Blog Archives

ಅಜ್ಞಾತ ಕವಿ…

808681_Poet-Tree
ನನ್ನೊಳಗೆ ನಾನಿರದ
ಶೂನ್ಯ ವೇಳೆಯಲೊಮ್ಮೆ
ಗುಡಿಸಿ ಹಾಕಲಿ ಮನಸು
ಮಹಾ ಕವಿಯ ತೆವಲು

ಅದೇ ಪದಗಳ ಅರೆದು
ಮೇಲಿನಿತು ಬಣ್ಣ ಪೂಸಿ
ಬೆನ್ನು ತಟ್ಟಿಕೊಳದಿರಲಿ
ಈ ಅಜ್ಞಾತ ಕವಿಯು

ನಿಜಾಗ್ನಿ ಕರಗಿಸಲಿ ಕೊಬ್ಬು
ಎನ್ನದೇ ಕಾವ್ಯವೆನು ಮಂಕು
ದೈವ ಮಳೆ ತೊಳೆಯಲದು
ಹೂಳುಮಯ ಒಳ ಮೋರಿ

ಸಂಗ್ರಹಿತ ಕತ್ತಲಳಿಸಲಿ
ತಿಳುವಳಿಕೆ ಬಿರು ಬೆಳಕು
ನಾತ ಒಳಾಂಗಣವನು
ಪರಿಮಳಿಸಲಿ ನವ್ಯ ಗಾಳಿ

ಪೇರಿಸುವ ಗ್ರಂಥಗಳೆಲ್ಲ
ತುಂಬಲವು ಜ್ಞಾನ ಸಿದ್ದಿ
ಅರೆ ಪಾವು ತಿಳುವಳಿಕೆ
ಒಪ್ಪವಾಗಿಸಲೆನ್ನ ತಿದ್ದಿ

(ಚಿತ್ರ ಕೃಪೆ: ಅಂತರ್ಜಾಲ)

Advertisements

ಬಂಕರುಗಳಾಚೆಯೂ ಬದುಕಿದೆ…

500ಗೋಜಲಿಸದಿರು ಪ್ರಭುವೇ,
ತಂತಿಗಳಿವು ನಿನ್ನವೇ
ಗೊಂಬೆಯೇ ಮೀರಬಾರದು
ಸೂತ್ರಧಾರನನ್ನೇ!

ನಾಡಿಗಿದ್ದರೂ ಕಿತ್ತು ತಿನ್ನೋ ಬಡತನ
ನಿನಗೇನು ಸ್ವಾಮಿ,  ಬಿಚ್ಚಲೊಲ್ಲೆ
ನಿನ್ನ ದೇಗುಲದಡಿಯ ಭಂಡಾರ!
ನೂರು ದೇಶಗಳನೇನೋ ಚಿತ್ರಿಸಿದೆ
ವರ್ಣ ಭೇದವೋ ಭಾಷಾ ವಿಭೇದವೋ
ಧರ್ಮ ಅಸಹಿಷ್ಣತೆಯೋ, ಏನೋ ಕರ್ಮ!
ಅಗೋಚರ ಗಡಿ ರೇಖೆಗೆ ಆಚೀಚೆ ತಂದಿಟ್ಟೆ
ಹುಟ್ಟು ಹೋರಾಟಗಾರ ದಾಯಾದಿ ಸಂಸಾರ
ನಿನ್ನ ಆಟಕೆ ಹಾವೂ ಮೇಲೆ ಹದ್ದೂ…

ಸಿಕ್ಕ ಸೆರೆ ತಾಜಾ ಮಾಲು
ಕಿತ್ತು ಕಳಿಸುವರಲ್ಲ ಅಂಗಾಂಗ
ಮತ್ತೆ ಅದೇ ಶಾಂತಿ ಮಂತ್ರವೇ?
ನೊಂದು ಬಿಕ್ಕಿತು ಹುತಾತ್ಮ…

ಜಠರ ಮರೆತಿದೆ, ದೊರೆಯೇ!
ಅರೆಯೋ ಕಾಯಕವನ್ನೇ,
ಪಿಜ್ಜಾ ಬರ್ಗರ್ರು ಕಲ್ಮೀ ಕಬಾಬು
ಸಾಹುಕಾರರ ಟೈಂಪಾಸಿನಾಹಾರ
ನನಗೆ ಅಂಬಲಿಸು ಸಾಕು,
ನಂಜಿಕೊಳ್ಳಲು ಹಸಿ ಮೆಣಸಿನಕಾಯಿ…

ಏಕೆ ಜಾಣ ಕುರುಡೋ ನಮ್ಮ ಬಡಿದಾಟಕ್ಕೆ?
ಹಸಿವು ನೆರೆ ಬರ ರೋಗ ರುಜಿನ
ಸತ್ತು ಮಲಗಲಿ ಪೆದ್ದ ಮತದಾರ…
ಖಜಾನೆ ಖಾಲಿಯಾದರೂ ಬೇಸರವಿಲ್ಲ
ಸಿದ್ಧವಿರಲೇ ಬೇಕು ಜಲಾಂತರ್ಗಾಮಿ ಯುದ್ಧ ವಿಮಾನ
ಪಿರಂಗಿ ತುಂಬಾ ಸುಡು ಗುಂಡು ಅಣು ಬಾಂಬು
ಉದರ ಒಣಕಲು ಕೊಡವಾಗಲೇನು
ಬಂಗಾರದ ಕುಚ್ಚು ಚೌರಿ ಕೂದಲಿಗೆ….

ಕಿತ್ತೆಸೆ ನಿನ್ನ ತಂಪು ಕನ್ನಡಕ
ಉದ್ದುದ್ದ ಮಲಗಿದ್ದು ಸಾಕು ನೀನು,
ಪಕ್ಕೆಗೊದ್ದು ಇನ್ನಾದರೂ ಹೇಳು
ದಡ್ಡ ಮಗನೇ,
ಬಂಕರುಗಳಾಚೆಯೂ ಬದುಕಿದೆ…

(ಚಿತ್ರ ಕೃಪೆ : ಅಂತರ್ಜಾಲ)

ಅಮ್ಮ ಮತ್ತು ಮಗಳು…

tottiluಕಲ್ಪಿಸಿ ತೊಟ್ಟಿಲನು
ತೂಗುವಳು ತಾಯಿ
ನೆನಪಾದಾಗ ಮಗಳು

ಅಪ್ಪ ಅಮ್ಮರ ಬಯಕೆ
ಮೂರ್ತತೆಯ ಸಾಕರಿಸಿ,
ನೆನಸಿದ ಎತ್ತರಗಳ
ಮೀರಿ ಬೆಳೆದಿಹಳಾಕೆ
ತಪ್ಪದೆಯೇ ಚಾಚೂ

ಇಯತ್ತೆ ಪಟ್ಟಿಯಲು
ಮುಂಚೂಣಿ ತಮ್ಮವಳೇ,
ಪುಸ್ತಕದ ಹುಳುವಲ್ಲ
ಗೆದ್ದು ಪೇರಿಸಿದಳಂದು
ಆಟೋಟ ಫಲಕ ಪದಕ

ಹೆತ್ತವರ ಮುಪ್ಪರಿತು
ನೌಕರಿಯಲು ಭರ್ತಿ,
ದುಡಿದು ತಂದಳಂದು
ಅಹೋ ರಾತ್ರಿಯೆಲ್ಲ
ತಾ ಕೀಲಿ ಮಣಿ ಕುಟ್ಟಿ

ಗೊತ್ತು ಮಾಡಿದ ವರ
ಒಪ್ಪಿ ಹಸೆ ಏರಿದಳು,
ತವರ ತೊರೆದರು
ಕೈ ಬಿಚ್ಚಿ ಕೊಟ್ಟಳು
ತಪ್ಪದೆಯೇ ತಿಂಗಳು

ತಿಂಗಳು ತುಂಬಿದೆಯಲ್ಲಿ
ಇನ್ನಲ್ಲೂ ಕೈಗೂಸು,
ಆಗ ತೂಗಿದ ಅಮ್ಮ
ಮತ್ತೆ ತೂಗುವ ಕಾಲ
ಮಗಳ ಮನೆ ಜೋಲಿ

(ಚಿತ್ರ ಕೃಪೆ : ಅಂತರ್ಜಾಲ)

ಅಷ್ಟೇ…

1ಕೆನೆಯನೇ ಪುರಸ್ಕರಿಸಿ
ಒಲೆಯ ಮರೆತರೆ ಹೇಗೆ
ಕಾವ ಸಹಿಸಿಕೊಂಡದ್ದು
ಪಾಪ ಮಣಭಾರ ತಪಲೆ

ಸಿಡುಬು ಮೂತಿಗೇಕೆ
ಮಹಾರಾಜನಾಗಿಸಿದ
ಪ್ರಸಾದನ ಕಲಾವಿದ
ಬಣ್ಣ ಕಳಚಿದ ಮೇಲೆ

ದಂತ ಕತ್ತರಿಸಿದ ಗಳಿಗೆ
ಮುದಿ ಆನೆಗೆಲ್ಲಿ ಬೆಲೆ
ಕ್ರಿಯಾಕರ್ಮಕೂ ಮುನ್ನ
ಹಸಿದೇ ಸಾಯಲೀ ಅಪ್ಪ

ಈಜಿ ತೊಳಕೊಂಡರಾಯ್ತು
ನದಿಯ ನೆನಪದೇಕೆ?

(ಚಿತ್ರಕೃಪೆ : ಅಂತರ್ಜಾಲ)

ರಾಮ ನವಮಿಯ ದಿವಸ…

ramರಾಮ ನವಮಿಯ ದಿವಸ
ಅಡಿಗಡಿಗೆ ನೆನಪು ಅಡಿಗರು,
ಅವನ ರಾಜ್ಯವ ಕನಸಿದರೂ
ಮಹಾತ್ಮರ ಚರಮೋದ್ಗಾರ

ಕಲ್ಲು ಗುಂಡಿಗೆ ದ್ರವಿಸಿ ಬಿಡು
ಬಾಲ ಮುರಳಿ ದನಿಯಲಿ
ಸೆರೆ ಮನೆಯ ರಾಮದಾಸ,
ಶ್ರೋತೃ ಬೃಂದಾವನ ಸೋಸು
ಕೋಟೆ ಮೈದಾನದ ಸಂಗೀತ
ಭರ್ತಿ ಪಾನಕ ಕೋಸಂಬರಿ

ಭಕ್ತ ಭಗವಂತ ಅನುಸಂಧಾನ
ಅನತಿ ದೂರಕು ಸಾರಿ ಹೇಳು
ತಬ್ಬಿ ನಿಂತ ರಾಮಾಂಜನೇಯ,
ಇತ್ತ ನಂಬಿಯೇ ಅವನ ದಯೆ
ಹರಕೊಂಡರು ಬಿಸಿಲಲು ಗಂಟಲ
ಹಗಲು ವೇಷಧಾರಿಗೆ ಹಸಿವು

ಮದ್ಯಾಹ್ನಕೆ ಮಾದಪ್ಪನ ಮೆಸ್ಸಿನ
ತಟ್ಟೆ ತುಂಬಲಿ ಮಜ್ಜಿಗೆ,
ಅರಿವುಗೇಡಿಗೆ ಎಟಕದ ಸಂಗತಿ
ಅಮ್ಮನೇ ಅನುದಿನಕು ಶಬರಿ!

(ಚಿತ್ರಕೃಪೆ: ಅಂತರ್ಜಾಲ)

ಪ್ರಜಾ’ಸತ್ತೇ’…

indian_poor

ಒಳಗುದಿಯು ಕುದಿಕುದಿದು
ಬಿಲದ ಬಾಯಿಯ ಹುಡುಕುತ್ತೆ
ನೆಲದಾಳದಿ ಮಿಸುಕೋ ಲಾವಾ

ಮೇಲೆ ನಿರಮ್ಮಳ ಮೌನ
ಕಲ್ಲು ದೇವರು ಕೂಡ
ಪ್ರಳಯ ಮಾರುತ ಮುನ್ನ,
ಕಾದು ಅಪ್ಪಳಿಸುವ ತಾನು
ನೋಟೀಸು ಪೋಣಿಸದು
ಪೆದ್ದನ ಕಿವಿಯ ಮೇಲೆ

ತುಕ್ಕುಗಟ್ಟಿದ ತುಪಾಕಿಯ
ನಂಬಿ ಕಾಯುವ ಸಿಪಾಯಿ
ಖಾದಿಗೆ ಅಮಾಯಕ ಬಲಿ,
ಗಡಿಯಲಿ ಶಾಂತಿ ಪಠನೆ
ನುಸುಳು ಕ್ರಿಮಿ ನುಸುಳುತ್ತೆ
ಬಿದ್ದ ಮೇಲೆ ಲೆಕ್ಕ ಹೆಣ

ಕೋಟಿ ನುಂಗಲಿ ಮತದಾನ
ಕಡೆಗೆ ಬಸಿರಿಳಿದದ್ದು ಅದೇ
ಪಾಪ ಗರ್ಭದ ಕಾರಸ್ಥಾನ,
ಕೊಂಡ ಚಿಹ್ನೆಯ ಛತ್ರಿಯಡಿ
ಹೆಗ್ಗಣಗಳ ಪಾದಯಾತ್ರೇ
ಉಗುಳು ಎರಚು ಅಭಿಯಾನ

ಗುಂಡಿ ಒತ್ತಿದ ತಪ್ಪಿಗೆ
ಗುಂಡಿ ತೋಡಿಸಿಕೊಳ್ಳೋ
ಅರೆ ಹೊಟ್ಟೆ ಪ್ರಜಾ’ಸತ್ತೇ’

(ಚಿತ್ರಕೃಪೆ : ಅಂತರ್ಜಾಲ)

ಬಂತು ಉಗಾದಿ…

ugadiಮಾವಿನ ಎಲೆ ತೋರಣ
ತಂದು ಕಟ್ಟುವ ಪಜೀತಿ
ಪ್ಲಾಸ್ಟಿಕ್ಕಿನ ಸಿದ್ಧ ತೋರಣ
ಅಲಂಕರಿಸಲಿ ಬಾಗಿಲಿಗೆ

ಹರಳೆಣ್ಣೆ ಬಲು ಜಿಡ್ಡು
ತಿಕ್ಕಿ ತಿಕ್ಕಿದರು ತೊಳೆಯದು
ನೆತ್ತಿಗೊಂದು ಹನಿ ಎದೆಗೂ
ಮಜ್ಜನವಾಯಿತು ಬಿಡಿ

ರುಬ್ಬಿ ಬೇಳೆಯ ಕಟ್ಟು
ತಟ್ಟಿ ಸುಡುವುದು ತ್ರಾಸ
ಉಡುಪಿ ಸ್ಟೋರ್ ಮಾರುತ್ತಾರೆ
ಬಿಸಿ ಬಿಸಿ ಹೋಳಿಗೆ

ಹೊಸ ಬಟ್ಟೆಗಳು ತುಟ್ಟಿ
ಹಳತೇ ಆಗಲಿ ಇಸ್ತ್ರೀ ತಿಕ್ಕಿ
ಕೇಳಿ ಟೀವಿ ಜ್ಯೋತಿಷಿಗಳ
ವರ್ಷ ಭವಿಷ್ಯ ಪಾವನರಾಗಿ

ಬಟ್ಟಲಲ್ಲಿ ಬೆಲ್ಲ ಹೆಕ್ಕಿಕೊಳ್ಳಿ
ಬಾಯಿಗೆ ಕಹಿ ಬೇವಿನ ಚಿಗುರು!
ಹುಡುಕಿ ಹಂಚಿರಿ ಮುಖ ಪುಟದಲಿ
ಕನ್ನಡ ಗೀತೆ ನೀವೇ ಮೊದಲು

ಅಮಾಯಕನ ಜಾಡಿ…

jadiಊರು ಪಾದಗಳ ಕೆಳಗೆ
ಜವುಗು ಭೂಮಿ
ತಟ್ಟಾಡದೇ ನಿಲುಗಡೆ ಇಲ್ಲ
ಜಾರುತಿವೆ ಹೆಜ್ಜೆ

ದುಡಿದ ಕವಡೆಯ ಮತ್ತೆ
ಕಸಿದುಕೊಳ್ಳುತ್ತೆ ಸರ್ಕಾರ
ಗೆರೆ ಗೀಚಿ ಮತ ಸೆಳೆಯುತ್ತೆ
ಬಡವ ಮೇಲ್ಗಡೆ ಬಲ್ಲಿದ

ಶುಕ್ರ ದೆಸೆ ಮಾರಾಟಕ್ಕಿದೆ
ಬೆರಳಿಗೆ ಭಾರದ ಹರಳು
ಭಾಮಿನಿ ಕಟಾಕ್ಷ ವ್ರತದಲ್ಲಿ
ಭೂಕಳ್ಳ ಖಾವೀ ಸ್ವಾಮಿ

ಸಾಲ ಕೊಡುತ್ತವೆ ಪಾಶ್ಚಾತ್ಯ
ಪ್ರಸಾಧನ ಕೊಂಡುಕೊಳ್ಳಿ
ಕಿತ್ತ ಎಕ್ಕಡ ತಲಪು ರಸ್ತೆಗಳು
ಹಳ್ಳಿಗಾಡು ಮರೆತುಕೊಳ್ಳಿ

ಜಗಳಗಂಟನ ಮನೆ ಮುಂದೆ
ಪಾಲಿಕೆಯ ನಿರಂತರ ಪೊರಕೆ
ಮೆತ್ತಗಿದ್ದರೆ ನೂರು ಕೈ ಸ್ವಾಮೀ!
ಮುಚ್ಚಲು ಅಮಾಯಕನ ಜಾಡಿ

(ಚಿತ್ರ ಕೃಪೆ: ಅಂತರ್ಜಾಲ)

ಬಂದರುಗಳಿಗೆ…

shipಬಂದರೇ ಅನುಮತಿಸು
ಅಕ್ಷರಗಳ ನಾವೆ ಬಂದಿದೆ
ಲಂಗರಿಳಿಸಲು ನಿಮ್ಮಲ್ಲಿ

ನನ್ನ ಧಕ್ಕೆಯಿಂದ ನಿಮ್ಮ
ಡಕ್ಕೆಯ ಕಂಡು ಪುಳಕ
ಯಾನ ತಾಪತ್ರಯ ದಾಟಿ
ಒಪ್ಪಿಸುವ ತೀವ್ರ ತವಕ

ಗ್ರಹಿಕೆಗೆ ಸಿಕ್ಕೆಲ್ಲ ಸರಕು
ತುಂಬಿ ತಂದಿದೆ ಹಡಗು
ಕಲಾವಂತಿಕೆ ಹಸೆಯು
ಮಾಲು ಅಪ್ಪಟ ಕುಸುರಿ

ಮೊದಲಲ್ಲಿ ತಲುಪಲಿ
ಹುಡುಕಿಕೊಳ್ಳಲಿ ಗಿರಾಕಿ
ಅವರರವರ ಅಳತೆಗೆ
ನೂರು ದಿರಸಿದೆ ಇಲ್ಲಿ

ಇದ್ದೀಯ ನೀನೆಂಬ
ನಂಬುಗೆಯ ಹಂಬಲದೇ
ಕವಿತೆ ಕಟ್ಟಿದೆ ನಾನೂ
ಇಳಿಸಿಕೋ ತೆರೆದ ಮನದಿ

(ಚಿತ್ರ ಕೃಪೆ : ಅಂತರ್ಜಾಲ)

ಒಂದರಗಳಿಗೆ…

coupleಒಂದರಗಳಿಗೆ
ಜಗದ ಜಂಜಡ ಮರೆತು,
ನಿನ್ನೊಳಗಿನಾ ಅಳಲ
ಆಳ ಸಾಂದ್ರಗಳ ತಾಕಿ
ಸಂತೈಸುವ ತವಕ ಎನಗೆ

ದಿನ ದಿನವೂ ಮಗುವಂತೆ
ಎನ್ನ ಕಂಬನಿ ಒರಸಿ
ಲಾಲಿಸುವೆ ತಾಯಿಯಂತೆ,
ಒಮ್ಮೆಯಾದರೂ ನನಗೂ
ಅರ್ಥವಾಗಲಿ ನಿನ್ನತನ
ನಿನ್ನ ನೋವಿನ ಭಾವನಾ

ಒಟ್ಟಾಗಿದ್ದರೂ ಒಟ್ಟಾಗದು
ಎನಿತೋ ದಡ್ಡ ಮನಗಳು,
ರಾಗ ತಾಳ ಮಿಳಿತವಾದರೆ
ಸುಶ್ರಾವ್ಯ ಜೀವ ಸಂಗೀತವು,
ಬೆರೆತು ಹೋದರೆ ಇಮ್ಮನ
ಒಂದೇ ಹೆಜ್ಜೆಯ ನಡಿಗೆಯು

ನಿನ್ನ ಸಹನೆಯ ಕಟ್ಟೆಯು
ಮೀರಿ ಹರಿದರೆ ಒಮ್ಮೆಲೆ
ತೆರೆಯಲಿ ನನ್ನ ನಾಲೆಯು

ಪರದೆ ಸರಿದರೆ…

aಪರದೆ ಸರಿದರೆ,

ಕಿಕ್ಕಿರಿವ ಅಭಿಮಾನಿಗಳು
ಕಿವಿಗಡಚಿಕ್ಕುವ ಚಪ್ಪಾಳೆ
ಶಿಳ್ಳೆಗಳ ಮೊರೆತ
ತೂರಿ ಬರುವ ಚಿಲ್ಲರೆ ಕಾಸು
ಕಟೌಟಿಗೆ ಕ್ಷೀರಾಭಿಷೇಕ

ಕೆಮ್ಮಿದರೂ ಸುದ್ದಿ
ಮೂಗು ಸುರಿದರೆ ವಿಲಾಯತಿ!
ಕ್ರಾಪು ಬದಲಿಸಿದರೆ
ಅಲವತ್ತುಕೊಳ್ಳುವ
ಬೋಳು ತಲೆ ಮಂದಿ

ತಾರಾ ಬಲವಿದ್ದ ಕಾಲಕೆ
ಕಾಲಿಗೊಂದು ಕೊಪ್ಪರಿಗೆ,
ಒಪ್ಪಿಗೆ ಹಸ್ತಾಕ್ಷರಕಂತೂ
ಮುಂಗಡವೋ ಇಡಿಗಂಟೋ
ಕಪ್ಪವೂ ಕಪ್ಪು ಬಿಳುಪೂ

ಹಡಗಿನಂಥ ರಥವು
ಬೀದಿಗಿಳಿದರೆ ಮೈಲುಗಟ್ಟಲೇ ಖಾಲಿ,
ಚುನಾವಣಾ ಕಾಲಕೆ
ಎಡತಾಕುವ ರಾಜಕೀಯ ಮಂದಿ,
ಸುಲಭ ವಿಸರ್ಜನಾ ಚೂರ್ಣಕೂ
ಬೇಡಿಕೆ ತನ್ನದೇ ಚಹರೆ

ಚಿರ ಯೌವ್ವನಿಗನ
ಹೊಸ ಚಿತ್ರಕೂ ಹದಿನಾರರ ಹುಡುಗಿ,
ಮೇಯ್ದ ಹುಲ್ಲುಗಾವಲುಗಳೂ
ಮರೆತ ಚಿತ್ರಾಂಗಧೆಯರೂ ಎನಿತೋ?

pyle_torn_curtainಪರದೆ ಸರಿದರೆ,

ನೆರೆದಿದ್ದವರೆಲ್ಲ ಕರಗಿ
ಉಳಿದದ್ದು ತಲೆಯ ನೆರೆತ,
ಲಗಾಮುಗಳ ಮೀರಿ
ಬಳಸ ಬಾರದ್ದಕ್ಕೆ ಬಳಸಿ
ಮುಷ್ಕರ ಕೂತ ಅಂಗಾಂಗ

ಸಂಜೆ ದೂರದರ್ಶನದಿ
ಪ್ರಸಾರವಂತೆ ತನ್ನದೇ ಚಿತ್ರ
ಮನವೂ ಗಾಡಾಂಧಕಾರ
ಕಟ್ಟದೆ ಉಳಿದ ಬಾಕಿ ಮೊತ್ತಕೆ
ಕಿತ್ತಿಟ್ಟ ಕರೆಂಟು ಫಿಸೂ

ನೂರನೆಯವಳ ಪ್ರವೇಶಕೆ
ಹಗ್ಗಕೆ ನೇತಾಡಿದಳು ಕಟ್ಟಿಕೊಂಡವಳು,
ರಸಿಕತೆಯ ದಾಖಲೆ ಬರೆದ
ಪಾಳು ಬಂಗಲೆಯಲೀಗ
ತಾನೇ ಜೀವಂತ ಭೂತ!

ತೊಟ್ಟ ಕೋಟಿನ ಹಿಂದೆ
ನಕ್ಕ ಹರಿದ ಬನಿಯನು,
ಕಿಮ್ಮತ್ತಿರದ ದಿವಾಳಿಯ ಸುತ್ತ
ಕಳಚಿಕೊಂಡ ಭಟ್ಟಂಗಿಗಳು,
ಬಂಗಲೆಯ ಗೋಡೆಗಳಲಿ
ಅವೇ ಶತಮಾನೋತ್ಸವ ಫಲಕ

ಬಣ್ಣ ಕಳಚಿದ ಮೇಲೆ
ಬಯಲು ಒಳ ಬೆತ್ತಲೆ,
ಸತ್ತರೆ ಬೇಕಂತಲ್ಲ
ತಯಾರಾಗಲಿ ಸಾಕ್ಷ್ಯಚಿತ್ರ!

(ಚಿತ್ರ ಕೃಪೆ : ಅಂತರ್ಜಾಲ)

ನಡುಗಡ್ಡೆಗಳಿಗೆಲ್ಲ…

islನೆನಪಿರುವುದೇ ಇಲ್ಲ,
ಬಿಸುಟು ಬಂದು ಬಿದ್ದ
ಹಲ ಇಸುಮುಗಳಲಿ
ಅರೆ ಸತ್ತ ಜೀವಂತ
ಇಂತೊಂದು ಚಹರೆ

ಬಯಸಿ ಬಂದದ್ದಲ್ಲ
ಕರೆಸಿಕೊಳ್ಳಲೂ ಇಲ್ಲ
ಪ್ರಕ್ಷುಬ್ಧವಾ ಕಾಲ ಘಟ್ಟ,
ದೇಗುಲವ ಕನವರಿಸಿ
ಪಡೆದ ಗೋರಿ ಫಲಕ

ಹೆಸರನಾದರೂ ಕೆತ್ತಿ
ಇರುವಿಕೆಯ ಅಜರಾಮರ
ಮಾಡಿಯೇ ತೀರಬೇಕು
ಎಂದೆನಿತು ತಡಕಿದರೂ
ಬರೀ ಮಳಲೇ ಸುತ್ತ

ಒಂದೊಮ್ಮೆ ಹಿಂದಿರುಗಿ
ಕೆದಕಿ ಕೇಳಲೇ ಬೇಕು
ಬೇಡದಿದ್ದರೂ ತೆಕ್ಕೆ
ಬಳಸಿಕೊಂಡಾ ಗಳಿಗೆ
ಉನ್ಮತ್ತತೆಯು ಸುಳ್ಳೇ?

ನೆನಪಿರುವುದೇ ಇಲ್ಲ
ನಡುಗಡ್ಡೆಗಳಿಗೆಲ್ಲ
ಅನಿವಾರ್ಯ ಅದಕಲ್ಲ,
ಕ್ಷಣ ಗಾಹಿಗಳದೆಲ್ಲ
ಉತ್ತರಕ್ರಿಯಾ ಕರ್ಮ

ನೀರು…

Week : 17

Gulf Kannadiga
Gulf Kannadiga

water 1ಕಾಡು ಕಾಯದ ಹೊರತು
ಕಾರ್ಮೋಡ ಹನಿಗಟ್ಟದು,
ಮೋಡ ಬಿತ್ತನೆ ಯತ್ನಕು
ಮಳೆ ಮೋಡ ಸುಳಿಯದು

ಕನಿಕರಿಸಿದ ಮಳೆಯನು
ಇಂಗಿಸುವದ ಮರೆತೆವು,
ಎನಿತೀಗ ಕೊರೆದರೇನು
ಗಂಗಾಮಯಿ ಜಿನುಗದು

ಸುರಿದ ರಾಸಾಯನಿಕವು
ಹೊಲ ಗದ್ದೆ ನೆಲಕಿಳಿದು,
ಸೇದು ಪ್ರತಿ ಬಿಂದಿಗೆಯು
ಕುಡಿವ ವಿಷದ ನೀರು

ಉಳಿತಾಯ ಅರಿತವರು
ನಮ್ಮ ಜಾಣ ಹಳ್ಳಿಗರು,
ಹಾಕಿಸಲಲ್ಲಿ ಸರ್ಕಾರವು
ಹನಿ ಹನಿ ನೀರಾವರಿಯು

ಇನ್ನು ಬೇಕಿದೆ ನಗರಕು
ಪುನರ್ ಬಳಕೆಯ ನೀರು
water2

 

 

 

 

Gulf Kannadiga

 

 

ಗಲ್ಫ ಕನ್ನಡಿಗ ಈ ಪತ್ರಿಕೆಯಲ್ಲಿ ಪ್ರಕಟಿತ.
26.01.2013
http://gulfkannadiga.com/news/culture/39732.html

 

ದೊಂಬರಾಟ…

palavalli ankana

Gulf Kannadiga

  Week : 10  

Dombarata copy

ಈ ತುದಿಗಿದೆ ಜನನ
ಆ ತುದಿಗಿದೆ ಮರಣ
ನಡುವೆ ಹಗ್ಗದ ಮೇಲೆ
ತೊಯ್ದಾಡುತಿದೆ ಜೀವ,
ಯಾರದೋ ತಿಕ್ಕಲಿಗಿಲ್ಲಿ
ಬದುಕು ದೊಂಬರಾಟ!

ಒಂಟಿ ಕಾಲಿನ ಮೇಲೋ
ಎರಡೂ ಬಳಸಬಹುದೋ
ನಿಲುವೂ ನಮದಲ್ಲದ ತಾಣ,
ಕ್ಷಣ ಕ್ಷಣಕು ತೊಯ್ದಾಟ
ಯಾರದೆಲ್ಲ ಗಾಳಿ ತಳ್ಳಾಟ
ನೆಟ್ಟಗಿದ್ದೀತೆಲ್ಲಿ ತೋಲನ?

ಅಗೋಚರ ಬಲೆ ಇದೆಯೋ
ಏನು ಕಾದಿದೆಯೋ ಬುಡಕೆ
ಬೀಳು ಭಯವೇ ನಿರಂತರ,
ತ್ರಿಕಾಲ ಜ್ಞಾನ ಸಂಪತ್ತೆಲ್ಲ
ಗಿಲೀಟು ನಗೆಯಲಿ ಪೂಸಿ
ಕಕ್ಕುತಿರಬೇಕು ಪೋಸನೂ

ಗೋಚರದ ಮಸುಕು ಹಾದಿ
ಎಡರು ತೊಡರಿನ ಹೆಜ್ಜೆ
ಊಹೆ ನಿಲುಕದ ಗ್ರಹಚಾರ,
ಉಟ್ಟುಡುಗೆಯೇ ಭಾರ
ಜಾರುತದೆ ನಾಚಿಕೆ ಬಿಲ್ಲೆ
ಸ್ವ ಕೆರೆತಕಿಲ್ಲ ಪುರುಸೊತ್ತು

ಪಲ್ಟಿ ಬಿದ್ದೆದ್ದು ಸಾವರಿಸಿ
ಮತ್ತೆದ್ದರೂ ಕಡೆಗಣಿಸಿ
ಅವನ ಪಾಡಿಗವನ ಆಟ,
ಪ್ರಾಯೋಜಕರ ಪಾಲಿಗೆ
ಹತ್ತರಲ್ಲೊಂದು ಹುಟ್ಟಿದು
ಅಪ್ರಯೋಜಕ ದುಡಿಮೆ

ಜೀವ ಇರು ಹೊತ್ತೂ ಅವಗೆ
ಡೊಳ್ಳು ಬಡಿವ ಉಮೇದಿ
ಎಲ್ಲಿಹನೋ ತಾನು ತಳವೂರಿ?
ನಡಿಗೆ ನಮ್ಮದೇ ಕರ್ಮ
ಚಪ್ಪಾಳೆಯೋ ಕಲ್ಲೇಟೋ
ಪಾಪ ಪುಣ್ಯದ ಕೋಲನೇ ನಂಬಿ!

ಗಲ್ಫ ಕನ್ನಡಿಗ ಈ ಪತ್ರಿಕೆಯಲ್ಲಿ ಪ್ರಕಟಿತ.
07.12.2012

http://gulfkannadiga.com/news/culture/24864.html 
ದಿನಕರ ಮೋಗೇರ ಕ್ಲಿಕ್ಕಿಸಿದ ಕ್ಯಾಮರಾ ಕಣ್ಣಿಗೆ 
ಪಲವಳ್ಳಿ ಬರೆದ “ದೊಂಬರಾಟದ ಕವಿತೆ!

ತ್ಯಾಜ್ಯ ವ್ಯಾಜ್ಯ…

 

ನೆಲದಾಳ ಬಿಲ ಬಗೆದು
ನನ್ನತನ ಹೊತ್ತೊಯ್ದನವ
ಯಾರೋ ಪರಕೀಯ!
ಸದ್ದಿರದೆ ಬಿಕ್ಕಳಿಸಿದೆ,
ಅವನು ಹೊರಗಿನವ
ತಿಳಿದಾನೆಲ್ಲಿ ನನ್ನ ನೋವ?

ಇವರು ನಮ್ಮವರೇ
ನೆರೆ ಊರಿನವರು
ತಿಪ್ಪೆಯಾದೆನೇ ನಿಮಗೆ?
ಇವರು ಬೇರೆಯವರಲ್ಲ
ಅವರ ನುಡಿ ಅರ್ಧ ನೀವೇ
ಮರೆತರೇ ಹೇಗೆ?

ಈಗ ನನ್ನೆದೆ ತಿತ್ತಿಗಳು
ಖಾಲೀ ಸುರಂಗಗಳು
ತುಂಬಿಕೊಂಡಿದೆ ನೀರು
ಉಸಿರು ಕಟ್ಟುವ ಗಾಳಿ
ಮೇಲೆ ಸೈನೈಡು ಬೆಟ್ಟ

ಬಗೆದರೆ ಮಿಂಚು ಹಳದಿ
ಆಳಕಿಳಿದರೆ ಅದಿರು
ನಂಬಿದ ಮಂದಿ ಹೊಟ್ಟೆ
ತುಂಬಬಹುದಿತ್ತು ಇನ್ನೂ,
ಮತದಾನ ದೂರವಿದೆ
ಗೆದ್ದವನಿಗೆ ಭರ್ತಿ ನಿದ್ರೆ

ಬಿಟ್ಟಿ ಇಂಧನ ಮೂಲ
ಸೂರ್ಯನೇ ಇರುವಾಗ
ಕೌಪೀನ ಅಣು ಸ್ಥಾವರ!
ಗಾಳಿ ಯಂತ್ರವೂ ಹಳ್ಳಿ ಬೆಳಕು
ಹಸಿ ಕಸವೂ ಲಕುಮೀ

ಹಿಡಿ ಧಾತು ಗುದ್ದಿಸಲು
ಗುಡ್ಡ ಪುಡಿ ಮಾಡಿದರು
ಉಳಿವುದದೇ ಮರಳು ತ್ಯಾಜ್ಯ
ಘನ ಘೋರ ಖಾಯಿಲೆ
ತಲಮಾರು ಹೊರಬೇಕು

ಸ್ಥಾವರವು ನೆರೆ ನಾಡಲಿ
ಮಲ ಗುಂಡಿ ಇಲ್ಲಿ ಬೇಕೆ?
ಹುಗಿದ ಕಸವದು ಕೇಳಿ
ಜೀವಂತ ಬಾಂಬದು ಅಯ್ಯೋ
ಗೋಡೆ ತಡೆದೀತೆ ಸೋರಿಕೆ

ಮುಂದೆ ಹುಟ್ಟುಗಳೆಲ್ಲ
ಅಂಗವಿಕಲರೇ ನಿಮಗೆ
ಇಂಗಿದ ಕಣ್ಣಲಿ ನೀರು,
ಕೂಡಿ ಅಟ್ಟಿ ಒಮ್ಮೆಲೆ
ದನಿ ಎತ್ತಿ ಅಬ್ಬರಿಸಿ
ಮಲವಿಲ್ಲಿ ತರಬೇಡಿ!

3K – ಸಂಭ್ರಮದ ಸಲುವಾಗಿ3k ಆಚರಿಸಲ್ಪಟ್ಟ ನವೆಂಬರ್ ತಿಂಗಳಿನ ಅತ್ಯುತ್ತಮ ಕವನಗಳ ಸ್ಪರ್ದೆಯಲ್ಲಿ ನನ್ನ ಕವನ ಪ್ರಶಸ್ತಿಗೆ ಆಯ್ಕೆಯಾಗಿದೆ.

ನನ್ನ ಮೆಚ್ಚಿನ ಕವಿ ಗೆಳೆಯ ಪುಷ್ಪರಾಜ್ ಚೌಟ ರವರ “ಗಾಂಧಿ ನಗುತ್ತಿದ್ದಾನೆ ನೋಟಿಗಂಟಿ!” ಕವನದ ಜೊತೆ ಹಂಚಿಕೊಂಡದ್ದು ಇನ್ನಷ್ಟು ತೃಪ್ತಿ ತಂದಿದೆ.

ಗೂಡಿನಿಂದ ಬುರುಜಿಗೆ…

Gulf Kannadiga

   Week : 7

ಮನೆಯಲಿ ಕೋಣೆಗಳಂತೆಯೇ
ಮನದಲಿ ಗೂಡುಗಳಿರಲಿ ನಮ್ಮೊಳು
ಅಂಗಳದೆಲ್ಲ ಗದ್ದಲಗಳ ಮೀರಿಯೇ
ಏಕಾಂತ ದೊರೆಯಲಿ ಅಂತಃಪುರದೊಳು

ನಿನ್ನೆ ಮಡಚಿಯೇ ನಾಳೆ ತೆರೆಯಲಿ
ಇಂದು ಕನಸಿರೆ ಹಿಮಗಿರಿ ಎತ್ತರ
ಸವೆದ ಹೆಜ್ಜೆಗಳೆಲ್ಲ ತೊಡರಲೇ
ಹುಡುಕು ಬದುಕು ಹಾದಿಗೂ ಉತ್ತರ

ತಿರುಗು ತಟ್ಟೆ ಸುಪ್ರಭಾತದ ಕೊರಳಲಿ
ಘಂಟಸಾಲ ಸುಬ್ಬಲಕ್ಷ್ಮಿಯು ಚಿರಂತನ
ಅದರ ಮೇಲೂ ಗಾನ ಅರಳಲಿ
ಹೊಸದು ಬೇಡವೇ ದಿನ ದಿನ?

ಸ್ಮರಣ ಸಂಚಿಕೆ ಗೋಡೆ ಕಟ್ಟಿರೆ
ಗಟ್ಟಿ ಛಾವಣಿ ಹೊದಿಕೆಯು
ಆಳ ಪಾಯದ ಗ್ರಂಥ ಸ್ಮೃತಿ ಇರೆ
ನವ್ಯ ಕಾವ್ಯಕೂ ಗಿರಿಮೆಯು

ಕಲಿಕೆ ನಿಲ್ಲದು, ಬಳಪ ಮುರಿದರೂ
ಹಲಗೆ ತುಂಬಿರಿ ದುಂಡು ಅಕ್ಕರ
ಏಕತಾನದ ತಿರುಗು ಪರಧಿಗು
ಆಚೆ ಕಾದಿದೆ ನೂರು ಹೊಸ ತರ

ತುಡಿತವಿದ್ದರೆ ದೂರ ತೀರವೇ
ಯೋಜನವದೂ ಇಂಚು ಈಜಿಗೆ
ಗೆಲ್ಲು ಹುರುಪಿರೆ ರಾಜ್ಯ ಕಾದಿದೆ
ಹೊಸ ಪತಾಕೆ ಹಾರಲಿ ಬುರುಜಿಗೆ

ನಾಳೆ ಮಳೆ ಹನಿ ನೆಚ್ಚಿಯೇ
ಇಲ್ಲಿ ಒಳ ಭೂ ಹದವಾಗಲೀ
ಒಂದೇ ಬೀಜವು ಮೊಳೆತರೂ ಅದೇ
ನೆರಳು ನೀಡೋ ಮರವಾಗಲೀ

ಗಲ್ಫ ಕನ್ನಡಿಗ ಈ ಪತ್ರಿಕೆಯಲ್ಲಿ ಪ್ರಕಟಿತ.
16.11.2012
http://gulfkannadiga.com/news/culture/18111.html

ಜೋಡಿ ಗಾನ…

(ಚಿತ್ರ ಕೃಪೆ : ಅಂತರ್ಜಾಲ)

ಇತಿಹಾಸ ತಜ್ಞ…

Gulf Kannadiga / Week :4

ಮಮ್ಮಲ ಮರುಗುವನು
ಬನವಾಸಿಯಲಿ ಅಲೆವಾಗ
ಪಂಪ ಮಯೂರನ
ಕುರುಹೂ ತಾಕದೇ ತಾನು,
ಹುಡುಕಿ ಕೊಡಬೇಕವನೇ
ಸುಂದರ ಮಧುಕೇಶ್ವರ

ಆ ರಂಗನಾಥನೇ ಬಲ್ಲ
ಶ್ರೀರಂಗಪಟ್ಟಣವದೇಕೆ
ಅವಜ್ಞ ತಾಣವೀಗ?
ಹೆಜ್ಜೆ ಹೆಜ್ಜೆಗು ಅಲ್ಲಿ
ಟಿಪ್ಪುವಿನ ಗತ ಚರಿತೆ
ಮೂಕ ಭಾವಗೀತೆ

ಅಂತೆಯೇ ಬೆಂಗಳೂರು
ಗಗನ ಚುಂಬಿಯ ಅಡಿಗೆ
ಯಾವುದೋ ವೀರಗಲ್ಲು,
ಕಬ್ಬನ್ ನೆನೆವರೇ ಇಲ್ಲ
ಮುಚ್ಚಿದೆವು ಕೆರೆ ಕಟ್ಟೆ
ಮಂಟಪವು ಪಾಲಿಕೆ ಗುರುತು

ಎಲ್ಲಿಯದೋ ದೊರೆ ಗಾಥೆ
ಬೋಧಿಸುವ ಪಠ್ಯ ಕ್ರಮ
ಕಲಿಸದು ನೆಲದ ಧರ್ಮ,
ಅಂತ ವಿಸ್ಮರಿತ ಐತಿಹ್ಯಗಳ
ಸಿಕ್ಕು ಬಿಡಿಸಲು ಕುಳಿತ
ಇಲ್ಲೊಬ್ಬ ಇತಿಹಾಸತಜ್ಞ

ಬುದ್ಧಿಗೇಡಿಯ ತಿಕ್ಕಲಿಗೆ
ಹಾಳು ಹಂಪೆ ಹಳೇ ಬೀಡು,
ಮಿಕ್ಕ ಸ್ಮಾರಕಗಳ ಮಾರಕರು
ನಾವೇ ಅಸಲು ಘಜ್ನಿಗಳು
ಹೊಸಕುವೆವು ಗುರುತುಗಳೂ…

(ಚಿತ್ರ ಕೃಪೆ : ಅಂತರ್ಜಾಲ)
ಗಲ್ಫ ಕನ್ನಡಿಗ ಈ ಪತ್ರಿಕೆಯಲ್ಲಿ ಪ್ರಕಟಿತ.
26.10.2012
http://gulfkannadiga.com/news/culture/12288.html

ಪರಸ್ಪರ…

 

 

 

 

 

 

 

 

ಉಳಲು ಅನುಮತಿ ಉಂಟೆ
ಬಂಜರು ಮನಸುಗಳೇ?
ಒಲುಮೆ ಬೀಜವ ನೆಟ್ಟು
ಗೆಳೆತನದ ಮಳೆ ಹುಯಿಸಿ
ನಗೆ ಭತ್ತ ಬೆಳೆಯುವೆ

ನನ್ನ ಗದ್ದೆಗೆ ಕಾಲಿಟ್ಟೀಯೇ
ಜೋಕೆ! ಯಾರು ನೀ ಎನ್ನದಿರಿ,
ನಾನೂ ಮೊದಲು ಬರಡು
ಯಾರೋ ಹಸನಾಗಿಸಿದರಲ್ಲ
ನನ್ನ ಖಾಲಿ ಒಡಲೂ

ಇಲ್ಲಿ ಹುಟ್ಟಿದ ಮೇಲೆ
ಆಗಲೇ ಬೇಕು ಆಗಾಗ
ಒಬ್ಬರಿಗೆ ಒಬ್ಬರು,
ಅಂತ ಚಂದ್ರನು ಕೂಡ
ಭಾನುವಿನ ದಾನದಲೇ
ಹುಣ್ಣಿಮೆ ಚೆಲ್ಲ ಬೇಕು…

(ಚಿತ್ರ ಕೃಪೆ : ಅಂತರ್ಜಾಲ)

ವಿಳಾಸಗಳು…

ಇರುಕು ವಠಾರದ ಬಾಲ್ಕಾನಿ
ಗುಲ್ಮೊಹರದಡಿಯ ಕಲ್ಲು ಬೆಂಚು
ವಿವಿ ಪುರಂನ ಆ ತಿರುವು
ನೆನಪಾಗಲೇ ಬಾರದೆಂದು
ಎದೆ ಕಪಾಟಿನಲಿ ಹೂತಿಟ್ಟೆ

ನನ್ನ ಲಕೋಟೆಯ ಮೇಲೆ
ಬರೆದ ಆ ವಿಳಾಸಗಳೆಲ್ಲ
ಅವಧಿ ಮೀರಿ ತೀರಿ
ಟಿಸಿಲೊಡೆದಿದ್ದೀತು ಎಲ್ಲೋ

ಅಂದೆಂದೋ ಡಬ್ಬಿಗೂ
ಹಾಕದೆಲೆ ಮುಚ್ಚಿಟ್ಟ
ಪ್ರೇಮ ಪತ್ರಗಳಿಗೆಲ್ಲ
ತಿವಿವ ತಿರಸ್ಕೃತ ಮುದ್ರೆ!

ಮರೆವಿನ ಆಸೆ ಎಂಜಲು
ಒಣಗಿ ಗಟ್ಟಿ ಚೀಟಿ,
ಹಬೆಗಿಟ್ಟರೂ ಬರದು
ಬಿಡಿಸಲಾರದ ಅತುಕು

ಆಗಾಗ ಹುಡುಕುವೆನು
ಮುಖಪುಟದ ಒಳಗೂ
ಅಂತರ್ಜಾಲದ ಹೊರಗೂ
ಸಿಕ್ಕೀತೇ ವಿಳಾಸ?

(ಚಿತ್ರ ಕೃಪೆ : ಅಂತರ್ಜಾಲ)

ಅವರೂ ಇವರೂ…

ಆರುವ ದೀಪಗಳಂತೆ
ನಾವುಗಳು ನೀವುಗಳು
ಯಾವ ಕ್ಷಣವೋ
ಇಲ್ಲಿಂದ ಅಲ್ಲಿಗೆ ಪಯಣ?

ದಕ್ಕಿದ್ದೇ ಅರೆಪಾವು ಜಿಂದಗಿ!
ಜೀಕುವುದು ಗ್ರಾಫು ಏರುಪೇರು,
ಕತ್ತಲಲ್ಲೇ ಗುರಿ ತಡಕೋ ಕುರುಡ್ಗಣ್ಣು,
ಮೇಲೆ ಕೋಟಿ ಮಿಸ್ಸಂಡೆರ್ಸ್ಟಾಂಡಿಂಗೂ?

ಚಿಕ್ಕ ಕೆರೆತಗಳು
ದೊಡ್ಡ ಹುಣ್ಣುಗಳೇ,
ಅತ್ತು ಹಗುರಾಗಬೇಕು
ಚುಚ್ಚು ಮಾತುಗಳಿಗೆಲ್ಲ
ನಕ್ಕು ಸಾಗಬೇಕು
ಮಿಕ್ಕ ರಹದಾರಿ

ನಂಬ ಬೇಕೋ
ನಂಬ ಬಾರದೋ
ಕೆಲವೊಮ್ಮೆ ಮುಖಗಳಿಗೆ,
ಅವು ಮುಖವಾಡವೋ
ಪಿಗ್ಗಿ ಬೀಳಿಸುವ
ಎರೆಗಳೋ ಹೊಳೆಯದು
ಸುಲಭ ಓದಿಗೆ

ದೇಗುಲ ಹೊಕ್ಕು
ಕಲ್ಲುಗಳಿಗೂ ಕೈ ಮುಗಿದು
ಅಡ್ಡ ಬಿದ್ದಂತೆ
ನಂಬಿಕೆಯೇ ಬದುಕು,
ಒಪ್ಪಿ ಬಿಟ್ಟು ನೋಡೋಣ
ಒಮ್ಮೆ ಆದದ್ದಾಗಲೀ
ಅವರನೂ ಇವರನೂ…

(ಚಿತ್ರ ಕೃಪೆ : ಅಂತರ್ಜಾಲ)

ಜಯಂತಿ…

ಹತ್ತರಲ್ಲೊಂದು
ಸಾರ್ವತ್ರಿಕ ರಜೆ ದಿವಸ,
ಎಬ್ಬಿಸ ಬೇಡಿರಿ
ಹೊದ್ದು ಮಲಗಿದ್ದೇವೆ ಕಂಬಳಿ

ನಿನ್ನೆ ತಟ್ಟಲೆ ಇಲ್ಲ
ಇಂದು ಒಣ ದಿನ,
ಅಟ್ಟ ತಡಕಾಡಿದರೆ
ಖಾಲೀ ಬಾಟಲಿ

ಭಟ್ಟಿ ಇಳಿಯವು
ಎದೆಗಂತೂ ಆದರ್ಶಗಳು,
ಈಗವೇ ಬೀದಿ ತಿರುವಲಿ
ನಾಮ ಫಲಕಗಳು

ಬಾನುಲಿ ಉಲಿದು
ಪತ್ರಿಕೆಯೂ ಅಚ್ಚಿಸಿದಾಗ
ಅಂತರ್ಜಾಲದಲೇ
ಹುಡುಕಾಟ ಚಹರೆಗೂ

ಸಾಧನೆ ಮರೆತರು
ಒರಸಿಡಿ ಗಾಜು ಬೂಜನು
ಅದೇ ಚೌಕಟ್ಟಿನ ಚಿತ್ರ
ಬೇಕು ವರ್ಧಂತಿಗೂ

ಗುರುತೇ ಹತ್ತಿರಲಿಲ್ಲ
ರಸ್ತೆ ಧೂಳಲಿ,
ಮುನ್ನ ದಿನ ಮಜ್ಜನದಿ
ಲಕಲಕಿಸಿದ ಪ್ರತಿಮೆ!

ಬಾಡಿಗೆಯ
ಏಣಿ ಏರಿ ಏರಿಸಿ
ಚಪ್ಪಾಳೆ ಗಿಟ್ಟಿಸಿರಿ
ದೇಣಿಗೆಯ
ಮಾರುದ್ದ ಹಾರ

ಇದು ನನ್ನ “ಪಲವಳ್ಳಿ ಅಂಕಣ”ದ ಮೊದಲ ಕವನ.

ಗಲ್ಫ್ ಕನ್ನಡಿಗ ಈ ಪತ್ರಿಕೆಯ ಸಂಪಾದಕರಾದ ಶ್ರೀಯುತ. ಬಿ.ಜಿ. ಮೋಹನದಾಸ್ ಮತ್ತು ಶ್ರೀಯುತ ಪದ್ಯಾಣ ರಾಮಚಂದ್ರ ಅವರಿಗೆ ನನ್ನ ಕೃತಜ್ಞತೆಗಳು.

http://gulfkannadiga.com/news/culture/7231.html

(ಚಿತ್ರ ಕೃಪೆ : ಅಂತರ್ಜಾಲ)

ಮುದ್ದು…


ಮುದ್ದುಗಳ ವಿನಿಮಯ
ಇರಲಿ ಅನಿಯಮಿತ ನಲ್ಲೇ,
ನನಗದೇ ಹಳೆಯ ಮದ್ದು!

ಬೇಡಿ ಕಾಡಿಯೇ ಪಡೆದ
ದಿವ್ಯ ತಾಕೇ ಗಮ್ಮತ್ತು,
ತಟ್ಟಾಡು ನಡಿಗೆಯವನ
ತಿದ್ದುವುದಿದರ ತಾಕತ್ತು,
ಕಾಪಿಡುತದೆನ್ನ ಮಿಂಚಿಗೆ
ಪಂಚರಿಸದಂತೆ ನಿಯತ್ತು!

ಕೋಟಿ ಮುತ್ತುಗಳಿಗಿರಲಿ
ಬಡ್ಡಿ ಚಕ್ರಬಡ್ಡಿಯ ಸುಲಿಗೆ
ತಪ್ಪುತಲೇ ಇರಲಿ ಲೆಕ್ಕ,
ನಿನ್ನೆ ತರಬೇತಿಯ ಸುತ್ತು
ಮುತ್ತಿಗೆ ಅವಧಿಯ ಮತ್ತು
ದಾಖಲೆಯನಿಂದು ಮುರಿವ

ಮೊದಲ ಮುತ್ತಿಗೆ
ವರುಷ ವರುಷವೂ
ಸಂಪ್ರತಿಸುತಿರಲಿ
ಮರು ಮುದ್ರಣದ
ಪರಿಷ್ಕೃತ ಆವೃತ್ತಿ!

ನಗೆಯ ಸಂಕ್ರಮಿಸಿ…

ಕಲ್ಪನೆಯಲೇ ಮೊರಟು
ಕನಕಾಂಬರಿಯ ಗಿಡವು
ಮೊಗ್ಗರಳಿಸೆವು ಚಿವುಟಿ,
ಏರಿಸದೆಯೇ ಉದರದು
ಬಲಗಡೆಗೇ ಹೂವೂ?

ಬೆರಗಿರದ ಬದುಕುಗಳಿಗೆ
ಸವೆವುದೇ ಹುಟ್ಟು ಗುಣ
ಅವನಿಗೆ ಏಬರಾಸಿ ವಜನು,
ಅಮರತ್ವ ಚಪಲತೆಯೇ
ಅರೆ ಕಾಸಿನೀ ಚಪ್ಪಲಿಗೆ

ಫಲವತ್ತು ಭೂಮಿಯೊಳು
ನುಸುಳಿ ಗಟ್ಟಿ ಬೇರೂರಿ
ಬುಡ ಗಟ್ಟಿಸಿದರೂ ವ್ಯರ್ಥ,
ಕಾಂಡ ಉಬ್ಬಿಸಿಕೊಂಡ
ನೆರಳಿಗಾಗದ ಮರವೂ

ಉರುವಲಿಗು ಹಸಿ ಹಸಿ
ಚಿತೆಗೂ ಬೇಡದೀ ಕಟ್ಟಿಗೆ,
ಸೂರಿಗೊದಗದ ತೊಲೆಯ
ಮುಲಾಜಿಗೇ ಹೊರುವುದೇ
ಎಲ್ಲೋ ಬೆಂದ ಇಟ್ಟಿಗೆಯೂ

ಹಚ್ಚಡದೊಳು ಬಚ್ಚಿಟ್ಟು
ಮುಕ್ಕಿದರೆ ಪ್ರಾಪ್ತಿ ಬಿಕ್ಕಳಿಕೆ
ಉಸಿರಗಟ್ಟುತ್ತೆ ನಮಗೂ,
ನಗೆ ಟಿಸಿಲು ಸಂಕ್ರಮಿಸಿ
ಮಂದಿ ಮನ ಗೆಲ್ಲ ಬನ್ನಿ

ಹಳೇ ನೀರಲೇ ತೇಲಿ
ಹೊಸ ಬಂದರಿನಾಚೆ
ಹುಡುಕ ಹೊರಡೋಣ
ಆಳಕಾಳಕೆ ಲಂಗರಿಳಿಸಿ

ಆಯ’ವ್ಯಯ’…

ಅರಸೊತ್ತಿಗೆ ತಿಕ್ಕಲಿಗೆ
ಅಪಮೌಲ್ಯ ರೂಪಾಯಿ,
ಬರೆ ಹಾಕಲು ಕಂಡದ್ದು
ಬಡವನ ಬಡಕಲು ಹೊಟ್ಟೆ

ಸೋರುತ್ತೆ ಆದಾಯ ಗಡಿಗೆ
ಸಿಕ್ಕನು ಉತ್ತರ ಭೂಪ ಕೈಗೆ,
ತಿದ್ದ ಬೇಕಿದ್ದ ಸದನಗಳೂ
ಗದ್ದಲದಲೇ ಅಂತ್ಯ ಮತ್ತೆ

ಓಟು ಬೇಟೆಗೆ ತೆರಿಗೆ ಪಾಲು
ತಲುಪೀತೆ ಬಡವನ ತಾಟು?
ಗೊಬ್ಬರಕಿಲ್ಲದ ಸಬ್ಸೀಡೀ
ಮಧುಮೇಹ ದೇಹಿ ಪಾಲು

ತರಂಗಾಂತರವ ಹಂಚಿ
ಹುಲುಸಾಗಿ ಮೇಯ್ದರು ಹುಲ್ಲು,
ಅನಿಲವ ಆಕಾಶಕೇರಿಸಿ
ಕಲ್ಲಿದ್ದಲು ದಾನ ಕೊಟ್ಟರು

ಕೋಟಿ ಕಾರಿನ ಮೇಲೆ
ಲಕ್ಷ ಹೊರಿಸಿದರಾಯ್ತು,
ಉಳುವ ಯಂತ್ರವೇ ಬೇಕೇ
ಭರಿಸಲು ತೈಲ ತುಟ್ಟಿ?

ಕಳ್ಳ ಲೆಕ್ಕವ ಬರೆದು
ಕದ್ದವನಷ್ಟೇ ಸತ್ಯಸಂಧ,
ಪುಡಿ ಸಂಬಳದವ ಸಿಕ್ಕ
ಸುಲಿಗೆ ಸುಂಕಕ್ಕೆ ಸುಂಕ

ದುರಾಸೆ ಗೆಬರಪ್ಪಗಳನೇ
ಯಾಮಾರಿ ಆರಿಸಿದ ಮೇಲೆ,
ಎಳೆಯ ಬನ್ನಿರಿ ಹೆಗಲ ಕೊಟ್ಟು
ಜೋಡಿ ಎತ್ತನೂ ಅಡವಿಟ್ಟು

(ಚಿತ್ರ ಕೃಪೆ : ಅಂತರ್ಜಾಲ)

ಅಪಾತ್ರ ದಾನ…

ದಾನಿಗಳಾರೋ
ಪೀಕದಾನಿಗಳಾರೋ,
ನಕಲಿ ವಜ್ರಗಳು ಮಾತ್ರ
ಜನಜನಿತವೀಗ

ತಕ್ಕಡಿಯಲಿ ತೂಗುವರು
ಒಲುಮೆಯದೂ ನಿಯತ್ತು?
ಮುಲಾಮಿಗಷ್ಟೇ ಬೋರಲು
ಹಡೆದವರ ಅಸಲೀಯತ್ತು

ಜೀವಂತ ಮೈ ಸುಲಿವರು
ಕೋಶ ಓದಿದ ಮಕ್ಕಳು,
ಸಲುಹಿದರೂ ಮರೆವರು
ಹೆಬ್ಬೆಟ್ಟು ಒತ್ತು ಹೆತ್ತವರು

ಸವಕಲು ಪಾವಲಿ ಕೊಟ್ಟು
ಮಹಾ ಪೋಷಕನ ಪೋಸು
ಮೇಲಿವರು ಕೇಳುತ್ತಾರಲ್ಲ
ತೆರಿಗೆ ವಿನಾಯತಿ ನಕಲು

ನಕ್ಕ ನಗೆಗಳಿಗೆಲ್ಲ ಲೆಕ್ಕ
ಹಸ್ತಾಲಿಂಗನವೇ ಬುರುಡೆ
ಸುಪ್ತ ಕಾಮನೆಯೂ ಗುಪ್ತ
ಪೊಳ್ಳು ಪುರುಷೋತ್ತಮತೆ

ಹಾಲುಣಿಸೋ ರಾಸುಗಳು
ನೆನಪಿಟ್ಟಾವೇ ಕರೆದ ಲೆಕ್ಕ,
ನೆಲದವ್ವ ಕೇಳುವಳೇ
ಫಸಲ ರಾಶಿಯಲೂ ಭಾಗ!

(ಚಿತ್ರ ಕೃಪೆ : ಅಂತರ್ಜಾಲ)

ಬಿರಿಯ ಬಹುದೇ…

ಇದು ನಾನು
ಅದು ನೀನು
ಗೆರೆ ಗೀಚದಿರು ಹೀಗೆ,
ಬೆಳೆ ತೆಗೆದರಾಯ್ತು
ಬಿಡು ಬಂಜರಲ್ಲೂ
ಖುಷ್ಕಿ ಏಕೆ ಬೇಕು?

ಒಣ ಜಂಭ ಕೊಲ್ಲುತದೆ
ಘಾಸಿ ಮುನಿಸಿನೀಟಿ
ಬೇಡಮ್ಮಾ ಆಮ್ಲ ಮಳೆಯು,
ನಗೆಯ ಬುಗ್ಗೆಯೊಂದು
ನಡು ನಡುವೆ ಹಾರುತಿರೆ
ಮೂಕಿ ಕಳೆದು ಟಾಕಿ

ಇನ್ನು ಹೊಸೆಯಲಿದೆ
ಕನಸ ಹಸೆಯನಿಂದು
ಸೇರಿ ನಾನು ನೀನು,
ಕೊಸರಿ ಕೊಸರಿ
ಮುಚ್ಚಿಟ್ಟ ಮುತ್ತುಗಳ
ಮತ್ತೆ ಗುಣಿಸಲೇನು?

ಚಳುವಳಿಯೇ ಆಗಲಿ
ಅಪ್ಪಿಕೊಂಡು ಕೂತು,
ಬಿರಿಯ ಬಹುದು
ಹೆಸರಿಲ್ಲದೊಂದು ಹೂ
ನೀರಿರದ ಚಂದ್ರನಲ್ಲೂ?

(ಚಿತ್ರ ಕೃಪೆ : ಅಂತರ್ಜಾಲ)

ಅಹಂಕಾರಿ…

ಎಲ್ಲ ಹುಟ್ಟುಗಳಿಗಿಲ್ಲ
ಸಾರ್ಥಕತೆ ಅರ್ಥ ವಿಸ್ತಾರ,
ಬರೀ ಭೂ ಭಾರ
ಕೂಳು ಕತ್ತರಿಸೋ ಕಾಯ

ಸುಳ್ಳುಗಳ ಕಾಪಾಡಿ
ಸತ್ಯಗಳ ಮರೆ ಮಾಚಿ
ಭ್ರಮೆಗಳ ನಡುವೆ
ಬದುಕಿಸೋ ಜನತಂತ್ರ

ಸೆರೆ ಸಿಕ್ಕ ಉಗ್ರಗಾಮಿಯ
ಚೀಲದಲಿ ಕೊಲ್ಲು ಪಟ್ಟಿ,
ನುಸುಳಿ ಬರುತಿವೆ ಕ್ರಿಮಿ
ಭ್ರಷ್ಟವಾಯಿತು ಗಡಿ!

ಅಹಂಕಾರವೇ ನರಾಧಮ?
ಸರ್ವ ಶಕ್ತತೆಯ ಪೊಗರೇ?
ಇರಗೊಡೆಯ ಚರಾಚರಗಳ
ನಿನ್ನ ಪರಧಿಗೂ ಮೀರಿ!

ಅಖಂಡ ನೆಲ ಭಾಗ
ಈಗದು ಛಿಧ್ರ ಖಂಡ,
ಬರೀ ಗೆರೆಗಳೇ ನಡುವೆ
ಅಷ್ಟಾವಕ್ರವು ಭೂಪಟ

ಪಾಪ ಸಾಂಧ್ರತೆಯ
ಹೆಣ ಭಾರ ಹೊತ್ತೀತೆ
ತಾಯಿ ಧರಿತ್ರೀ?
ತಾಳಿಕೊಳ್ಳಳು ಕ್ರೌರ್ಯ

ಅಂಗಡಿ ಮುಚ್ಚಲಸಲು
ಪ್ರಳಯವೇ ಬರಬೇಕೇ?

(ಚಿತ್ರ ಕೃಪೆ : ಅಂತರ್ಜಾಲ)

ಸಂಯಮಿಸು ಮನವೇ…

ಎಂತ ಕತ್ತಲಲೂ ಕವಾಯತು
ಹೃದಯ ನಿಲ್ಲಿಸದು ತಾ ಪಂಪು,
ದೇಹವೋ ವಾಂಛೆಗಳ ವಸಾಹತು
ಮುನಿದು ಇಳಿಯದು ತಾ ಸಂಪು!

ನನ್ನ ಹಂಗಿಗೇ ಸಿಗದ
ಒಳ ಅಂಗಾಂಗ ಶಿಸ್ತು ಬದ್ಧ,
ಪಾಳಿ ಕೇಳದು, ಭತ್ಯೆ ಬಯಸದು
ದೂಷಿಸದು ಕೀಳು ಕೆಲಸ,
ಯಾರದೋ ಕಣ್ಗಾವಲಿಗೆ
ಮೀರಿ ಇಲ್ಲಿಲ್ಲ ಮೈಗಳ್ಳತನ

ಒಳ ಸುಳಿದ ಗ್ರಹಿಕೆಗಳನೆಲ್ಲ
ತಾಳೆ ನೋಡುತ್ತೆ ಮೆದುಳು
ಇದು ಸತ್ಯ ಇದು ಸುಳ್ಳು ಕೇಳು,
ಅದು ಕೆಡುವುದೇ ಜಾಯಮಾನ
ಬುದ್ಧಿ ಹೇಳಿದರೂ ಕೇಳದದು
ಪಾಪಿ ನಮ್ಮದೇ ಲದ್ದಿ ಮನಸು

ಕುಡಿವವನ ಯಕೃತ್ತು
ಧೂಮಪಾನದ ತಿತ್ತಿಗಳು
ತಂಬಾಕಿನವನ ಬಾಯಿ
ಕೊಳೆತು ನಾರುತ್ತೆ ಪಾಪ,
ಹಾಳು ಬಿದ್ದದ್ದು ತನ್ನದೇ
ಸ್ವಂತ ಮನೆ ಇಲ್ಲಿ

ಭಗವಂತ ಕೊಟ್ಟ ಭಿಕ್ಷೆ
ಈ ದಿವ್ಯ ಬದುಕು,
ಹಳಸಲು ಹಿಡಿಸದಿರು
ಮುಟ್ಟಾಳ ಮನುಜ!

ಗರಡಿ ಮನೆ…

ಗರಡಿ ಮನೆ ಹೊಕ್ಕು
ಮೈ ಜರಡಿ ಹಿಡಿಯಬೇಕು
ಕೊಬ್ಬು ಕರಗಿಸಿ ಈಗ
ಕಡ್ಡಿಯಾಗಲೇ ಬೇಕು
ಗರಡಿ ಮನೆ ಹೊಕ್ಕೂ…

ಹನುಮಂತರಾಯನ
ಪಾದಕೆ ಎರಗುತ
ಜಂಭ ಕಳೆಯೋ ದೈವ
ಎಂದು ಕೈಮುಗಿಯುತ,
ಭಕ್ತಿಯಿಂದಲಿ ನಮಿಸಿ
ಸಿದ್ಧನಾಗಲು ಬೇಕು…

ಮಣ್ಣ ಮೇಲೆ ಸಾಮು
ವಿದ್ಯೆ ಅರಿಯಲು ಬೇಕು,
ಪಟ್ಟುಗಳೆಲ್ಲವ ಕಲಿತು
ಜಗ ಜಟ್ಟಿಯಾಗಲು ಬೇಕು,
ಹಳೆ ಹುಲಿ ಕೆಡವಿ
ಮೀಸೆ ತಿರುವಲೇ ಬೇಕು…

ನಮ್ಮ ಕಲೆ ಕಲೆಯೋ
ಮನಸ್ಸು ಬರಲೇ ಬೇಕು,
ದೇಹ ದಂಡಿಸಿ ಮನಸ
ಹದ ಮಾಡಬೇಕು,
ದೆಂಡಿ ಕಾಯವ ಇಳಿಸಿ
ಚಂದಗೊಳಿಸಲು ಬೇಕೂ…

ಮುತ್ತತ್ತಿರಾಯನ
ಕರುಣೆಯಿದ್ದರೆ ನಾನೂ
ಪೈಲ್ವಾನನಾದೇನೂ,
ಗರಡಿ ಮನೆ ಹೊಕ್ಕೂ…

 

ಅವಳು…

ತುಂತುರು ಮಳೆ ಹನಿಗೆ
ತೊಯ್ದ ಮಲ್ಲಿಗೆ ಬಳ್ಳಿ
ನಾಚಿ ನೀರಾಗಿ ನನಗಾಗಿ
ಹನಿಯುತಿದೆ ಒಲುಮೆ

ರಂಗವಲ್ಲಿಯ ತುಂಬೆಲ್ಲ
ಒದ್ದೆ ಮಲ್ಲಿಗೆಯ ಹಾಸು
ಪಾದಕೆ ಅಂಟುವ ಪಕಳೆ
ಅವಳದೇ ಬಿರಿದ ನಗು

ಅವಳ ನಗೆಯೇ ಹಾಗೆ
ಅದು ಬಿಡದ ಜಡಿ ಮಳೆ
ಬಿಟ್ಟ ಮೇಲೂ ಹನಿವುದು
ನೆನೆಸಿ ಹಾಕುತಲಿರುವುದು

ರೂಪ ರೂಪಕೂ ಒಗ್ಗುತ
ನಿಂತು ಹರೆದು ಜಿಗಿಯುತ
ಅವಳ ರೂಪವೇ ಎಲ್ಲೆಡೆ
ಪುಳಕಗೊಳಿಸಿದೆ ನನ್ನೆದೆ

(ಚಿತ್ರ ಕೃಪೆ : ಅಂತರ್ಜಾಲ)

ಹಾರೈಕೆ…

ಹಾಲುಗೆನ್ನೆಯ ಪಾಪುವು
ತೊಟ್ಟಿಲಲೆ ನಗುತಲಿದೆ
ಯಾವ ಜನುಮದ ನೆನಪೋ
ಇಲ್ಲಿ ಅರಳುತಿದೆ ಹೀಗೆ…

ಬಲು ಕೆಟ್ಟ ಪ್ರಪಂಚವು
ಹೊರಗೆ ಸಮ್ಮಿಶ್ರ ಸರ್ಕಾರ
ಒಳ್ಳೆಯವರೂ ಸಮ ಪ್ರಮಾಣ,
ಕಳೆ ಕಿತ್ತು ಬೆಳೆ ತೆಗೆಯೋ
ವಿದ್ಯೆ ಸಿದ್ಧಿಸಬೇಕು ನಿನಗೆ

ಮೊದಲು ಮಾನವನಾಗು
ಮನೆಯವರಿಗೆ ಹೊಟ್ಟೆ ತುಂಬು,
ಗಾಣದೆತ್ತಿನ ಹಾಗೆ ದುಡಿ
ಮನೆ ಕಟ್ಟು, ಕೊಳ್ಳು ಬಂಗಾರ,
ಜೊತೆ ಜೊತೆಗೆ ನಗುವ ಕಲಿ
ಉಲಿಯಲಿ ಸಾಮಜ ವರಗಮನ…

ಅಳುವೆಡೆ ಅತ್ತು ಬಿಡು
ನಗುವಾಗ ಮನ ಬಿಚ್ಚಿಯೇ ನಗು,
ನಿನ್ನಂತೆ ನೀನಾಗು ಕೊನೆಗೆ…

ಬೆನ್ನುಡಿ…

ಸೋತವನಿಗೆ ಗೊತ್ತು
ಸೋತವನ ಕಹಿ,
ಹೊರಗೆ ಲೊಚಗುಟ್ಟುವ
ಉಪದೇಶಾಮೃಕೋ
ಮನದಲೇ ಚಿತೆ ಒಟ್ಟಿ
ಬೆಂಕಿ ಇಟ್ಟು ಬಿಡಿ…

ಗೆದ್ದೆತ್ತು ಉಬ್ಬಿಸುತ್ತದೆ ಎದೆ
ಜಗಕೆ ತೋರಲಹಮು,
ಸೋತವನೂ ಉಬ್ಬಿಸುತ್ತಾನೆದೆ
ತುಂಬಲಷ್ಟೇ ಉಸಿರ ತಿತ್ತಿ!

ಅಸಡ್ಡೆಯು ಸಹಿಸಲಸದಳ…

ದೂರವಾದವರೆಲ್ಲ
ಕಳೆದು ಕೊಂಡರು ಪಾಪ
ನಿಜ ಪ್ರೀತಿಯ ಈ ಒರತೆ,
ಕೃತಜ್ಞತೆಗೂ ಗೆಳೆಯ
ಕೃತಘ್ನತೆಗೂ ಅಲಲಾ
ಅಕ್ಷರವೇ ಬದಲು!

ಸಾಲ ಕೇಳುವನೋ
ಕೆಲಸ ಕೇಳುವನೋ
ಬಿದ್ದನಲ್ಲ ಹೆಗಲ ಮೇಲೆ!
ಕರೆಯೂ ಖರ್ಚಿನ ಬಾಬ್ತು,
ಹೇಳಲೊಲ್ಲರು ತಾವು
ನಗುವಿಗೂ ನಿಖರ ಬೆಲೆ

ಕಲಿಯ ಬೇಕಿದೆ ನಾನೂ
ಮನುಜ ನಿಜ ವರ್ಣ,
ಕೆಲವರಾದರೂ ಉಣಿಸಿದರು
ಸೋಲಲೂ ಗೆಲ್ಲವನಾಮೃತ
ಬೆನ್ನಿಗಾಸರೆ ನಿಂತ ಜನ
ದೇವರಿಗವರೇ ಸಮಾನ…

(ಚಿತ್ರ ಕೃಪೆ : ಅಂತರ್ಜಾಲ)

ತಿರಂಗೀ…

ವ್ಯಾಧಿಗ್ರಸ್ತವು ನರನಾಡಿ
ಬರಿಯ ಕಳೇವರ ದೇಹವೀಗ
ಪೊಳ್ಳು ಬದುಕುತಿದೆ ನನ್ನ ದೇಶ…

ಇಲ್ಲಿ ಹಾರಲು ಪತಾಕೆಗೂ
ಗಾಳಿ ತಿವಿತವದಿಲ್ಲ
ಕಡೆದ ಕಾಡುಗಳಿಂದ ಬೀಸದು
ಮಂದ ಮಾರುತವಂತೂ
ಮುನಿದಿದೆ ಮುಂಗಾರೂ…

ಕೇಸರಿಯು ಬಣ್ಣಗೆಟ್ಟಿದೆ
ಬಿಳಿಯು ಅನುಮಾನಾಸ್ಪದ
ಹಸಿರಂತು ಬರಿಯ ಕನಸ್ಸು,
ಗಟ್ಟಿಯೊಂದೇ ನಡು ಬೀದಿಯಲಿ
ನೆಟ್ಟ ಒಬ್ಬಂಟಿ ಕಂಭ!

ಬಿತ್ತಿದ ಬೇವನೇ ನೆಚ್ಚಿ
ಬೆಳೆದೀತೆಲ್ಲಿ ಕಬ್ಬು ಜಲ್ಲೇ?
ಮೆರೆಸು ಉಮೇದಿಗೆ ಬಿದ್ದು
ಮರೆತ ಬೇರುಗಳೆಷ್ಟು
ಉತ್ತರಿಸಲಾರವು ಪಠ್ಯಗಳು!

ಈಗೀಗ ನೆನಪು
ನಿಂಬೆ ಹುಳಿ ಮತ್ತು ಬೂಂದಿ ಕಾಳು,
ದ್ವನಿ ಮುದ್ರಿತ ತಟ್ಟೆಯ
ಕೊರಳಲಿ ರಾಷ್ಟ್ರಗೀತೆ…

ಶಾಪಗ್ರಸ್ತ…

ಗೋಮಾತೆಯನೇ ಕೇಳಿದೆ
ತಾಯೇ ಎನಿತು ದೇವರುಗಳೋ
ನಿನ್ನೊಳಗೆ, ಹೇಳಿ ನೋಡು…

ಇಲ್ಲೊಂದು ಶಾಪಗ್ರಸ್ತನು
ಎಡಗಣ್ಣ ಮುಚ್ಚಿ ಬಲಗಣ್ಣ
ತೆರೆದಿಟ್ಟು ಧ್ಯಾನಸ್ಥನು,
ಕ್ಯಾಮರಾ ತಾಕಿಗೆ ಕಾದ
ಪಾಪ ಅಹಲ್ಯೆಯಂತವನು

ತೆರೆದ ಬಲಗಣ್ಣು ಹುಡುಕುತ್ತೆ
ಕ್ಯಾಮರದ ಒಳ ಹೊಕ್ಕು
ಚೌಕಟ್ಟಿನೊಳು ಮೂರ್ತ ಭಾವ,
ಮತ್ತೆ ಸಂಯೋಜಿಸ ಬೇಕು ಹರಿವು
ತೀಡಬೇಕು ಒರೆಗೆ ಅರಿವು

ನೂರಾರು ದೈವಗಳಲೊಬ್ಬ
ಚಡಪಡಿಕೆಗೆ ಮರುಗಿ ಕನಿಕರಿಸಿ
ಕ್ಯಾಮರಾ ತಾಕಿಸಿದರೆ ಸಾಕು,
ಅರೆ ಸತ್ತ ಛಾಯಾಗ್ರಾಹಕನಿಗೆ
ಮತ್ತೆ ಜೀವ ಸಂಚಲನ…

ರೇಖೆಗಳೆರಡು…

ಅವಳ ಪ್ರೀತಿಗೆ ಕಾದ
ಕಾಡಿ ಬೇಡಿಯೇ ಪಡೆದ
ಅವಳೂ ಕರಗಿದಳು

ಉರಿದೇ ಉರಿಯಿತು
ಹೊಸ ತೈಲಕೆ ಧಗಧಗಿಸಿ
ದಾಂಪತ್ಯ ಜ್ಯೋತಿ

ವರ್ತನೆಗೆ ಬಿದ್ದು ಹಳಸಿ
ಪಕ್ವವಾದಳು ಆಕೆ
ಅವನೋ ಮರಗಟ್ಟಿದ!

ಒಲುಮೆ ಹನಿ ನೀರಾವರಿ
ಪಡಖಾನೆ ತಲುಪಲೇ ಇಲ್ಲ
ನಿಟ್ಟುಸಿರೇ ಪೂರ ಮನೆಗೆ

ಬೆನ್ನುಗಳ ಸಂವಾದ
ಬೇರ್ಪಡುವ ನಿರ್ಧಾರ
ಸಡಲಿಸಲು ತಂತುವೊಂದು

ಬಿಂದುಗಳ ಎಳೆ ತಂದು
ಅರಳಿಸಲು ನಗು ಬುಗ್ಗೆ
ಕಂದ ಬಂತೊಂದು…

(ಚಿತ್ರ ಕೃಪೆ : ಅಂತರ್ಜಾಲ)

ಎನ್ನ ಎಳೆಗರುವೇ…

ಮರೆತು ಹೋದೆಯೋ ನೀನು
ಎನ್ನ ಎಳೆಗರುವೇ
ಸಂಸಾರ ಚೆರಿಗೆ ಒಬ್ಬಂಟಿ
ನಾನಿಲ್ಲಿ ತುಂಬುತಲಿರುವೇ

ನನ್ನ ಮಡಿಲಲಿ ಆಡೋ
ಕಂದ ನೀನೇನಲ್ಲ ಇಂದು
ಎನಿತು ಬೆಳೆದರೂ ಖುಷಿಯೇ
ಕರುಳ ಕಣ್ಣಿಗೆ ಕರುವೇ

ನೊಗವು ಹೊರುತೀ ಎಂದು
ಪೆದ್ದಿ ಕಾಯುತಲಿದ್ದೆ
ಅಂಗಳ ಹರಕೊಂಡು ಜಿಗಿದೆ
ಬೇರ ಕತ್ತರಿಸೀ ತೊರೆದೆ

ಹೆತ್ತ ತಾಯಿಯೇ ಹೊರಗೆ
ಮಮತೆ ಬಿಕ್ಷಿಸುವಾಗ
ಮಜಲು ಕಟ್ಟುತ ಹೊರಟೇ
ಇಲ್ಲಿ ಸೂರಿಗೂ ಕೊರತೇ!

ಎನಿತು ದಿನವೋ ಹಸಿವು
ಎಂದೋ ಕಳೆದಿದೆ ಕಸುವು
ಇನ್ನೆಲ್ಲ ಜವರಾಯನಾಟ
ಕಳೆದರೆ ಸಾಕು ಜಂಜಾಟ

ಪೊರೆ ಕವಚೋ ಮುನ್ನ
ನಿನ್ನ ಕಣ್ ತುಂಬಿಕೊಂಡೇನು,
ಎತ್ತಿಕೊಟ್ಟರೆ ದುಡ್ಡು ಕಾಸು
ತೀರೀತು ಸಾಲ ಬಾಧೆ

ಈಗ ಬಂದರೆ ತುತ್ತಿಕ್ಕೇನು
ಅಪ್ಪಿ ಮುತ್ತಿಕ್ಕೇನು ಹಾಗೇ
ಮರೆತೇನು ಪಟ್ಟ ಪಾಡು,
ಸತ್ತರೇನಿದೆ ಹೇಳು ನೀನು…

(ಚಿತ್ರ ಕೃಪೆ : ಅಂತರ್ಜಾಲ)

ಹೊಗೆ ಕಾರ್ಯಕ್ರಮ…

ಚಿಲುಮೆಯ ಕಾವು
ಸುಡಬಾರದು ಕೈಯ
ಅದಕೇ ಈ ಸುತ್ತು ಬಟ್ಟೆ,
ಸುಟ್ಟರೇ ಸುಡಲಿ ತಿತ್ತಿಗಳ
ತೇಲಿಸುತ್ತೆ ಸ್ವರ್ಗಾದಪಿ
ಈ ಭಂಗೀ ಸೊಪ್ಪು!

“ತಂಬಾಕಿನ ಗಮಲೂ
ತಿಲೋತ್ತಮೆಯ ಅಮಲು;
ಸಹೋದರಾ…
ಸವಿದವನೇ ಬಲ್ಲ
ಪ್ರೀತಿಯ ಸವಿ ಬೆಲ್ಲ”
ಅಂತಾನೆ ಪಾಪಿಯೊಬ್ಬ!

ಸುತ್ತಿದರೆ ಹಸನಾದ ಬೀಡಿ
ವಿಲಾಯತಿ ಚುಟ್ಟ ಇಲ್ಲಿ ನೋಡಿ
ಶರ್ಲಾಕ್ ಹೋಮ್ಸ್ ಪೈಪು ಮೋಡಿ
ಹಾಗಂತ,
ಹುಕ್ಕಾ ಸಿಗರೇಟ್ ಸೇದ ಬೇಡಿ!

ಚಟ ಚಟ್ಟವ ಹತ್ತಿಸೀತು,
ಸೇದಿದರೆ ಧೂಮಪಾನ
ಜೊತೆಗೆ ಮದ್ಯಪಾನ
ಮನೆ ಮುಂದೆ ಹಾಕ್ತಾರೆ
ಹೊಗೆ ಜೋಪಾನ!!!

ಬದರಿನಾಥ ಪಲವಳ್ಳಿಗಾಗಿ
ಬದರಿನಾಥ ಪಲವಳ್ಳಿ
ಬರೆದುಕೊಂಡ ಶೋಕಗೀತೆ!

 

 

 

 

 

(ಚಿತ್ರ ಕೃಪೆ : ಅಂತರ್ಜಾಲ)

ಅವನಿಲ್ಲದ ಕಾಡು…

ಭೀಮನ ಅಮಾವಾಸ್ಯೆಯ ಮರುದಿನ
ಸುಪ್ರಭಾತಕೆ ತಲ್ಲಣಿಸಿತಲ್ಲ ನಾಡು,
ಹುಂಬನು ಹೊತ್ತೊಯ್ದ ಮೇರು ನಟರೂ
ನೂರೆಂಟು ದಿನ ವನವಾಸ ಪಾಡು…

ಅಸಲವನ ಕಾಡೇ ಅಭೇದ್ಯ
ಒಮ್ಮೆ ಕುರುಚಲು ಬೀಡು
ಮುಗಿಲೆತ್ತರಕೆ ಆನೆ ಹುಲ್ಲು
ನಿಬಿಡ ಮರಗಿಡ ಸಂಪತ್ತು
ಮತ್ತೆ ಬಟಾ ಬಯಲು…

ಈಗಲ್ಲಿ ನೆಲ ಬಾಂಬು ಸಿಡಿಯುವುದಿಲ್ಲ
ತುಪಾಕಿ ಮೊರೆಯುವುದಿಲ್ಲ
ಸುಳ್ಳು ಸಂಧಾನಕಾರರಿಲ್ಲ
“ಹರಹರ ಮಹಾದೇವ್” ಉದ್ಘೋಷವಿಲ್ಲ
ನಿರಮ್ಮಳವಾಗಿದೆ ಕಾಡು ಮೇಡು

ಮಡಿದ ಪೊಲೀಸರ ನಿಟ್ಟುಸಿರ
ಹೊತ್ತು ಹರಿಯುತ್ತೆ ಅದೇ ಪಾಲಾರ್,
ಘೀಳಿಟ್ಟು ಅತ್ತ ಆನೆಗಳೇ ಮುದಿಬಿದ್ದು
ಮರೆತಿವೆ ಕಳಕೊಂಡ ತಮ್ಮ ದಂತ,
ಚಿಗುರೊಡೆದು ನಳನಳಿಸಿದೆ ಶ್ರೀಗಂಧ…

ತಲೆ ಕತ್ತರಿಸಿ ಕೊಂದ ಶ್ರೀನಿವಾಸನ್
ಕಾಹು ಕೊಂದಿಟ್ಟ ಶಕೀಲ್ ಅಹಮದ್
ತಾ ಕೊಂದಿಲ್ಲವೆಂದಿದ್ದ ನಾಗಪ್ಪನಂತವರೂ
ಬದುಕಿ ಬಂದಾರೇ ನಿರ್ಧಯೀ ಹೇಳು?
ಉತ್ತರಿಸುವವನೇ ಜೀವಂತವಿಲ್ಲ…

ಕಾಡುಗಳ್ಳನವನು ಬಲು ಗುನ್ನೆಗಾರ
ಅಪಹರಣ ಅಟ್ಟಹಾಸ ಮರಸು ಬೇಟೆಯೇ
ನರ ಹಂತಕ ವೀರಪ್ಪನ್ ಜಮಾನ!
ಕಾಲಧರ್ಮಕೆ ಸಿಕ್ಕು ಅವನೇ ಸತ್ತರೂ
ಕಳ್ಳ ಗಂಟಿನ ಕುಂಭ ಬಯಲಾಗಲೊಲ್ಲ!

ಪಾಪ ಉಸಿರಾಡುತಿದೆ ಈಗೀಗ
ಆವನಿಲ್ಲದ ಕಾಡು…

(ಚಿತ್ರ ಕೃಪೆ : ಅಂತರ್ಜಾಲ)

(ಅವಧಿ ಡಾಟ್ ಕಾಂನಲ್ಲಿ ದಿನಾಂಕ: 25.07.2011 ಪ್ರಕಟಿತ) 

http://avadhimag.com/?p=58684

ಇದೀಗ ಬಂದ ಸುದ್ದಿ…

ಹೊಸ ಗೆದ್ದ ಎತ್ತಿನ ಹಿಂದೆ
ಹಳೇ ಹಿಂಬಾಲಕರ ಪಡೆಯ
ಬಾಜಾಬಜಂತ್ರಿಯ ಘೋಷ,
ಸೋತವನೋ ಮನೆ ಹೊಕ್ಕ
ಅಂಗಳದಿ ಮಸಣ ವೈರಾಗ್ಯ…

ತೊಟ್ಟ ಮುಳ್ಳು ಕಿರೀಟವ
ಕಳಚಿಕೊಂಡವನೇ ತೊಟ್ಟ
ಒಳಗೀಗ ಗುಲಾಬಿ ಪಕಳೆ,
ಇಲ್ಲಿ ಸಿಂಹಾಸನದ ಕೆಳಗೆ
ಹಳೇ ಹಾವುಗಳೆಲ್ಲ ಮತ್ತೆ
ಬುಟ್ಟಿ ಮೀರುವ ಗಳಿಗೆ…

ಮಂತ್ರ ದಂಡವ ಕಸಿದ
ಹೊಸ ಮಂತ್ರವಾದಿಗೂ
ಗೊತ್ತಿರುವುದದೇ ಹಳೆಯ
ಉಚ್ಛಾಟನಾ ಮಂತ್ರ,
ಹಿಂದೆಯೇ ಕಿಸುಗುಳಿ ನಕ್ಕ
ನನ್ನದೂ ಅದೇ ಶಾಲೇ!

ಅಭದ್ರವೀ ಊರಿದ ಅಂಡು
ಹಿರೀಕ ಹುಡುಕು ಅಂಟು!

(ಚಿತ್ರ ಕೃಪೆ : ಅಂತರ್ಜಾಲ)

ಸಾಧಿಸಲೇ ಬೇಕು…

ನಡು ವಯಸಲೇ ಏಕೆ
ಸ್ವಯಂ ನಿವೃತ್ತಿಯ ಮೋಹ?
ಶೂನ್ಯ ಸಾಧನೆ ಸಾಕೇ
ಉಕ್ಕಲಿ ಜೀವನೋತ್ಸಾಹ…

ಕಲಿಯಲಿದೆ ಎನಿತೋ
ಹಲವರಿಂದಲೂ ಪಾಠ…

ಮೊದಲ ಗುರುವೇ ಎನಗೆ ಗದುಗಿನ ದೈವ
ಪಂಡಿತೋತ್ತಮ ಪುಟ್ಟರಾಜ ಗವಾಯೀ
ಜಗಕೇ ಕಣ್ಣಾದ ಶರಣರಲಿ ಶರಣ,

ಈತ ಗಾಲಿ ಕುರ್ಚಿಯ ನಿಶ್ಚಲ ದೇಹಿ
ಹಾಂವ್ ಕಿಂಗ್ಸ್ ಬಲು ಮೇಧಾವಿ
ಬಿಡಿಸಿಟ್ಟರಲ್ಲ ಕಪ್ಪು ರಂಧ್ರದ ಗೋಜಲು,

ಕಿವಿಗಳೆರಡೂ ಕೇಳಿಸದೆಯೂ
ಬರೀ ತುಟಿಯ ಚಲನೆ ಗಮನಿಸಿಯೇ
ಗೆದ್ದರಲ್ಲವೇ ಕನ್ನಡ ನಟ ಬಾಲಣ್ಣ,

ಕೊರಗಲಿಲ್ಲ ಕಳೆದ ಕಾಲಿಗೆ ನಿರಂತರ
ಕೃತಕ ಕಾಲಲೇ ನರ್ತಿಸುತ ಆದರಲ್ಲವೇ
ಸುಧಾ ಚಂದ್ರನ್ ತಾವು ನಾಟ್ಯ ಮಯೂರಿ,

ಅರೆ ದೇಹ ಸೋತರೂ ಫರ್ಮಾನ್ ಭಾಷಾ
ಭಾರಗಳನೆತ್ತಿ ಗೆದ್ದು ತಂದರು
ಕಂಚು ಪದಕ; ತುಂಬು ಗರ್ವಿಸಿತು ದೇಶ…

ಬ್ರೈಲು ತಾಕಲೇ ಉದ್ಗ್ರಂಥ
ಬರೆದವರೂ ಸಿಗಬಹುದು,
ಕಾಲು ಕಳೆದವರೂ ಕೂಡ
ಹಿಮಗಿರಿಯ ಏರಬಹುದು…

ನೆಟ್ಟಗಿವೆ ನನ್ನ ಅಂಗಾಂಗ
ಗಟ್ಟಿಗಿದೆ ಪಾಪಿ ಆಯುಷ್ಯ ರೇಖೆ,
ಒಲಿಸಲು ತಾರಕ ಮಂತ್ರ
ಏನಾದರೂ ಸಾಧನೆ ತೋರಬೇಕು…

ಮನಸು…

ನಿಲ್ಲಲೆಂದರೂ ನಿಲ್ಲಗೊಡದಿದು
ಹೊರಟು ನಿಂತರೂ ತಡೆವುದು,
ಅಂಕೆ ಮೀರಿತೆನ್ನ ಮನಸಿದು
ತನ್ನ ಮಾತನೂ ತಾ ಕೇಳದು…

ಒಳಗೆ ಗುಣಿಸಿದೆ ಸ್ವಗತ ರಿಂಗಣ
ಹೇಳಿಕೊಳ್ಳದು ಯಾರಿಗೂ,
ಎದೆಯ ಗಾಯಗಳೆಲ್ಲ ಮಾಗಿಯೂ
ಕೊರಗು ಉಳಿಸಿತು ಕೊಸರಿಗೆ,
ಆವಿಯಾದವು ಕಣ್ಣ ಹನಿಗಳು
ಮಾಸಿತೆಲ್ಲೋ ಆ ಕಿರುನಗೆ!

ಗಾಳಿ ಮೆಟ್ಟಿಲನೇರು ಭ್ರಮೆಯಲಿ
ನಿಂತ ನೆಲವನೇ ಒದ್ದರೇ,
ಏರಬಲ್ಲೆನೇ ಅರಿವಿನೆತ್ತರ
ಮರಳಿ ಯತ್ನಿಸೆ ಗೆಲುವೆನೇ?
ಇಲ್ಲಿ ಕ್ಷಣವಿರೆ ಅಲ್ಲಿ ಕಳೆದರೆ
ಪಡೆಯಬಲ್ಲೆನೇ ಏಕಾಗ್ರತೆ?

ಒಳಗೆ ಇಣುಕಲೂ, ಹುಳುಕು ಮುಚ್ಚಲು
ಬಿಟ್ಟುಕೊಳ್ಳದು ಒಳ ಮನೆ,
ಸಭ್ಯ ಪೊರೆ ಒಳಗಿನ್ನೆಂತ ಸ್ವಗತವೋ
ಓದಗೊಡದು ಮನ ಪುಸ್ತಿಕೆ…

ಅಪ್ರಾಪ್ತ ಚಿನ್ನ…

ನೆಲ ಬಗೆದು ಚಿನ್ನದದಿರನು ಎತ್ತಿ
ತಿಜೋರಿಗಳ ಮೊದಲು ತುಂಬಿದೆವು,
ಮತ್ತೆ ಕಾಡಿತು ಪಾಪ ಪ್ರಜ್ಞೆಯು
ಎತ್ತಿ ಕೊಟ್ಟೆವು ದೇವರಿಗೂ ಒಂತಿಷ್ಟೂ!

ಕಾರ್ಕೋಟಕ ಉರಗಗಳಿಗೋ ಇನಿತಿಲ್ಲ
ಕಾಳ ಸರ್ಪದ ಕಾವಲಿನ ಭಯವೂ,
ದುರ್ಮತಿಗೆ ಹುಂಡಿ ಕದ್ದರೂ ಅರಿವಿಲ್ಲ
ಲೂಟಿಯಾದರೂ ಪ್ರಚ್ಛನ್ನರು ನಾವೂ!

ನಭವ ದಾಟಲಿ ಬೆಲೆಯು ಅನುದಿನ
ತೇಜಿಯಲೇ ತೇಲಲೀ ಚಿನಿವಾರ ಪೇಟೆಯು,
ದುಡಿಮೆಯ ರಕ್ತವ ಬಸಿದಾದರೂ ಸೈ
ಮಕ್ಕಳನು ಉಪವಾಸ ಕೆಡವಿಯಾದರೂ
ಗ್ರಾಮು ಕೊಳ್ಳುತ್ತೆ ಹುಚ್ಚು ಮಂದಿ…

ಹುತ್ತದಾಳವೂ ಅಳೆಯಲಾರದ
ದಡ್ಡರೆಲ್ಲ ಏರಬಾರದು ಸಿಂಹಾಸನ,
ಬಿಲಗಳ ಆಳದಲೆಷ್ಟಿದೆಯೋ
ಮುಲ್ಕಿ ಚಿನ್ನ ಬೆಳ್ಳೀ ನವರತ್ನ?
ಸಾಲ ಶೂಲವ ತಪ್ಪಿಸಲುಪಾಯ
ಆಳರಸನಿಗೂ ಬೇಕು ವಿತ್ತದರಿವು…

ಕೋಲಾರವೂ ಖಾಲಿ ಖಾಲಿ
ಹಟ್ಟಿಯೂ ಮುಚ್ಚದೇ ಹೇಳಿ?
ಬಚ್ಚಿಟ್ಟಿದ್ದು ತಾನೇ ಪರರಿಗೆ
ಪಾಲಾಗಲಿ ವಿದೇಶಿಯರಿಗೆ…

(ಚಿತ್ರ ಕೃಪೆ : ಅಂತರ್ಜಾಲ)

ಯಾಕೆ ದೇವರು ಹೀಗೆ?…

ಇನ್ನೂ ಬಾರದ ಮಳೆಗೆ
ಬರೀ ಜಾಹೀರಾತೇ
ಆಷಾಢದೀ ಮೊರೆವ ಗಾಳಿ!

ಅಲ್ಲೆಲ್ಲೋ ಜಿಟಿ ಜಿಟಿ ಮಳೆಯ
ಸಂಭ್ರಮವಂತೆ ಮಾಧ್ಯಮಗಳಿಗೆ,
ನಮ್ಮ ಪಾಲಿಗೆಂದೋ ಮುಂಗಾರು
ಕಾದದ್ದೇ ಬಂತು ನನ್ನ ಬಂಜರು!

ಯಾಕೆ ದೇವರು ಹೀಗೆ?
ಜಲ ಮಂಡಲಿಗಿಂತಲೂ ಕಡೆಯೇ
ನಿನ್ನ ನೀರ ಸರಬರಾಜು…

ಬರದ ನೆರಳಿದೆ ನೆರೆಯ ಸಾವಿದೆ
ನಿನ್ನವವೇ ಬಿಲ್ಲೆಯ ಮುಖಗಳೆರಡು,
ಸಾಲ ಶೂಲವೂ ನಿನಗೆ ತಟ್ಟದು
ಬಿಕ್ಕೆ ಬಿದ್ದರೂ ಬಾಸಿಂಗ ಹುಟ್ಟದು
ಕತ್ತೆ ಮದುವೆಯ ಖರ್ಚಿಗೂ…

ಯಾಕೆ ಚರಾಚರವ ನುಲಿಚೋ ಹುಚ್ಚು
ಸಹಿಸಲಾರೆಯಾ ತಂದೆ,  ನಿನ್ನದೇ ಸೃಷ್ಟಿ?
ಬರದ ನಾಡಿದೆ, ಹಸಿರು ಕಾಡಿದೆ
ತಡ ಮಾಡದೇ ಹಚ್ಚಿಕೋ ಕಾಳ್ಗಿಚ್ಚೂ…

(ಚಿತ್ರ ಕೃಪೆ : ಅಂತರ್ಜಾಲ)

ನೆಲೆಗೆಡುವಾಗ…

ಕುಣಿಕುಣಿದು ಚಿತ್ರಿಸಿದ ಆ ಬಿಂಬ ಯಾತ್ರೆ
ಅವು ನನ್ನವೇ ಕನಸುಗಳ ಪುಟ್ಟ ಪರದೆ…

ಪರದೆ ಹಿಂದೆಯ ಅಗೋಚರ ಕೆಣಕು
ತಿವಿವ ವಿಕಟ ಅಟ್ಟಹಾಸದ ನಗು
ಕೇಳಿಸದು ಖಾಲಿ ಹೊಟ್ಟೆಯ ಕಿವಿಗೆ,
ಮೀಟಿದ್ದು ಚಪ್ಪಡಿಯಲ್ಲ ಗೋರಿ ಕಲ್ಲು
ಅನಾಥ ಅತ್ಮ ಬದಲಿಸಿತು ಮಗ್ಗಲು,
ನೆಲಹಿಡಿದು ಬಿದ್ದ ಹಳ್ಳವೂ ನನ್ನದೇನೇ  
ಇಗೋ ಈ ಕಲ್ಲು ಎಸೆ ಘಾಸಿಯಾಗಲಿ…

ಇನ್ನು ಭಯವಿಲ್ಲ ಜವರಾಯ
ಈ ದೇಹ ಹಿಂಡಿ ಬಿಸಾಕಿದ್ದಾರೆ
ನಿಶೆ ಹನಿಯ ಬಟ್ಟಿ ಇಳಿಸಿ ಬಿಡು!
ಕಿಸಿಯಲು ನೀನ್ಯಾವ ಕೊಪ್ಪಲು?
ಬರೀ ತೊಪ್ಪೆ ಈಗಿದು ಉರುವಲು!
ರೂಬುರೂಬು ನಿಲ್ಲಲಾರದ ಗಳಿಗೆ
ಆಕಳಿ ಉಳಿದ ಕಸಕಡ್ಡಿ ನಾನು…

ಅರವಳಿಕೆ ಮದ್ದೂ ಕೊಡದೆ ಸಲೀಸು
ರುಂಡಾಭರಣಾ ನಿನಗೆ ರೂಢಿ ತಲೆದಂಡ!
ಬಯಸಿ ಬಯಸಿಯೇ ಕುತ್ತಿಗೆ ಕೊಡಲಿಲ್ಲ
ನನಗಿಲ್ಲ ಇಚ್ಛಾ ಮರಣದ ತೆವಲು?
ನಡು ಮಧ್ಯಾಹ್ನಕ್ಕೆ ಗಕ್ಕನೆ ಅಮರಿತು
ವಾನಪ್ರಸ್ಥಾಶ್ರಮವೆಂಬೋ ಸಾವು…

ಇನ್ನು,
ಚಿತ್ರಿಸುವೆನೆಂದೋ ಬೆಳಕ ಕುಂಚವದ್ದೀ
ಛಾಯಾಪೆಟ್ಟಿಗೆಯ ಅಪ್ಪಿ ಮುದ್ದಾಡಿ!

(ಚಿತ್ರ ಕೃಪೆ : ಅಂತರ್ಜಾಲ)

ಪಾತ್ರ ಅನ್ವೇಷಣಾ…


ನಾನಸಲು ಕೆರೆಯೇ ನದಿಯೇ
ಉಪ್ಪುಪ್ಪು ಕಡಲೇ?
ಅರಿಯಬೇಕಿದೆ ಇನ್ನೂ ನನ್ನತನವ…

ಯಾವುದೋ ಮಳೆ ಕನಿಕರಿಸಿ
ಹುಯ್ದರಲ್ಲವೇ ಕೆರೆಗೂ ನೀರು!
ತಳಪಾಯ ಹೂಳುಮಯ
ನಿಂತೀತಾದರೂ ಎಷ್ಟು ಮಡ್ಡಿ ನೀರು?
ಬಿಟ್ಟ ಮರಿಗಳು ಬದುಕಿದರಷ್ಟೇ
ಬುಟ್ಟಿಯಲೂ ಹಿಡಿ ಮೀನು

ತಡೆಗಳಿಗೆ ಜಗ್ಗದೆಯೇ
ಸುರಿವ ಮಲಿನಕೂ ನಾರದೆಯೇ
ಹರಿಯುವುದು ಸಿಹಿ ನೀರು ಮಾತ್ರ
ನದಿಯೋ ನನಗೆ ಅಚ್ಚರಿಯ ಪಾತ್ರ!
ಅಸ್ಥಂಗತ ಪಿನಾಕಿನಿಯ ಹೊರತು
ತೆಪ್ಪವಾದರೂ ತುಂಬೀತು ಮೀನು

ವಿಶಾಲ ಶರಧಿಯು ಮಾತ್ರ
ಯಾರ ನಿಲುಕಿಗೂ ಸಿಗದ ಗಾತ್ರ,
ಅದು ಪರಿಗತ ಬಿಚ್ಚಿಡದು ಒಳಗುದಿ
ಅದಕೂ ಅಂಕುಶ ಘೋರ ಸುನಾಮಿ!
ಕುಡಿಯಲಾರದ ಉಪ್ಪು ನೀರಲೂ
ದೋಣಿಗಟ್ಟಲೆ ದೆಂಡಿ ಮೀನು

ಅಥವಾ,
ಬರೀ ಸೆಲೆಗೆ ಕಾದು ಕುಳಿತ
ಆಮೆ ತೇಲು ಪ್ರಾಕಾರದ
ಇಷ್ಟಗಲ ಬಾವಿಯೇ ನಾನು?

(ಚಿತ್ರ ಕೃಪೆ : ಅಂತರ್ಜಾಲ)

ಸ್ವರ ಸಂಸಾರ…


ಶೃತಿಯ ಹಿಡಿದು
ಸರಸತಿಯ ಪಿಡಿದು
ಗಾನ ಹರಿಸೊ ವೀಣೆಯೇ,
ನನ್ನ ಬಿನ್ನಹ ಕೇಳು ಒಮ್ಮೆಲೆ
ನಾದಗಾತಿಯೇ ತುಸು ತಾಮಸ

ನಿನ್ನ ಸ್ವರದ ಆಲಾಪವೆಲ್ಲವೂ
ಮೀಟು ಬೆಳಲಿನ ಮಾಂತ್ರಿಕತೆ
ಅದರ ಕೃಷಿಯ ಸಾರ್ಥಕತೆ,
ನೀನು ಮರೆತರೆ ಕಲೆಯ ಬೆಲೆಯನ
ಒಲುಮೆಗೆಲ್ಲಿದೆ ಚಿರಂತನ?

ಅಹಮು ಬಿಮ್ಮು ನಿನಗೆ ಸಲ್ಲ,
ನಿನ್ನ ತಂತಿ ತಂತಿಗಳಲು
ಇಲ್ಲ ನಾದ ವೈಭವ,
ಮೀಟು ಬೆರಳ ಒನಪಿನಲ್ಲೇ
ನಿನ್ನ ಜೀವ ಸಂಭವ!

ಬೀಗದಿರಲಿ ಆ ಬೆಳಲೂ
ನಿನ್ನ ವಿನಹ ಅಮೂರ್ತವೇ,
ನೀನು ದಂ ಅವನು ಪತಿ
ಸಮಾಗಮವೇ ಸಂಸಾರ
ಸಪ್ತಸ್ವರ ಮಿಳಿತ ಸಂಸ್ಕಾರ…

’ಗಲ್ಫ್ ಕನ್ನಡಿಗ’ ಈ ಪತ್ರಿಕೆಯಲ್ಲಿ 05.06.2012 ರಲ್ಲಿ ಪ್ರಕಟಿತ
http://www.gulfkannadiga.com/news-67218.html

(ಚಿತ್ರ ಕೃಪೆ : ಅಂತರ್ಜಾಲ)

ಚರಂಡೀಪುರದ ಕಥೆ…


ಬರೀ ಉಬ್ಬುತ್ತ
ಗಬ್ಬು ನಾರುತ್ತ
ಒಳಗೊಳಗೇ ಸಾಯುತಿದೆ
ಚರಂಡೀಪುರ!

ತಿಳಿ ನೀರೂ ನರಕದ ಹೊಳೆ
ಪೆದ್ದು ನೆಲಕೆ ಕಳ್ಳ ಬಸಿರು,
ರಾಗಿಗೆ ಗಾಂಜಾ ಪರ್ಯಾಯ
ದುಡ್ಡು ಬೆಳೆಸಿರಿ ದೆಂಡಿ,
ಮುಡುಪಿನ ಗಂಟೇಕೆ ಸೆರಗಲಿ?
ಅಂದೆಂದೋ ಬೀದಿ ಪಾಲು
ಕಾಮಾಟಿಯ ಪಾತಿವ್ರತ್ಯ!

ಸಾಯಲಿ ಸಂಸ್ಕಾರ
ಕಬಳಿಕೆಯೇ ಸುಲಭ ಮಂತ್ರ,
ನಿಜಾಯತಿಯ ಕೊಂದು
ಅರೆ ಬೆಂದ ಹೆಣ ತೇಲಿಸಿ
ವಿಸರ್ಜನೆ ವಿಷವ ಬಸಿದು
ತೀರ್ಥವೂ ಮಲಿನ ಬಿಂದು,
ದಡ್ಡ ಊರೀಗ ಕೊಳಗೇರಿ

ಕೊಳಕು ಮಂಡಲ ಪ್ರಭೆಗೆ
ಮುಸುಕು ಅಪರಂಜಿ ಹೊಳಪು,
ತಂಪು  ಕನ್ನಡಕದ ಮಾಯೆ
ಒಣ ಮೆದೆಯು ಹಸಿರ ಹುಲ್ಲು,
ಇವರು ಕಾಲಿಟ್ಟ ಮೇಲೇನಿದೆ?
ಐಭೋಗ ಅಮರಾವತಿಯೂ
ಪಾಳು ಹಂಪೆ ಹಳೇಬೀಡು!

ಜೀವಂತ ನದಿ ಪಾತ್ರ,
ಗಠಾರವಾಗಿಸಿದ ಗಿರಿಮೆ
ನಿಮ್ಮದಲ್ಲದೆ ಇನ್ನೇನು?

(ಚಿತ್ರ ಕೃಪೆ : ಅಂತರ್ಜಾಲ)

ಇದೂ ನಾನೇ…

ಅಣ್ಣ ಕೊಟ್ಟ
ಇಪ್ಪತ್ತು ಪೈಸೆ ನಾಣ್ಯಗಳೆಲ್ಲ
ಗೋಲಿಗಳಾಗಿ
ಬೋಟಿಗಳಾಗಿ
ಖರ್ಚಾಗಿ ಹೋದವು,
ಯಾಕೋ
ಗೋಲಕವೇ ತುಂಬಲಿಲ್ಲ!

ಹಳ್ಳಿ ಅಮ್ಮಂದಿರು
ಮನೆ ಬಾಗಿಲಲಿ
ಬಾಯಿ ಬೊಂಬಾಯಿಸಿ
ನನ್ನ ಲೀಲೆಗಳ
ಚಾಡಿಸದಿರಲೆಂದಿದ್ದೇ,
ಅಗಸರ ಪದ್ದಿಯ
ಕತ್ತೆ ಗಲ್ಲಿ ಬಿತ್ತಂತೆ
ಬಾಲಕೆ ಪಟಾಕಿ!

ಟೆಂಟು ಸಿನಿಮಾದಲ್ಲಿ
ಬಾಲ ನಾಗಮ್ಮ…
ರೀಲು ತುಂಡಿಗೆ
ಹಲ್ಲು ಗಿಂಜಿ ತಂದು
ಸಿನಿಮಾ ಬಿಡಬೇಕು!
ಎಡಿಸನ್ ತಗೋ
ನನ್ನ ರಟ್ಟು ಪೆಟ್ಟಿಗೆ
ಒಳಗೆ ಬಲ್ಬಲ್ಲಿ ನೀರು!

(ಚಿತ್ರ ಕೃಪೆ : ಅಂತರ್ಜಾಲ)

ಕಾಮನ ಹುಣ್ಣಿಮೆ…


ಮನ್ಮಥ ವೈರಿ ತೆರೆದಾನೆಷ್ಟು
ಮುಕ್ಕಣ್ಣ ಬಾರಿ ಬಾರೀ?

ವರ್ಣಾಲಂಕಾರ ಬೆವರಿಗೆ ತೊಳೆದು
ನಗುವು ಹಳಸಲಿಡಿದು
ಒಳ ಬಯಕೆಗಳೆಲ್ಲ ಹೊರಗೂ ಒಸರಿ
ನೋಟ ಭಂಗಕ್ಕೆ ಸಿಕ್ಕ ತರಳೆ ಮುದುಡಿದರೂ
ತಿದ್ದಲೇ ಇಲ್ಲ ಅಂತರಂಗ

ಅಸಲು ಸುಟ್ಟೀತೆ ಕಾಮನ ಹುಣ್ಣಿಮೆ?

ವಯಸ್ಸಿನಂತರ ಮೀರಿ
ವಾಮಿ ವರಸೆಗಳೂ ಮರೆಸಿ
ದಕ್ಕಿಸಿಕೊಳ್ಳುವ ಚಪಲ ಚಿತ್ತ,
ಚಾತುರ್ಯ ಸಿದ್ಧಿಗೆ ಒಲಿವ
ಉತ್ಕಟಾಕರ್ಷಣೆಯ ಕ್ಷಣ ಪಿತ್ತ!

ಹುಲ್ಲು ಮೇಯುವ ಮನಕೆ
ಯಾರಾದರೂ ಸೈ ಮೇನಕೆ!
ಆಕ್ರಮಿಸೋ ಹವಣಿಕೆ ಏಕೋ
ಯಾರದೋ ಸೊತ್ತುಗಳನೆಲ್ಲ
ತನ್ನ ಹಳದಿಯ ಕಣ್ಣ ಪರಧಿಗೆ

ಸ್ಪರ್ಶ ಶೃಂಗಾರ
ಮಧುರಾಲಿಂಗನ ಇನ್ನಿತರೇ ಎಲ್ಲ.,
ಬಯಕೆ ಕಾವಿಗೆ ತಟ್ಟನಿಳಿವ
ಕಾಮನೆಯ ತತ್ತಿ!!!

(ಚಿತ್ರ ಕೃಪೆ : ಅಂತರ್ಜಾಲ)

ದಂಡಯಾತ್ರೆ…


(೧೯೯೨ ರಲ್ಲಿ ಬರೆದ ಒಂದು ಹಳೇ ಕವನ)

ನನ್ನ ಹುಡುಗಿಯರೆಲ್ಲ
ನನ್ನ ನೀರಲ್ಲೇ ಈಜಿ
ದಡ ಸೇರಿಕೊಂಡು,
ಸೇಫ್ ಆಗಿ ಮದುವೆ ಮಾಡಿಕೊಂಡು
ಎಸ್ಕೇಪ್ ಆಗಿ ಹೋದರು

ಆದರೆ, ಈಗಲೂ
ನಾನು ಅದೇ ಪಾಪದ
ಬ್ರಹ್ಮಚಾರಿ…

ಸೈಕಲ್ ಪೋರಿ ಸುಬ್ಬುಲೂ
ಬಸ್ಟಾಪ್ ಗೆಳತಿ ಕಮಲೂ
ಚಡ್ಡೀ ದೋಸ್ತ್ ಮೀನಾಕ್ಷಿ
ಸದಾ ಬಾಲ್ಕಾನಿ ರೂಪಾವತಿ
ಹೈಹೀಲ್ಡ್ ಕುಳ್ಳಿ ವಿಜೀ ಲಕ್ಷೀ
ಗಬ್ಬು ನಾತದ ಪರಿಮಳ
ಹೀಗೆ, ಅದು
ಪರಷ್ಕರಣೆ ಆಗುತ್ತಲೇ ಇದ್ದ
ಮತದಾರರ ಪಟ್ಟಿ!

ಎಲ್ಲರಿಗೂ ಮದುವೆಯಾದಾಗ
ಥೇಟ್! ಪರನಾರಿ ಸೋದರನಂತೆ
ಹರಸಿ ಒಬ್ಬಟ್ಟು ತಿಂದು ಬಂದೆ…

ಸದ್ಯಕ್ಕೆ…
ಹೋಟೆಲ್ ಮೇ ಖಾನಾ
ಆಯಿಲ್ ಮಿಲ್ ಮೇ ಸೋನಾ
ವರ್ತನೆಯಾಗಿ ಹೋಗಿದೆ

ಹುಡುಕಾಟ ಚಾಲ್ತಿಯಲ್ಲಿದೆ
ಹೊಸ ಗರ್ಲ್ ಫ್ರೆಂಡ್ಸಿಗೆ
ಅವರಿಗೂ,
ಮದುವೆ ಫಿಕ್ಸ್ ಆಗೋವರಗೆ!

(ಚಿತ್ರ ಕೃಪೆ : ಅಂತರ್ಜಾಲ)

ಕೆಟ್ಟ ಗಾಳಿ…

ಅಗೆದ ಬಾವಿಗಳನೆಲ್ಲ
ಕೆದಕೆದಕಿ ಕೇಳುತಲಿದ್ದೆ
ನಿನ್ನ ನೀರದು ನನಗೇ ಏಕೆ ಉಪ್ಪು?
ಆಳ ಕಾಣದ ಕತ್ತಲಲಿ ಕಳೆಯಿತು ದನಿ
ಬರಿಯ ಮಾರ್ಧನಿ ನನ್ನದೇ ಉಸಿರು

ನನ್ನ ಹಾದಿಯೇ ತಪ್ಪೇ
ಗೊತ್ತಿರದ ಜವುಗು ಭೂಮಿ
ನಡೆ ನಡೆಗೂ ಜಾರು ಪಾದ
ಚುಚ್ಚೋ ನೂರು ಮುಳ್ಳುಗಂಟಿ,
ಆಸರೆಗೆ ಮತ್ತದೇ ಗಾಳಿ
ಹೆಣದ ಮನೆ ವಾಸನೆ ನೆನಪು…

ಕೆಟ್ಟ ಗಾಳಿಗೆ ಪುಪ್ಪಸವು ಒತ್ತುತಿದೆ
ಆಮ್ಲಜನಕವ ಕೊಡು ಅಜ್ಜಯ್ಯ!
ಮೈ ಪೂರ ಬೊಬ್ಬೆಗಳು ಕಾಣವು ನಿನಗೆ,
ನೆನೆಯಬಾರದ ಆಮ್ಲ ಮಳೆಗೆ ಸಿಕ್ಕು!
ಬಿರುಗಾಳಿಗೆದ್ದ ತರಗೆಲೆ ಮನಸು
ತಹಬದಿಗೆ ಬಂದೀತೆ ಬೇಗ?

ನನ್ನ ಹೆಸರೇ ಸೋಲೇ ಹೇಳು
ಸ್ವಾಮಿ ಕರಿಬಸವೇಶ್ವರ?
ಉಕ್ಕಡಗಾತ್ರಿಯು ಕಿವುಡೇ ಈಗ!

(ಚಿತ್ರ ಕೃಪೆ : ಅಂತರ್ಜಾಲ)

ತುಟ್ಟಿ ತೈಲ…

ದೆಲ್ಲಿ ಗದ್ದುಗೆಗೆ ಹತ್ತಿರದಲಿಲ್ಲ
ಚುನಾವಣೆಯ ಕಾವು,
ರಾಜ್ಯ ಸರ್ಕಾರಕ್ಕೋ
ತೆರಿಗೆ ನೀತಿಯ ಹುಳುಕಿನರಿವಿಲ್ಲ

ನನ್ನ ನೆಲ ಬರಡು ಭೂಮಿ
ಕೊರೆದಷ್ಟು ಹುಡಿ ಮಣ್ಣು ಕಲ್ಲು ಧೂಳು
ನೀರಿಗೇ ತಾತ್ವಾರವಿಲ್ಲ
ಗರೀಬನಿಗೋ ಅಪ್ಸರೆಯ ತೆವಲು
ಇರುಳೆಲ್ಲ ತೈಲ ಬಾವಿಯ ಕನಸು!

ಬಲೂನಿನೆತ್ತರಕೂ ಬೆಲೆಯ
ಯಶಸ್ವೀ ಹಾರಾಟ.
ಬಾಯ್ಬಿಟ್ಟು ಕೂತ ಪೆಚ್ಚು ಮತದಾರ…

ಮಧ್ಯಮ ವರ್ಗದ ಬಡಪಾಯಿ
ಒಳಗೊಳಗೆ ಬೈದದ್ದೇ ಬಂತು,
ಹೋರಾಟ ಉಪವಾಸ ವಾಚಕರವಾಣಿ
ನಮಗ್ಯಾಕೆ ಬೇಕು ಇಲ್ಲದ ಉಸುಬಾರಿ ತಂತು?

ತುಟಿ ಚಿಚ್ಚಿ ಮಾತಾಡಿ
ಇನ್ನಾದರೂ ಕಳಚಿ ಜಾಣ ನಿದ್ರೆ,
ತೈಲ ಬಲು ತುಟ್ಟಿ!

ಬಂಕು ಹುಡುಗನನು ರೇಗಿದರೆ
ಏನು ಬಂತು? ಇನ್ನು ಕಾಯಿರಿ ಸ್ವಾಮಿ,
ಲೀಟರಿಗೂ ಎಣಿಸುವ ಕಾಲ
ಗರಿಗರಿಯ ನೂರರ ನೋಟು…

(ಚಿತ್ರ ಕೃಪೆ : ಅಂತರ್ಜಾಲ)

ಕಾಮನ ಹುಣ್ಣಿಮೆ…

ಮನ್ಮಥ ವೈರಿ ತೆರೆದಾನೆಷ್ಟು
ಮುಕ್ಕಣ್ಣ ಬಾರಿ ಬಾರೀ?

ವರ್ಣಾಲಂಕಾರ ಬೆವರಿಗೆ ತೊಳೆದು
ನಗುವು ಹಳಸಲಿಡಿದು
ಒಳ ಬಯಕೆಗಳೆಲ್ಲ ಹೊರಗೂ ಒಸರಿ
ನೋಟ ಭಂಗಕ್ಕೆ ಸಿಕ್ಕ ತರಳೆ ಮುದುಡಿದರೂ
ತಿದ್ದಲೇ ಇಲ್ಲ ಅಂತರಂಗ

ಅಸಲು ಸುಟ್ಟೀತೆ ಕಾಮನ ಹುಣ್ಣಿಮೆ?

ವಯಸ್ಸಿನಂತರ ಮೀರಿ
ವಾಮಿ ವರಸೆಗಳೂ ಮರೆಸಿ
ದಕ್ಕಿಸಿಕೊಳ್ಳುವ ಚಪಲ ಚಿತ್ತ,
ಚಾತುರ್ಯ ಸಿದ್ಧಿಗೆ ಒಲಿವ
ಉತ್ಕಟಾಕರ್ಷಣೆಯ ಕ್ಷಣ ಪಿತ್ತ!

ಹುಲ್ಲು ಮೇಯುವ ಮನಕೆ
ಯಾರಾದರೂ ಸೈ ಮೇನಕೆ!
ಆಕ್ರಮಿಸೋ ಹವಣಿಕೆ ಏಕೋ
ಯಾರದೋ ಸೊತ್ತುಗಳನೆಲ್ಲ
ತನ್ನ ಹಳದಿಯ ಕಣ್ಣ ಪರಧಿಗೆ

ಸ್ಪರ್ಶ ಶೃಂಗಾರ
ಮಧುರಾಲಿಂಗನ ಇನ್ನಿತರೇ ಎಲ್ಲ.,
ಬಯಕೆ ಕಾವಿಗೆ ತಟ್ಟನಿಳಿವ
ಕಾಮನೆಯ ತತ್ತಿ!!!

(ಚಿತ್ರ ಕೃಪೆ : ಅಂತರ್ಜಾಲ)

 

ಬಂಗಾರದ ಕುರುಡು…

ಹೊತ್ತು ಕಳೆಯೆದ ಪ್ರಭೃತಿಗಳಾಟ
ಕೆರೆವ ಹುಚ್ಚಿನ ಮಾಟ
ಮೇಲೆ ಆತ್ಮೀಯ ಲೇಪ…

ಯಾವನೋ ಹೊರುವವನು
ಆನೆ ತೂಕದ ಕಾರ್ಯಭಾರ
ಮಿಕ್ಕ ಛದ್ಮ ವೇಷಧಾರಿಗಳದೆಲ್ಲ
ಬೆವರು ಕಕ್ಕುವ ಪೋಸಿನವತಾರ!

ನಾನೂ ನಮ್ಮಪ್ಪ ಅವನಪ್ಪ
ಜನ್ಮೇಪಿ ಗುಲಾಮರ ವಂಶ,
ಬಲಿ ಕೊಡುವ ಗಳಿಗೆಗೆ, ಕಾದ
ಕುರಿ ಮಂದೆ ಸಾಲು ಸಾಲು…

ಪಾತಾಳಗರಡಿಗೂ ಸಿಗದ
ಉಬ್ಬಿದ ಹೆಣಗಳಿಗೆಲ್ಲ
ನಿಜಾಯತಿ ಬೋಧಿಸೋ ಉಮೇದಿ,
ಕದ್ದವನೇ ಖರೇ ಪ್ರಾಮಾಣಿಕ!

ನಟ್ಟ ಗರುಡಗಂಬದ ನೆರಳು
ಭಗವಂತನನೇ ಕವಿದರೂ
ಬಹು ಪರಾಕಿಗೆ ಒಗ್ಗಿದವನು,
ಕರ್ತೃವಿಗೋ ಭರ್ತಿ ನಿದ್ರೆ…

ಅದಿರಗೆದು ಕಲ್ಲು ಹೆಕ್ಕು ಕಾಯ,
ನಕಲಿಗೇ ಒಗ್ಗಿದ ಧಣಿಗೆ
ಎಂತದೋ ಬಂಗಾರದ ಕುರುಡು,
ಗುರುತಿಸಲಾರ ವಜ್ರದ ಹರಳು…

’ಗಲ್ಫ್ ಕನ್ನಡಿಗ’ ಈ ಪತ್ರಿಕೆಯಲ್ಲಿ 20.05.2012 ರಲ್ಲಿ ಪ್ರಕಟಿತ
http://www.gulfkannadiga.com/news-66195.html

(ಚಿತ್ರ ಕೃಪೆ : ಅಂತರ್ಜಾಲ)