ ನಮಗೆ ಗುರು ಸಮಾನರೇ.

ಕ್ಯಾಮರಾ ಹೇಳಿಕೊಟ್ಟವರು, ಗಣಕಯಂತ್ರ ಕಲಿಸಿದವರೂ, ಬ್ಲಾಗ್ ಪರಿಚಯಿಸಿದವರೂ, ನನ್ನ ಕವನಗಳನ್ನು ಮುಲಾಜಿಲ್ಲದೆ ತಿದ್ದಿದವರೂ, ನನ್ನ ವಸ್ತ್ರ ವಿನ್ಯಾಸ ಮಾಡುವ ದರ್ಜಿ ಜೊತೆಗೆ ಅನುಕ್ಷಣ ನಮ್ಮನ್ನು ತಿದ್ದುವುದರಲ್ಲೇ ಮೆತ್ತಗಾಗುವ ನಮ್ಮ ಬಾಳ ಸಂಗಾತಿಗಳೂ ನಮಗೆ ಗುರುಗಳೇ.

“ಹೊರ ಜಗವ ತೋರುವರು
ಒಳ ತೋಟಿ ನೀಗುವರು
ಬುದ್ದಿ ಸಾಣೆ ಹಿಡಿವವರು
ಅವ್ಯಕ್ತ ಬೆತ್ತಗಾಹಿಗಳು
ಎನಿತೋ ನನಗೆ
ದಿನ ದಿನ ಗುರುಗಳು…”

ಅಪ್ಪ…

ಪಿ.ಎನ್. ನಾರಣಯ್ಯ ಶೆಟ್ಟಿ

ಈ ಗೋಕುಲಾಷ್ಟಮಿಗೆ ನನ್ನ ತಂದೆಯವರು ತೀರಿಕೊಂಡು ೪೦ ವರ್ಷಗಳಾಯಿತು. ವರ್ಷಕ್ಕೊಂದು ವಿಶೇಷವೆಂಬಂತೆ ನಾವು  ಅಣ್ಣ ತಮ್ಮಂದಿರು ಮಲ್ಲೇಶ್ವರಂ ವೈದಿಕ ಭವನದಲ್ಲಿ ತಿಥಿ ನೆರವೇರಿಸುತ್ತೇವೆ. ನಾವು ಒಟ್ಟು ಏಳು ಜನ ಗಂಡು ಮಕ್ಕಳು.

ಅಪ್ಪ ಬದುಕಿದ್ದರೇ ಈಗ ಅವರಿಗೆ ಭರ್ತಿ ೧೦೦ ವರ್ಷ.

ನಾನು ಮೂರು ವರ್ಷ ಮಗುವಾಗಿದ್ದಾಗ ನಮ್ಮ ತಂದೆ ತೀರಿಕೊಂಡರು. ಆದ್ದರಿಂದ ಅವರು ರೂಪು, ತಾಕು, ದನಿ ಮತ್ತು ಕೋಪಗಳು ನನಗೆ ನೆನಪಿಲ್ಲ.

ನಮ್ಮ ಹಳ್ಳಿ ಚಿಕ್ಕಬಳ್ಳಾಪುರ ಜಿಲ್ಲೆ, ಗೌರಿಬಿದನೂರು ತಾಲ್ಲೂಕು ವಾಟದಹೊಸಹಳ್ಳಿ. ಅದು ಸುತ್ತ ೧೬ ಪುಟ್ಟ ಹಳ್ಳಿಗಳಿಗೆ ದೊಡ್ಡ ಹಳ್ಳಿ. ನಮ್ಮಪ್ಪ ಅಲ್ಲಿ ಬಟ್ಟೆ ಅಂಗಡಿ ನಡೆಸುತ್ತಿದ್ದರು. ಜೊತೆಗೆ ಕೃಷಿಯೂ ಸಹ. ಮನೆ ಕೊಟ್ಟಿಗೆಯಲ್ಲಿ ಹಸು ಕರುಗಳು. ಗಾರೆಯಿಂದ ಕಟ್ಟಿದ ಉದ್ದೋ ಉದ್ದದ ತಾರಸೀ ಮಹಡಿ ಮನೆ. ಸಾಕಷ್ಟು ಸ್ಥಿತಿವಂತ, ಗೌರವಯುತ ಕುಟುಂಬ.

ಇಡೀ ಹಳ್ಳಿಗೆ ನಮ್ಮದೇ ಸ್ವಂತ ಪಾಯಖಾನೆ ಇದ್ದ ಮನೆ! ನಮ್ಮಪ್ಪ ಹೊಸತೇನನ್ನೋ ಯೋಚಿಸುತ್ತಿದ್ದ ಹರಿಕಾರ. ಈಗಲೂ ಹಳೇ ತಲೆಮಾರಿನ ಸುತ್ತಲಿನ ಹಳ್ಳಿ ಮಂದಿಗೆ ನಮ್ಮಪ್ಪ ಬಹು ಚಿರಪರಿಚಿತ.

ಆಗೆಲ್ಲ ವಿದ್ಯುಚ್ಛಕ್ತಿಯನ್ನೂ ಗುತ್ತಿಗೆಗೆ ತರುತ್ತಿದ್ದ ಕಾಲ, ಅಪ್ಪನೂ ವಿದ್ಯುತ್ ಗುತ್ತಿಗೆದಾರ. ಅವರು ಜೈಪುರದವರೆಗೂ ಹೋಗಿ ಒಂದು ಸುಂದರ ಬಿಳಿ ಅಮೃತ ಶಿಲೆಯ ಕನ್ಯಕಾಪರಮೇಶ್ವರಿ ವಿಗ್ರಹ ತಂದು ಪ್ರತಿಷ್ಠಾಪಿಸಿದ್ದಾರೆ. ಆನಂತರ ನಮ್ಮ ಅಣ್ಣಂದಿರು ತಿಮ್ಮಪ್ಪನನ್ನು ಪ್ರತಿಷ್ಠಾಪಿಸಿದ್ದಾರೆ.   

ಆ ಕಾಲದಲ್ಲಿ ನಮ್ಮಪ್ಪ ಅಂಗಡಿಗೆ ಬಟ್ಟೆ ಕೊಳ್ಳಲು ಜೈಪುರ, ಅಹಮದಾಬಾದ್ ಮತ್ತು ಉತ್ತರ ಭಾರತವೆಲ್ಲ ಓಡಾಡುತ್ತಿದ್ದದ್ದು ಈಗಲೂ ನಮ್ಮ ತಾಯಿ ನೆನೆಯುತ್ತಾರೆ. ನಮ್ಮಪ್ಪ ಗುಡಿಯಾತ್ತಮ್ ಬೀಡಿ ಸೇದುತ್ತಿದ್ದರಂತೆ.

ಬರೀ ಗಂಡು ಸಂತಾನವೇ ಇದ್ದ ಮನೆಯಲ್ಲಿ ನಮ್ಮಪ್ಪ ನನಗೆ ಲಂಗ ಜಾಕೆಟ್ ಹಾಕಿ, ಇಜ್ಜಡೆಗೆ ಹೂವು ಮುಡಿಸಿ, ಗೆಜ್ಜೆ ಹಾಕಿ ಕೈ ಹಿಡಿದು ನಿಲ್ಲಿಸಿದರೆ ನಿಲ್ಲಿಸಿದರೆ ಥಕಥೈ ಎಂದು ಕುಣಿಯುತ್ತಿದ್ದೆ ಅಂತ ನಮ್ಮ ಚಿಕ್ಕಮ್ಮನ ಮಗಳು ಈಗಲೂ ಹೇಳುತ್ತಾಳೆ.

ಅಪ್ಪ ತೀರಿಕೊಂಡ ನಂತರ ಅಣ್ಣಂದಿರು ನನಗೆ ಅಪ್ಪನ ನೆನಪೇ ಬಾರದಂತೆ ಮುದ್ದಾಗಿ ಬೆಳೆಸಿದರು. ಅಂತೆಯೇ ನಮ್ಮ ಅತ್ತಿಗೆಯರೂ ಸಹ.

ವಾರ್ಷಿಕ ವೈದಿಕವೂ ತೀರಿಕೊಂಡವರನ್ನು ನೆನೆಪಿಗೆ ತರುವ ಒಂದು ನೆಪವೇ…

 

ಡಾ|| ರಾಜ್…

ಅಭಿಮಾನಿಗಳ ಕಣ್ಮಣಿ ಅಣ್ಣಾವ್ರು ನಿರಂತರವಾಗಿ ಪಾತ್ರದಿಂದ ಪಾತ್ರಕ್ಕೆ ಪರಕಾಯ ಪ್ರವೇಶ ಮಾಡುತ್ತಾ ಹೋದರು. ಅದು ಅವರ ಶಕ್ತಿಯು ಆಗಿತ್ತು. ನಟನೆಯಲ್ಲಿ ಶಿಸ್ತು, ಸಂಯಮ ಮತ್ತು ಗ್ರಹಿಕೆ ಅವರಿಗೆ ಒಲಿದು ಬಂದಿತ್ತು. ಯಾವುದಕ್ಕೂ ಬ್ರಾಂಡ್ ಆಗದೆ ಬಾಂಡ್ ನಿಂದ ಪಾಂಡುರಂಗನವರೆಗೂ ಜೀವತುಂಬುತ್ತಾ ಹೋದರು.

ಪ್ರಾಯಶಃ ಭಾರತೀಯ ಚಿತ್ರರಂಗದಲ್ಲಿ ಇಷ್ಟೊಂದು ವೈವಿಧ್ಯಮಯ ಪಾತ್ರಗಳಲ್ಲಿ ಕಾಣಿಸಿಕೊಂಡ ನಟ ಇನ್ನೊಬ್ಬರು ಖಂಡಿತ ಇರಲಾರರು. ರಾಕ್ಷಸ, ದೇವರು, ರಾಜ, ಅಮಾಯಕ, ಅಮರ ಪ್ರೇಮಿ, ತ್ಯಾಗಿ, ರೈತ, ಬಾಂಡ್, ಪೊಲೀಸ್, ಕಳ್ಳ, ಅಂಧ, ಹಳ್ಳಿ ಗಮಾರ, ನ್ಯಾಯವಾದಿ, ಇಂಗ್ಲೀಷ್ ಪ್ರೊಫೇಸರ್, ಮನೋರೋಗಿ ಹಂತಕ, ಸಾಮಾನ್ಯರಲ್ಲಿ ಸಾಮಾನ್ಯ, ಪತ್ರಕರ್ತ, ಜಗಳಗಂಟ, ವಯೋವೃದ್ಧ, ಹೀಗೆ! ಪಟ್ಟಿ ಮಾಡುತ್ತ ಕೂತರೆ ನೂರಾರು.

ಸಾಮಾಜಿಕ, ಪೌರಾಣಿಕ, ಕಾಲ್ಪನಿಕ, ಐತಿಹಾಸಿಕ ಯಾವ ಪ್ರಕಾರದಲ್ಲೂ ಅಲ್ಲಿ ರಾಜ್ ಪ್ರಯೋಗಶೀಲ.

ತೆರೆಯ ಮೇಲೆ ಯಾವತ್ತಿಗೂ ಧೂಮಪಾನ, ಮದ್ಯಪಾನ, ಸ್ತ್ರೀ ಪೀಡಕನಂತಹ ಪ್ರಚೋದನಕಾರಿ ಪಾತ್ರಗಳನ್ನು ನಟಿಸದ. ಬೇರೆ ಭಾಷೆಗಳಲ್ಲಿ ಹಣದ ಹೊಳೆಯೇ ಕರೆದರೂ ಕನ್ನಡ ಚಿತ್ರ ರಂಗವನ್ನು ಬಿಟ್ಟು ಹೋಗದ. ಕನ್ನಡ ಕೆಲಸವೆಂದರೆ ಉಸಿರೆಂದು ಹೋರಾಟಕ್ಕೆ ಧುಮುಕುತ್ತಿದ್ದ ಅವರ ಅಖಂಡ ಕನ್ನಡ ಪ್ರೇಮವೇ ನಮಗೆಲ್ಲ ಮಾದರಿ.

೧೯೯೨ ರಲ್ಲಿ ಅವರಿಗೆ “ನಾದಮಯ ಈ ಲೋಕವೆಲ್ಲ” (ಚಿತ್ರ: ಜೀವನ ಚೈತ್ರ) ಕ್ಕೆ ಹಿನ್ನಲೆ ಗಾಯನಕ್ಕೆ ರಾಷ್ಟ್ರಪ್ರಶಸ್ತಿ ಬಂತು. ೧೦ ಬಾರಿ ಫಿಲಿಂ ಫೇರ್ ಪ್ರಶಸ್ತಿ, ೯ ಬಾರಿ ನಾಯಕ ನಟ ನೆಗಾಗಿ ರಾಜ್ಯ ಪ್ರಶಸ್ತಿ ಹೀಗೆ ಅವರಿಗೆ ಒಲಿದು ಬಂದ ಪ್ರಶಸ್ತಿಗಳ ಮಹಾ ಪೂರವೇ ಇದೆ.

ಹಿಂದಿಯ ಮೇರು ಗಾಯಕ ಕಿಶೋರ್ ಕುಮಾರ್ ತಮ್ಮ ವೃತ್ತಿ ಬದುಕಿನಲ್ಲಿ ಕೆಲವು ಚಿತ್ರಗಳಲ್ಲಿ ನಟಿಸಿದ್ದೂ ಉಂಟು ಹಾಗೆಯೇ ತೆಲುಗಿನ ಡಾ|| ಭಾನುಮತಿ ರಾಮಕೃಷ್ಣ, ನಮ್ಮ ಅಭಿನವ ಭಾರ್ಗವ ಡಾ|| ವಿಷ್ಣುವರ್ಧನ್ ತಮ್ಮ ಸಿನಿಮಾಗಳಿಗಾಗಿ ಒಂದೆರಡು ಹಾಡು ಹಾಡಿದ್ದೂ ಇದ್ದೆ. ಆದರೆ ತಮ್ಮ ನಟನೆಯ ಮೂಲಕ ಜನಮನ ಗೆದ್ದ ರಾಜಣ್ಣ ಮತ್ತೊಮ್ಮೆ ಅತ್ಯುತ್ತಮ ಗಾಯಕರಾಗಿ ನಮ್ಮ ಮಾನಸದಲ್ಲಿ ನಿಂತಿದ್ದಾರೆ. ಅವರು ತಮ್ಮ ಸಿನಿಮಾಗಳಿಗೆ, ಇತರ ನಟರ ಸಿನಿಮಾಗಳಿಗೆ, ಭಾವಗೀತೆ ಮತ್ತು ಭಕ್ತಿ ಗೀತೆ ಎಂದು ಹಾಡಿದ ನೂರಾರು ಹಾಡುಗಳು ಇಂದಿಗೂ ನಾವು ಗುನುಗುನಿಸುತ್ತೇವೆ.

ಕೆಳ ಮನೆಯಿಂದ ತಾರಕಸ್ಥಾಯಿ, ಶುದ್ಧ ಶಾಸ್ತ್ರೀಯದಿಂದ ಪಾಶ್ಚಿಮಾತ್ಯ, ಮೆಲೋಡಿಯಿಂದ ಫಾಸ್ಟ್ ಬೀಟ್, ಯಾವುದಕ್ಕಾದರೂ ಅವರು ಸೈ! ಅದಕ್ಕೇ ಇಂದಿಗೂ ಪದ್ಮಭೂಷಣ, ದಾದಾ ಸಾಬ್ ಪಾಲ್ಕೆ ಪ್ರಶಸ್ತಿ ವಿಜೇತ, ಗಾನಗಂಧರ್ವ ಡಾ|| ರಾಜ್ ಕುಮಾರ್ ಅವರ ಹಾಡುಗಳೆಂದರೆ: “ಬಿಸಿ ಬಿಸಿ ಕಜ್ಜಾಯ, ರುಚಿ ರುಚಿ ಕಜ್ಜಾಯ, ತಗೋ ತಿನ್ನು ತಗೋ ತಿನ್ನು”…

ಗುಬ್ಬಚ್ಚಿಯ ಗೂಡು -2

ಆಗೆಲ್ಲ ನಾನು ಎಷ್ಟು ಸೋಮಾರಿಯಾಗಿದ್ದೆ ಅಂದರೆ ಹತ್ತಿರದ ಸಿಗರೇಟ್ ಅಂಗಡಿಗೂ ಸ್ಕೂಟರ್ ಬಳಸುತ್ತಿದ್ದೆ. ಬಹುಶಃ ಹೊಸ ಸ್ಕೂಟರಿನಲ್ಲಿ ಅಲೆಯುವ ಹುಚ್ಚೂ ಇದ್ದಿರಬಹುದು ಅಂತ ಈಗ ಅನಿಸುತ್ತದೆ.

ಅಲ್ಲಿಯವರೆಗೂ ಬಡತನವನ್ನೇ ನೋಡಿದ್ದ ನನಗೆ, ಈ ಗುಬ್ಬಚ್ಚಿಯ ಗೂಡು ಇನ್ನಿಲ್ಲದ ಸ್ವಾತಂತ್ರ್ಯವನ್ನು ತಂದುಕೊಟ್ಟಿತ್ತು. ಒಟ್ಟೊಟ್ಟಿಗೆ ಐದಾರು ಹೊಸ ಜೊತೆ ಬಟ್ಟೆ ತಂದು ಬಿಡುತ್ತಿದ್ದೆ. ಅವನ್ನೆಲ್ಲ ಕೊಠಡಿಯ ನಡುವೆ ಹಗ್ಗ ಕಟ್ಟಿ ನೇತು ಹಾಕುತ್ತಿದ್ದೆ. ಅಷ್ಟು ಬಟ್ಟೆ ಇಟ್ಟುಕೊಳ್ಳಲು ನನಗೆ ಸರಿಯಾದ ಕಪಾಟೂ ಇರಲಿಲ್ಲ. ಬಂದ ಗೆಳೆಯರೆಲ್ಲ ಒಳ್ಳೆ ಲಾಂಡ್ರಿ ಮಾಡಿಟ್ಟಿದ್ದಿಯಲ್ಲೋ ಅಂತ ರೇಗಿಸುತ್ತಿದ್ದೂ ಉಂಟು.

ನಮ್ಮ ಕಟ್ಟಡದಲ್ಲಿ ಕುಡಿಯುವ ನೀರಿಗೇ ತತ್ವಾರ, ಇದರ ಮೇಲೆ ಬಟ್ಟೆ ಒಗೆಯಲು ನೀರೆಲ್ಲಿ ತರುವುದು? ಸರಿ, ಹತ್ತಿರದ ಲಾಂಡ್ರಿಯವನು ನನ್ನ ಬಟ್ಟೆ ಒಗೆದು ಒಗೆದೇ ಉದ್ಧಾರವಾಗಿ ಹೋದ!

ನನ್ನ ಮದುವೆಯಾಗಿ ನನ್ನ ಹೆಂಡತಿ ಆ ಪುಟ್ಟ ಕೊಠಡಿಗೆ ಬಂದಾಗ, ನಾನು ಒಂದಷ್ಟು ಬಟ್ಟೆ ಒಟ್ಟಿಗೆ ಅವಳಿಗೆ ಒಗಯಲಿಕ್ಕೆ ಹಾಕಿದೆ. ಪುರುಷಾಹಂಕಾರ ನೋಡಿ, ಹತ್ತು ಜೊತೆಗಳ ಮೇಲೆಯೇ ಪಾಪ ಅವಳೂ ಒಗೆದುಕೊಟ್ಟಳು. ನನ್ನ ಜೀನ್ಸ್ ಪ್ಯಾಂಟುಗಳಿಗೆ ನೀರು ಬಿದ್ದರೆ ಎತ್ತುವುದೇ ಕಷ್ಟ, ಪಾಪ ಈಗಲೂ ಅವನ್ನೆಲ್ಲ ಹೇಗೆ ಒಗೆಯುತ್ತಾಳೋ ಆಕೆ?

ಅವೆಲ್ಲ ಹೊತ್ತುಕೊಂಡು ನಾನು ಒಣಗಿ ಹಾಕಲು ತಾರಸಿ ಏರಿದೆ. ಅಲ್ಲಿ  ಹಗ್ಗವಾಗಲೀ, ತಂತಿಯಾಗಲಿ ಇರಲಿಲ್ಲ. ಸರಿ ನಾನೇ ಒಂದು ನೈಲಾನ್ ಹಗ್ಗ ತಂದು ಈ ಮೂಲೆಯ ಪಿಲ್ಲರಿಗೆ ಕಟ್ಟಿದೆ. ಮತ್ತೊಂದು ಕೊನೆ ಎಲ್ಲಿ ಕಟ್ಟೋಣ ಅಂತ ನೋಡಿದಾಗ  ಹಿಂದಿನ ರೂಂನಲ್ಲಿದ್ದ ಪಾರಿವಾಳಗಳನ್ನು ಸಾಕುತ್ತಿದ್ದ ಹಾಷೀಂ ಭಾಯ್ ಅವರು ತಮ್ಮ ಹಕ್ಕಿಗಳಿಗಾಗಿ ನಿರ್ಮಿಸಿದ್ದ ಹಕ್ಕಿಯ ಚಪ್ಪರ ಕಾಣಿಸಿತು. ಅದನ್ನು ಅವರು ಖಾಲಿ ಬ್ಯಾರಲಿನಲ್ಲಿ ಮಣ್ಣು ತುಂಬಿ ಇಟ್ಟಿದ್ದರು. ಹಗ್ಗದ ಇನ್ನೊಂದು ತುದಿ ಅಲ್ಲಿಗೆ ಕಟ್ಟಿದೆ.

ಒಂದೊಂದಾಗಿ ಬಟ್ಟೆ ಒಣಹಾಕುತ್ತಾ ಬಂದೆ, ಒದ್ದೆ ಬಟ್ಟೆಗಳ ಯಮ ಭಾರಕ್ಕೆ ಹಕ್ಕಿ ಚಪ್ಪರವೂ ಜಗ್ಗುತ್ತಿತ್ತು. ಆ ಕಡೆ ನನ್ನ ಗಮನವೇ ಇರಲಿಲ್ಲ. ಪೂರ್ತಿ ಬಟ್ಟೆ ಒಣ ಹಾಕುವಷ್ಟರಲ್ಲಿ ಧೊಪ್ ಅಂತ ಒಂದು ಸದ್ದು ಕೇಳಿಸಿತು. ಹಕ್ಕಿಯ ಚಪ್ಪರ ನನ್ನ ಕಡೆಯೇ ಜಗ್ಗಿ ನನ್ನ ಮೇಲೆ ಬಿದ್ದಿತ್ತು. ಅದರ ಒಂದು ಚೂಪಾದ ಕೊನೆ ನನ್ನ ಕುತ್ತಿಗೆಗೆ ತಾಕಿ ದೊಡ್ಡ ಗಾಯವೇ ಆಗಿಹೋಯ್ತು.

ಇದ್ದ ಬಟ್ಟೆಗಳನ್ನೆಲ್ಲ ತಾರಸಿಯಲ್ಲೇ ಬಿಟ್ಟವನೇ, ಹೌಹಾರುತ್ತಾ ಗುಬ್ಬಚ್ಚಿ ಗೂಡಿಗೆ ಬಂದೆ. ತೊಟ್ಟ ಬಟ್ಟೆಯೆಲ್ಲ ರಕ್ತ ಸಿಕ್ತ. ನನ್ನವಳು ಮೂರ್ಛೆ ಹೋಗುವುದೊಂದು ಬಾಕಿ!

 

ನನ್ನ ಹೆಂಡತಿಯನ್ನು ಕೂರಿಸಿಕೊಂಡು ಅದೇ ಹೊಸ ಸ್ಕೂಟರಿನಲ್ಲಿ ನನ್ನ ಅಣ್ಣ ವೈದ್ಯರಾಗಿದ್ದ ನರ್ಸಿಂಗ್ ಹೋಂಗೆ ಓಡಿದೆ.

ಆಗ ಆದ ದೊಡ್ಡ ಗಾಯದ ಗುರುತು ಇಷ್ಟು ವರ್ಷಗಳ ನಂತರವೂ ನನ್ನ ಪುರುಷಾಹಾಂಕಾರದ ಕುರುಹಾಗಿ ನನ್ನ ಕುತ್ತಿಗೆಯಲ್ಲಿದೆ.

ಗುಬ್ಬಚ್ಚಿಯ ಗೂಡು -1

ನಾನು ಮದುವೆಗೆ ಮುಂಚೆ ಮಲ್ಲೇಶ್ವರಂ ಸರ್ಕಲ್ ಹತ್ತಿರ, ನನ್ನ ನೆಚ್ಚಿನ ನಟಿ ಸುಧಾರಾಣಿಯವರ ಮನೆ ಪಕ್ಕದಲ್ಲಿ ಚಿಕ್ಕ ರೂಮಿನಲ್ಲಿದ್ದೆ.

ಅದಕ್ಕೆ ನಾನು ಇಟ್ಟ ಹೆಸರು “ಗುಬ್ಬಚ್ಚಿಯ ಗೂಡು” ಅಂತ.

ಇದೇ ಗುಬ್ಬಚ್ಚಿ ಗೂಡಿನಲ್ಲಿ ರಾಮ ಸೀತೆ ಅಂತ ಎರಡು ಗಿಣಿಗಳೂ, ಚಿನ್ನಿ ಅಂತ ಒಂದು ಮುದ್ದಾದ ಪಾಮೋರಿಯನ್ ನಾಯಿ ಹಾಗೂ ಹೆಸರು ಗೊತ್ತಿರದ ಜಿರಲೆ ಪರಳೆಗಳನ್ನೂ ಸಾಕಿದ್ದೆ. ಮೊನಲಿಸಾ ಮತ್ತು ಬರ್ಮಾ ಬಜಾರಿನ ಹಲವು ಮಾಲುಗಳು ನನ್ನ ರೂಮಿನಲ್ಲಿ ತುಂಬಿ ಹೋಗಿದ್ದವು.

ಅದು ೧೨ ರೂಮುಗಳಿದ್ದ ಮಹಡಿ, ಕೆಳಗೆ ಮನೆಯ ಓನರ್ ನಾಗಪ್ಪನವರ ಕುಟುಂಬದ ವಾಸ. ನಾಗಪ್ಪನವರು ಇಸ್ಪೀಟ್ ಹುಚ್ಚಿನ ವಯೋವೃದ್ಧ. ಆಗ ಅವರದೇ ವಯೋಮಾನದ ಮುದುಕರ ಪಡೆಯೊಂದು ಅವರ ಜೊತೆ ರಮ್ಮಿ ಆಡಲು ಬರುತ್ತಿತ್ತು.

ನೀರು ಬಿಡುವವ ಜೊತೆ ಸರಿಯಾಗಿ ವ್ಯವಹಾರ ಕುದುರಿಸದ ಮನೆ ಮಾಲಿಕನಿಂದಾಗಿ, ವಾರಕ್ಕೊಂದು ಬಾರಿ ಬೆಳಗಿನ ಜಾವಕ್ಕೆ ಸಣ್ಣದಾಗಿ ಬರುತ್ತಿದ್ದ ನೀರನ್ನೇ ಹಿಡಿದಿಟ್ಟುಕೊಳ್ಳುತ್ತಿದ್ದೆ. ಮಿಕ್ಕದಿನ ರಸ್ತೆ ಮೂಲೆಯ ಕೈ ಪಂಪೇ ಗತಿ!

ಇಲ್ಲಿದ್ದಾಗಲೇ ನನಗೂ ಮದುವೆಯಾಗಿ, ನನ್ನ ಮಡದಿಯನ್ನೂ ಮನೆ ತುಂಬಿಸಿಕೊಳ್ಳ ಬೇಕಾಯಿತು. ಆ ಪುಟ್ಟ ಜಾಗದಲ್ಲೇ ಪಂಪ್ ಸ್ಟೌವ್ ಇಟ್ಟುಕೊಂಡು ಸುಮಾರು ಇಪ್ಪತ್ತು ದಿನ ನನ್ನ ಮೇಲೆ ಹಲ ರೀತಿಯ ಉಪ್ಪಿಟ್ಟುಗಳನ್ನು ನನ್ನವಳು ಪ್ರಯೋಗಿಸಿದಳು! ಬರೀ ಹೋಟೆಲುಗಳಲ್ಲೇ ತಿನ್ನುತ್ತಿದ್ದ ನನಗೆ ತರೇವಾರಿ ಉಪ್ಪಿಟ್ಟುಗಳೇ ಗತಿಯಾಯಿತು.

ಒಮ್ಮೆ ನನ್ನವಳು ಜಪಾತಿ ಮಾಡಿದ್ದಳು, ಅದನ್ನು ನಾವು ಆನಂತರ ಕುಕ್ಕರಿನಲ್ಲಿ ಬೇಯಿಸಿಯೇ ತಿನ್ನಬೇಕಾಯಿತು. ಈಗ ಬಿಡಿ ನನ್ನಾಕೆ ಪಾಕ ಪ್ರವೀಣೆ. ನನ್ನ ಭೀಮಾಕಾರದ ಹೊಟ್ಟೆ ನೋಡಿದರೆ ನಿಮಗೆ ಅರ್ಥವಾದೀತು ಅಲ್ವೇ?

ಮದುವೆಗೂ ಮುಂಚೆ ಗೋಡೆಯನ್ನು ಅಲಂಕರಿಸಿದ್ದ ಸಮಂತಾಫಾಕ್ಸ್, ರಾಣಿ ಮುಖರ್ಜಿ ಮರೆಯಾಗಿ, ರಾಘವೇಂದ್ರ ಸ್ವಾಮಿ ಮತ್ತು ತಿರುಪತಿ ವೆಂಕಟೇಶ್ವರ ರಾರಾಜಿಸತೊಡಗಿದರು. ಸಿಗರೇಟ್ ಹೊಗೆಯ ಜಾಗದಲ್ಲಿ ಘಮಘಮ ಊದು ಬತ್ತಿ.

ನಮಗೇ ಜಾಗವಿರದ ಆ ಪುಟ್ಟ ಕೊಠಡಿಯಲ್ಲಿ ಪ್ರೀತಿಯು ಮಾತ್ರ ಬೆಟ್ಟದಷ್ಟಿತ್ತು. ಯಾಕೋ ನನ್ನ ಬದುಕಿನ ಈ ಪುಟ ಈವತ್ತು ತೀವ್ರವಾಗಿ ಕಾಡಿತು.

ಮಾನವೀಯತೆ…

“ವಯಸ್ಸಾದ ಮೇಲೆ ಯಾಕ್ರೀ ಊರು ಅಲೀತೀರ?”

ಎನ್ನುತ್ತ ಅವನು ಯಾರೋ ಕೊಸರಿಕೊಂಡ, ಕಷ್ಟ ಪಟ್ಟು ಬಸ್ಸು ಏರುತ್ತಿದ್ದ ಆ ಹಣ್ಣು ಹಣ್ಣು ಮುದುಕ ಅವನನ್ನೊಮ್ಮೆ ದಿಟ್ಟಿಸಿ ಮತ್ತೆ ಬಸ್ಸು ಏರಿದ.

ಮೊದಲೇ ಕಿಕ್ಕಿರಿದಿದ್ದ ಜನ, ಹುಡುಗಿಯರ ಪಕ್ಕದಲ್ಲಿ ಕೂತು ಆಕೆಯ ಕಿವಿಗೊಂದು ತನ್ನ ಕಿವಿಗೊಂದು ಈಯರ್ ಫೋನ್ ಸಿಕ್ಕಿಸಿಕೊಂಡು ಹಾಡು ಕೇಳುತ್ತಿದ್ದ ಹುಡುಗರಾಗಲೀ ಮುದುಕನ ಆಗಮನಕ್ಕೆ ಮಿಸುಕಾಡಲಿಲ್ಲ.

ಹೊರಗೆ ಈವತ್ತೇ ಪ್ರಳಯವೋ ಎನ್ನುವಂತೆ ಧೋ ಎಂದು ಮಳೆ ಸುರಿಯುತ್ತಿತ್ತು.

ಮೊದಲೇ ಇಕ್ಕಟ್ಟು ಮುಖ್ಯ ರಸ್ತೆಯಲ್ಲಿ, ಸಾವಿರದೊಂದು ಕಾರು ಲಾರಿಗಳ ತುಂಬಿ ಹೋಗಿದ್ದವು.

ತನ್ನ ಒಂದು ಕೈಯಲ್ಲಿ ಊರುಗೋಲು ಮತ್ತೊಂದು ಕೈಯಲ್ಲಿ ಭರ್ತಿ ತರಕಾರಿ ಬುಟ್ಟಿ ಹಿಡಿದ ಮುದುಕ ಕ್ಷಣಕ್ಕೊಮ್ಮೆ ಬಿದ್ದೇ ಹೋಗುತ್ತಿದ್ದ.

ಬಸ್ಸು ಯಾವುದರ ಪರಿವಿಲ್ಲದೆ ಬಸವನ ಹುಳುವಿನಂತೆ ಸಾಗುತ್ತಲೇ ಇತ್ತು.

ಇಲ್ಲಿ ಮುದುಕನ ಪಾಡು ಕಂಡು ಮರುಗವವರೆ ಇಲ್ಲದೇ, ಆತ ನಿಲ್ಲಲೂ ಆಗದೆ ಕೂರಲೂ ಆಗದೆ ಒದ್ದಾಡುತ್ತಲೇ ಇದ್ದ.

ಗಟ್ಟಿ ಮುಟ್ಟಾಗಿದ್ದ ದಂಡ ಪಿಂಡಗಳೆಲ್ಲ ಎದ್ದು ಸೀಟು ಕೊಡೋಣ ಎಂದು  ಅಂದುಕೊಳ್ಳಲೂ ಇಲ್ಲ.

ಮೊದಲಿಂದಲೂ ಗಮನಿಸುತ್ತ ಕೂತಿದ್ದ ವ್ಯಕ್ತಿಯೊಬ್ಬ ತನ್ನ ಎರಡು ಊರುಗೋಲುಗಳ ಸಮೇತ ಮೇಲಕ್ಕೆದ್ದು ಮುದುಕನಿಗೆ ಸೀಟುಕೊಟ್ಟ.

ತಾನು ಮೇಲಿನ ರಾಡು ಹಿಡಿದು ತೂರಾಡುತ್ತಾ ನಿಂತ.

ಎದ್ದವನಿಗೆ ಒಂದು ಕಾಲು ಮುಕ್ಕಾಲಿದ್ದರೆ. ಎರಡನೆ ಕಾಲಿನ ಅವಶೇಷವೂ ಇರಲಿಲ್ಲ.

ಅವನು ಕುಂಟನಾಗಿದ್ದ!!!

ಇತಿಹಾಸ ದಿಟವೇ?


ಇಂದು ನಾವು ಓದುತ್ತಿರುವ ಚರಿತ್ರೆಯು ನೂರಕ್ಕೆ ನೂರರಷ್ಟು ಸತ್ಯವೇ? ಇದು ನನ್ನನ್ನು ಕಾಡಿದ ದೊಡ್ಡ ಪ್ರಶ್ನೆ.

ಸ್ವಾತಂತ್ರ್ಯ ಪೂರ್ವ ಮತ್ತು ಆನಂತರದ ಚರಿತ್ರೆಯು ಎಷ್ಟೋ ಕಡೆ ’ಬರೆಸಿದ’ ಹಾಗೆ ಕಾಣುತ್ತದೆ.

ಪ್ರತಿ ಪುಟವೂ ನಿಜಾಯತಿ ಇಂದ ಕೂಡಿದ್ದರೆ,  ಸ್ವಾತಂತ್ರಾ ನಂತರದ ಭಾರತೀಯ ಇತಿಹಾಸವನ್ನು ನಾವು ಯಾಕೆ ಇದ್ದದ್ದನ್ನು ಇದ್ದ ಹಾಗೇ ಬೋಧಿಸುವುದಿಲ್ಲ?

ತುರ್ತು ಪರಿಸ್ಥಿತಿಯ ದಿನಗಳ ಬಗ್ಗೆ ನಮಗೆ ಯಾವ ತರಗತಿಯಲ್ಲೂ ಕಲಿಸುವುದೇ ಇಲ್ಲ!

ರಾಜಾಶ್ರಯದ ತೊತ್ತಿಗೆ ಅಥವಾ ಯಾವನೋ ಪೂರ್ವಾಗ್ರಹ ಪೀಡಿತ ನಮಗೆ ಬರೆದುಕೊಟ್ಟ ಸುಳ್ಳೇ ಇತಿಹಾಸವನ್ನೇ  ಇಂದಿಗೂ ಓದುತ್ತಿದ್ದೇವೆ ಅನಿಸುತ್ತದೆ.

ಸ್ವಾತಂತ್ರ್ಯಕ್ಕಾಗಿ ಹೋರಾಡಿದ ನಿಜವಾದ ದೇಶ ಭಕ್ತರು ದಾಖಲಾಗದೇ ಅಲ್ಲೂ ರಾಜಕೀಯ ಹಿತಾಸಕ್ತರೇ ಪ್ರಕಾಶಕ್ಕೆ ಬಂದದ್ದು ನನಗೆ ಸೋಜಿಗ.

ಭಗತ್ ಸಿಂಗ್, ಸುಭಾಸ್ ಚಂದ್ರ ಬೋಸ್ ಅವರಂತಹ ಹೋರಾಟಗಾರರು ನಮಗೆ ಅಷ್ಟಾಗಿ ಗೋಚರಿಸುವುದೇ ಇಲ್ಲ.

ಕರ್ನಾಟಕದ ಸ್ವಾತಂತ್ರ್ಯ ಹೋರಾಟಗಾರರನ್ನು ರಾಜ್ಯ ಸರ್ಕಾರವೇ ಸರಿಯಾಗಿ ಗುರುತಿಸಿಲ್ಲ.

ಛಪ್ಪನ್ನಾರು ದೇಶಗಳಿದ್ದದ್ದು ಕಡೆಗೆ ಪುಟ್ಟ ದೇಶವೇಕಾಯಿತು? ಯಾರು ಇದಕ್ಕೆ ಹೊಣೆಯಾದರು ಎಂಬುದು ಇಂದಿಗೂ ಅಪ್ರಸ್ತುತ!

ಸ್ವಾತಂತ್ರ್ಯ ಮನುಷ್ಯನ ವಿಕಸನಕ್ಕೆ ದಾರಿಯಾಗದೆ ಬರಿಯ ಭಾಷೆ, ಆರ್ಥಿಕ, ರಾಜಕೀಯ ಮತ್ತು ಬೌಗೋಳಿಕ ಗಡಿ ರೇಖೆಯಾದದ್ದು ಖೇದ.

ಅಂದಿನ ಅನಿವಾರ್ಯತೆಗಾಗಿ ರೂಪಗೋಂಡ ಕೇಂದ್ರಾಡಳಿತ ಪ್ರದೇಶಗಳು ಇಂದಿಗೂ ಖಂಡಿತ ಬೇಡದ ಗುರುತಿಸುವಿಕೆ.

ನಿಜವಾದ ಇತಿಹಾಸ ಇನ್ನಾದರೂ ಬೋಧನಾ ಸರಕಾದರೆ ಚೆನ್ನ.

(ಚಿತ್ರ ಕೃಪೆ : ಅಂತರ್ಜಾಲ)

ಪಡುಮಟಿ ಸಂಧ್ಯಾ ರಾಗಂ…

ಕೆಲವು ಸಿನಿಮಾಗಳೇ ಹಾಗೆ, ಎಷ್ಟೋ ವರ್ಷಗಳ ನಂತರವೂ ಅದರ ಛಾಯೇ ಮನಸ್ಸಿನಲ್ಲಿ ಉಳಿದು ಬಿಡುತ್ತವೆ.

ಇಲ್ಲಿ ಭಾಷೆ ಮುಖ್ಯವೇ ಆಗುವುದಿಲ್ಲ, ಸಿನಿಮಾಗೆ ಅದರದೇ ಭಾಷೆ ಇರುವುದರಿಂದ ಅದು ಲೋಕ ಭಾಷೆ.

ನನಗೆ ಸದಾ ನೆನಪಿಗೆ ಬರುವ ಸಿನಿಮಾವೆಂದರೆ, ತೆಲುಗಿನ  “ಪಡುಮಟಿ ಸಂಧ್ಯಾ ರಾಗಂ”

೧೪ ರೀಲುಗಳ (೩೮೬೧.೯೦ ಮೀಟರ್) ಈ ಸಿನಿಮಾ ಏಪ್ರಿಲ್ ೨, ೧೯೮೭ರಲ್ಲಿ ಸೆನ್ಸಾರ್ ಆಯಿತು. ಮರುದಿನವೇ ತೆರೆ ಕಂಡಿತು.

ಈ ಚಿತ್ರ ಹಲವು ವಿಶಿಷ್ಟಗಳ ಸಂಗಮ:

ಈ ಚಿತ್ರವು ಪ್ರವಾಸಾಂಧ್ರ ಚಿತ್ರ ಲಾಂಛನದಲ್ಲಿ ನಿರ್ಮಾಣವಾಯಿತು. ನಿರ್ಮಾಪಕರು ಅನಿವಾಸಿ ಭಾರತೀಯರಾದ ಗುಮ್ಮಲೂರಿ ಶಾಸ್ತ್ರಿ ಮತ್ತು ಮೀರ್ ಅಬ್ಧುಲ್ಲ. ಸ್ವತಃ ನಿರ್ಮಾಪಕರು ನಾಯಕಿಯ ತಂದೆ ಹಾಗೂ ಚಿಕ್ಕಪ್ಪನ ಪಾತ್ರದಲ್ಲಿ ನಟಿಸಿದ್ದಾರೆ.


ತೆಲುಗಿನ ಮಾಹಾನ್ ಪ್ರತಿಭೆ, ಜಂಧ್ಯಾಲ (ಜಂಧ್ಯಾಲ ಸುಬ್ರಹ್ಮಣ್ಯ ಶಾಸ್ರಿ; ೧೯೫೨ – ೨೦೦೧) ಈ ಚಿತ್ರದ ನಿರ್ದೇಶಕರು. ಸದಾ ಹೊಸತನವನ್ನು ತೆರೆಗೆ ತರುವ ಹಾಸ್ಯಬ್ರಹ್ಮ  ಹಲವು ಹಾಸ್ಯ ನಟರನ್ನೂ ಪರಿಚಯಿಸಿದ್ದಾರೆ.

ಹಾಸ್ಯ ಚಿತ್ರಗಳನ್ನು ಅಮೋಘವಾಗಿ ರೂಪಿಸಿಕೊಡುವ ಇವರ ಸಿನಿಮಾಗಳಲ್ಲಿ ಹಾಸ್ಯವು ಸರಳವಾಗಿದ್ದು, ದ್ವಂದ್ವಾರ್ಥಗಳಿರುವುದೇಇಲ್ಲ. ಇವರನ್ನು “ಬೈಗುಳಗಳ ಜನಕ” ಅಂತಲೂ ಕರೆಯುತ್ತಾರೆ, ಅಷ್ಟು ಬೈಗುಳಗಳನ್ನು ತೆರೆಗೆ ಪರಿಚಯಿಸಿದ್ದಾರೆ. ಒಳ್ಳೆಯ ಚಿತ್ರಕಥೆ ಮತ್ತು ಸಂಭಾಷಣೆ ಬರೆಯುತ್ತಿದ್ದ ಇವರು ಕೆ. ವಿಶ್ವನಾಥ್ ನಿರ್ದೇಶನದ ಶಂಕರಾಭರಣಂ ಚಿತ್ರಕ್ಕೂ ಸಂಭಾಷಣೆಕಾರರು.

ಖ್ಯಾತ ಹಿನ್ನಲೆ ಗಾಯಕ ಪದ್ಮಭೂಷಣ ಡಾ|| ಎಸ್.ಪಿ. ಬಾಲಸುಬ್ರಹ್ಮಣ್ಯಂ ಈ ಚಿತ್ರದ ಸಂಗೀತ ನಿರ್ದೇಶಕರು. ಸುಮಾರು ೪೦ ಸಿನಿಮಾಗಳ ಮೇಲೆ ಸಂಗೀತ ನಿರ್ದೇಶನ ಮಾಡಿರುವ ಎಸ್.ಪಿ.ಬಿ. ಈ ಚಿತ್ರದಲ್ಲಿ ಪಾಶ್ಚಾತ್ಯ ಮತ್ತು ಭಾರತೀಯ ಸಂಗೀತವನ್ನು ಅತ್ಯದ್ಭುತವಾಗಿ ಬಳಸಿಕೊಂಡಿದ್ದಾರೆ. ಈ ಚಿತ್ರಕ್ಕೆ ಶೀರ್ಷಿಕೆ ಹುಡುಕಿಕೊಟ್ಟವರೂ ಇವರೇ.

ಟಾಮ್ ಎಂಬ ಅಮೇರಿಕನ್ ಈ ಚಿತ್ರದ ನಾಯಕ ಮತ್ತು ತೆಲುಗಿನ ಅತ್ಯುತ್ತಮ ನಟಿ ವಿಜಯ ಶಾಂತಿ ಈ ಚಿತ್ರದ ನಾಯಕಿ. ಇಂದಿನ ವಿಶ್ವ ವಿಖ್ಯಾತ ಡ್ರಮ್ಮರ್ ಶಿವಮಣಿಯವರು ಈ ಚಿತ್ರದಲ್ಲಿ ನಟಿಸಿದ್ದಾರೆ.

ಬಹುತೇಕ ನಟರು ಅನಿವಾಸೀ ಭಾರತೀಯರೇ ಆಗಿದ್ದು, ಉಳಿದಂತೆ ಕನ್ನಡದ ಜ್ಯೋತಿ ಮತ್ತು ಸುತ್ತಿ ವೇಲಭದ್ರರಾವ್ ನಟಿಸಿದ್ದಾರೆ.

ಮುಕ್ಕಾಲು ವಾಸಿ ಚಿತ್ರೀಕರಣ ಅಮೇರಿಕದಲ್ಲೇ ಜರುಗಿತು. ಅನ್ನಮಾಚಾರ್ಯರ ಅಮೋಘ ಕೀರ್ತನೆ “ಮುದ್ದುಗಾರೆ ಯಶೋಧ”ವನ್ನು ಎಸ್. ಜಾನಕಿಯವರು ಪುಟ್ಟ ಕಂದನ ಧ್ವನಿಯಲ್ಲಿ ಹಾಡಿದ್ದಾರೆ.

ಈ ಚಿತ್ರಕ್ಕೆ ಜಂಧ್ಯಾಲರ ಅತ್ಯುತ್ತಮ ಚಿತ್ರ ಕಥೆಗೆ ನಂದಿ ಪ್ರಶಸ್ತಿ ಮತ್ತು ಗುಮ್ಮಲೂರಿ ಶಾಸ್ತ್ರಿಯವರಿಗೆ ಫಿಲಿಂ ಫೇರ್ ಪ್ರಶಸ್ತಿ ಬಂದಿತು.

ಕಥಾ ಹಂದರ: ಪಕ್ಕಾ ಭಾರತೀಯ ಮನಸ್ಥಿತಿಯ ನಾಯಕಿಯ ತಂದೆ, ಮಗಳು ಮತ್ತು ಹೆಂಡತಿ ಸಮೇತ ಅಮೇರಿಕಾದಲ್ಲಿ ಕೆಲಸ ಮಾಡಲು ವಲಸೆ ಹೋಗುತ್ತಾರೆ. ನಾಯಕಿಗೆ ಅಮೇರಿಕನ್ ಹುಡುಗನ ಜೊತೆಗೆ ಪ್ರೇಮಾಂಕುರವಾಗುತ್ತದೆ. ಇದನ್ನು ವಿರೋಧಿಸುವ ಅಪ್ಪನನ್ನು ಒಪ್ಪಿಸಲಾರದೇ ನಾಯಕಿ ಅವಳ ಚಿಕ್ಕಪ್ಪನ ಸಹಾಯದಿಂದ ಮದುವೆಯಾಗುತ್ತಾಳೆ.

ಮುನಿಸಿಕೊಂಡ ತಂದೆ ಅಮೇರಿಕ ಬಿಟ್ಟು ಭಾರತಕ್ಕೆ ವಾಪಸ್ಸಾಗುತ್ತಾರೆ. ತೆಲುಗು ಕಲೆಯುವ ನಾಯಕ, ಭಾರತೀಯ ಆಚಾರ ವಿಚಾರ ರೂಢಿಸಿಕೊಳ್ಳುತ್ತಾನೆ. ಕಡೆಗೆ ನಾಯಕಿಯ ತಂದೆಗೆ ಭಾರತದಲ್ಲಿ ಭಾರತೀಯ ಪದ್ಧತಿಯಂತೆ ಚಿತೆಗೆ ಅಗ್ನಿಸ್ಪರ್ಷ ನೀಡುತ್ತಾನೆ.

ಭಾರತೀಯ ಸಂಸ್ಕೃತಿಯು ಶ್ರೇಷ್ಟವಾದದ್ದು ಅದು ಒಳ್ಳೆಯ ವಿಚಾರಗಳನ್ನೂ ಸ್ವೀಕರಿಸುತ್ತದೆ ಎನ್ನುವುದು ಈ ಚಿತ್ರದ ಸಾರ.

ಭರಪೂರ ತಮಾಷೆ ಇರುವ ನೀವು ನೋಡಲೇ ಬೇಕಾದ ಸಿನಿಮಾ ಇದು.

ಈ ಚಿತ್ರವು ಒಳ್ಳೆಯ ಹಾಡುಗಳನ್ನು ಹೊಂದಿದ್ದು, ಕಥೆಗೆ ತಕ್ಕ ಛಾಯಾಗ್ರಹಣವನ್ನು ಪಿ. ದಿವಾಕರ್ ನೀಡಿದ್ದು, ಸಂಕಲನ ಗೌತಮ್ ರಾಜು ಅವರದು.
————————

ಜಂಧ್ಯಾಲ ನಿರ್ದೇಶನದ ಸಿನಿಮಾಗಳು:
ಮುದ್ದ ಮಂದಾರಂ, ಮಲ್ಲೆ ಪಂದಿರಿ, ನಾಲುಗು ಸ್ಥಂಭಾಲಾಟ, ನೆಲವಂಕ, ರೆಂಡು ಜಳ್ಳ ಸೀತಾ, ಅಮರಜೀವಿ, ಮೂಡು ಮುಳ್ಳು, ಆನಂದಭೈರವಿ. ಶ್ರೀವಾರಿಕಿ ಪ್ರೇಮ ಲೇಖ, ರಾವು ಗೋಪಾಲರಾವು, ಪುಟ್ಟಡಿ ಬೊಮ್ಮ, ಬಾಬಾಯಿ ಅಬ್ಬಾಯಿ, ಶ್ರೀವಾರಿ ಶೋಭನಂ, ಮೊಗುಳ್ಳು ಪೆಳ್ಳಾಲು, ಮುದ್ದುಲ ಮನವರಾಲು, ರೆಂಡು ರೆಳ್ಳ ಆರು, ಸೀತಾ ರಾಮ ಕಲ್ಯಾಣಂ, ಚಂಟಬ್ಬಾಯ್, ಪಡುಮಟಿ ಸಂಧ್ಯಾ ರಾಗಂ, ರಾಗ ಲೀಲ, ಸತ್ಯಾಗ್ರಹಂ, ಅಹಾ ನಾ ಪೆಳ್ಳಂಟ, ಚಿನ್ನಿ ಕೃಷ್ಣುಡು, ಚೂಪುಲು ಕಲಸಿನ ಶುಭವೇಳ, ಹೈ ಹೈ ನಾಯಕ, ಜಯಮ್ಮು ನಿಶ್ಚಯಂಮ್ಮುರ, ಭಾವ ಭಾವ ಪನ್ನೀರು, ಪ್ರೇಮ ಎಂತ ಮಧುರಂ ಹಾಗೂ ಕಡೆಯ ಚಿತ್ರ ವಿಚಿತ್ರಂ.

ಮೂರು ಬಾರಿ ರಾಜ್ಯ ನಂದಿ ಪ್ರಶಸ್ತಿ ಪಡೆದ ಜಂಧ್ಯಾಲ, ಹಲವು ಪ್ರಶಸ್ತಿಗಳನ್ನೂ ಪಡೆದಿದ್ದಾರೆ.

(ಚಿತ್ರ ಕೃಪೆ : ಅಂತರ್ಜಾಲ, ವಿಡಿಯೋ ಕೃಪೆ: ಯೂ ಟ್ಯೂಬ್, ಮಾಹಿತಿ ಕೃಪೆ : ವಿಕಿಪೀಡಿಯಾ)

ಅಲಾ ಬೆಂಗಳೂರೇ…


ನನ್ನ ಬೆಂಗಳೂರು, ಮೊದಲಿಂದಲೂ ಅರ್ಥ ಮಾಡಿಕೊಳ್ಳುವ ಮನದೆನ್ನೆಯಂತೆ ಅಪ್ಪಿ ಮುದಗೊಳಿಸಿದರೇ, ಕೆಲವೊಮ್ಮೆ ಅರ್ಥ ಮಾಡಿಕೊಳ್ಳದೆ ದೂರವಾದ ಗೆಳತಿಯಂತೆ ಕಕ್ಕಾಬಿಕ್ಕಿಯಾಗಿಸುತ್ತಾಳೆ!

  • ನನ್ನ ತಾಯಿ ನನ್ನ ಮನೆ ರಸ್ತೆಯಲ್ಲಿ ಬೆಳಿಗ್ಗೆ ೮ ಗಂಟೆ ಮೇಲೆ ವಾಕಿಂಗ್ ಹೋಗಲು ಆಗಲ್ಲ ಮಗ, ಮೈ ಮೇಲೇ ಕಾರು ಲಾರಿಗಳು ಬರ್ತವೆ ಅಂದಾಗ…

  • ಅತಿ ಮಳೆ ಹುಯ್ದು ನಮ್ಮ ತಗ್ಗು ಪ್ರದೇಶಗಳೆಲ್ಲಾ ಜಲಾವೃತವಾದಾಗ, ಕಾಪಾಡುವ ಗಾಳಿ ಆಂಜನೇಯನ ದೇವಸ್ಥಾನಕ್ಕೂ ನೀರು ನುಗ್ಗಿ, ಪರಮಾತ್ಮ ನಿನಗ್ಯಾರಪ್ಪಾ ಕಾಪಾಡ್ತಾರೆ ಅನಿಸಿದಾಗ…

  • ಹಾದಿ ಬದಿ ಧುತ್ತೆಂದು ಯಾವುದೋ ಭಿಕ್ಷುಕಿ ಎಳೇ ಕಂದಮ್ಮನನ್ನು ಹಳೇ ಸೀರೆಯಲಿ ಸುತ್ತಿಕೊಂಡು ಕೈ ಚಾಚಿದಾಗ..

  • ಒಳ್ಳೆ ಓಡುವ ಕುದುರೆಯಂತಹವರು ಥಟ್ ಅಂತ ನೌಕರಿ ಕಳೆದುಕೊಂಡಾಗ ಪರಿಚಿತರೆಲ್ಲ ಅಪರಿಚಿರು ಅನಿಸುವಾಗ…

  • ನಟ್ಟ ನಡು ರಾತ್ರಿಯಲಿ ಬಸ್ಸೇ ಬರದ ಬಸ್ ಸ್ಟಾಪಿನಲ್ಲಿ, ಕರೆದ ಕಡೆ ಬಾರದ ಆಟೋ ಬಂಧುಗಳನ್ನು ಶಪಿಸುತ್ತಾ ನಿಂತಾಗ, ಅಲ್ಲೇಲ್ಲೋ ಹೊಯ್ಸಳ ಗಾಡಿಯ ಸೈರನ್ ಕೇಳಿದಾಗ…

  • ಸರಗಳ್ಳರ ಹಾವಳಿಗೆ ಬೇಸತ್ತು ಪೊಲೀಸರು ಬೆಳಿಗ್ಗೆಯೇ ಚೀತಾ – ಹೊಯ್ಸಳಾಗಳಲ್ಲಿ ಬೀಟ್ ಆರಂಭಿಸಿದಾಗಲಿಂದ, ನನ್ನ ಪಾರ್ಕಿನಲ್ಲಿ ವ್ಯಾಯಾಮ ಮಾಡುವಾಗ ಬಲಗಡೆ ಚೀತಾ ಕಾಣಿಸಿ, ಎಡಗಡೆ ಹೊಯ್ಸಳ ಕಾಣಿಸಿ, ನಗರ ಮೊದಲಷ್ಟು ಸುರಕ್ಷಿತ ಅಲ್ಲ ಅನಿಸತೊಡಗಿದಾಗ…

  • ಲಾಲ್ ಬಾಗಿಗೆ ಪ್ರವೇಶ ಧನ ಅಂತ ಬೋರ್ಡ್ ನೇತು ಹಾಕಿದಾಗ…

  • ಚಿಕ್ಕ ಪುಟ್ಟ ಹೋಟೆಲ್ ಮುಚ್ಚಿ ಅದೇನೋ ಡೇ, ಅಲ್ಲೇನೋ ಹಟ್ ಅಂತ ಶುರುವಾದಾಗ…

  • ಮೆಟ್ರೋ ಕಾಮಗಾರಿ, ರಸ್ತೆ ಅಗೆತ, ಏಕ ಮುಖ ಸಂಚಾರ ಮತ್ತು ಭೋರಿಡುವ ವಾಹನಗಳ ನಡುವೆ, ನನ್ನ ಗಾಡಿ ಸ್ಟಾರ್ಟಿಂಗ್ ಟ್ರಬಲ್ ಕೊಟ್ಟಾಗ…

  • ಇಡೀ ದೇಶದಲ್ಲಿ ಪದೇ ಪದೇ ದುಬಾರಿ ನಗರ ಅಂತ ಘೋಷಿಸಿದಾಗ…

ನನಗೆ ಬೆಂಗಳೂರು ಅಪರಿಚಿತ ಅನಿಸಲಾರಂಭಿಸುತ್ತದೆ!!!

ಇಂದಿಗಿಂತ ಅಂದೇನೆ ಚಂದವೋ…

ನಾನು ನನ್ನ ಕುಟುಂಬವನ್ನು ಬಿಟ್ಟರೆ ಅತ್ಯಂತ ಪ್ರೀತಿಸುವುದು ನನ್ನ ಬೆಂಗಳೂರನ್ನು. ಒಮ್ಮೆ ಗೆಳತಿಯಂತೆ, ಇನ್ನೊಮ್ಮೆ ಪ್ರೇಯಸಿಯಂತೆ, ಮನಸು ಬಾಡಿದಾಗ ಥೇಟ್ ಹೆತ್ತಮ್ಮನಂತೆ ನನಗೆ ಬೆಂಗಳೂರು, ಆಪ್ತವಾಗುವ ನನ್ನೂರು. ಹುಟ್ಟಿ ಬೆಳೆದದ್ದೆಲ್ಲ ಪಕ್ಕದ ಚಿಕ್ಕಬಳ್ಳಾಪುರ ಜಿಲ್ಲೆಯಾದರೂ ಬದುಕು ಕಟ್ಟಿಕೊಂಡದ್ದು ಇಲ್ಲೆ. ಭಗವಂತ ಅವಕಾಶ ಕೊಟ್ಟರೆ ನನ್ನ ಕಡೆ ಯಾತ್ರೆಯೂ ಹರಿಶ್ಚಂದ್ರ ಘಾಟ್ ಕಡೆಗೆ!

ನಾನು ಹತ್ತನೇ ಕ್ಲಾಸ್ ಮುದ್ದೇನಹಳ್ಳಿಯಲ್ಲಿ ಮುಗಿಸಿ, ಪಿ.ಯು.ಸಿ ಓದಲು ಬೆಂಗಳೂರಿಗೆ ಬಂದದ್ದು ೧೯೮೫ರಲ್ಲಿ. ಅದಾಗಲೆ ನನ್ನ ಏಳು ಜನ ಅಣ್ಣಂದಿರಲ್ಲಿ ನಾಲ್ಕು ಜನ ಬೆಂಗಳೂರಿನಲ್ಲೆ ನೆಲಸಿಯಾಗಿತ್ತು. ಮೂರನೇ ಅಣ್ಣ ಡಾ. ಗೋವಿಂದರಾಜುಲು ಮಕ್ಕಳ ತಙ್ಞರಾಗಿ ತುಂಬಾ ಹೆಸರು ಮಾಡಿದ್ದರು.

ವಿ.ವಿ. ಪುರಂ, ಪ್ಯಾಲೆಸ್ ಗುಟ್ಟಹಳ್ಳಿ, ಚಾಮಾರಾಜ ಪೇಟೆ, ಮಲ್ಲೇಶ್ವರಂ, ಗಂಗೇನಹಳ್ಳಿ ಹೀಗೆ ನನ್ನ ವಿಳಾಸ ಬದಲಾದಂತೆಲ್ಲ ಬೆಂಗಳೂರೂ ಸಾಕಷ್ಟು ಬದಲಾಗುತ್ತ ಹೋಯಿತು.

ನನಗೇ ನೆನಪಿದ್ದಂತೆ ಹೆಬ್ಬಾಳ ವೆಟರ್ನರಿ ಕಾಲೇಜು ದಾಟಿದರೆ ಸರಹದ್ದೆ ಮುಗಿದೇ ಹೊಗುತಿತ್ತು. ನಗರ ಸಾರಿಗೆ ಬಸ್ಸುಗಳಲ್ಲಿ ೩೦, ೪೦, ೫೦ ಪೈಸೆ ಟಿಕೆಟ್ ಇರುತ್ತಿತ್ತು. ಚಾಮರಾಜ ಪೇಟೆಯ ೪ನೇ ಮುಖ್ಯ ರಸ್ತೆಯ ಪುರಾತನ ಗಜಾನನ ಹೋಟೆಲಿನಲ್ಲಿ ೭೦ ಪೈಸೆಗೆ ಊರಗಲ ಮಸಾಲೆ ದೋಸೆ, ಕೇಳಿದವರಿಗೆ ಕೇಳಿದಷ್ಟು ಚಟ್ನಿ ಸಾಂಬರು, ೩೦ ಪೈಸೆಗೆ ಚಂಬು ಲೆಕ್ಕದಲ್ಲಿ ಕಾಫಿ! ಎರಡೂವರೆ ರೂಪಾಯಿಗೆಲ್ಲ ಥೀಯಟರುಗಳಲ್ಲಿ ಕನ್ನಡ ಸಿನಿಮಾಗಳೂ, ೧೦೦೦ಕ್ಕೆ ಬಾಡಿಗೆಗೆ ಎರಡು ರೂಮಿನ ಮನೆ, ೨೦೦ ರೂಪಾಯಿಗೆಲ್ಲ ಮೂಲೆ ಶೆಟ್ಟರ ಅಂಗಡಿಯಲ್ಲಿ ತಿಂಗಳ ರೆಷನ್ನೂ. ಸಂಪೇ ಬೇಕಿರದೆ ದಿನ ಪೂರ ಸುರಿದು ಹೋಗುತ್ತಿದ್ದ ಕಾರ್ಪೊರೇಷನ್ ನೀರು.

ಹೀಗೆ ಪಟ್ಟಿ ಬೆಳೆಯುತ್ತದೆ. ನನಗೆ ಫ್ರೀ ಹಾಸ್ಟೆಲ್ನಲ್ಲಿ ವಾಸ್ತವ್ಯ, ತಿಂಡಿ ಊಟ ಅಲ್ಲೇ ಮುಗಿಯುತಿತ್ತು. ನನಗೆ ಅಣ್ಣಂದಿರು ಕೊಡುತ್ತಿದ್ದದ್ದೇ ೫೦ ರೂಪಾಯಿ ಪಾಕೆಟ್ ಮನಿ ಅದರಲ್ಲೆ ವಾರ ಪೂರ ಊರೆಲ್ಲ ಅಲೆದಾಡಿ, ಪ್ಯಾಕು ಗಟ್ಟಲೆ ಸಿಗರೇಟು ಸುಟ್ಟು, ಸಂಜೆಗೆ ಸಜ್ಜನ್ ರಾವ್ ಸರ್ಕಲ್ಲಿನ ಅಸಂಖ್ಯಾತ ಗಾಡಿಗಳಲ್ಲಿ ಪಾನಿ ಪುರಿಯೋ ಬಾತ್ ಮಸಾಲೆಯೋ ತಿಂದು, ಸ್ನೇಹಿತರಿಗೆ ಬಾದಾಮಿ ಹಾಲು ಕುಡಿಸಿಯೂ ವಾರದ ಕೊನೆಗೆ ರಾಜಣ್ಣಾ, ವಿಷ್ಣು, ಶಿವಣ್ಣ, ಅಂಬಿ ಸಿನಿಮಾಗಳಿಗೆ ಬಾಲ್ಕಾನಿ ಟಿಕೇಟಿಗೆ ಕಾಸು ಮಿಕ್ಕಿರುತಿತ್ತು.

ಆಗೆಲ್ಲ ನನ್ನೂರು ಇಷ್ಟು ತುಟ್ಟಿಯಾಗಿರಲಿಲ್ಲ. ತೀರಾ ಭಾನುವಾರ ೧೦೦೦ದ ನೋಟು ಜೇಬಲ್ಲಿ ಮಡಗಿಕೊಂಡು, ಹೆಂಡತಿ ಕರೆದುಕೊಂಡು ಸಿನಿಮಾಗೆ ಅಂತ ಹೋದರೂ… ಕಡೆಗೆ ಪಾರ್ಕಿಂಗ್ ದುಡ್ಡೂ ಅವಳೇ ಸಾಲ ಕೊಡುವಂತ ಕಾಲ ಆವಾಗಿರಲಿಲ್ಲ!

ಕಾಲ ಕೆಟ್ಟೋಯ್ತು ಬಿಡ್ರಿ…

(ಚಿತ್ರ ಕೃಪೆ : ಅಂತರ್ಜಾಲ)

ಸಂತೆಯಲಿ ಮನೆ ಮಾಡಿ…!!!

ಅಂದ ಹಾಗೆ, ಈ ನಡುವೆ ನನ್ನ ಮನೆ ಎಂಬುದು “ಸಂತೆಯಲ್ಲಿ ಮನೆಯ ಮಾಡಿ…” ಅನ್ನೋ ತರಹ ಆಗೋಗಿದೆ!

ತುಂಬಾ ಸುಸ್ತಾಗಿ ಮನೆಗೆ ರಾತ್ರಿ ಯಾವುದೋ ಹೊತ್ತಿನಲ್ಲಿ ಬಂದು, ನಾಲ್ಕು ತುತ್ತು ಶಾಸ್ತ್ರಕ್ಕೆ ಅಂತ ತಿಂದು ಇನ್ನೇನು ಮಲಗಬೇಕು ಅಂತ ಹಾಸಿಗೆಗೆಗೆ ಬಿದ್ದರೆ, ಹಿಂದಲ ಮನೆಯವರ ಮೈಕ್ ಸೆಟ್ ಶುರೂ.

ಆಂಧ್ರ ಕಡೆ ರೆಡ್ಡಿಗಳೂ ಅಂತ ಕಾಣುತ್ತೆ. ಅದೇನು ಕುರುಡು ಪ್ರೀತಿಯೋ ಕಾಣೆ! ಆಂಧ್ರಪ್ರದೇಶದ ಮಾಜೀ ಮುಖ್ಯ ಮಂತ್ರಿ ದಿವಂಗತ. ವೈ.ಎಸ್. ರಾಜಶೇಖರ ರೆಡ್ಡಿಯವರನ್ನು ಗುಣಗಾನ ಮಾಡುವ ಜಾನಪದ ಶೈಲಿಯ ಹಾಡನ್ನು ಜೋರಾಗಿ ಹಾಕಿಬಿಡುತ್ತಾರೆ. ಅಲ್ಲಿಗೆ ನನ್ನ ಎಡಗಿವಿ ಮಟಾಷ್!

ಇನ್ನು ಬಲಗಿವಿಗೆಗೆ ಯಾಕೆ ಪುರಸೊತ್ತೂ ಅಂತ ಆ ಕಡೆ ಮನೆಯ ಒರಿಸ್ಸಾ ಮುದುಕ ತಾನೇನು ಕಮ್ಮಿ ಅಂತ ಜೋರಾಗಿ ಟೀವಿ ಹಾಕುತ್ತಾನೆ. ಅಲ್ಲಿಗೆ ನನ್ನ ಎರಡೂ ಕಿವಿಗಳ ತಮಟೆಗಳು ಕಿತ್ತು ಊರಗಲವಾಗಿರುತ್ತವೆ.

ಮೊದಲೇ ಬೇಸಿಗೆ, ಜೊತೆಗೆ ಈ ತಾರಕ ಸ್ವರದ ಕಿರಿಕಿರಿ ನನ್ನ ನಿದ್ದೆ ಅಸ್ತಗತವಾಗಿ, ಬದುಕು ಹರಹರಾ ಎನ್ನುವಂತಾಗಿದೆ…

ನಡು ರಾತ್ರಿ ಯಾವಾಗಲೋ ಅವರಿಗೇ ಬೇಜಾರಾದಾಗ ಬ್ಯಾಂಡ್ ಸೆಟ್ ಬಂದ್ ಆದರೆ ನನಗೂ ಒಸೀ ನಿದ್ದೆ.

ಇನ್ನೂ ಬೆಳಗಿನ ಕಥೆ ಇನ್ನೂ ಘೋರ….

ನಾಲ್ಕು ಗಂಟೆ ಸುಮಾರಿಗೆ ಪಕ್ಕದ ಮನೆಯ ನಡು ವಯಸಿನ ಹೆಂಗಸಿಗೆ ಶಿರಡಿ ಸಾಯಿ ಬಾಬಾ ಅವರ ಮೇಲೆ ಭಕ್ತಿ ಉಕ್ಕಿ ಬಂದು, ಆಕೆ ಆಡಿಯೋ ಪ್ಲೈಯರ್ ಹಚ್ಚಿಟ್ಟು ಬಿಟ್ಟರೆಂದರೆ ಅಲ್ಲಿಗೆ ನನ್ನ ನಿದ್ರೆಗೆ ಫುಲ್ ಸ್ಟಾಪ್…

ಅಯ್ಯೋ ನನ್ನ ಮನೆ ಯಾಕೋ “ಸಂತೆಯಲಿ ಮನೆ ಮಾಡಿ….!!!!” ಅನ್ನೋ ತರಹ ಆಗಿದೆ ಸ್ವಾಮಿ.

(ಚಿತ್ರ ಕೃಪೆ : ಅಂತರ್ಜಾಲ)

ಸಿನಿಮಾ – ಸಾಹಿತ್ಯ : 1

ಸಾಹಿತ್ಯ ಪ್ರಕಾರಗಳಲ್ಲಿ ಸಿನಿಮಾ ಸಾಹಿತ್ಯಕ್ಕೂ ತನ್ನದೇ ಗೌರವ ಕಲ್ಪಿಸುವ ಅವಶ್ಯಕತೆಯಿದೆ.

ಯಾವುದೇ ಭಾರತೀಯ ಭಾಷೆಯ ಸಿನಿಮಾವೂ ಹಾಡುಗಳ ಹೊರತಾಗಿ ಅಪೂರ್ಣ ಅನಿಸಿಬಿಡುತ್ತದೆ. ಸಂಗೀತ-ಸಿನಿಮಾ-ಪ್ರೇಕ್ಷಕ ಎಷ್ಟರ ಮಟ್ಟಿಗೆ ಬೆಸೆದು ಹೋಗಿದ್ದರೆ ಎಂದರೆ ಸಿನಿಮಾಗಳಲ್ಲಿ ಹಾಡುಗಳನ್ನೇ ಕಲ್ಪಿಸದೇ ಕಲಾತ್ಮಕ ಚಿತ್ರಗಳೂ ಬಂದವು.

ಕನ್ನಡದ ಮಟ್ಟಿಗೆ ಹೇಳುವುದಾದರೆ, ಚಿ. ಉದಯಶಂಕರ್, ವಿಜಯನಾರಸಿಂಹ, ಹುಣಸೂರು ಕೃಷ್ಣಮೂರ್ತಿ, ಆರ್.ಎನ್. ಜಯಗೋಪಾಲ್, ದೊಡ್ಡರಂಗೇಗೌಡ, ಹಂಸಲೇಖ, ಯೋಗರಾಜ್ ಭಟ್, ಜಯಂತ್ ಕಾಯ್ಕಣಿ ಮುಂತಾದ ಸಾಹಿತಿಗಳು ಅತ್ಯುತ್ತಮ ಸಾಹಿತವನ್ನು ಕೊಡುತ್ತಾ ಬಂದಿದ್ದಾರೆ.

ತೀರಾ ವಿವರಗಳಿಗೆ ಹೋಗುವ ಮುನ್ನ ಕನ್ನಡ ಹಾಡುಗಳ ಶ್ರೇಷ್ಠತೆಯ ಒಂದು ಝಲಕು:

“ಉತ್ತರ ಧ್ರುವದಿಂ ದಕ್ಷಿಣ ಧೃವಕೂ”

“ಪರದೆ ಎತ್ತಿ ಪನ್ನೀರ ಚೆಲ್ಲಿ”

“ತೇರಾ ನೇರಿ ಅಂಬರದಾಗೆ ನೇಸರ ನಗತಾನೆ”

“ಪ್ರೀತಿಯೇ ಆ ದ್ಯಾವ್ರು ತಂದ ಆಸ್ತಿ ನಮ್ಮ ಪಾಲಿಗೆ”

“ಹೃದಯ ರಂಗೋಲಿ ಅಳಿಸುತಿದೆ ಇಂದು”

ಹೀಗೆ…

ಛೆ!…

“ನಿಮ್ಮ phone ಮಾತ್ರ ಅಲ್ಲ inter national calls ಸಹ ನಾನು ಮಾತಾಡಲ್ಲ!”

We are hurt…

ಛೇ! ಯಾಕಾದರೂ ಅಷ್ಟೊಂದು ಯಾರನ್ನಾದರೂ, ವಿನಾಕಾರಣ ಹಚ್ಚಿಕೊಳ್ತೀವೋ? ಅನಿಸುತ್ತದೆ.

ಅವರ ಆರೋಗ್ಯ ಕೆಟ್ಟಾಗ ಯಾವ ಪುರುಷಾರ್ಥಕ್ಕೋ ಫೋನ್ ಮಾಡೀ ಮಾಡೀ, ಅವರು call pick ಮಾಡದೇ ಸತಾಯಿಸಿದಾಗ. ಮನಸು ಬಾಡಿ ಹೋಯ್ತು ಅಂದುಕೊಳ್ಳುತ್ತೇವೇ.

ignore ಮಾಡುತ್ತಿದ್ದಾರೆ, ಮರೆತಿದ್ದಾರೆ. ಬಿಡಿ ಶಿವ no issues!

ಆದರೆ facebook ನಲ್ಲೂ, ಬ್ಲಾಗ್ ನಲ್ಲೂ ಅವರ ಪಾಡಿಗೆ ಅವರು ಹೊಸ ಲೇಖನ ಬರೆಯುತ್ತಾ

ಯಾರ್ಯಾರಿಗೋ ಕಮೆಂಟ್ ಹಾಕುತ್ತಾ, ಶಬರಿಗಳನ್ನು ಮರೆತು ಬಿಡುತ್ತಾರೆ ನೋಡಿ!

ಆಗ ಮನಸ್ಸು ನೊಂದುಕೊಳ್ಳುತ್ತದೆ. ಸಿಟ್ಟು ಸಿಗರೇಟ್ ಆಗಿ ಸುಟ್ಟು ಹೋಗುತ್ತದೆ.

May God bless the ignorers! ಏನಂತೀರ ಮಿತ್ರರೇ?

ಪೆನುಗೊಂಡ ಮತ್ತು ಸುತ್ತ ಮುತ್ತ…


ಡಿಸೆಂಬರ್ ೦೯ ರಿಂದ ೧೧ ರವರೆಗೆ ಹೋಗಿ ಬಂದ ಪ್ರವಾಸ:

ಪೆನುಗೊಂಡ :


ಶ್ರೀ ವಾಸವಿ ಕನ್ಯಕಾಪರಮೇಶ್ವರಿ ಅಮ್ಮನವರ ಮೂಲ ಕ್ಷೇತ್ರ.
ಪಶ್ಚಿಮ ಗೋದಾವರಿ ಜಿಲ್ಲೆ.
ಇಲ್ಲಿ ಅಮ್ಮನವರ ಮೂಲ ದೇವಸ್ಥಾನ ಮತ್ತು ವಾಸವಿ ಧಾಮಗಳಿವೆ. ವಾಸವಿ ಧಾಮದಲ್ಲಿ ವಸತಿ ಮತ್ತು ಊಟದ ಸೌಕರ್ಯವಿದೆ. 

ಪೆನುಗೊಂಡ ತಲುಪಲು ಬೆಂಗಳೂರಿನಿಂದ ಶೇಷಾದ್ರಿ ಎಕ್ಸ್ಪ್ರೆಸ್ ಟ್ರೈನಿನಲ್ಲಿ ತಣುಕು ತಲುಪ ಬೇಕು. ತಣುಕು ನಿಲ್ದಾಣದಿಂದ ಪೆನುಗೊಂಡಕ್ಕೆ ೧೨ ಕಿಮಿ. ಆಟೋ ಮತ್ತು ಬಸ್ ಸಿಗುತ್ತವೆ.

ಶೇಷಾದ್ರಿ ಎಕ್ಸ್ಪ್ರೆಸ್ ಟ್ರೈನ್ ಸಂಖ್ಯೆ: ೧೭೨೦೯
ಮತ್ತೆ ಹಿಂದಿರುಗಲು ಟ್ರೈನ್ ಸಂಖ್ಯೆ: ೧೭೨೧೦
ಹೋಗಲು ಒಬ್ಬರಿಗೆ ಟ್ರೈನ್ ಚಾರ್ಜ್ ರೂ. ೩೨೦/- ಆಗಬಹುದು

___________________________________________

ಅನ್ನವರಂ : 


ಶ್ರೀ ವೀರ ವೆಂಕಟ ಸತ್ಯನಾರಾಯಣ ಸ್ವಾಮಿ ದೇವಸ್ಥಾನ.
ಪೂರ್ವ ಗೋದಾವರಿ ಜಿಲ್ಲೆ

ಸತ್ಯನಾರಾಯಣ ಸ್ವಾಮಿ, ಅನಂತ ಲಕ್ಷ್ಮಿ ಸತ್ಯವತಿ, ಶಿವ ಗರ್ಭಗುಡಿಯಲ್ಲಿ ನೆಲೆಸಿದ್ದಾರೆ.
ಇದು ಪಂಪಾ ನದಿ ತೀರದ ಪುಟ್ಟ ಬೆಟ್ಟ, ರೈಲ್ವೇ ನಿಲ್ದಾಣದಿಂದ ೩ ಕಿಮಿ. ರಾಷ್ಟ್ರೀಯ ಹೆದ್ದಾರಿ ೫ ರಲ್ಲಿದೆ.

(ಅನ್ನವರಂ = ಕೇಳಿದ ವರ ಕೊಡುವ ದೇವರು)

ರತ್ನಗಿರಿ ರೂಪಾಯ
ರಾಮ ಸತ್ಯದೇವಾಯ |
ಮಹಾಶಕ್ತಿ ಯಂತ್ರಾಯ
ಭಕ್ತ ಕಲ್ಪವೃಕ್ಷಾಯ ||


___________________________________________

ಸಾಮರ್ಲಕೋಟ :


೯೨೨ ನೇ ಶತಮಾನದ ಚೋಲರ ಕಾಲದ ಪುರಾತನ,
ಶ್ರೀ ಚಾಳುಕ್ಯ ಕುಮಾರ ರಾಮ ಭೀಮೇಶ್ವರ ದೇವಸ್ಥಾನ,
ಇದು ೧೨ ಅಡಿ ಎತ್ತರದ ಸುಂದರ ಕಪ್ಪು ಶಿವಲಿಂಗ.

___________________________________________

ದ್ವಾರಪುಡಿ :


ಆಧುನಿಕ ಸುಂದರ ಅಮೃತ ಶಿಲೆಯ,
ಶ್ರೀ ಸೋಮೇಶ್ವರ ದೇವಸ್ಥಾನ.
ಅಯ್ಯಪ್ಪ, ವೆಂಕಟೇಶ್ವರ, ದುರ್ಗ ದೇವಸ್ಥಾನಗಳೂ ಇಲ್ಲಿವೆ.

___________________________________________

ಪಾಲಕೊಲ್ಲು :


ಶ್ರೀ ಕ್ಷೀರ ರಾಮಲಿಂಗೇಶ್ವರ ಸ್ವಾಮಿ ದೇವಸ್ಥಾನ.
ಇದು ತುಂಬಾ ದೇವಸ್ಥಾನಗಳಿರುವ ಸಮುಚ್ಛಯ.
ಇನ್ನೊಂದು ವಿಶೇಷವೆಂದರೆ ಇಲ್ಲಿ ಶ್ರೀ ಶನೀಶ್ವರ ಸ್ವಾಮಿಯು ಲಿಂಗಾಕಾರದಲ್ಲಿದ್ದಾರೆ.

ಪಾಲಕೊಲ್ಲುವಿನಲ್ಲಿ ಶ್ರೀ ಕುಬೇರ ದೇವಸ್ಥಾನವೂ ಇದೆ.

(ತೆಲುಗು ಚಿತ್ರನಟ ಚಿರಂಜೀವಿ ಇಲ್ಲಿಂದ ಚುನಾವಣೆಗೆ ಸ್ಪರ್ಧಿಸಿದ್ದರು)

___________________________________________

ಭೀಮವರಂ :


ಶ್ರೀ ಉಮಾ ಸೋಮೇಶ್ವರ ದೇವಸ್ಥಾನ.
ಇಲ್ಲಿಯ ಲಿಂಗವು ಹುಣ್ಣಿಮೆಗೆ ಬೆಳ್ಳಗೆ ಮತ್ತು ಅಮಾವಾಸ್ಯೆಗೆ ನಸು ಗಪ್ಪು – ಕಪ್ಪು ಬಣ್ಣಕ್ಕೆ ತಿರುಗುತ್ತದೆ.
ಮುದ್ದಾದ ಜನಾರ್ಧನ ಸ್ವಾಮಿ, ಶಿರಡಿ ಸಾಯಿ ಬಾಬಾ, ಅನ್ನಪೂರ್ಣೇಶ್ವರಿ, ಸೂರ್ಯ, ಕಾಳ ಭೈರವೇಶ್ವರ  ದೇವಸ್ಥಾನಗಳೂ ಇಲ್ಲಿವೆ.
ಇದು ೩ನೇ ಶತಮಾನದ ದೇವಸ್ಥಾನ, ಈಗ ಪುನರ್ ನಿರ್ಮಾಣವಾಗಿದೆ.

ಭೀಮವರಂನಲ್ಲಿ ಮಾವೂಳಮ್ಮ ದೇವಸ್ಥಾನವೂ ಇದೆ. ಇದು ಸುಂದರ ಅಮೃತ ಶಿಲೆಯ ವಿಗ್ರಹ. ದೇವಿಯ ಕಣ್ಣುಗಳು ಅದ್ಭುತವಾಗಿವೆ.

___________________________________________

ಮಂಗಳಗಿರಿ :

ಮಹಾ ವಿಷ್ಣುವಿನ ೮ ಮಹಾ ಕ್ಷೇತ್ರಗಳಲ್ಲೊಂದು. ಗುಂಟೂರು ಜಿಲ್ಲೆ, ವಿಜಯವಾಡ ಬಸ್ ನಿಲ್ದಾಣದಿಂದ ಕೇವಲ  ೧೩ ಕಿಮಿ ದೂರದಲ್ಲಿದೆ.

ಮಂಗಳಗಿರಿಯಲ್ಲಿ ಸುಂದರವಾದ ಶ್ರಿ ಲಕ್ಷ್ಮೀ ನರಸಿಂಹಸ್ವಾಮಿ ದೇವಸ್ಥಾನವಿದೆ.

ಶ್ರಿ ಪಾನಕಾಲ ಲಕ್ಷ್ಮೀ ನರಸಿಂಹಸ್ವಾಮಿ ದೇವಸ್ಥಾನವು ಬೆಟ್ಟದ ಮೇಲಿದೆ. ಇಲ್ಲಿ ಭಕ್ತರು ಹರೆಸಿಕೊಂಡು ದೇವರಿಗೆ ಬೆಲ್ಲದ ಪಾನಕ ಕುಡಿಸಬಹುದು.

_______________________________________________

ವಿಜಯವಾಡ :

ಕೃಷ್ಣ ನದಿ ತೀರದ ಸುಂದರ ನಗರ. ಇಲ್ಲಿಯ ಇಂದ್ರಕೀಲಾದ್ರಿ ಬೆಟ್ಟದಲ್ಲಿ ತಾಯಿ  ಶ್ರೀ. ಕನಕ ದುರ್ಗಮ್ಮ ನೆಲೆಸಿದ್ದಾಳೆ.  ಕೃಷ್ಣ ನದಿ ನೋಡ ಬಹುದು. 


ಡಾ|| ರಾಜ್…

ನನಗೆ ಅನಿಸುತ್ತೇ,

ಅಣ್ಣಾವ್ರು ನಿರಂತರವಾಗಿ ಪಾತ್ರದಿಂದ ಪಾತ್ರಕ್ಕೆ ಬದಲಾಗುತ್ತ ಹೋದರು. ಅದೇ ಅವರ ಶಕ್ತಿಯು ಆಗಿತ್ತು. ಯಾವುದಕ್ಕೂ ಬ್ರಾಂಡ್ ಆಗದೆ ಬಾಂಡ್ ನಿಂದ ಪಾಂಡುರಂಗನ ವರೆಗೂ ಜೀವ ತುಂಬುತ್ತಾ ಹೋದರು.

ಪ್ರಾಯಶಃ ಭಾರತೀಯ ಚಲನಚಿತ್ರ ಇತಿಹಾಸದಲ್ಲೇ ಇಷ್ಟೊಂದು ವೈವಿದ್ಯಮಯ ಪಾತ್ರಗಳಲ್ಲಿ ಕಾಣಿಸಿಕೊಂಡ ನಟ ಇನ್ನೊಬ್ಬ ಇರಲಾರರೇನೋ! ರಾಕ್ಷಸ, ದೇವರು, ರಾಜ, ಅಮಾಯಕ, ಅಮರ ಪ್ರೇಮಿ, ರೈತ, ಬಾಂಡ್. ಪೊಲೀಸ್ ಅಧಿಕಾರಿ, ಅಂಧ, ಹಳ್ಳಿ ಗಮಾರ, ನ್ಯಾಯವಾದಿ, ಇಂಗ್ಲೀಷ್ ಪ್ರೊಫೇಸರ್, ಮನೋರೋಗಿ ಹಂತಕ, ಸಾಮಾನ್ಯರಲ್ಲಿ ಸಾಮಾನ್ಯ, ಪತ್ರಕರ್ತ, ಜಗಳಗಂಟ, ವಯೋವೃದ್ಧ, ಹೀಗೆ! ನೂರಾರು ಪಾತ್ರಗಳು.

ಸಾಮಾಜಿಕ, ಪೌರಾಣಿಕ, ಕಾಲ್ಪನಿಕ, ಐತಿಹಾಸಿಕ ಯಾವ ಪ್ರಾಕಾರವಾದರೂ, ಅಲ್ಲಿ ರಾಜ್ ಪ್ರಯೋಗಶೀಲ.

ಹಿಂದಿಯ ಮೇರು ಗಾಯಕ ಕಿಶೋರ್ ಕುಮಾರ್ ವೃತ್ತಿ ಬದುಕಿನ ಆರಂಬದಲ್ಲಿ ಕೆಲವು ಸಿನಿಮಾಗಳಲ್ಲೂ ನಟಿಸಿದ್ದರು. ತೆಲುಗಿನ ಡಾ|| ಭಾನುಮತಿ ರಾಮಕೃಷ್ಣ, ನಮ್ಮ ಅಭಿನವ ಭಾರ್ಗವ ವಿಷ್ಣುವರ್ಧನ್ ಹೀಗೆ ತಮ್ಮ ಚಿತ್ರಗಳಲ್ಲಿ ಹಾಡನ್ನೂ ಹಾಡಿದ ಕಲಾವಿದರಿದ್ದಾರೆ.

ಆದರೆ ನಟನೆಯೊಂದಿಗೆ ಹಿನ್ನಲೆ ಗಾಯನವನ್ನೂ ವೃತ್ತಿ ಜೀವನದ ಭಾಗವಾಗಿ ಸ್ವೀಕರಿಸಿದ ಕಲಾವಿದ ಎಲ್ಲಿದ್ದಾರೆ ಹೇಳಿ? ಅಲ್ಲೂ ನಮ್ಮ ಗಾನ ಗಂಧರ್ವನೇ ಚಿರಸ್ಥಾಯಿ. ಕೆಳ ಮನೆಯಿಂದ ತಾರಕಸ್ಥರ, ಶುದ್ಧ ಶಾಸ್ತ್ರೀಯದಿಂದ ಪಾಶ್ಚಿಮಾತ್ಯ, ಮೆಲೊಡಿಯಿಂದ ಫಾಸ್ಟ್ ಬಿಟ್. ಯಾವುದಕ್ಕಾದರೂ ಸೈ! ಇಂದಿಗೂ ಅಣ್ಣಾವ್ರ ಹಾಡುಗಳೆಂದರೆ : “ಬಿಸಿ ಬಿಸಿ ಕಜ್ಜಾಯ, ರುಚಿ ರುಚಿ ಕಜ್ಜಾಯ, ತಗೋ ತಿನ್ನು ತಗೋ ತಿನ್ನು”.